ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 27 December 2012

ಗಂಡಸರೆನ್ನಿಸಿಕೊಳ್ಳುವಂತಹ ನಾವೆಷ್ಟು ಸಭ್ಯರು!?!




ದೆಹಲಿಯಲ್ಲಿ 23 ವರ್ಷದ ಹೆಣ್ಣು ಮಗಳೊಬ್ಬಳು ತನ್ನ ಮಾನ ಹರಣಗೊಂಡು, ಮಾನಸಿಕವಾಗಿ ಮತ್ತು ದೈಹಿಕವಾಗಿ ಘಾಸಿಗೊಂಡು ತನ್ನ ಪ್ರಾಣವನ್ನೂ ಈ ರಕ್ತ ಪಿಪಾಸುಗಳಿಗೆ ಬಲಿಕೊಟ್ಟದ್ದನ್ನು ನೆನಪಿಸಿಕೊಂಡಾಗ ಮೈಯೆಲ್ಲಾ ಉರಿದು ಹೋಗಿ ನಮ್ಮ ಸಮಾಜದ ಮೇಲೆ, ನಮ್ಮ ಗಂಡು ಜಾತಿಯ ಮೇಲೇ ಅಸಹ್ಯ ಹುಟ್ಟುತ್ತದೆ! ಹೆಣ್ಣು ತನ್ನೆಲ್ಲಾ ಕಾಲಘಟ್ಟಗಳಲ್ಲಿ ನಂಬುವ ತಂದೆ, ಅಣ್ಣ, ತಮ್ಮ, ಗೆಳೆಯ, ಗಂಡ, ಮಾವ, ಭಾವ, ಮೈದುನ, ಮಗ ಹೀಗೆ ಹತ್ತು ಹಲವು ಅವತಾರಗಳಲ್ಲಿರುವ ಗಂಡಸರಾದ ನಾವೆಷ್ಟು ಸಭ್ಯರು ಎಂಬ ಅನುಮಾನ ಕಾಡುತ್ತದೆ! ಆ ಅನುಮಾನಕ್ಕೆ ಉತ್ತರ ಕಂಡುಕೊಳ್ಳುವ, ತನ್ನ ಹೀನ ನಡವಳಿಕೆಗಳನ್ನು ಪ್ರಶ್ನಿಸಿಕೊಳ್ಳುವ ಸಾತ್ವಿಕ ಪ್ರಜ್ಞೆ ನಮ್ಮಲ್ಲಿ ಜಾಗೃತಗೊಂಡದ್ದೇ ಆದರೆ ನಮ್ಮ ಸಮಾಜ 'ಅತ್ಯಾಚಾರ ಮುಕ್ತ' ಸಮಾಜವಾಗುವುದರಲ್ಲಿ ಅನುಮಾನವಿಲ್ಲ. ಅತ್ಯಾಚಾರವೆಂದರೆ ದೈಹಿಕವಾಗಿಯೇ ಆಗಬೇಕೆಂದಿಲ್ಲ, ಮಾನಸಿಕವಾಗಿ, ನೈತಿಕವಾಗಿಯೂ ಆಗಿರಬಹುದು. ಹೆಣ್ಣನ್ನು ಗೌರವ ಭಾವದಿಂದ ನಡೆಸಿಕೊಳ್ಳುವ ಜವಾಬ್ಧಾರಿ ಭಾರತಾಂಬೆಯ ಮಕ್ಕಳೆನಿಸಿಕೊಳ್ಳುವ ನಮ್ಮೆಲ್ಲರ ಮೇಲೂ ಇದೆ. ಗಂಡು ಮಕ್ಕಳ ತಾಯಿಯಂದಿರು ಮೊದಲು ತಮ್ಮ ಮಕ್ಕಳಿಗೆ ಇಂತಹ ಸಾತ್ವಿಕ ಶಿಕ್ಷಣವನ್ನು ಧಾರೆ ಎರೆಯಬೇಕು. 

ಹೀಗೆ ಎಷ್ಟೆಲ್ಲಾ ಸಂಬಂಧಗಳೊಡಗೂಡಿ ಹೆಣ್ಣಿನೊಂದಿಗೆ ಬೆಸೆದುಕೊಂಡ ನಾವು ಮತ್ತೊಬ್ಬ ಹೆಣ್ಣನ್ನು ಕಾಮುಕ ಕಂಗಳಿಂದ ನೋಡುವ ಮೊದಲು, ನಾವೂ ಒಂದು ಹೆಣ್ಣಿನ ಅಪ್ಪನೋ, ಸಹೋದರನೋ, ಗೆಳೆಯನೋ, ಸಂಬಂಧಿಯೋ ಆಗಿರುತ್ತೇವೆಂಬ ಅಲ್ಪ ಪ್ರಜ್ಞೆ ಅಥವಾ ನಮಗೆ ಸಂಬಂಧಪಟ್ಟ ಆ ಹೆಣ್ಣನ್ನೂ ಯಾರದರೂ ಹೀಗೆ ನೋಡಿದ್ದರೆ ಸಹಿಸುತ್ತಿದ್ದೆವೇ? ಎಂಬ ಅರಿವನ್ನು ತಂದುಕೊಂಡರೆ, ಉಗುಳುವ ಮೊದಲೇ ತಪ್ತವಾಗಿಬಿಡುತ್ತದೆ ಕಾಮಾಗ್ನಿ!

ಕೆಲವು ವರ್ಷಗಳ ಹಿಂದ ನನ್ನ ಗೆಳತಿಯೊಬ್ಬಳ ಜೀವನದಲ್ಲಿ ನಡೆದ ಘಟನೆ: ಆಕೆ ಮಾರ್ಕೆಟ್ ಗೆ ಹೋಗಿ ಹಿಂದಿರುಗುವ ಧಾವಂತದಲ್ಲಿ ನಡೆದು ಹೋಗುತ್ತಿರುವುದನ್ನು ಕಂಡ ಒಬ್ಬ 16 ರಿಂದ 17 ವರ್ಷ ವಯಸ್ಸಿನ ಹುಡುಗ ಸೈಕಲ್ ನಲ್ಲಿ ಹಿಂಬಾಲಿಸುತ್ತಿದ್ದನಂತೆ. ಅಕ್ಕ ಪಕ್ಕದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತನ್ನ ವಯಸ್ಸಿಗಿಂತಲೂ ದೊಡ್ಡವಳಾದ ಅವಳನ್ನು ತಬ್ಬಿ ಹಿಡಿಯುವ ಪ್ರಯತ್ನ ಮಾಡಿದನಂತೆ. ಆಕೆಗೆ ಜಂಘಾಬಲವೇ ಉಡುಗಿಹೋಗಿದೆ! ಆಕೆ ಹೇಗೋ ಪ್ರಯತ್ನ ಮಾಡಿ, ತನ್ನ ಕೈಯ್ಯಲ್ಲಿದ್ದ ತರಕಾರಿಗಳನ್ನು ಅವನ ಮೇಲೆ ಕುಕ್ಕಿ, ಕೂಗಿಕೊಂಡು ಪ್ರತಿಭಟಿಸಿದ್ದರಿಂದ ಹೆದರಿ ಸೈಕಲ್ ಮೇಲೇರಿ ಓಡಿಹೋದನಂತೆ. ಆದರೆ ಆ ಘಟನೆಯ ನಂತರ ಆಕೆಯ ಮನಸ್ಥಿತಿ, ಅಬ್ಬಾ ನನಗೀಗಲೂ ಮೈ ಕಂಪಿಸುತ್ತದೆ. ಗಂಡಸರೆಂದರೆ ಆಕೆಗೆ ಅಸಹ್ಯ ಮೂಡಿಬಿಟ್ಟಿತ್ತು! ಎಲ್ಲಾ ಗಂಡಸರೂ ಹಾಗಿರುವುದಿಲ್ಲ, ಅಪ್ಪ, ಅಣ್ಣ, ತಮ್ಮ ಹೀಗೆ ಬಾಂಧವ್ಯ ಹಂಚಿಕೊಂಡವರೂ ಗಂಡಸರಲ್ಲವೇ? ಭಯ ಪಡಬೇಡ ಎಂದರೂ ಆಕೆ ಕೇಳದ ಸ್ಥಿತಿ ತಲುಪಿಬಿಟ್ಟಿದ್ದಳು! ಆಕೆಯ ನಂಬಿಕೆಯ ಮೇಲೆ ಬಲವಾದ ಹೊಡೆತ ಬಿದ್ದಿತ್ತು! ಹೀಗೆ ಹುಡುಕುತ್ತಾ ಹೋದರೆ ಹೆಣ್ಣಿನ ಮೇಲೆ ನಡೆಯುವ ಪೈಶಾಚಿಕ ಮನಸ್ಥಿತಿಯ ರಾಕ್ಷಸರ ದೌರ್ಜನ್ಯಗಳು ಅಸಂಖ್ಯ. ಇವರಿಂದಾಗಿ ಸಭ್ಯರೂ ಮುಖ ಮುಚ್ಚಿಕೊಳ್ಳಬೇಕಾದ ಸ್ಥಿತಿಗೆ ನಮ್ಮ ನಾಗರೀಕ ಸಮಾಜ(!) ಬಂದು ನಿಂತಿದೆ.

ದೆಹಲಿಯಲ್ಲಿ, ಆ ಆರು ಜನರಿಂದಾದ ಅತ್ಯಾಚಾರದಂತಹ ದುಷ್ಕೃತ್ಯ ಕೇವಲ ಆಕೆಯ ಮೇಲಾದ ದೌರ್ಜನ್ಯವಷ್ಟೇ ಅಲ್ಲಾ, ಮಾನವೀಯತೆಯ ಮೇಲಾದ ದೌರ್ಜನ್ಯ, ಸಭ್ಯ ಗಂಡಸರ ಸಭ್ಯತೆಯ ಮೇಲಾದ ದೌರ್ಜನ್ಯ! ಆ ಕುಕೃತ್ಯದಿಂದಾಗಿ ಎಲ್ಲಾ ಗಂಡಸರ ಆತ್ಮೀಯತೆಯೂ ಹಳದಿಗಣ್ಣಿನ ಸೋಗಿನಲ್ಲಿ ಕಾಣುತ್ತಿರುವುದು ದುರಂತ. ಯಾವುದೋ ಒಂದು ದುರ್ಬಲ ಮನಸ್ಥಿತಿಯಲ್ಲಿ ಹೆಣ್ಣಿನ ಜೊತೆ ಕೀಳಾಗಿ ನಡೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ, ನಿಮ್ಮ ಮಗಳೇ ನಿಮ್ಮ ಅಕ್ಕರೆಯ ಸ್ಪರ್ಶವನ್ನು ಕಾಮ ಪ್ರೇರಿತವಾದದ್ದೆಂದು ಅಸಹ್ಯ ಪಟ್ಟುಕೊಂಡರೆ? ನಿಮ್ಮ ಸಹೋದರಿಯೇ ನಿಮ್ಮ ಆತ್ಮೀಯ ಸ್ಪರ್ಶಕ್ಕೆ ಕೆಂಡ ಮುಟ್ಟಿದಂತೆ ಕೈ ಎಳೆದುಕೊಂಡರೆ? ನಿಮ್ಮ ನಲ್ಲೆಗೆ ಹಿತವೆನಿಸಬೇಕಾದ ನಿಮ್ಮ ಸ್ಪರ್ಶ ಕಾದ ಸಲಾಕೆಯಾದರೆ? ನಿಮ್ಮ ತಾಯಿಗೂ ನೀವು ಕಾಮ ಪಿಶಾಚಿಯಂತೆ ಕಂಡರೆ? ನಿಮ್ಮ ಅಮ್ಮನನ್ನೋ, ಸಹೋದರಿಯನ್ನೋ, ಮಗಳನ್ನೋ ನೀವು ಕಾಮುಕ ದೃಷ್ಟಿಯಿಂದ ನೋಡಬಲ್ಲಿರೇ? ನಿಮ್ಮ ಪ್ರಜ್ಞೆ ನಿಮ್ಮ ಕೈಜಾರಿ, ಅಮಾಯಕ ಹೆಣ್ಣು ಮಗಳ ಮೇಲೆರಗುವ ಮುನ್ನ ಒಮ್ಮೆ ಪ್ರಶ್ನಿಸಿಕೊಳ್ಳಿ, ನೀವೆಷ್ಟು ಸಭ್ಯರು? ಒಬ್ಬಳ ತಂದೆಯೋ, ಸಹೋದರನೋ, ಇನಿಯನೋ, ಮಗನೋ ಆಗಿರುವ ನೀವೆಷ್ಟು ಸಭ್ಯರು? ನಿಮ್ಮ ಕುಕೃತ್ಯದಿಂದ ಇಡೀ ನಾಗರೀಕ ಜಗತ್ತಿನ ಸಭ್ಯ ಗಂಡಸರನ್ನೂ ಬೆತ್ತಲೆ ನಿಲ್ಲಿಸುತ್ತಿರುವ ನೀವೆಷ್ಟು ಸಭ್ಯರು? ಒಮ್ಮೆ ಪ್ರಶ್ನಿಸಿಕೊಳ್ಳಿ. 

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

ಬಾರದಿರು ಸಖೀ




ಬಾರದಿರು ಸಖೀ
ಬಾರದಿರು!
ಇನ್ನೆಂದು ಕನಸಲ್ಲೂ
ಹಿಂದಿರುಗಿ ಬಾರದಿರು!
ಕನಸು ಕಂಡ ಕಣ್ಣೇ
ಕುರುಡಾಗಿಬಿಡಲಿ!
ನೀನು ಮಾತ್ರ
ಹಿಂದಿರುಗಿ ಬಾರದಿರು!

ಕಪ್ಪು ಬಿಳುಪಿನ
ಯಾನವಾದರೂ ಸರಿ,
ಹಿಂದೆಂದೋ
ಮುರಿದುಬಿದ್ದ
ಗುಡಿಯೊಳಗೆ
ಬುಡ್ಡಿ ದೀಪವನ್ನೂ
ಹಚ್ಚದಿರು!
ಸಹಿಸಲಾರೆನು,
ಅದು ನನ್ನಣಕಿಸಿ
ನಗುವ ಪರಿಯ!

!! ಬಾರದಿರು ಸಖೀ !!

ಯಾರಾದರೂ ಸರಿಯೇ
ನಿನ್ನೆದುರು ಸಿಕ್ಕಿ,
ನನ್ನನ್ನೇನಾದರೂ
ಕೇಳಿದರೆ, ಅದೋ
ಆ ಪಾಳುಬಿದ್ದ ಪಂಟಪದಡಿಯಲ್ಲಿ
ಅತ್ತು ಹಗೆದು, ಹೂಳು ಹೊದ್ದು
ಮಲಗಿರುವ
ಗೋರಿಯನ್ನೊಮ್ಮೆ
ತೋರಿಬಿಡು ಸಖೀ,
ತೋರಿಬಿಡು!
ಇನ್ನೆಂದೂ ಬಾಳಲ್ಲಿ
ಬಣ್ಣ ಹೊದ್ದು ಬದುಕಲಾರೆ,
ಬಾರದಿರು ಸಖೀ,
ಇನ್ನೆಂದೂ ಹಿಂದಿರುಗಿ ಬಾರದಿರು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

Wednesday 12 December 2012

ಅರ್ಥವಾಗದ ಅವಳು, ತೇವವಾಗುವ ಅವನು!



ಅವನು
--------
ನನಗಿನ್ನೂ ಅರ್ಥವಾಗಿಲ್ಲ,
ಆಕೆ ನನ್ನಿಂದ
ದೂರಾದದ್ದಾದರೂ ಯಾಕೆಂದು?
ಅವಳಿಲ್ಲದ ದಿನಗಳಲಿ
ತೀರಿಲ್ಲದ ಬದುಕಲ್ಲಿ
ಉಳಿದದ್ದಾದರೂ ಏನೆಂದು?

ಆಕೆ ವಿಮುಖಳಾದಾಗಲೆಲ್ಲಾ
ಸಾಂತ್ವನ ಸುರಿದು,
ಕೈಯ್ಯಲ್ಲಿ ಕೈ ಹಿಡಿದು,
ಮಳೆಯಲ್ಲಿ ನೆನೆಯದಂತೆ,
ಎದೆಗವುಚಿಕೊಂಡದ್ದು!
ಅವಳು ಸುಮ್ಮನಿದ್ದು,
ನನ್ನನ್ನು ತಬ್ಬಿದ್ದು,
ಅಳುವಾಗಲೆಲ್ಲ ನನ್ನೆದೆಯೊಳಗೆ
ಮೊಗ ಉದುಗಿಸಿ ಬಿಕ್ಕಿದ್ದು ಯಾಕೆಂದು?
ಅರ್ಥವಾಗಲಿಲ್ಲ ನನಗೆ
ನೆನಪುಗಳೊಂದಿಗೆ ಒಬ್ಬಂಟಿ ಪಯಣ
ನನಗೊಬ್ಬನಿಗ್ಯಾಕೆಂದು?

ಅವಳು ನೋಡಲೆಂದೇ
ವಿಧ-ವಿಧದ ಕೇಶ ವಿನ್ಯಾಸ,
ಅವಳ ಮೆಚ್ಚಿಸಲೆಂದೇ
ಗಿಟ್ಟಿಸಿಕೊಂಡ ಉದ್ಯೋಗ,
ಅವಳಿಗಾಗಿ ಬದಲಿಸಿಕೊಂಡ
ಜೀವನ ಶೈಲಿ,
ಬಿಟ್ಟ ಸಿಗರೇಟು ಸೇವನೆ!
ನನ್ನ ಪ್ರೀತಿಯನ್ನು ಅವಳಿಗರ್ಥ
ಮಾಡಿಸಲು ಹೆಣಗಿದ್ದು!
ಇಷ್ಟೆಲ್ಲದರ ನಡುವೆ
ಅರ್ಥವಾಗಲಿಲ್ಲ ನನಗೆ,
ಆಕೆ ನನ್ನನ್ನು ಬಿಟ್ಟದ್ದು ಯಾಕೆಂದು?
ಅವಳ ಮದುವೆಗೆ ನನ್ನನ್ನು
ಬರಲೇ ಬೇಕೆಂದು
ಕರೆದದ್ದು ಯಾಕೆಂದು?

ಅವಳು
--------
ಅವನು ನನ್ನನ್ನು
ಪ್ರೀತಿಸಿದ್ದನೇನೋ ಹೌದು,
ನಾನೂ ಪ್ರೀತಿಸಿದ್ದಿರಬಹುದು,
ಆದರೆ ನಾನೆಂದು ಒಪ್ಪಿಲ್ಲ!
ಅದಕ್ಕಾಗೆ ಗೆಳೆಯ
ಎಂದಲ್ಲದೆ ಮತ್ತೇನೂ ಕರೆದಿಲ್ಲ!
ಆಗಾಗ ತಲೆ ಒರಗಿಸಿದ್ದುಂಟು,
ಅತ್ತು ಕರೆದದ್ದುಂಟು, ನಗುವ
ಬಯಸಿದ್ದುಂಟು!
ಹೊರಗೆ ಬೇಡವೆಂದರೂ,
ಒಳಗೊಳಗೇ ಬೇಕೆನಿಸಿದ್ದುಂಟು!
ಆದರೆ ಪೋಷಕರ ಮನವ
ನೋಯಿಸಲಾರೆ,
ಅವರ ಮಾನವ ಬೀದಿಗೆ ತಂದ
ಕೆಟ್ಟ ಮಗಳಾಗಲಾರೆ!
ಅವರಾದರೂ ಹೆತ್ತವರು,
ಹಾಳು ಬಾವಿಗೆ ತಳ್ಳಿಯಾರೇ?
ಜೋಪಾನ ಮಾಡಲೆಂದೇ
ಬಂದವನು ಅವನು,
ಅವನ ಜೀವನ ಸ್ಪರ್ಶದಿ
ಪುಳಕಿತಗೊಂಡೆನು!
ಅವನೊಲವಿಗೆ ಋಣಿಯೂ ನಾನು!
ಬದುಕ ಹೆಜ್ಜೆಯ ನಡುವೆ,
ಗೆಳೆಯನ ನೆನಪಿರಲೆಂದು
ಅವನನ್ನೂ ಕರೆದು ಬಂದೆ
ನನ್ನ ಮದುವೆಗೆ!

ನಾನು
---------
ಪ್ರೀತಿ ಪ್ರೇಮವೆಂಬ
ಈ ಕ್ಲಿಷ್ಟ ಎಳೆಗಳನು
ನಾ ವಿಮರ್ಶಿಸಿ
ಕೂರಲಾರೆ!
ಅವಳು - ಅವನಲ್ಲಿ
ಬೆರೆತ ನಮ್ಮನ್ನು
ನಾ ಹುಡುಕುತ್ತಿದ್ದೇನೆ!
ಅವಳು - ಅವನಲ್ಲಿ
ಬೆರೆತ ನಿಮ್ಮನ್ನೂ
ನಾ ಹುಡುಕುತ್ತಿದ್ದೇನೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Saturday 1 December 2012

ಕೈ ಬೀಸಿ ಕರೆದ ಕರ್ವಾಲೊ!



ನನಗೆ, ಒಬ್ಬ ಬರಹಗಾರ ಎಷ್ಟು ಸೃಜನಾತ್ಮಕವಾಗಿ ಯೋಚಿಸಬೇಕೆಂಬುದರ ದಿಕ್ಕಾದುದು ’ಕರ್ವಾಲೊ’. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರೇ ಹೇಳುವಂತೆ, ’ಸೃಷ್ಟಿಶೀಲ ಬರಹಗಾರ ಅನೇಕ ವೇಳೆ ತನ್ನ ಸಿದ್ಧಾಂತ, ತತ್ವ, ತರ್ಕ ಇತ್ಯಾದಿಗಳ ಇತಿಮಿತಿಗಳನ್ನು ತಿಳಿಯಲು ಅದನ್ನು ಅತಿರೇಖದ ಅಂಚಿನವರೆಗೆ ಒಯ್ಯಬೇಕಾಗುತ್ತದೆ. ಈ ರೀತಿ ತನ್ನ ಮಿತಿಯನ್ನು ಮೀರಿಯೇ ತನ್ನ ಸರಹದ್ದುಗಳನ್ನರಿಯಬೇಕಾದ ಅನಿವಾರ್ಯತೆ ಇರುವುದರಿಂದಲೇ ಎಲ್ಲಾ ಕಲಾಸೃಷ್ಟಿಯೂ ಅಪರಿಪೂರ್ಣತೆಯನ್ನು ಅನುಷಂಗಿಕವಾಗಿ ಒಳಗೊಂಡಿರುತ್ತದೆಂಬುದು ನನ್ನ ಭಾವನೆ’ ಎನ್ನುತ್ತಾರೆ. ಎಷ್ಟು ಸತ್ಯವಾದ ಮಾತು ಅಲ್ಲವೇ, ತನ್ನ ಸಿದ್ಧಾಂತ, ತತ್ವ ಮತ್ತು ತರ್ಕಗಳ ಪರಿಧಿಯನ್ನು ಅರಿಯುವ ಸೃಷ್ಟಿ ಅದಾಗಿದ್ದ ಮೇಲೆ ಅದರಲ್ಲಿ ಅನುಷಂಗಿಕವಾಗಿ ಅಪರಿಪೂರ್ಣತೆ ಸಹಜವೇ. ಇದು ಒಬ್ಬ ಬರಹಗಾರನ ದಿಕ್ಕನ್ನು ನಿರ್ದೇಶಿಸುವಷ್ಟು ಸತ್ವಯುತವಾದ ಪ್ರಸ್ತುತಿ ಎಂಬುದು ನನ್ನ ಭಾವನೆಯೂ ಹೌದು.

ಓದುವುದು ಕಡಿಮೆಯಾಗಿ ಬಹಳ ದಿನಗಳಾಗಿದ್ದವು. ಓದು ಎಂಬುದೂ ಮುಖ ಪುಸ್ತಕದ ಗೆಳೆಯರ ಬರಹಗಳಿಗೆ ಸೀಮಿತವಾಗಿತ್ತು. ನನ್ನ ಕಾಲೇಜಿನ ದಿನಗಳಲ್ಲಿ ಎಸ್.ಎಲ್.ಭೈರಪ್ಪ, ಜಿಎಸ್ಸೆಸ್, ಕುವೆಂಪು, ಎಂಡಮೂರಿ ಮತ್ತು ರವಿ ಬೆಳಗೆರೆಯವರನ್ನು ಖುಷಿಯಿಂದ ಓದುತ್ತಿದ್ದ ನಾನು, ಅದೇನೋ ಕೆಲಸ ಅಂತಾದ ಮೇಲೆ ಓದು ಕಡಿಮೆಯಾಯ್ತೆಂದೇ ಹೇಳಬೇಕು. ಇತ್ತೀಚೆಗೆ ಸುಮ್ಮನೆ ಎತ್ತಿಕೊಂಡ ಪುಸ್ತಕ ತೇಜಸ್ವಿಯವರ ’ಕರ್ವಾಲೊ’.

ಫಿಲಾಸಫಿ ಮತ್ತು ತತ್ವಶಾಸ್ತ್ರವನ್ನು ವಿಷಯವಾಗಿ ಆರಿಸಿಕೊಂಡು ಎಮ್.ಎ. ಪದವಿ ಮಾಡಿಕೊಂಡ ತೇಜಸ್ವಿಯವರಿಗೆ ಪ್ರಕೃತಿ ವೈಚಿತ್ರಗಳ ಬಗ್ಗೆ ಇಷ್ಟು ಮಟ್ಟಿಗಿನ ಒಳನೋಟ ಸಾಧ್ಯವಾದದ್ದಾದರೂ ಹೇಗೆ ಎಂಬುದು ನನ್ನನ್ನು ಕಾಡುವ ಪ್ರಶ್ನೆ. ಪ್ರಕೃತಿ ವೈಚಿತ್ರಗಳ ಬಗ್ಗೆ ನಮಗರಿವಿಲ್ಲದಂತೆ ಆಸಕ್ತಿ ಮೂಡಿಸಬಲ್ಲ ಕಾದಂಬರಿ ಕರ್ವಾಲೊ. ಕಥಾನಾಯಕ ಕರ್ವಾಲೊ, ಒಬ್ಬ ಸಸ್ಯ ವಿಜ್ಞಾನಿ ಮತ್ತು ಕೀಟ ಶಾಸ್ತ್ರಜ್ಞ. ನೀವು ಓದಿಕೊಂಡು ಹೋದಂತೆ ಅವರು ಒಂದು ನಿಗೂಢವೂ, ಒಬ್ಬ ತತ್ವ ಜ್ಞಾನಿಯೂ, ಮಾನವ, ಜೀವಿ ಮತ್ತು ಸಸ್ಯ ಸಂಕುಲಗಳ ಕೊಂಡಿಯಾಗಿಯೂ ಕಾಣುತ್ತಾರೆ. ಇನ್ನುಳಿದ ಪಾತ್ರಗಳು ಮಂದಣ್ಣ, ಕರಿಯಪ್ಪ, ಪ್ರಭಾಕರ, ಲೇಖಕರು ಮತ್ತು ಕಿವಿ. ಮಂದಣ್ಣ ಒಬ್ಬ ಹುಟ್ಟು ನಿಸರ್ಗ ತಜ್ಞ! ಮೊದಲಲ್ಲಿ ಅವನೊಬ್ಬ ಹೆಡ್ಡನಂತೆ ಕಂಡು ಬಂದರೂ ಎಲ್ಲರಲ್ಲಿಯೂ ಅಸಾಮಾನ್ಯವಾದುದ್ದೇನೋ ಇರುತ್ತದೆ ಎಂಬ ವಾದಕ್ಕೆ ಅನ್ವರ್ಥವಾಗಿ ನಿಲ್ಲುತ್ತಾನೆ. ಓದುಗರನ್ನು ಅಚ್ಚರಿಗೊಳಿಸುತ್ತಾನೆ. ಕರಿಯಪ್ಪ ಉದ್ದುದ್ದವಾದ ಮರಗಳನ್ನು ಹತ್ತುವ ಮತ್ತು ಮಾಂಸಾಹಾರಗಳನ್ನು ಹದವಾಗಿ ತಯಾರಿಸುವ ಬಾಣಸಿಗ! ಕಾದಂಬರಿಯ ಉದ್ದಕ್ಕೂ ಲವಲವಿಕೆ ಉಕ್ಕಿಸುತ್ತಾ, ನಗಿಸುತ್ತಾ ಓದಿಸುವುದು ಅವನ ಹೆಗ್ಗಳಿಕೆ! ಪ್ರಭಾಕರ ಒಬ್ಬ ಫೋಟೋಗ್ರಾಫರ್, ಪ್ರಕೃತಿಯ ವೈಚಿತ್ರಗಳನ್ನು ಸೆರೆ ಹಿಡಿಯಲು ಕರ್ವಾಲೊರವರೊಂದಿಗೆ ಇರುತ್ತಾನೆ. ಪ್ರಭಾಕರನ ಕ್ಯಾಮೆರಾದ ದೃಷ್ಟಿಕೋನಗಳನ್ನು ಕರ್ವಾಲೊ ಸೂಕ್ಷ್ಮಗೊಳಿಸಿರುವ ಕಾರಣದಿಂದಲೇ, ಅವನು ಅವರೊಂದಿಗೆ ಉಳಿದಿರುತ್ತಾನೆ ಅವರ ಸಂಶೋಧನೆಗಳಿಗೆ ಒತ್ತಾಸೆಯಾಗಿ.

ಇವೆಲ್ಲಾ ಪಾತ್ರಗಳನ್ನು ಒಂದು ತಹಬಂದಿಗೆ ತಂದು, ತಮ್ಮನ್ನೂ ನಿರೂಪಿಸಿಕೊಳ್ಳುವವರು ಲೇಖಕ. ಲೇಖಕ ಇಲ್ಲಿ ಒಬ್ಬ ಅಲೆಮಾರಿ ಮನೋಭಾವದ, ಮಾನವ ಸಹಜ ಭಾವಗಳನ್ನು ಹೊಂದಿರುವ, ಆರಕ್ಕೇರದ ಮೂರಕ್ಕಿಳಿಯದ ಬೇಸಾಯವನ್ನು ನೆಚ್ಚಿಕೊಂಡ ಕೃಷಿಕ. ಕೃಷಿಕರ ಕಷ್ಟಗಳು ಮತ್ತು ಅವರನುಭವಿಸುವ ತುಮುಲಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ತೇಜಸ್ವಿ. ಏಕತಾನತೆ ಬದುಕಿನ ಜಡ ಎಂದು ಭಾವಿಸುವ ಲೇಖಕ, ಈ ಕಷ್ಟಗಳ ಸರಮಾಲೆಯಲ್ಲಿ ಕೊಸರುತ್ತಾ ತನ್ನ ಜಮೀನನ್ನು ಮಾರಲು ಪ್ರಯತ್ನಿಸುತ್ತಾರೆ, ಮಾರುವುದಿಲ್ಲ! ಕೃಷಿಕನ ಕಷ್ಟದ ತೀವ್ರತೆ ಎಷ್ಟೆಂಬುದು ಓದುಗರ ಗಮನಕ್ಕೆ ಬರಲಿ ಎಂಬುದು ಲೇಖಕರ ಉದ್ದೇಶವಾಗಿತ್ತು ಎನಿಸುತ್ತದೆ! ಕಿವಿ ಲೇಖಕರ ಮನೆಯಲ್ಲಿ ಹುಟ್ಟಿ ಬೆಳೆದ ಸ್ಪ್ಯಾನಿಶ್ ನಾಯಿ, ಕಾದಂಬರಿಯ ಉದ್ದಕ್ಕೂ ಲೇಖಕರ ಅಪ್ತ ಮತ್ತು ಶಿಕಾರಿಯಲ್ಲಿ ಅವರಿಗೆ ಜೊತೆಗಾರ. ಇವೆಲ್ಲಾ ಪಾತ್ರಗಳನ್ನು ಕಾದಂಬರಿಯ ಹಂದರದೊಳಗೆ ಬಂಧಿಸಿರುವ ಅಪರೂಪದ ಪ್ರಾಣಿ, ದಶ-ದಶಮಾನಗಳ ಹಿಂದಿನ ’ಹಾರುವ ಓತಿ’. ಡೈನೋಸಾರ್ ನಂತೆ ಕಾಣಿಸಿಕೊಳ್ಳುವ ಅದು, ತನ್ನ ಪಕ್ಕೆಲುಬುಗಳ ಪಕ್ಕದಲ್ಲಿ ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತದೆ ಎಂಬುದು ಕರ್ವಾಲೊ ರವರ ನಂಬಿಕೆ. ಮಂದಣ್ಣ ಹೇಳುವಂತೆ ಅದು ನಾರ್ವೆ ಹಳ್ಳಿಯ ಸುತ್ತ ಮುತ್ತಲ ಪಶ್ಚಿಮ ಘಟ್ಟಗಳ ದಟ್ಟ ಕಾನನದಲ್ಲಿ ಇರುವುದು ಎಂಬ ಮೂಲದ ಜಾಡು ಹಿಡಿದು ಹೋಗುವ ಇವರ ಗುಂಪಿಗೆ ಹಾರುವ ಓತಿ ಸಿಕ್ಕೀತೆ? ಇವರಿಗೆ ಜೀವಿ ವೈವಿಧ್ಯಗಳ ಒಳಸುರುಳಿಗಳನ್ನು ಬಿಚ್ಚಿಡಲು ಸಹಕರಿಸೀತೇ? ಎಂಬುದೇ ಕಾದಂಬರಿಯ ಹಂದರ.



ತೇಜಸ್ವಿಯವರ ಬರವಣಿಗೆಯ ಶೈಲಿ ತುಂಬಾ ಸಾಮಾನ್ಯವಾಗಿದ್ದು, ಯುವ ಬರಹಗಾರರಿಗೆ ಮಾದರಿಯಾಗಬಲ್ಲದು. ಅಧ್ಯಾತ್ಮ, ಧರ್ಮ, ಧ್ಯಾನಗಳಂತೆ ವಿಜ್ಞಾನ ಮತ್ತು ಜೀವಿ ವೈವಿಧ್ಯವೂ ಸಾಕ್ಷಾತ್ಕಾರದ ಹಾದಿ ಎಂಬುದನ್ನು ವೇಧ್ಯವಾಗಿಸುವ ಕಾದಂಬರಿ ಕರ್ವಾಲೊ. ಓದುಗರಿಗೆ ಜೀವ ವೈವಿಧ್ಯಗಳ ಬಗ್ಗೆ ಆಸಕ್ತಿಯಿದ್ದರಂತೂ ಕರ್ವಾಲೊ, ರಸದೌತಣ! ಎಲ್ಲರೂ ’ಕರ್ವಾಲೊ’ ವನ್ನು ಒಮ್ಮೆಯಾದರೂ ಓದಲೇ ಬೇಕು.

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Thursday 29 November 2012

ಅರಿಷಡ್ವರ್ಗಗಳ ಉರಿ



ಕಾರುತ್ತವೆ, ಉರಿಯುತ್ತವೆ,
ದೇಹವನ್ನೇ ದಹಿಸುತ್ತವೆ,
ನಿಗ್ರಹಿಸಿದವನು ಸಂತ,
ನಿಗ್ರಹಿಸದವಗವು ಸ್ವಂತ!
ಸೊಂಪಾದ ಬತ್ತಿಗೆ ಕಿಡಿಯಿಟ್ಟವನು
ಅವನೋ ಆಟವಾಡುತ್ತಾನೆ!
ಉರಿದವರು ಮಾತ್ರ ನಾವೇ!
ಅರಿಷಡ್ವರ್ಗಗಳ ಉರಿಗೆ!

ದಗದಗಿಸಿ ಉರಿದು
ಸ್ಖಲಿಸಿ ಉಗಿದದ್ದಷ್ಟೇ
ಪ್ರೇಮಕ್ಕೆ ಹಿಡಿಯಷ್ಟು ಮಣ್ಣು!
ಕಾಮಕ್ಕೆ ನೂರೆಂಟು ಕಣ್ಣು!
ಕ್ರೋಧದ ದಾವಾಗ್ನಿಗೆ
ಬೆಂದುಹೋಯಿತು ಕುರುವಂಶ
ಕಾರಿಕೊಂಡವನು ಸುಯೋಧನ
ಪಡೆದದ್ದು ಏನು?

ಶಕುನಿಯ ಕುಯುಕ್ತಿಗೆ
ಸುಯೋಧನನ ದಾಹ ಬೆಸೆತ!
ರಾಜ್ಯದಾಸೆಯ ಲೋಭಕ್ಕೆ
ಬರೆಸಿಕೊಂಡ ಭಾರತ!
ತಾರುಣ್ಯವತಿ ದ್ರೌಪದಿ,
ಏನ ಕಂಡನೋ ಕೀಚಕ!
ಮೋಹಕ್ಕೆ ಮತ್ತೊಂದು ಬಲಿ
ಬಲ ಭೀಮನ ಕೈಯ್ಯಲ್ಲಿ!

ಋಷಿಗಳ ಕೊರಳ್ ಹಿಡಿದು
ಗೋಪಿಕೆಯರ ಸೆರೆ ಹಿಡಿದ
ಅದಮ ನರಕನ ಬಲಿ ತೆಗೆದದ್ದು
ಮದ, ಭಾಮೆಯು ಸುಳಿಮದ್ದು!
ಶಕುನಿಯ ಮಾತ್ಸರ್ಯವು
ಕುರುಕ್ಷೇತ್ರಕೆ ಧಾಳ ಹೂಡಿ,
ಅವನಾದರೂ ಉಳಿದನೆ?
ಅವನೂ ಹಳಿದು ಹತನಾದವನೇ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Monday 26 November 2012

ಈ ಹೃದಯ ಹಾಡಿದೆ!



ನಲ್ಮೆಯ ಗೆಳತಿ,

ಇದೇನು ಕಾರಣವಿಲ್ಲದೆ ಪತ್ರ ಅನಾಮಧೇಯನಿಂದ, ಎಂದು ಬೇಸರಿಸದಿರು. ಹೆಸರು ನೋಡಿ ಎಸೆಯದಿರಲೆಂದೇ ಹೆಸರ ಮರೆ ಮಾಚಿದ್ದೇನೆ. ಪತ್ರ  ಓದುತ್ತಿದ್ದಂತೆ ಹೆಸರು ನಿನಗೇ ತಿಳಿಯುತ್ತದೆ ಎಂಬುದು ನನ್ನ ನಂಬಿಕೆ, ಮುದ್ದು ಬಂದರೆ ಮುದ್ದಿಸು ಸಾಕು! ಪ್ರೀತಿ ಹರಿವ ನೀರು ಅದನ್ನು ತಡೆವವರಾರು ಎಂದು ಹರಿದಿದ್ದೇ ನನ್ನ ತಪ್ಪಾಯ್ತು ಎನಿಸುತ್ತದೆ. ನೆನಪು ಉಡುಗೊರೆಯಾಯ್ತು, ವಿರಹ ಆಸರೆಯಾಯ್ತು, ಬರವಣಿಗೆಯೊಂದೇ ಆಸ್ತಿಯಾದದ್ದು!

ಬಸ್ ನಲ್ಲಿನ ಜೊತೆ ಪ್ರಯಾಣದೊಂದಿಗೆ ಮೊದಲ್ಗೊಂಡ ಸ್ನೇಹ, ಎದುರಿಗೆ ಸಿಕ್ಕಾಗ ಹೊರಬೀಳುತ್ತಿದ್ದ ಹಾಯ್-ಹಲೋಗಳು ಮತ್ತು ಕಣ್ಣೋಟಗಳಲ್ಲಿ ಪ್ರೀತಿಯಾಗಿ ಬೆಳೆಯುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಪ್ರೀತಿಯಲ್ಲಿ ನನಗಿನ್ನೂ ಅರ್ಥವಾಗದ ಸಂಗತಿ ಎಂದರೆ ನಿರುಪದ್ರವಿಗಳು ನಾವು, ನಮ್ಮ ಪ್ರೀತಿಗೇ ಇಂತಹ ಅಡೆತಡೆಗಳು ಬರಬೇಕಾ? ನಿನ್ನ ನೆನಪಾದಾಗಲೆಲ್ಲಾ ಆ ವಿಧಿಯನ್ನು ಅದೆಷ್ಟು ಶಪಿಸಿದ್ದೇನೋ? ಆದರೆ ಅವನಿಗೆ ಮಾತ್ರ ಸ್ವಲ್ಪವೂ ತಟ್ಟಿದಂತೆ ಕಾಣುತ್ತಿಲ್ಲ!

ನಿನಗೆ ಕಾಡುತ್ತಿರಬಹುದು, ಒಂದೂವರೆ ವರ್ಷ ಒಂದೂ ಮಾತನಾಡದೆ ದೂರ ಉಳಿದವನು, ಹುಟ್ಟುಹಬ್ಬದಂದು ಶುಭಾಷಯ ತಿಳಿಸಲೂ ನೆನಪಿಸಿಕೊಳ್ಳದವನು ಈಗ್ಯಾಕೆ ಬಂದ ಎಂದು? ಎಲ್ಲದಕ್ಕೂ ಕಾರಣಗಳಿಲ್ಲವೆಂದಲ್ಲ ಆದರೆ ನಿನಗೆ ಆ ಕಾರಣಗಳನ್ನು ಹೇಳಲಾರೆ. ನಿನ್ನ ಜೀವನದ ಬಗ್ಗೆ ನನಗಿದ್ದ ಕಾಳಜಿ ನನ್ನನ್ನು ನನ್ನವೇ ಊಹೆಗಳಲ್ಲಿ ತಳ್ಳಿಬಿಟ್ಟಿತ್ತು. ನಿನ್ನ ನೆನಪಾದಗಾಲೆಲ್ಲ ನೀ ಕೈ ಹಿಡಿದು ನಡೆದ ಈ ಕೈಗಳನ್ನು ಎದೆಗೊತ್ತಿ ಮಲಗಿಬಿಡುತ್ತಿದ್ದೆ.

ಇಷ್ಟೆಲ್ಲಾ ಯೋಚಿಸಿದ ನಂತರ ನೀನು ಸಂತೋಷವಾಗಿರಬೇಕಾದರೆ ನಾನು ದೂರವಿರಬೇಕು ಎಂಬ ನಿರ್ಧಾರಕ್ಕೆ ನನ್ನ ಮನಸ್ಸು ಬಂದುಬಿಟ್ಟಿತ್ತು. ಆ ನಿರ್ಧಾರಕ್ಕೆ ಲಾಜಿಕ್ ಹುಡುಕಬೇಡ, ನನಗೂ ಇನ್ನೂ ಸಿಕ್ಕಿಲ್ಲ! ಒಂದೂವರೆ ವರ್ಷಗಳ ನಂತರ ಉಳಿದಿರುವ ಆ ಒಂದು ಸಾಲ ನನ್ನನ್ನು ಮತ್ತೆ ನಿನ್ನ ಮುಂದೆ ನಿಲ್ಲಿಸುತ್ತಿದೆ. 'ನೀನು ಚೆನ್ನಾಗಿರುವುದನ್ನು ನೋಡಲು ನಾನು ಯಾವ ನೋವಾದರೂ ಸಹಿಸುತ್ತೇನೆ' ಎಂದು ಬಂದ ನನ್ನ ಉದ್ವೇಗದ ಮಾತಿಗೆ ನಿನ್ನ ಕಣ್ಣುಗಳಲ್ಲಿ ಇಣುಕಿದ ಆ ಮುತ್ತು ಹನಿಗಳು ಅವುಗಳಲ್ಲಿನ ಪ್ರೀತಿ, ಆ ನಿನ್ನ ನೋಟ! ನನ್ನ ಜೀವನ ಪರ್ಯಂತ ನಿನ್ನ ಪ್ರೀತಿಸಿದರೂ ಸವೆಯದ ಸಾಲಗಾರನನ್ನಾಗಿ ಮಾಡಿವೆ. ಸಾಲಗಾರನಾಗಿ ಸಾಯಲಾರೆ! ದಯವಿಟ್ಟು ನನ್ನ ಪ್ರೀತಿಯನ್ನು ಮತ್ತೆ ಅಪ್ಪಿ ಮುದ್ದಿಸು ಗೆಳತಿ! ಜೀವದ ಪರ್ಯಂತ ಕಾವಲಿರುತ್ತೇನೆ.

ನಿನ್ನ ಸ್ನೇಹ, ನಿನ್ನ ಒಡನಾಟ, ನಿನ್ನ ನಗು, ಆ ನಿನ್ನ ಪುಟ್ಟ ಪುಟ್ಟ ಭಯಗಳು ನನ್ನನ್ನು ಈಗಲೂ ಕಾಡುತ್ತಿವೆ. ಉಸಿರು ಬಿಗಿ ಹಿಡಿದು, ನಿನ್ನ ಅಪ್ಪಿ ಲಾಲಿ ಹಾಡಬೇಕು ಎನ್ನಿಸುತ್ತದೆ. ಮಧ್ಯ ರಾತ್ರಿಯಲಿ ನೀನು ಮಗುವಂತೆ ನಿದ್ರಿಸುವುದನ್ನು ನೋಡಬೇಕೆನಿಸುತ್ತದೆ. ಬೆಳಗಿನ ಮುಂಜಾನೆಗೆ ನಿನ್ನ ಕಿವಿಯಲ್ಲಿ ಪಿಸುಗುಟ್ಟಿ ಎಬ್ಬಿಸಿದಂತೆ ಕನಸ್ಸು ಬೀಳುತ್ತದೆ. ಎಲ್ಲದಕ್ಕೂ ಕಾರಣ ಹುಡುಕುತ್ತಾ ಹೋದರೆ ಮತ್ತೆ ಮನಸ್ಸು ನಿನ್ನಲ್ಲಿಯೇ ಬಂದು ನಿಲ್ಲುತ್ತದೆ. ಉತ್ತರ ಹುಡುಕುವುದನ್ನು ನಿಲ್ಲಿಸುತ್ತೇನೆ, ದಾರಿದೀಪವಾಗಿ ನೀ ಬರುವೆಯಾ? ಪ್ರೀತಿಯ ಸೆಲೆ ಬತ್ತದಂತೆ ಕಾಯುವೆಯಾ?

ಇಂತಿ (ನಿನ್ನ) ಗೆಳೆಯಾ!


- ಪ್ರಸಾದ್.ಡಿ.ವಿ

ಈ ಪತ್ರವು ’ಕನ್ನಡ ಪ್ರಭ’ ದಲ್ಲಿ ಡಿಸೆಂಬರ್ ೨೨ರ ಬೈಟೂ ಕಾಫಿಯ ’ಮಕರಂದ’ ಆವೃತ್ತಿಯಲ್ಲಿ ಪ್ರಕಟಿತವಾಗಿದೆ.


ಚಿತ್ರ ಕೃಪೆ: ಅಂತರ್ಜಾಲ

Sunday 11 November 2012

ಹಚ್ಚೋಣ ಹಣತೆಯನ್ನು


ಹಚ್ಚೋಣ ಹಣತೆಯನ್ನು,
ಹಾದಿಗೂ ಬೀದಿಗೂ,
ಓಣಿಗೂ ಕೋಣೆಗೂ,
ತಮವನ್ನು ತೊಡೆವ,
ದೂರದೃಷ್ಟಿಯ ಹಡೆವ,
ದಿವ್ಯಜ್ಯೋತಿಯ ದೀವಿಗೆಯನು!

ಹಚ್ಚೋಣ ಹಣತೆಯನ್ನು,
ಕೋಶ-ಕೋಶದೊಳಗೆ,
ಅಂತರಂಗನಾತ್ಮದೊಳಗೆ,
ತೋಮರದಿ ತಿವಿದು, ರಕುತವನೇ ಬಸಿದ
ಮಾನವನ ಮನಶ್ಶುದ್ಧಿಗೆ
ಜ್ಞಾನಜ್ಯೋತಿಯ ದೀವಿಗೆಯನು!

ಹಚ್ಚೋಣ ಹಣತೆಯನ್ನು,
ಅಂಧತೆಯ ನೆರಳೊಳಗೂ,
ನೋಡಲಿ ನಮ್ಮ ಕಣ್ಣು,
ಸೇರಿದ ಮೇಲೂ ಈ ದೇಹ
ಭೂದೇವಿಯ ಮಣ್ಣು,
ಹಚ್ಚೋಣ ಬನ್ನಿರೈ ಬನ್ನಿ
ತೇಜೋರೂಪಿ ದೀಪ್ತಿಯನ್ನು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday 3 November 2012

ಉಚ್ಛ್ವಾಸ-ನಿಶ್ವಾಸದೊಳಗೆ


ಉಸಿರಾಟದಿ ಒಳ ಸೇರಿ
ಶ್ವಾಸ ನಾಳದೊಳಿಳಿದು
ದೇಹ ಸೇರಿದ ಪ್ರಾಣವಾಯು,
ಹೊರಗೆ ಹಾರಿದಿಂಗಾಲದನಿಲ,
ಊದಿಕೊಂಡಿತ್ತು ಶ್ವಾಸನಾಳ!
ಉಚ್ಛ್ವಾಸ-ನಿಶ್ವಾಸಗಳಿವು,
ಜೀವದಲ್ಲಷ್ಟೆ ಅರಳುವವು!

ದೇಹದಲ್ಲಿ ಪ್ರಾಣವಾಯುವನ್ನು
ಬೆರೆಸಲೆಂದೇ ಹೃದಯ ತಾ ಬಡಿಯುತ್ತದೆ!
ರಕ್ತದೊಳ ಪ್ರಾಣವಾಯು
ದೇಹದಣುವಣುವನ್ನೂ ಸೇರಿದರೆ ಲಬ್!
ಇಂಗಾಲದನಿಲ ಹೊತ್ತುತರುವಾಗ ಡಬ್!
ಹೃದಯದ ಕವಾಟಗಳವು
ಮುಚ್ಚಿಕೊಂಡು ಬಿಚ್ಚಿಕೊಳ್ಳುವವು!

ಜೀವವಿಲ್ಲದೆ ಬರಿಯ ಬೂದಿಯೂ
ಮಾನವನ ದೇಹವಿದು,
ದೇಹಕ್ಕೆ ಜೀವ ತುಂಬಿ,
ಅದರೊಳಗೆ ಆತ್ಮನಿರಿಸಿ,
ತಾನೂ ಒಳ ಸೇರಿಬಿಟ್ಟ ಅವನು!
ಜಪಿಸುತ್ತೇನೆ ಕೃಷ್ಣಾರ್ಪಣಂ
ಪ್ರತಿಯೊಂದು ಉಚ್ಛ್ವಾಸ ನಿಶ್ವಾಸದೊಳಗೆ!

- ಪ್ರಸಾದ್.ಡಿ.ವಿ.

Monday 29 October 2012

ರಾಗವಿದೋ ಮೇಲೆದ್ದಿದೆ



ರಾಗವಿದೋ ಮೇಲೆದ್ದಿದೆ,
ಅರಿವಿನಂಚಿನಲಿ ಅಳಿದು ಸೊರಗಿದ್ದ
ರಾಗವೊಂದು ಮತ್ತೆ ಮೇಲೆದ್ದು
ಗಗನವ ಚುಂಬಿಸ ಬಯಸುತಿದೆ!

ಹೂಳು ಹೊದ್ದು ಮಲಗಿದ್ದ
ಹಾಳು ರಾಗವೊಂದು ಮೇಲೆದ್ದಿದೆ!
ಸಾಲುಬಿದ್ದ ಸಾವಿರ ಕಾಲು ಮುರಿದ
ಕನಸುಗಳ ಅಣಕಿಸಿದೆ!
ಏನಿತ್ತು ತಣಿಸಲಿ ಇದನು
ಮೌನಕ್ಕೆ ಶರಣು ನನ್ನೊಳಗಿನ ಆನು!

!!ರಾಗವಿದೋ ಮೇಲೆದ್ದಿದೆ!!

ನಿರಾಸೆಯನ್ನು ಮೀರಿ ನಿಂತ
ಚಿತ್ತಕ್ಕೆ ಹಸಿರನ್ನೇ ಮೆತ್ತುತಿದೆ!
ಹಣೆಯಾ ಬರಹವನ್ನೂ
ಅಲುಗಿಸುತ್ತಿದೆ! ಆಳುತ್ತಿದೆ!
ಸುಪ್ತವಾಗಿದ್ದ ಅತೃಪ್ತರನ್ನು
ಮತ್ತೆ ಕರೆಯುತ್ತಿದೆ!

!!ರಾಗವಿದೋ ಮೇಲೆದ್ದಿದೆ!!

ಹೊಸ ಕನಸುಗಳನ್ನು
ಮೇಲೆಬ್ಬಿಸಿ ನಾನೊಳಗೆ
ತಾನನ್ನು ಬೆರೆಸುತ್ತಿದೆ!

!!ರಾಗವಿದೋ ಮೇಲೆದ್ದಿದೆ!!

- ಪ್ರಸಾದ್.ಡಿ.ವಿ.

Monday 15 October 2012

ಆವರಿಸೆನ್ನ ಓ ಗುರುವೇ ಅಂತರಾತ್ಮ




ಅರಿವಿನಣುವಣುವನ್ನೂ ಬಿಡದೆ ಆವರಿಸು
ಸಾಕ್ಷಾತ್ಕಾರಕ್ಕೆ ಕಾದಿರುವೆನುದ್ಧರಿಸು
ಓ ಗುರುವೇ ಕರಪಿಡಿದು ನಿಂತಿರುವೆ
ಕೈಹಿಡಿದು ನಡೆಸೆನ್ನ ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

ನಾನು-ನಾನೆಂಬ ನಂದಿಸೆನ್ನನು
ನಂದದಿರುವ ನಿನ್ನನೆನ್ನೊಳುಳಿಸಿನ್ನು
ಓ ಗುರುವೇ ಜಗದರಿವೇ
ಕೃಷ್ಣನೊಲವೇ ನೀ ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

ದೀಪದ ತಳದಂಧಕಾರವಳಿಸುವವನು
ಆತ್ಮನಲ್ಲೇ ಪರಮಾತ್ಮನ ನೆಲೆಗೊಳಿಸುವನು
ಓ ಗುರುವೇ ಶರಣು ನಾನು
ಆತ್ಮನೊಳಗಿನಾತ್ಮ ನೀನು ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

- ಪ್ರಸಾದ್.ಡಿ.ವಿ.
--------------------------------------------------------------------------------------
ಗುರುವಿನ ಪಾದತಲದಲ್ಲಿ ಮೊದಲ ಕಮಲ

Monday 8 October 2012

ಹಾಳೆಂಬ ನಾಳೆಯಲಿ ನಾನಿಲ್ಲ




ಮನಸ್ಸಿನಿಂದ ಭಾವಗಳು ತೊಟ್ಟಿಕ್ಕುವಾಗ ಹೃದಯ ಮೌನವಾಗಿ ಮಾತನಾಡುತ್ತದೆ. ಕೇಳಲು ಕಿವಿಯಿದ್ದರೂ ಮನಸ್ಸು ಅಂತರಂಗದ ಕಿವಿಯನ್ನೇ ಬಯಸುತ್ತದೆ. ಏನಿದು ಶೀರ್ಷಿಕೆಗೂ ಮಾತಿಗೂ ಹೊಂದಿಕೆಯೇ ಇಲ್ಲ, ಸುಮ್ಮನೆ ಬಡ ಬಡಿಸುತ್ತಿದ್ದಾನಲ್ಲ ಎಂದುಕೊಳ್ಳಬೇಡಿ. ವಿಷಯಕ್ಕೆ ಬರುತ್ತೇನೆ ಒಮ್ಮೊಮ್ಮೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದೂ ಚೆನ್ನವೇ!

ನನಗೆ ಗೊತ್ತು ಶೀರ್ಷಿಕೆ ನಿಮ್ಮಲ್ಲಿ ಅನುಮಾನಗಳನ್ನು, ಅಸಹನೆಯನ್ನು ಬಿತ್ತಬಹುದು. ಕನಸ್ಸುಗಳಲ್ಲೇ ಜೀವಿಸುವ ನಮಗೆ ಜೀವನವೆಂಬುದು ನಾಳೆಗಳಲ್ಲೇ ಎಂಬುದನ್ನು ಬಲ್ಲೆ, ಅದು ಸಹಜವೂ ಹೌದು. ಮೊನ್ನೆ ಹೀಗೆ ಉದಯವಾಣಿಯಲ್ಲಿ ಒಂದು ಲೇಖನ ಓದುತ್ತಿದ್ದೆ. 'ನಾಳೆಯಲ್ಲಿ ನಾನಿಲ್ಲ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ಲೇಖನ ಅದು. ಶೀರ್ಷಿಕೆಯೇ ನನ್ನಲ್ಲಿ ಕುತೂಹಲ ಹುಟ್ಟಿಸಿತು. ಒಬ್ಬ ವಿದವೆಯಾದ ಹೆಣ್ಣು ಮಗಳೊಬ್ಬಳ ಕರುಣಾಜನಕ ಮಿಂಚಂಚೆಯ ಮೇಲೆ ಕೇಂದ್ರಿತವಾಗಿತ್ತು. ಲೇಖಕರು, ವಯಸ್ಸು ಎಷ್ಟೇ ಚಿಕ್ಕದಿದ್ದರು ಆಸ್ತಿಗಳ ಗಳಿಕೆಯ ನಂತರ ಉಯಿಲು ಬರೆದಿಡಬೇಕಾದ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಿದ್ದರು. ಆ ಪ್ರಕಾರ ತಮ್ಮ ಮೇಲಿನವರ ಪ್ರೀತಿಯನ್ನು ಸಾವಿನ ನಂತರವೂ ವಿಸ್ತರಿಸಿದಂತಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಆ ಲೇಖನ ನನ್ನ ದೃಷ್ಟಿಕೋನಕ್ಕೆ ಸಿಕ್ಕಿ ಬೇರೆಯದೇ ಯೋಚನೆಗಳನ್ನು ಬಿತ್ತಿತು. ಆ ಭಾವಗಳನ್ನು ನನ್ನ ಹುಡಿ ಚೆಲ್ಲಿ ನಿಮ್ಮಲ್ಲಿ ಈಗ ಹರಹುತ್ತಿದ್ದೇನೆ.

ಜೀವನ ನೀರ ಮೇಲಿನ ಗುಳ್ಳೆ ಎಂಬ ದಾಸ ಶ್ರೇಷ್ಟರ ವಚನ ಕೇಳಿದ್ದರು ಮನುಷ್ಯ ಅದನ್ನು ಒಪ್ಪಿಕೊಳ್ಳಲೊಲ್ಲ. ನಾವು ಎಷ್ಟೇ ಚಿಕ್ಕ ವಯಸ್ಸಿನವರಾಗಿದ್ದರು ಸಾವು ಕ್ಷಣಗಳಲ್ಲಿ ಬಂದೆರಗಬಹುದು. ಅದಕ್ಕೆ ಹಲವಾರು ಕಾರಣಗಳಿರಬಹುದು. ಅಪಘಾತ, ಆಹಾರದಲ್ಲಿನ ಅಪೌಷ್ಟಿಕತೆ, ಮಾರಣಾಂತಿಕ ರೋಗಗಳು, ಸಣ್ಣ ವಿಷಯಕ್ಕೂ ಬದುಕಿನಿಂದ ವಿಮುಖರಾಗುವ ಮನಸ್ಥಿತಿ, ಹೀಗೆ ನೂರೆಂಟು ಕಾರಣಗಳು. ಇಷ್ಟೆಲ್ಲಾ ಇದ್ದಾಗ್ಯೂ ನಾವು ಬದುಕುವುದನ್ನು ಮುಂದೂಡುತ್ತೇವೆ. ವಾರಾಂತ್ಯಕ್ಕೆ ಹೆಂಡತಿ-ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಾತು ಕೊಟ್ಟು ಮುಂದಿನ ವಾರಕ್ಕೆ ಹೋದರಾಯ್ತು ಎಂದು ಮುಂದೂಡುತ್ತೇವೆ. ದಿನವೂ ವ್ಯಾಯಾಮ ಮಾಡಬೇಕು ಎಂದು ಪಣ ತೊಟ್ಟು ನಾಳೆ ಎಂಬ ಹಣೆ ಪಟ್ಟಿ ನೀಡಿ ಮುಂದೂಡುತ್ತೇವೆ. ಸ್ನೇಹಿತರೊಂದಿಗೆ ಒಂದು ಸುಂದರ ಭೇಟಿ ಎಂದು ಆಯೋಜಿಸಿ ನಂತರ ಯಾವುದಾದರು ನೆಪ ಹೂಡಿ ಭೇಟಿಯನ್ನು ಮುಂದೂಡುತ್ತೇವೆ. ಹೀಗೆ ನೋಡುತ್ತಾ ಹೋದರೆ ಬದುಕಿದ ಜೀವನಕ್ಕಿಂತ ಮುಂದೂಡಿದ ಜೀವನವೇ ಲಂಬವಾಗಿರುತ್ತದೆ.

ಹೀಗೆ ಎಲ್ಲವನ್ನೂ ನಾಳೆಗಳಿಗೆ ಕಾಯ್ದಿರಿಸುವ ನಮ್ಮ ಪ್ರೌವೃತ್ತಿ ಕಾಯ್ದಿರಿಸಿದ ಬದುಕನ್ನು ಬದುಕುವ ಮುಂಚೆಯೇ ನಮ್ಮನ್ನು ಜೀವನದಂಚಿಗೆ ತಂದು ನಿಲ್ಲಿಸುವುದು ದುರಂತ. ಹುಡುಕುತ್ತಾ ನಿಂತರೆ ಜೀವನಕ್ಕೆ ಅರ್ಥವೇ ಇಲ್ಲದಷ್ಟು ಸಣ್ಣದಾಗಿ ಜೀವನವನ್ನು ಬದುಕಿರುತ್ತೇವೆ. ಅಪ್ಪ-ಅಮ್ಮನ ಮಮತೆ ಕೊಡದ ಹಣಕ್ಕಾಗಿ ಕಾಲು ಭಾಗದಷ್ಟು ಜೀವನವನ್ನು ಸವೆಸಿರುತ್ತೇವೆ. ಸಂಗಾತಿಯ ಸಾಂಗತ್ಯ ಕೊಡದ ಕಾರು-ಬಂಗಲೆಯ ಕನಸಲ್ಲಿ ಇನ್ನು ಕಾಲು ಭಾಗದ ಬದುಕು. ಮಕ್ಕಳೊಂದಿಗಿನ ಆಪ್ಯಾಯಮಾನತೆ ಮತ್ತು ಸಂತೋಷ ಕೊಡದ ಕೆಲಸದ ಒತ್ತಡದಲ್ಲಿ ಮತ್ತೂ ಕಾಲು ಭಾಗದ ಬದುಕು. ಸ್ನೇಹದ ಆತ್ಮೀಯತೆ ಕೊಡದ ಅಹಂ ಒಳಗಿನ ಗರ್ವದ ಕೋಟೆಯೊಳಗೆ ಉಳಿದ ಕಾಲು ಭಾಗದ ಬದುಕು. ಹೀಗೆ ಹುಡುಕುತ್ತಾ ಹೋದರೆ ನಾವು ಬದುಕಿದ್ದೆವು ಎಂಬುದೇ ನಮಗೆ ಮರೆತು ಹೋಗುತ್ತದೆ. ನಾವು ನಮಗಾಗಿ, ನಮ್ಮ ಸಂತೋಷಕ್ಕಾಗಿ ಬದುಕಲೇ ಇಲ್ಲವೇ ಎನಿಸಿಬಿಡುತ್ತದೆ.

ಸಂತೋಷವೆಂಬುದು ಒಂದು ಬ್ಯಾಂಕ್ ಖಾತೆ ಇದ್ದ ಹಾಗೆ. ನಾವು ನಾವಾಗಿ ಬದುಕುತ್ತಾ ಹೋದಂತೆ ಸಂತೋಷ ತಾನೇ ತಾನಾಗಿ ಜಮ ಆಗುತ್ತಾ ಹೋಗುತ್ತದೆ. ಹಾಗೆ ಪಡೆದ ಸಂತೋಷವನ್ನು ಪ್ರತಿಯೊಬ್ಬರಿಗೂ ಹಂಚುವುದರಲ್ಲೇ ಜೀವನದ ನಿಜವಾದ ಸಾರ್ಥಕ್ಯ. ಜೀವನ ಪ್ರೀತಿ ನಮ್ಮಲ್ಲಿ ಎಷ್ಟಿರಬೇಕೆಂದರೆ ಸಾವು ಇಂದೇ ನಮ್ಮ ಮುಂದೆ ಬಂದು ಕರೆದರೂ 'ನನ್ನ ಜೀವನವನ್ನು ನಾನು ಸಂತೃಪ್ತಿಯಿಂದ ಬದುಕಿದ್ದೇನೆ, ನಿನ್ನ ಕರ್ತವ್ಯವನ್ನು ನೀನು ಮಾಡಬಹುದು' ಎಂಬಂತೆ ಸ್ವಾಗತಿಸಬೇಕು. ನಮ್ಮ ಜೀವನದ ಬಗ್ಗೆ ಕಿಂಚಿತ್ತು ವಿಷಾದವೂ ಇರದಂತೆ. ಅದು ನಿಜವಾದ ಮಾನವನ ಅಂತಸ್ತು.

ಒಮ್ಮೆ ಅಪ್ಪ-ಅಮ್ಮನ ದಿನ ನಿತ್ಯದ ಆರೋಗ್ಯದ ಬಗ್ಗೆ ಗಮನ ಹರಿಸಿ. ಪ್ರಿಯ ಮಡದಿಗೆ ಮೊಲ್ಲೆ ಮುಡಿಸಿ ನಿಮ್ಮ ಪ್ರೇಮವನ್ನು ನಿವೇಧಿಸಿ. ಮಕ್ಕಳ ಆಟ-ಪಾಠಗಳಲ್ಲಿ ಒಮ್ಮೆ ಸಹಕರಿಸಿ. ಸ್ನೇಹಿತರೊಂದಿಗೆ ಒಂದಷ್ಟು ಹಿತಕರ ಕ್ಷಣಗಳನ್ನು ಕಳೆಯಿರಿ. ಅವುಗಳಲ್ಲಿ ಸಿಗುವ ಸಂತೋಷ ಕೋಟಿ ಹಣ ಕೊಟ್ಟರು ಸಿಗದಂತಹದ್ದು. ಜೀವನ ಎಂಬುದೊಂದು ಕಲೆ. ಅದನ್ನು ಅಷ್ಟೇ ಕಲಾತ್ಮಕವಾಗಿ ಬದುಕಬೇಕು. ನಾಳೆ ಎಂಬುದೇ ಇಲ್ಲದಂತೆ, ಇಂದು ಎಂದಿಗೂ ಮುಗಿಯದಂತೆ. 'ನಾಳೆ ಮಾಡುವುದನ್ನು ಇಂದೇ ಮಾಡು. ಇಂದು ಮಾಡುವುದನ್ನು ಈಗಲೇ ಮಾಡು, ನಾಳೆ ಎಂಬುದು ಹಾಳು' ಎಂಬ ನಾಣ್ನುಡಿಯಂತೆ 'ಹಾಳೆಂಬ ನಾಳೆಯಲಿ ನಾನಿಲ್ಲ' ಎಂಬ ವಾಸ್ತವದಲ್ಲಿ, 'ಹಾಲೆಂಬ ಇಂದಿನಲ್ಲೇ' ಜೇನನ್ನು ಬೆರೆಸಿ ಜೀವನವನ್ನು ಹಾಲು-ಜೇನಾಗಿಸಿ ಬದುಕಬೇಕು ಕಾಲನೂ ಕರುಬುವಂತೆ.

- ಪ್ರಸಾದ್.ಡಿ.ವಿ.

Friday 28 September 2012

ನನ್ನ ಮುದ್ದು




ಮುದ್ದು ಮುದ್ದಾದ ಮನಸ್ಸಿಗೆ,
ಪೆದ್ದು ಪೆದ್ದಾಗಿ ಕೇಳಿದ್ದೆ,
ಹಕ್ಕಿಗಳಾಗುವ ಬಾರೆ,
ಬಾನೆತ್ತರಕ್ಕೆ ಹಾರಿ ಪುರ್ರೆಂದು..
ಚುಕ್ಕಿ ಚಂದ್ರಮರಂಕಿತವ ತರುವ
ನಮ್ಮ ಪ್ರೀತಿಗೆ..!
ಒಂದು ತುದಿಯಲ್ಲಿ ನೀನು,
ಇನ್ನೊಂದರಲ್ಲಿ ನಾನು..!

ನನ್ನವಳು ಜಾಣೆ,
ಕೇಳಬೇಕವಳ ಉತ್ತರವ ನೀವು,
ಹಕ್ಕಿಗಳಾಗುವ ನಲ್ಲ,
ಅಡ್ಡಿಯಿಲ್ಲ, ಕೈಯಲ್ಲಿ ಕೈ ಹಿಡಿದು,
ನೀ ಜೊತೆಗಿದ್ದರೆ ಸಾಕು,
ನನಗೆ ಬೇರೇನು ಬೇಕು?
ಚುಕ್ಕಿ ಚಂದ್ರಮನಲ್ಲೇ
ಮನೆ ಮಾಡಿ ನೆಲೆಯಾಗಬೇಕು..!

ಅವಳೋ ಮುದ್ದು ಮುದ್ದು,
ನಾನೋ ಪೆದ್ದು ಪೆದ್ದು,
ಉಕ್ಕುತ್ತಿದ್ದ ಪ್ರೀತಿಗೆ
ಅವಳ ಗಲ್ಲ ಹಿಡಿದೆತ್ತಿ
ಹೂ ಮುತ್ತು ನೀಡಿದ್ದು ಬಿಟ್ಟರೆ
ಇನ್ನೇನೂ ಮಾಡಿಲ್ಲ ನಾನು..!
ನಾನೋ ಪೆದ್ದು ಪೆದ್ದು,
ಅವಳೋ ನನ್ನ ಮುದ್ದು..!

- ಪ್ರಸಾದ್.ಡಿ.ವಿ.

Wednesday 15 August 2012

ಮೇರಾ ಭಾರತ್ ಮಹಾನ್




ಫೆಬ್ರವರಿ ೨೬, ೧೯೯೯ರ ಶುಕ್ರವಾರ ಸಂಜೆ ಐದು ಗಂಟೆ.

ಎಂದಿನಂತೆ ಯಾವುದೇ ಸಂಭ್ರಮಗಳಿಲ್ಲದೆ ಜಮ್ಮುವಿನ ಗಡಿಗಳಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆವು. ಹೆಚ್ಚಿನ ಚಟುವಟಿಕೆಗಳಿಲ್ಲದೆ ಇದೂ ಕೂಡ ಒಂದು ಸಾಮಾನ್ಯ ದಿನವಾಗಿತ್ತು. ಮನಸ್ಸು ಮಾತ್ರ ಹಿಂದಿನ ದಿನಗಳೆಡೆಗೆ ಓಡುತ್ತಿತ್ತು. ಮನೆ, ಅಪ್ಪ-ಅಮ್ಮ, ಹೆಂಡತಿ, ಮಗ ಭಗತ್ ಹೀಗೆ ಎಲ್ಲವೂ ನೆನಪಾಗುತ್ತಿದ್ದವು. ದೇಶದ ಹೆಮ್ಮೆಯ ಪುತ್ರ ಭಗತ್ ಸಿಂಗ್ ನ ಮೇಲಿನ ಗೌರವದಿಂದ ನನ್ನ ಮಗನಿಗೆ ಭಗತ್ ಎಂದೇ ಹೆಸರಿಟ್ಟಿದ್ದೆ. ಹೀಗೆ ಹಳೆಯ ನೆನಪುಗಳ ಹಿಂದೆ ಮನಸ್ಸು ಓಡುತ್ತಿತ್ತು. ಇದು ನನ್ನಂತಹ ಸೈನಿಕರ ದೈನಂದಿನ ದಿನಚರಿಯಾಗಿತ್ತು. ಸಮಯ ಸಿಕ್ಕಾಗ ಮನೆಯವರೊಂದಿಗೆ ದೂರವಾಣಿಯ ಮೂಲಕ ಒಂದಷ್ಟು ಮಾತು ಮತ್ತು ಪತ್ರಗಳೇ ನಮ್ಮ ಆಮ್ಲಜನಕಗಳು. ಅವುಗಳನ್ನು ಉಸಿರಾಡುತ್ತ ದೇಶವನ್ನು ಕಾಯುವ ಜವಾಬ್ದಾರಿ ನಿಭಾಯಿಸುತ್ತೇವೆ ಎಂಬುದನ್ನು ನೆನಪಿಸಿಕೊಂಡಾಗ ಯೋಧರ ಬಗ್ಗೆ ಹೆಮ್ಮೆ ಎನಿಸುತ್ತದೆ. ಹೀಗೆ ನೆನಪಿನ ಬುತ್ತಿ ಬಿಚ್ಚುತ್ತಿದ್ದ ನನ್ನನ್ನು ಎಚ್ಚರಿಸಿದ್ದು ವಿಕಾಸ್ ಗುಪ್ತನ "ಅಚ್ಚಪ್ಪ ಯು ಹ್ಯಾವ್ ಅ ಕಾಲ್ ಫ್ರಂ ಯುವರ್ ಹೋಂ ಮ್ಯಾನ್" ಎಂಬ ಮಾತುಗಳು. ಮನೆಯಿಂದ ದೂರವಾಣಿ ಕರೆ ಎಂದು ಆನಂದ ಸಂತುಲಿತನಾದ ನಾನು ಓಡಿ ಹೋಗಿ ಫೋನ್ ರಿಸೀವರ್ ಎತ್ತಿಕೊಂಡೆ.

"ಹಲೋ ಕಾವೇರಿ, ನಾನು ಕಣೇ.." ಎಂದೆ. ಕಾವೇರಿ ನನ್ನ ಮಡದಿ.
"....." ಆ ಕಡೆಯಿಂದ ಹತ್ತು ಸೆಕೆಂಡ್ ಗಳವರೆಗೆ ನೀರವ ಮೌನ.
"ಮಾತಾಡು ಕಾವೇರಿ...ಅಪ್ಪ-ಅಮ್ಮ ಹೇಗಿದ್ದಾರೆ? ಭಗತ್ ನನ್ನು ನೋಡಬೇಕೆನಿಸುತ್ತಿದೆ..".
"........" ಆ ಕಡೆಯಿಂದ ಸಣ್ಣದಾಗಿ ಅಳುವಿನ ಶಬ್ಧ ಕೇಳಿಸಿತು.
"ನೀನೂ ನೆನಪಾಗ್ತಿದ್ದೀಯೇ ಮಾರಾಯ್ತಿ...ಅಳಬೇಡ!"
"ರೀ...ರೀ... ನಮ್ಮ ಭಗತ್" ಎಂದು ಹೇಳಿ ಬಿಕ್ಕಲು ಶುರು ಮಾಡಿದಳು.
"ಏನಾಯ್ತು ಭಗತ್ ಗೆ... ಸರಿಯಾಗಿ ಹೇಳು?" ಎಂದೆ.
"ಭಗತ್ ರಸ್ತೆ ದಾಟುವಾಗ ಒಂದು ಟ್ರಕ್ ಬಂದು...ಆ ಅಪಘಾತದಲ್ಲಿ ಭಗತ್ ಗೆ..." ಎಂದ ಅವಳ ಅಳು ಇನ್ನೂ ಜೋರಾಯಿತು.
"ಭಗತ್ ಗೆ...ಭಗತ್ ಗೆ... ಏನಾಯ್ತಮ್ಮ ಹೇಳು?" ಎಂದೆ.
"ನಮ್ಮ ಭಗತ್ ಇನ್ನಿಲ್ಲಾರೀ..." ಎಂದು ಹೇಳಿ ಕುಸಿದು ಕುಳಿತಳು.
ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ನನ್ನಲ್ಲೂ ದುಃಖ ಮಡುಗಟ್ಟುತ್ತಿತ್ತು. ಆದರೂ ನನ್ನ ದುಃಖವನ್ನು ಅದುಮಿಟ್ಟುಕೊಳ್ಳುತ್ತ,
"ನಾನು ಬರ್ತಿದ್ದೇನೆ ಕಣೋ... ಧೈರ್ಯಗೆಡಬೇಡ. ಕೊಡಗಿನ ವೀರ ಸೈನಿಕ, ಕ್ಯಾಪ್ಟನ್ ಅಚ್ಚಪ್ಪನ ಹೆಂಡತಿ ನೀನು ಮರೆಯಬೇಡ" ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದೆ.
ಫೋನ್ ರಿಸೀವರ್ ಕೆಳಗಿಟ್ಟವನೆ ನಿರ್ಲಿಪ್ತನಾದೆ. ಆದರೆ ಎದೆಯಲ್ಲಿ ಹೆಪ್ಪುಗಟ್ಟುತ್ತಿದ್ದ ದುಃಖದ ಕಟ್ಟೆ ಒಡೆಯಲಾರದೆ ಒಳಗೊಳಗೆ ಕುಸಿಯುತ್ತಿದ್ದೆ.
ನನ್ನ ಪ್ರಜ್ಞೆ ನನ್ನ ಜವಾಬ್ದಾರಿಗಳ ಅರಿವನ್ನು ಕಣ್ಮುಂದೆ ತಂದಿತು. ತಕ್ಷಣವೇ ಅಲ್ಲಿಯ ಸಿಬ್ಬಂದಿಗೆ ವಿಷಯ ಮುಟ್ಟಿಸಿ, ಲಗ್ಗೇಜ್ ಸಿದ್ಧಪಡಿಸಿಕೊಂಡು ಹೊರಟೆ.

ಜಮ್ಮುವಿನಿಂದ ಶ್ರೀನಗರ ವಿಮಾನ ನಿಲ್ದಾಣ ಸುಮಾರು ಐದು ಗಂಟೆಯ ಪ್ರಯಾಣ. ನನ್ನ ಜೀವನದಲ್ಲೇ ದುರ್ಗಮವೆನಿಸಿದ ಪ್ರಯಾಣ ಅದು. ಮುಖದ ಮೇಲೆ ಯಾವುದೇ ಭಾವನೆಗಳನ್ನು ತೋರಗೊಡದೆ ಕುಳಿತಿದ್ದ ನನ್ನನ್ನು ಟ್ಯಾಕ್ಸಿ ಡ್ರೈವರ್ ತಿರುಗಿ ತಿರುಗಿ ನೋಡುತ್ತಿದ್ದ. ನಾನವನ ಕಣ್ಣಿಗೆ ಯಾವುದೋ ಅನ್ಯ ಗ್ರಹ ಜೀವಿಯಂತೆ ಕಂಡಿರಬೇಕು. ಕಾರು ವಿಮಾನ ನಿಲ್ದಾಣದೆಡೆಗೆ ಚಲಿಸುತ್ತಿದ್ದಂತೆ ಬೆಟ್ಟಗಳು, ಗುಡ್ಡಗಳು, ಕಟ್ಟಡಗಳು ಮತ್ತು ಮರಗಳು ಹಿಂದಿಂದೆ ಓಡುತ್ತಿದ್ದವು. ಅದರಂತೆ ನನ್ನ ಮನಸ್ಸೂ ಹಿಂದಿಂದೆ ಓಡುತ್ತಿತ್ತು.

ಇಂದಿಗೆ ನಾಲ್ಕು ವರ್ಷಗಳ ಹಿಂದಷ್ಟೆ ಹುಟ್ಟಿದ್ದ ಮಗ. ಅವನು ಹುಟ್ಟಿದ ಹೊಸತರಲ್ಲಿ ಅವನನ್ನು ಎತ್ತಿಕೊಳ್ಳಲೂ ನನಗೇನೋ ಪುಳಕ ಮತ್ತು ಭಯ. ಆ ಎಳೆಯ ಕಂದನ ಹಸಿ ಮೈಯ್ಯ ಬಿಸಿ ಸ್ಪರ್ಷ ನನ್ನಲ್ಲಿ ನನ್ನದೇ ಚೈತನ್ಯ ಪ್ರವಹಿಸುವಂತೆ ಮಾಡುತ್ತಿತ್ತು. ನನ್ನ ಕೈಯನ್ನೆತ್ತಿ ಮೂಸಿದೆ, ಅವನ ಹಾಲು ಕುಡಿದ ತುಟಿಯೊರಸಿದ ವಾಸನೆ ಮೂಗಿಗೆ ಬಡಿದಂತೆ ಭಾಸವಾಯ್ತು. ಹಾಗೆ ಹುಟ್ಟಿ ಬೆಳೆಯುತ್ತಿದ್ದುದನ್ನು ನನ್ನ ಹೆಂಡತಿ ನನಗೆ ವರದಿ ಒಪ್ಪಿಸುವಾಗ ಅವಳ ಸಂಭ್ರಮ ವರ್ಣಿಸಲಸದಳ. ಅವನು ಮೊದಲ ಬಾರಿಗೆ ಅಪ್ಪ ಎಂದದ್ದನ್ನು ಸಾವಿರ ಸಲ ಹೇಳಿ ಖುಷಿಪಟ್ಟಿದ್ದಳು. ರಿಸೀವರ್ ಕೊಟ್ಟು ನನಗೂ ಕೇಳಿಸಿದ್ದಳು. ನಾನು ಕಡೆಯ ಬಾರಿ ಊರಿಗೆ ಹೋಗಿದ್ದಾಗ "ನಾನು ನನ್ನಪ್ಪನಂತೆ ಸೈನ್ಯ ಸೇರಿ ಎಲ್ಲಾ ಶತ್ರುಗಳನ್ನು ಶೂಟ್ ಮಾಡುತ್ತೇನೆ" ಎಂದು ಹೇಳಿದ್ದನ್ನು ಕಂಡು ನನ್ನ ಎದೆ ಹೆಮ್ಮೆಯಿಂದ ಉಬ್ಬಿ ಹೋಗಿತ್ತು.

ಫೆಬ್ರವರಿ ೨೬, ೧೯೯೯ರ ಶುಕ್ರವಾರ ರಾತ್ರಿ ಹತ್ತು ಗಂಟೆ.

ನೆನಪುಗಳಲ್ಲಿ ಕಳೆದು ಹೋಗಿದ್ದ ನನ್ನನ್ನು ಡ್ರೈವರ್,
"ಸಾಬ್ ಆಪ್ಕಾ ಏರ್ ಪೋರ್ಟ್ ಆಗಯಾ.." ಎಂದು ಎಚ್ಚರಿಸಿದ್ದ.
ನನ್ನ ಲಗ್ಗೇಜ್ ಎತ್ತಿಕೊಂಡವನೆ ಅವನಿಗೆ ಹಣ ಪಾವತಿ ಮಾಡಿ ಕೆಳಗಿಳಿದು ಹೊರಟೆ. ನನ್ನ ಅದೃಷ್ಟವೋ ಎಂಬಂತೆ ಒಂದು ಗಂಟೆಯ ಕಾಯುವಿಕೆಯ ನಂತರ ವಿಮಾನ ಹಿಡಿದು ಕಾಶ್ಮೀರದಿಂದ ಹೊರಟೆ. ನನ್ನ ನೆನಪುಗಳೊಂದಿಗೆ ಶತಪತ ಹಾಕುತ್ತಿದ್ದ ನನಗೆ ಮೂರು ಗಂಟೆಗಳ ಹಾದಿ ನೂರು ಗಂಟೆಗಳಂತೆ ಭಾಸವಾಗುತ್ತಿತ್ತು. ಹಾಗೋ ಹೀಗೋ ಹವಾ ನಿಯಂತ್ರಿತ ವಿಮಾನದಲ್ಲಿಯ ಪ್ರಯಾಣ ಕ್ರಮಿಸಿ ನಿಸ್ತೇಜನಾಗಿ ಮಂಗಳೂರು ಫ್ಲೈಟ್ ಗಾಗಿ ಕಾದು ಕುಳಿತೆ. ಬೆಳಗ್ಗಿನ ನಾಲ್ಕರ ಹೊತ್ತಿಗೆ ಮಂಗಳೂರು ವಿಮಾನ ಹಿಡಿದು ಹೊರಟೆ. ಅಲ್ಲಿ ವಿಮಾನ ಇಳಿದು ವಿರಾಜಪೇಟೆಯ ದಾರಿ ಹಿಡಿಯುವುದರೊಳಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದು ಹೋಗಿದ್ದೆ. ಟ್ಯಾಕ್ಸಿಯಲ್ಲಿ ಕುಳಿತವನನ್ನು ನಿಧಾನವಾಗಿ ನಿದ್ರಾದೇವಿ ಆವರಿಸಿದಳು.

೨೭ ಫೆಬ್ರವರಿ, ೧೯೯೯ರ ಶನಿವಾರ ಬೆಳಗ್ಗೆ  ಎಂಟು ಗಂಟೆ.

ಕಣ್ಣು ಬಿಟ್ಟಾಗ ನಾನು ನನ್ನ ಮನೆ ಮುಂದೆ ಇದ್ದೆ. ನಿರ್ಲಿಪ್ತ ಭಾವ ಹೊತ್ತು ಜನಸಂದಣಿಯನ್ನು ದಾಟಿ ಮುಂದೆ ಹೋದೆ. ನನ್ನ ನಿಸ್ತೇಜವಾದ ಕಣ್ಣುಗಳ ನೋಟ ನಿಶ್ಚಲವಾಗಿ ಮಲಗಿದ್ದ ನನ್ನ ಮಗನ ದೇಹದ ಮೇಲೆ ಬಿತ್ತು. ಕಾವೇರಿ ಓಡಿ ಬಂದು ನನ್ನನ್ನು ತಬ್ಬಿಕೊಂಡಳು.

"ರೀ ನಮ್ಮ ಮಗ...ನಮ್ಮ ಮಗ..." ಎಂದು ಒಂದೇ ಸಮನೆ ಅಳಲು ಶುರು ಮಾಡಿದಳು.

ಅಲ್ಲಿಯವರೆಗೂ ಉದುಗಿದ್ದ ದುಃಖ ಒಮ್ಮೆಲೆ ಒದ್ದುಕೊಂಡು ಮೇಲೆ ಬಂದಂತಾಯ್ತು. ನನಗೇ ಅರಿವಿಲ್ಲದೆ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಹೆಬ್ಬಂಡೆಯೂ ಕರಗಿ ನೀರಾಗುತ್ತಿತ್ತು. ಪರಿಸ್ಥಿತಿಯ ಅರಿವಾದೊಡನೆ ನನ್ನ ಭಾವೋದ್ವೇಗಕ್ಕೆ ಕಡಿವಾಣ ಹಾಕಲು ಹರಸಾಹಸ ಮಾಡುತ್ತಿದ್ದೆ. ಹಾಗೇ ನನ್ನ ದುಃಖವನ್ನು ಮನದಲ್ಲೇ ಹಿಂಗಿಸಿ ಕಣ್ಣೊರೆಸಿಕೊಂಡೆ.

"ಕಾವೇರಿ ಹೀಗೆಲ್ಲ ಅಳಬಾರದು. ನೀನು ಸೈನಿಕನ ಹೆಂಡತಿ. ಮುಂದೆ ನಾನೇ ಯುದ್ಧದಲ್ಲಿ ಸತ್ತರೂ ನೀನು ದುಃಖವನ್ನು ತಡೆದುಕೊಳ್ಳುವ ಹೆಬ್ಬಂಡೆಯಾಗಬೇಕು... ಬಲಿದಾನ ನಿನ್ನ ಮೈಗೂಡಬೇಕು" ಎಂದು ಸಂತೈಸಲು ಪ್ರಯತ್ನಿಸಿದೆ.

ನಂತರದ ಶವಸಂಸ್ಕಾರದ ಕಾರ್ಯಗಳೆಲ್ಲ ಅಡೆತಡೆಗಳಿಲ್ಲದೆ ಸಾಗಿದವು. ಮೊಮ್ಮಗನನ್ನು ಕಳೆದುಕೊಂಡ ನನ್ನಪ್ಪ-ಅಮ್ಮನನ್ನು ಎದುರಿಸಲೂ ನನಗೆ ಭಯವಾಗುತ್ತಿತ್ತು. ಅಂದು ಸಂಜೆಯೊಳಗೆ ಮಗನನ್ನು ಮಣ್ಣು ಮಾಡಿ ಮನೆಯ ಮುಂದೆ ದೀಪ ಹಚ್ಚಿಟ್ಟೆವು. ಅತ್ತು ಅತ್ತು ನಿತ್ರಾಣಗೊಂಡಿದ್ದ ಕಾವೇರಿಯ ಮುಖ ನೋಡುವಾಗಲಂತೂ ಕರಳು ಕಿವುಚಿದಂತಾಗುತ್ತಿತ್ತು. ಹೇಗೆ ಎಲ್ಲವನ್ನು ನಿಭಾಯಿಸುವುದು ಎಂಬುದೆ ದೊಡ್ಡ ತಲೆ ನೋವಾಗಿತ್ತು ನನಗೆ.

೦೪ ಮಾರ್ಚ್೧೯೯೯ರ ಗುರುವಾರ, ಸಂಜೆ ಆರು ಗಂಟೆ.

ಮನೆಯ ಕುಡಿಯನ್ನು ಕಳೆದುಕೊಂಡು ನರಳುತ್ತಿದ್ದ ಮನೆಯವರನ್ನು ದಿನವೂ ನೋಡುತ್ತ ಮನದಲ್ಲೇ ಬೇಯುತ್ತಿದ್ದೆ. ಹೀಗೆ ನನ್ನ ಚಿಂತೆಯಲ್ಲಿ, ನನ್ನ ಕುಟುಂಬವನ್ನು ಸಂತೈಸುತ್ತ ಒಬ್ಬ ಉತ್ತಮ ಗಂಡನ ಮತ್ತು ಅಪ್ಪನ ಜವಾಬ್ಧಾರಿಯನ್ನು ನಿಭಾಯಿಸುತ್ತಿದ್ದೆ.
ಹೀಗೆ ಇದ್ದಕ್ಕಿದ್ದಂತೆ ಮನೆಯ ಟೆಲಿಫೋನ್ ಹೊಡೆದುಕೊಳ್ಳಲು ಶುರುವಾಯ್ತು. ಕರೆಯನ್ನು ಸ್ವೀಕರಿಸಿ ರಿಸೀವರ್ ಅನ್ನು ಕಿವಿಯ ಮೇಲಿಟ್ಟೆ.

"ಹಲೋ ಮಿ.ಕ್ಯಾಪ್ಟನ್, ಕರ್ನಲ್ ಜಗನ್ನಾಥ್ ಸ್ಪೀಕಿಂಗ್" ಎಂಬ ಗಡುಸಾದ ಧ್ವನಿ ಮಾರ್ಧನಿಸಿತು.
"ಹಲೋ ಕರ್ನಲ್, ಹೇಳಿ..." ಎಂದೆ.
"ನಾಚಿಕೆಗೆಟ್ಟ ಪಾಕಿಗಳು ಕಾರ್ಗಿಲ್ ಅನ್ನು ಗುರಿಯಾಗಿಸಿಕೊಂಡು ಧಾಳಿ ನೆಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮಂತಹ ದಕ್ಷರ ಸೇವೆ ದೇಶಕ್ಕೆ ಅಗತ್ಯ. ನೀವು ಕಾಮ್ಯಾಂಡೋ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಬೇಕೆಂದು ಕೋರುತ್ತೇನೆ" ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
ವಿಷಯ ತಿಳಿಯುತ್ತಿದ್ದಂತೆ ಜೀವಿಸಲು ಮತ್ತೊಂದು ಕಾರಣ ಗೋಚರಿಸಿದಂತಾಯ್ತು. ಆ ಪಾಕಿಗಳ ಹೊಟ್ಟೆ ಬಗೆಯುವಷ್ಟು ರೋಷ ಉಕ್ಕಿ ಬಂತು.
"ಅದು ನನ್ನ ಕರ್ತವ್ಯ ಸರ್...ತಾಯಿ ಭಾರತಿಗಾಗಿ ಪ್ರಾಣ ಕೊಡಲೂ ನಾನು ಸಿದ್ಧ... ಈಗಲೆ ಹೊರಡುತ್ತೇನೆ" ಎಂದು ಎದ್ದು ನಿಂತೆ.
"ನನಗೆ ನಿಮ್ಮ ಪರಿಸ್ಥಿತಿ ಗೊತ್ತು ಮಿ.ಅಚ್ಚ...ನೀವೂ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದೀರಿ..." ಎಂದಿತು ಆ ಕಡೆಯ ಧ್ವನಿ.
"ಮಗನನ್ನು ಕಳೆದುಕೊಂಡ ದುಃಖಕ್ಕಿಂತ ತಾಯಿಯನ್ನು ಮತ್ತು ಅವಳ ಮಕ್ಕಳನ್ನು ಕಾಯುವ ಜವಾಬ್ದಾರಿ ಮುಖ್ಯ ಕರ್ನಲ್.  ನಾನು ಬರುತ್ತೇನೆ" ಎಂದು ಕರೆಯನ್ನು ತುಂಡರಿಸಿದೆ.

ನನ್ನೆಲ್ಲಾ ಸಂಭಾಷಣೆಯನ್ನು ಕೇಳುತ್ತಿದ್ದ ನನ್ನ ಹೆಂಡತಿ ಮತ್ತೂ ಅಧೀರಳಾದಂತೆ ಕಂಡುಬಂದಳು. ಅವಳನ್ನು ಸಂತೈಸಬೇಕಾದ ನಾನೇ ಅವಳನ್ನು ಬಿಟ್ಟು ಸಿಂಹದ ಬಾಯಿಗೆ ಹೋಗುತ್ತೇನೆ ಎಂದಾಗ ಅವಳಿಗೆ ಎಷ್ಟು ದುಃಖ ಮತ್ತು ಭಯವಾಗಿರಬೇಡ. ಅವಳ ನೋಟವನ್ನು ಎದುರಿಸಲಾಗದೆ ನನ್ನ ಕೋಣೆಯೊಳ ಹೊಕ್ಕೆ. ಸ್ವಲ್ಪ ಹೊತ್ತಿನ ಬಳಿಕ ಲಗ್ಗೇಜ್ ಕೈಯಲ್ಲಿ ಹಿಡಿದು ರೆಡಿಯಾಗಿ ಹೊರಬಂದು ಕಾವೇರಿಯನ್ನು ಹುಡುಕುತ್ತಿದ್ದೆ.

ಹಣೆಯಲ್ಲಿ ಕುಂಕುಮವಿಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು ಕೈಯಲ್ಲಿ ಆರತಿ ಹಿಡಿದು ಅಂಗಳದಲ್ಲಿ ನಿಂತಿದ್ದಳು ನನ್ನ ಮಡದಿ ಕಾವೇರಿ.

ನನ್ನ ಹಣೆಗೆ ಕುಂಕುಮವಿಟ್ಟವಳೆ, "ನನ್ನ ಮಗ ಬದುಕಿದ್ದರೆ ಅವನನ್ನೂ ದೇಶಕ್ಕಾಗಿ ಬಲಿ ಕೊಡುತ್ತಿದ್ದೆ" ಎಂದಳು ಧೃಡವಾಗಿ.
ಎದುರಲ್ಲಿ ನಿಂತ ನನ್ನ ಭಾರತಾಂಬೆಯನ್ನು ಕಣ್ತುಂಬಿಸಿಕೊಂಡೆ. ದೇಶದಲ್ಲಿರುವ ಲಕ್ಷಾಂತರ ಭಗತ್ ರ ನಾಳೆಗಳನ್ನು ಕಾಯುವ ಪಣ ತೊಟ್ಟೆ. ಟ್ಯಾಕ್ಸಿ ಹತ್ತುವ ಮುನ್ನ ನನ್ನ ಭಗತ್ ನಂತಹದೇ ಒಂದು ಮಗು ತ್ರಿವರ್ಣ ಧ್ವಜವನ್ನು ಕೈಯಲ್ಲಿಟ್ಟೊಡನೆ ವಿದ್ಯುತ್ ಸಂಚಾರವಾದಂತಾಯ್ತು. ಟ್ಯಾಕ್ಸಿ ಹತ್ತಿ ಹೊರಡುತ್ತಿದ್ದವನ ಮೈಮನಗಳಲ್ಲಿದ್ದ ಒಂದೇ ಮಂತ್ರ "ಮೇರಾ ಭಾರತ್ ಮಹಾನ್".

- ಪ್ರಸಾದ್.ಡಿ.ವಿ.

Thursday 9 August 2012

ಸದ್ದಿಲ್ಲದ ಸುವ್ವಾಲಿ



ಸದ್ದಿಲ್ಲದೆ ಕುಳಿತವಳು
ಸದ್ದು ಮಾಡುತ್ತಿದ್ದಾಳೆ,
ಸುದ್ದಿಯೇ ನೀಡದ
ಸ್ನಿಗ್ಧ ಮುಗ್ದತೆಯವಳು,
ನನ್ನವಳು ಅರಳಿದಳೆ?
ರಂಗವಲ್ಲಿಯ ವಲ್ಲಿ...
ನನ್ನೆದೆಯ ಬಾಂದಳದಿ
ಸದ್ದಿಲ್ಲದೇ ಸುವ್ವಾಲಿ..!

ಮೆಲ್ಲ-ಮೆಲ್ಲಗೆ ಮೈ
ಚಿವುಟಿಕೊಳ್ಳುತ್ತೇನೆ,
ಕನಸಲ್ಲೇ ಬಂದಳಾ?
ಎದುರಲ್ಲೆ ಬಂದಳಾ?
ಸದ್ದಿಲ್ಲದೆ ಹೋದವಳು,
ಸನ್ನೆಯಲ್ಲೇ ಕರೆದಳಾ?
ಕನಸೊಳಗಿನ ಕನಸೊಳಗೆ
ನನ್ನವಳ ಸುವ್ವಾಲಿ..!

ಕುಳಿತಲ್ಲಿಂದಲೇ ಇಲ್ಲೆ,
ಹಿಂದಿಂದೆ ಓಡುತ್ತೇನೆ,
ಜೊತೆಗಿಟ್ಟ ಹೆಜ್ಜೆಗಳು,
ನಿಮಿಷಾಂಬ ದೇವಳ,
ಸದ್ದು ಮಾಡಿದಾ ನಾಣ್ಯ,
ಮರೆವು ನುಂಗಲಾಗದ ನೆನಪು,
ಬದುಕೆಂಬ ಬಾಂದಳದಿ
ಬರಿದಾಗದು ಸುವ್ವಾಲಿ..!

- ಪ್ರಸಾದ್.ಡಿ.ವಿ.

Wednesday 1 August 2012

ದೀಪ ಹಚ್ಚುತ್ತೇನೆ



ಕಗ್ಗತ್ತಲ ಬಾಳಿನಲ್ಲೊಮ್ಮೆ
ಅಂತರಂಗದಂಗಳದಲಿ
ದೀಪ ಹಚ್ಚುತ್ತೇನೆ,
ಸುಮ್ಮನಾದರೂ ಒಮ್ಮೆ..!

ಬಿಕ್ಕಳಿಸಿ ಬಸವಳಿದ
ತುಟಿ ಹಾರದ ಮಾತುಗಳಿವೆ,
ಕಂಬನಿಯ ತಳದಿ
ಕೈಕಟ್ಟಿ ಕುಳಿತ ಕನಸುಗಳಿವೆ,
ದೀಪ ಹಚ್ಚುತ್ತೇನೆ,
ಮೌನ ಮಾತಾಗಲಿ,
ಕನಸು ಕಂಗೊಳಿಸಲಿ..!

ನಿರಾಸೆಯ ಸೆರಗಲ್ಲಿ
ಸೊರಗಿರುವ ಆಸೆಗಳಿವೆ,
ನೀಲಿಯಲ್ಲಿ ತೇಲಿ ಹೋದ
ಅಮೂರ್ತ ರೂಪಕಗಳಿವೆ,
ದೀಪ ಹಚ್ಚುತ್ತೇನೆ,
ಆಸೆ ಚಿಗುರಾಗಲಿ,
ರೂಪಕಗಳುಸಿರಾಡಲಿ..!

ಹಮ್ಮಿನಲ್ಲಿ ಬಿಮ್ಮಿನಲ್ಲಿ
ಹೊರಬಿದ್ದ ಬಿರುನುಡಿಗಳಿವೆ,
ಬೀಳಲಾರೆನೆಂಬ ಕೋಟೆಯೊಳಗೆ
ಅಹಮ್ಮಿನ ಅಹಂಕಾರಗಳಿವೆ,
ದೀಪ ಹಚ್ಚುತ್ತೇನೆ,
ಬಿರುನುಡಿ ಕರಗಿ ತಿಳಿಯಾಗಲಿ,
ನಾನೆಂಬುದು ಕೃಷ್ಣನ
ಪಾದಕಮಲದಡಿಯ ಕಣವಾಗಲಿ..!

- ಪ್ರಸಾದ್.ಡಿ.ವಿ.

Sunday 10 June 2012

ಮೊದಲ ಪ್ರೇಮದ ಮಧುರ ಸ್ಪಂದನ


ಯಾವುದೇ ನೋವಾಗಲಿ, ರೋಗವೇ ಆಗಲಿ ಅಥವಾ ಅಪಘಾತವೇ ಆಗಲಿ ಮುಂಜಾಗ್ರತ ಕ್ರಮ ಕೈಗೊಂಡರೆ ತಪ್ಪಿಸಬಹುದು ಎಂಬ ಮಾತಿದೆ. ಆದರೆ ಎಷ್ಟೇ ಮುಂಜಾಗ್ರತೆ ವಹಿಸಿದರೂ ತಪ್ಪಿಸಿಕೊಳ್ಳಲಾಗದ ಒಂದೇ ರೋಗ ಅಥವಾ ಅಪಘಾತವೆಂದರೆ ಪ್ರೇಮವೇ ಇರಬಹುದು. ಜೀವನದ ಯಾವುದೋ ಒಂದು ಕ್ಷಣದಲ್ಲಿ ಪ್ರೀತಿಯೂ ಬೇಡ-ಪ್ರೇಮವೂ ಬೇಡ ಎಂದು ಸತ್ಯಾಗ್ರಹ ಹೂಡಿದ್ದ ಮನಸ್ಸು ಅವಳ ಕುಡಿ ನೋಟಕ್ಕೋ, ನಗುವಿಗೋ ಸೋತುಹೋಗುತ್ತದೆ. ಕ್ಷಣದಲ್ಲೇ ಅವಳೊಂದಿಗೆ ಅನುರಕ್ತನಾಗಿಬಿಡಬೇಕೆಂಬ ಆಸೆ ಕಾಡುತ್ತದೆ. ಜೀವನದಲ್ಲಿನ ಡಿ.ವಿ.ಡಿ ಗಳ ಅಂಗಡಿ ತನ್ನ ಉದ್ಘಾಟನೆ ಮಾಡಿಕೊಳ್ಳುತ್ತದೆ..!

ಪ್ರೀತಿ-ಪ್ರೇಮಕ್ಕೆ ತನ್ನದೇ ಆದ ಒಂದು ಸಾರ್ವತ್ರಿಕ ವ್ಯಾಖ್ಯಾನ ಇಲ್ಲವೆನಿಸುತ್ತದೆ. ಅದು ಅವರವರು ಭಾವಿಸಿಕೊಂಡಂತೆ ತನ್ನ ವ್ಯಾಖ್ಯಾನವನ್ನು ಮಾರ್ಪಡಿಸಿಕೊಳ್ಳುತ್ತದೆ, ಯಾವುದೇ ಆಕಾರ ಪಡೆಯುವ ಹರಿವ ನೀರಿನಂತೆ. ಪ್ರೀತಿಯೇ ಸವಿಯೆಂದರೆ, ಪ್ರೀತಿಯ ಮೊದಲ ಪುಟ ಸವಿಜೇನೆಂದೇ ಹೇಳಬೇಕು. ಅದೇ ಮೊದಲ ಪ್ರೇಮದ ಗಮ್ಮತ್ತು. ಯಾವುದೇ ಫೋಟೋ ಆಲ್ಬಮ್ ನೋಡುವ ಮೊದಲು ಅದರ ಕವರ್ ಪೇಜನ್ನು ನೀವು ಗಮನಿಸಿರಬಹುದು. ಅದು ಎಷ್ಟು ಆಕರ್ಷಣೀಯವಾಗಿರುತ್ತದೋ ಅಷ್ಟೇ ರಮಣೀಯವೂ ಆಗಿರುತ್ತದೆ. ಅಂತೆಯೇ ಪ್ರತಿಯೊಬ್ಬರ ಜೀವನದಲ್ಲಿನ ಮೊದಲ ಪ್ರೇಮ. ಸವಿಯಾದ ನೆನಪುಗಳೊಂದಿಗೆ ಜೀವನದುದ್ದಕ್ಕೂ ಕಾಡುತ್ತಾ, ಖುಷಿ ಕೊಡುತ್ತಾ ತನ್ನ ತಾಜಾತನವನ್ನು ಉಳಿಸಿಕೊಳ್ಳುವುದರೊಂದಿಗೆ ಜೀವನಕ್ಕೂ ತಾಜಾತನ ತುಂಬುತ್ತದೆ ಮೊದಲ ಪ್ರೇಮ.

ಕ್ರಷ್’ಗಳಿಗೂ ಮೊದಲ ಪ್ರೇಮಕ್ಕೂ ಕೇವಲ ಕೂದಲೆಳೆಯಷ್ಟು ವ್ಯತ್ಯಾಸವಷ್ಟೆ. ಅದಕ್ಕಾಗಿಯೇ ಕ್ರಷ್’ಗಳಂತೆ ಮೊದಲ ಪ್ರೇಮವೂ ಕೂಡ ಬ್ರೇಕ್ ಅಪ್’ನಲ್ಲಿ ಅಂತ್ಯಗೊಂಡರೂ ಹಚ್ಚಹಸಿರಾಗಿ ಮನದಲ್ಲುಳಿಯುತ್ತದೆ. ಮೊದಲ ಪ್ರೇಮದಲ್ಲಿನ ಹುಚ್ಚುತನಗಳಾಗಲಿ, ಪೆದ್ದುತನಗಳಾಗಲಿ ನಮಗೆ ಟೈಂ ವೇಸ್ಟ್ ಎನಿಸುವುದೇ ಇಲ್ಲ. ಹುಡುಗಿಗಾಗಿ ಘಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಕಾದಿದ್ದರೂ ಅವಳ ಕಣ್ಣೆದುರು ಕಂಡೊಡನೆ ಅನುಭವಿಸಿದ ತಳಮಳ, ಕಾಯುತ್ತ ಕಳೆದ ಸಮಯ ಗಣನೆಗೂ ಬರುವುದಿಲ್ಲ. ಅದೇ ಹೆಂಡತಿಗಾಗಿಯೋ, ಸಹ ಉದ್ಯೋಗಿಗಾಗಿಯೋ ಕಾಯ್ದಿದ್ದರೆ ಅದರ ವರಸೆಯೆ ಬೇರೆ. ಎದುರಿಗಿದ್ದವರನ್ನು ಉರಿದು ಮುಕ್ಕುವುದೊಂದು ಬಾಕಿ..! ಆದರೆ ಇವಳು ಮೊದಲ ಮನದನ್ನೆ. ಸುಮ್ಮನೆ ಬಡಿಯುತ್ತಿದ್ದ ಹೃದಯಕ್ಕೆ ರಾಗ-ಬದ್ದ ತಾಳ ಬೆರೆಸಿದವಳು, ಹಾಗೆ ಉರಿದು ಬೀಳಲಾದೀತೆ..!

ಈಗ ನನ್ನ ಜೀವನವನ್ನೇ ತೆಗೆದುಕೊಂಡರೆ, ನನ್ನ ಮೊದಲ ಕ್ರಷ್ ಆದದ್ದು ಪ್ರೌಢ ಶಾಲೆಯಲ್ಲೇ ಆದರೂ ಅದು ಪ್ರೇಮವಾಗಲಿಲ್ಲ. ಹಾಗೆಂದು ಅದು ಮಧುರ ಭಾವ ತಂತುಗಳನ್ನು ಮೂಡಿಸಿದ್ದು ಸುಳ್ಳಲ್ಲ, ಆದರೆ ಆ ತಂತುಗಳೊಡನೆ ಮೊದಲ ವೀಣೆ ನುಡಿಸಿದವಳು ಅವಳು. ಅವಳು ನನ್ನ ಜೀವನದಲ್ಲಿ ಬಂದದ್ದು ನನ್ನ ಇಂಜಿನಿಯರಿಂಗ್’ನ ದಿನಗಳಲ್ಲಿ. ಅವಳು ನನ್ನ ಜೀವನದಲ್ಲಿ ಹಸಿರಾಗಿರುವಷ್ಟು ಇನ್ಯಾವ ಹುಡುಗಿಯರಿಗೂ ಸಾಧ್ಯವಾಗಿಲ್ಲ, ಮುಂದೆ ಯಾರಿಗೂ ಸಾಧ್ಯವಿಲ್ಲವೆನಿಸುತ್ತದೆ..! ನನ್ನಲ್ಲಿ ಅದೇನು ಕಂಡು ಮೆಚ್ಚಿದ್ದಳೋ, ನನಗೇ ಸೋಜಿಗವೆನಿಸುತ್ತದೆ.

ನಿಮಗೆ ಮೊದಲ ಪ್ರೇಮದ ಮತ್ತೊಂದು ಮಜಲನ್ನು ಪರಿಚಯಿಸಲೇಬೇಕು. ಮೊದಲ ಪ್ರೇಮ ಸಾಮಾನ್ಯವಾಗಿ ಮುರಿದು ಬೀಳುತ್ತದೆ ಎಂಬುದು ನಿಮಗೆ ತಿಳಿದ ವಿಷಯವೆ, ಆದರೆ ಅವಳಲ್ಲಿ ನಾವು ಕಂಡುಕೊಂಡ ಗುಣಗಳನ್ನು ಮತ್ತು ಅವಳ ಹುಚ್ಚುತನಗಳನ್ನು ಮರೆಯಲೂ ಸಾಧ್ಯವೇ ಇಲ್ಲ. ಮತ್ತೊಂದು ಸೋಜಿಗದ ಸಂಗತಿಯೆಂದರೆ ಮುಂದೆ ಬರುವ ಎಲ್ಲಾ ಹುಡುಗಿಯರಲ್ಲೂ ಆ ಹುಚ್ಚುತನಗಳನ್ನು ಹುಡುಕುತ್ತೇವೆ..! ಅವಳು ಆ ಹುಚ್ಚುತನಗಳನ್ನು ಪ್ರದರ್ಶಿಸಿದ್ದಾಗ ನಾವು ಹುಸಿ ಮುನಿಸು ತೋರಿಸಿ ಜಗಳವಾಡಿರುತ್ತೇವೆ, ಆದರೆ ಅದೇ ಹುಚ್ಚುತನಗಳು ಅವಳು ದೂರವಾದೊಡನೆ ತುಂಬಾ ಇಷ್ಟವಾಗುತ್ತವೆ. ಅದೇ ಕಾರಣಕ್ಕೆ ಅವಳನ್ನು ಈಗ ಮೊದಲಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇವೆ, ಸಿಗಳೆಂದು ಗೊತ್ತಿದ್ದರೂ..! ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮುಂದೆ ಬೇರೊಬ್ಬರೊಂದಿಗೆ ಮದುವೆಯಾದರೂ, ಮಕ್ಕಳಾದರೂ ಆ ಅವಳೇ ಪ್ರೇಮ ಲಾಂಛನವಾಗುಳಿಯುತ್ತಾಳೆ. ಮಗಳ ನಾಮಾಂಕಿತವಾಗಿಯೂ ಉಳಿಯಬಹುದು..! ಅದಕ್ಕಾಗಿಯೇ ’ಲವ್ ಹ್ಯಾಪನ್ಸ್ ಓನ್ಲೀ ಒನ್ಸ್, ರೆಸ್ಟ್ ಈಸ್ ಜಸ್ಟ್ ಲೈಫ್’ ಎಂಬ ಮಾತಿದೆ.



ಮೊದಲ ಪ್ರೇಮದ ಬಗ್ಗೆ ಎಷ್ಟೇ ಬರೆದರೂ ಮುಗಿಯದು. ಎಷ್ಟೇ ಮಿಂದರೂ ಮನಸ್ಸು ಹಗುರಾಗಿಸುವ ಮುಂಗಾರು ಮೊದಲ ಪ್ರೇಮ. ಈ ಮೂಲಕ ಅದಕ್ಕೊಂದು ನಮನ.

- ಪ್ರಸಾದ್.ಡಿ.ವಿ.

Saturday 26 May 2012

ಪ್ರೀತಿಗೊಂದು ಸ್ವಗತ


ಅರಳು ಮಲ್ಲಿಗೆಯ
ಗಮದ ಪರಿಮಳಕೆ
ಅರಳಿ ನಿಂತವನು ನಾನು,
ಅರಳಿಸಿದ ಮಲ್ಲಿಗೆಯು ಬಾಡಲೇಕೆ?
ಬಾಡುವ ಮುನ್ನ ಹೃದಯ
ಕಮಲ ಸೇರಬಾರದೇಕೆ?

ನಿನ್ನ ತಲೆ ನೇವರಿಸಿ,
ಮುಂಗುರುಳ ಬಳಿ ಸರಿಸಿ,
ಹಣೆಗೊಂದು ಮುತ್ತಿಡಲೆ ನಲ್ಲೆ,
ಮುದುಡಬಾರದು ಮಲ್ಲಿಗೆ,
ಬೆದರಿ ಭಯದೊಳಗೆ,
ತಿಳಿಯಾಗಿ ಬೀಸಲಿ ಪ್ರೀತಿಯ ತಿಳಿಗಾಳಿ,
ಮೆಲ್ಲಗೆ, ತುಸು ಮೆಲ್ಲಗೆ..!

ಮುನಿಸೂ ಬಿಸಿಯಾಗಿ,
ಕನಸೂ ಹಸಿಯಾಗಿ,
ನಿನ್ನದೇ ಧ್ಯಾನ ಈ ಮನಕೆ,
ಅರಿಯಬಾರದೆ ಹುಸಿಮುನಿಸ ಪರದೆ,
ಹುಣ್ಣಿಮೆಯ ದಿನದೆ ಸಾಗರವೂ
ಉಕ್ಕುಕ್ಕಿ ದಡ ಸೇರುವ ತೆರದಿ..!

- ಪ್ರಸಾದ್.ಡಿ.ವಿ.

Tuesday 1 May 2012

ವಂದನೆಗೊಂದೋಲೆ


ಮಾನ್ಯರೇ,

             ನಾನೊಬ್ಬ ಪುಟ್ಟ ಬ್ಲಾಗಿಗ, ನನ್ನ ಹೆಸರು ಪ್ರಸಾದ್.ಡಿ.ವಿ. ನಾನು 'ಮಂಜಿನ ಹನಿ’ ಯನ್ನು ಮೊನ್ನೆ ಮೊನ್ನೆ ಎಂದರೆ ಕಳೆದ ವರ್ಷವಷ್ಟೇ ಪ್ರಾರಂಭಿಸಿದ್ದೇನೆ. ನನ್ನ ಬ್ಲಾಗ್ ನ ಬಗ್ಗೆ ಹೇಳುವುದಕ್ಕೆ ಮೊದಲು ನನ್ನಲ್ಲಿ ಸುಪ್ತವಾಗಿದ್ದ ಸಾಹಿತ್ಯದ ಆಸಕ್ತಿ ಮತ್ತೆ ಗರಿ ಕಟ್ಟಿಕೊಂಡ ಬಗ್ಗೆ ತಿಳಿಸುತ್ತೇನೆ.

              ನಾನು ನನ್ನ ಇಂಜಿನಿಯರಿಂಗ್ ಪದವಿಯನ್ನು ಜೂನ್ ೨೦೧೧ ರಲ್ಲಿ ಮುಗಿಸಿ ನನ್ನ ಕಂಪೆನಿಯವರು ನನಗೆ ಕರೆ ಕಳುಹಿಸುವರೆಂದು ಕಾತುರನಾಗಿ ಕಾಯುತ್ತಾ ಕುಳಿತಿದ್ದೆ. ನನ್ನ ಕೈಯಲ್ಲಿ ಒಂದೆರಡು ತಿಂಗಳುಗಳಿದ್ದವು. ಅವುಗಳನ್ನು ಹೇಗಾದರೂ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕೆಂದುಕೊಳ್ಳುತ್ತಿರುವಾಗಲೆ ನೆನಪಾದದ್ದು ಈ ಬರವಣಿಗೆಯ ಗೀಳು. ಮೊದಲಿನಿಂದಲೂ ಬರೆಯುವ ಗೀಳಿದ್ದರೂ ಸಮಾಯಾಭಾವ ಮತ್ತು ಪ್ರೋತ್ಸಾಹಿಸುವ ಕೈಗಳಿಲ್ಲದೆ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ. ಪ್ರೋತ್ಸಾಹಿಸುವ ಪೋಷಕರ ಕೈಗಳು ಬದುಕನ್ನು ಕಟ್ಟಿಕೊಳ್ಳಲು ಪ್ರೇರೇಪಿಸಿದ್ದವು. ಈಗ ಕೈಯಲ್ಲಿ ಡಿಗ್ರಿ ಇದ್ದ ಕಾರಣ ಅವರಿಗೆ ಮಗನ ಮೇಲಿನ ಯೋಚನೆ ಕಡಿಮೆಯಾದಂತೆನಿಸಿತ್ತೋ ಏನೋ ನನ್ನ ಪ್ರೌವೃತ್ತಿಗೆ ಯಾವುದೆ ಅಡ್ಡಿ ಪಡಿಸಲಿಲ್ಲ. ಆನಂತರದಲ್ಲಿ ಮತ್ತೆ ಟೈಂ ಪಾಸ್ ಗೆಂದು ಹಿಡಿದ ಲೇಖನಿಯನ್ನು ಗಟ್ಟಿಗೊಳಿಸಿದ ಕೈಗಳು ಅಪಾರವೆಂದೇ ಹೇಳಬೇಕು. ನಾನು ನನ್ನ ಮನಶ್ಶಾಂತಿಗಾಗಿ ಬರೆಯಲು ಪ್ರಾರಂಭಿಸಿದವನು. ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ.

             ಹೀಗಿದ್ದವನಿಗೆ ಸಿಕ್ಕ ಒಂದಷ್ಟು ಗೆಳೆಯರ ಬರಹಗಳು ಕೇವಲ ಬರಹಗಳಾಗಿರದೆ ನನಗೆ ದೊಡ್ಡ ಪಠ್ಯಗಳಂತೆ ಕಾಣಿಸುತ್ತಿದ್ದವು. ನಾನು ಅನೇಕ ಹಿರಿಯ ಸಾಹಿತಿಗಳ ಪುಸ್ತಕಗಳನ್ನು, ಕಾದಂಬರಿಗಳನ್ನು, ನಾಟಕಗಳನ್ನು ಮತ್ತು ಕವನಗಳನ್ನು ಆಗಾಗ ಓದುತ್ತಿದ್ದರೂ ಅವುಗಳು ನನಗೆ ಓದುವ ಬಗ್ಗೆ ಆಸಕ್ತಿ ಹೆಚ್ಚಿಸಿದವೆ ಹೊರತು ಬರೆಯಬೇಕೆಂಬ ಉತ್ಕಟವಾದ ಹಂಬಲವನ್ನು ಬಿತ್ತಲಿಲ್ಲ ಎನಿಸುತ್ತದೆ. ಓದುವ ಆ ಪ್ರೌವೃತ್ತಿ ಮತ್ತು ಗೆಳೆಯರು ಬರೆದ ಪಠ್ಯಗಳು(ಬರಹಗಳು) ನನ್ನನ್ನು ಬರೆಯುವಂತೆ ಪ್ರೇರೇಪಿಸಿದವು. ಬರೆಯಲು ಶುರುವಿಟ್ಟುಕೊಂಡೆ. ಗೆಳತಿ ಕೈ ಕೊಟ್ಟಳು ನೆನಪುಗಳು ಸಾಥ್ ಕೊಟ್ಟವು, ಇನ್ನಷ್ಟು ಬರೆದೆ. ಬರೆದದ್ದನ್ನೆಲ್ಲಾ ಒಟ್ಟುಗೂಡಿಸುವ ಹಂಬಲ ಹೆಚ್ಚಾಯ್ತು. ನನ್ನದೇ ಆದ ಬ್ಲಾಗ್ ಮಾಡಿದೆ ’ಡ್ಯೂ ಡ್ರಾಪ್’ ಎಂಬ ನಾಮಕರಣ ಮಾಡಿದೆ. ಅದೇ ಈ ’ಮಂಜಿನ ಹನಿ’.

               ನನ್ನ ಸಾಹಿತ್ಯದ ಈ ಬೆಳವಣಿಗೆಯಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುವ ಮನಸ್ಸಾಯ್ತು. ಅದಕ್ಕಾಗಿ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನನ್ನಲ್ಲಿ ಓದುವ ಆಸಕ್ತಿ ಬೆಳಸಿದ ಹಿರಿಯ ಸಾಹಿತಿಗಳಿಗೆ ನನ್ನ ವಂದನೆಗಳು. ನನ್ನ ಪ್ರತಿಯೊಂದು ಹಾಗು-ಹೋಗುಗಳಲ್ಲಿ ಜೊತೆಗಿರುವ ಅಪ್ಪ-ಅಮ್ಮನಿಗೂ ವಂದನೆಗಳು. ನನ್ನ ಪ್ರತಿಯೊಂದು ಅಂಕುಡೊಂಕುಗಳನ್ನು ಮೊದಲೇ ಎತ್ತಿ ತೋರಿಸುವ ತಮ್ಮನಿಗೂ ವಂದನೆಗಳು. ನನ್ನ ಬರವಣಿಗೆಯ ಆಯಾಮಗಳಿಗೆ ಪಠ್ಯ ಒದಗಿಸಿದ ಗೆಳೆಯರಿಗೂ ವಂದನೆಗಳು. ನೆನಪುಗಳನ್ನು ಕೊಟ್ಟು ಸರಕೊದಗಿಸಿದ ನಲ್ಲೆಗೂ ವಂದನೆಗಳು. ನನ್ನ ಬ್ಲಾಗ್ ಗೆ ಹೆಸರು ಸೂಚಿಸಿದ ಸ್ನೇಹಿತೆಗೂ ವಂದನೆಗಳು. ನಾನು ಬರೆದವುಗಳು ಪ್ರಕಟಣೆಗೆ ಯೋಗ್ಯವೊ, ಇಲ್ಲವೊ ಎಂಬ ಜಿಜ್ಞಾಸೆ ನನ್ನಲ್ಲಿ ಕಾಡುವಾಗ ನನ್ನ ಬ್ಲಾಗ್ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಪರಿಚಯಿಸಿ ಅದು ಪ್ರಕಟವಾಗಲು ಕಾರಣಕರ್ತರಾದ ’ಬ್ಲಾಗ್ ಲೋಕ’ ಖಾಲಂ ನ ಬರಹಗಾರರಿಗೂ ನನ್ನ ಅನಂತ ವಂದನೆಗಳು. ಅದನ್ನು ಪ್ರಕಟಿಸಿದ ’ಸಂಯುಕ್ತ ಕರ್ನಾಟಕ’ ಪತ್ರಿಕೆಯವರಿಗೂ ನನ್ನ ವಂದನೆಗಳು. ಬರೆಯುವ ಕೈಗಳು ಒಂದಷ್ಟು ಇಂಧನವನ್ನಲ್ಲದೆ ಬೇರೇನನ್ನೂ ಕೇಳುವುದಿಲ್ಲ. ನನ್ನ ಕೈಗಳಿಗೆ ಇಚ್ಛಾಶಕ್ತಿಯನ್ನು ತುಂಬಿದ್ದೀರಿ, ಅದನ್ನು ಉಳಿಸಿಕೊಂಡು ಹೋಗುತ್ತೇನೆ ಎಂಬ ಭರವಸೆ ನೀಡುತ್ತೇನೆ.

ಇಂತಿ ವಿನಮೃತೆಯಿಂದ,
- ಪ್ರಸಾದ್.ಡಿ.ವಿ.

Saturday 21 April 2012

ಮತ್ತೆ ನಾ ಮಗುವಾಗಬೇಕು



ನಾ ಮಗುವಾಗಬೇಕು
ಅಮ್ಮಾ, ಮತ್ತೊಮ್ಮೆ ನಾ
ನಿನ್ನ ಪುಟ್ಟ ಮಗುವಾಗಬೇಕು..
ನಿನ್ನ ಮಡಿಲಲ್ಲರಳಿ
ಮತ್ತೊಮ್ಮೆ ನಾ ನಗುವಾಗಬೇಕು..
ನಕ್ಕು ನಲಿಯಬೇಕು
ಜಗವೂ ನನ್ನ ಹಿಮ್ಮೇಳವಾಗುವಂತೆ,
ಹೆಂಗೆಳೆಯರು ಕಂಕುಳಲೇರಿಸಿ
ಮುತ್ತಿಟ್ಟು ಮುದ್ದಿಸುವಂತೆ..!

ಅರಿಯದೆ ಅಂದು ಒದ್ದಿದ್ದಿರಬಹುದು,
ನಾ ನಿನ್ನ ಎದೆಗೆ,
ನನ್ನ ದೇವರ ಗರ್ಭಗುಡಿಗೆ,
ಅದೆಷ್ಟು ನೋವಾಗಿತ್ತೋ ನಿನಗೆ
ಆದ ನೋವ ಹಿಂಗಿಸಿ
ನನ್ನ ಪುಟ್ಟ ಪಾದಗಳ ಮುದ್ದಿಸಿದ್ದೆಯಂತೆ
ಅಜ್ಜಿ ಹೇಳಿದ ಕಥೆಯಿದು
ಜಗದ ಅದೃಷ್ಟವೇ ನನ್ನದಂತೆ..!

ಸಾಕು ಸಾಕಾಗಿದೆ
ಚೈತನ್ಯವ ಹತ್ತಿಕ್ಕಿ, ನೋವುಣಿಸುವ,
ಕಬಂದ ಬಾಹುಗಳ ಚಾಚುವ
ಜಗದ ಜಂಜಡಗಳ ಸಹವಾಸ..!
ಕ್ಷಣ ಮಾತ್ರವಾದರೂ ಮತ್ತೆ ಮಗುವಾಗಿಬಿಡುತ್ತೇನೆ
ನಿನ್ನ ಮಡಿಲ್ ಸೇರಿಬಿಡುತ್ತೇನೆ,
ಚೈತನ್ಯ ಉಣಿಸಿ ನೀರೆರೆಯೆ ತಾಯಿ
ಜಗದೊಡತಿ ಕರುಣಾಮಯಿ...

- ಪ್ರಸಾದ್.ಡಿ.ವಿ.

Friday 23 March 2012

ಭಾವುಕತೆ ಮಾನವ ಜನುಮಕ್ಕಂಟಿದ ಕರ್ಮ



                 ಮನುಷ್ಯ ಏಕಿಷ್ಟು ಭಾವುಕ ಎಂದು ಒಮ್ಮೊಮ್ಮೆ ತುಂಬಾ ಯೋಚಿಸುತ್ತಿರುತ್ತೇನೆ. ಭವಿಷ್ಯತ್ತನ್ನು ಅರಸುತ್ತಾ ಹೊರಟ ಮಗನ ಕಾಲುಗಳನ್ನು ಅಪ್ಪ-ಅಮ್ಮ ತಮ್ಮ ಭಾವುಕತೆಯಲ್ಲಿ ಕಟ್ಟಿ ಹಾಕುತ್ತಾರೆ. ಮಗ ಇವರ ಬಂಧನಕ್ಕೆ ಸೋತು ಇದ್ದುದ್ದರಲ್ಲೇ ಜೀವನ ಕಟ್ಟಿಕೊಳ್ಳುವ ಜತನಕ್ಕೆ ಜೋತು ಬಿದ್ದು ಭಾವುಕತೆಗೆ ಶರಣಾಗುತ್ತಾನೆ. ಮಹಾತ್ವಾಕಾಂಕ್ಷೆಯೊಂದು ಕುಡಿಯೊಡೆಯುವ ಮೊದಲೇ ಪಯಣಿಗನಿಲ್ಲದೆ ಅರಿವಿಗೂ ಬಾರದೆ ಅನಾಥವಾಗುತ್ತದೆ. ಈ ಪರಿಸ್ಥಿತಿಯಲ್ಲಿ ನನಗೆ ಕವಿಯೊಬ್ಬರ ’ಅಮ್ಮ ನಿನ್ನ ಎದೆಯಾಳದಲ್ಲಿ..’ ಎಂಬ ಕವಿತೆ ನೆನಪಾಗುತ್ತದೆ. ’ದೂಡು ಹೊರಗೆ ನನ್ನ, ಓಟ ಕಲಿವೆ, ಒಳ ನೋಟ ಕಲಿವೆ, ನಾ ಕಲಿವೆ ಊರ್ಧ್ವಗಮನ.. ಓ ಅಗಾಧ ಗಗನ’ ಎಂಬ ಸಾಲುಗಳು ಮನಸ್ಸನ್ನೂ ತುಂಬಾ ಕಾಡುತ್ತಿರುತ್ತವೆ. ಇನ್ನು ಪ್ರೀತಿಯ ಅಲೆಯೇರಿ ತೇಲುವ ಪ್ರಣಯ ಪಕ್ಷಿಗಳ ಕಥೆ. ಅವರಿಬ್ಬರು ಸುತ್ತದ ತಾಣಗಳಿಲ್ಲ, ಉದ್ಯಾನಗಳಿಲ್ಲ. ಅಷ್ಟರಲ್ಲೇ ಅವರಿಬ್ಬರಲ್ಲೊಬ್ಬರಿಗೆ ಬದುಕಿನ ಅನಿವಾರ್ಯತೆಗಳು ಗಾಳ ಹಾಕಿ ಸೆಳೆವಾಗ, ವಿಧಿಯ ಬಯಲಾಟ ನಡೆದು ಅಗಲಿಕೆ ಅನಿವಾರ್ಯವಾಗುತ್ತದೆ. ಆಗಲೂ ನೆನಪುಗಳು ಮೇರೆ ಮೀರುತ್ತವೆ, ಕನಸುಗಳು ಒಡೆಯುತ್ತವೆ. ಭಗ್ನ ಪ್ರೇಮಿ ಭಾವುಕತೆಗೆ ಜೊತೆಯಾಗುತ್ತಾನೆ ಅಥವಾ ಜೊತೆಯಾಗುತ್ತಾಳೆ. ಜೀವನವನ್ನು ಕೊನೆಗಾಣಿಸಿಕೊಳ್ಳದೆ ಇದ್ದರೆ ಅದೇ ಪುಣ್ಯ. ಮನುಷ್ಯ ಏನೆಲ್ಲಾ ಸಾಧಿಸಿದ್ದಾನೆ. ನೀರಿನ ಮೇಲೂ ತೇಲುತ್ತಾನೆ, ಆಕಾಶದಲ್ಲೂ ಹಾರುತ್ತಾನೆ ಆದರೆ ಭಾವುಕತೆಗೆ ಕಣ್ಣೊದ್ದೆಯಾಗಿಸದೆ ಜೀವನವನ್ನು ದಾಟುವ ಕಲೆ ಮಾತ್ರ ಕರಗತವಾಗಲೇ ಇಲ್ಲ. ಮುಂದೆ ಆಗುವುದೂ ಇಲ್ಲ ಎನಿಸುತ್ತದೆ. ಈ ಸಮಯದಲ್ಲಿ "ಸಮುದ್ರವನ್ನು ಬೇಕಾದರೂ ಕಾಲೊದ್ದೆಯಾಗದೆ ದಾಟಬಹುದು ಆದರೆ ಕಣ್ಣೊದ್ದೆಯಾಗಿಸದೆ ಜೀವನವನ್ನು ದಾಟುವುದು ಅಸಾಧ್ಯ" ಎಂಬ ಬರಹಗಾರರೊಬ್ಬರ ಮಾತುಗಳು ನೆನಪಾಗುತ್ತವೆ.

               ಹಾಗೆ ಯೋಚಿಸಿದರೆ ಮನುಷ್ಯ ಜೀವಿ ಹೊಂದಿರುವ ಸಂಬಂಧಗಳು ಜಗತ್ತಿನ ಅನ್ಯ ಜೀವಿಗಳು ಹೊಂದಿರುವ ಸಂಬಂಧಗಳಿಗಿಂತ ತೀರಾ ಭಿನ್ನವಾಗೇನೂ ಇರುವುದಿಲ್ಲ ಆದರೆ ಅವುಗಳಿಗೆ ಕಾಡದ ಭಾವುಕತೆ ಮನುಷ್ಯರಿಗೇಕೆ ಕಾಡುತ್ತವೆ ಅಥವಾ ಅವುಗಳನ್ನು ಅರ್ಥ ಮಾಡಿಕೊಳ್ಳಲಾಗದೆ ನಾವು ಹಾಗೆಂದುಕೊಂಡಿದ್ದೇವೆಯೇ? ಏನೋ ಯಾವುದಕ್ಕೂ ಉತ್ತರ ಕಂಡುಕೊಳ್ಳಲಾಗಿಲ್ಲ. ಉದಾಹರಣೆಗೆ ನನ್ನ ಅಜ್ಜ ತೀರಿಕೊಂಡ ಆಘಾತದಿಂದ ಹೊರಬರಲು ಒಂದು ವಾರವೇ ಹಿಡಿದಿತ್ತು. ನಾನಾಗಿ ನಾನೇ ಆ ರೀತಿ ಭಾವಿಸಿಕೊಂಡಿದ್ದೆನೆ ಅಥವಾ ಅವರೊಂದಿಗಿನ ಬಂಧ ಅಷ್ಟು ಗಟ್ಟಿಯಾಗಿತ್ತೆ ಅರ್ಥವಾಗಲಿಲ್ಲ. ಆದರೆ ನಾನು ಕಂಡುಕೊಂಡ ಸತ್ಯ ಮನುಷ್ಯ ಭಾವುಕನಾಗುವುದಕ್ಕೆ ಕಾರಣ ಅವನು ವಾಸ್ತವದಲ್ಲಿ ಬದುಕುವುದಕ್ಕಿಂತ ಹೆಚ್ಚಾಗಿ ಭೂತ ಮತ್ತು ಭವಿಷ್ಯತ್ ಗಳಲ್ಲಿ ಬದುಕುತ್ತಾನೆ. ಇನ್ನೂ ಕೆಲವರು ಭ್ರಮೆಗಳಲ್ಲೂ ಉಸಿರಾಡುತ್ತಾರೆ. ಅದು ಅವರವರು ಕಂಡುಕೊಂಡ ಅಥವಾ ಕಟ್ಟಿಕೊಂಡ ಜೀವನ ಶೈಲಿಯಿರಬಹುದು. ಆದರೆ ಭಾವುಕತೆ ಬದುಕನ್ನು ಹಿಂಡುವುದು ಮಾತ್ರ ಸುಳ್ಳಲ್ಲ. ಇದನ್ನೆಲ್ಲಾ ನೋಡುವಾಗ ನನಗನ್ನಿಸುವುದು ಮನುಷ್ಯ ಮೊದಲು ಅತಿಯಾಗಿ ಭಾವಿಸಿಕೊಳ್ಳುವುದನ್ನು ಬಿಡಬೇಕು, ಜೀವಿಸುವುದನ್ನು ಕಲಿಯಬೇಕು. ನಾವಾಗೇ ನಮ್ಮ ಜೀವನವನ್ನು ಕ್ಲಿಷ್ಟವಾಗಿಸಿಕೊಳ್ಳುತ್ತಿದ್ದೇವೆ. ಬದುಕನ್ನು ಬದುಕುವುದು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದೇವೆ. ಭಾವಿಸಿಕೊಂಡದ್ದಕ್ಕಿಂತ ಜೀವನ ತುಂಬಾ ಭಿನ್ನ ಎಂಬ ಸತ್ಯವನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆಗೆ ಬಂದು ನಿಂತಿದ್ದೇವೆ ಎನಿಸುತ್ತದೆ.

            ಜೀವನ ನಮ್ಮ ಅತ್ಯುಚ್ಚ ಶಿಕ್ಷಕ, ನಮಗೆ ಬೇಡವೆಂದರೂ ತುಂಬಾ ಪಾಠಗಳನ್ನು ನಮಗೆ ಕಲಿಸುತ್ತದೆ. ಅದಕ್ಕೆ ವಿರುದ್ದವಾಗಿ ಹರಿಯುವ ಪ್ರಯತ್ನ ಮಾಡುವುದಕ್ಕಿಂತ ಅದರ ಹರಿವಿಗೆ ಒಗ್ಗಿಕೊಂಡು ಬದಲಾವಣೆಗೆ ಮನಸ್ಸನ್ನು ತೆರೆದಿಡುವುದು ಸಮಂಜಸ ಮತ್ತು ಬುದ್ಧಿವಂತ ನಡೆಯಾದೀತು. ಪ್ರೀತಿಸಿದ ಪ್ರೀತಿ ಕೈಕೊಟ್ಟ ಮಾತ್ರಕ್ಕೆ ಜೀವನ ಕೈಕಟ್ಟಿ ಕೂರುವುದಿಲ್ಲವಲ್ಲ, ಮತ್ತೆ ನಾವ್ಯಾಕೆ ತಲೆ ಮೇಲೆ ಕೈಹೊತ್ತು ಕೂರಬೇಕು ಅಲ್ಲವೆ? ಒಂದು ಮಾತ್ರ ಸತ್ಯ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಮುನ್ನಡೆಯುವ ಪ್ರಜ್ಞೆ ಇದ್ದರೆ ಜೀವನ ಸುಲಭವಾಗುತ್ತದೆ. ಜೀವನ ನಾವು ಹಿಂದೆ ಕಳೆದುಕೊಂಡಿದ್ದನ್ನೆಲ್ಲಾ ಮುಂದೆ ಸರಿದೂಗಿಸಿಯೇ ತೀರುತ್ತದೆ. ಕಾಯುವ ತಾಳ್ಮೆ ಮತ್ತು ಸಿಕ್ಕ ಅವಕಾಶಗಳನ್ನು ದೋಚುವ ಚಾಣಕ್ಷತನ ಮೈಗೂಡಿಸಿಕೊಳ್ಳಬೇಕಷ್ಟೆ. ನಾವು ಕಳೆದುಕೊಳ್ಳುವ ಎಲ್ಲವುಗಳಿಗೂ ಜೀವನ ಪರ್ಯಾಯಗಳನ್ನು ಕೊಡುತ್ತಾ ಸಾಗುತ್ತದೆ. ಪ್ರೀತಿ ಕೈಜಾರಿದರೆ, ಮತ್ತೊಬ್ಬರು ಬಂಧು ಆ ಸ್ಥಳವನ್ನು ತುಂಬುತ್ತಾರೆ. ಹಿರಿಯರು ಜವರಾಯನ ಕರೆಗೆ ಹೋಗೊಟ್ಟು ಮೂಟೆ ಕಟ್ಟಿದರೆ ಮತ್ತೊಂದು ಜೀವದ ಉಗಮದೊಂದಿಗೆ ಜೀವನ ಆ ಗ್ಯಾಪ್ ಅನ್ನು ಮುಚ್ಚುತ್ತದೆ. ಸ್ನೇಹಿತರು ಅನಿವಾರ್ಯ ಕಾರಣಗಳಿಗೆ ನಮ್ಮಿಂದ ದೂರವಾದರೆ, ಜೀವನ ಹೊಸ ಸ್ನೇಹಿತರನ್ನು ಕೊಟ್ಟು ಆ ಸ್ಥಳವನ್ನು ಭರ್ತಿ ಮಾಡುತ್ತದೆ. ಯಾರು ಯಾರಿಗೂ ಅನಿವಾರ್ಯವಲ್ಲ. ಎಲ್ಲರೂ ಕಾರ್ಯ ನಿಮಿತ್ತ ಜೊತೆಯಾಗಿರುತ್ತಾರಷ್ಟೆ. ಕಾರ್ಯ-ಕಲಾಪಗಳು ಮುಗಿದ ಮೇಲೆ ಅಗಲಿಕೆ ಅನಿವಾರ್ಯ. ಹಾಗೆ ಆ ಅಗಲಿಕೆಯ ನಂತರವೂ ಜೀವನವಿದೆ. ಹಳೆ ನೀರು ಹರಿದರೇನೇ ಹೊಸ ನೀರು ಮನಸ್ಸನ್ನು ತುಂಬುವುದು. ಎಲ್ಲರನ್ನೂ, ಎಲ್ಲವನ್ನೂ ಉಳಿಸಿಕೊಳ್ಳುವ ಭರದಲ್ಲಿ ಜೀವನ ಕಳೆದು ಹೋಗದಿರಲಿ. ಭಾವುಕತೆಗೆ ಬೆನ್ನು ಹಾಕಿ ಜೀವನವನ್ನು ರೂಪಿಸಿಕೊಳ್ಳುವತ್ತ ಮುಖ ಮಾಡಬೇಕಾಗುತ್ತದೆ. ಕರ್ಮವದು ಕಳೆದುಬಿಡಲಿ, ಪೊರೆ ಕಳಚಿಬಿಡಲಿ ನವಚೈತನ್ಯ ಪ್ರವಹಿಸಿ ಜೀವನ ಹಸನಾಗಲಿ. ಕಾಡುವ ಕರ್ಮವನ್ನು ಬೆನ್ನಿಗಿಟ್ಟು ಮುಂದಡಿಯಿಡುತ್ತಾ ಮುನ್ನಡೆದುಬಿಡಲಿ ಮನುಷ್ಯ ಕುಲ ಎಂಬ ಆಶಯ ನನ್ನದು.

- ಪ್ರಸಾದ್.ಡಿ.ವಿ.

Saturday 17 March 2012

ತಾನನನೋಂತನಾನ..!


ನಿನ್ನ ನೆನಪುಗಳು
ನನ್ನ ಮನದೊಳಗೆ
ತನನನೋಂತನಾನ..!
ಭಾವಸ್ರಾವದೊಳು
ಬಂಧಿ ನಾನಿಂದು
ಮನನನೋಂತನಾನ..!

ಕನಸು ಮನಸೊಳಗೆ
ಕಂಗಳಿಟ್ಟವಳೆ,
ನಾಂನೀಂತನಾನ..!
ಮೂಕ ಹೃದಯಕ್ಕೆ
ಭಾಷೆ ಕೊಟ್ಟವಳೆ,
ಭಾವತೋಂತನಾನ..!

ನನಸ ಕನಸೊಳಗೆ
ಹೆಜ್ಜೆಯಿಟ್ಟವಳೆ,
ಮಧುರತೋಂತನಾನ..!
ಲಜ್ಜೆ ಲಜ್ಜೆಗೆ
ಗೆಜ್ಜೆ ಕಟ್ಟುವವಳೆ,
ಧೀಂಧೀಂತನನಾ..!

ನೆನಪು ಕನಸ ಹೂಡಿ
ಆಸೆ ಗರಿಬಿಚ್ಚಿ,
ಕನಸಿನೋಂತನಾನ..!
ಕನಸು ಕಂಡಲ್ಲೆ
ಮನಸು ನಿಂದಿಲ್ಲಿ
ವಿರಹನೋಂತನಾನ..!
ಚಿರ ವಿರಹಿ
ನಾಂತನಾನ..!

- ಪ್ರಸಾದ್.ಡಿ.ವಿ.

Saturday 10 March 2012

ಗಾಳಿ ನಾನು


ಗಾಳಿ ನಾನು,
ಗಾವುದವನ್ನೂ ಬಿಡದೆ ಬೀಸಿದ್ದೇನೆ,
ತಿಳಿಯಾಗಿ, ಮೆಲುವಾಗಿ,
ಹದವಾಗಿ, ಬಿರುಸಾಗಿ...
ಬೀಸು ಬೀಸಿಗೂ
ಘಮಲು ಹಾಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!

ಹೂದೋಟ ಹೊಕ್ಕಿದ್ದ ನಾ
ಹೊತ್ತು ತಂದದ್ದು ಪರಿಮಳವನ್ನೇ,
ಪಸರಿಸಬೇಕೆಂದು ಬೀಸಿದ್ದಷ್ಟೇ,
ನನಗೇನು ಗೊತ್ತಿತ್ತು
ಹೂಗಳೂ ಗಬ್ಬು ನಾರುತ್ತವೆಂದು,
ಹೂ ಘಮಲಿಗಿಂತ
ಅಮಲೇರಿದ್ದ ಜನರ
ತುಳಿತಕ್ಕೆ ಸಿಕ್ಕ ಕುಸುಮಗಳ
ಚೀರಾಟ ಜೋರೆಂದು,
ಚೀರಾಟವ ಚಿವುಟಿ
ಮಾಲೆಗೆ ಕೊರಳೊಡ್ಡಿ
ನಕ್ಕ ಜನರ ಕೇಕೆಯನ್ನೂ ಹೊತ್ತೊಯ್ಯುತ್ತೇನೆ,
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!

ನಲ್ಲನ ಬಿಸಿಯುಸಿರ ಬಿಸಿಗೆ ಕರಗುವ
ಮುಗುದೆಯ ಮನದ
ಪಿಸುದನಿಯನ್ನೂ ಹೊತ್ತೊಯ್ಯುತ್ತೇನೆ,
ಅರಿವಿಗೂ ಬಾರದಂತೆ,
ಅವರಿವರು ಅವರೆಡೆಗೆ
ತಿರುಗಿಯೂ ನೋಡದಂತೆ..!
ಹೃದಯಕ್ಕೆ ಕಿವಿಗೊಟ್ಟು
ಉಚ್ಛ್ವಾಸ - ನಿಚ್ಛ್ವಾಸದೊಳಗನಿಲವಾಗಿ
ರಕ್ತದೊಳು ಬೆರೆತುಹೋಗುತ್ತೇನೆ
ನನ್ನಿರುವೂ ತಿಳಿಯದಂತೆ..!
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!

ಮೈಗಂಟಿದ ಸುಗಂಧವನ್ನೂ ಬೀಸುತ್ತೇನೆ,
ಬೆವರ ಬಸಿರಿಗಂಟಿದ
ದುರ್ಗಂಧವನ್ನೂ ಬೀಸುತ್ತೇನೆ,
ಸುಕೋಮಲತೆಯನು ಹೊಸಕಿ
ಮೈಲಿಗೆಯ ಮರೆಮಾಚಲು
ಗಂಧಕ್ಕೆ ಮೈತೀಡಿ
ಅಮಲ ಪರಿಮಳ
ಬೀರುವ ಘಮಲೊಳಗೆ
ಬಡವರ ಬೆವರು ಬೀದಿ ಪಾಲು,
ಎರಡನ್ನೂ ತೂರುತ್ತೇನೆ,
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!

- ಪ್ರಸಾದ್.ಡಿ.ವಿ.

Monday 13 February 2012

ಗೆಳತಿಗೊಂದು ಪತ್ರ, ಪ್ರೇಮದ ಗುಂಗಲ್ಲಿ


ನಲ್ಮೆಯ ಗೆಳತಿ,
ನಿನ್ನ ನೆನಪುಗಳು ಒತ್ತರಿಸಿ ಬರುವಾಗ ನಿನಗೇನಾದರು ಉಡುಗೊರೆ ಕೊಡಬೇಕೆಂದು ಯೋಚಿಸುತ್ತಿದ್ದೆ. ಆಗ ನೆನಪಿಗೆ ಬಂತು, ಅಯ್ಯೋ ನಾನೆಂತ ಪ್ರೇಮಿ? ಪ್ರೀತಿಸಿ ನಾಲ್ಕು ವರ್ಷಗಳಾಗಿವೆ ನಾನು ನಿನಗಾಗಿ ಒಂದೂ ಪ್ರೇಮಪತ್ರವನ್ನು ಬರೆಯಲಿಲ್ಲವಲ್ಲ. ಇಂದು ಫೆಬ್ರವರಿ ೧೪, ಅದೇನೊ ’ಪ್ರೇಮಿಗಳ ದಿನ’ವಂತೆ. ಕೆಲವರು ’ಫೆಬ್ರವರಿ ೧೪ ರಂದು ಪ್ರೇಮಿಗಳ ದಿನವೆಂದು ಆಚರಿಸಕೂಡದು ಅದು ಪಾಶ್ಚಾತ್ಯ ಅನುಕರಣೆ. ನಿಜವಾದ ಪ್ರೇಮಿಗಳಿಗೆ ದಿನವೂ ಪ್ರೇಮೋತ್ಸವವೆ’ ಎಂದು ಬೊಂಬಡ ಬಜಾಯಿಸುತ್ತಾರೆ. ಇನ್ನೂ ಕೆಲವರು ’ನಮ್ಮ ಯಾಂತ್ರಿಕ ಬದುಕಿನಲ್ಲಿ ಭಾವನೆಗಳಿಗೆ ಮತ್ತು ಮಾನವೀಯ ಮೌಲ್ಯಗಳಿಗೆ ಸ್ಥಾನವೇ ಇರುವುದಿಲ್ಲ, ಕೊಡಲು ನಮಗೆ ಸಮಯವೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರೇಮವನ್ನು ಮಾತ್ರ ಆಚರಿಸಲು, ಎಲ್ಲೆಂದರಲ್ಲಿ ಕೆಂಪು ಗುಲಾಬಿಗಳು ಮತ್ತು ಬಲೂನ್ ಗಳಿಂದ ಇಡೀ ಪ್ರಪಂಚ ತನ್ನನ್ನೇ ತಾನು ಸಿಂಗರಿಸಿಕೊಂಡು ಹಬ್ಬದಂತೆ ಕಣ್ಣಿಗಾನಂದ ನೀಡುವ ’ಪ್ರೇಮಿಗಳ ದಿನ’ ದ ಆಚರಣೆ ಬೇಡವೇಕೆ?’ ಎಂದು ಜಾಗಟೆ ಬಾರಿಸುತ್ತಾರೆ. ಬೊಂಬಡವಾದರೂ ಸರಿಯಾಗಲಿ, ಜಾಗಟೆಯಾದರೂ ಸರಿಯಾಗಲಿ ನಮಗೇಕೆ ಅವುಗಳ ಗೌಜು ಗದ್ದಲ ಅಲ್ಲವೆ? ನಾನಂತು ತೀರ್ಮಾನಿಸಿದೆ ನಿನಗೊಂದು ಪ್ರೇಮಪತ್ರ ಬರೆದು ಮತ್ತೊಮ್ಮೆ ಪ್ರೇಮಿಯಾಗುತ್ತೇನೆ.

ನನ್ನನ್ನು ನಿನ್ನ ತೋಳ ತೆಕ್ಕೆಯಲ್ಲಿ ಎಳೆದುಕೊಂಡದ್ದು ಬಸ್ ಪ್ರಯಾಣದಲ್ಲಿನ ನಮ್ಮ ಮೊದಲ ಭೇಟಿ. ಅದ್ಯಾವ ಕಾರಣಕ್ಕೆ ನಿನ್ನನ್ನು ಮೋಹಿಸಿದೆನೊ ನಾನು? ಅಂತಹ ಸುರಸುಂದರಿಯೂ ನೀನಲ್ಲ, ಕೋಗಿಲೆಯ ಕಂಠವೂ ಇಲ್ಲ. ನಿನಗೆ ಗೊತ್ತಿರಲಿಕ್ಕಿಲ್ಲ ಹುಡುಗಿ, ನಾನು ಹಿಂದೆ ಯಾವ ಹುಡುಗಿಯರನ್ನೂ ಕಣ್ಣೆತ್ತಿಯೂ ನೋಡಿರಲಿಲ್ಲ. ಅವರಾಗವರೆ ಮಾತನಾಡಿಸಿ ಬಂದರೆ ಪ್ರಶ್ನೋತ್ತರಗಳಂತಿರುತ್ತಿದ್ದವು ನನ್ನ ಸಂಭಾಷಣೆಗಳು. ಅದ್ಯಾವ ಮೋಡಿ ಇದೆ ನಿನ್ನಲ್ಲಿ. ನಿನ್ನ ಕುಡಿ ನೋಟಕ್ಕೆ ಮೋಹಿತನಾಗಿಬಿಟ್ಟೆ. ಆ ಕಣ್ಣೊಳಗಿನ ಪ್ರೀತಿಗೆ ಪರವಶನಾಗಿಬಿಟ್ಟೆ. ನನಗೂ, ನಿನಗೂ ಅದೆಷ್ಟು ವ್ಯತ್ಯಾಸವಿತ್ತು. ನಾನೋ ಮಾತು ಮರೆತ ಮಿತ ಭಾಷಿ, ನೀನು ಗಂಟೆಗಟ್ಟಲೆ ಮಾತನಾಡಬಲ್ಲ ಮಾತಿನಮಲ್ಲಿ. ’ಈ ಪ್ರೀತಿಯಲ್ಲಿ ನಮಗೆ ಉಳ್ಟಾ ಇರುವ ಕ್ಯಾರೆಕ್ಟರ್ ಗಳೆ ಇಷ್ಟ ಆಗ್ತವಂತೆ’. ಹಾಗಂತ ಪಂಚರಂಗಿಯಲ್ಲಿ ನಿಧಿ ಸುಬ್ಬಯ್ಯ ಹೇಳುತ್ತಾಳೆ, ಅದು ನಿಜ ಎನಿಸುತ್ತದೆ. ಇದೇನಿದು ಹುಡುಗ ಟ್ರ್ಯಾಕ್ ಬದಲಿಸುತ್ತಿದ್ದಾನೆ ಅಂತ ಕೋಪ ಮಾಡ್ಕೊಳ್ಬೇಡ ಮಾರಾಯ್ತಿ, ಅವಳನ್ನು ನಿನ್ನ ಮುಂದೆ ನೀವಾಳಿಸಿ ಬಿಸಾಕ್ತೇನೆ.

ಆ ಭೇಟಿಯಿಂದ ಮೊದಲ್ಗೊಂಡ ನಮ್ಮ ಪರಿಚಯ, ಆತ್ಮೀಯತೆಗೆ ತಿರುಗಿ ಸುಂದರ ಬಂಧ ಜನ್ಮ ತಾಳಿತ್ತು. ನಾನು ಎಷ್ಟೋ ಸಲ ಇದು ಕೇವಲ ಸ್ನೇಹ ಎಂದು ನನಗೇ ನಾನು ಹೇಳಿಕೊಂಡರೂ ಕೇಳದ ನನ್ನ ಮನಸ್ಸು ಪ್ರೀತಿಯ ಧಾವಂತಕ್ಕೆ ಬಿದ್ದಿತ್ತು. ನಾನೇನು ಮಾಡಲಿ ನನ್ನ ಮನಸ್ಸಿನ ಕಡಿವಾಣ ನನ್ನ ಹೃದಯದ ಕೈಯಲ್ಲಿತ್ತು. ನನ್ನ ಹೃದಯ ನಿನ್ನೊಳಗಿತ್ತು. ದಿನವೂ ಹರಟುತ್ತಿದ್ದೆವು ’ಊಟಕ್ಕಿಲ್ಲದ, ಉಪ್ಪಿನ ಕಾಯಿಗೆ ಬರದ ಕಾಡು ಹರಟೆ’ ಇಬ್ಬರಿಗೂ ಒಬ್ಬರಿಗೊಬ್ಬರ ಸಾನಿಧ್ಯ ಬೇಕಿತ್ತು. ನಾವಿಬ್ಬರೂ ಅಂದು ರಸ್ತೆ ದಾಟುವಾಗ ನಾನು ನಿನ್ನ ಮೊದಲ ಪ್ರೇಮಿ ಆಟೋ ರಿಕ್ಷಾ(ಕಾರಣ ನಿನಗೆ ಗೊತ್ತು!) ಬರುವುದನ್ನು ಗಮನಿಸದೆ ಮುನ್ನುಗ್ಗುವಾಗ ನೀನು ನನ್ನ ಕೈಹಿಡಿದು ಬರಸೆಳೆದುಕೊಂಡೆಯಲ್ಲಾ ಆ ಮೊದಲ ಸ್ಪರ್ಶ, ಈ ಪತ್ರ ಬರೆಯುವಾಗಲು ನನ್ನ ಬಲ ತೋಳನ್ನು ನೇವರಿಸಿಕೊಳ್ಳುತ್ತಿದ್ದೇನೆ. ಈಗ ನೀನೇನಾದರು ನನ್ನ ಬಳಿಯಿದ್ದಿದ್ದರೆ ಆ ಮುದ್ದಾದ ಕೈ ಬೆರಳುಗಳನ್ನಿಡಿದು ಮುದ್ದಿಸುತ್ತಿದ್ದೆ. ಹೀಗೆ ಪ್ರೀತಿಯ ಮೊದಲ ಮೆಟ್ಟಿಲೇರಿದವನಿಗೆ ಕಾಯುವಂತೆ ಮಾಡಿದ್ದು ಆ ಹಾಳಾದ ಸೆಮಿಸ್ಟರ್ ಹಾಲಿಡೇಸ್. ಒಂದೊಂದು ನಿಮಿಷಗಳನ್ನೂ, ಒಂದೊಂದು ಯುಗಗಳೆಂಬಂತೆ ಕಳೆದಿದ್ದೇನೆ. ಎರಡು ತಿಂಗಳು ನಿನ್ನನ್ನು ನೋಡದೆ, ಮಾತನಾಡದೆ ಕಳೆದೆನೆಂದರೆ ಸೋಜಿಗವಾಗುತ್ತದೆ. ಹೆಚ್ಚೂ ಕಡಿಮೆ ಹುಚ್ಚೇ ಹಿಡಿದಿತ್ತು.

ಎರಡು ತಿಂಗಳ ನಂತರ ಮತ್ತೆ ಕಾಲೇಜ್ ರೀ ಓಪನ್ ಆದದ್ದು ನಿಟ್ಟುಸಿರು ಬಿಡುವಂತೆ ಮಾಡಿತ್ತು. ದಿನವೂ ನಿನ್ನನ್ನು ಹುಡುಕುತ್ತಿದ್ದೆ, ನಿನ್ನನ್ನು ಕಂಡೊಡನೆ ದಿನದ ಉತ್ಸಾಹ ನನ್ನ ಮೈಯೊಳಗೆ ಪ್ರವಹಿಸುತ್ತಿತ್ತು. ಆಗ ನಮ್ಮ ಆತ್ಮೀಯತೆಯ ನಡುವೆ ತೂರಿದವಳೆ ’ಅನನ್ಯಾ ಶರ್ಮ’. ನನಗೆ ಮೊದಲು ಹೀಗೆ ನನ್ನನ್ನು ಅನನ್ಯ ಎಂದುಕೊಂಡು ಮೊಬೈಲ್ ನಲ್ಲಿ ಕಾಡುತ್ತಿರುವುದು ನೀನೇ ಎಂದು ಅನುಮಾನ ಬರುತ್ತಿತ್ತು. ಯಾವಾಗ ಅದು ನೀನಲ್ಲಾ ಎಂದು ತಿಳಿಯಿತೊ ಆಗ ನಮ್ಮಿಬ್ಬರ ನಡುವೆ ಯಾರೋ ತೂರಲು ಪ್ರಯತ್ನಿಸುತ್ತಿದ್ದಾರೆ. ಅವರು ನಿನ್ನನ್ನು ಕಸಿದೊಯ್ದುಬಿಟ್ಟರೆ ಎಂಬ ಭಯ ಕಾಡಲು ಶುರುವಾಯ್ತು. ಆದ್ದರಿಂದಲೆ ನಮ್ಮಿಬ್ಬರ ಇಂಜಿನಿಯರಿಂಗ್ ಮುಗಿದ ನಂತರ ನಿವೇದಿಸಿಕೊಳ್ಳಬೇಕೆಂದುಕೊಂಡಿದ್ದ ನನ್ನ ಪ್ರೇಮದ ಕಟ್ಟೆಯನ್ನು ತೆರೆದು ಭಾವನೆಗಳನ್ನು ನಿನ್ನೆದುರು ಹರಿಯಬಿಟ್ಟೆ. ನೀನು ನನ್ನ ನಿವೇದನೆಯನ್ನು ಕಂಡು ದಿಗ್ಭ್ರಾಂತಳಾದಂತೆ ಕಂಡುಬಂದೆ. ’ನೀನು ನನ್ನ ಒಳ್ಳೆಯ ಗೆಳೆಯ, ಹಾಗೇ ಇರು’ ಎಂದು ಚುಟುಕಾಗಿ ಉತ್ತರಿಸಿದ್ದೆ. ಅಂದು ಕ್ಯಾಂಟೀನ್ ನಲ್ಲಿ ನೀನು ಪೂರಿ ತಿಂದದ್ದಕ್ಕೆ ಕೊಟ್ಟ ಬಿಲ್ ನಲ್ಲಿ ಮಿಗಿಸಿಕೊಂಡ ಐದು ರುಪಾಯಿ ನಾಣ್ಯವನ್ನು ಇನ್ನೂ ಜೋಪಾನವಾಗಿ ಕಾಯ್ದಿರಿಸಿಕೊಂಡಿದ್ದೇನೆ, ಆ ದಿನದ ಸವಿ ನೆನಪಿಗಾಗಿ.

’ಪ್ರೀತಿ ಕಾಡುವುದರಿಂದ ಹುಟ್ಟುವುದಲ್ಲ, ತಾನೇ ತಾನಾಗಿ ಹುಟ್ಟಬೇಕು’ ಎಂಬ ಅರಿವಿದ್ದ ನಾನು ನಿನ್ನನ್ನು ಪೀಡಿಸದೆ ಸ್ನೇಹಿತನಾಗಿರಲು ಪ್ರಯತ್ನಿಸಿ ಸೋತಿದ್ದೆ, ಅದರೆ ನಿನ್ನೆದುರು ಅದನ್ನು ಹೇಳಿಕೊಳ್ಳದೆ ಕೇವಲ ಸ್ನೇಹಿತನಂತೆ ನಟಿಸುತ್ತಿದ್ದೆ. ಅದಾದ ಎರಡು ತಿಂಗಳುಗಳ ನಂತರ ನೀನೇ ಬಂದು ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದೆ. ಆ ಕ್ಷಣದಲ್ಲಿ ನಾನನುಭವಿಸಿದ ಸಂತೋಷಕ್ಕೆ ಪಾರವೇ ಇರಲಿಲ್ಲ. ಜಗತ್ತಿನಲ್ಲಿ ಏನನ್ನೋ ಗೆದ್ದೆನೆಂಬ ಪುಳಕ ಮನಸ್ಸಿಗೆ ಹಿತವನ್ನು ನೀಡಿತ್ತು. ಮುಂದಿನ ಕೆಲವು ತಿಂಗಳುಗಳು ನಾನು ನನ್ನ ಕನಸ್ಸಿನಲ್ಲೂ ಮರೆಯಲಾಗದ ಸುಂದರ ಸುಮಧುರ ಕ್ಷಣಗಳು. ಪ್ರೀತಿ ಎಷ್ಟು ಸುಂದರ ಎಂಬುದನ್ನು ತೋರಿಸಿಕೊಟ್ಟ ಪ್ರೇಮ ದೇವತೆ ನೀನು. ನಾನು ಒಬ್ಬರನ್ನು ಜೀವಕ್ಕಿಂತಲು ಹೆಚ್ಚಾಗಿ ಪ್ರೀತಿಸಬಲ್ಲೆನೆಂಬುದನ್ನು ಅರಿವಿಗೆ ತರಿಸಿದ ಕ್ಷಣಗಳವು. ನಾನು ಯಾವಾಗಲಾದರು ನಿಸ್ತೇಜನಾಗಿ ಕೂತಾಗ ಸುಮ್ಮನೆ ಆ ನೆನಪುಗಳನ್ನು ಮೆಲುಕು ಹಾಕಿದರೂ ಸಾಕು, ಈಗಲೂ ಮೈ ಮನಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ನವೋಲ್ಲಾಸ ಚಿಮ್ಮುತ್ತದೆ.

ನಂತರದ ದಿನಗಳಲ್ಲಿ ನನ್ನ ಅಪ್ರಬುದ್ಧತೆಯೊ ಏನೊ, ಕೆಲವು ಒತ್ತಡಗಳಿಗೆ ಸಿಕ್ಕು ನಾನೇ ಮಾಡಿಕೊಂಡ ತಪ್ಪಿಗೆ ನಿನ್ನನ್ನು ಹೊಣೆ ಮಾಡಿದೆ. ನಿನ್ನನ್ನು ತುಂಬಾ ನಿರ್ಲಕ್ಷಿಸಿದೆ ಮತ್ತು ನಿನ್ನ ಮನಸ್ಸನ್ನು ನೋಯಿಸಿದೆ ಎನಿಸುತ್ತಿದೆ. ನಿನಗೆ ಆ ದೋಷಾರೋಪಣೆ ಹೊರೆಯಾಯ್ತೆಂದು ಕಾಣಿಸುತ್ತದೆ. ಆದ್ದರಿಂದಲೆ ನೀನು ನಿನ್ನದೇ ಕಾರಣಗಳನ್ನು ಕೊಟ್ಟು ದೂರ ಸರಿಯಲಾರಂಭಿಸಿದೆ. ನನಗೂ ಸ್ವಲ್ಪ ಅಹಂ ಇತ್ತೆನಿಸುತ್ತದೆ, ಹೋದರೆ ಹೋಗಲಿ ಎಂದು ಸುಮ್ಮನಿದ್ದುಬಿಟ್ಟೆ. ಈಗ ನಿನ್ನ ನೆನಪುಗಳು ಮತ್ತೆ ಕಾಡಲಾರಂಭಿಸಿವೆ. ನಡೆದ ಎಲ್ಲಾ ತಪ್ಪುಗಳಿಗೆ ಕ್ಷಮೆ ಕೋರುತ್ತಾ ಮತ್ತೆ ನನ್ನನ್ನು ಪರಿಚಯಿಸಿಕೊಳ್ಳುತ್ತಿದ್ದೇನೆ. ’ಕಳೆದು ಹೋದವಳ ಅರಸುತ್ತಾ ಕಳೆದು ಹೋದವನು ನಾನು’, ಹೆಸರಲ್ಲೇನಿದೆ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಮತ್ತೆ ಹಿಂತಿರುಗೆ ಚೆಲುವೆ, ನಾನು ನನ್ನನ್ನು ಕಂಡುಕೊಳ್ಳಬೇಕಿದೆ.
ಇಂತಿ ನಿನ್ನ ಗೆಳೆಯಾ...

- ಪ್ರಸಾದ್.ಡಿ.ವಿ.

ಸಮತೋಲನ



ಹಕ್ಕಿಯೊಂದು ಕೊಕ್ಕ ಚಾಚಿ
ಕಾಳೊಂದನು ಕುಕ್ಕಿ ಹೆಕ್ಕಿ
ಗಂಟಲೊಳಗಿನೆಂಜಿಲುನಿಸಿ
ಗುಟುಕಿರಿಸಿರೆ
ಕಾಳ ಜೀವ ಹಾರಿ ಹೋಯ್ತು,
ಸಸಿಯ ಹುಟ್ಟು ಕಮರಿ ಹೋಯ್ತು
ಹಕ್ಕಿಯ ಹಸಿವಿಗೆ..!

ಹಸಿದ ಹಾವು ಅಹಾರವರಸಿ
ಮರದಲಿದ್ದ ಗೂಡನ್ಹುಡುಕಿ
ಅದರಲಿದ್ದ ಮೊಟ್ಟೆ ಕುಕ್ಕಿ
ಸಾರ ಹೀರಿರೆ,
ಹಸುಳೆ ಹಕ್ಕಿ ಹತ್ಯೆಯಾಯ್ತು,
ಹತ್ಯೆಗೆ ಹತ್ಯೆ ಜೊತೆಯಾಯ್ತು,
ಹಾವಿನ ಹಸಿವಿಗೆ..!

ಗಿಡುಗವೊಂದು ಹೊಂಚುಹಾಕಿ
ತೆವಳುತಿದ್ದ ಉರುಗನ ಮೇಲೆ
ತನ್ನೆರಡು ಕಾಲ ಮೀಟಿ
ಹೊತ್ತು ಹೋಯ್ದಿರೆ,
ಹಾವು ಕೂಡ ಹತ್ಯೆಯಾಯ್ತು,
ಕಾಲನಾಟ ಏರಿಯಾಯ್ತು,
ಗಿಡುಗನ ಹಸಿವಿಗೆ..!

ಮಳೆಯೊಂದಿಗೆ ಮಿಂಚು ಬಂತು
ಮಿಂಚ ವಿದ್ಯುತ್ ಸ್ಪರ್ಷ ತಂತು
ಸ್ಪರ್ಷ ತಗುಲಿ ಗಿಡುಗ ಸತ್ತು
ಪಯಣ ಮುಗಿಸಿರೆ,
ಸತ್ತ ಗಿಡುಗ ಭುವಿಗೆ ಬಿತ್ತು,
ಬೆಳೆವ ಸಸಿಗೆ ಸತುವಾಯ್ತು,
ಹೊಸ ಬೀಜದುಗಮಕೆ..!

ಸಾವಿಗೊಂದು ಸಾವಿನ್ಹುತ್ತ,
ಹುಟ್ಟಿಗೊಂದು ಹುಟ್ಟಿಸುತ್ತಾ,
ತನ್ನ ಇರುವ ತೋರಿಸುತ್ತಾ,
ಜೀವಗಳನ್ನಣಕಿಸುತ್ತಾ,
ನಿಸರ್ಗ ಹಿಡಿದ ಬಿಗಿ ಹಿಡಿತ,
ಇದು ಸಮತೋಲನ,
ಪ್ರಕೃತಿಯ ಸಮತೋಲನ..!

- ಪ್ರಸಾದ್.ಡಿ.ವಿ.

Wednesday 8 February 2012

ಯುವ ಮನಸ್ಸಿನ ಹತ್ತು ಹಲವು ಮುಖಗಳು - 2

ಅವನು, ಅವಳು ಮತ್ತು ಪ್ರೀತಿ
-------------------------------

ಹರೆಯ ಎಂಬುದೇ ಹೀಗೆ, ಯಾವುದೇ ಪ್ರತ್ಯೇಕ ವ್ಯಾಖ್ಯಾನಕ್ಕೆ ದಕ್ಕದ ನಜೂಕಿನ ವಿಷಯ. ಅದರ ಅರ್ಥಾನ್ವೇಷಣೆಗಳು ತೆರೆದಿಟ್ಟಷ್ಟೂ ವಿಸ್ತಾರ, ಸಂವೇಧನೆಗೆ ಸಿಕ್ಕಷ್ಟೂ ನಿಗೂಢ.

ಅವನೊಬ್ಬ ಸಾಮಾನ್ಯ ಹುಡುಗ, ಹೆಸರು ಆದಿತ್ಯ. ತಂದೆ ಸರ್ಕಾರಿ ಕಛೇರಿಯಲ್ಲಿ ಹೆಡ್ ಕ್ಲಾರ್ಕ್, ತಾಯಿ ಸಾಮಾನ್ಯ ಗೃಹಿಣಿ. ಒಬ್ಬನೇ ಮಗನಾದ ಕಾರಣ ಮನೆಯ ರಾಜಕುಮಾರನಂತೆ ಬೆಳೆಯುತ್ತಿದ್ದ. ಮೊದ ಮೊದಲು ಈ ಅತಿಯಾದ ಪ್ರೀತಿ ಮತ್ತು ಕಾಳಜಿಗಳು ಹಿತವೆನಿಸಿದರೂ ಅವನು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಅವುಗಳೆಲ್ಲಾ ಉಸಿರುಗಟ್ಟಿಸುವಂತೆ ಭಾಸವಾಗುತ್ತಿತ್ತು. ಈ ಹರೆಯದ ಪ್ರಮುಖ ಲಕ್ಷಣವೆಂದರೆ ತನ್ನ ಅಪ್ಪ-ಅಮ್ಮನ ಮಾತುಗಳು ಮತ್ತು ಕಾಳಜಿ ತಂತಿ ಬೇಲಿಗಳಂತೆ ಭಾಸವಾಗುತ್ತವೆ. ಆ ಬೇಲಿಯನ್ನು ಹಾರಬೇಕೆನಿಸುತ್ತದೆ. ಮತ್ತು ಹೆಚ್ಚು ಸಮಯವನ್ನು ಏಕಾಂತದಲ್ಲಿ ಕಳೆಯುವಂತೆ ಪ್ರೇರೇಪಿಸುತ್ತದೆ. ಬೇಕಾಗಿಯೇ ದಕ್ಕಿಸಿಕೊಂಡ ಏಕಾಂತವನ್ನು ಓದು ಸೆಳೆದಿತ್ತು. ಹಾಗಂತ ಪಠ್ಯದ ಓದಲ್ಲ, ಬದಲಾಗಿ ಪ್ರೀತಿ-ಪ್ರೇಮದ ಬಗ್ಗೆ ಯಾವುದೇ ನಿಯತಕಾಲಿಕೆಗಳಲ್ಲಿ ಬಂದಿದ್ದರೂ ತುಂಬಾ ಅಸ್ಥೆ ವಹಿಸಿ ಓದುತ್ತಿದ್ದ..! ಆಗ ಅವನನ್ನು ಆಕರ್ಷಿಸಿದ್ದು ’ಓ ಮನಸೇ’ ಅದರಲ್ಲಿ ಬರುತ್ತಿದ್ದ ಲೇಖನಗಳಲ್ಲಿನ ಪ್ರೀತಿಯ ನವ್ಯ ವ್ಯಾಖ್ಯಾನಗಳು ಅವನಲ್ಲಿ ಕುತೂಹಲಗಳನ್ನು ಹುಟ್ಟಿಸುತ್ತಿದ್ದವು.

ನಿವೇಧಿತಾ ಆದಿತ್ಯನ ಸಹಪಾಠಿ, ಮಾತೂ ಹೆಚ್ಚು, ಪಲುಕೂ ಹೆಚ್ಚು. ಆದಿತ್ಯ ಅವನಿಗೇ ಅರಿವಿಲ್ಲದೆ ಅವಳೆಡೆಗೆ ಸರಿಯುತ್ತಿದ್ದ. ಅವಳೊಂದಿಗೆ ಬೆರೆಯಲು ಕಾರಣಗಳನ್ನು ಹುಡುಕುತ್ತಿದ್ದ. ಇವರ ಆತ್ಮೀಯತೆಯನ್ನು ಗಮನಿಸಿದ ಆದಿತ್ಯನ ತಾಯಿಯ ಮನಸ್ಸಿನಲ್ಲಿ ಅವ್ಯಕ್ತವಾದ ಭಯ ಮೂಡುತ್ತಿತ್ತು. ಅವರು ಇವರಿಬ್ಬರ ಆತ್ಮೀಯತೆಗೆ ಬೇಲಿಯನ್ನು ಹಾಕಲು ಪ್ರಯತ್ನಿಸಿದರು. ಇದೇ ಪೋಷಕರು ಮಾಡುವ ತಪ್ಪು, ಅವರು ಈ ರೀತಿಯ ವಿಚಾರಗಳಲ್ಲಿ ಅತಿಯಾಗಿ ಮೂಗು ತೂರಿಸದಿದ್ದರೆ ಅದು ಆಕರ್ಷಣೆಗಷ್ಟೇ ಸೀಮಿತವಾಗಿ, ಸ್ನೇಹವಾಗಿಯೇ ಉಳಿಯುವ ಸಾಧ್ಯತೆಯುಂಟು. ಆದರೆ ಪೋಷಕರು ಆ ವಿಷಯಗಳ ಮಧ್ಯೆ ಪ್ರವೇಶಿಸಿದರೆ ಆ ಆಕರ್ಷಣೆ ಪ್ರೀತಿಯಾಗಿಯೇ ತೀರುತ್ತದೆ. ಆದಿತ್ಯ ಈಜು ಬರದಿದ್ದರೂ ಸಹ ಆಳ ನೋಡುವ ದುಸ್ಸಾಹಸಕ್ಕೆ ಕೈ ಹಾಕಿದ್ದ. ಇವನೋ ಪ್ರೀತಿಯ ಆಳ ತಿಳಿಯದವನು, ಅವಳು ಪ್ರೀತಿ-ಸ್ನೇಹಗಳಿಗೆ ವ್ಯತ್ಯಾಸವೇ ತಿಳಿಯದವಳು. ಇಬ್ಬರೂ ಪ್ರೀತಿಯಲ್ಲಿ ಬಿದ್ದರು, ಸ್ವಯಂಕೃತ ಅಪರಾಧ..! ಮೊದಲು ಪ್ರೀತಿಯಲ್ಲಿ ಬೀಳುವವರಿಗೆ ಅದರ ಬಣ್ಣ ಆಕರ್ಷಣೀಯ ಎನಿಸುತ್ತದೆ. ಆದರೆ ಅದು ಮಾಸಿ ಹೋಗುತ್ತದೆ ಎಂಬ ಕಲ್ಪನೆಯೂ ಇರುವುದಿಲ್ಲ. ಇನ್ನು ಪ್ರೀತಿಯಲ್ಲಿ ಅನುಭವ ಪಡೆದವರನ್ನೂ ಮತ್ತೆ ಪ್ರೀತಿ ನುಂಗೇ ನುಂಗುತ್ತದೆ. ಏಕೆಂದರೆ ಮಾಸಿದ ಹಳೇ ಅಂಗಿಗೆ ಹೊಸ ಬಣ್ಣ ಬಳಿದು ಹಳೆಯ ಕೆರೆತಗಳನ್ನು ಮುಚ್ಚಿ ಹಾಕಿಕೊಳ್ಳುವ ತವಕ. ಏನಾದರಾಗಲಿ, ಯಾರಾದರಾಗಲಿ ಪ್ರೀತಿಗೆ ಬಲಿ ಶತ ಸಿದ್ಧ.

ಪೋಷಕರ ಅಡೆತಡೆಗಳ ನಡುವೆಯೂ, ’ನಾವಿಬ್ಬರು ಸ್ನೇಹಿತರಷ್ಟೆ’ ಎಂದು ಹೇಳಿಕೊಂಡು ಎಗ್ಗಿಲ್ಲದೆ ಸಾಗಿತ್ತು ಅವರಿಬ್ಬರ ಪ್ರೀತಿ. ಸ್ಕೂಲ್ ನಲ್ಲಿ ಅವರಿಬ್ಬರ ಗಪ್-ಚುಪ್ ಗಳೇನು, ಕ್ಲಾಸಿನಲ್ಲಿ ಒಬ್ಬರ ಕೈಯನ್ನು ಒಬ್ಬರು ಹಿಡಿದು ಕುಳಿತುಕೊಳ್ಳುವುದೇನು.. ಎಲ್ಲರ ಕಣ್ಣುಗಳನ್ನೂ ಕುಕ್ಕುತ್ತಿದ್ದ ಪ್ರಣಯ ಪಕ್ಷಿಗಳಾಗಿದ್ದರು. ಮೆಸೇಜಿಂಗ್ ನಲ್ಲಿ ಕಂಬೈನ್ಡ್ ಸ್ಟಡಿ ಮಾಡ್ತೇವೆ ಎಂದೇಳಿ ಮಧ್ಯರಾತ್ರಿಯವರೆಗೂ ಸಂದೇಶಗಳು ಇಬ್ಬರ ಮೊಬೈಲ್ ಗಳನ್ನೂ ಎಡತಾಕುತ್ತಿದ್ದವು. ಮಿಸ್ಡ್ ಕಾಲ್ ಗಳೂ ಎಗ್ಗಿಲ್ಲದೆ ಸಾಗಿದ್ದವು. ತಕ್ಷಣ ಪ್ರತಿಕ್ರಿಯೆ ನೀಡದಿದ್ದರೆ ಅದು ಮಾರಾ-ಮಾರಿಯಲ್ಲಿ ಕೊನೆಯಾಗುತ್ತಿತ್ತು. ಹೀಗೆ ಶಾಲಾ ಪ್ರವಾಸದಲ್ಲಿ ಇವರಿಬ್ಬರ ಸಲುಗೆಯನ್ನು ಗಮನಿಸಿದ ಅವರ ಹಿಂದಿ ಶಿಕ್ಷಕರಾದ ಶ್ರೀಧರ್ ಅವರಿಬ್ಬರನ್ನೂ ಕರೆದು ’ಈ ವಯಸ್ಸಿನಲ್ಲಿ ಪ್ರೀತಿ-ಪ್ರೇಮಗಳ ಬಲೆಯಲ್ಲಿ ಬಿದ್ದು ಜೀವನವನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ತಿಳಿಹೇಳಿ. ನಿವೇಧಿತಾಳಿಂದ ಆದಿತ್ಯನ ಕೈಗೆ ರಾಖಿ ಕಟ್ಟಿಸಿಬಿಟ್ಟರು. ಇನ್ನುಮುಂದೆ ನೀವಿಬ್ಬರು ಅಣ್ಣ-ತಂಗಿಯರೆಂದು ಹರಸಿ ಕಳುಹಿಸಿಕೊಟ್ಟರು. ಇದು ಅವರಿಬ್ಬರಿಗೂ ಜೀರ್ಣಿಸಿಕೊಳ್ಳಲಾಗದ ವಿಷಯವಾಯಿತು. ಅವರ ಪ್ರೀತಿ ಈ ಪರಿಸ್ಥಿತಿ ಎಂಬ ಸ್ಪೀಡ್ ಬ್ರೇಕರ್ ಗೆ ಸಿಕ್ಕಿ ಆಕ್ಸಿಡೆಂಟ್ ಆಗಿತ್ತು. ನಂತರದಲ್ಲಿ ತಕ್ಕ ಮಟ್ಟಿಗೆ ಓದಿ ಇಬ್ಬರೂ ಹತ್ತನೆ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಅವರ ಮನೆಗಳಲ್ಲಿ ಮಕ್ಕಳು ಸರಿ ದಾರಿಗೆ ಬಂದರು ಎಂದು ನಿಟ್ಟುಸಿರು ಬಿಡುವಂತಾಗಿತ್ತು.

ನಂತರ ಬೇರೆ ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರಿಂದ ಒಬ್ಬರಿಗೊಬ್ಬರು ಸಂಧಿಸುವುದು ಕಡಿಮೆಯಾಯಿತು. ಸಂಧಿಸಿದರೂ ಮಾತಿಲ್ಲ, ಕಥೆಯಿಲ್ಲ. ಸಂದೇಶಗಳಂತೂ ತಮ್ಮ ಗುರಿ ಮರೆತಿದ್ದವು. ಹೀಗಿದ್ದಾಗ ಆದಿತ್ಯನ ಮೊಬೈಲ್ ತೆಗೆದುಕೊಂಡ ಅವನ ಸ್ನೇಹಿತ ನಿವೇಧಿತಾಳಿಗೆ ಹುಡುಗಾಟಿಕೆಗೆಂದು ಕಳುಹಿಸಿದ ’ಐ ಲವ್ ಯೂ ನಿವೀ..’ ಎಂಬ ಸಂದೇಶ ಅವರಿಬ್ಬರನ್ನೂ ಮತ್ತೆ ಮಾತನಾಡುವಂತೆ ಮಾಡಿತ್ತು. ಗೆಳೆಯ ಮಾಡಿದ ಅಚಾತುರ್ಯವನ್ನು ವಿವರಿಸಲು ಅವನು ನೆನಪುಗಳ ಮೆಲುಕು ಹಾಕುತ್ತಾ ಅವಳು ಮತ್ತೆ ಪ್ರೀತಿಯ ತೆಕ್ಕೆಯಲ್ಲಿ ಬಿದ್ದರು. ಇಬ್ಬರೂ ತಮ್ಮ ಪೊಸೆಸ್ಸಿವ್ ನೆಸ್ ನಿಂದಾಗಿ ಆಗಾಗ ಜಗಳ ಮಾಡಿಕೊಳ್ಳಲು ಶುರು ಮಾಡಿದ್ದರು. ಸ್ನೇಹದ ಪರಿಧಿಯ ಅರಿವಿರದ ನಿವೇಧಿತ ಬೇರೆ ಹುಡುಗರೊಂದಿಗೆ ಕೈ ಕೈ ಹಿಡಿದು ಸುತ್ತುತ್ತಿದ್ದಳು. ಆದಿತ್ಯ ಇದನ್ನು ಅವಳಿಗೆ ಎಷ್ಟು ತಿಳಿ ಹೇಳಿದರೂ ಅವಳು ಅವನ ಮಾತನ್ನು ಕೇಳುತ್ತಿರಲಿಲ್ಲ. ಈ ವಿಷಯ ಅವರಿಬ್ಬರ ನಡುವೆ ಜಗಳಗಳು ತಾರಕಕ್ಕೇರುವಂತೆ ಮಾಡುತ್ತಿತ್ತು. ಅವನ ಪರೀಕ್ಷಾ ಸಮಯಗಳಲ್ಲಿಯೇ ಈ ವಿಷಯಗಳು ಅವನನ್ನು ತೀರಾ ಬಾಧಿಸುತ್ತಿದ್ದವು. ಅವನು ಅತ್ತುಕೊಂಡು ಪರೀಕ್ಷೆಗಳನ್ನು ಬರೆದದ್ದೂ ಇದೆ. ಹೀಗಿದ್ದರೂ ಬೇರೆಯ ಹುಡುಗರೊಂದಿಗಿನ ಅವಳ ಓಡಾಟಗಳು ಕಡಿಮೆಯಾಗಲೇ ಇಲ್ಲ. ಇವುಗಳೆಲ್ಲವುಗಳಿಂದ ರೋಸಿ ಹೋದ ಆದಿತ್ಯನಿಗೆ ಪ್ರೀತಿ ಬಂಧನದಂತೆ ಭಾಸವಾಗುತ್ತಿತ್ತು. ಆಕೆ ತನ್ನನ್ನು ಕೇವಲ ಬಳಸಿಕೊಂಡಳು, ತಾನು ಅವಳ ಆಟಿಕೆಯ ವಸ್ತುವಾದೆ ಎನಿಸಿಬಿಟ್ಟಿತ್ತು.

ಇವೆಲ್ಲಾ ನೋವುಗಳು ಯಾವಾಗ ಅವನ ಮನಸ್ಸನ್ನು ಘಾಸಿಗೊಳಿಸಿತು ಅವನು ಅವನ ಸ್ಥಿಮಿತವನ್ನು ಕಳೆದುಕೊಂಡು ಬಿಟ್ಟ. ಮಾನಸಿಕವಾಗಿ ಕೃಶವಾಗಿ ಅವನ ದ್ವೀತಿಯ ಪಿಯೂಸಿಯ ಪರೀಕ್ಷೆಗಳನ್ನೂ ಎದುರಿಸಲಾಗಲಿಲ್ಲ. ಅಷ್ಟು ಪ್ರತಿಭಾವಂತ ತನ್ನ ಜೀವನನ್ನು ಹಾಳು ಮಾಡಿಕೊಳ್ಳುತ್ತಿದ್ದಾನಲ್ಲಾ ಎಂದು ಪೋಷಕರು ತಲೆ ಮೇಲೆ ಕೈ ಹೊತ್ತು ಕುಳಿತರು. ಇವನು ಹೊರಗಿನ ಪ್ರಪಂಚದ ಎಲ್ಲಾ ಕೊಂಡಿಗಳನ್ನು ಕಳೆದುಕೊಂಡು ತನ್ನ ಕೊಠಡಿ ಸೇರಿ ಬಿಟ್ಟನು. ಪ್ರೀತಿ ಮತ್ತು ಹುಡುಗಿಯರ ವಿರುದ್ಧ ತಿರಸ್ಕಾರ ಹುಟ್ಟಲು ಶುರುವಾಯಿತು. ಆ ಕೋಪಗ್ನಿ ಅವನನ್ನು ಎಲ್ಲಿಯವರೆಗೂ ತಂದು ನಿಲ್ಲಿಸಿತೆಂದರೆ ಅವನು ನಿವೇಧಿತಾಳ ಮೇಲೆ ಆಸೀಡ್ ಹಾಕಿಬಿಡುವ ತೀರ್ಮಾನಕ್ಕೆ ಬಂದುಬಿಟ್ಟ. ಅವನ ಮನಸ್ಥಿತಿಯನ್ನು ತಕ್ಷಣವೇ ಗ್ರಹಿಸಿದ ಅವನ ಪೋಷಕರು ಅವನಿಗೆ ಮಾನಸಿಕ ವೈದ್ಯರಲ್ಲಿ ಒಂದು ಕೌನ್ಸಿಲಿಂಗ್ ಕೊಡಿಸಿದ ನಂತರ ಅವನು ಖಿನ್ನತೆಯಿಂದ ಹೊರ ಬಂದನು. ಆದರೆ ಹುಡುಗಾಟದ ವಯಸ್ಸಿನಲ್ಲಿಯೇ ಮಾನಸಿಕವಾಗಿ ಸಂತನಾಗಿಬಿಟ್ಟ. ಪ್ರೀತಿ ಅವನ ಹುಡುಗಾಟಿಕೆಯನ್ನು ಕಸಿದಿತ್ತು. ಈಗ ಅವನು ಬಿ.ಬಿ.ಎಮ್ ಓದುತ್ತಿದ್ದಾನೆ, ಆಕೆ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ಈಗಲೂ ಆಕೆ ಅವನ ಮುಂದೆ ಸಿಗುತ್ತಾಳೆ. ಆಕೆ ಬೇರೆ ಹುಡುಗನ ತೋಳ ತೆಕ್ಕೆಯಲ್ಲಿರುವುದನ್ನು ನೋಡಿ ತನ್ನೊಳಗೆ ನಕ್ಕು ’ಈ ಹುಡುಗಿಗೆ ಹಾಳಾಗುವ ಮುನ್ನ ಒಳ್ಳೆಯ ಬುದ್ಧಿ ಬಂದು ಕೆಲವು ಹುಡುಗರ ಜೀವನಗಳಾದರು ಉಳಿಯುವಂತಾಗಲಿ’ ಎಂದುಕೊಳ್ಳುತ್ತಾ ಮುನ್ನಡೆಯುತ್ತಾನೆ.

ಹುಡುಗರೇ ಆಗಲಿ, ಹುಡುಗಿಯರೇ ಆಗಲಿ. ಪ್ರೀತಿ ಮತ್ತು ಸ್ನೇಹಗಳ ಸರಿಯಾದ ವ್ಯತ್ಯಾಸಗಳನ್ನು ಅರಿತಿರಬೇಕು. ಯಾವುದೇ ಸಲಿಗೆಗಳೂ ಅತಿಯಾಗಬಾರದು ವಯಕ್ತಿಕ ಭಾವ ಸಂವೇಧನೆಗೆ ಒಂದಷ್ಟು ಅಂತರ ಅಗತ್ಯವೆನಿಸುತ್ತದೆ. ಜೀವನವನ್ನು ಭಾವುಕವಾಗಿ ನೋಡುವ ಬದಲು ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಬೇಕಾಗುತ್ತದೆ. ಹರೆಯದ ಹುಚ್ಚಾಟಗಳಿಗೆ ಬುದ್ಧಿಯನ್ನು ಕೊಟ್ಟರೆ ಅದು ಎಲ್ಲಿ ನಿಲ್ಲಿಸುತ್ತದೆ ಎಂಬುದೇ ತಿಳಿಯುವುದಿಲ್ಲ. ಆದಿತ್ಯನ ಪೋಷಕರು ಅವನ ಮನಸ್ಥಿತಿಯನ್ನು ಗಮನಿಸದೇ ಇರುತ್ತಿದ್ದರೆ ಅವನು ಈಗ ಒಬ್ಬ ಹಂತಕನಾಗಿಯೋ, ಇಲ್ಲ ಸಮಾಜ ಘಾತುಕನಾಗಿಯೋ ಇರುತ್ತಿದ್ದ. ಆ ಹುಡುಗಿ ಪ್ರೀತಿ ಮಾಡಿದ ಮೇಲೆ ಅದನ್ನು ಟೈಂ ಪಾಸ್ ಗೆ ಎಂದುಕೊಳ್ಳದೆ ಜೀವನ ಪರ್ಯಂತಕ್ಕೆ ಎಂದುಕೊಳ್ಳಬೇಕಾಗುತ್ತದೆ. ಪ್ರೀತಿಯಲ್ಲಿ ನಂಬಿಕೆ ಎಷ್ಟು ಮುಖ್ಯವೋ ಬದ್ಧತೆಯೂ ಅಷ್ಟೇ ಮುಖ್ಯ.

- ಪ್ರಸಾದ್.ಡಿ.ವಿ.

Tuesday 31 January 2012

ಯುವ ಮನಸ್ಸಿನ ಹತ್ತು ಹಲವು ಮುಖಗಳು - 1

ಹರೆಯದ ಗಾಳಕ್ಕೆ ಸಿಕ್ಕ ಮೀನು
------------------------------



ಹೌದು ಆಕೆ ಆಗಷ್ಟೆ ತನ್ನ ಹರೆಯದ ಹುಚ್ಚು ಆಸೆಗಳಿಗೆ ತನ್ನ ಮನಸ್ಸನ್ನು ಪರದೆಯಾಗಿಸಿದ್ದಳು, ಹೆಸರು ಬಿಂದು. ಮೈನೆರೆದು ಏಳೆಂಟು ತಿಂಗಳುಗಳು ಕಳೆದಿದ್ದರಬಹುದು. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳು ಗರಿಗೆದರಿದ್ದವು. ಕನಸುಗಳಲ್ಲಿಯೂ ಕಚಗುಳಿ ಇಡುವ ಅವಳ ರಾಜಕುಮಾರನ ಕಲ್ಪನೆಗಳು ಅವಳನ್ನು ರೋಮಾಂಚನಗೊಳಿಸುತ್ತಿದ್ದವು. ಆಗಷ್ಟೇ ಹತ್ತನೆ ತರಗತಿ ಓದುತ್ತಿದ್ದರೂ ಕಾಣುವ ಕನಸುಗಳಿಗೇನೂ ಕಡಿಮೆಯಿರಲಿಲ್ಲ. ಅಷ್ಟಲ್ಲದೆ ದ.ರಾ.ಬೇಂದ್ರೆಯವರು ’ಹುಚ್ಚುಕೋಡಿ ಮನಸು, ಹದಿನಾರರ ವಯಸು’ ಎಂದು ಹೇಳಿದ್ದಾರೆಯೇ.

ಮನೆ ಕಡೆ ಆಗರ್ಭ ಶ್ರೀಮಂತರಲ್ಲದಿದ್ದರೂ ಅವಳ ತಂದೆ ಮಗಳಿಗೇನೂ ಕಡಿಮೆ ಮಾಡಿರಲಿಲ್ಲ. ತಂದೆಯದು ಸ್ವಂತ ಉದ್ಯಮವಾದುದ್ದರಿಂದ ತಾಯಿ ಕೂಡ ಅವರಿಗೆ ಹೆಗಲು ಕೊಟ್ಟಿದ್ದಳು. ಈ ಕಾರಣದಿಂದಲೇ ಏನೋ ಬಿಂದುವಿಗೆ ಸ್ವಲ್ಪ ಅತಿಯೆನಿಸುವಷ್ಟೇ ಸ್ವಾತಂತ್ರ್ಯ ಸಿಕ್ಕಿತ್ತು. ಅವಳ ದೇಹದಲ್ಲಾದ ಬದಲಾವಣಿಗೆಗಳು ಆ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿಸಿಕೊಳ್ಳೆಂದು ಆಕೆಯನ್ನು ಪ್ರೇರೇಪಿಸುತ್ತಿದ್ದವು. ಕನಸ್ಸಿನಲ್ಲಿನ ರಾಜಕುಮಾರನನ್ನು ಈಗ ಎದುರಿಗೆ ಸಿಗುತ್ತಿದ್ದ ಹುಡುಗರ ಚರ್ಯೆಯಲ್ಲಿ ಹುಡುಕುತ್ತಿದ್ದಳು. ಅವಳ ವಯಸ್ಸಿನ ಅಪ್ರಬುದ್ಧತೆಯೋ ಏನೋ ಸ್ವಲ್ಪ ಸಿನಿಮೀಯ ಹೀರೋಹಿಸಂ ತೋರಿಸಿದ ಹುಡುಗರೆಲ್ಲಾ ಅವಳ ಕನಸಿನ ರಾಜಕುಮಾರನಿಗೆ ತಾಳೆಯಾಗುತ್ತಿದ್ದರು ಅವಳ ಶಾಲೆಯಲ್ಲಿಯೇ ಕಲಿತ ಹಳೆಯ ವಿದ್ಯಾರ್ಥಿ ಮಿಲನ್, ಸ್ವಲ್ಪ ಒರಟು ಸ್ವಭಾವದ ಹುಡುಗ ಆದರೆ ಎತ್ತರದ ನಿಲುವು ಮತ್ತು ಆಕರ್ಷಕ ಮೈಕಟ್ಟು ಹೊಂದಿದ್ದನು. ಅವನಿಗೆ ಕ್ರಿಕೆಟ್ ಎಂದರೆ ಒಂದು ರೀತಿಯ ಹುಚ್ಚು, ತಕ್ಕ ಮಟ್ಟಿಗೆ ಒಳ್ಳೆಯ ಆಟಗಾರನೆ. ಆ ಕ್ರಿಕೆಟ್ ಹುಚ್ಚಿನಿಂದಲೇ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಂಡು, ಈಗ ಬೀದಿ ಅಲೆಯುತ್ತಿದ್ದ. ಅವನ ಹಿಂದೆ ಅವನಂತವರ ದೊಡ್ಡ ದಂಡೇ ಇತ್ತು. ಅವನಿಂದಾಗಿ ಅವರೆಲ್ಲಾ ಕೆಟ್ಟಿದ್ದರೋ, ಇಲ್ಲ ಅವರೆಲ್ಲರಿಂದಾಗಿ ಅವನು ಕೆಟ್ಟಿದ್ದನೋ ತಿಳಿಯದು.

ಇಂತಹ ಹುಡುಗರೇ ಹರೆಯದ ಹುಡುಗಿಯರ ಮನಸ್ಸಿಗೆ ಬೇಗ ಲಗ್ಗೆಯಿಡುವುದೆಂದು ಕಾಣುತ್ತದೆ. ಯಾವುದೋ ಜಗಳದಲ್ಲಿ ಪ್ರಾರಂಭವಾದ ಅವರ ಪರಿಚಯ ಕ್ರಮೇಣ ಆತ್ಮೀಯತೆಯಾಗಿ, ನಂತರದಲ್ಲಿ ಪ್ರೀತಿಯಾಗಿ ಬದಲಾಗಿತ್ತು. ಅವಳಿಗೆ ಅವನ ಆ ಒರಟುತನ, ಆತ ಅವಳಿಗಾಗಿ ಮಾಡಿಕೊಳ್ಳುತ್ತಿದ್ದ ಹೊಡೆದಾಟಗಳು ಅವನಿಗೆ ಅವಳ ಮೇಲಿದ್ದ ಅಗಾಧ ಪ್ರೀತಿಯ ಕುರುಹುಗಳಂತೆ ಭಾಸವಾಗುತ್ತಿದ್ದವು. ಜೊತೆಗೆ ಮೊಬೈಲ್ ನಲ್ಲಿ ಸಂದೇಶಗಳು ಮತ್ತು ಕರೆಗಳು ಸರಾಗವಾಗಿ ಹರಿದಾಡುತ್ತಿದ್ದವು. ಅವರಿಬ್ಬರಿಗೂ ಪ್ರತಿಕ್ಷಣವೂ ಸಂಪರ್ಕದಲ್ಲಿದ್ದೇವೆ ಎನಿಸುವಷ್ಟರ ಮಟ್ಟಿಗೆ ಒಬ್ಬರನೊಬ್ಬರು ಹಚ್ಚಿಕೊಂಡಿದ್ದರು. ಅವರ ಈ ಪ್ರೀತಿಯ ಅಮಲೋ ಏನೋ ಆಕೆ ತನ್ನ ಹತ್ತನೆಯ ತರಗತಿಯನ್ನು ಪಾಸು ಮಾಡಲು ತುಂಬಾ ತ್ರಾಸ ಪಡಬೇಕಾಯ್ತು. ’ಪ್ರೇಮ ಕುರುಡು’ ಎನ್ನುತ್ತಾರೆ ಆದರೆ ಪ್ರೀತಿಯಲ್ಲಿ ಬಿದ್ದವರು ತಮ್ಮ ಸಂಗಾತಿಯ ಕೋರೆಗಳನ್ನು ಗುರ್ತಿಸುವಲ್ಲಿ ಕುರುಡರಾಗುತ್ತಾರೆ. ಅದರಂತೆ ಅವನ ಕೆಟ್ಟ ಚಟಗಳು ಅವಳ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ಬಿಂದು ಮಿಲನ್’ನ ಮೇಲೆ ತುಂಬಾ ಭಾವನಾತ್ಮಕವಾಗಿ ಅವಲಂಭಿತಳಾಗಿದ್ದಳು. ತನ್ನ ಅಪ್ಪ ಅಮ್ಮ ಸಣ್ಣದಾಗಿ ಗದರಿದರೂ ಸಾಕು, ಅವನ ಸಾಂಗತ್ಯ ಬಯಸುತ್ತಿದ್ದಳು. ಅದು ಹದಿ ಹರೆಯದವರ ಬಲಹೀನತೆ, ಅದಕ್ಕಾಗಿಯೇ ಬೆಳೆದ ಮಕ್ಕಳನ್ನು ತುಂಬಾ ಕಾಳಜಿಯಿಂದ ನಡೆಸಿಕೊಳ್ಳಬೇಕಾಗುತ್ತದೆ. ಆ ಕಾಳಜಿ ಮತ್ತು ಪ್ರೀತಿ ಹೆತ್ತವರಿಂದ ದೊರೆಯದಿದ್ದಾಗ ಮಕ್ಕಳು ಅದನ್ನು ಮತ್ತೊಬ್ಬರಲ್ಲಿ ಹರಸುತ್ತಾರೆ. ಆಗಲೆ ಮಕ್ಕಳು ಹಾದಿ ತಪ್ಪುವ ಸಂಭವ ಜಾಸ್ತಿ.

ಕಡಿಮೆ ಅಂಕ ಪಡೆದಿದ್ದ ಕಾರಣ ಕಾಲೇಜ್’ನಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಪರದಾಡುವಂತಾಯ್ತು. ಕಾಲೇಜ್ ಸೇರಿದ ಮೇಲಂತೂ ಅವಳನ್ನು ಹಿಡಿಯುವವರೇ ಇಲ್ಲದಂತಾಯಿತು. ಕಾಲೇಜ್’ನ ತರಗತಿಗಳಿಗೆ ಗೈರಾಗಿ ಮಿಲನ್’ನೊಂದಿಗೆ ಬೈಕೇರಿ ಕುಳಿತುಬಿಡುತ್ತಿದ್ದಳು. ಮೈಸೂರ್’ನ ಎಲ್ಲಾ ಚಿತ್ರಮಂದಿರಗಳು ಮತ್ತು ಉದ್ಯಾನವನಗಳನ್ನು ಅದಾಗಲೆ ಸಂದರ್ಶಿಸಿ ಆಗಿತ್ತು. ಅವರ ಈ ಪ್ರಣಯದಾಟ ಅವರ ಅಪ್ಪ-ಅಮ್ಮಂದಿರ ಅರಿವಿಗೆ ಬರದಿದ್ದುದೇ ಸೋಜಿಗ. ಇಷ್ಟೆಲ್ಲವುಗಳ ನಡುವೆ ಬಿಂದು ತನ್ನ ಪ್ರಥಮ ಪಿಯೂಸಿಯನ್ನು ಪಾಸ್ ಮಾಡಿದ್ದೇ ಒಂದು ಸಾಧನೆಯಾಗಿತ್ತು. ದ್ವಿತೀಯ ಪಿಯೂಸಿಗೆ ಕಾಲಿಟ್ಟರೂ ಆಕೆಗೆ ಓದಿನ ಬಗ್ಗೆ ಗಾಂಭೀರ್ಯತೆ ಬಂದಿರಲಿಲ್ಲ. ಏನಾದರಾಗಲಿ ಮಿಲನ್’ನೊಂದಿಗೆ ಸುತ್ತುವುದೇ ಸುಖವೆಂದು ಭಾವಿಸಿದ್ದಳು. ಈ ಕಾರಣದಿಂದಾಗಿಯೇ ಆಕೆ ತನ್ನ ಪೂರ್ವಭಾವಿ ಪರೀಕ್ಷೆಗಳನ್ನೂ ತಪ್ಪಿಸಿಕೊಂಡಳು. ’ಆಕೆಯ ಗೈರು ಹಾಜರಿಯ ಬಗ್ಗೆ’ ಪ್ರಾಂಶುಪಾಲರ  ಪೋಸ್ಟ್ ಕಾರ್ಡ್ ಬಿಂದುವಿನ ಮನೆಯಲ್ಲಿ ಅಲ್ಲೋಲ ಕಲ್ಲೋಲವನ್ನೆಬ್ಬಿಸಿತ್ತು. ಯಾವತ್ತೂ ಬಿಂದುವಿನ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕದ ಪೋಷಕರು ಅವಳಿಗೆ ತೀರಾ ಬಿಗಿ ಮಾಡಿದರು. ಆದರೆ ಅವರಿಗೆ ಬಿಂದು ಪ್ರೀತಿಯಲ್ಲಿ ಬಿದ್ದಿರುವುದು ತಿಳಿಯಲಿಲ್ಲ.

ಈ ವಿಷಯದ ಬಗ್ಗೆ ಮಿಲನ್’ನೊಂದಿಗೆ ಮಾತನಾಡಲು ಅವನನ್ನು ಎಡತಾಕಿದಳು. ಅವನು ದೂರದಲ್ಲಿನ ಪ್ರವಾಸಿ ತಾಣಕ್ಕೆ ಹೋಗಿ ಸಾವಕಾಶವಾಗಿ ಮಾತನಾಡುವ ಎಂದು ಒಪ್ಪಿಸಿ, ಅವಳನ್ನು ಕರೆದೊಯ್ದನು. ಅಲ್ಲಿನ ನಿರ್ಜನವಾದ ಪ್ರಶಾಂತ ವಾತಾವರಣ ಅವರ ಮಾತುಕತೆಗೆ ಪ್ರಶಸ್ತವೆನಿಸಿತ್ತು. ಅವಳು ಮನೆಯಲ್ಲಿನ ಬಿಗುವಾದ ವಾತಾವರಣ ತಮ್ಮ ಪ್ರೀತಿಯ ಬಗ್ಗೆ ತಿಳಿಸುವಂತೆ ಮಾಡಿಬಿಡಬಹುದು ಎಂದು ಹೇಳಿ ಕಣ್ಣೀರಾಗಿದ್ದಳು. ತಮ್ಮ ಪ್ರೀತಿಯ ಬಗ್ಗೆ ಅವಳ ಮನೆಯಲ್ಲಿ ತಿಳಿದುಬಿಟ್ಟರೆ ದೊಡ್ಡ ರಾದ್ಧಾಂತವೇ ಆಗಿಬಿಡುತ್ತದೆಂಬುದನ್ನು ಮನಗಂಡ ಮಿಲನ್ ಸಣ್ಣದಾಗಿ ನಡುಗಿದ್ದ. ಆದರೂ ಅದನ್ನು ತೋರಗೊಡದೆ ಅವಳನ್ನು ಅಪ್ಪಿ ಸಂತೈಸುವ ಪ್ರಯತ್ನ ಮಾಡಿದನು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಬ್ಬರೂ ಅಧೀರರಾಗಿಬಿಟ್ಟರು. ಅಂತಹ ಒಂದು ವಿಷಮ ಘಳಿಗೆಯಲ್ಲಿ ಅವರಿಬ್ಬರ ಮನಸ್ಸುಗಳು ಹಳಿ ತಪ್ಪಿದ್ದವು. ಏಕಾಂತದ ತಾಣವಾದ್ದರಿಂದ ಅವರ ದೇಹದ ಹರೆಯದ ಬಿಸುಪಿಗೆ ಬೆವರ ಹನಿಗಳು ಧಾರಾಕಾರವಾಗಿ ಹರಿದಿದ್ದವು. ಎರಡೂ ಮನಸ್ಸುಗಳು ತಮಗೆ ಅರಿವೇ ಇಲ್ಲದೆ ಕಾಲು ಜಾರಿದ್ದವು. ನಂತರದ ದಿನಗಳಲ್ಲಿ ಮಿಲನ್ ಬಿಂದುವಿನೊಂದಿಗೆ ಮಾತನ್ನೇ ಕಡಿಮೆ ಮಾಡಿದ್ದನು. ಈ ಎಲ್ಲಾ ಘಟನೆಗಳಿಂದ ಕಂಗೆಟ್ಟಿದ್ದ ಬಿಂದುವಿಗೆ ತಾನು ಕಾಲು ಜಾರಿದುದರ ಕುರುಹು ತನ್ನ ಗರ್ಭದಲ್ಲಿ ಚಿಗುರೊಡೆಯುತ್ತಿದೆ ಎಂಬ ವಿಷಯ ಸಿಡಿಲೆರಗಿದಂತಾಗಿತ್ತು. ಅವಳ ಮನಸ್ಸು ಖಿನ್ನತೆಗೆ ಜಾರಿಬಿಟ್ಟಿತ್ತು. ಓದೂ ಬೇಡ, ಸುತ್ತುವುದೂ ಬೇಡ, ಜೀವನವೂ ಬೇಡ ಎನಿಸುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಿಲನ್ ಕೂಡ ಜೊತೆಗಿರದಿದ್ದುದು ಅವಳನ್ನು ಹೈರಾಣಾಗಿಸಿತ್ತು. ಕಡೆಗೆ ಮನೆಯವರಿಗೆ ಸತ್ಯವನ್ನು ತಿಳಿಸಲೂ ಆಗದೆ, ಎದುರಿಸಲೂ ಆಗದ ಹುಚ್ಚು ಮನಸ್ಸು ಆತ್ಮಹತ್ಯೆಗೆ ಶರಣಾಯಿತು. ವಿಷಯ ತಿಳಿದ ಮಿಲನ್ ಭೂಮಿಗೆ ಕುಸಿದು ಹೋದ, ಆ ಆಘಾತವನ್ನು ತಾಳಲಾರದೆ ತಾನೂ ಆತ್ಮಹತ್ಯೆಗೆ ವಿಫಲ ಯತ್ನ ಮಾಡಿ ಆಸ್ಪತ್ರೆ ಸೇರುವಂತಾಯ್ತು.

ಪೋಷಕರ ಸಣ್ಣಮಟ್ಟಿಗಿನ ಅಜಾಗರೂಕತೆ ಮತ್ತು ಹರೆಯದ ಹುಚ್ಚುಮನಸ್ಸಿನ ದುಡುಕುಗಳು ಎಷ್ಟೆಲ್ಲಾ ಜನರ ನೆಮ್ಮದಿಯನ್ನು ಕಸಿದಿತ್ತು. ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಹರೆಯದಲ್ಲಿ ಮೂಡುವ ಆಕರ್ಷಣೆಗಳೇ ಪ್ರೀತಿಯಲ್ಲ. ದೇಹದಲ್ಲಿ ಆಗುವ ಹಾರ್ಮೋನ್’ಗಳ ಬದಲಾವಣೆಯಿಂದ ಅಂತಹ ಭಾವಗಳು ಎಲ್ಲರಲ್ಲಿಯೂ ಹುಟ್ಟುವುದು ಸಹಜ, ಆದರೆ ಯುವಮನಸ್ಸುಗಳು ಅದನ್ನೇ ಪ್ರೀತಿಯೆಂದು ಭಾವಿಸಿ ಜೀವನವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಹರೆಯದಲ್ಲಿ ಮೂಡುವ ಪ್ರೀತಿಗಳಿಗೆ ಕಾಲನ ಚೌಕಟ್ಟು ನೀಡಿ, ಸಭ್ಯತೆಯ ಎಲ್ಲೆಯನ್ನು ಮೀರದಿರಿ. ಮೊದಲು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದೆ ಎಂಬ ಅರಿವು ನಿಮಗಿರಲಿ. ನಿಮ್ಮ ಕಾಲುಗಳ ಮೇಲೆ ನೀವು ನಿಂತುಕೊಂಡ ನಂತರವೂ ನಿಮ್ಮ ಪ್ರೀತಿ ಗಟ್ಟಿಯಾಗಿದ್ದರೆ ದಾಂಪತ್ಯಕ್ಕೆ ಅಡಿಯಿಡಿ. ’ಹರೆಯದ ಗಾಳಕ್ಕೆ ಸಿಕ್ಕ ಮೀನುಗಳಾಗಬೇಡಿ’.

- ಪ್ರಸಾದ್.ಡಿ.ವಿ.

Monday 23 January 2012

ಕಾದಿರುವಳೂರ್ಮಿಳೆ



ಇರುವಳೂರ್ಮಿಳೆ ಅಲ್ಲಿ,
ನಿನ್ನದೇ ಧ್ಯಾನದಿ, ಅಯೋಧ್ಯೆಯಲ್ಲಿ,
ಭಾವಗಳು ಸುಳಿ ಸುಳಿದು,
ವಿರಹದ ಬಾಣಲೆಯಲಿ
ಕುದಿ ಕುದಿದು,
ಆವಿಯಾಗದ ನಿರೀಕ್ಷೆ ಹಿಡಿದು,
ಕಾಡುವಳೆ ನಿನ್ನ,
ನೀನಿರಲು ಇಲ್ಲಿ ಕಾನನದಲ್ಲಿ,
ನಿನ್ನಣ್ಣ ಅತ್ತಿಗೆಯ ಬಳಿಯೇ
ಲೋಕೋದ್ಧಾರದಿ ಸ್ವಾರ್ಥವನ್ನು
ತೊರೆದ ಹಮ್ಮಿನಲ್ಲಿ,
ರಾಮರಾಜ್ಯದ ಸ್ಥಾಪನೆಗೆ
ಕಾರಣನಾಗುವೆನೆಂಬ ಭಿಮ್ಮಿನಲ್ಲಿ...

ಮೊನ್ನೆ-ಮೊನ್ನೆ ಮದುವೆಯಾದವಳು,
ಮೊನ್ನೆ ಎಂಬುದು ವರುಷವಾದರೇನು?
ವಯಸ್ಸೆಂಬುದು ದೇಹಕ್ಕಲ್ಲದೆ
ಮನಸ್ಸಿಗಾಗುವುದೇನು?
ಒಮ್ಮೆಯಾದರು ಮಧು ಹೀರಿ
ಸುಖಿಸಲಿಲ್ಲ ಅವಳು,
ಕಾಡವೆ ಅವಳ ಕಾಮ-ವಾಂಛೆಗಳು,
ರಾಮನನುಜ ಲಕ್ಷ್ಮಣನು ನೀನು,
ಧರ್ಮ ಸಂಸ್ಥಾಪನೆಗೆ
ಟೊಂಕ ಕಟ್ಟಿದವನು,
ನಿನ್ನನ್ನೇ ಬೇಡಿ
ವರಿಸಿದ್ದೇ ಅವಳ ತಪ್ಪೇನು?
ಕಾದಿರುವಳೂರ್ಮಿಳೆ ಅಲ್ಲಿ...

ಲಕ್ಷ್ಮಣನಾದರೇನು ನಾನು,
ವಿಧಿಯೆದುರು ತರಗೆಲೆಯು,
ಗಾಳಿ ಬೀಸಿದೆಡೆ ತೂರಿದೆನು..!
ಕಾಡು ಪಾಲಾದನು ಅಣ್ಣ,
ಕಾಯಲವನ ನಾನೂ,
ಇದ್ದುಬಿಡಬೇಕಿತ್ತೆ ತಲೆಕೆರೆಯುತ್ತಾ
ತಮ್ಮ ಭರತನೆದುರು,
ಆತ್ಮಾಭಿಮಾನವ ಅಡವಿಟ್ಟು,
ಅದಕಾಗೇ ಹೊರಟುಬಿಟ್ಟೆ..!
ಆದರೇನು ನಿನ್ನ ನೆನಪು
ಕಾಡಲಿಲ್ಲವೆಂದೇನಲ್ಲ,
ಇತ್ತೊಂದು ನಂಬಿಕೆ
ಕಾಯುವಳೂರ್ಮಿಳೆ ನನಗಾಗಿ
ನಾನವಳ ನಲ್ಲ...

ಕಾಯುತ್ತಿರುವೆ ನೀನಲ್ಲಿ,
ನಿನ್ನ ನೆನೆದು ನಾನೂ ಇಲ್ಲಿ,
ಆಸೆ-ವಾಂಛೆಗಳ ಬೆನ್ನಿಗಿಟ್ಟು,
ನೆನಪು-ಕನಸುಗಳ ಗಾಳಿಗಿಟ್ಟು,
ಕಾಯುತ್ತಿರುವೆ ನಿನಗಾಗಿ ನಾನು,
ಲಕ್ಷ್ಮಣನು, ಊರ್ಮಿಳೆಯ ನಲ್ಲನೂ...

- ಪ್ರಸಾದ್.ಡಿ.ವಿ.

Wednesday 18 January 2012

ಎಲ್ಲಿರುವೆ ನೀ ಮಾಧವಾ



ಮಾಧವನ ಕೊಳಲಿನ ನಾದಕ್ಕೆ
ನರ್ತಿಸುವ ನವಿಲಾದಳು ರಾಧೆ,
ಎಲ್ಲಿರುವೆ ಮಾಧವ ನೀ,
ಕೇಳದೆ ರಾಧೆಯ ಸಾಂಗತ್ಯ ಸುಧೆ...

ಮಾಧವನ ಗಾನ ಮಾಧುರ್ಯದಿ
ಮಂದಗಮನೆಯು ರಾಧೆ,
ಗಂಗೆಯಾಗಿ, ಯಮುನೆಯಾಗಿ, ಕಾವೇರಿಯಾಗಿ,
ಶರಧಿಯ ಸೇರುವ ತವಕದಿ,
ಮಾಧವನ ಸಾಮೀಪ್ಯವರಸುತಾ
ಗೊಲ್ಲ ಗೋಪನ ಸಾನಿಧ್ಯ
ಬಯಸಿಹಳು ಚಿರ ವಿರಹಿ ರಾಧೆ,
ಒಲಿಯಬಾರದೆ ರಾಧೆಗೊಪ್ಪಿ,
ಎಲ್ಲಿಹೋದೆ ಮಾಧವಾ ನೀ,
ಕೇಳದೆ ರಾಧೆಯ ವಿರಹ ಗೀತೆ...

ರಾಧೆ-ಮಾಧವರ ಕೊಳಲಿನಾಟ,
ಪ್ರೇಮಕ್ಕೊಂದು ದಿವ್ಯ ನೋಟ,
ಕೊಳಲ ಗೋಪ ಮಾಧವ,
ಅವನ ಗಾನಸುಧೆಗೆ ನವಿಲು ಅವಳು,
ಇದು ಪ್ರೀತಿಯೊ, ಪ್ರೇಮವೋ,
ಭಕ್ತಿಯೋ, ಮುಕ್ತಿಯೋ,
ಮಾಧವನಿಗೇ ಅವಳು ಸ್ವಂತವು,
ಪ್ರೇಮಕ್ಕೊಲಿದ ರಾಧೆಯವಳು
ಕರುಣೆ ಬಾರದೆ,
ಎಲ್ಲಿರುವೆ ನೀ ಮಾಧವಾ,
ಅವಳ ಅಳಲು ಕೇಳದೆ...

- ಪ್ರಸಾದ್.ಡಿ.ವಿ.

Friday 13 January 2012

ಆ ವಿಧಿಯಾಟವ ಬಲ್ಲವರಾರು


ನಾನು ಇಂತಹದ್ದೊಂದು ಲೇಖನ ಬರೆಯುತ್ತೇನೆಂದು ನನ್ನ ಕನಸ್ಸು ಮನಸ್ಸಿನಲ್ಲಿಯು ಎಣಿಸಿರಲಿಲ್ಲ. ನನ್ನ ನಂಬಿಕೆಗಳ ವಾಸ್ತವದ ನೆಲೆಗಟ್ಟನ್ನೆ ಆ ಸಂದರ್ಭ ಅಲ್ಲಾಡಿಸುತ್ತದೆಂದು ನಾನು ಎಂದೂ ಭಾವಿಸಿರಲಿಲ್ಲ. ನೆನ್ನೆ ನನ್ನ ಕಣ್ಣೆದುರೆ ಗತಿಸಿದ ಘಟನೆ ನನ್ನನ್ನು ಈ ಲೇಖನ ಬರೆಯುವವರೆಗೂ ಸರಿಯಾಗಿ ನಿದ್ರಿಸಲು ಬಿಡುತ್ತಿಲ್ಲ.

ನನ್ನ ತಾತನಿಗೆ ಆರೋಗ್ಯ ಕೈಕೊಟ್ಟು ಎರಡು ವರ್ಷವೇ ಸರಿದಿರಬಹುದು. ವಯಸ್ಸಾದ ದೇಹ ರೋಗಗಳ ಕಣಜವೆಂಬಂತೆ. ನನ್ನವ್ವ(ಅಜ್ಜಿ)ನಿಗೆ ಅವಳ ಗಂಡನೇ ದೈವ. ಆ ದೇವತೆಯ ಇಚ್ಛಾಶಕ್ತಿಯೆ ಆಕೆಯ ಗಂಡನ ಪ್ರಾಣವನ್ನು ಹಿಡಿದಿಟ್ಟಿದೆ ಎನಿಸುತ್ತದೆ. ನನ್ನ ಅಮ್ಮ, ಚಿಕ್ಕಮ್ಮಂದಿರು ಮತ್ತು ಮಾವನಿಗೆ ನನ್ನಜ್ಜನನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂಬ ಆಸೆ. ಆದ್ದರಿಂದ ಅಜ್ಜನನ್ನು ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ದಿನವೂ ಅವರನ್ನು ಕಾಯುತ್ತಿದ್ದಾರೆ. ನಾನು ಭಾವನೆಗಳನ್ನು ಅಪ್ಪಿ ಜೋತಾಡುವ ಮನೋಭಾವದವನಲ್ಲವೇ ಅಲ್ಲ. ವಾಸ್ತವಿಕ ಮತ್ತು ವೈಚಾರಿಕ ನೆಲೆಗಟ್ಟುಗಳೆ ನನ್ನ ಯೋಚನಾಧಾಟಿಯ ಅಡಿಪಾಯಗಳು, ಬಂಧನಗಳು ಮತ್ತು ಸಂಬಂಧಗಳೆಂದರೆ ತುಸು ತಟಸ್ಥನೆ. ಕೆಲವೊಮ್ಮೆ ತುಂಬಾ ಭಾವುಕನಾಗುವುದುಂಟು ಆದರೆ ಅದು ತೀರಾ ವಿರಳ. ನನ್ನ ಯೋಚನಾಧಾಟಿಯೋ ಇಲ್ಲವೆ ತಟಸ್ಥ ಭಾವದ ಉದ್ದಟತನವೋ, "ಅಜ್ಜನಿಗೆ ವಯಸ್ಸಾಯ್ತು, ಮಗನ ಮದುವೆಯನ್ನೂ ನೋಡಿದ್ದಾಯ್ತು ಮೊಮ್ಮಗನನ್ನು ಮುದ್ದಿಸಿದ್ದೂ ಆಯ್ತು, ಅವರು ಹೊರಡುವ ಕಾಲ ಸನ್ನಿಹಿತವಾಯಿತೆಂದರೆ ಹೋಗಲಿ ಬಿಡಿ. ಯಾಕಷ್ಟು ಭಾವುಕರಾಗುತ್ತೀರಿ?" ಎಂದುಬಿಟ್ಟೆ. ಎಲ್ಲರೂ ನನ್ನನ್ನು ಯಾವುದೇ ಭಾವನೆಗಳಿಲ್ಲದ ಬಂಡೆಯೆಂಬಂತೆ ನೋಡಿ, "ಬಾಯಿಗೆ ಬಂದಂತೆ ಹರಟಬೇಡ, ಕಾಲು ಮುರಿಯುತ್ತೇನೆ" ಎಂದು ಅಮ್ಮ ಗದರಿದರು. ನಾನು ನನ್ನಲ್ಲೆ ಇವರಿಗೆ ಬುದ್ಧಿಯಿಲ್ಲ, ಯಾರು ಪುಂಗಿ ಊದಿದರು ಸರಿಯಾಗದವರು ಇವರು ಎಂದು ಸುಮ್ಮನೆ ಹೊರಬಂದೆ. ಅವರ ಭಾವೋತ್ಕಟತೆಯ ಆಳವನ್ನು ವಿಮರ್ಶಿಸುವ ಗೋಜಿಗೂ ಹೊಗಲಿಲ್ಲ ನಾನು.

ಹೀಗೇ ನೆನ್ನೆ ಅಪ್ಪ ಮತ್ತು ಅವ್ವನಿಗೆ ಊಟ ತೆಗೆದುಕೊಂಡು ಹೋಗು ಎಂದು ಹೇಳಿ ಅಮ್ಮ ನನ್ನನ್ನು ಆಸ್ಪತ್ರೆಗೆ ಕಳುಹಿಸಿದರು. ನನಗೂ ಅಜ್ಜನನ್ನು ನೋಡಿ ಎರಡು ದಿನಗಳಾಗಿದ್ದರಿಂದ ಅವರ ಆರೋಗ್ಯದ ಬಗ್ಗೆ ತಿಳಿಯಬಹುದೆಂದು ನಾನೇ ಹೋದೆ.

ನನ್ನಜ್ಜ ಇರುವ ವಾರ್ಡಿನಲ್ಲಿಯೆ ಇನ್ನೊಬ್ಬ ವಯಸ್ಸಾದ ವ್ಯಕ್ತಿ ದಾಖಲಾಗಿದ್ದರು. ವಯಸ್ಸು ೭೫ ದಾಟಿರಬಹುದು. ಆತನಿಗೂ ವಯಸ್ಸಾದ ಕಾರಣ ದೇಹದ ಅಂಗಗಳ ಸಾಮರ್ಥ್ಯ ಕ್ಷೀಣಿಸಿ ಒದ್ದಾಡುತ್ತಿದ್ದರು. ಆದರೆ ನನ್ನ ಅಜ್ಜನಿಗಿಂತ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ಅವರಾಗಿಯೆ ತಿಂಡಿ ತಿನ್ನುತ್ತಿದ್ದರು. ಆರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರು. ಈ ವಯಸ್ಸಾದವರಿಗೆ ಮಾತು ಜಾಸ್ತಿ. ಅನುಭವ ಪಡೆದಿದ್ದೇವೆಂದು ಎಲ್ಲರಿಗೂ ಧಾರಾಳವಾಗಿ ಧಾರೆ ಎರೆಯುತ್ತಾರೆ. ಆ ವಿಷಯದಲ್ಲಿ ಆ ತಾತನನ್ನು ಅವರ ಮಗ ಬಯ್ಯುವುದೂ ಇತ್ತು. ಅಂದು ಅವರ ಹೆಂಡತಿಯ ಸಹಾಯ ಪಡೆದು ಮೇಲೆದ್ದ ಆ ತಾತ ನೈಸರ್ಗಿಕ ಕರ್ಮಗಳನ್ನು ಮುಗಿಸಲು ಹೋದರು. ಎಲ್ಲವನ್ನೂ ಮುಗಿಸಿ ಹೊರಬಂದವರು ಕೈತೊಳೆದುಕೊಳ್ಳಲು ವಾಶ್ ಬೇಸಿನ್ ಹತ್ತಿರ ನಿಂತಿರಬಹುದೆಂದು ಕಾಣುತ್ತದೆ. ತಕ್ಷಣವೇ ಕುಸಿದು ಬಿದ್ದರು. ನಾವು ನಮ್ಮ ತಾತನ ಬಳಿಯಿದ್ದುದ್ದರಿಂದ ಅದರ ಅರಿವೇ ನಮಗಿರಲಿಲ್ಲ. ಆ ಅಜ್ಜಿ ’ಯಾಕೋ ನಮ್ಮನೆಯವರು ಕುಸಿದು ಕುಳಿತಿದ್ದಾರೆ ಅವರನ್ನು ತಂದು ಮಲಗಿಸಲು ಸಹಕರಿಸಿ’ ಎಂದು ನನ್ನನ್ನು ಮತ್ತು ನಮ್ಮ ಮಾವನನ್ನು ಕರೆದರು. ನಾವು ಮತ್ತಿಬ್ಬರು ವಾರ್ಡ ಬಾಯ್ಸ್ ಸಹಾಯ ಪಡೆದು ಆ ಅಜ್ಜನನ್ನು ತಂದು ಅವರ ಹಾಸಿಗೆಯ ಮೇಲೆ ಮಲಗಿಸಿದೆವು. ಆ ಅಜ್ಜ ತುಂಬಾ ನಿತ್ರಾಣಗೊಂಡಂತೆ ಕಾಣುತ್ತಿದ್ದರು. ನಾವು ಸಾವಧಾನವಾಗಿ ಅವರಿಗೆ ಗಾಳಿ ಹಾಕಿ ಡಾಕ್ಟರ್ ಗೆ ವಿಷಯ ಮುಟ್ಟಿಸಿದೆವು. ಅಯಪ್ಪನ ಸ್ಥಿತಿ ನೋಡಿದ ನಮ್ಮ ಅಜ್ಜಿ ’ಹೋಗಿ ಅವರ ಬಾಯಿಗೆ ನಿಮ್ಮ ಕೈಯಿಂದಲೆ ನೀರು ಬಿಡಿ’ ಎಂದು ಅವರ ಹೆಂಡತಿಗೆ ಹೇಳಿದರು. ನಾನು ಗರಬಡಿದವನಂತೆ ನಿಂತಿದ್ದೆ. ಎರಡು ಗುಟುಕು ನೀರು ಗುಟುಕಿಸಿದ ಆ ಜೀವ ದೇಹವನ್ನು ತೊರೆದಿತ್ತು. ಇದೇ ಮೊದಲು ನಾನು ಒಬ್ಬರು ಸಾಯುವುದನ್ನು ಕಣ್ಣಾರೆ ಕಂಡಿದ್ದು. ಅವರ ಕುಟುಂಬದ ಆಕ್ರಂದನ ನನ್ನ ಮನಸ್ಸನ್ನು ಕಲಕಿತು. ಅವರು ಆ ತಾತನ ಶವವನ್ನು ಆಸ್ಪತ್ರೆಯಿಂದ ಸಾಗಿಸುತ್ತಿದ್ದಂತೆ ನಮ್ಮ ಮನಸ್ಸು ತಡೆಯದೆ ನಮ್ಮ ತಾತನನ್ನು ಮತ್ತೊಂದು ವಾರ್ಡಿಗೆ ವರ್ಗಾಹಿಸಿ ಬಿಟ್ಟೆವು.

ಆ ದೃಶ್ಯ ಕಂಡ ನನ್ನ ಮನಸ್ಸು ಜರ್ಜರಿತಗೊಂಡಿತ್ತು. ಆ ಸಾವು ನನ್ನ ವೈಚಾರಿಕ ಮತ್ತು ವಾಸ್ತವದ ನೆಲೆಗಟ್ಟುಗಳನ್ನು ಅಲುಗಾಡಿಸುತ್ತಿತ್ತು. ’ಅಹಂ ಬ್ರಹ್ಮಾಸ್ಮಿ’ ಹಾಗೇ ಹೀಗೆ ಎಂಬ ಎಷ್ಟೆಲ್ಲಾ ಗಟ್ಟಿ ತಟಸ್ಥ ಭಾವಗಳಿದ್ದ ನಾನೇ ಇಷ್ಟು ಸೂಕ್ಷ್ಮವಾಗಿಬಿಟ್ಟೆನೆ ಎಂದೆನಿಸುತ್ತಿತ್ತು. ಸಾವು ಯಾವಾಗ ಬಂದರೂ ಅದು ಸಾವೇ. ವಯಸ್ಸಾದವರು ಸತ್ತರೆಂದ ಮಾತ್ರಕ್ಕೆ ಅದರಿಂದಾಗುವ ನೋವು ಮತ್ತು ದುಃಖಗಳೇನೂ ಕಡಿಮೆಯಲ್ಲ. ಒಂದು ಸಾವು ಒಂದು ತಲೆಮಾರಿನ ಕೊಂಡಿಯನ್ನು ಕಡಿದಂತೆಯೇ ಸರಿ. ಆ ಜನರೇಷನ್ ಗ್ಯಾಪ್ ನಮ್ಮನ್ನು ಕಾಡುತ್ತಲೇ ಇರುತ್ತದೆ. ’ಈ ಮನುಷ್ಯನ ಜೀವನ ಸಾವು ನೋವುಗಳಿಂದ ಮುಕ್ತವಾಗಿಬಿಡಲಿ ದೇವರೆ’ ಎಂದು ಮೊರೆಯಿಟ್ಟರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಈ ಎಲ್ಲಾ ವಿಷಯಗಳನ್ನು ನನ್ನಮ್ಮನ ಬಳಿ ಹೇಳಿ ಅವಳ ಮಡಿಲಲ್ಲಿ ಮುದುಡಿ ಮಲಗಿದೆ. ಅಮ್ಮ ಎಂದಳು "ಯಾಕೋ ಅಪ್ಪೀ ಚಿಕ್ಕ ಮಗುವಾಗಿಬಿಟ್ಟೆ, ನಮಗೆಲ್ಲಾ ಧೈರ್ಯ ತುಂಬುತ್ತಿದ್ದವನು ನೀನು, ಕಮ್ ಆನ್ ಚಿಯರ್ ಅಪ್ ಮೈ ಡಿಯರ್" ಎಂದು ಸಾಂತ್ವಾನ ಹೇಳಿದ ಮೇಲೆಯೆ ನಾನು ವಾಸ್ತವಕ್ಕೆ ಬಂದದ್ದು.

ಯಾವುದೇ ಸಂಬಂಧವಿಲ್ಲದ, ವಯಸ್ಸಾಗಿ ಸತ್ತ ಯಾರೋ ಒಬ್ಬರ ಸಾವೇ ಇಷ್ಟು ನೋವನ್ನು ಕೊಡುವಾಗ ಅಪಘಾತದಲ್ಲಿಯೊ, ಆತ್ಮಹತ್ಯೆ ಮಾಡಿಕೊಂಡೊ ಇಲ್ಲವೆ ಕೊಲೆಯಾಗುವ ಸಾವುಗಳು ಎಷ್ಟು ನೋವನ್ನು ಕೊಡಬಹುದು?? ಪ್ರಿಯ ಸ್ನೇಹಿತರೆ ನಿಮಗೇನು ನೀವು ಹೋಗಿಬಿಡುತ್ತೀರಿ ಆದರೆ ನಿಮ್ಮ ಸಾವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕೊಡುವ ನೋವು ಸಹಿಸಲಸಾಧ್ಯವಾದುದು. ಆದ್ದರಿಂದ ದುಡುಕುವ ಮುನ್ನ, ವಾಹನ ಚಲಾಯಿಸುವಾಗ ಒಮ್ಮೆ ಯೋಚಿಸಿ. ಜೀವನ ಅಮೂಲ್ಯವಾದುದು, ಅದನ್ನು ಮಾತ್ರ ಮರೆಯಬೇಡಿ.

- ಪ್ರಸಾದ್.ಡಿ.ವಿ.

Sunday 8 January 2012

ಬದುಕಾಯ್ತು ಮೂರಾಬಟ್ಟೆ



ತುತ್ತಗುಳ ಕಂಡ ಕಾಗೆ
ಕಾವ್ ಕಾವ್ ಎಂದು ಕೂಗಿ,
ತನ್ನ ಬಳಗವರಚಿ ಕರೆದು,
ತುತ್ತಗುಳ ಭಾಗ ಮಾಡಿ
ಗುಟುಕಿರಿಸಿರೆ...
ಪೊಳ್ಳು ಅಭಿಮಾನದಮಲೇರಿ
ಮನೆಗೆ ಕರೆದ
ಬಂಧುಬಳಗದವರನ್ನ
ಕಸಿದ ಹೀನ ಕೃತ್ಯವು,
ಕೂಡಿಟ್ಟ ಅನ್ನವನು
ಹಳಸಿ ಕೊಳೆಯಿಸಿ
ಅಹಾರವಾಯಿತದು
ಕಸದ ಬುಟ್ಟಿಗೆ..!
ಕಾಗೆಗಿಂತ ಕಡೆಯಾಯ್ತೆ,
ಎಲ್ಲಿಂದ ಎಲ್ಲಿಗ್ಹೊರಟೆ,
ಬದುಕಾಯ್ತೆ ಮೂರಾಬಟ್ಟೆ,
ಎಲೆ ಮಾನವ..!!!

ಮದ್ಯದಂಗಡಿ
ಜಾಡು ಹಿಡಿದು
ಕಂಠಪೂರ್ತಿ
ಶೇಂಧಿ  ಕುಡಿದು,
ಮತ್ತಷ್ಟು ಸಾಲ ಮಾಡಿ
ಹೆಂಡವೀರುವೆ,
ಹೆತ್ತಮ್ಮನ ಕರುಳ ಕುಯ್ದು,
ಹೆಂಡತಿಯ ಮಾನ ಕಳೆದು
ಹರಾಜಿಗಿಟ್ಟೆಯೋ,
ಮಕ್ಕಳವು ಬೀದಿ ಪಾಲು
ತಿರಿದುಣ್ಣಲು ಸಾಲು ಸಾಲು,
ಕೈಯಿಲಿ ಹಿಡಿದು ಮುರುಕುತಟ್ಟೆ,
ಬದುಕಾಯ್ತು ಮೂರಾಬಟ್ಟೆ,
ಎಲೆ ಮಾನವ...!!!

ಅದೃಷ್ಟದ ಆಟ ಕಟ್ಟಿ
ಕುದುರೆಯ ಬಾಲವಿಡಿದು,
ಊರೂರು ಸುತ್ತು ಹೊಡೆದು,
ಲಾಟರಿಯ ಸಂಖ್ಯೆ ಹಿಡಿದು,
ಗೆಲುವ ಕುದುರೆ
ಕಾಲು ಮುರಿಯೆ,
ಅದೃಷ್ಟ ಸಂಖ್ಯೆ
ಮುರುಗಿ ತಿರುಗೆ,
ಹೆಂಡತಿಯ ಮಾಂಗಲ್ಯ ಕಸಿವೆ
ಮಗುವಿನ ಕಾಲ್ಗೆಜ್ಜೆ ಕಸಿವೆ,
ಬದುಕಿದು ಬಂಗಲೆಯಿಂ
ಬೀದಿಯೆಡೆಗೆ..!
ಎಲ್ಲಿಂದ ಎಲ್ಲಿಗ್ಹೊರಟೆ
ಬದುಕಾಯ್ತು ಮೂರಾಬಟ್ಟೆ,
ಎಲೆ ಮಾನವ..!!!

ಮಕ್ಕಳ ಪಾಡದು
ಹೇಳತೀರದು,
ಸುಪ್ಪತ್ತಿಗೆಯಿಂ
ತೊಟ್ಟಿಯೆಡೆಗೆ,
ಅರಳುವ ಮೊದಲೆ
ಬಸವಿಳಿದ ಬದುಕಿಡಿದು,
ಭಿಕ್ಷೆಯ ಅನ್ನಕ್ಕೆ ಬಿದ್ದು
ಹಾಡಿ ಹೊರಟಿವೆ,
"ಹೇ ದೇವಾ,
ಚಿನ್ನದ ತೊಟ್ಟಿಲ ಹಂದಿಗೆ
ಮರಿಯಾಗುವುದಕ್ಕಿಂತ,
ಮುರಿದ ಕೊಟ್ಟಿಗೆಯ
ಹಸುವಿಗೆ ಕರುವಾಗಿ ಮಾಡೆಮ್ಮ"..!

- ಪ್ರಸಾದ್.ಡಿ.ವಿ.

Thursday 5 January 2012

ಕ್ಯಾಂಟೀನ್ ಪುರಾಣಗಳು

 ಸಾಮಾನ್ಯವಾಗಿ ಕಾಲೇಜ್ ನ ಕ್ಯಾಂಟೀನ್, ಕ್ಯಾಂಪಸ್ ಕಾರಿಡಾರ್ ಮತ್ತು ಪಾರ್ಕಿಂಗ್ ಲಾಟ್ ಗಳಲ್ಲಿ ನಡೆಯುವ ಸನ್ನಿವೇಶಗಳಿಗೆ ಹಾಸ್ಯದ ಲೇಪನ ನೀಡಿ ನಿರೂಪಿಸುವ ಒಂದು ಸಣ್ಣ ಪ್ರಯತ್ನವೇ "ಕ್ಯಾಂಟೀನ್ ಪುರಾಣ" ಸೀರೀಸ್. ಈ ಪುರಾಣದಲ್ಲಿ ಬರುವ ಸನ್ನಿವೇಶಗಳು ಕಾಲ್ಪನಿಕವಾಗಿಯೂ ಇರಬಹುದು, ನಿಜವಾಗಿಯೂ ಇರಬಹುದು. ಒಂದು ಪುರಾಣಕ್ಕೂ ಮತ್ತೊಂದು ಪುರಾಣಕ್ಕೂ ಸಂಬಂಧವಿರುವುದಿಲ್ಲ. ಪಾತ್ರಧಾರಿಗಳಾಗುವವರು ಬೇಸರಿಸದೆ ಎಂಜಾಯ್ ಮಾಡಿ. ಲಾಫ್ಟರ್ ಟಾನಿಕ್ ನೀಡುವ ಒಂದು ಪ್ರಾಮಾಣಿಕ ಪ್ರಯತ್ನವಿದು.

ಕ್ಯಾಂಟೀನ್ ಪುರಾಣ-೧

ಅಂದು ಎರಡು ಪೀರಿಯಡ್ ಕ್ಲಾಸ್ ನಲ್ಲಿ ಕೂತದ್ದು ಯುಗದಂತೆ ಭಾಸವಾಗಿತ್ತು. ಬೋರ್ ಹೊಡೆಯುತ್ತಿದ್ದರಿಂದ ಕ್ಲಾಸ್ ನಲ್ಲಿದ್ದರೂ ಡೋರ್ ಓಪನ್ ಆಗಿದ್ದರಿಂದ ಕಾರಿಡಾರ್ ನಲ್ಲಿ ಅಡ್ಡಾಡುವ ಹುಡುಗಿಯರನ್ನು ಸಿನ್ಸಿಯರ್ ಆಗಿ ನೋಡುತ್ತಾ ಕುಳಿತಿದ್ದೆ. ಏಕೆಂದರೆ ನಮ್ಮ ಕ್ಲಾಸಿನ ಫಿಗರ್ ಗಳನ್ನು ದಿನವೂ ನೋಡಿ-ನೋಡಿ ಬೋರ್ ಹೊಡೆದು ಹೋಗಿತ್ತು. ನಮ್ಮ ಕ್ಲಾಸ್ ನ ಹುಡುಗಿಯರು ಶಾಕಿಣಿ, ಡಾಕಿನಿಯರ ತರ ಕಾಣಿಸುತ್ತಿದ್ದರು ಈಗೀಗ..!!! ಮೂರನೆ ಕ್ಲಾಸ್ ಗೆ ಒಳಗೆ ಕುಳಿತಿರಲಾಗದೆ ಚೇತನ್ ಗೆ ಪ್ರಾಕ್ಸಿ ಹಾಕಲು ಹೇಳಿ ಬಂಕ್ ಮಾಡಿ ಕ್ಲಾಸ್ ನ ಹೊರಬಿದ್ದೆ. ಹೊರಗೆ ಬರುತ್ತಿದ್ದಂತೆ ನಮ್ಮ ಕ್ಲಾಸ್ ನ ’ಶಾರುಖ್ ಖಾನ್’ ಪ್ರಶಾಂತ್ ಎದುರುಗೊಂಡ.
"ಏನೋ ಕ್ಲಾಸ್ ಬಂಕಾ? ಯಾರದು ಕ್ಲಾಸ್ ಈಗ?" ಎಂದ.
ನಾನು "ಅದೇ ಮಗ ಬೋರಿಂಗ್ ಕ್ಲಾಸ್, ಆ ಕ್ಲಾಸ್ ನಲ್ಲಿ ಕುಳಿತು ಮೊಳೆ ಹೊಡೆಸಿಕೊಳ್ಳುವುದಕ್ಕಿಂತ ನೇಣು ಹಾಕ್ಕೊಳ್ಳೋದೆ ವಾಸಿ ಅಂತ ಹೊರಬಂದೆ" ಎಂದೆ.
"ಲೇ ನಾನು ತಿಂಡಿ ತಿಂದಿಲ್ಲ ಮಚ್ಚಾ, ಕ್ಯಾಂಟೀನ್ ಗೆ ಬರ್ತೀಯಾ ಸುಮ್ಮನೆ ಕಂಪೆನಿ ಕೊಡುವಂತೆ" ಎಂದವನು ಕರೆದ.
"ಮಚ್ಚಾ ಈ ಧನ್ಯ ಆವಾಗಿಂದ ಕಾರಿಡಾರ್ ನಲ್ಲೆ ಅಲೆಯುತ್ತಿದ್ದಾಳೆ, ಇವತ್ತು ಮಸ್ತಾಗಿ ಕಾಣ್ತಾವ್ಳೆ, ಸ್ವಲ್ಪ ಹೊತ್ತು ಬಿಟ್ಟು ಹೋಗೋಣ ಮಗಾ" ಎಂದೆ.
"ಅಯ್ಯೋ ಲೋಫರ್ ಅವಳೋ ೭ ಅಡಿ, ನೀನು ಐದೂವರಡಿ(5.8), ನೀನು ಅವಳ ಜೊತೆ ನಿಲ್ಲೋಕು ಸ್ಟೂಲ್ ಬೇಕು ಮುಚ್ಕೊಂಡು ನನ್ನಜೊತೆ ಬಾ" ಎಂದು ಎಳೆದುಕೊಂಡು ಹೋದ.
ನಾನು ಮನಸ್ಸಿನಲ್ಲಿಯೇ ಆಕಾಶಕ್ಕೆ ಏಣಿ ಹಾಕಿದ್ರೂ ಸರಿಯೇ, ಸ್ಟೂಲ್ ಸಹವಾಸ ಬೇಡವೆಂದು ಅವನೊಂದಿಗೆ ಕ್ಯಾಂಟೀನ್ ಕಡೆ ಹೊರಟೆ.

ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಆದ ನಮಗೆ ಡ್ರೆಸ್ ಕೋಡ್ ಆಗಿ ಯುನಿಫಾಂ ಮಾಡಿದ್ದರಿಂದ ಬುಧವಾರ ಮತ್ತು ಶನಿವಾರ ಬಿಟ್ಟು ಉಳಿದ ದಿನಗಳಲ್ಲಿ ಕಲರ್ಸ್ ಇದ್ರೂ ಕಾಲೇಜ್ ಕಲರ್ ಲೆಸ್ ಆಗಿತ್ತು..:( ಆದ್ರೆ ಆವತ್ತು ಬುಧವಾರವಾದ್ದರಿಂದ ಕಣ್ಣಿಗೆ ಕೂಲಿಂಗ್ ಗಾಗಲ್ಸ್ ಹಾಕದೆ ಕಣ್ಣು ತಂಪಾಗಿತ್ತು...;)

ಪಾರ್ಕಿಂಗ್ ಲಾಟ್ ನಲ್ಲಿ ಹಾದು ಹೋಗುವಾಗ ಜೂನಿಯರ್ ಆದ ನಿಶಾ ತನ್ನ ಗೆಳತಿಯೊಂದಿಗೆ "ಹೇ ಯು ನೊ ಐಯಂ ಟ್ರೈಯಿಂಗ್ ಟು ಹ್ಯಾವ್ ಜೀರೋ ಫಿಗರ್" ಎಂದುಲಿದಳು. ನಾನು ಧನಿಯೇರಿಸಿ "ಸೊಂಟ ಹುಳುಕೀತು ಹುಷಾರು, ಕರೀನಳ ವೇಯ್ಟ್ ತಾಳಲಾಗದೆ ಅವಳ ಸೊಂಟ ಮುರಿಯಿತಂತೆ" ಎಂದೆ.
ಪಾಪದ ಹುಡುಗಿ ಹೆದರಿ, ಆ ಕಡೆಗೆ ದೂರ ಸರಿದುಬಿಟ್ಟಳು.
ಈ ಕಡೆ ಪ್ರಶಾಂತ "ಅಯ್ಯೋ ನನ್ನ ಮಗನೆ ನೀನು ಉದ್ಧಾರ ಆಗಲ್ಲ" ಎಂದ.
ನಾನೂ ಜೋರಾಗಿ ನಗುತ್ತಾ, "ಅಲ್ವಾ, ನಂಗೂ ಹಂಗೇ ಅನ್ಸುತ್ತೆ ಶಿಷ್ಯ" ಎಂದೆ...!
ಅಷ್ಟರೊಳಗೆ ಪ್ರಶಾಂತನ ಸಾಮ್ಸ್(ಸಮಂತಾ) ಒಂದು ಚಾಕೊಲೇಟ್ ಕೋನ್ ಹಿಡಿದು ಒಂದು ಪ್ಲೇಟ್ ಗೋಬಿಯನ್ನು ತನ್ನ ಮುಂದಿಟ್ಟುಕೊಂಡು ತನ್ನ ಫ್ರೆಂಡ್ಸ್ ಜೊತೆ ಕುಳಿತಿರುವುದು ಕಾಣಿಸಿತು.
"ಲೋ ಮಗಾ ನಿಮ್ಮುಡ್ಗಿ ಐಸ್ ಕ್ರೀಂ ಹಿಡ್ಕೊಂಡವ್ಳೆ, ಐಸ್ ಕ್ರೀಂ ಕರಗಿ ಹೋದೀತಲೆ" ಎಂದು ಪ್ರಶಾಂತನ ಬೆನ್ನಿಗೊಂದು ಪೆಟ್ಟು ಕೊಟ್ಟೆ.
ಈ ಪ್ರಶಾಂತ ಅವಳ ಅಟ್ರಾಕ್ಷನ್ ಸೆಳೆಯಲು ತನ್ನ ಸ್ಯಾಂಸಂಗ್ ಸೆಲ್ ಅನ್ನು ಯಾರೊಂದಿಗೋ ಮಾತನಾಡುವಂತೆ ಹಿಡಿದುಕೊಂಡ.
ಅಲ್ಲಿ ಪ್ರಶಾಂತನ ಇನ್ನೊಬ್ಬ ಸ್ನೇಹಿತ ಲ್ಯಾಬ್ ರೆಕಾರ್ಡ್ ಬರೀತಾ ಕುಳಿತಿದ್ದ. ಪ್ರಶಾಂತ ಎರಡು ಇಡ್ಲಿ ತೆಗೆದುಕೊಂಡ, ನಾನು ಸ್ಲೈಸ್ ತೆಗೆದುಕೊಂಡು ಅವಳು ಕಾಣಿಸುವಂತೆ ಪ್ರಶಾಂತನ ಫ್ರೆಂಡ್ ಟೇಬಲ್ ಗೆ ಹೋಗಿ ಕುಳಿತೆವು.
ಇವನು ಇಡ್ಲಿ ತಿನ್ನುತ್ತಾ ಫೋನ್ ನಲ್ಲಿ "ಹಲೋ ಮಗಾ, ಕ್ಯಾಂಟೀನ್ ನಲ್ಲಿದ್ದೀನಿ ಕಣೋ ನಮ್ಮುಡ್ಗಿಗೆ ಐಸ್ ಕ್ರೀಂ ತಿನ್ನಿಸ್ತಿದ್ದೀನಿ" ಎಂದ ಅವಳಿಗೆ ಕೇಳಿಸುವಂತೆ.
ಅಸಲಿಗೆ ಅವನಿಗೆ ಯಾವುದೇ ಕರೆಯೂ ಇರಲಿಲ್ಲ, ಆ ಹುಡುಗಿಯನ್ನು ಇವನ ಕಡೆ ನೋಡುವಂತೆ ಮಾಡಬೇಕಿತ್ತು ಅಷ್ಟೆ..!!
ಅವಳು ಇವನ ಮಾತನ್ನು ಕೇಳಿ, ಆ ಕಡೆ ಮುಖ ಮಾಡಿ ಮುಗುಳು ನಗುತಿದ್ದಳು. ಅದನ್ನು ನೋಡಿದ ಇವನು ಫುಲ್ ಜೂಮ್ ನಲ್ಲಿದ್ದ.
ಪ್ರಶಾಂತನ ಸ್ನೇಹಿತ, "ಲೋ ಒಂದು ಐಸ್ ಕ್ರೀಂ ತಿನ್ನಲು ಎಷ್ಟೊತ್ತು ಬೇಕು ಗುರು?" ಎಂದು ಕೇಳಿದ.
"ಚಿಕ್ಕ ಮಗುವಾದ್ರೂ ೩ ರಿಂದ ೫ ನಿಮಿಷ ಸಾಕು ಗುರು" ನಾನಂದೆ.
"ಅವಳು ನೋಡು ಮಗಾ, ಒಂದೂವರೆ ಗಂಟೆಯಿಂದ ಅದೇ ಐಸ್ ಕ್ರೀಂ ಇಡ್ಕೊಂಡು ಕೂತಿದ್ದಾಳೆ. ಅಲ್ಲ ನನಗೊಂದು ಅನುಮಾನ ಅವಳು ಪ್ರತಿ ಸಲ ತಿನ್ನುವಾಗ್ಲೂ ಆ ಐಸ್ ಕ್ರೀಂನ ಚಾಕೊಲೇಟ್ ಅಟ್ ಲೀಸ್ಟ್ ಅವಳ ನಾಲಿಗೆಗೆ ಟಚ್ ಆಗ್ತಿದ್ಯೋ ಏನೋ ಅಂತ? ನನಗನ್ಸುತ್ತೆ ಅವಳು ತಿನ್ನೋಕು ಮುಂಚೆನೇ ಆ ಐಸ್ ಕ್ರೀಂ ಕರಗಿ ಹೋಗುತ್ತೆ ಅಂತ" ಎಂದು ಗೊಳ್ ಎಂದು ನಗಲಾರಂಭಿಸಿದ.
ನಾನೂ ಬಿದ್ದು ಬಿದ್ದು ನಗುತ್ತಾ, "ಪ್ರಶಾಂತ ಇದಕ್ಕಿಂತ ಅವಮಾನ ಬೇಕಾ ನಿಂಗೆ, ಕೊತ್ತಂಭರಿ ಗಿಡಕ್ಕೆ ಹೋಗಿ ನೇಣು ಹಾಕ್ಕೋ" ಎಂದೆ.
ಪ್ರಶಾಂತನ ಫ್ರೆಂಡ್ ನನ್ನ ಕೈಮೇಲೆ ಹೊಡೆದು ನನ್ನನ್ನು ಅಭಿನಂದಿಸಿದ.
ಇವನು ಹುಸಿ ಕೋಪ ನಟಿಸುತ್ತಾ, "ಮಕ್ಳ ಅದು ಅವಳ ಯುನೀಕ್ ಸ್ಟೈಲ್ ಕಣ್ರೊ, ಒಂದೂವರೆ ಗಂಟೆ ಯಾರಾದ್ರೂ ಐಸ್ ಕ್ರೀಂ ತಿಂತಾರಾ? ನೋಡು ನಮ್ಮುಡ್ಗಿ ತಿಂತಾಳೆ ಆ ಐಸ್ ಕ್ರೀಂ ಕೂಡ ಕರಗದಂತೆ ನೋಡ್ಕೊಳ್ತಾಳೆ ಗೊತ್ತಾ? ಹೆಂಗೆ" ಎಂದು ತನ್ನ ಬೆನ್ನನ್ನು ತಾನೆ ತಟ್ಟಿಕೊಂಡ.
ಮತ್ತೂ ಮುಂದುವರೆದು "ಜೊತೆಗೆ ಗೋಬಿ ಇದೆಯಲ್ಲ ಮಗಾ, ಐಸ್ ಕ್ರೀಂ ತಿನ್ನೋದು ಒಂದು ಪೀಸ್ ಗೋಬಿ ತಿನ್ನೋದು ಹಾಗೆ ತಿನ್ನೋದು ಅವಳು" ಎಂದ.
"ಲೋ ಅವಳು ಹೀಗೇ ತಿಂತಿದ್ರೆ ಒಂದಿನ ಇನ್ವಿಸಿಬಲ್ ಆಗ್ಬಿಡ್ತಾಳೆ, ಈಗಿರೋದೆ ಸ್ಕೆಲಿಟನ್ ತರ" ಎಂದು ಪ್ರಶಾಂತನ ಫ್ರೆಂಡ್ ಬೊಬ್ಬಿಟ್ಟ.
"ಲೋ ಅವಳು ನನ್ನ ಪ್ರೀತಿ ಒಪ್ಕೊಂಡ್ಮೇಲೆ ನಾನೇ ತಿನ್ಸೋದಲ್ವ, ಆಗ ತಯಾರಿ ಮಾಡ್ತೀನಿ ಬಿಡು" ಎಂದ ಪ್ರಶಾಂತ.
ನಾವಿಬ್ಬರು "ಹೋ" ಎಂದು ಹೋಕಾರ ಎಳೆದೆವು.
"ಆಮೇಲೆ ಅವಳಿಂದೆ ತಿರುಗಿ ತಿರುಗಿ ದೇವದಾಸ್ ಅಗ್ಬಿಟ್ಟೀಯ ಪ್ರಶಾಂತ, ಮೊದಲೆ ನಿಮ್ಮ ಶಾರುಖ್ ಆ ಫಿಲ್ಮ್ ಹೀರೊ" ಎಂದೆವು ನಾವು.
"ಅಂತದ್ದೆಲ್ಲ ಸೀನ್ ಇಲ್ಲ, ನಾನ್ಯಾವಗ್ಲೂ ಲವರ್ ಬಾಯ್" ಎಂದ ಪ್ರಶಾಂತ.

ಹೆಂಗೊ ಸಮಂತಾ ಐಸ್ ಕ್ರೀಂ ತಿಂದು ಮುಗಿಸಲು ಎರಡು ಗಂಟೆ ತೆಗೆದುಕೊಂಡಳು..!
ಅವಳಿಗೆ ಇವನು ಐಸ್ ಕ್ರೀಂ ತಿನ್ನಿಸಿ, ನಾವು ಇವನಿಗೆ ಇಡ್ಲಿ ತಿನ್ನಿಸುವುದರೊಳಗೆ ಮುಂದಿನ ಪಿರಿಯಡ್ ಗೆ ಐದು ನಿಮಿಷವಿತ್ತು ಅಷ್ಟೆ.
"ಹೇ ಬಾರ್ಲೆ ಮುಂದಿನ ಕ್ಲಾಸ್ ಗೆ ಲೇಟಾಗುತ್ತೆ" ಎಂದು ಅವನ ಕೈಯಿಡಿದು ಎಳೆದೆ, ಇಬ್ಬರೂ ಕ್ಲಾಸ್ ಕಡೆಗೆ ಓಡಿದವು.

- ಪ್ರಸಾದ್.ಡಿ.ವಿ. 
ಚಿತ್ರಕೃಪೆ: ಅಂತರ್ಜಾಲ (ವರುಣ್)