ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 29 November 2012

ಅರಿಷಡ್ವರ್ಗಗಳ ಉರಿಕಾರುತ್ತವೆ, ಉರಿಯುತ್ತವೆ,
ದೇಹವನ್ನೇ ದಹಿಸುತ್ತವೆ,
ನಿಗ್ರಹಿಸಿದವನು ಸಂತ,
ನಿಗ್ರಹಿಸದವಗವು ಸ್ವಂತ!
ಸೊಂಪಾದ ಬತ್ತಿಗೆ ಕಿಡಿಯಿಟ್ಟವನು
ಅವನೋ ಆಟವಾಡುತ್ತಾನೆ!
ಉರಿದವರು ಮಾತ್ರ ನಾವೇ!
ಅರಿಷಡ್ವರ್ಗಗಳ ಉರಿಗೆ!

ದಗದಗಿಸಿ ಉರಿದು
ಸ್ಖಲಿಸಿ ಉಗಿದದ್ದಷ್ಟೇ
ಪ್ರೇಮಕ್ಕೆ ಹಿಡಿಯಷ್ಟು ಮಣ್ಣು!
ಕಾಮಕ್ಕೆ ನೂರೆಂಟು ಕಣ್ಣು!
ಕ್ರೋಧದ ದಾವಾಗ್ನಿಗೆ
ಬೆಂದುಹೋಯಿತು ಕುರುವಂಶ
ಕಾರಿಕೊಂಡವನು ಸುಯೋಧನ
ಪಡೆದದ್ದು ಏನು?

ಶಕುನಿಯ ಕುಯುಕ್ತಿಗೆ
ಸುಯೋಧನನ ದಾಹ ಬೆಸೆತ!
ರಾಜ್ಯದಾಸೆಯ ಲೋಭಕ್ಕೆ
ಬರೆಸಿಕೊಂಡ ಭಾರತ!
ತಾರುಣ್ಯವತಿ ದ್ರೌಪದಿ,
ಏನ ಕಂಡನೋ ಕೀಚಕ!
ಮೋಹಕ್ಕೆ ಮತ್ತೊಂದು ಬಲಿ
ಬಲ ಭೀಮನ ಕೈಯ್ಯಲ್ಲಿ!

ಋಷಿಗಳ ಕೊರಳ್ ಹಿಡಿದು
ಗೋಪಿಕೆಯರ ಸೆರೆ ಹಿಡಿದ
ಅದಮ ನರಕನ ಬಲಿ ತೆಗೆದದ್ದು
ಮದ, ಭಾಮೆಯು ಸುಳಿಮದ್ದು!
ಶಕುನಿಯ ಮಾತ್ಸರ್ಯವು
ಕುರುಕ್ಷೇತ್ರಕೆ ಧಾಳ ಹೂಡಿ,
ಅವನಾದರೂ ಉಳಿದನೆ?
ಅವನೂ ಹಳಿದು ಹತನಾದವನೇ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Monday, 26 November 2012

ಈ ಹೃದಯ ಹಾಡಿದೆ!ನಲ್ಮೆಯ ಗೆಳತಿ,

ಇದೇನು ಕಾರಣವಿಲ್ಲದೆ ಪತ್ರ ಅನಾಮಧೇಯನಿಂದ, ಎಂದು ಬೇಸರಿಸದಿರು. ಹೆಸರು ನೋಡಿ ಎಸೆಯದಿರಲೆಂದೇ ಹೆಸರ ಮರೆ ಮಾಚಿದ್ದೇನೆ. ಪತ್ರ  ಓದುತ್ತಿದ್ದಂತೆ ಹೆಸರು ನಿನಗೇ ತಿಳಿಯುತ್ತದೆ ಎಂಬುದು ನನ್ನ ನಂಬಿಕೆ, ಮುದ್ದು ಬಂದರೆ ಮುದ್ದಿಸು ಸಾಕು! ಪ್ರೀತಿ ಹರಿವ ನೀರು ಅದನ್ನು ತಡೆವವರಾರು ಎಂದು ಹರಿದಿದ್ದೇ ನನ್ನ ತಪ್ಪಾಯ್ತು ಎನಿಸುತ್ತದೆ. ನೆನಪು ಉಡುಗೊರೆಯಾಯ್ತು, ವಿರಹ ಆಸರೆಯಾಯ್ತು, ಬರವಣಿಗೆಯೊಂದೇ ಆಸ್ತಿಯಾದದ್ದು!

ಬಸ್ ನಲ್ಲಿನ ಜೊತೆ ಪ್ರಯಾಣದೊಂದಿಗೆ ಮೊದಲ್ಗೊಂಡ ಸ್ನೇಹ, ಎದುರಿಗೆ ಸಿಕ್ಕಾಗ ಹೊರಬೀಳುತ್ತಿದ್ದ ಹಾಯ್-ಹಲೋಗಳು ಮತ್ತು ಕಣ್ಣೋಟಗಳಲ್ಲಿ ಪ್ರೀತಿಯಾಗಿ ಬೆಳೆಯುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಪ್ರೀತಿಯಲ್ಲಿ ನನಗಿನ್ನೂ ಅರ್ಥವಾಗದ ಸಂಗತಿ ಎಂದರೆ ನಿರುಪದ್ರವಿಗಳು ನಾವು, ನಮ್ಮ ಪ್ರೀತಿಗೇ ಇಂತಹ ಅಡೆತಡೆಗಳು ಬರಬೇಕಾ? ನಿನ್ನ ನೆನಪಾದಾಗಲೆಲ್ಲಾ ಆ ವಿಧಿಯನ್ನು ಅದೆಷ್ಟು ಶಪಿಸಿದ್ದೇನೋ? ಆದರೆ ಅವನಿಗೆ ಮಾತ್ರ ಸ್ವಲ್ಪವೂ ತಟ್ಟಿದಂತೆ ಕಾಣುತ್ತಿಲ್ಲ!

ನಿನಗೆ ಕಾಡುತ್ತಿರಬಹುದು, ಒಂದೂವರೆ ವರ್ಷ ಒಂದೂ ಮಾತನಾಡದೆ ದೂರ ಉಳಿದವನು, ಹುಟ್ಟುಹಬ್ಬದಂದು ಶುಭಾಷಯ ತಿಳಿಸಲೂ ನೆನಪಿಸಿಕೊಳ್ಳದವನು ಈಗ್ಯಾಕೆ ಬಂದ ಎಂದು? ಎಲ್ಲದಕ್ಕೂ ಕಾರಣಗಳಿಲ್ಲವೆಂದಲ್ಲ ಆದರೆ ನಿನಗೆ ಆ ಕಾರಣಗಳನ್ನು ಹೇಳಲಾರೆ. ನಿನ್ನ ಜೀವನದ ಬಗ್ಗೆ ನನಗಿದ್ದ ಕಾಳಜಿ ನನ್ನನ್ನು ನನ್ನವೇ ಊಹೆಗಳಲ್ಲಿ ತಳ್ಳಿಬಿಟ್ಟಿತ್ತು. ನಿನ್ನ ನೆನಪಾದಗಾಲೆಲ್ಲ ನೀ ಕೈ ಹಿಡಿದು ನಡೆದ ಈ ಕೈಗಳನ್ನು ಎದೆಗೊತ್ತಿ ಮಲಗಿಬಿಡುತ್ತಿದ್ದೆ.

ಇಷ್ಟೆಲ್ಲಾ ಯೋಚಿಸಿದ ನಂತರ ನೀನು ಸಂತೋಷವಾಗಿರಬೇಕಾದರೆ ನಾನು ದೂರವಿರಬೇಕು ಎಂಬ ನಿರ್ಧಾರಕ್ಕೆ ನನ್ನ ಮನಸ್ಸು ಬಂದುಬಿಟ್ಟಿತ್ತು. ಆ ನಿರ್ಧಾರಕ್ಕೆ ಲಾಜಿಕ್ ಹುಡುಕಬೇಡ, ನನಗೂ ಇನ್ನೂ ಸಿಕ್ಕಿಲ್ಲ! ಒಂದೂವರೆ ವರ್ಷಗಳ ನಂತರ ಉಳಿದಿರುವ ಆ ಒಂದು ಸಾಲ ನನ್ನನ್ನು ಮತ್ತೆ ನಿನ್ನ ಮುಂದೆ ನಿಲ್ಲಿಸುತ್ತಿದೆ. 'ನೀನು ಚೆನ್ನಾಗಿರುವುದನ್ನು ನೋಡಲು ನಾನು ಯಾವ ನೋವಾದರೂ ಸಹಿಸುತ್ತೇನೆ' ಎಂದು ಬಂದ ನನ್ನ ಉದ್ವೇಗದ ಮಾತಿಗೆ ನಿನ್ನ ಕಣ್ಣುಗಳಲ್ಲಿ ಇಣುಕಿದ ಆ ಮುತ್ತು ಹನಿಗಳು ಅವುಗಳಲ್ಲಿನ ಪ್ರೀತಿ, ಆ ನಿನ್ನ ನೋಟ! ನನ್ನ ಜೀವನ ಪರ್ಯಂತ ನಿನ್ನ ಪ್ರೀತಿಸಿದರೂ ಸವೆಯದ ಸಾಲಗಾರನನ್ನಾಗಿ ಮಾಡಿವೆ. ಸಾಲಗಾರನಾಗಿ ಸಾಯಲಾರೆ! ದಯವಿಟ್ಟು ನನ್ನ ಪ್ರೀತಿಯನ್ನು ಮತ್ತೆ ಅಪ್ಪಿ ಮುದ್ದಿಸು ಗೆಳತಿ! ಜೀವದ ಪರ್ಯಂತ ಕಾವಲಿರುತ್ತೇನೆ.

ನಿನ್ನ ಸ್ನೇಹ, ನಿನ್ನ ಒಡನಾಟ, ನಿನ್ನ ನಗು, ಆ ನಿನ್ನ ಪುಟ್ಟ ಪುಟ್ಟ ಭಯಗಳು ನನ್ನನ್ನು ಈಗಲೂ ಕಾಡುತ್ತಿವೆ. ಉಸಿರು ಬಿಗಿ ಹಿಡಿದು, ನಿನ್ನ ಅಪ್ಪಿ ಲಾಲಿ ಹಾಡಬೇಕು ಎನ್ನಿಸುತ್ತದೆ. ಮಧ್ಯ ರಾತ್ರಿಯಲಿ ನೀನು ಮಗುವಂತೆ ನಿದ್ರಿಸುವುದನ್ನು ನೋಡಬೇಕೆನಿಸುತ್ತದೆ. ಬೆಳಗಿನ ಮುಂಜಾನೆಗೆ ನಿನ್ನ ಕಿವಿಯಲ್ಲಿ ಪಿಸುಗುಟ್ಟಿ ಎಬ್ಬಿಸಿದಂತೆ ಕನಸ್ಸು ಬೀಳುತ್ತದೆ. ಎಲ್ಲದಕ್ಕೂ ಕಾರಣ ಹುಡುಕುತ್ತಾ ಹೋದರೆ ಮತ್ತೆ ಮನಸ್ಸು ನಿನ್ನಲ್ಲಿಯೇ ಬಂದು ನಿಲ್ಲುತ್ತದೆ. ಉತ್ತರ ಹುಡುಕುವುದನ್ನು ನಿಲ್ಲಿಸುತ್ತೇನೆ, ದಾರಿದೀಪವಾಗಿ ನೀ ಬರುವೆಯಾ? ಪ್ರೀತಿಯ ಸೆಲೆ ಬತ್ತದಂತೆ ಕಾಯುವೆಯಾ?

ಇಂತಿ (ನಿನ್ನ) ಗೆಳೆಯಾ!


- ಪ್ರಸಾದ್.ಡಿ.ವಿ

ಈ ಪತ್ರವು ’ಕನ್ನಡ ಪ್ರಭ’ ದಲ್ಲಿ ಡಿಸೆಂಬರ್ ೨೨ರ ಬೈಟೂ ಕಾಫಿಯ ’ಮಕರಂದ’ ಆವೃತ್ತಿಯಲ್ಲಿ ಪ್ರಕಟಿತವಾಗಿದೆ.


ಚಿತ್ರ ಕೃಪೆ: ಅಂತರ್ಜಾಲ

Sunday, 11 November 2012

ಹಚ್ಚೋಣ ಹಣತೆಯನ್ನು


ಹಚ್ಚೋಣ ಹಣತೆಯನ್ನು,
ಹಾದಿಗೂ ಬೀದಿಗೂ,
ಓಣಿಗೂ ಕೋಣೆಗೂ,
ತಮವನ್ನು ತೊಡೆವ,
ದೂರದೃಷ್ಟಿಯ ಹಡೆವ,
ದಿವ್ಯಜ್ಯೋತಿಯ ದೀವಿಗೆಯನು!

ಹಚ್ಚೋಣ ಹಣತೆಯನ್ನು,
ಕೋಶ-ಕೋಶದೊಳಗೆ,
ಅಂತರಂಗನಾತ್ಮದೊಳಗೆ,
ತೋಮರದಿ ತಿವಿದು, ರಕುತವನೇ ಬಸಿದ
ಮಾನವನ ಮನಶ್ಶುದ್ಧಿಗೆ
ಜ್ಞಾನಜ್ಯೋತಿಯ ದೀವಿಗೆಯನು!

ಹಚ್ಚೋಣ ಹಣತೆಯನ್ನು,
ಅಂಧತೆಯ ನೆರಳೊಳಗೂ,
ನೋಡಲಿ ನಮ್ಮ ಕಣ್ಣು,
ಸೇರಿದ ಮೇಲೂ ಈ ದೇಹ
ಭೂದೇವಿಯ ಮಣ್ಣು,
ಹಚ್ಚೋಣ ಬನ್ನಿರೈ ಬನ್ನಿ
ತೇಜೋರೂಪಿ ದೀಪ್ತಿಯನ್ನು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 3 November 2012

ಉಚ್ಛ್ವಾಸ-ನಿಶ್ವಾಸದೊಳಗೆ


ಉಸಿರಾಟದಿ ಒಳ ಸೇರಿ
ಶ್ವಾಸ ನಾಳದೊಳಿಳಿದು
ದೇಹ ಸೇರಿದ ಪ್ರಾಣವಾಯು,
ಹೊರಗೆ ಹಾರಿದಿಂಗಾಲದನಿಲ,
ಊದಿಕೊಂಡಿತ್ತು ಶ್ವಾಸನಾಳ!
ಉಚ್ಛ್ವಾಸ-ನಿಶ್ವಾಸಗಳಿವು,
ಜೀವದಲ್ಲಷ್ಟೆ ಅರಳುವವು!

ದೇಹದಲ್ಲಿ ಪ್ರಾಣವಾಯುವನ್ನು
ಬೆರೆಸಲೆಂದೇ ಹೃದಯ ತಾ ಬಡಿಯುತ್ತದೆ!
ರಕ್ತದೊಳ ಪ್ರಾಣವಾಯು
ದೇಹದಣುವಣುವನ್ನೂ ಸೇರಿದರೆ ಲಬ್!
ಇಂಗಾಲದನಿಲ ಹೊತ್ತುತರುವಾಗ ಡಬ್!
ಹೃದಯದ ಕವಾಟಗಳವು
ಮುಚ್ಚಿಕೊಂಡು ಬಿಚ್ಚಿಕೊಳ್ಳುವವು!

ಜೀವವಿಲ್ಲದೆ ಬರಿಯ ಬೂದಿಯೂ
ಮಾನವನ ದೇಹವಿದು,
ದೇಹಕ್ಕೆ ಜೀವ ತುಂಬಿ,
ಅದರೊಳಗೆ ಆತ್ಮನಿರಿಸಿ,
ತಾನೂ ಒಳ ಸೇರಿಬಿಟ್ಟ ಅವನು!
ಜಪಿಸುತ್ತೇನೆ ಕೃಷ್ಣಾರ್ಪಣಂ
ಪ್ರತಿಯೊಂದು ಉಚ್ಛ್ವಾಸ ನಿಶ್ವಾಸದೊಳಗೆ!

- ಪ್ರಸಾದ್.ಡಿ.ವಿ.