ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday 23 March 2012

ಭಾವುಕತೆ ಮಾನವ ಜನುಮಕ್ಕಂಟಿದ ಕರ್ಮ



                 ಮನುಷ್ಯ ಏಕಿಷ್ಟು ಭಾವುಕ ಎಂದು ಒಮ್ಮೊಮ್ಮೆ ತುಂಬಾ ಯೋಚಿಸುತ್ತಿರುತ್ತೇನೆ. ಭವಿಷ್ಯತ್ತನ್ನು ಅರಸುತ್ತಾ ಹೊರಟ ಮಗನ ಕಾಲುಗಳನ್ನು ಅಪ್ಪ-ಅಮ್ಮ ತಮ್ಮ ಭಾವುಕತೆಯಲ್ಲಿ ಕಟ್ಟಿ ಹಾಕುತ್ತಾರೆ. ಮಗ ಇವರ ಬಂಧನಕ್ಕೆ ಸೋತು ಇದ್ದುದ್ದರಲ್ಲೇ ಜೀವನ ಕಟ್ಟಿಕೊಳ್ಳುವ ಜತನಕ್ಕೆ ಜೋತು ಬಿದ್ದು ಭಾವುಕತೆಗೆ ಶರಣಾಗುತ್ತಾನೆ. ಮಹಾತ್ವಾಕಾಂಕ್ಷೆಯೊಂದು ಕುಡಿಯೊಡೆಯುವ ಮೊದಲೇ ಪಯಣಿಗನಿಲ್ಲದೆ ಅರಿವಿಗೂ ಬಾರದೆ ಅನಾಥವಾಗುತ್ತದೆ. ಈ ಪರಿಸ್ಥಿತಿಯಲ್ಲಿ ನನಗೆ ಕವಿಯೊಬ್ಬರ ’ಅಮ್ಮ ನಿನ್ನ ಎದೆಯಾಳದಲ್ಲಿ..’ ಎಂಬ ಕವಿತೆ ನೆನಪಾಗುತ್ತದೆ. ’ದೂಡು ಹೊರಗೆ ನನ್ನ, ಓಟ ಕಲಿವೆ, ಒಳ ನೋಟ ಕಲಿವೆ, ನಾ ಕಲಿವೆ ಊರ್ಧ್ವಗಮನ.. ಓ ಅಗಾಧ ಗಗನ’ ಎಂಬ ಸಾಲುಗಳು ಮನಸ್ಸನ್ನೂ ತುಂಬಾ ಕಾಡುತ್ತಿರುತ್ತವೆ. ಇನ್ನು ಪ್ರೀತಿಯ ಅಲೆಯೇರಿ ತೇಲುವ ಪ್ರಣಯ ಪಕ್ಷಿಗಳ ಕಥೆ. ಅವರಿಬ್ಬರು ಸುತ್ತದ ತಾಣಗಳಿಲ್ಲ, ಉದ್ಯಾನಗಳಿಲ್ಲ. ಅಷ್ಟರಲ್ಲೇ ಅವರಿಬ್ಬರಲ್ಲೊಬ್ಬರಿಗೆ ಬದುಕಿನ ಅನಿವಾರ್ಯತೆಗಳು ಗಾಳ ಹಾಕಿ ಸೆಳೆವಾಗ, ವಿಧಿಯ ಬಯಲಾಟ ನಡೆದು ಅಗಲಿಕೆ ಅನಿವಾರ್ಯವಾಗುತ್ತದೆ. ಆಗಲೂ ನೆನಪುಗಳು ಮೇರೆ ಮೀರುತ್ತವೆ, ಕನಸುಗಳು ಒಡೆಯುತ್ತವೆ. ಭಗ್ನ ಪ್ರೇಮಿ ಭಾವುಕತೆಗೆ ಜೊತೆಯಾಗುತ್ತಾನೆ ಅಥವಾ ಜೊತೆಯಾಗುತ್ತಾಳೆ. ಜೀವನವನ್ನು ಕೊನೆಗಾಣಿಸಿಕೊಳ್ಳದೆ ಇದ್ದರೆ ಅದೇ ಪುಣ್ಯ. ಮನುಷ್ಯ ಏನೆಲ್ಲಾ ಸಾಧಿಸಿದ್ದಾನೆ. ನೀರಿನ ಮೇಲೂ ತೇಲುತ್ತಾನೆ, ಆಕಾಶದಲ್ಲೂ ಹಾರುತ್ತಾನೆ ಆದರೆ ಭಾವುಕತೆಗೆ ಕಣ್ಣೊದ್ದೆಯಾಗಿಸದೆ ಜೀವನವನ್ನು ದಾಟುವ ಕಲೆ ಮಾತ್ರ ಕರಗತವಾಗಲೇ ಇಲ್ಲ. ಮುಂದೆ ಆಗುವುದೂ ಇಲ್ಲ ಎನಿಸುತ್ತದೆ. ಈ ಸಮಯದಲ್ಲಿ "ಸಮುದ್ರವನ್ನು ಬೇಕಾದರೂ ಕಾಲೊದ್ದೆಯಾಗದೆ ದಾಟಬಹುದು ಆದರೆ ಕಣ್ಣೊದ್ದೆಯಾಗಿಸದೆ ಜೀವನವನ್ನು ದಾಟುವುದು ಅಸಾಧ್ಯ" ಎಂಬ ಬರಹಗಾರರೊಬ್ಬರ ಮಾತುಗಳು ನೆನಪಾಗುತ್ತವೆ.

               ಹಾಗೆ ಯೋಚಿಸಿದರೆ ಮನುಷ್ಯ ಜೀವಿ ಹೊಂದಿರುವ ಸಂಬಂಧಗಳು ಜಗತ್ತಿನ ಅನ್ಯ ಜೀವಿಗಳು ಹೊಂದಿರುವ ಸಂಬಂಧಗಳಿಗಿಂತ ತೀರಾ ಭಿನ್ನವಾಗೇನೂ ಇರುವುದಿಲ್ಲ ಆದರೆ ಅವುಗಳಿಗೆ ಕಾಡದ ಭಾವುಕತೆ ಮನುಷ್ಯರಿಗೇಕೆ ಕಾಡುತ್ತವೆ ಅಥವಾ ಅವುಗಳನ್ನು ಅರ್ಥ ಮಾಡಿಕೊಳ್ಳಲಾಗದೆ ನಾವು ಹಾಗೆಂದುಕೊಂಡಿದ್ದೇವೆಯೇ? ಏನೋ ಯಾವುದಕ್ಕೂ ಉತ್ತರ ಕಂಡುಕೊಳ್ಳಲಾಗಿಲ್ಲ. ಉದಾಹರಣೆಗೆ ನನ್ನ ಅಜ್ಜ ತೀರಿಕೊಂಡ ಆಘಾತದಿಂದ ಹೊರಬರಲು ಒಂದು ವಾರವೇ ಹಿಡಿದಿತ್ತು. ನಾನಾಗಿ ನಾನೇ ಆ ರೀತಿ ಭಾವಿಸಿಕೊಂಡಿದ್ದೆನೆ ಅಥವಾ ಅವರೊಂದಿಗಿನ ಬಂಧ ಅಷ್ಟು ಗಟ್ಟಿಯಾಗಿತ್ತೆ ಅರ್ಥವಾಗಲಿಲ್ಲ. ಆದರೆ ನಾನು ಕಂಡುಕೊಂಡ ಸತ್ಯ ಮನುಷ್ಯ ಭಾವುಕನಾಗುವುದಕ್ಕೆ ಕಾರಣ ಅವನು ವಾಸ್ತವದಲ್ಲಿ ಬದುಕುವುದಕ್ಕಿಂತ ಹೆಚ್ಚಾಗಿ ಭೂತ ಮತ್ತು ಭವಿಷ್ಯತ್ ಗಳಲ್ಲಿ ಬದುಕುತ್ತಾನೆ. ಇನ್ನೂ ಕೆಲವರು ಭ್ರಮೆಗಳಲ್ಲೂ ಉಸಿರಾಡುತ್ತಾರೆ. ಅದು ಅವರವರು ಕಂಡುಕೊಂಡ ಅಥವಾ ಕಟ್ಟಿಕೊಂಡ ಜೀವನ ಶೈಲಿಯಿರಬಹುದು. ಆದರೆ ಭಾವುಕತೆ ಬದುಕನ್ನು ಹಿಂಡುವುದು ಮಾತ್ರ ಸುಳ್ಳಲ್ಲ. ಇದನ್ನೆಲ್ಲಾ ನೋಡುವಾಗ ನನಗನ್ನಿಸುವುದು ಮನುಷ್ಯ ಮೊದಲು ಅತಿಯಾಗಿ ಭಾವಿಸಿಕೊಳ್ಳುವುದನ್ನು ಬಿಡಬೇಕು, ಜೀವಿಸುವುದನ್ನು ಕಲಿಯಬೇಕು. ನಾವಾಗೇ ನಮ್ಮ ಜೀವನವನ್ನು ಕ್ಲಿಷ್ಟವಾಗಿಸಿಕೊಳ್ಳುತ್ತಿದ್ದೇವೆ. ಬದುಕನ್ನು ಬದುಕುವುದು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದೇವೆ. ಭಾವಿಸಿಕೊಂಡದ್ದಕ್ಕಿಂತ ಜೀವನ ತುಂಬಾ ಭಿನ್ನ ಎಂಬ ಸತ್ಯವನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆಗೆ ಬಂದು ನಿಂತಿದ್ದೇವೆ ಎನಿಸುತ್ತದೆ.

            ಜೀವನ ನಮ್ಮ ಅತ್ಯುಚ್ಚ ಶಿಕ್ಷಕ, ನಮಗೆ ಬೇಡವೆಂದರೂ ತುಂಬಾ ಪಾಠಗಳನ್ನು ನಮಗೆ ಕಲಿಸುತ್ತದೆ. ಅದಕ್ಕೆ ವಿರುದ್ದವಾಗಿ ಹರಿಯುವ ಪ್ರಯತ್ನ ಮಾಡುವುದಕ್ಕಿಂತ ಅದರ ಹರಿವಿಗೆ ಒಗ್ಗಿಕೊಂಡು ಬದಲಾವಣೆಗೆ ಮನಸ್ಸನ್ನು ತೆರೆದಿಡುವುದು ಸಮಂಜಸ ಮತ್ತು ಬುದ್ಧಿವಂತ ನಡೆಯಾದೀತು. ಪ್ರೀತಿಸಿದ ಪ್ರೀತಿ ಕೈಕೊಟ್ಟ ಮಾತ್ರಕ್ಕೆ ಜೀವನ ಕೈಕಟ್ಟಿ ಕೂರುವುದಿಲ್ಲವಲ್ಲ, ಮತ್ತೆ ನಾವ್ಯಾಕೆ ತಲೆ ಮೇಲೆ ಕೈಹೊತ್ತು ಕೂರಬೇಕು ಅಲ್ಲವೆ? ಒಂದು ಮಾತ್ರ ಸತ್ಯ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಮುನ್ನಡೆಯುವ ಪ್ರಜ್ಞೆ ಇದ್ದರೆ ಜೀವನ ಸುಲಭವಾಗುತ್ತದೆ. ಜೀವನ ನಾವು ಹಿಂದೆ ಕಳೆದುಕೊಂಡಿದ್ದನ್ನೆಲ್ಲಾ ಮುಂದೆ ಸರಿದೂಗಿಸಿಯೇ ತೀರುತ್ತದೆ. ಕಾಯುವ ತಾಳ್ಮೆ ಮತ್ತು ಸಿಕ್ಕ ಅವಕಾಶಗಳನ್ನು ದೋಚುವ ಚಾಣಕ್ಷತನ ಮೈಗೂಡಿಸಿಕೊಳ್ಳಬೇಕಷ್ಟೆ. ನಾವು ಕಳೆದುಕೊಳ್ಳುವ ಎಲ್ಲವುಗಳಿಗೂ ಜೀವನ ಪರ್ಯಾಯಗಳನ್ನು ಕೊಡುತ್ತಾ ಸಾಗುತ್ತದೆ. ಪ್ರೀತಿ ಕೈಜಾರಿದರೆ, ಮತ್ತೊಬ್ಬರು ಬಂಧು ಆ ಸ್ಥಳವನ್ನು ತುಂಬುತ್ತಾರೆ. ಹಿರಿಯರು ಜವರಾಯನ ಕರೆಗೆ ಹೋಗೊಟ್ಟು ಮೂಟೆ ಕಟ್ಟಿದರೆ ಮತ್ತೊಂದು ಜೀವದ ಉಗಮದೊಂದಿಗೆ ಜೀವನ ಆ ಗ್ಯಾಪ್ ಅನ್ನು ಮುಚ್ಚುತ್ತದೆ. ಸ್ನೇಹಿತರು ಅನಿವಾರ್ಯ ಕಾರಣಗಳಿಗೆ ನಮ್ಮಿಂದ ದೂರವಾದರೆ, ಜೀವನ ಹೊಸ ಸ್ನೇಹಿತರನ್ನು ಕೊಟ್ಟು ಆ ಸ್ಥಳವನ್ನು ಭರ್ತಿ ಮಾಡುತ್ತದೆ. ಯಾರು ಯಾರಿಗೂ ಅನಿವಾರ್ಯವಲ್ಲ. ಎಲ್ಲರೂ ಕಾರ್ಯ ನಿಮಿತ್ತ ಜೊತೆಯಾಗಿರುತ್ತಾರಷ್ಟೆ. ಕಾರ್ಯ-ಕಲಾಪಗಳು ಮುಗಿದ ಮೇಲೆ ಅಗಲಿಕೆ ಅನಿವಾರ್ಯ. ಹಾಗೆ ಆ ಅಗಲಿಕೆಯ ನಂತರವೂ ಜೀವನವಿದೆ. ಹಳೆ ನೀರು ಹರಿದರೇನೇ ಹೊಸ ನೀರು ಮನಸ್ಸನ್ನು ತುಂಬುವುದು. ಎಲ್ಲರನ್ನೂ, ಎಲ್ಲವನ್ನೂ ಉಳಿಸಿಕೊಳ್ಳುವ ಭರದಲ್ಲಿ ಜೀವನ ಕಳೆದು ಹೋಗದಿರಲಿ. ಭಾವುಕತೆಗೆ ಬೆನ್ನು ಹಾಕಿ ಜೀವನವನ್ನು ರೂಪಿಸಿಕೊಳ್ಳುವತ್ತ ಮುಖ ಮಾಡಬೇಕಾಗುತ್ತದೆ. ಕರ್ಮವದು ಕಳೆದುಬಿಡಲಿ, ಪೊರೆ ಕಳಚಿಬಿಡಲಿ ನವಚೈತನ್ಯ ಪ್ರವಹಿಸಿ ಜೀವನ ಹಸನಾಗಲಿ. ಕಾಡುವ ಕರ್ಮವನ್ನು ಬೆನ್ನಿಗಿಟ್ಟು ಮುಂದಡಿಯಿಡುತ್ತಾ ಮುನ್ನಡೆದುಬಿಡಲಿ ಮನುಷ್ಯ ಕುಲ ಎಂಬ ಆಶಯ ನನ್ನದು.

- ಪ್ರಸಾದ್.ಡಿ.ವಿ.

Saturday 17 March 2012

ತಾನನನೋಂತನಾನ..!


ನಿನ್ನ ನೆನಪುಗಳು
ನನ್ನ ಮನದೊಳಗೆ
ತನನನೋಂತನಾನ..!
ಭಾವಸ್ರಾವದೊಳು
ಬಂಧಿ ನಾನಿಂದು
ಮನನನೋಂತನಾನ..!

ಕನಸು ಮನಸೊಳಗೆ
ಕಂಗಳಿಟ್ಟವಳೆ,
ನಾಂನೀಂತನಾನ..!
ಮೂಕ ಹೃದಯಕ್ಕೆ
ಭಾಷೆ ಕೊಟ್ಟವಳೆ,
ಭಾವತೋಂತನಾನ..!

ನನಸ ಕನಸೊಳಗೆ
ಹೆಜ್ಜೆಯಿಟ್ಟವಳೆ,
ಮಧುರತೋಂತನಾನ..!
ಲಜ್ಜೆ ಲಜ್ಜೆಗೆ
ಗೆಜ್ಜೆ ಕಟ್ಟುವವಳೆ,
ಧೀಂಧೀಂತನನಾ..!

ನೆನಪು ಕನಸ ಹೂಡಿ
ಆಸೆ ಗರಿಬಿಚ್ಚಿ,
ಕನಸಿನೋಂತನಾನ..!
ಕನಸು ಕಂಡಲ್ಲೆ
ಮನಸು ನಿಂದಿಲ್ಲಿ
ವಿರಹನೋಂತನಾನ..!
ಚಿರ ವಿರಹಿ
ನಾಂತನಾನ..!

- ಪ್ರಸಾದ್.ಡಿ.ವಿ.

Saturday 10 March 2012

ಗಾಳಿ ನಾನು


ಗಾಳಿ ನಾನು,
ಗಾವುದವನ್ನೂ ಬಿಡದೆ ಬೀಸಿದ್ದೇನೆ,
ತಿಳಿಯಾಗಿ, ಮೆಲುವಾಗಿ,
ಹದವಾಗಿ, ಬಿರುಸಾಗಿ...
ಬೀಸು ಬೀಸಿಗೂ
ಘಮಲು ಹಾಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!

ಹೂದೋಟ ಹೊಕ್ಕಿದ್ದ ನಾ
ಹೊತ್ತು ತಂದದ್ದು ಪರಿಮಳವನ್ನೇ,
ಪಸರಿಸಬೇಕೆಂದು ಬೀಸಿದ್ದಷ್ಟೇ,
ನನಗೇನು ಗೊತ್ತಿತ್ತು
ಹೂಗಳೂ ಗಬ್ಬು ನಾರುತ್ತವೆಂದು,
ಹೂ ಘಮಲಿಗಿಂತ
ಅಮಲೇರಿದ್ದ ಜನರ
ತುಳಿತಕ್ಕೆ ಸಿಕ್ಕ ಕುಸುಮಗಳ
ಚೀರಾಟ ಜೋರೆಂದು,
ಚೀರಾಟವ ಚಿವುಟಿ
ಮಾಲೆಗೆ ಕೊರಳೊಡ್ಡಿ
ನಕ್ಕ ಜನರ ಕೇಕೆಯನ್ನೂ ಹೊತ್ತೊಯ್ಯುತ್ತೇನೆ,
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!

ನಲ್ಲನ ಬಿಸಿಯುಸಿರ ಬಿಸಿಗೆ ಕರಗುವ
ಮುಗುದೆಯ ಮನದ
ಪಿಸುದನಿಯನ್ನೂ ಹೊತ್ತೊಯ್ಯುತ್ತೇನೆ,
ಅರಿವಿಗೂ ಬಾರದಂತೆ,
ಅವರಿವರು ಅವರೆಡೆಗೆ
ತಿರುಗಿಯೂ ನೋಡದಂತೆ..!
ಹೃದಯಕ್ಕೆ ಕಿವಿಗೊಟ್ಟು
ಉಚ್ಛ್ವಾಸ - ನಿಚ್ಛ್ವಾಸದೊಳಗನಿಲವಾಗಿ
ರಕ್ತದೊಳು ಬೆರೆತುಹೋಗುತ್ತೇನೆ
ನನ್ನಿರುವೂ ತಿಳಿಯದಂತೆ..!
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!

ಮೈಗಂಟಿದ ಸುಗಂಧವನ್ನೂ ಬೀಸುತ್ತೇನೆ,
ಬೆವರ ಬಸಿರಿಗಂಟಿದ
ದುರ್ಗಂಧವನ್ನೂ ಬೀಸುತ್ತೇನೆ,
ಸುಕೋಮಲತೆಯನು ಹೊಸಕಿ
ಮೈಲಿಗೆಯ ಮರೆಮಾಚಲು
ಗಂಧಕ್ಕೆ ಮೈತೀಡಿ
ಅಮಲ ಪರಿಮಳ
ಬೀರುವ ಘಮಲೊಳಗೆ
ಬಡವರ ಬೆವರು ಬೀದಿ ಪಾಲು,
ಎರಡನ್ನೂ ತೂರುತ್ತೇನೆ,
ಗಾಳಿ ನಾನು
ಬೀಸುವುದೆನ್ನ ಧರ್ಮ,
ಅರಿಯೆ ನಾ
ಘಮಲುಗಳೊಳಗಿನ ಮರ್ಮ..!
ಬೀಸಿದ್ದೇನೆ, ಬೀಸುತ್ತೇನೆ, ಬೀಸುತ್ತಲೇ ಇರುತ್ತೇನೆ..!

- ಪ್ರಸಾದ್.ಡಿ.ವಿ.