ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 31 December 2013

ಭಾವದ ಬಟ್ಟಲು!


ಕಡಲಾಗಬಯಸಿದ್ದೇನೆ,
ಭಾವದ ಒಡಲಾಗ ಬಯಸಿದ್ದೇನೆ,
ವರುಷವೆಲ್ಲವೂ ಸುರಿದ ಹರ್ಷಕ್ಕೆ,
ಆವಿಯಾಗಿ, ಮೋಡವಾಗಿ,
ಒಲವಾಗಿ ಸುರಿದ ಮಳೆಗೆ,
ಬಟ್ಟಲಾಗಬಯಸಿದ್ದೇನೆ,
ತುಂತುರಾಗಿ ತೊಟ್ಟಿಕ್ಕುತ್ತೇನೆ!

ಅವಳ ನೆನಪಿಗೆ, ಕಡೆಯ ಮುತ್ತಿಗೆ,
ಮುಂಗುರುಳ ಸುರುಳಿಗೆ,
ಮಳೆಗೆ ಕೊಡೆ ಹಿಡಿದ ಕೋಪಕ್ಕೆ,
ತೆರೆದಿಟ್ಟರೆ ಹಬೆಯಾಡುವ ಘಮಕ್ಕೆ,
ಇನ್ನು ಎಷ್ಟೆಷ್ಟೆಕ್ಕೊ,
ಒಂದು ವರ್ಷ ಕಳೆದಿದೆ...
ಎಣಿಸಿ ೩೬೫ ಆದರೂ ಮುತ್ತಿಟ್ಟಿದ್ದೇನೆ,
ಮಳೆ ಹನಿಯ ಹೆಸರಲ್ಲಿ!

ಮರೆತಂತೆಯೇ ಆಗಿದೆ,
ಉಸಿರಾಡಿ, ಹೊಸ ಜೀವದಂತೆ ಮಿಸುಕಾಡಿ,
ಹೊಟ್ಟೆಯೊಳಗೆ ಚಿಟ್ಟೆ ಕುಣಿದು,
ಕಣ್ಣು ಕಣ್ಣು ನೋಟ ಬೆಸೆದು,
ಹೂವ ರಸಕೆ ತುಟಿ ನೆನೆಸಿ,
ಪರಾಗದ ಹೆಸರ್‍ಹೇಳಿ
ನನ್ನೊಳು ನಿನ್ನನರಸಿ...
ಎಲ್ಲವನ್ನೂ ಮತ್ತೆ ಬದುಕುತ್ತೇನೆ!
ಹೊಸ ವರ್ಷದ ಹೆಸರ್‍ಹೇಳುತ್ತೇನೆ!

ಮಳೆಗಾಲಕ್ಕೆ ಒಟ್ಟಿಗೆ ನೆನೆದು,
ಚಳಿಗಾಲಕ್ಕೆ ಬಿಗಿಯಪ್ಪುಗೆ ಬಿಗಿದು,
ಬೇಸಿಗೆಯ ಬೆಸುಗೆಗೆ,
ಬೆವರಾಗಿಬಿಡೋಣ...
ವಸಂತಕ್ಕೆ ಹೂ ಬಿಟ್ಟು,
ಹೊಸ ಕನಸುಗಳ ಹಡೆಯೋಣ!

- ಪ್ರಸಾದ್.ಡಿ.ವಿ.

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :-)

Wednesday, 11 December 2013

ಬೋಳು ಮರದ ಕಾಗೆ!


ಕಾಗೆ ಅರಚುವುದಕ್ಕೊಂದು
ಹೊತ್ತುಂಟೆ, ಗೊತ್ತುಂಟೆ?!
ಕೋಳಿ ಕೂಗುವುದು ಬೆಳಗಿಗೆ,
ನವಿಲ ನರ್ತನ ಇಳಿ ಸಂಜೆಗೆ,
ಇದ್ಯಾಕೆ ಕೂಗುವುದೋ
ಅಷ್ಟೆತ್ತರದಿ ಕುಳಿತು?!
ಲೈಟು ಕಂಬವೋ,
ಮುರಿದ ಕೊಂಬೆಯೋ,
ಅದನೇರಿ ಕುಳಿತಿದೆ ಇದು,
ಕೂಗಲಿಕ್ಕೆ - ಕಾ ಕಾ ಕಾ...
ಕರ್ಕಶಕ್ಕೆ ಕಿವಿ ಗಡಚಿಕ್ಕುತ್ತದೆ!

ಅದು ಕೂಗುವಾಗಲೂ
ಒಂಥರದ ಹೀಯಾಳಿಕೆ,
ಕೂಗಿದ್ದು ಕಾಗೆಯಲ್ಲವೇ?!
ಅದು ಬೆಕ್ಕಾಗಿಯೋ,
ದೈತ್ಯ ಸರಿಸೃಪವಾಗಿಯೋ,
ಮತ್ತಾವುದೋ ಅಪರೂಪದ
ಜೀವಿಯಾಗಿಯೋ ಹುಟ್ಟಬೇಕಿತ್ತು!
ಬೆಕ್ಕಿಗೆ ನಿಂತು ಹೋಗುವ ಜನ,
ಅಪರೂಪದ ಜೀವಿಯ
ತಳಿಗಳ ಶ್ರೇಯೋಭಿವೃದ್ಧಿಗೆ ಹಣ
ಸುರಿಯುತ್ತಾರೆ!
ಅಳಿದ ಸರಿಸೃಪಗಳ
ಅಧ್ಯಯನಕ್ಕೆಂದು
ಇತಿಹಾಸವಗೆಯುತ್ತಾರೆ!
ಇದಕ್ಕೆ ಕಾಗೆಯೆಂಬ
ಮೂದಲಿಕೆಯೊಂದೇ ಗಟ್ಟಿ!

ಇದೇಕೋ, ಹೇಗೋ
ಆ ಮೂದಲಿಕೆಗೆ ತಗುಲಿಕೊಂಡಿದೆ!
ಇತಿಹಾಸವನ್ನೆಲ್ಲಾ
ಅದರ ಮಸ್ತಿಷ್ಕಕ್ಕೆ ಆರೋಪಿಸಿ
ಪುಂಗಿ ಊದಿದರೂ
ಅದು ಕಾ ಕಾ ಎಂದೇ ಅರಚುತ್ತದೆ!
ಈ ಕಾಗೆಯೋ
ಅಗುಳನ್ನೂ ಹಂಚಿ ತಿನ್ನುವ ಸಂಘ ಜೀವನ,
ಕೋಗಿಲೆಯ ಮೊಟ್ಟೆಗೂ
ಕಾವು ಕೊಡುವ ತ್ಯಾಗಕ್ಕೆ ಹೆಸರಾಗಬಹುದಿತ್ತು!
ಕಪ್ಪಾಗಿತ್ತೆಂಬ ಕಾರಣಕ್ಕೆ
ಕರೆಂಟು ತಂತಿ ತಗುಲಿ ಕರಕಲಾಯ್ತು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಫಣೀಂದ್ರ.ಹೆಚ್.

Sunday, 8 December 2013

ಅವಳು: ಮಗು ಮರೆಯದ ಮೊದಲ ತೊದಲು!


ನಾನೊಬ್ಬ ಅಮಾಯಕ,
ಪ್ರೀತಿಯೆನ್ನುವುದೇ ಗೊತ್ತಿರದಷ್ಟು ಸಭ್ಯ!
ಎಂದುಕೊಂಡು ಎದೆ ಮುಟ್ಟಿಕೊಂಡೆ,
ಅವಳ ಹೆಸರೇ ಮಿಡಿಯುತ್ತಿದೆ!
ಭಯವಾಗುತ್ತದೆ, ಬೆಚ್ಚುತ್ತೇನೆ,
ಬಿಳುಚಿಕೊಳ್ಳುತ್ತೇನೆ
ನನ್ನ ಮೈಯ್ಯಿಂದ ಮನವ ಕಸಿದು
ತೊಲೆಗೆ ಜೋಲಿ ಕಟ್ಟಿ
ಅದರಲ್ಲಿ ನನ್ನ ಮನವ ತಟ್ಟಿ
ಜೋಗುಳ ಹಾಡುತ್ತಾಳೆ ನನ್ನವಳು!

ನೀಲಿ ದಾವಣಿಯ ಲಂಗ ತೊಟ್ಟು,
ಅಂಗಾಸಿ ಬಳಸಿ,
ಇಂಗಾಸಿ ಬಳುಕುವ ಬಳ್ಳಿ ನನ್ನವಳು,
ನೋಡಲು ಸ್ವಲ್ಪ ಸಪೂರವಾದರೇನು?
ನನ್ನ ಕಣ್ಣು ತುಂಬಾ ತುಂಬಿದ್ದಾಳೆ!
ನೋಡಲು ಎರಡು ಕಣ್ಣು ಸಾಲದೆ,
ಇನ್ನೆರಡನ್ನು ಎರವಲು ಪಡೆದಿದ್ದೇನೆ!

ಹೆಣ್ಣು ಕಣ್ಣ ಕಾಡಿಗೆ ಹಚ್ಚಿ,
ಹಣೆಗೆ ಬಿಂದಿಯನಿಟ್ಟು,
ಪ್ರಶಾಂತವಾಗಿ ನಗಬೇಕೆಂದು
ಹೇಳಿಕೊಟ್ಟವಳು ಅವಳು,
ಹೀಗಿಲ್ಲದೆ ಹುಡುಗಿಯರನ್ನು
ಹೆಣ್ಣೆಂದು ಕರೆಯಲಾರೆ...
ನನ್ನನ್ನು ದೂಷಿಸಬೇಡಿ,
ಇದು ಅವಳು ಹೇಳಿಕೊಟ್ಟ ಸಂಸ್ಕಾರ!
ಅವಳ ಮೇಲಿನ ಪ್ರೀತಿಗೆ ನಾ
ನನ್ನ ಮೇಲ್ ಹೇರಿಕೊಂಡ ಆಚಾರ-ವಿಚಾರ!

ಅಲ್ಲಲೆದು ಇಲ್ಲಲೆದೆ,
ಇಲ್ಲಿಲ್ಲೆ ಸುಳಿದಾಡುತ್ತಾಳೆ!
ನಾನು ಅವಳ ಮುಂದೆ ಹಲ್ ಕಿರಿದು
ಕಣ್ಣೊಳಗೆ ಕುಡಿನೋಟ ಬೆಸೆಯಲು
ಪಟ್ಟ ಪಾಡು ಅಷ್ಟಿಷ್ಟಲ್ಲ!
ಹೀಗೆ ಹೇಳುವಾಗೆಲ್ಲ ಅವಳನ್ನು
ಮನಸಾರೆ ದ್ವೇಷಿಸಬೇಕೆನಿಸುತ್ತದೆ!
ಆದರೇನು ಮಾಡಲಿ,
ಆ ದ್ವೇಷ ನನ್ನ ಆನೆಭಾರದ
ಪ್ರೀತಿಯ ಮುಂದೆ
ಗುಲಗಂಜಿಯಷ್ಟೂ ತೂಗುವುದಿಲ್ಲ!

ನನ್ನೀ ಹೃದಯ ಲಬ್-ಡಬ್ ಎಂದು
ಬಡಿದಿದ್ದರೆ, ಬಡಿಯುತ್ತಿದ್ದರೆ
ಅದು ಅವಳ ದೆಸೆಯಿಂದ!
ಹೃದಯಕ್ಕೆ ಬಡಿತ ಕಲಿಸಿ,
ಮನಸಿಗೆ ಹಾರಾಟ ಕಲಿಸಿ,
ಮಾತಿಗೆ ಮೌನ ಕಲಸಿ ಹೋಗಿದ್ದಾಳೆ,
ಮುಂದೆ ಮನೆ ತುಂಬುವವಳೊಬ್ಬಳು
ಬರಬಹುದು... ಆದರೂ
ಮನಸು ಮಾತ್ರ ಮರೆಯುವುದಿಲ್ಲವಳ,
ಮಗು ಮರೆಯದ ಮೊದಲ ತೊದಲಿನಂತೆ!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Wednesday, 27 November 2013

ಬಿಡುಗಣ್ಣ ನಕ್ಷತ್ರ!


ನಿತ್ಯವೂ ಸಿಕ್ಕುತ್ತಾಳೆ ಆ ಹುಡುಗಿ,
ಕೈಯ್ಯಲ್ಲಿ ಕೆಂಪು ಹೂವು,
ಕಣ್ಣಲ್ಲಿ ಕೋಟಿ ಕನಸು!
ಕೆಂಪು ಹೂವೆಂದರೆ
ಬಹುಶಃ ಗುಲಾಬಿಯಿರಬಹುದು,
ಆ ಹುಡುಗಿಗೆ ಹೇಳಿಕೊಟ್ಟವರಾರೋ
ಕೆಂಪಿಗೆ ಬಿಕರಿಯಾಗುವ
ತಾಕತ್ತಿದೆಯೆಂದು?
ನನಗೋ ಆ ಕೆಂಪು
ರಕ್ತದ ಕಲೆಗಳಂತೆ ಕಾಣುತ್ತದೆ!
ಆ ಹುಡುಗಿಯೂ ರಕ್ತ ಬಸಿದಿರಬಹುದೆ,
ಬೆವರ ಬದಲಾಗಿ?!

ಅಕ್ಷರಗಳ ಹಂಗಿಲ್ಲದೆ,
ಓರಗೆಯ ಮಕ್ಕಳೊಂದಿಗೆ
ಬೆರೆತು ಕುಣಿಯುವ ಆಸೆಗಳಿಲ್ಲದೆ
ಬಾಲ್ಯ ಕಳೆಯಲು
ಆ ಹುಡುಗಿ ತೀರ್ಮಾನಿಸಿರಬಹುದು!
ಏಕೆಂದರೆ ರಸ್ತೆ ದಾಟುವ
ಯೂನಿಫಾರ್ಮ್ ತೊಟ್ಟ
ಇತರ ಮಕ್ಕಳು ಅವಳೊಳಗೆ
ಒಂದು ತಿರಸ್ಕಾರದ ನಗೆ ಮತ್ತು
ಬಿಸಿಕಣ್ಣೀರಾಗುತ್ತಾರಷ್ಟೆ!
ಹಸಿದು ಕುದುರೆಯೇರಿದ ಬಾಲ್ಯಕ್ಕೆ,
ಕಿತ್ತ ಲಗಾಮೇ ಸಾಥಿ!

ಬಡವನ ಹಸಿವಿಗೆ ಸಾವಿರ ಬಾಯಿ!
ಇವಳು ಒಂದಿಲ್ಲೊಂದು
ಬಾಯಿಗೆ ಗಂಜಿ ಹುಯ್ಯುತ್ತಲೇ ಇರಬಹುದು,
ಅವಳಮ್ಮ ಕಾಯಿಲೆಯಿಂದ
ಮೂಲೆ ಹಿಡಿದಿರಬಹುದು,
ಅಪ್ಪ ಕುಡಿದು ಬಡಿಯಬಹುದು,
ತಮ್ಮ-ತಂಗಿಯರು
ಅರೆಹೊಟ್ಟೆ ಉಣ್ಣಬಹುದು,
ಇವಳು ಅವರಿಗೆಲ್ಲಾ ಗಂಜಿ ಹುಯ್ದು,
ತನ್ನ ಹೊಟ್ಟೆಗೆ ತಣ್ಣೀರು ಬಟ್ಟೆ ತಟ್ಟಬಹುದು!
ಮತ್ತೆ ಬೆಳಗೆದ್ದೊಡನೆ
ಅದೇ ರಸ್ತೆಗಳು, ಟ್ರಾಫಿಕ್ಕು ಸಿಗ್ನಲ್ಗಳು!

ಅವಳ ಬೆವರಿಗೆ
ಒಂದು ಅಂಕಿಯ ಮುಂದೆ ಸಾವಿರಾರು
ಸೊನ್ನೆಗಳ ಸುತ್ತಿ ಅದರ ಮುಂದೆ
ರೂಪಾಯಿ ಬರೆದಷ್ಟು ಬೆಲೆಯಿರಬಹುದು,
ಏಕೆಂದರೆ ಅದು ಕೆಳಗೆ ಬಿದ್ದ
ಜಾಗವೆಲ್ಲಾ ಸುಟ್ಟುಹೋಗುತ್ತದೆ!
ಒಮ್ಮೊಮ್ಮೆ ಅದರೊಳಗೆ ಬೆವರಷ್ಟೆ ಇರದೆ
ಬಿಸಿಯುಸಿರು, ಕಣ್ಣೀರು, ಹತಾಶೆ,
ಕಾಮುಕರ ಕಣ್ಣಳತೆ-ಕೈಯಳತೆಗಳೂ ಇರುತ್ತವೆ!
ಅಸುಗೂಸನ್ನಾದರೂ ಬಿಟ್ಟಾವೆಯೇ ಇವು?
ಎಂಬ ವಾಕರಿಕೆಯೂ ಇರಬಹುದು!

ಅವಳು ಪ್ರತಿ ಸಿಗ್ನಲ್ನಲ್ಲೂ,
ಒಬ್ಬರ ಬಳಿಯಲ್ಲದಿದ್ದರೆ,
ಮತ್ತೊಬ್ಬರ ಬಳಿ, ಅವರಲ್ಲವೆಂದರೆ
ಮತ್ತಿನ್ನೊಬ್ಬರ ಬಳಿ
ತೆರಳುವುದನ್ನು ನೋಡಿದ್ದೇನೆ!
ಯಾವುದೋ ಒಂದು ಕಾರು ತೂರಿದ
ಕಡೆಗೆ ಬಿಡುಗಣ್ಣು ಬಿಟ್ಟು
ನೋಡುವುದನ್ನು ನೋಡಿದ್ದೇನೆ!
ಸಾಕಷ್ಟು ವಿಫಲ ಯತ್ನಗಳ
ನಡುವೆಯೂ ನಗು ಮಾಸುವುದಿಲ್ಲ,
ಆ ಹೂವಿನದು, ಆ ಹುಡುಗಿಯದು!
ಆ ನಿರಂತರ ಭರವಸೆಗೆ ಏನನ್ನಬಹುದು?
ಯೋಚಿಸಿ ಕೂತ ನನಗೆ,
ಫ್ಯಾನ್ ನ ಗಾಳಿ ಕೂಡ ಬೆವರಿಸುತ್ತದೆ!

ಆ ಹುಡುಗಿ ನಾಳೆಯೂ ಸಿಗಬಹುದು,
ನಾಡಿದ್ದೂ ಸಿಗಬಹುದು,
ಆಚೆ ನಾಳೆಯೂ ಕೂಡ,
ಗುಲಾಬಿಗೂ, ಕೆಂಪಿಗೂ ಬಿಕರಿಯಾಗುವ
ತಾಕತ್ತಿರುವವರೆಗೂ
ಸಿಗುತ್ತಲೇ ಇರಬಹುದು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

ಇಲ್ಲಿ ಕೆಂಪು ಎಂಬುದು ’ಕನಸುಗಳು’ ಎಂಬರ್ಥದಲ್ಲಿ ಬಳಕೆಯಾಗಿದೆ.

Sunday, 24 November 2013

ನಾಮಕರಣಕ್ಕೊಂದು ಹೆಸರು!


ಪ್ರೀತಿಗೆ ಹೆಸರು
ಬರೆದಿದ್ದೇನೆ,
ಶ್ವಾಸ ತುಂಬಿ
ಉಫ್ಫೆಂದು
ಊದೇ ಗೆಳತಿ,
ಹೃದಯ ಬಡಿಯಬೇಕಿದೆ!

ಕಣ್ಣ ಕಣ್ಣೊಳಿಟ್ಟು
ನೋಡೇ ಗೆಳತಿ,
ಅಸ್ಪಷ್ಟ ಚಿತ್ರಗಳು
ಸುಸ್ಪಷ್ಟವಾಗಿ
ಮೂಡಿಕೊಳ್ಳಲಿ
ಕಣ್ಣುಕೂಡಿ ಕುಣಿಯಬೇಕಿದೆ!

ಒಮ್ಮೆ ಸ್ಪರ್ಷಿಸು
ಮಗಧೀರನನ್ನು
ಮೀರಿಸುವ
ಪ್ರೇಮಿಯಾಗಿ,
ಜನ್ಮಜನ್ಮಾಂತರಕೂ
ಕಾದು ಕೂರಬೇಕಿದೆ!

ನಿನ್ನ ಹೆಸರ
ಎದೆಯ ಮೇಲೆ
ಕೆತ್ತಿ ಹೋಗು,
ನನ್ನ ಪ್ರೀತಿಯ
ನಾಮಕರಣಕ್ಕೆ
ನಿನ್ನ ಮೊಹರು ಬೇಕಿದೆ!

- ಪ್ರಸಾದ್.ಡಿ.ವಿ.

’ಟೈಂ ಪಾಸ್ ಕವಿತೆ’  ಸುಮ್ನೆ ಓದಿಬಿಡಿ!
ಚಿತ್ರಕೃಪೆ: ಗೂಗಲ್ ಅಂತರ್ಜಾಲ

Sunday, 17 November 2013

ಟೀಕಿಸಲೆಂದೇ ಟೀಕಿಸುವವರಿಗೆ!


ಸಚಿನ್ ಗೆ ’ಭಾರತ ರತ್ನ’ ಕೊಟ್ಟದ್ದು ಅಗತ್ಯವಿಲ್ಲದಿರಬಹುದೇನೋ, ಏಕೆಂದರೆ ಕ್ರೀಡೆಗೆ ಸಂಬಂಧಿಸಿದ ಪರಮೊಚ್ಛ ಗೌರವ ’ಖೇಲ್ ರತ್ನ’ವಿದೆ ಎಂದು ಹೇಳುವವರ ಮಾತಿನ ತಳಹದಿಗಳೇ ನಂಗೆ ಅರ್ಥವಾಗ್ತಿಲ್ಲ. ’ಭಾರತ ರತ್ನ’ವನ್ನು ಕ್ರೀಡಾ ಕ್ಷೇತ್ರಕ್ಕೆ ವಿಸ್ತರಿಸಬಹುದೆಂದು ಕಳೆದ ವರ್ಷವೇ ತಿದ್ದುಪಡಿಯಾಗಿದೆ. ಆದ್ದರಿಂದ ಕ್ರೀಡೆಯನ್ನೂ ಒಳಗೊಂಡಂತೆ ದೇಶದ ನಾಗರೀಕನಿಗೆ ಕೊಡಬಹುದಾದ ಪರಮೋಚ್ಛ ಗೌರವ ’ಭಾರತ ರತ್ನ’ವಾಗುತ್ತದೆ!

ಇನ್ನು ’ಭಾರತ ರತ್ನ’ ಪ್ರಶಸ್ತಿಗೆ ಪರಿಗಣಿಸಲು ಸಚಿನ್’ನ ಬಾದ್ಯತೆಯ ಪ್ರಶ್ನೆ. ಸಚಿನ್ ತನಗೆ ’ಭಾರತ ರತ್ನ’ ಕೊಡಿ ಎಂದು ಸರ್ಕಾರದ ಹಿಂದೆ ಹಿಂದೆ ಓಡಿರಲಿಕ್ಕಿಲ್ಲ. ಅದು ಅವರ ಜಾಯಮಾನವೂ ಅಲ್ಲ. ಅಷ್ಟು ಸಾಕು ಆ ಅರ್ಹತೆ ಗಳಿಸಿಕೊಳ್ಳಲು! ಇನ್ನೂ ಆತ ’ಬಹುರಾಷ್ಟ್ರೀಯ ಕಂಪೆನಿ’ಗಳ ಜೇಬು ತುಂಬಿಸಿದ, ಹಣದಾಹಿ ಎಂಬ ಅಪವಾದ. ದುಡ್ಡು ಮಾಡಿದವರೆಲ್ಲ ಹಣದಾಹಿಗಳಲ್ಲ! ಆತ ತನ್ನ ಆಟದ ಹೆಮ್ಮಯೆಂಬಂತೆ ಮೆರೆದು, ವಿಶ್ವಕ್ಕೆ ಕ್ರಿಕೇಟ್ ನ ರಾಯಬಾರಿ ಎಂಬಂತೆ ಆಡಿ ತೋರಿಸಿದವ. ತನ್ನ ಕ್ರೀಡೆಯಲ್ಲಿ ಅತ್ಯುನ್ನತ ಶಿಖರವೇರಿದವ. ಇನ್ನೇನು ಸಾಧಿಸಲು ಉಳಿದಿತ್ತು ಕ್ರಿಕೇಟ್ ನಲ್ಲಿ ಅವನಿಗೆ? ಸೋ ಅವನು ಕ್ರಿಕೇಟ್ ನಲ್ಲಿ ಸಲ್ಲಿಸಿದ ಸೇವೆಯನ್ನು ’ಭಾರತ ರತ್ನ’ ಪ್ರಶಸ್ತಿಗೆ ಪರಿಗಣಿಸುವ ಅರ್ಹತೆ ಆತನಿಗಿತ್ತು.

ಇನ್ನೂ ’ಬಹುರಾಷ್ಟ್ರೀಯ ಕಂಪೆನಿ’ಗಳು ಎಂದು ತಂಪು ಪಾನೀಯದ ಪೆಪ್ಸಿ, ಕೋಲಾಗಳನ್ನಷ್ಟೇ ಕರೆದದ್ದು? ಬಹುರಾಷ್ಟ್ರೀಯ ಕಂಪೆನಿಗಳೆಂದರೆ ಬಹುರಾಷ್ಟ್ರಗಳಲ್ಲಿ ತನ್ನ ನೆಲೆಯನ್ನು ಹೊಂದಿರುವ ಎಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳು, ಪೆಪ್ಸಿ-ಕೋಲಗಳಷ್ಟೆ ಅಲ್ಲ. ಆತ ಪೆಪ್ಸಿ-ಕೋಲಗಳಿಗಲ್ಲದೆ ಭಾರತೀಯ ಮೂಲದ ಅನೇಕ ಉತ್ಪನ್ನಗಳಿಗೂ ರಾಯಭಾರಿಯಾಗಿದ್ದ ಎನ್ನುವುದು ಎಲ್ಲರ ನೆನಪಿನಲ್ಲಿದ್ದರೆ ಸಾಕು! ಈ ತಂಪು ಪಾನೀಯಗಳ ಉದ್ಯಮ ಕಾರ್ಯ ನಿರ್ವಹಿಸುವುದಾದರೂ ಹೇಗೆ? ಪೆಪ್ಸಿ-ಕೋಲಗಳ ಬ್ರಾಂಡ್ ನೇಮ್ ಇಲ್ಲದಿದ್ದರೆ ಆ ತಂಪು ಪಾನೀಯಗಳು ಮಾರುಕಟ್ಟೆಯಲ್ಲಿ ಉಳಿಯಲೂ ಸಾಧ್ಯವಿಲ್ಲ! ಈ ಸಂದರ್ಭದಲ್ಲಿ ಟೋರಿನೋ ಮುಂತಾದ ಪೆಪ್ಸಿ ಬ್ರಾಂಡ್ ನೇಮ್ ಇಲ್ಲದ ತಂಪು ಪಾನೀಯಗಳಿಗೆ ಒದಗಿದ ದುಃಸ್ಥಿತಿಯನ್ನು ಎಲ್ಲರೂ ನೆನೆಯಬಹುದು. ಈ ಪರಿಸ್ಥಿತಿಗೆ ಕಾರಣ ಪೆಪ್ಸಿ-ಕೋಲ ಕಂಪೆನಿಗಳೇ ವಿನಃ ಸಚಿನ್ ಅಲ್ಲ ಎಂಬುದು ಎಲ್ಲರೂ ಒತ್ತತಕ್ಕಂಥದ್ದು.

ಸಚಿನ್ ಕ್ರಿಕೇಟ್ ನಲ್ಲಿ ಸಲ್ಲಿಸಿದ, ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗಮನಿಸುವುದಾದರೆ, ಆತ ೨೪ ವರ್ಷಗಳಿಂದ ತನ್ನ ಫಾರ್ಮ್ ನಲ್ಲಿ ಸ್ಥಿರತೆ ಕಾಯ್ದುಕೊಂಡು, ದೇಶದ ಹೆಸರನ್ನು ವಿರಾಜಮಾನವಾಗಿ ಹಾರಿಸಿದವ. ಸಚಿನ್ ಆಡಿದ್ದು ತನ್ನದೇ ಸ್ವಾಯತ್ತತೆ ಹೊಂದಿರುವ ಬಿ.ಸಿ.ಸಿ.ಐ ಎಂಬ ಸಂಸ್ಥೆಗೇ ಹೊರತು ಭಾರತಕ್ಕಾಗಿಯಲ್ಲ ಎನ್ನುವ ಮಾತು ಹಾಸ್ಯಾಸ್ಪದವೆನಿಸುತ್ತದೆ ನನಗೆ. ಸಚಿನ್ ನ ಫೇರ್’ವೆಲ್ ನಲ್ಲಿ ಆತ ಹೇಳಿಕೊಂಡದ್ದು "ಇಟ್ಸ್ ಮೈ ಡ್ರೀಂ ಟು ಪ್ಲೇ ಫಾರ್ ಇಂಡಿಯಾ ಅಂಡ್ ಐ ಹ್ಯಾವ್ ಲೀವ್ಡ್ ಇಟ್ ಫಾರ್ 24 ಇಯರ್ಸ್" ಮತ್ತು "ಇಟ್ಸ್ ಅವರ್ ಪ್ರಿವಿಲೇಜ್ ಅಂಡ್ ಪ್ರೈಡ್ ಟು ಪ್ಲೇ ಫಾರ್ ಇಂಡಿಯಾ". ಇಲ್ಲಿ ಇಂಡಿಯಾದ ಬದಲಾಗಿ ಆತ ಬಿ.ಸಿ.ಸಿ.ಐ ಎಂದು ಬಳಸಲಿಲ್ಲ! ತಮ್ಮದು ಸ್ವಾಯತ್ತತೆಯ ಸಂಸ್ಥೆ ಎಂದು ಘೋಷಿಸಿಕೊಂಡದ್ದು ಬಿ.ಸಿ.ಸಿ.ಐ ನ ದುರಾಸೆಯಿಂದಲೇ ಹೊರತು, ಸಚಿನ್ ನ ದುರಾಸೆಯಿಂದಲ್ಲ.

ಕ್ರಿಕೇಟ್ ಅನ್ನು ಒಲಂಪಿಕ್ ನಲ್ಲಿ ಸೇರಿಸಿದ್ದರೆ ಧ್ಯಾನ್ ಚಂದ್, ಮಿಲ್ಖಾ ಸಿಂಗ್ ಮತ್ತಿತರ ಮಹಾನ್ ಆಟಗಾರರು ಮಾಡಿರುವ ಸಾಧನೆಯಷ್ಟೇ ಸಚಿನ್ ಕೂಡ ಮಾಡಿರುತ್ತಿದ್ದ. ೨೪ ವರ್ಷ ಆಡಿದವನಿಗೆ ಅದು ಸಾಧ್ಯವಾಗುತ್ತಿರಲಿಲ್ಲ ಎಂಬುದು ತಳವಿಲ್ಲದ ವಾದ! ಆತ ತನ್ನ ಆಟದಿಂದಷ್ಟೇ ಅಲ್ಲದೆ, ತನ್ನ ವ್ಯಕ್ತಿತ್ವದಿಂದಲೂ ಎಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾನೆ ಎನ್ನುವುದು ಒಪ್ಪತಕ್ಕಂಥ ವಿಷಯ. ಅಂದ ಮಾತ್ರಕ್ಕೆ ಧ್ಯಾನ್ ಚಂದ್, ಮಿಲ್ಖಾ ಸಿಂಗರ ಸಾಧನೆಯನ್ನು ನಾನು ಅಲ್ಲೆಗೆಳೆಯುತ್ತಿಲ್ಲ, ಸಚಿನ್ ಗಿಂಥ ಮೊದಲು ಅವರಿಬ್ಬರಿಗೆ ಕೊಟ್ಟಿದ್ದರೂ ನನಗೆ ಸಂತೋಷವಾಗುತ್ತಿತ್ತು. ಆದರೆ ಸಚಿನ್ ಗೆ ಕೊಟ್ಟಿದ್ದರಲ್ಲಿ ಯಾವುದೇ ತಪ್ಪೂ ನನಗೆ ಕಾಣುವುದಿಲ್ಲ, ಕಾಂಗ್ರೇಸ್ ನವರ ಆಷಾಢಭೂತಿತನದ ರಾಜಕೀಯ ನಡೆಯೊಂದನ್ನು ಬಿಟ್ಟು! ಆ ರೀತಿ ನೋಡುತ್ತಾ ಹೋದರೆ ’ಭಾರತ ರತ್ನ' ಪ್ರಶಸ್ತಿಯ ’ತಮ್ಮ ಅಧಿಕಾರಾವಧಿಯ ಸಂದರ್ಭದಲ್ಲೇ ಪ್ರಶಸ್ತಿ ಪಡೆದ ಇಂದಿರಾ ಗಾಂಧಿ’ ಮತ್ತು ’ಸರ್ದಾರ್ ವಲ್ಲಭಬಾಯಿ ಪಟೇಲರೊಂದಿಗೆ ೧೯೯೧ ರಲ್ಲಿ ಪ್ರಶಸ್ತಿ ಪಡೆದ ರಾಜೀವ್ ಗಾಂಧಿ’ ಈ ಎರಡು ಸಂದರ್ಭಗಳು ಹಾಸ್ಯಾಸ್ಪದವೂ, ವಿಷಾದನೀಯವೂ ಅನ್ನಿಸುತ್ತದೆ!

- ಪ್ರಸಾದ್.ಡಿ.ವಿ.

Thursday, 14 November 2013

ಕೊಡಲಾಗದುಡುಗೊರೆ!


ನಿನಗೆಂದು ಕೊಡಲು
ಎತ್ತಿಟ್ಟ ಹೂವು ಬಾಡಿದೆ!
ಚೆನ್ನಿತ್ತು, ಚೆಲುವಿತ್ತು,
ಕೆಂಪಿತ್ತು, ಅರಳಿತ್ತು!
ನಿನ್ನ ಮುಡಿ ಸೇರದಿದ್ದರೂ,
ಉಡಿ ಸೇರದಿದ್ದರೂ,
ಕೈ ಸೇರಿದ್ದರೂ ಸಾಕಿತ್ತು,
ತಾನೂ ನಗುತಿತ್ತು!
ಬಾಡಿದ ಹೂವ ಅರಳಿಸಬೇಕು,
ನಗು ಬೇಕು ನನ್ನೆದೆಗೆ!
ಪ್ರೀತಿಯೇ ದಿಕ್ಕೆನಗೆ!

ನನ್ನ ಅಂಗೈ ಹಿಡಿದ ನಿನ್ನ
ಬೆರಳ ಗುರುತುಗಳ
ಮುದ್ದಿಸಿ ಎದೆಗಾನಿಸಿಕೊಂಡಿದ್ದೇನೆ,
ನೀನು ಕೇಳಬೇಕವುಗಳ
ಪಿಸುನುಡಿಯ,
ಹಾಲನ್ನು ಜೇನಿಗೆ ಬೆರೆಸಿ
ಗಟಗಟನೆ ಕುಡಿದಂತೆನಿಸುತ್ತದೆ!
ಸ್ವಲ್ಪವಾದರೂ ಕಹಿಯಿಲ್ಲ,
ಒಗರಿಲ್ಲ, ಹುಳಿಯಂತೂ ಮೊದಲಿಲ್ಲ!
ಸಿಹಿಯೊಂದೇ ಉಳಿದಿದೆ
ನಿನ್ನ ಸವಿಗಲ್ಲದಂತೆ!

ಹೇಳದೆ ಉಳಿದ ನೂರು ಮಾತಿವೆ
ಜೊತೆಯಾಗಿ, ಕೇಳದೆ
ಉಳಿದ ಹಲವಾರು ಪ್ರಶ್ನೆಗಳಿಗೆ!
ಉಸಿರು ಬಿಗಿಹಿಡಿದು
ನುಡಿದು ಬಿಡುವ ಆತುರವಿಲ್ಲ,
ಉತ್ತರ ಕೇಳಿ
ತಿಳಿದುಬಿಡುವ ಆವೇಗವಿಲ್ಲ!
ಉಳಿದದ್ದು ಉಳಿದುಬಿಡಲಿ,
ಸವಿನೆನಪ ಕುರುಹಾಗಿ!
ಋಣ ಉಳಿದರೆ ಉಳಿಯಲಿ,
ನಿನ್ನದೇ ಉಸಿರ ಸುಳಿಯಲಿ!

ಪಾಪಕ್ಕೆ ಪುಣ್ಯ ಜೋಡಿಸುವ
ಗೆಳತಿ ನೀನು!
ಕನಸು ಕಂಡು ಪಾಪ ಮಾಡುವೆ ನಾನು,
ಅವುಗಳಲ್ಲುಳಿದು
ಪಾಪ ತೊಳೆಯುವೆ ನೀನು!
ಆದರೆ ಕಮಲವದನೆ,
ಹಾಲುಗಲ್ಲದ ರಾಣಿ,
ಅತಿಲೋಕ ಸುಂದರಿ ಏನಲ್ಲ!
ನೀನು ಕಡಲೊಳಗಿನ ಮುತ್ತು,
ನಾನದನ್ನು ಕಾಯುವ ಕಪ್ಪೆಚಿಪ್ಪು!

ಇಷ್ಟೆಲ್ಲಾ ಭಾವಗಳ ನಿನಗಾಗೇ ಬೆಸೆದು,
ಕಾಗದದಿ ಪದಗಳ ಮರೆಯಲ್ಲಿ ಹೊಸೆದು,
ಹುಟ್ಟುಹಬ್ಬಕ್ಕೆ ಉಡುಗೊರೆಯ
ಕೊಡಬೇಕು ನಾನು!
ಬರೆಯುತ್ತಿದ್ದ ಲೇಖನಿಯ
ಮಸಿಯದು ಮುಗಿದಿದೆ,
ಇದ್ದ ಒಂದೇ ಹಾಳೆಯೂ ಗಾಳಿಗೆ ಹಾರಿದೆ!
ಮಸಿ ತುಂಬಬೇಕು, ಹಾಳೆಯೂ ಬೇಕು,
ಕೊಡಲಾಗದೇನೋ ಗೆಳತಿ ನಿನಗೆ,
ಕಾಯಬೇಡವೆ, ಬರಲಾಗದುಡುಗೊರೆಗೆ!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Friday, 8 November 2013

ಬೆಳಕು ಬೆತ್ತಲು!


ಬೆತ್ತಲಾಗಬೇಕು ನಾನು,
ಅಂಜಿಕೆಗಳುಳಿಯದಂತಹ
ಹೊಳಪ ಬೆತ್ತಲು!

ಬೆತ್ತಲೆಂದರೆ,
ಕಪ್ಪು ಕತ್ತಲೆಯ ಬೆತ್ತಲಲ್ಲ,
ಪಚ್ಚೆ ಬಿಳಿಯ ಬೆಳಕ ಬೆತ್ತಲು,
ತೆರೆದುಕೊಂಡಷ್ಟೂ
ಬರಿದಾಗುವಂತಹ ಒಡಲು,
ಮರು ಕೃಷಿಗೆ
ಫಲವತ್ತಾಗುವ ಬಯಲು!

ಬೆತ್ತಲೆಂದರೆ,
ಸಂಚಿಯಿಸಿಕೊಂಡ
ಕರ್ಮಗಳ ಹೊಳೆಯಲ್ಲಿ
ಹುಣಸೆ ತೊಳೆದು,
ಹುಳಿ ಇಂಗಿದ ಹುಣಸೆಯ ಜುಂಗಲ್ಲಿ
ಬೆಳಕ ತೊಳೆದು,
ಬೆತ್ತಲನ್ನು ಬೆಳಕಿಗೂ, ಬೆಳಕನ್ನು ಬೆತ್ತಲೆಗೂ
ಆರೋಪಿಸಿಬಿಡುವ ಕ್ರಿಯೆ, ಪ್ರಕ್ರಿಯೆ!

ಬೆತ್ತಲೆಂದರೆ,
ಪ್ರೇಮದೊಂದಿಗೆ ಕಾಮವು,
ಕಾಮದೊಂದಿಗೆ ಪ್ರೇಮವೂ ಜಿದ್ದಿಗೆ ಬಿದ್ದು,
ನಗ್ನತೆಯೊಳಗೆ ಪ್ರೇಮಕ್ಕೆ ಬೆವರ ಗುರುತು!
ಆವೇಶವಿಳಿದ ಮೇಲೂ
ಕಣ್ಣುಗಳು ಕೂಡಿಕೊಂಡ ತುಟಿಗಳ ಬೆಸುಗೆ,
ನನ್ನೊಳಗಿನ ನಗ್ನತೆಯನ್ನು ಒಪ್ಪಿಕೊಂಡು
ಅಪ್ಪಿಕೊಳ್ಳುವ ಪ್ರೇಯಸಿಯ ಸಲುಗೆ!

ಬೆತ್ತಲೆಂದರೆ,
ಅದು ಬೆಳಕು, ನಾನು ನನಗೂ,
ಇತರರಿಗೂ ಉತ್ತರಿಸುವಗತ್ಯವನ್ನೇ
ಉಳಿಸದ ಬೆಳ್ಳಿ ಬೆಳಕು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday, 24 October 2013

ಸಾವಿಗೂ ಪ್ರೀತಿ!“ಪ್ರೀತಿ, ಮೈಥುನಕ್ಕೆ ಮಂಚ ಹತ್ತಿಸುವ ಕಾಮವಲ್ಲ ಕಣೆ, ಆದ ಮೇಲೆ ಮೆಲುಕು ಹಾಕುತ್ತ ಮೈತಡವಿ ಮರೆತುಬಿಡಲು. ಜೀವಂತಿಕೆ ಹೊತ್ತು ತರುವ ನೆನಪುಗಳು, ಕಾಪಿಟ್ಟ ಕನಸುಗಳು ಕಾಡುವಾಗ ಜೀವ ಹೋದಂತೆನಿಸುತ್ತದೆ. ನಿನಗೇನು, ಗೊತ್ತೂ ಗೊತ್ತಿಲ್ಲದಂತೆ, ಮರೆತು ಮರೆಯಾದಂತೆ ಹೋಗಿ ಬಿಟ್ಟೆ. ನಾನೇನು ಮಾಡಲಿ, ಸಾಯುವ ಮನಸ್ಸಿಲ್ಲ ಬದುಕುವ ಚೈತನ್ಯವಿಲ್ಲ! ದಿನವೂ ಸತ್ತು ಉಸಿರಾಡುತ್ತಿದ್ದೇನೆ…” ಎಂದು ಸ್ವಗತವೆಂಬಂತೆ ಹೇಳಿಕೊಂಡು ತನ್ನ ಶವ ಎತ್ತಿಕೊಂಡು ಬೆಡ್ ರೂಮ್ನಿಂದ ಲಿವಿಂಗ್ ರೂಮ್ ಗೆ ಬಂದನು ರಾಜೇಶ್.

ನಡೆಯುತ್ತಿದ್ದವನ ಹೆಜ್ಜೆಗಳು ತಪ್ಪಿ ಹೊರಳಿದಂತೆಯೂ, ತನ್ನ ಮೇಲೆಯೇ ಎರಗಿ ಬಿದ್ದಂತೆಯೂ ಭಾಸವಾಗಿ ಮುಂದೆಂಬುದು ಹಿಂದಾಗಿ, ಹಿಂದೆಂಬುದು ಮುಂದಾಗಿ ಚಲಿಸುವ ಭೀತಿ ಹುಟ್ಟಿಸುತ್ತಿದ್ದವು. ತಾನು ತಡವರಿಸಿ ಬಿದ್ದು ಮುಗ್ಗರಿಸಿದೆನೇ? ಎಂಬ ಭಯವೂ ಕಾಡುತ್ತಿತ್ತು. ಓಡುವ ಆಲೋಚನೆಗಳಿಗೆ ಕಡಿವಾಣ ಹಾಕುವ ಕಲೆ ಗೊತ್ತಿದ್ದರೆ ಚೆನ್ನಾಗಿತ್ತು ಅನಿಸುತ್ತಿತ್ತು. ಸರಿಯಿದ್ದ ಜೀವನದಲ್ಲಿ ತಾನೇ ಧಾಳಿಕೋರನಾಗಿ, ನೆನಪುಗಳನ್ನು ’ಛೂ’ ಬಿಡುತ್ತಿರುವುದು ಅತಿರೇಖವೇನೋ? ಜೀವಂತವಲ್ಲದ ಜೀವನವನ್ನವನು ಬದುಕುತ್ತಿರಬಹುದು. ಆದರೆ ತಾನು ಧಾಳಿಕೋರನೋ ಇಲ್ಲ ಧಾಳಿಯ ತರಗೆಲೆಯೋ ತಿಳಿಯುತ್ತಿಲ್ಲ! ತಲೆ ಚಿಟ್ಟೆನಿಸುತ್ತದೆ, ಮತ್ತೆ ಗಂಟಲು ಒಣಗುತ್ತದೆ. ಪಕ್ಕದಲ್ಲಿದ್ದ ಬಾಟಲ್ ನಲ್ಲಿನ ನೀರು ಗಟಗಟನೆ ಗಂಟಲೊಳಗಿಳಿಯುತ್ತದೆ. ಫ್ಯಾನ್ ಇದ್ದರೂ ಬೆವತ ಮುಖವನ್ನು ಒರೆಸಿಕೊಳ್ಳುತ್ತಾನೆ!

ಮನೆಯಲ್ಲಿ ಯಾರೂ ಇಲ್ಲದಿರುವುದು ಬೆಚ್ಚಿ ಬೀಳಿಸುತ್ತದೆ. ತಾನು ಬಾಲ್ಯವನ್ನೂ ಕಳೆದ ಮನೆ ತನ್ನನ್ನು ಹೀಗೆಂದೂ ಕಾಡಿದ್ದನ್ನು ನೆನಪಿಸಿಕೊಂಡರೂ ನೆನಪಿಲ್ಲ. ಕತ್ತಲೆಯೇ ಭಯವೋ, ಒಬ್ಬಂಟಿತನವೇ ಭಯವೋ ತೀರ್ಮಾನಕ್ಕೆ ಬರದ ಸ್ಥಿತಿ ತಲುಪಿದ್ದ ರಾಜೇಶ್. ಅಪ್ಪ-ಅಮ್ಮ ಈ ಹೊತ್ತಿನಲ್ಲೇ ಕಾಶೀ ಯಾತ್ರೆಗೆ ಹೋಗಬೇಕಿತ್ತೆ? ತಾನೂ ಜೊತೆಗೆ ಹೋಗಿದ್ದರೆ ಮನಸ್ಸಿಗಾದರೂ ನೆಮ್ಮದಿ ಸಿಗುತ್ತಿತ್ತೆ ಎಂದು ಯೋಚಿಸಿ ಸೋಲುತ್ತಿದ್ದ. ಈ ಚಿಲ್ಲರೆ ಯೋಚನೆಗಳು, ಆ ನೆನಪುಗಳು ಬಡಿದೆಬ್ಬಿಸುವ ಭೀಕರತೆಯ ಮುಂದೆ ಜಾಹಿರಾತುಗಳಂತಿರುತ್ತಿದ್ದವು. ಸರಿ ಇನ್ನೂ ಎಷ್ಟೊತ್ತು ಹೀಗೇ ಕೂತಿರೋದು, ತಲೆ ಸುತ್ತುತ್ತಿತ್ತು, ಗೋಡೆಯ ಮೇಲಿನ ಗಡಿಯಾರ ಈ ಸರಿ ರಾತ್ರಿಯ ಹೊತ್ತಲ್ಲಿ ’ಢಣ್ ಢಣ್ ಢಣ್’, ಹನ್ನೊಂದು ಸಲ ಬಡಿಯುತ್ತದೆ. ಗುಂಡಿಗೆಯೂ ಡವಡವಗುಟ್ಟುವ ಶಬ್ಧ ಮಾಡುತ್ತಾ ತಾನು ಬದುಕಿರುವುದನ್ನು ತೋರಿಸುತ್ತಿತ್ತು. ಕಣ್ಣು ಮತ್ತೆ ಮಂಜಾದಂತಾಗಿ ತಾನು ಊಟ ಮಾಡಿಲ್ಲದ ಅರಿವಾಯ್ತು ರಾಜೇಶ್ ಗೆ.

ಡೈನಿಂಗ್ ಟೇಬಲ್ ಮೇಲೆ ಅದಾಗಲೇ ಬಿಸಿ ಮಾಡಿಟ್ಟಿದ್ದ ಹುಳಿಸಾರು ಘಮ್ಮೆನ್ನುವ ಪರಿಮಳವನ್ನೇನೂ ಬೀರುತ್ತಿರಲಿಲ್ಲ. ಸರಿ ಹೇಗಾದರೂ ಊಟ ಮಾಡಿ, ಮಲಗಿಬಿಟ್ಟರೆ ಈ ಯೋಚನೆಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಸಿಕ್ಕಬಹುದೆಂದು ಯೋಚಿಸಿದವನು, ಒಂದು ತಟ್ಟೆ ತೆಗೆದು ಒಂದಷ್ಟು ಅನ್ನವನ್ನು ಸುರುವಿಕೊಂಡ. ಸಾರು ಹಾಕಿಕೊಂಡ. ನೆಂಚಿಕೊಳ್ಳಲು ಇದ್ದ ಖಾರ ಬೂಂದಿಯನ್ನು ಒಂದು ಪ್ಲೇಟ್ ಗೆ ಹಾಕಿಕೊಂಡು, ಒಂದೆರಡು ಕಾಳುಗಳನ್ನು ದವಡೆಗೆ ಒತ್ತರಿಸಿ ಜಗಿದ. ಊಟ ಮಾಡಬಹುದು ಎಂಬ ಸೂಚನೆ ಸಿಕ್ಕಿತು ಜಠರದಿಂದ! ಇತ್ತೀಚೆಗೆ ಯಾವ ಆಹಾರ ಪದಾರ್ಥವನ್ನೂ ಒಳಗೆ ಸೇರಿಸದ ಜಠರ ತನ್ನ ನಿಷೇಧಾರ್ಥಕ ಅಡ್ಡ ಗೋಣನ್ನು ಉದ್ಧುದ್ಧ ಕುಣಿಸಿದ್ದು ಸಮಾಧಾನವಾಗಿತ್ತು. ಒಂದೊಂದೇ ತುತ್ತುಗಳಂತೆ ಅನ್ನ ಹೊಟ್ಟೆಯೊಳಗಿಳಿದಂತೆ ಸಮಾಧಾನವೆನ್ನಿಸಲು ಶುರುವಾಯ್ತು. ತನ್ನ ಮನಸ್ಸು ಸರಿಯಿಲ್ಲವೆಂದು ಊಟವನ್ನೂ ತಪ್ಪಿಸುವುದು ಬುದ್ಧಿಗೇಡಿ ಕೆಲಸವೆಂದೂ, ಅದು ಮನಸ್ಸಿನ ದುಃಖವನ್ನು ದೇಹದ ಅಸಹಾಯಕತೆಯನ್ನಾಗಿ ಪರಿವರ್ತಿಸಿ ಬುದ್ಧಿ ನಿಷ್ಕ್ರಿಯವಾಗುವಂತೆ ಮಾಡುತ್ತದೆಂದೂ ಅರಿವಾಗುತ್ತಿತ್ತು. ಊಟ ಮುಗಿಸಿ, ಕೈ ತೊಳೆದು ತಟ್ಟೆಯನ್ನು ಸಿಂಕ್ ನೊಳಗಿಟ್ಟನು.

ಹೆಚ್ಚು ದಣಿದಿದ್ದರಿಂದಲೋ, ಮನಸ್ಸು ರಾಢಿಯಾಗಿದ್ದರಿಂದಲೋ ಅವನ ಮನಸ್ಸು ಬೆಡ್ ರೂಮನ್ನು ಹುಡುಕುತ್ತಿತ್ತು. ಹೆಜ್ಜೆಗಳು ತಾವಾಗಿಯೇ ಎಡ ಬದಿಯ ರೂಮಿನ ಹಾದಿ ಹುಡುಕಿ, ನಡೆದವು.

---------------------------------------------------------------------------------

“ನಿನ್ನ ಕೈಯೊಳಗೆ ನನ್ನಂಗೈ ಬೆಸೆದು ಕುಳಿತುಬಿಟ್ಟರೆ ಆಕಾಶದಲ್ಲಿ ಬೆಳದಿಂಗಳು ಕಾಣುತ್ತದೆ ರಾಜೀ…” ಖುಷಿ ನಿಧಾನವಾಗಿ ರಾಜೇಶ್’ನ ಭುಜದ ಮೇಲೊರಗುತ್ತಿದ್ದಳು. ಅವನೋ ಅವನೊಳಗೇ ಮಂಡಿಗೆ ತಿನ್ನುತ್ತಾ ಎದೆಯುಬ್ಬಿಸಿಕೊಳ್ಳುತ್ತಿದ್ದ!

“ಲೇ, ನೀವ್ ಹುಡ್ಗಿಯರು ಭಾರೀ ಛಾಲಾಕಿ… ಐಸ್ ಇಟ್ಟಂಗೆ, ನೈಸ್ ಮಾಡಿ ನಮ್ಮಂಥ ಒಳ್ಳೆ ಹುಡುಗ್ರ ತಲೆ ಕೆಡಿಸ್ಬಿಡ್ತೀರಿ… ಪಾಪ ನಾವು!” ಅವನು ಮೆಲ್ಲಗೆ ಕಣ್ಣು ಮಿಟುಗಿಸಿದ. ಅವನು ಹಾಗಂದಿದ್ದೇ ತಡ, ಅವಳು ತಡೆದರೂ ನಗುವೆಂಬುದು ಒದ್ದುಕೊಂಡು ಬಂತು. ಅವನೂ ಆ ನಗುವಿನಲ್ಲಿ ಒಂದಾದ.

“ಅಬ್ಬಾ ಮಾತು ನೋಡು.. ಪಾಪಿ, ನಾನ್ ಬಂದಿದ್ನಾ ಹಿಂದ್ ಹಿಂದೆ? ಪ್ರೀತಿ ಮಾಡ್ತೀನಿ ಅಂತ? ಈಗ ಅಯ್ಯೋ ಪಾಪ ನನ್ನ ಬಲೆ ಹಾಕಿ ಕೆಡವಿಕೊಂಡಳು ಅನ್ನೋ ಥರ ಮಾತಾಡ್ತಾನೆ…” ಅಂತ ಹುಸಿ ಕೋಪ ನಟಿಸಿದಳು ಖುಷಿ.

“ನಾನೇ ಬಂದಿದ್ದೆ ಅಂತಿಟ್ಕೋ, ಆದ್ರೆ ನನ್ನ ಮನಸ್ಸು ಕೆಡಿಸಿ ಕರೆಂಟ್ ಹೊಡೆಸಿದವಳು ನೀನೇ. ಹಾಗಂದಾಗ ಫ್ಲೋರೆಸೆಂಟ್ ಬಲ್ಬ್ ಥರ ನಗೋದು ಬೇರೆ…” ಎಂದು ಜೋರಾಗಿ ನಕ್ಕ. ಅವಳು ಅವನೊಳಗೆ, ಅವನು ಅವಳ ಕಣ್ಣೊಳಗೆ ಸಿಲುಕುತ್ತಿದ್ದರು. ಆ ತಕ್ಷಣಕ್ಕೆ ಅಪ್ಪ ಹೇಳಿದ್ದ ಯಾವುದೋ ಕೆಲಸದ ನೆನಪಾಗಿ… “ಖುಷಿ ನಾನು ಮತ್ತೆ ಸಿಗ್ತೀನಿ ಕಣೇ, ನೀನು ಆಟೋ ಹಿಡ್ಕೊಂಡು ಪಿ.ಜಿ. ಗೆ ಹೋಗು. ಬೇಡ, ನಾನೇ ಗೊತ್ತಿರೋ ಹುಡುಗನ ಆಟೋ ಹತ್ತಿಸ್ತೀನಿ ಬಾ…” ಎಂದು ಎಬ್ಬಿಸಲು ಪ್ರಯತ್ನಿಸಿದ.

ಅವಳು ಕೈಯ ಹಿಡಿತವನ್ನ ಬಿಗಿ ಮಾಡಿದಳು. “ಚಿನ್ನು ಹಠ ಮಾಡ್ಬೇಡ್ವೇ ಅಪ್ಪಾ ಬ್ಯಾಂಕ್ ಗೆ ಹೋಗ್ಬಾ ಅಂತ ಹತ್ ಸಲ ಹೇಳಿದ್ದಾರೆ. ನಾನು ಸಂಜೆ ಕಾಲ್ ಮಾಡ್ತೀನಿ. ಈಗ ಮೇಲೇಳು” ಅಂದ.

ಅವಳು, “ನಂಗದು ಬೇಕು” ಅಂದಳು. “ಅದು ಅಂದ್ರೆ ಏನು?” ಕೇಳಿದ ಅವನು. “ನನ್ನ ಯಾವಾಗ್ಲೂ ಹಿಡಿದುಕೊಂಡಿರೋಕೆ ಈ ಕೈ ಬೇಕು ನಂಗೆ” ಎಂದು ಅವಳ ಬೆರಳುಗಳಲ್ಲಿ ಬೆರಳಹುದುಗಿಸಿದ್ದ ಅವನ ಕೈಯನ್ನು ಎತ್ತಿ ತೋರಿಸಿದಳು.

“ಹೋ ಅದಾ.. ಅದು ಯಾವಾಗ್ಲೂ ನಿಂದೇ… ಈಗ ಎದ್ದು ನಡಿ” ಎಂದು ಎಬ್ಬಿಸಲು ಪ್ರಯತ್ನಿಸಿದ ರಾಜೇಶ್. ಅವಳು ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಿ, “ನಾನು ಹೇಳಿಲ್ವಾ, ಯಾವಾಗ್ಲೂ ಅಂದ್ರೆ ಯಾವಾಗ್ಲೂ” ಅಂದಳು ನಗುತ್ತಾ. “ಅಯ್ಯೋ ಯಾವಾಗ್ಲೂ ಕೈ ಬೇಕು ಅಂದ್ರೆ ಕಿತ್ ಕೊಡ್ಲಾ? ಆಟದ ವಸ್ತು ಕೇಳೋಥರ ಕೇಳ್ತೀಯಲ್ಲೇ?” ಎಂದು ಹುಸಿ ಕೋಪ ನಟಿಸಿದನವನು. ಅವಳು, “ಕಿತ್ ಕೊಡು, ಅದ್ರಲ್ಲೇನು?” ಎಂದು ನಗುವುದೇ? ಅವನಿಗೆ ಅವಳನ್ನು ಅಲ್ಲೇ ಅಪ್ಪಿ ಮುದ್ದಿಸಬೇಕು ಎನ್ನಿಸುತ್ತಿತ್ತು. ಅವಳು ಹೀಗೆ ಮುದ್ದು ಮುದ್ದಾಗಿ ಹಠ ಹಿಡಿದಾಗೆಲ್ಲಾ, ಎದೆಗಾತುಕೊಂಡು ಲಾಲಿ ಹಾಡುವಾ… ಎನಿಸುತ್ತದೆ ಅವನಿಗೆ!

ಅವಳು ಮೆಲುವಾಗಿ ಅವನ ಭುಜಕ್ಕೊರಗುತ್ತಿದ್ದಾಳೆ, ಅವನು ಅವಳ ಹಣೆಯನ್ನು ಮುತ್ತುತ್ತಿದ್ದ ತಲೆ ಕೂದಲನ್ನು ಸರಿಪಡಿಸಿ ತಲೆ ನೇವರಿಸುತ್ತಾನೆ. ಅವಳ ಕಣ್ಣುಗಳು ಹೊಳೆಯುತ್ತವೆ. ಸೂರ್ಯ ಸಂಜೆಯ ಗೋಧೂಳಿಗೋ, ಇವರಿಬ್ಬರ ಪ್ರೇಮದ ಸಿಗ್ಗಿಗೋ ಕೆಂಪಾಗುತ್ತಾನೆ!

***

“ಹಲೋ ರಾಜೀ, ನಾನು ಹೇಳೋದು ಕೇಳೋ… ನಾನು ಅಮರಪ್ರೇಮಿ, ಅವಳು ಪ್ರೇಮದೇವತೆ ಅಂತ ಫೂಲ್ ಥರ ಯೋಚಿಸ್ಬೇಡ. ನಂಗನ್ಸೋ ಪ್ರಕಾರ ಅವ್ಳು ನಿನ್ ನಿಷ್ಕಲ್ಮಷ ಪ್ರೀತಿಗೆ ಅರ್ಹಳಲ್ಲ!” ಸುನೀಲ್ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ.

“ಇಲ್ಲ ಸುನೀಲ್, ನೀನು ಹೇಳೋ ಥರದ ಹುಡ್ಗಿ ಅಲ್ಲ ಕಣೋ ಅವ್ಳು. ಯೂ ಹ್ಯಾವ್ ಮಿಸ್ಟೇಕನ್. ಅವ್ಳು ಎಲ್ಲಾ ಹುಡುಗ್ರು ಜೊತೆ ಸ್ನೇಹದಿಂದಿರ್ತಾಳೆ ಅಂದ ಮಾತ್ರಕ್ಕೆ ಅವ್ಳನ್ನ ಅನುಮಾನಿಸ್ಬೇಡ…” ರಾಜೇಶ್ ಏನನ್ನೋ ಹೇಳಿ ತನ್ನ ಪ್ರೀತಿಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದ. ಅವನಿಗೇ ಅರಿವಾಗದಂತೆ ಅವನ ಹಣೆ ಗೆರೆಗೊಳ್ಳುತ್ತಿತ್ತು. ಒಂದೊಂದು ಗೆರೆಗಳೂ ಯೋಚನೆಯ ಅಲೆಗಳಲ್ಲಿ ಮುಳುಗೇಳುತ್ತಿದ್ದವು. ’ಇವ್ನು ಏನಂತ ತಿಳ್ಕೊಂಡಿದ್ದಾನೆ ನನ್ ಖುಷಿ ಬಗ್ಗೆ? ಅವ್ಳು ಪುಟಕಿಟ್ಟ ಚಿನ್ನ. ಸ್ವಲ್ಪ ತುಂಟತನವೇನೋ ಇದೆ, ಅದು ಅವಳಿಗೆ ಶೋಭೆಯೇ! ಆದರೆ ನನಗೆ ಎಂದಿಗೂ ಮೋಸ ಮಾಡಲಾರಳು. ಅದನ್ನು ತನ್ನ ಕನಸ್ಸಿನಲ್ಲಿಯೂ ಯೋಚಿಸಲಾರಳು! ಅಯ್ಯೋ ಸುನೀಲ ಯಾರು? ನನ್ನ ಗೆಳೆಯ, ನನ್ನ ಜಿಗ್ರಿ ದೋಸ್ತ್. ಅವ್ನ-ನನ್ನ ನಡುವೆ ಯಾವುದೇ ಮುಚ್ಚುಮರೆಗಳೇ ಇಲ್ಲ. ಅವನು ನನಗೆ ಕೆಟ್ಟದಾಗ್ಲಿ ಅಂತ ಯೋಚಿಸ್ತಾನ? ನನ್ನ ಪ್ರೀತಿಗೆ ಉಳಿ ಹಿಂಡೋದುಂಟಾ? ಅವ್ನು ಹೇಳ್ತಿರೋದ್ರಲ್ಲಿ. ಏನಾದ್ರೂ ಸತ್ಯ ಉಂಟಾ?’ ರಾಜೇಶ್’ನ ತಲೆ ಧಿಂ ಎನ್ನುತ್ತದೆ. ಅವನು ರಿಸೀವರ್ ಹಿಡಿದುಕೊಂಡು ಕುಸಿಯುತ್ತಾನೆ!

“ಅದ್ನೇ ಮಾಡ್ಬೇಡ ಅಂದಿದ್ದು ನಾನು. ಪ್ಲೀಸ್ ಕಣೋ ನನ್ನ ನಂಬು. ಇಲ್ದಿದ್ರೆ ಜೀವ್ನ ಹಾಳು ಮಾಡ್ಕೊತೀಯ…” ಸುನೀಲ್ ಆ ಕಡೆಯಿಂದ ಬಡಬಡಿಸುತ್ತಾನೆ.

“ಸರಿ ನೀ ಹೇಳೋದೆಲ್ಲ ನಿಜ ಅಂತ್ಲೇ ಇಟ್ಕೊಳ್ಳೋಣ. ನಿಂಗೆ ಈ ವಿಷ್ಯ ಹೇಗ್ ಗೊತ್ತಾಯ್ತು?” ಸಾವರಿಸಿಕೊಂಡ ರಾಜೇಶ್ ಕೇಳುತ್ತಾನೆ.

“ಅವಳ ಹೊಸ ಬಾಯ್ ಫ್ರೆಂಡ್ ಕೂಡ ನನ್ನ ಸ್ನೇಹಿತ. ಒಂದೆರಡು ಸಲ ನಿನ್ನ ಹುಡುಗಿಯೊಂದಿಗೆ ಅವನನ್ನ ನೋಡಿದ್ನಲ್ವಾ, ಸುಮ್ನೆ ಛೇಡ್ಸೋಕೆ ಅವ್ನಿಗೆ, ಏನೋ ಹುಡ್ಗಿ ಜೊತೆ ಫುಲ್ ರೊಮ್ಯಾನ್ಸಾ? ಅಂತ ಕೇಳ್ದೆ. ಅವ್ನೇ ಬಾಯಿ ಬಿಟ್ಟ ಕಣೋ. ಇದೆಲ್ಲ ನಿನ್ನ ವಿಷ ವರ್ತುಲದಲ್ಲಿ ಸಿಕ್ಸುತ್ತೆ ರಾಜೀ. ಪ್ಲೀಸ್ ಸ್ಟೇ ಔಟ್ ಆಫ್ ಇಟ್.” ಸುನೀಲ್ ರಾಜೇಶ್’ನ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದ. ’ಸುನೀಲ ಹೇಳುವುದರಲ್ಲಿ ನಿಜವಿದ್ದರೂ ಇರಬಹುದು. ಅವನು ಪಿ.ಜಿ. ಓದುತ್ತಿರುವ ಕಾಲೇಜ್ ನಲ್ಲೇ ಖುಷಿ ಕೂಡ ಪಿ.ಜಿ. ಮಾಡ್ತಿದ್ದಾಳೆ. ಎಷ್ಟೋ ಬಾರಿ ಖುಷಿಗೆ ಸರ್ಪ್ರೈಸ್ ಗಿಫ್ಟ್ ಗಳನ್ನ ಕಳಿಸಲು ಸಹಾಯ ಮಾಡ್ತಿದ್ದವನೇ ಅವ್ನು. ನಾನು ಅವರಿಬ್ಬರಿಗೆ ಒಮ್ಮೆ ಮುಖತಃ ಭೇಟಿ ಮಾಡಿಸಿದ್ದೂ ನೆನಪು. ಅಯ್ಯೋದೇವ್ರೆ ಇವ್ನು ಹೇಳ್ತಿರೋದೆಲ್ಲಾ ಸುಳ್ಳಾಗ್ಲಿ!’ ರಾಜೇಶ್ ಅಧೀರನಾಗುತ್ತಿದ್ದಾನೆ.

ತನ್ನೊಳಗೇ ತತ್ತರಿಸುತ್ತಿದ್ದ ಅವನು. “ನೀನು ಏನ್ ಹೇಳಿದ್ರೂ ನಂಬಲ್ಲ ನಾನು. ನನ್ನ ಪಾಡಿಗೆ ನನ್ನ ಬಿಟ್ಬಿಡು. ನನ್ನ ಪ್ರೀತಿನ ಹೇಗೆ ಉಳಿಸ್ಕೊಳ್ಬೇಕು, ಹೇಗೆ ಕಾಪಾಡ್ಕೊಳ್ಬೇಕು ಅಂತ ನಂಗೆ ಗೊತ್ತಿದೆ…” ಎಂದ ರಾಜೇಶ್ ನ ತಲೆಯಲ್ಲಿ ನೂರಾರು ಯೋಚನೆಗಳು ಓಡಾಡುತ್ತಿದ್ದವು.

“ಸರಿ ನನ್ನ ನಂಬ್ದಿದ್ರೆ ಬೇಡ, ನಂಬಬೇಡ! ಆದ್ರೆ ಇವತ್ತು ಸಂಜೆ ಕಾರಂಜಿ ಕೆರೆಗೆ ಹೋಗು. ಅಲ್ಲಿ ಅವರಿಬ್ರೂ ಭೇಟಿ ಮಾಡ್ತಿದ್ದಾರೆ ಅನ್ನೋ ವಿಷ್ಯಕ್ಕೆ ನಾನು ಕಿವಿಯಾದೆ. ಅದೂ ಅಚಾನಕ್ ಆಗಿ ಕಿವಿಗೆ ಬಿದ್ದದ್ದು! ಆಮೇಲೆ ಏನ್ ಮಾಡ್ಬೇಕು ಅಂತ ನೀನೇ ಯೋಚ್ನೆ ಮಾಡ್ತೀಯಂತೆ!” ಸುನೀಲ್ ತನ್ನ ಬಳಿ ಇದ್ದ ಎಲ್ಲಾ ವಿಷಯಗಳನ್ನು ಒದರಿ ರಿಸೀವರ್ ಇಟ್ಟುಬಿಟ್ಟ.

ಖುಷಿ ಇತ್ತೀಚೆಗೆ ನನ್ನೊಂದಿಗೆ ಮಾತು ಕಡಿಮೆ ಮಾಡಿದ್ದಾಳೆ. ಕೇಳಿದ್ರೆ ಕಾಲೇಜು, ಸ್ಟಡೀಸ್ ಅಂತ ನೆವ ಹೇಳ್ತಾಳೆ. ನಾನೋ ಈ ಕಂಪೆನಿ ಕೆಲ್ಸಗಳ ಮಧ್ಯೆ ಸಿಕ್ಕೊಂಡಿದ್ದೀನಿ. ನಾನು ಭೇಟಿಯಾಗ್ಬೇಕು ಅಂದಾಗ ಓದು ಅಂತ ಕಾರಣ ಹೇಳ್ತಾಳೆ, ತಾನೇ ಭೇಟಿ ಮಾಡು ಅಂತಾನೂ ಕೇಳ್ತಿಲ್ಲ. ಇವ್ಳು ಹಿಂದೆ ಹೀಗಿರ್ಲಿಲ್ಲ. ಈ ಹುಡ್ಗಿಯರೆಲ್ಲಾ ಹೀಗೇನಾ? ಗೆಳೆಯ ಅಂತನ್ನಿಸ್ಕೊಂಡ ಹುಡ್ಗ ಕಣ್ಣೆದುರಿಗಿಲ್ಲ ಅಂದ ತಕ್ಷಣ ಅವನ ಮೇಲಿನ ಎಲ್ಲಾ ಭಾವನೆಗಳು ಕಣ್ಣೆದುರಿಗಿರುವ ಮತ್ತೊಬ್ಬನ ವಶವಾಗಿಬಿಡ್ತವಾ? ಅವಳು ಆ ಇನ್ನೊಬ್ಬನ ತೆಕ್ಕೆಯೊಳಗೆ ಜಾರಿ ಬಿಡ್ತಾಳಾ? ಬೇರೆ ಹುಡ್ಗಿಯರು ಹೋಗ್ಲಿ, ನನ್ನ ಖುಷಿ ಕೂಡ ಹೀಗೇನಾ? ರಾಜೇಶನ ಯೋಚನೆಗಳು ಎಲ್ಲಾ ಎಲ್ಲೆಗಳನ್ನೂ ಮೀರುತ್ತಿದ್ದವು. ’ಸರಿ, ಅವ್ನೇನಂದ ಕಾರಂಜಿ ಕೆರೆ ಅಲ್ವಾ? ಇವತ್ತು ಸಂಜೆ ಹೋಗಿ ನೋಡೇ ಬಿಡೋಣ!’ ರಾಜೇಶ್ ತನ್ನೊಳಗೇ ಒಂದು ನಿರ್ಧಾರಕ್ಕೆ ಬಂದ.

***

ಸಂಜೆಯ ತಂಪು ಗಾಳಿ ಹಿತವಾಗಿತ್ತು. ರಾಜೇಶ್ ಒಂದು ಕಡೆಯಿಂದ ಕಾರಂಜಿ ಕೆರೆ ಉದ್ಯಾನವನ್ನು ಜಾಲಾಡಲು ಪ್ರಾರಂಭಿಸಿದ್ದನು. ಒಂದು ಕಡೆಯ ಎಲ್ಲಾ ಬೆಂಚುಗಳನ್ನೂ ಪರಿಶೀಲಿಸಿದ ನಂತರ ಇನ್ನೊಂದು ದಿಕ್ಕಿನೆಡೆಗೆ ಹೆಜ್ಜೆಗಳು ನಡೆದು ಹೋಗುತ್ತಿದ್ದವು. ಅವರಿಬ್ಬರನ್ನೂ ಕಂಡ ನಂತರ ಅದೇ ಹೆಜ್ಜೆಗಳು ಅದುರಿದವು, ತರತರಗುಟ್ಟಿದವು. ಹೊಂಬಿಸಿಲಲ್ಲೂ ಮೈ ಬೆವರುತ್ತಿತ್ತು.

ರಾಜೇಶ್ ತನ್ನೊಳಗೇ, ’ರಾಜೇಶ್ ಕಾಮ್ ಡೌನ್, ರೆಡಿ ಟು ಫೇಸ್ ದ ರಿಯಾಲಿಟಿ!’ ಎಂದು ಧೈರ್ಯ ಹೇಳಿಕೊಳ್ಳುತ್ತಿದ್ದನು. ಸ್ವಲ್ಪ ಸಮಯದವರೆಗೂ ಅವರಿಬ್ಬರ ಮಾತುಗಳನ್ನಾಲಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ. ಕಡೆಗೆ ಇದೆಲ್ಲದಕ್ಕೂ ಇತಿಶ್ರೀ ಹಾಡುವ ಗಟ್ಟಿ ಮನಸ್ಸು ಮಾಡಿ ಅವರಿಬ್ಬರ ಮುಂದೆ ಪ್ರತ್ಯಕ್ಷನಾದನು.

ಅವನನ್ನು ಕಾಣುತ್ತಿದ್ದಂತೆ ಸ್ವಲ್ಪ ವಿಚಲಿತಳಾದಂತೆ ಕಂಡು ಬಂದ ಖುಷಿ, ಬಾಯಿ ತೆರೆಯಲಾಗದೆ ’ಬೆಬ್ಬೆಬ್ಬೆ…’ಗುಟ್ಟುತ್ತಿದ್ದಳು. ಸ್ವಲ್ಪ ಸಮಯದ ನಂತರ ಸಾವರಿಸಿಕೊಂಡು, “ಹೇ ರಾಜೇಶ್ ನೀನೇನಿಲ್ಲಿ. ನಿನ್ನ ನೋಡ್ತಿರೋದು ಆಶ್ಚರ್ಯ ಆಗ್ತಿದೆ!” ಎಂದಳು.

“ಹೌದು ವಾಸ್ತವಗಳನ್ನು ಎದುರಿಸುವಾಗ ಎಲ್ರಿಗೂ ಹಾಗಾಗಬಹುದು!” ಎಂದನು ರಾಜೇಶ್. ಅವಳ ಮುಖ ಕಪ್ಪಿಟ್ಟಿತು.

ಆದರೂ ಸಾವರಿಸಿಕೊಂಡು, ಪಕ್ಕದಲ್ಲಿದ್ದ ಹುಡುಗನಿಗೆ, “ಹೇ ಜ಼ರೀನ್, ಇವ್ನು ನನ್ನ ಇಂಜಿನಿಯರಿಂಗ್ ಕಾಲೇಜ್ ಮೇಟ್ ಮತ್ತು ಗೆಳೆಯ ರಾಜೇಶ್” ಎಂದಳು. ನಂತರ ರಾಜೇಶ್ ನೆಡೆಗೆ ತಿರುಗಿ, “ರಾಜೇಶ್, ಯೂ ಕ್ನೋ, ಹೀ ಈಸ್ ಜ಼ರೀನ್. ನನ್ನ ಬಾಯ್ ಫ್ರೆಂಡ್” ಎಂದು ಪರಿಚಯಿಸಿದಳು.

ಜ಼ರೀನ್ ಸಹಜವೆಂಬಂತೆ ತನ್ನ ಕೈ ಮುಂದೆ ಚಾಚಿದ. ಅವನ ಕೈ ಕುಲುಕಿದ ರಾಜೇಶ್ ಖುಷಿಯೆಡೆಗೆ ತಿರುಗಿ, “ಇಟ್ಸ್ ಗುಡ್ ಟು ಕ್ನೋ, ಲಾಟ್ ಆಫ್ ಇನ್ಫರ್ಮಾಷನ್ಸ್ ಇನ್ ಅ ಡೇ!” ಅಂದನು. ತಾನೇ ಮುಂದುವರೆಸುತ್ತಾ… ”ಖುಷಿ ಅಕ್ಟೋಬರ್ ೧೦ಕ್ಕೆ ನನ್ನ ಭೇಟಿ ಮಾಡು. ನಾನು ನಿಂಗೆ ಸೆಂಡ್ ಆಫ್ ಕೊಡ್ಬೇಕು!” ಎಂದನು. ಅವಳು ದಿಗ್ಭ್ರಾಂತಳಾಗಿ ನಿಂತಿದ್ದಳು. “ನನಗೆ ಪ್ರೀತಿಯೆಂದರೇನೆಂದು ತಿಳಿಸಿ ದೊಡ್ಡ ಉಪಕಾರ ಮಾಡಿದ ನಿನಗೆ ನಾನು ಅಷ್ಟೂ ಮಾಡಿಲ್ಲ ಅಂದ್ರೆ ತಪ್ಪಾಗುತ್ತೆ!” ಎಂದ ರಾಜೇಶನ ಹೆಜ್ಜೆಗಳು ಬಿರುಸು ಪಡೆದುಕೊಂಡವು.

***

ಅಸಾಧಾರಣವಾಗಿ ಬೆವರುತ್ತಿದ್ದ ರಾಜೇಶನಿಗೆ ಗಕ್ಕನೆ ಎಚ್ಚರವಾಯ್ತು. ತಾನು ಕಂಡದ್ದು ಕನಸೋ, ನಿಜವೋ ತಿಳಿಯದೆ ತೊಳಲಾಡಲಾರಂಭಿಸಿದ. ಗಡಿಯಾರ ಮತ್ತೆ, ’ಢಣ್ ಢಣ್’ ಎಂದು ಎರಡು ಸಲ ಬಡಿದು ಸುಮ್ಮನಾಯ್ತು. ತಡೆಯಲಸಾಧ್ಯವಾದ ದಾಹವನ್ನು ತಣಿಸಿಕೊಳ್ಳಲು ಅವನು ನೀರಿಟ್ಟಿದ್ದ ಲೋಟ ಹುಡುಕಲೇಬೇಕಾಯ್ತು. ಗಟಗಟನೆ ನೀರು ಗಂಟಲೊಳಗಿಳಿಸಿಕೊಂಡವನು, ಸಮಾಧಾನದ ನಿಟ್ಟುಸಿರು ಬಿಟ್ಟನು. ಎದ್ದು ತನ್ನ ಮಂಚದ ಪಕ್ಕದಲ್ಲಿದ್ದ ಕಿಟಕಿಗಳನ್ನು ತೆರೆದು ಸುಯ್ಯನೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿಕೊಂಡನು. ಇನ್ನೂ ನಿದ್ದೆ ಕಳೆದಿಲ್ಲ ಎಂದೆನಿಸಲು ಶುರುವಾಗುತ್ತದೆ, ಸುಮ್ಮನೆ ಯೋಚನೆ ಮಾಡುತ್ತ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕೂರುತ್ತಾನೆ. ಕುರ್ಚಿಯನ್ನು ಹಿಂದಿನಿಂದ ಮುಂದಕ್ಕೂ, ಮುಂದಿನಿಂದ ಹಿಂದಕ್ಕೂ ಜೋಕಾಲಿ ಜೀಕಿಸುತ್ತಾನೆ. ಈಗವನಿಗೆ ಹಾಯೆನಿಸುತ್ತದೆ!

---------------------------------------------------------------------------------

“ಹಲೋ, ರಾಜೇಶ್ಅವರ ಮಾತಾಡ್ತಿರೋದು?” ಎಂದು ಹೆಣ್ಣು ದನಿಯೊಂದು ರಾಜೇಶ್’ನ ಮೊಬೈಲೊಳಗಿಂದ ಕೇಳಿ ಬರುತ್ತದೆ. ’ಐಸ್ ಕ್ರೀಂ ಕಾರ್ನರ್’ ನ ಒಂದು ಮೂಲೆಯಲ್ಲಿ ಕೂತಿದ್ದ ಅವನು ಆ ಕಡೆ, ಈ ಕಡೆ ನೋಡಿ… “ಹೌದು, ಹೇಳಿ” ಎಂದನು.

“ನಾನು ಖುಷಿ ತಂಗಿ ಅನೀತ ಮಾತಾಡ್ತಿರೋದು” ಎಂದಿತು ಆ ಕಡೆಯ ಧ್ವನಿ. ರಾಜೇಶ್’ನಿಗೆ ಅನೀತಾಳ ನೆನಪಾಯ್ತು. ಆ ಥರ ನೋಡೋದಾದ್ರೆ ಅವನು ಖುಷಿ ಮನೆಯವ್ರನ್ನ ಒಂದೆರಡು ಸಲ ಭೇಟಿ ಮಾಡಿಯೂ ಇದ್ದ! ಆ ಕುಟುಂಬದಲ್ಲಿ ತಾನೂ ಕಳೆದುಹೋಗಬೇಕೆಂದು ಬಯಸಿದ್ದ.

“ಹೇಳು ಅನೀತಾ, ಏನ್ ಸಮಾಚಾರ?” ಅವನು ಕರೆ ಮಾಡಿದ ಕಾರಣ ವಿಚಾರಿಸಿಕೊಳ್ಳುತ್ತಿದ್ದ.

“ಅಕ್ಕನಿಗೆ ಆಕ್ಸಿಡೆಂಟ್ ಆಗಿದೆ. ಐ.ಸಿ.ಯೂ ನಲ್ಲಿದ್ದಾಳೆ. ನಿಮ್ಮ ಹೆಸರನ್ನು ಪದೇ ಪದೇ ಕನವರಿಸುತ್ತಿದ್ದಳು ಅದಕ್ಕೆ ನಿಮಗೆ ಫೋನ್ ಮಾಡಿದ್ದು” ಎಂದಿತು ಆ ಕಡೆಯ ಧ್ವನಿ.

ರಾಜೇಶ್ ಆಗಷ್ಟೆ ಕೇಳಿದ ವಿಷಯವನ್ನು ಅರಗಿಸಿಕೊಳ್ಳಲಾಗದೆ ತತ್ತರಿಸುತ್ತಿದ್ದ. ಅವ್ಳು ಅಷ್ಟು ವೇಗವಾಗಿ ಗಾಡಿ ಓಡ್ಸೋಳಲ್ಲ ಆದ್ರೂ ಯಾಕ್ ಹೀಗಾಯ್ತು. ಕೈಗಳು ನಡುಗಲು ಪ್ರಾರಂಭಿಸುತ್ತವೆ. ಸ್ವಲ್ಪ ಸಾವರಿಸಿಕೊಂಡು… “ಯಾವ ಆಸ್ಪತ್ರೆಲಿದ್ದಾಳೆ?” ಅವನಿಗರಿವಿಲ್ಲದಂತೆ ಹೊರಟಿತ್ತು ಮಾತು.

“ಅಪೋಲೋ ಆಸ್ಪತ್ರೆ. ಅಪ್ಪ-ಅಮ್ಮ ಎಲ್ರೂ ಬಂದಿದ್ದಾರೆ. ಅಕ್ಕ ಪದೇ ಪದೇ ನಿಮ್ಮ ಹೆಸ್ರನ್ನ ಕನವರಿಸ್ತಿದ್ದಾಳೆ. ಒಂದ್ಸಲ ಬಂದ್ ಹೋಗೋಕಾಗುತ್ತಾ?” ದೈನ್ಯವಾಗಿ ಕೇಳಿದಳು ಅನೀತ. “ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರ್ತೀನಿ” ಮೊಬೈಲ್ ಅನ್ನು ಜೇಬಿಗಿಳಿಸಿದವನ ಬೈಕ್ ವೇಗವಾಗಿ ಓಡಲಾರಂಬಿಸುತ್ತದೆ.

***

ಖುಷಿ ಐ.ಸಿ.ಯೂ ನಲ್ಲಿರೋದು ನೋಡಿ ರಾಜೇಶನ ಕಣ್ಣುಗಳು ಹನಿಗೂಡುತ್ತಿದ್ದವು. ಅವನು ಖುಷಿಯ ಪರಿಸ್ಥಿತಿ ಹೇಗಿದೆ ಎಂದು ತಿಳಿಯುವ ಧಾವಂತ ತೋರಿಸುತ್ತಾನೆ. ಅವಳನ್ನು ಟ್ರೀಟ್ ಮಾಡ್ತಿರೋ ಡಾಕ್ಟರ್ ಗಾಗಿ ಅಲ್ಲಲ್ಲಿ ತಡಕಾಡುತ್ತಾನೆ. ಅವನಿಗೆ ಏನು ಮಾಡಬೇಕೆಂದೇ ತೋಚದಾಗುತ್ತದೆ.

ಮುಂದೆ ನಡೆದು ಹೋಗುವಾಗ, ಯಾರೋ ಖಾಕಿ ತೊಟ್ಟ ಒಂದಷ್ಟು ಜನ ಮಧ್ಯ ವಯಸ್ಕರೊಬ್ಬರೊಂದಿಗೆ ಮಾತನಾಡುತ್ತಿರುತ್ತಾರೆ. “ನಿಮ್ಮ ಮಗಳೇನಾದ್ರು ಹೊಸದಾಗಿ ಡ್ರೈವಿಂಗ್ ಕಲಿಯುತ್ತಿದ್ದರಾ? ಯಾಕಂದ್ರೆ ಇದು ಡೆಲಿಬರೇಟ್ ಆಗಿ ಆಗಿರುವಂತಹ ಆಕ್ಸಿಡೆಂಟ್. ಒನ್ ವೇ ಟ್ರಾಫಿಕ್ ನಲ್ಲಿ, ಅದೂ ಪೀಕ್ ಅವರ್ಸ ಅಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದಿದ್ದಾರೆ. ಅಲ್ಲಾರೀ ಕಲ್ತಿರೋ ಜನಾನೇ ಟ್ರಾಫಿಕ್ ರೂಲ್ಸ್ ನ ಗಾಳಿಗೆ ತೂರಿದ್ರೆ ಕಲಿತಿಲ್ಲದೆ ಜನಕ್ಕೆ ನಾವೇನ್ ಹೇಳೋದು?.” ಆ ಖಾಕಿ ಆಸಾಮಿ ವಿಚಾರಿಸುತ್ತಲೇ ಇದ್ದ. ರಾಜೇಶ್ ಸುಸ್ತಾಗಿ ಬಳಲಿದವನಂತೆ ಕಾಣುತ್ತಿದ್ದ ಆದರೂ ಡಾಕ್ಟರ್ ನ ಕೊಠಡಿ ಹುಡುಕುತ್ತಲೇ ಇದ್ದ.

ಡಾಕ್ಟರ್ ಬಳಿ ನಿಂತವನೇ, “ಡಾಕ್ಟರ್ ಏನಿದೆಲ್ಲಾ? ಖುಷಿಗೇನಾಗಿದೆ? ಪ್ಲೀಸ್ ಅವ್ಳಿಗೇನೂ ಆಗಿಲ್ಲ. ಬದುಕ್ತಾಳೆ ಅಂತ ಹೇಳಿ ಪ್ಲೀಸ್… ನಿಮ್ ದಮ್ಮಯ್ಯ ಅಂತೀನಿ” ರಾಜೇಶ್ ನ ಕಣ್ಣೀರು ಧಾರಕಾರವಾಗಿತ್ತು.

“ನಮ್ ಕೈಯ್ಯಲ್ಲಾಗೋ ಎಲ್ಲಾ ಪ್ರಯತ್ನಾನೂ ಮಾಡ್ತೀವಿ ಮಿಸ್ಟರ್. ಇನ್ನುಳಿದದ್ದು ದೇವ್ರಿಛ್ಛೆ.” ಡಾಕ್ಟರ್ ಎಲ್ಲವನ್ನೂ ದೇವರ ಮೇಲೆ ಹಾಕಿ ನಿರಾಳರಾದರು.

ಪಕ್ಕದಲ್ಲಿದ್ದ ನರ್ಸ್ ಒಂದು, ಇನ್ನೊಬ್ಬರೊಂದಿಗೆ, “ಆ ಹುಡ್ಗಿ ಹಣೆಬರಹ ನೋಡಿ, ಮೊದ್ಲೇ ಕ್ಯಾನ್ಸರ್ ಬೇರೆ ಇತ್ತು. ಅದು ಸಾಲ್ದು ಅಂತ ಈಗ ಆಕ್ಸಿಡೆಂಟ್ ಬೇರೆ ಆಗಿದೆ. ಅವಳ ಹಣೆಯಲ್ಲಿ ಇನ್ನೆಷ್ಟ್ ದಿನ ಅಂತ ಬರ್ದಿದ್ದಾನೋ ಬ್ರಹ್ಮ! ಆದ್ರೂ ಎಂತಹ ಉತ್ಸಾಹದ ಚಿಲುಮೆ ಅವ್ಳು. ಆ ಸಾವಿಗೂ ಅವ್ಳನ್ನ ಕಂಡು ಅಸೂಯೆಯಾಗಿರ್ಬೇಕು!” ಎಂದು ಹೇಳುತ್ತಿದ್ದರು.

ರಾಜೇಶ್ ಗರಬಡಿದವನಂತೆ ನಿಂತಿದ್ದ. ಯಾಂತ್ರಿಕವಾಗಿ ಐ.ಸಿ.ಯೂ ನ ಕಡೆ ತಿರುಗಿ ನಿಂತ. ಅವನು ಬೆವತಿದ್ದನ್ನು ನೋಡಿದ ಅನೀತಾಳಿಗೆ ಅವನ ಪರಿಸ್ಥಿತಿಯ ಅರಿವಾಗಿತ್ತು. “ಇದೆಲ್ಲ ನಿಮ್ಗೆ ಗೊತ್ತಾಗೋದು ಖುಷಿಗೆ ಬೇಕಿರ್ಲಿಲ್ಲ. ಅದಕ್ಕಾಗೇ ಇಷ್ಟೆಲ್ಲಾ… ಇಷ್ಟೆಲ್ಲಾ…” ಎನ್ನುವಾಗ ಅವಳ ಗಂಟಲು ಉಬ್ಬಿ ಬಂತು.

“ಅದ್ರೂ ಈ ಕ್ಯಾನ್ಸರ್ ಹೇಗೆ… ಈ ಕ್ಯಾನ್ಸರ್, ನನ್ನ ಖುಷಿಗೆ…” ರಾಜೇಶ್’ನ ಮಾತುಗಳು ಮುಂದುವರೆಯಲು ಸೋಲುತ್ತವೆ. ಅವನಿಗೆ ಒಂದು ಕ್ಷಣವೂ ಅಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. “ಖುಷಿ… ಖುಷಿ… ಖುಷಿ…” ಐ.ಸಿ.ಯೂ ನ ಕಡೆಗೆ ಒಂದಷ್ಟು ಜನರು ದೌಡಾಯಿಸುತ್ತಾರೆ. 

***

“ಖುಷಿ, ಖುಷಿ, ಖುಷಿ…” ಎಂದು ಜೋರಾಗಿ ಚೀರುತ್ತಿದ್ದನು ರಾಜೇಶ್. ಮೈಯೆಲ್ಲ ಒದ್ದೆಯಾಗಿ ಬೆವರ ಝಳವೆಲ್ಲ ಹರಿದು ಹೋದಂತೆನಿಸಿದ್ದರಿಂದ, ದಡಕ್ಕನೆ ಎದ್ದು ಕೂತ. ಯಾವುವೋ ಒಂದಷ್ಟು ಕೈಗಳು ಮನೆಯ ಬಾಗಿಲು ಬಡಿಯುತ್ತಿದ್ದವು.


- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Saturday, 14 September 2013

ಕದ್ದಿಂಗಳಾ ಬೆಳದಿಂಗಳು!?


ಕೌಮಾರ್ಯ ಕೈಬೀಸಿ
ಕರೆದಂತೆ,
ತನುವಿನೊಂದಿಗೆ ಮನವೂ
ಹೆಣ್ಣಾಗುತ್ತಿತ್ತು!
ಹಣ್ಣೊಳಗಿನ ಬೀಜಗಳು ಮೊಳೆತು
ಸಸಿಯಾಗಿ, ಮರವಾಗಿ
ಮತ್ತೆ ಜೊಂಪೆ ಜೊಂಪೆಯ
ಹಣ್ಣುಗಳು ತೂಗಬೇಕು,
ವಂಶ ಬೆಳಗಬೇಕು!

ವರದ ಬಲದಿಂದ
ಮದುವೆಗೆ ಮುನ್ನವೇ
ಒಂದು ಹೆತ್ತ
ಫಲಭರಿತ ಒಡಲು ನನ್ನದು,
ರಾಜ್ಯ ಕಟ್ಟಿ ಆಳಬಲ್ಲ
ರಾಜಕುಮಾರರೇ
ಹುಟ್ಟಿಬರುತ್ತಾರೆಂಬ ಆಸೆ!
ಮದುವೆಗೆ ಮೊದಲ ಬಸಿರ
ಗಂಗೆಯಲ್ಲಿ ತೊಳೆದುಬಿಟ್ಟೆ!

ಸ್ವಯಂವರದ ಸಿದ್ಧತೆ,
ದೂರ ದೂರದ ದೇಶದ
ರಾಜರು ಸಾಲುಗಟ್ಟಿಹರು,
ಅಪ್ಪ-ಅಮ್ಮನ ವರ್ಣನೆಯಿಂದ
ಕಣ್ಣೊಳಗೆ ಹೊಳೆದವನು
ಅವನೊಬ್ಬನು ಮಾತ್ರ!
ಪಾಂಡು ರಾಜಕುಮಾರ!
ಮೈಬಣ್ಣ ಸ್ವಲ್ಪ ಒಣಗಿದಂತೆ ಕಂಡರೂ
ಬಲಶಾಲಿ ಮೈಕಟ್ಟು!
ಮರು ಕ್ಷಣವೇ ನಾನು
ಕುರುವಂಶದ ಸ್ವತ್ತು!

ಕೌಮಾರ್ಯದಿ ಕಂಡ ಕನಸುಗಳು
ತಿಂಗಳಿಗೂ ಉಳಿಯದೆ
ಗಾಳಿ ಗೋಪುರ!
ರಾಜ್ಯ ಕಟ್ಟುವುದರಲ್ಲಿ
ಪಾಂಡುವಿಗಿದ್ದ ಆಸಕ್ತಿ,
ವಂಶ ಬೆಳೆಸುವುದರಲ್ಲಿ ಕಾಣುವುದಿಲ್ಲ!
ಅಷ್ಟರಲ್ಲಿ ನನ್ನೊಡಲನ್ನು ಶಂಕಿಸಿದ
ಭೀಷ್ಮ, ಮಾದ್ರಿಯನ್ನು
ನನ್ನ ಸವತಿಯಾಗಿ ತಂದ!
ಉಹೂಂ... ವಂಶ ಚಿಗುರಲಿಲ್ಲ!

ಸರಿ, ಹೇಗಾದರೂ ದೇಶ ಬೆಳೆದಂತೆ
ವಂಶ ಬೆಳೆಯಬೇಕು,
ಯಮಧರ್ಮ, ವಾಯು, ಇಂದ್ರರ
ಜಪಿಸಿ ಅನುಗ್ರಹದಿ
ಮಕ್ಕಳ ಪಡೆದರೂ
ಮನದಲ್ಲಿದ್ದುದು ಪಾಂಡುವೊಬ್ಬನೇ!
ಸಾದ್ವಿ ಈ ಕುಂತಿ, ಕುಲಟೆಯಲ್ಲ!
ಅಶ್ವಿನಿ-ದೇವತೆಯರ ಅನುಗ್ರಹದಿಂದ
ಮಾದ್ರಿಯೂ ಎರಡು ಹಡೆದಳು!

ಐವರೂ ಪಾಂಡು ಕುಮಾರರು,
ಒಬ್ಬರಿಗಿಂತೊಬ್ಬ ವೀರ ಯೋಧರು!
ಅವನೇನೆಂದನಂತೆ,
ಆ ಗಾಂಧಾರಿಯ ಮಗ ದುರ್ಯೋದನ...
ಆ ಕುಂತಿಯ ಮಕ್ಕಳನ್ನು
ಪಾಂಡುಕುಮಾರರು ಎನ್ನಲು
ಅವರೇನು
ಪಾಂಡು ಮಹರಾಜನಿಗೆ ಹುಟ್ಟಿದವರೇ?
ಎಂದನಂತಲ್ಲ, ಅವನ
ನಾಲಿಗೆ ಸೀಳಬೇಕು!
ಹಸ್ತಿನಾವತಿಯಲ್ಲಿ ಪಾಂಡವರಿಗೆ
ಪಟ್ಟ ಕಟ್ಟಬೇಕು!
ಈ ಬೆಳದಿಂಗಳೇಕೆ ಮೈ ಬೆವರಿಸುತ್ತಿದೆ,
ಕಣ್ಣು ಕತ್ತಲೆ ಕಟ್ಟುತ್ತಿದೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Wednesday, 28 August 2013

ರಾಧೆ – ಕೃಷ್ಣ


ಹೆಣ್ಣಲ್ಲವೆ ರಾಧೆ ಪ್ರೀತಿಯ ಕಣ್ಣಲ್ಲವೆ?
ಎದೆಗಾತುಕೊಂಡರೂ ವಿರಹ
ಸುಮ್ಮನೆ ನಗಲಿಲ್ಲವೇ?
ಗೋಪಿಕೆಯರ ಗೊಲ್ಲನ
ಒಲವ ಪೂಜೆಯ ನೆಪದಿ
ತಾನೇ ಸೆಳೆದಪ್ಪಿಕೊಳಲಿಲ್ಲವೆ?

ಗಂಗಾ-ತುಂಗಾಕಾವೇರಿಯರಿಗಿಂತ
ಸುಸ್ಪಷ್ಟ ಚಲನೆ!
ಗಮ್ಯ ಮರೆಯದ ಪ್ರೇಮದ ಹೊನಲು,
ಇಕ್ಕೆಲದಿ ಸಿಕ್ಕ ನೆಲಕೆಲ್ಲ ಫಸಲು,
ಪ್ರೀತಿ ಅರಳಿ ಜಗವೆಲ್ಲ ನಗಲು!

ಪ್ರೀತಿ ಬಿತ್ತಿಪ್ರೀತಿ ಬೆಳೆಯುವಳವಳು
ಕೃಷ್ಣನೆಡೆಗಿನ ಹಾದಿಯ ಬೆಳಗು,
ಸುರಗಿಯ ಮೊಗ್ಗು, ಕಣ್ಣೊಳ ಬೆರಗು,
ಸುಗಂಧದ ಎಸಳು, ರಾಧೆ -
ಕೃಷ್ಣನ ಒಳಗಣ ಒಳಗು ಮತ್ತೂ ಬೆಳಗು!

ಪ್ರಸಾದ್.ಡಿ.ವಿ.

ಶ್ರೀ ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭಾಶಯಗಳು :-)

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Thursday, 15 August 2013

ಜೈ ಜವಾನ್!“ಅರವಿಂದ್sssssssssss…” ಎಂದು ಯಾರೋ ಗಾವುದ ದೂರದಿ ನಿಂತು ಕೂಗುತ್ತಿದ್ದರು. ನನ್ನ ಕಣ್ಣುಗಳಿಗೆ ನಿರಾಯಾಸವಾಗಿ ಕತ್ತಲು ಕವಿಯುತ್ತಿತ್ತು. ನಾನು ನಿಸ್ತೇಜನಾಗಿ ಭೂಮಿಯ ಮೇಲೆ ಬೀಳುತ್ತಿದ್ದೇನೆ ಎನಿಸುತ್ತಿತ್ತು. ನಾನೀಗಲೇ ಕೆಳಗೆ ಬಿದ್ದು ಮಣ್ಣುಗೂಡುವುದು ನನ್ನಾತ್ಮಕ್ಕೂ ಬೇಕಿರಲಿಲ್ಲ! ಒಬ್ಬ ಸೈನಿಕನಾಗಿ ಅಷ್ಟು ಬೇಗ ಸೋತು ಕುಸಿಯುವುದು ನನ್ನ ಶೌರ್ಯಕ್ಕೆ ತಕ್ಕುದಾದ ಮಾತೇ ಆಗಿರಲಿಲ್ಲ. ಆದರೂ ನಾನೇನು ಮಾಡಲು ಸಾಧ್ಯವಿತ್ತು, ಒಂದಲ್ಲ, ಎರಡಲ್ಲ, ಮೂರು ಬುಲೆಟ್ಟುಗಳು ಹೊಟ್ಟೆಯ ಒಳ ಹೊಕ್ಕಿದ್ದವು. ಆ ಕ್ಷಣಕ್ಕೆ ನನಗೆ ಆ ಶತ್ರು ಸೈನಿಕನ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು, ಹೊಡೆಯುವವನು ಗುರಿಯಿಟ್ಟು ಹಣೆಗೆ ಹೊಡೆಯಬೇಕಿತ್ತಲ್ಲವೇ? ಹೊಟ್ಟೆಯೊಳಗೆ ಮೂರು ಗುಂಡುಗಳನ್ನು ನುಗ್ಗಿಸಿ ನನ್ನ ಸಾವಿನ ನೋವನ್ನನುಭವಿಸುವುದಲ್ಲದೆ, ಅಸಹಾಯಕತೆಯನ್ನೂ ಅನುಭವಿಸಿ ಪರಿತಪಿಸುವಂತೆ ಮಾಡಿದ್ದ. ಒಬ್ಬ ಸೈನಿಕನಾದವನಿಗೆ, ತಾನು ಸಾಯುವಾಗಲೂ ತನ್ನ ಎದುರಿಗೆ ನಗುವ ಸೈನಿಕನ ಎದೆ ಬಗೆಯಬೇಕು ಎನ್ನಿಸುತ್ತಿರುತ್ತದೆ. ಆದರೆ ಅದನ್ನು ಮಾಡಲಾಗದ ಅಸಹಾಯಕತೆ ಇದೆಯಲ್ಲಾ, ಅದು ನಿಜವಾಗಲೂ ಸೈನಿಕನನ್ನು ಕೊಲ್ಲುವುದು. ಅಸಹಾಯಕತೆ ನನ್ನಿಂಚಿಂಚನ್ನೂ ತಿನ್ನುತ್ತಿತ್ತು, ಕಣ್ಣ ರೆಪ್ಪೆಗಳು ಅರಿವಿಲ್ಲದಂತೆ ತೆರೆದು ಮುಚ್ಚಿಕೊಳ್ಳುತ್ತಿದ್ದವು.

“ಸೈನಿಕನೆಂದರೆ ಸಾವಿನೊಂದಿಗೆ ಸರಸವೇ ಆದ್ದರಿಂದ ಸಾಯುವ ಭಯ ಖಂಡಿತಾ ಇಲ್ಲ. ಆದರೆ ಶತ್ರು ಸೈನಿಕರ ಎದುರಿಟ್ಟುಕೊಂಡು ಮಾತ್ರ ಸಾವು ನನ್ನ ಹತ್ತಿರ ಬರಲು ಬಿಡುವುದಿಲ್ಲ. ಸಾಯುವುದೇ ಸಿದ್ಧವಾದರೆ ಕಣ್ಣೆದುರಿನ ಶತ್ರುಗಳೆಲ್ಲಾ ಧೂಳೀಪಟವಾಗಬೇಕು. ಅಲ್ಲಿಯವರೆಗೂ ಯಮನೂ ನನ್ನನ್ನು ಮುಟ್ಟಲು ಬಿಡುವುದಿಲ್ಲ.” ಇವು ನಾನೇ, ನನ್ನ ವೃತ್ತಿ ಸಾವಿನೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ಬಗ್ಗೆ ಕೇಳುವವರಿಗೆಲ್ಲಾ ಹೇಳುತ್ತಿದ್ದ ಮಾತುಗಳು. ಇಂದು ಇವೇ ಮಾತುಗಳು ನನ್ನೊಳಗೆ ಮತ್ತೆ ಮತ್ತೆ ರಿಂಗುಣಿಸುತ್ತಿವೆ! ಇದ್ದಕ್ಕಿದ್ದಂತೆ ಅಲ್ಲೆಲ್ಲೋ ಇದ್ದ ಜೀವಸೆಲೆ ಒಮ್ಮೆಲೆ ನನ್ನೊಳಗೆ ಸಂಚಿಯಿಸುತ್ತಿತ್ತು. ಒಸರುತ್ತಿದ್ದ ರಕ್ತಕ್ಕೆ ತಡೆಯೊಡ್ಡುವ ಸಲುವಾಗಿ ತೊಟ್ಟ ಅಂಗಿಯನ್ನೇ ತೆಗೆದು ಹೊಟ್ಟೆಯ ಸುತ್ತಾ ಸುತ್ತಿಕೊಂಡೆ.

“ಎಲ್ಲಿ… ಎಲ್ಲಿ ನನ್ನ ಬಂದೂಕು…” ಹುಡುಕುತ್ತಿದ್ದೆ. ಬಂದೂಕು ಅಲ್ಲೆಲ್ಲೂ ಕಾಣಿಸಲಿಲ್ಲ. ಸುತ್ತಮುತ್ತ ನೋಡುವಾಗ ನನ್ನ ದೇಶದ ಯಾವ ಸೈನಿಕರೂ ಕಾಣಲಿಲ್ಲ. ಐದು ಜನರು ತಮ್ಮ ರುಂಡಗಳು ಬೇರಾದ ದೇಹ ಹೊತ್ತು ಅಲ್ಲೇ ಬಿದ್ದಿದ್ದರು. ಆ ಪೆಟ್ರೋಲ್ ಬಂಕ್ ನ ಸುತ್ತಾ ಹತ್ತಾರು ಶತ್ರು ಸೈನಿಕರಾದರೂ ತ್ರಾಣ ಕಳೆದುಕೊಂಡು ಬಿದ್ದಿರಬೇಕೆಂದು ಊಹಿಸಿಕೊಂಡೆ! ನನಗೀಗ ಒಂದು ಬಂದೂಕು ಬೇಕಿತ್ತು, ಶತ್ರು ಶೇಷ ಉಳಿಯಲೇ ಕೂಡದು, ಅದರಲ್ಲೂ ಶತ್ರುವೊಬ್ಬನ ಕಣ್ಣೆದುರು ಮಾತ್ರ ಸಾಯಲಾರೆ. ನಾನು ಕುದಿಯುತ್ತಲೇ ಇದ್ದೆ. ಭಾವಗಳು ಹೆಪ್ಪುಗಟ್ಟುತ್ತಿದ್ದವು ಹಾಗೇ ರಕ್ತವೂ ಇರಬಹುದು! ನಾನು ಬಂದೂಕು ಹುಡುಕುವ ಭರಾಟೆಯಲ್ಲಿ ನನ್ನ ಸಾವಿನ ಬರಸಿಡಿಲು ಬಡಿಯಲಿರುವ ಮನೆಯ ಚಿತ್ರಣಗಳು ಕಾಡಿದವು.

ನನ್ನ ಶವ ಮೈಸೂರಿನ ರಥ ಬೀದಿಯಲ್ಲಿ ಸಾಗುತ್ತಿದ್ದರೆ ಸಾವಿರಾರು ಭಾರತೀಯರ ಕಣ್ಣುಗಳು ಒದ್ದೆಯಾಗುತ್ತಿರಬಹುದು. ಅಲ್ಲೆಲ್ಲೋ, ’ಜೈ ಜವಾನ್…’ ಎಂಬ ಸೊಲ್ಲು ಕೇಳುತ್ತಿದೆ. ಸೈನಿಕರ ಶ್ರಮ ಬಸಿಯುವುದನ್ನು ಮನಗಂಡು ’ಜೈ ಜವಾನ್, ಜೈ ಕಿಸಾನ್’ ಎಂಬ ಉಕ್ತಿಯನ್ನು ನಮ್ಮೆಲ್ಲರಿಗೂ ಸಮರ್ಪಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮೃತಿಪಟಲದ ಮೇಲೊಮ್ಮೆ ಬಂದು ಹೋದರು. ಇದನ್ನೆಲ್ಲಾ ಕೇಳಿ ಹೆಮ್ಮೆಯಿಂದ ಎದೆಯುಬ್ಬಿಸಿ ಎದ್ದು ನಿಲ್ಲಬೇಕೆನಿಸುತ್ತಿದೆ, ಭಾರತ ಧ್ವಜವನ್ನು ಎತ್ತಿ ಹಿಡಿದು, ’ಜೈ ಹಿಂದ್’ ಎಂದು ಕೂಗಬೇಕೆನ್ನಿಸುತ್ತಿದೆ ಆದರೆ ಶವವಾಗಿ ಬಿದ್ದಿರುವ ಅಸಹಾಯಕತೆ ನನ್ನ ಕೈಗಳನ್ನು ಮತ್ತೆ ಕಟ್ಟುತ್ತಿದೆ.

ನಾವು ಆರು ಸೈನಿಕರು, ಪಾಕ್ ಸೈನಿಕರು ಟೆರರಿಸ್ಟ್ ಗಳೊಂದಿಗೆ ಸೇರಿಕೊಂಡು ಹೂಡಿದ ದಾಳಕ್ಕೆ ಮರಣ ಹೊಂದಿದ ಬಗ್ಗೆ ಟಿ.ವಿ.ಗಳಲ್ಲಿ ಪ್ರಸಾರವಾಗುತ್ತಿದೆ. ಕೋಟ್ಯಾಂತರ ಭಾರತೀಯರ ಕಂಬನಿಗಳು ನಮಗಾಗಿ ಮಿಡಿಯುತ್ತಿವೆ. ನನ್ನ ಜನ್ಮ ಸಾರ್ಥಕವಾಯ್ತು ಎಂಬ ಭಾವ ನನ್ನಲ್ಲಿ ಮೂಡಿ ನಿಲ್ಲುತ್ತಿದೆ. ನಮ್ಮ ಸಾವಿನ ಕಾಳ್ಗಿಚ್ಚಿನಿಂದ ರೊಚ್ಚಿಗೆದ್ದ ಮಾಧ್ಯಮಗಳು ಒಬ್ಬ ಕೇಂದ್ರ ಮಂತ್ರಿಯನ್ನು ನಮ್ಮ ಸಾವಿನ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆತ ಹೇಳುತ್ತಾನೆ: “ನಾವು ಜನರ ಜೀವನವನ್ನು ಉತ್ತಮಗೊಳಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ಒಳ್ಳೆಯ ಆಹಾರ ಸಿಗುವಂತೆ ಮಾಡುತ್ತಿದ್ದೇವೆ. ನೀವು ನಮ್ಮ ಒಳ್ಳೆಯ ಕೆಲಸಗಳ ಬಗ್ಗೆ ಮಾತಾಡುವುದನ್ನು ಬಿಟ್ಟು ಸತ್ತ ಸೈನಿಕರ ಬಗ್ಗೆ ಪ್ರಶ್ನಿಸುತ್ತೀರಲ್ರೀ? ಅವರೇನು ಮಹಾನ್ ಮಾಡಿರುವುದು, ತಮ್ಮ ಕರ್ತವ್ಯ ಮಾಡಿದ್ದಾರೆ. ದೇಶಕ್ಕಾಗಿ ಸಾಯುವುದು ಅವರ ಕರ್ತವ್ಯ!” ಈಗ ಮತ್ತೆ ನಾನು ನನ್ನೊಳಗೇ ಕುದಿಯುತ್ತಿದ್ದೆ. ದೇಶದ್ರೋಹಿಗಳು ದೇಶದ ಬಾರ್ಡರ್ ಗಳಲ್ಲಷ್ಟೇ ಇಲ್ಲ, ಇಲ್ಲೂ ಇದ್ದಾರೆ. ’ದೇಶದೊಳಗೂ ದೇಶದ ಆಸ್ತಿಗಳೆಂದು ಮುಖವಾಡ ಧರಿಸಿದ ಶತ್ರುಗಳಿದ್ದಾರೆ’ ಎನಿಸಿತು.

ನನ್ನ ಶವ ಸುಣ್ಣದಕೇರಿಯಲ್ಲಿದ್ದ ನಮ್ಮ ಮನೆ ತಲುಪಿತು. ಅತ್ತು ಅತ್ತೂ ನಿತ್ರಾಣಳಾಗಿದ್ದ ಅಮ್ಮಾ, ’ಮಗನೇ ಅರವಿಂದಾssss…” ಎಂದು ಓಡಿ ಬರುತ್ತಿದ್ದರು. ಅಪ್ಪ ಮುಂದೆ ನಿಂತ ನನ್ನ ಪಾರ್ಥೀವ ಶರೀರವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಬೇಕಾದ ಏರ್ಪಾಡುಗಳನ್ನು ಮುಗಿಸುತ್ತಿದ್ದರು. ತಮ್ಮ ಮುಷ್ಠಿಯನ್ನು ಬಿಗಿ ಹಿಡಿದು ತಮ್ಮ ದುಃಖವನ್ನು ತಡೆಹಿಡಿಯುವ ಪ್ರಯತ್ನ ಮಾಡುತ್ತಿದ್ದರು. ಕಂಗಳು ಧಾರಾಕಾರವಾಗಿ ನೀರನ್ನು ಬಸಿಯುತ್ತಿದ್ದರೂ ಕಣ್ಣೊರೆಸಿಕೊಂಡು ತಮ್ಮ ಕರ್ತವ್ಯಗಳೆಡೆಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ನನ್ನ ಶವ ಮತ್ತಿಬ್ಬರನ್ನು ಅಲ್ಲಿ ಹುಡುಕುತ್ತಿತ್ತು! ಎಲ್ಲಿರಬಹುದು, ಎಲ್ಲಿರಬಹುದು ಅವರಿಬ್ಬರು? ನಾನು ಮೇಲೆದ್ದು ಕೂಗಬೇಕೆನ್ನಿಸುತ್ತಿತ್ತು. “ಭಾರತೀ… ಮಧುಕರ…”. ಭಾರತಿ ನನ್ನ ಧರ್ಮಪತ್ನಿ ಮದುವೆಯಾಗಿ ಐದು ವರ್ಷಗಳಾಗಿತ್ತಷ್ಟೆ. ಇಪ್ಪತ್ತೆಂಟರ ಪ್ರಾಯಕ್ಕೇ ಅವಳ ಹಣೆಯನ್ನು ಬರಿದಾಗಿಸಿಬಿಟ್ಟೆ. ಅವಳು ಬಯಸಿ ಬಯಸಿ ಒಬ್ಬ ಯೋಧನನ್ನು ಮದುವೆಯಾದದ್ದಕ್ಕೆ ಚಿಕ್ಕವಯಸ್ಸಿಗೆ ವಿಧವೆ ಪಟ್ಟ ನೀಡಿದೆ! ಅವಳನ್ನು ಹುಡುಕಬೇಕು, ನನ್ನ ದೇಶಪ್ರೇಮದ ಹೆಸರಲ್ಲಿ ಅವಳಿಗೆ ಮಾಡಿದ ಮೋಸಕ್ಕೆ ಕ್ಷಮೆ ಕೇಳಬೇಕು. ನಾಲ್ಕು ವರ್ಷ ವಯಸ್ಸಿನ ಹಾಲುಗಲ್ಲದ ನನ್ನ ಕಂದ ಮಧುಕರ ಎಲ್ಲಿದ್ದಾನೋ, ಏನೋ? ನಾನವನನ್ನು ನೋಡಿ ಎರಡು ವರ್ಷಗಳೇ ಆಗಿರಬಹುದು. ಅವನ ಭವಿಷ್ಯ ಭದ್ರ ಮಾಡಬೇಕಿದ್ದ ಅವನಪ್ಪ ತಾನೇ ನಿಶ್ಚಲನಾಗಿ ಮಣ್ಣು ಸೇರುವ ಹಾದಿಯಲ್ಲಿ ಮನೆ ಸೇರಿದ್ದ. ಅವರು ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದ ನನ್ನ ಕಣ್ಣ ಮುಂದೆಯೇ ಅವರಿಬ್ಬರೂ ಪ್ರತ್ಯಕ್ಷ ನಿಂತರು. ಭಾರತಿಯ ಕೂದಲೆಲ್ಲ ಕೆದರಿ ನಿತ್ರಾಣಗೊಂಡಂತೆ ಕಾಣುತ್ತಿದ್ದಳು. ಮಧುಕರ, ’ಅಪ್ಪಾ… ಅಮ್ಮಾ…’ ಎಂದು ಅಳುತ್ತಿದ್ದ. ಮನೆಯ ಮುಂದೆ ನೂರಾರು ಮಂದಿ ಜಮಾಯಿಸಿದ್ದರು.

ಭಾರತಿ ಓಡಿ ಬಂದು ನಿಶ್ಚೇತನನಾಗಿ ಬಿದ್ದಿದ್ದ ನನ್ನ ಮೇಲೆ ಬಿದ್ದಳು. ಮೇಲೆದ್ದು ಸಂತೈಸುವ ಮನಸ್ಸಾಗಿದ್ದರೂ ಮಲಗೇ ಇದ್ದೆ. ತನ್ನ ಜೀವನವೂ ನಿಶ್ಚಲವಾದಂತೆ ಒಂದೇ ಸಮನೆ ಅಳುತ್ತಿದ್ದಳು. ಎಲ್ಲರೂ ಅವಳನ್ನು ಸಮಾಧಾನಿಸಲು ಹೆಣಗುತ್ತಿದ್ದರು. ಅಂತ್ಯ ಕ್ರಿಯೆಯ ಕಾರ್ಯಗಳೆಲ್ಲಾ ಸರಾಗವಾಗಿ ಜರಗುತ್ತಿದ್ದವು. ನನ್ನೊಂದಿಗೆ ಸೈನ್ಯದಲ್ಲಿದ್ದ ಕೆಲವು ಸೈನಿಕರು ನನ್ನನ್ನು ಸಕಲ ಗೌರವಗಳೊಂದಿಗೆ ಬೀಳ್ಕೊಡಲು ಸನ್ನದ್ಧರಾಗಿ ನಿಂತಿದ್ದರು. ನನ್ನ ಶವಸಂಸ್ಕಾರದ ನಂತರ ಮಾಧ್ಯಮದವರು ನನ್ನ ಹೆಂಡತಿಯನ್ನು ಕೇಳಬಹುದು: “ಅರವಿಂದ್ ರವರು ನಮ್ಮನ್ನೆಲ್ಲ ಅಗಲಿ ದೇಶ ರಕ್ಷಣೆಯಲ್ಲಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಈ ಬಗ್ಗೆ ನಿಮಗೇನೆನಿಸುತ್ತದೆ?” ನನ್ನವಳ ಉತ್ತರಕ್ಕೆ ನಾನು ಕಾತರನಾಗಿದ್ದೇನೆ. ಕೇಳಬೇಕು, ಆ ಉತ್ತರವನ್ನು ಕೇಳಬೇಕು. “ಅವರು ನನ್ನ ಗಂಡ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ತನ್ನ ನಲವತ್ತು ಜನರ ತುಕುಡಿಯನ್ನು ರಕ್ಷಿಸಿರುವುದಲ್ಲದೆ ಶತ್ರು ಸೈನ್ಯದ ಒಬ್ಬನೂ ಉಳಿಯದಂತೆ ಮಾಡಿದ್ದಾರೆ. ಅವರು ದೇಶದ ಹೆಮ್ಮೆಯ ಮಗ” ಎಂದು ಹೇಳಬಹುದೇ?

ಎಲ್ಲೆಲ್ಲೋ ಓಡುತ್ತಿದ್ದ ಮನಸ್ಸು ವಾಸ್ತವಕ್ಕಿಳಿಯುತ್ತಿದೆ. ಎದುರಲ್ಲಿ ನಿಂತಿದ್ದ ಶತ್ರು ಸೈನಿಕ ನಗುತ್ತಲೇ ಇದ್ದಾನೆ. ಹುಡುಕುತ್ತಿದ್ದ ಕೈಗಳಿಗೆ ಯಾವುದೋ ಎಡತಾಕಿದಂತಾಗಿ ಆ ಕಡೆಗೆ ತಿರುಗಿ ನೋಡಿದರೆ ನನ್ನ ಕೈಯಿಂದ ಜಾರಿಬಿದ್ದ ಬಂದೂಕು ಅಲ್ಲೇ ಇತ್ತು. ಅದು ನನ್ನ ಕೈಗೆ ಸಿಗುತ್ತಿದ್ದಂತೆ, ಅಷ್ಟೂ ಹೊತ್ತು ನನ್ನಲ್ಲಿ ಸಂಚಯಿಸುತ್ತಿದ್ದ ಆಕ್ರೋಶ ಒಮ್ಮೆಲೇ ಗುಂಡುಗಳೋಪಾದಿಯಲ್ಲಿ ಹೊರಬಂದವು. ಶತ್ರು ಸೈನಿಕ ನಿಂತಿದ್ದ ದಿಕ್ಕಿನೆಡೆಗೆ ಸತತ ದಾಳಿ ನಡೆಸಿದ್ದೆ. ಅವನು ಅಲ್ಲೇ ಹತನಾಗಿ ಬಿದ್ದಿರಬಹುದು. ಯಾವುದೋ ಒಂದು ಗುಂಡು ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್ ಗೆ ತಗುಲಿ ಅದೂ ಸಿಡಿದು ಹೋಯ್ತು. ಅದರಿಂದ್ಹಾರಿದ ಬೆಂಕಿ ನನ್ನನ್ನೂ, ಅಲ್ಲೆ ಸುತ್ತ ಮುತ್ತ ಬಿದ್ದಿದ್ದ ನನ್ನ ತುಕಡಿಯ ಇನ್ನೈದು ಸೈನಿಕರನ್ನೂ ದಹಿಸುತ್ತಿತ್ತು.

*********

ದೇಶದೆಲ್ಲೆಡೆಯ ನ್ಯೂಸ್ ಛಾನೆಲ್ಗಳಲ್ಲಿ ಅರವಿಂದನ ಸಾಹಸಗಾಥೆಯ ಬಗ್ಗೆ ಬಣ್ಣಬಣ್ಣ ತಳೆಯುತ್ತಿದ್ದ ಸುದ್ಧಿ ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ಲೀನವಾಗುತ್ತಿತ್ತು. “೩೪ ಯೋಧರ ಜೀವ ರಕ್ಷಿಸಿದ ಕಮಾಂಡರ್ ಅರವಿಂದ. ಕೆಲವು ಟೆರರಿಸ್ಟ್’ಗಳೂ ಸೇರಿದಂತೆ ೬೦ ಜನ ಶತ್ರುಗಳನ್ನು ಹೊಡೆದುರುಳಿಸಿದ ಅರವಿಂದ್ ಪಡೆ” ಎಂಬ ಹೆಡ್ ಲೈನ್ಸ್ ಗಳು ಬಿತ್ತರವಾಗುತ್ತಿದ್ದವು. ಅರವಿಂದ ಮತ್ತವನೊಂದಿಗೆ ಸತ್ತ ಐವರು ಯೋಧರು ಒಂದು ದಿನದ ನವಾಬರಾಗಿದ್ದರು. ಆ ದಿನದ ಹೆಡ್’ಲೈನ್ಸ್ ಮತ್ತು ಕವರ್ ಸ್ಟೋರಿಗಳಲ್ಲಿ ರಾರಾಜಿಸುತ್ತಿದ್ದರು. ಸೈನಿಕರ ಜೀವನವೇ ಹೀಗಿರಬಹುದು, ಅವರು ಬದುಕಿದ್ದಷ್ಟು ದಿನ ಅವರ ಶ್ರಮ ಮತ್ತು ಸೇವೆಗಳು ಗುರ್ತಿಸಿಕೊಳ್ಳಲಾರವು! ಸತ್ತ ಒಂದು ದಿನಕ್ಕೆ ಅವರೇ ಹೀರೋಗಳು! ಅರವಿಂದನಿಗೇನೋ ತಾನು ತಾಯ್ನಾಡಿನ ಋಣ ತೀರಿಸಿದೆ ಎಂಬ ಹೆಮ್ಮೆಯಿತ್ತು.

ಅರವಿಂದನ ಸಾವು ಇನ್ನೂ ಅಚ್ಚ ಹಸಿರಾಗಿರುವಂತೆಯೇ, ಜಮ್ಮು-ಕಾಶ್ಮೀರದ ಶ್ರೀನಗರದ ಸೇನೆಯ ಕೇಂದ್ರ ಕಛೇರಿಯ ಫೋನ್ ಮತ್ತೆ ರಿಂಗುಣಿಸುತ್ತಿದೆ. ಅಲ್ಲಿನ ಇಂಚಾರ್ಜ್ ಆಗಿದ್ದ ಸುದರ್ಶನ್ ದಿಗ್ವೇಧಿ ಕರೆ ಸ್ವೀಕರಿಸುತ್ತಾರೆ. ಆ ಕಡೆಯಿಂದ ಧ್ವನಿ ಕೇಳಿಸುತ್ತದೆ: “ಸರ್, ಪೂಂಚ್ ನ ಗಡಿಯಲ್ಲಿ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆಯಾಗಿದೆ. ಭಾರತೀಯ ಸೇನೆಯ ಐದು ಜನ ಯೋಧರನ್ನು ಕೊಲ್ಲಲಾಗಿದೆ”. ಕಛೇರಿಯ ವಾತಾವರಣ ಕಾವೇರುತ್ತದೆ. ಮುಂದಿನ ಕಾರ್ಯಾಚರಣೆಗಳ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡು ಕೂರುತ್ತಾರೆ.

*******

ಕೆಲವು ವಿವರಗಳು:

ಭಾರತದ ಗಡಿಗಳನ್ನು ಆಕ್ರಮಿಸಲು ಹವಣಿಸಿರುವ ಪಾಕಿಸ್ಥಾನೀ ಸೈನ್ಯ ಲಷ್ಕರ್-ಇ-ತೋಯ್ಬಾ ಎಂಬ ಉಗ್ರಗಾಮಿ ಸಂಘಟನೆಯ ಸಹಾಯ ಪಡೆದುಕೊಂಡಿದೆ. ಭಾರತದ ಗಡಿಗಳಲ್ಲಿ ಇಂತಹ ಕುಕೃತ್ಯಕ್ಕಾಗಿಯೇ ’ಲಷ್ಕರ್-ಇ-ತೋಯ್ಬಾ’ ಸಂಘಟನೆಯಿಂದ ತರಬೇತಿ ಪಡೆದು ಸಜ್ಜಾದ ’ಬ್ಯಾಟ್ (BAT)’ ಎಂಬ ಪಡೆಯನ್ನು ನಿಯೋಜಿಸಲಾಗಿದೆ! ಸೈನ್ಯದ ಮಾಹಿತಿಯ ಪ್ರಕಾರ ೨೦೧೩ರಲ್ಲಿ, ಭಾರತೀಯ ಗಡಿಗಳಲ್ಲಿ ಈಗಾಗಲೇ ೫೫ ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು ಶೇ.೫೦ ಕ್ಕಿಂತ ಜಾಸ್ತಿ. ಸುಮಾರು ೫೦ಕ್ಕಿಂತಲೂ ಹೆಚ್ಚಿನ ಸೈನಿಕರು ಈ ವರ್ಷದಲ್ಲಿ ಕದನ ವಿರಾಮದ ಉಲ್ಲಂಘನೆಯಂತಹ ಘಟನೆಗಳಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಕೃತ್ಯಗಳು ಒಂದಾದ ಮೇಲೊಂದರಂತೆ ನಡೆಯುತ್ತಲೇ ಇದೆ. ನಿರಾತಂಕವಾಗಿ ಸೈನಿಕರ ಮಾರಣ ಹೋಮವೂ ಕೂಡ!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Monday, 15 July 2013

ಕಾದಿಹ ರಾಧೆ!ಮಧುರೆಗೆ ಹೋದೆಯಾ ಮಾಧವ,
ತೊರೆದು ನೆರಳಂತಹ ರಾಧೆಯಾ,
ತಾನ್ ತುಳಿದ ಮಣ್ಣ ವಾಸನೆಯರಿಯದೆ
ಪಾದ, ಮರಳಿ ಬರುವ ಹಾದಿಯ ಮರೆತು,
ಅಳುತಿಹಳು ಕೃಷ್ಣಮಯಿ ನಿನಗೇ ಸೋತು!                           !!ಮಧುರೆಗೆ ಹೋದೆಯಾ!!

ಉಳಿದ ಮಾತುಗಳ ಮಾಲೆಯೊಸೆದಳು,
ಕೊರಳೊಡ್ಡಬಾರದೇ ಮುರುಳಿ,
ಸುಳಿದ ರಾಗಗಳು ಝೇಂಕಾರದ ಸುರುಳಿ,
ಕಾದೇ ಕಾದಳು ಬೃಂದಾವನದಲಿ,
ಬರುವೆಯೋ ಬಾರೆಯೋ, ಹೇಳೆಯಾ?                                !!ಮಧುರೆಗೆ ಹೋದೆಯಾ!!

ಜೀವದುದ್ದಕ್ಕೂ ಬೆಳಕು ಕೊಟ್ಟಂತೆ
ಹೋದವನಿಗೆ ಹಚ್ಚಿಟ್ಟ ಹಣತೆ,
ಕರಗುತಿರುವಳು ಕರ್ಪೂರದಂತೆ,
ಭ್ರಮೆಯಾಗಿಸಬೇಡವಳ ಪ್ರೇಮವ,
ಬಂದು ಸೇರೋ ಕಾದಿಹ ರಾಧೆಯ!                                    !!ಮಧುರೆಗೆ ಹೋದೆಯಾ!!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್

Sunday, 16 June 2013

ನಿನ್ನ ಸನಿಹ


ಸನಿಹದ ವಿನಃ ಬೇಡೆನು ಏನೂ,
ನಾನೇ ಇನಿಯ, ನಿನ್ನ ಸನಿಹ...
ಸಾಕೀ ವಿರಹ, ತೀರದ ಮೋಹ,
ಬಾರೇ ಓ ಹುಡುಗಿ, ನನ್ನಾಸೆಯ ಬೆಡಗಿ,
ಸವಿಯೊಲವಿನ ನಗುವಾಗಿ!


ಮಾತಿನ ಮೌನ, ಪ್ರೀತಿಯ ಧ್ಯಾನ,
ಬಡಿತಕೂ ಉಂಟು ಹೃದಯದ ಗಾನ,
ನಾನೇ ನೀನಾ, ನೀನೇ ನಾನಾ...
ಕೇಳೇ ಓ ಹುಡುಗಿ, ಉಸಿರಿನ ಕಿವಿಯಾಗಿ,
ಪ್ರತಿ ಸ್ಪರ್ಷವೂ ಹಾಡಾಗಿ!


ಚಳಿಗಾಲದಿ ನೀ ಮುತ್ತಿಟ್ಟ ತುಟಿ
ಮುಂಗಾರಿಗೆ ಕೆಂಪಾಗಿದೆ,
ಮಳೆಗಾಲದ ಈ ಸೋನೆಯ ಚಿಟಪಟ,
ಮತ್ತೇ ಮತ್ತೇ ನನ್ನೇ ಕಾಡಿದೆ!
ಕಾಡುವೆ ಹೀಗೇಕೆ, ನೀನೇ ನನ್ನಾಕೆ!

ಮಳೆಗೂ ನೆನಪುಇಳೆಯ ಸನಿಹ,
ಅದಕೇ ಬರುವ ಪುನಃ ಪುನಃ...
ನನಗೂ ಹಾಗೆನೀನೇ ಗೆಳತಿ,
ನಾನೇ ಮಳೆಯಾಗಿನೀನೇ ಇಳೆಯಾಗಿ,
ಅಪ್ಪುವೆ ಇನ್ನೇನುನನಗೇ ನೀನಿನ್ನು...


ಪ್ರಸಾದ್.ಡಿ.ವಿ.

Saturday, 1 June 2013

ರಾಜಕೀಯ – ಧರ್ಮಾಂಧತೆ – ಜಾತೀಯತೆ!


ಈ ಮೂರು ವಿಷಯಗಳು ಎಲ್ಲಿ ಬೆರೆತು ನಿಲ್ಲುತ್ತವೋ ಅಲ್ಲಿ ದುರ್ನಾತ ಬೀರುವ ಕಶ್ಮಲಗಳ ಕೊಂಪೆ ಜೀವ ತಳೆಯಬಹುದು ಎಂಬುದು ಇತ್ತೀಚೆಗೆ ನನ್ನನ್ನು ಕಾಡುತ್ತಿರುವ ಸತ್ಯ! ನನ್ನಲ್ಲಿ ಈ ಮೂರೂ ವಿಷಯಗಳ ಬಗ್ಗೆಯೂ ಸಂಪೂರ್ಣ ಸ್ಪಷ್ಟತೆಯಿದ್ದರೂ ನಾನು ಅವುಗಳ ಬಗ್ಗೆ ಮಾತನಾಡುವುದು ತೀರಾ ವಿರಳ ಏಕೆಂದರೆ ಈ ವಿಷಯಗಳು ನಮ್ಮ ಭಾರತೀಯರ ಮೇಲೆ ಮೂಡಿಸಿರುವ ಛಾಯೆ ಗಾಢವಾದದ್ದು! ಒಬ್ಬರು ಮಾತನಾಡುವುದರಿಂದ ಇಲ್ಲಿ ಏನೂ ಬದಲಾಗುವುದಿಲ್ಲ ಮತ್ತು ಯಾರೂ ತಮ್ಮ ಪೂರ್ವಾಗ್ರಹಗಳನ್ನು, ಆ ಮಾತುಗಳನ್ನು ಕೇಳಿ ಬಲಿಕೊಡುವುದಿಲ್ಲ. ಅಷ್ಟಿದ್ದಿದ್ದರೆ ಬಸವಾದಿ ಬುದ್ಧ ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ” ಎಂದು ಹೇಳಿದಾಗಲೇ ಭಾರತ ಸಮಾನತೆಯ ಶಾಂತಿಯ ತೋಟವಾಗಬಹುದಿತ್ತು. ಆದರೆ ಈಗಲೂ ಅಸಮಾನತೆ, ಜಾತೀಯತೆ, ಧರ್ಮಾಂಧತೆಗಳು ದೇಶವನ್ನು ಆಳುತ್ತಿವೆ. ಇವುಗಳೆಲ್ಲವನ್ನೂ ತನ್ನ ಓಟ್ ಬ್ಯಾಂಕ್ ಮಾಡಿಕೊಂಡು ದೇಶವನ್ನು ಇನ್ನಷ್ಟು ಕುಲಗೆಡಿಸುತ್ತಿರುವುದು ಹೊಲಸು ರಾಜಕೀಯ!

ಈ ಬಗ್ಗೆ ಮಾತಾಡುವುದು ತೀರಾ ವಿರಳ ಎಂದವನು ಈಗ ಯಾಕೆ ಇಂತಹದ್ದೊಂದು ಲೇಖನ ಬರೆಯುತ್ತಿದ್ದಾನೆ ಎಂದು ಕೆಲವರು ಮೂಗು ಮುರಿಯಬಹುದು, ಆದರೆ ಕರ್ನಾಟಕದಲ್ಲಿ ಕಳೆದ ತಿಂಗಳಷ್ಟೇ ಆದ ರಾಜಕೀಯ ಬದಲವಾಣೆಗಳಿಂದ ಉತ್ತೇಜಿತಗೊಂಡೋ, ಹತಾಶೆಗೊಂಡೋ ಪುಂಖಾನುಪುಂಖವಾಗಿ ಜನ ಮಾತನಾಡುತ್ತಿರುವುದು ನನ್ನನ್ನು ಕೆರಳಿಸಿತು. ಅದಕ್ಕಾಗಿಯೇ ಈ ಸಂದರ್ಭದಲ್ಲಿ ಈ ವಿಷಯಗಳ ಬಗ್ಗೆ ಮೌನ ಮುರಿಯುತ್ತಿದ್ದೇನೆ.

ರಾಜಕೀಯ ಸ್ಥಿತ್ಯಂತರ ಇಷ್ಟೆಲ್ಲಾ ವಿಷಯಗಳಿಗೆ ಜೀವ ನೀಡಬಹುದೇ ಎಂದರೆ, ಹೌದು ಜೀವ ನೀಡಬಹುದು! ಏಕೆಂದರೆ ರಾಜಕೀಯ ಸ್ಥಾನ ಮಾನ ಎಂಬುದು ಒಂದು ಸ್ವಾಮ್ಯ, ಅದನ್ನು ಪಡೆದವರು ಹೇಗೆ ಬೇಕಾದರೂ ದಬ್ಬಾಳಿಕೆ ನಡೆಸಬಹುದು, ತಮ್ಮ ಅಭಿಪ್ರಾಯಗಳನ್ನು ಜನ ಸಾಮಾನ್ಯರ ಮೇಲೆ ಹೇರಬಹುದು, ತಮ್ಮನ್ನು ನಂಬಿ ಕೂತ ಸಮುದಾಯಗಳ ಹಿತಾಸಕ್ತಿಯನ್ನು ಕಾಯಬಹುದು ಎಂಬ ಸಂಕುಚಿತ ಭಾವ ನಮ್ಮಲ್ಲಿ ಮತ್ತು ನಮ್ಮನ್ನಾಳುವ ಜನರಲ್ಲಿ ನೆಲೆಯೂರಿದೆ! ಆ ಒಂದು ಹೊಲಸು ನಂಬಿಕೆಯೇ ವ್ಯವಸ್ಥೆಯನ್ನು ಕಂಗೆಡಿಸಿರುವುದು. ಈ ರೀತಿಯ ಅರಾಜಕತೆಗೆ ನಿದರ್ಶನ ಹುಡುಕಲು ಇತಿಹಾಸದ ಕಾಲಗರ್ಭವನ್ನೇನೂ ಹೊಕ್ಕಬೇಕಿಲ್ಲ, ಕರ್ನಾಟಕದ ನೆನ್ನೆ ಮೊನ್ನೆಯ ಹಾಳೆಗಳನ್ನು ತಿರುವಿ ಹಾಕಿದರೆ ತಿಳಿಯುತ್ತದೆ. ಅವುಗಳೇ ಯಡಿಯೂರಪ್ಪನವರನ್ನು ಲಿಂಗಾಯತರ ಮುಖ್ಯಮಂತ್ರಿಯನ್ನಾಗಿಸಿದ್ದು, ಭಾರತೀಯ ಜನತಾ ಪಾರ್ಟಿಯನ್ನು, ಹಿಂದೂಗಳ ನಂಬಿಕೆಗಳನ್ನು ಓಟುಗಳನಾಗಿಸಿಕೊಳ್ಳುವ ಹೀನ ಕೃತ್ಯಕ್ಕಿಳಿಸಿದ್ದು, ದೇವೇಗೌಡರನ್ನು ಒಕ್ಕಲಿಗರ ಸರ್ವೋಚ್ಚ ಪ್ರತಿನಿಧಿಯಾಗಿಸಿದ್ದು! ಕಾಂಗ್ರೇಸ್ ನಮ್ಮ ಸಮಾಜದಲ್ಲಿನ ಜಾತಿ ಸಮೀಕರಣಗಳನ್ನು ಬಿಡಿಸುತ್ತ ತನ್ನ ಬೇಳೆ ಬೇಯಿಸಿಕೊಂಡಿದ್ದು! ಗೋಹತ್ಯಾ ನಿಷೇಧದ ವಾಪಸಾತಿ, ಜಾತಿಯಾಧಾರಿತ ಮೀಸಲಾತಿಯ ಬಗ್ಗೆ ಎದ್ದ ಚರ್ಚೆಗಳು, ಬಲಪಂಥೀಯರು, ಎಡ ಪಂಥೀಯರು ಎಂಬ ಮತೀಯವಾದಗಳು ಹುಟ್ಟಿಕೊಂಡಿದ್ದು.

ಇಲ್ಲಿ ಗಮನಿಸಬೇಕಾದ ಒಂದೇ ಅಂಶ, ಇಷ್ಟೆಲ್ಲಾ ಮತೀಯವಾದ ಅಥವಾ ಅವ್ಯವಸ್ಥೆಗೆ ನಾಂದಿಯಾದದ್ದು ರಾಜಕೀಯ ಆಡಳಿತ ಎಂಬ ಸ್ವಾಮ್ಯ! ನನಗೆ ಇದನ್ನೆಲ್ಲಾ ನೋಡುವಾಗ ನಾವು ಎತ್ತ ಸಾಗುತ್ತಿದ್ದೇವೆ, ಮನುಷ್ಯತ್ವವನ್ನು ಮರೆತು, ತಮ್ಮ ಸ್ವಾರ್ಥ ಸಾಧನೆಗಾಗಿ ಬದುಕುವ ಅನಾಗರೀಕತೆಯ ಮುನ್ನೋಟವೇ ಈ ಮೇಲಾಟಗಳಾ ಎಂಬ ಅನುಮಾನ ಕಾಡುತ್ತದೆ. ಇಂತಹ ಚರ್ಚೆಗಳಿಗೆಲ್ಲಾ ಮುನ್ನುಡಿಯಾದದ್ದು ಹಿಂದುಳಿದ ಸಮುದಾಯವೊಂದರಿಂದ ಬಂದವನೊಬ್ಬ ಮುಖ್ಯಮಂತ್ರಿಗಾದಿಯೇರಿ ಕುಳಿತದ್ದು! ಆತ ಇನ್ನೆಲ್ಲಿ ತನ್ನ ಸಮುದಾಯದ ಏಳಿಗೆಗೆ ನಿಂತು ನಮ್ಮನ್ನೆಲ್ಲಾ ಕಡೆಗಣಿಸಿಬಿಡುತ್ತಾನೋ ಎಂಬ ಭಯ ಇಷ್ಟನ್ನೆಲ್ಲಾ ಮಾತನಾಡಿಸುತ್ತಿದೆ! ಬಲ ಪಂಥೀಯರು ಬಲಕ್ಕೂ, ಎಡ ಪಂಥೀಯರೂ ಎಡಕ್ಕೂ ತಿರುಗಿ ನಿಂತಿದ್ದಾರೆ, ಸಮಾನತೆ ಅನಾಥವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದೆ! ಅದಕ್ಕಾಗಿಯೇ ನಮ್ಮ ದೇಶ ಇನ್ನೂ ಮುಂದುವರೆಯುತ್ತಿರುವ ದೇಶ!

ನಾನು ಎಲ್ಲೋ ಓದಿದ ನೆನಪು, ವಿವೇಕಾನಂದರೊಮ್ಮೆ ಜಪಾನ್ ಗೆ ಹೋಗಿದ್ದರಂತೆ, ಆಗ ಅಲ್ಲಿಂದ ಭಾರತದ ಜನತೆಗೆ ಒಂದು ಪತ್ರ ಬರೆದರಂತೆ. ಅದರ ಸಾರಾಂಶ ಇಂತಿತ್ತು:

“ಜಪಾನ್ ದೇಶ ಬಹಳ ಸುಂದರವಾಗಿದೆ. ನಾನಿಲ್ಲಿ ಶ್ರಮ, ಉತ್ಸಾಹ ಮತ್ತು ನಿಷ್ಠೆಯ ಗಾಳಿಯನ್ನು ಉಸಿರಾಡುತ್ತಿದ್ದೇನೆ. ಇವರಿಗೆ ಭಾರತೀಯರೆಂದರೆ ಈಗಲೂ ಬಹಳ ಗೌರವ. ಬಹಳ ಹಿಂದೆಯೇ ವಿಜ್ಞಾನ, ಬೌದ್ಧಿಕತೆ, ಸನಾತನ ಸಂಸ್ಕೃತಿ ಮತ್ತು ನಡವಳಿಕೆಗಳಲ್ಲಿ ಔನ್ನತ್ಯವನ್ನು ಹೊಂದಿದವರು ಎಂದು ನಂಬಿದ್ದಾರೆ. ಅದಕ್ಕಾಗಿಯೇ ಭಾರತವೆಂದರೆ ಇವರಿಗೆ ಎಲ್ಲಿಲ್ಲದ ಆದರ ಮತ್ತು ಪ್ರೀತಿ. ಅದರೆ ಅವರಿಗೆ ತಿಳಿದಿಲ್ಲ ನೀವಿನ್ನೂ ಮಡಿ ಮೈಲಿಗೆ ಎಂಬ ಭ್ರಮೆಯಲ್ಲಿ ಇಲ್ಲದ ಕಂದಕಗಳನ್ನು ಸೃಷ್ಟಿಸಿಕೊಂಡು ಒದ್ದಾಡುತ್ತಿದ್ದೀರಿ ಎಂದು, ಅಭಿವೃದ್ಧಿಯನ್ನು ಕಾಲ ಕೆಳಗೆ ಹಾಕಿ ತುಳಿಯುತ್ತಿದ್ದೀರಿ ಎಂದು. ಉಣ್ಣುವ ಆಹಾರಕ್ಕೆ ಸಸ್ಯಾಹಾರ, ಮಾಂಸಾಹಾರ ಎಂದು ನೂರೆಂಟು ಸಲ ಯೋಚಿಸುತ್ತೀರಿ ಎಂದು. ಇವುಗಳೆಲ್ಲಾ ಅವರಿಗೆ ತಿಳಿಯುವ ಮುನ್ನ ಅವುಗಳ ಕಪಿಮುಷ್ಠಿಯಿಂದ ಹೊರಬನ್ನಿ, ಹಿಂದೂ ಧರ್ಮದ ನಿಜವಾದ ಮೌಲ್ಯಗಳನ್ನು ಅರಿತುಕೊಂಡು ಆ ಧರ್ಮಕ್ಕೆ ಹೆಮ್ಮೆಯೆನಿಸುವಂತೆ ಬದುಕಿ. ಇಲ್ಲದಿದ್ದರೆ ಕೇವಲ ಜಪಾನೀಯರ ಮುಂದಷ್ಟೇ ಅಲ್ಲ, ಜಗತ್ತಿನ ಮುಂದೆಯೇ ತಲೆ ತಗ್ಗಿಸಬೇಕಾದೀತು.”

ಇನ್ನೊಂದು ವೃತ್ತಾಂತ:

ತೇಜಸ್ವಿಯವರು ಮೂಡಿಗೆರೆಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರಂತೆ. ಆಗ ನಾಲ್ಕೈದು ರಿಸರ್ವ್ ಪೋಲೀಸ್ ವ್ಯಾನ್ಗಳು ಹೋದವಂತೆ. ಅವರಿಗೆ ಇದೇನಿದು ಪೋಲೀಸ್ ವ್ಯಾನ್ಗಳು ಹೋಗುತ್ತಿವೆಯಲ್ಲ ಎಂದು ಆಶ್ಚರ್ಯವಾಯ್ತಂತೆ. ಹಾಗೇ ಮಟನ್ ಅಂಗಡಿಯಲ್ಲಿ ಮಟನ್ ಕೊಂಡುಕೊಂಡು ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಅಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮುಸಲ್ಮಾನನೊಬ್ಬ ಸಿಕ್ಕನಂತೆ. ಅವನನ್ನು ಇವರು ಕೇಳಿದ್ದಾರೆ, ಈ ವ್ಯಾನ್ ಗಳೆಲ್ಲಾ ಊರಿಗೆ ಬಂದದ್ದು ಯಾಕೆ ಎಂದು. ಆಗ ಅವನು, ’ಇವತ್ತು ನಮ್ಮ ಹಬ್ಬ ಅಲ್ವಾ? ಅದಕ್ಕೆ ಸೆಕ್ಯೂರಿಟಿಗೆ ಬಂದಿದ್ದಾರೆ’ ಎಂದನಂತೆ. ಅದಕ್ಕೆ ಇವರ ಉತ್ತರ, “ಬೋಳೀ ಮಗನೆ ಪೋಲೀಸ್ ಇಟ್ಕೊಂಡ್ ಹಬ್ಬ ಮಾಡ್ಬೇಕೇನೋ? ಮಾನ ಏನಾದ್ರೂ ಇದೆಯೇನೋ ನಿಮ್ಗೆ” ಅಂದರಂತೆ. ಎಷ್ಟು ಸರಳವಾದ ಸತ್ಯವಲ್ಲವೇ? ಸಾಮರಸ್ಯ, ಸಮಾನತೆಯಿಂದ ಹಬ್ಬ ಮಾಡುವುದನ್ನು ಬಿಟ್ಟು. ಧರ್ಮ ಧರ್ಮಗಳ ನಡುವೆ ಜಗಳ ಮಾಡಿಕೊಂಡು, ಸಾಮರಸ್ಯ ಹಾಳು ಮಾಡಿಕೊಂಡು ಅಮಾನುಷರಾಗಿ ಬದುಕುವ ಅಗತ್ಯವಿದೆಯೇ?

ಈ ಎರಡೂ ವೃತ್ತಾಂತಗಳು ಈ ಲೇಖನದಲ್ಲಿ ಬಹಳ ಪ್ರಸ್ತುತವೇನೋ. ನನಗೆ ಈ ಬಲ ಪಂಥೀಯರು ಮತ್ತು ಎಡ ಪಂಥೀಯರು ಎಂಬ ಕಲ್ಪನೆಯೇ ವಾಕರಿಕೆ ತರಿಸುವಂತದ್ದು. ನಿಜಕ್ಕೂ ಇವುಗಳ ನಿಜ ಅರ್ಥವೂ ನನಗೆ ತಿಳಿಯುತ್ತಿಲ್ಲ. ಮನುಷ್ಯ ಮನುಷ್ಯತ್ವ ಕಳೆದುಕೊಂಡು ಯಾಕೆ ಈ ಮತೀಯವಾದಗಳ ಬಾಲ ಹಿಡಿಯುತ್ತಾನೋ ಗೊತ್ತಿಲ್ಲ. ಎಲ್ಲರಿಗೂ ಸಮಾನತೆಯೂ, ಮನುಷ್ಯ ಪಥವೂ ಒಂದು ಪ್ರಬುದ್ಧ ಆಯ್ಕೆ ಎಂದು ಯಾಕೆ ಅನ್ನಿಸುವುದಿಲ್ಲವೋ ಗೊತ್ತಿಲ್ಲ.

ಇನ್ನು ಮೀಸಲಾತಿ ಮತ್ತು ಜಾತಿ ವ್ಯವಸ್ಥೆಗಳು ಇಂದಿಗೂ ಜೀವಂತ ಎಂಬ ವಿಷಯಗಳು ಅವೈಜ್ಞಾನಿಕ ಮತ್ತು ಈಗ ಅವುಗಳನ್ನು ತೆರವುಗೊಳಿಸಬಹುದು ಎನ್ನುವವರು ಈಗಲೂ ಹಳ್ಳೀಗಾಡು ಪ್ರದೇಶಗಳಿಗೆ ಭೇಟಿ ಕೊಡಬೇಕು. ಮೇಲೆ ಎಲ್ಲವೂ ಸರಿಯಿದ್ದಂತೆನಿಸುತ್ತದೆ ಆದರೆ ಗರ್ಭದಲ್ಲಿ ಯಾವುದೂ ಸಮವಾಗಿಲ್ಲ. ಮುಂದುವರೆಯುವವರು ಮುಂದುವರೆಯುತ್ತಲೇ ಇದ್ದಾರೆ, ಹಿಂದುಳಿಯುವವರು ಹಿಂದುಳಿಯುತ್ತಲೇ ಇದ್ದಾರೆ. ಶೈಕ್ಷಣಿಕ ಮತ್ತು ಆರ್ಥಿಕ ಕಂದಕಗಳು ಹಾಗೆಯೇ ಇವೆ. ಹೊಟ್ಟೆ ಹಸಿದವರಿಗೆಲ್ಲರಿಗೂ ಹೊಟ್ಟೆ ತುಂಬುವಷ್ಟು ಕೂಳು ಸಿಗುತ್ತಿಲ್ಲ. ಅಂತಹ ಅಸಮಾನತೆಗಳು ತೊಲಗುವವರೆಗೂ ಮೀಸಲಾತಿಗಳು ಅಗತ್ಯವೇನೋ ಎನ್ನುವ ಭಾವನೆ ನನ್ನದು.

ಗೋಹತ್ಯಾ ನಿಷೇಧ ಎಂಬುದು ನನ್ನ ಕಣ್ಣಿಗೆ ಒಂದು ಬೇಸ್ಲೆಸ್ ಆರ್ಗ್ಯುಮೆಂಟ್ ಅನ್ನಿಸುತ್ತದೆ! ಹಿಂದುಗಳೆಲ್ಲರಿಗೂ ಹಸು ಕಾಮದೇನುವಂತೆ ಕಂಡರೂ “ಹಸುವಿನ ಮಾಂಸ”ವನ್ನು ಆಹಾರವಾಗಿ ಉಪಯೋಗಿಸುವ ಸಾಕಷ್ಟು ಮಂದಿ ಹಿಂದುಗಳಲ್ಲೂ ಇದ್ದಾರೆ, ಕೇವಲ ಮುಸ್ಲೀಮರಷ್ಟೇ ಅಲ್ಲ. ಅಲ್ಲದೆ ವಯಸ್ಸಾದ ಹಸುಗಳು ಸತ್ತ ನಂತರ ಅವುಗಳ ವಿಲೇವಾರಿ ಎಷ್ಟು ಕಷ್ಟ ಎಂಬುದನ್ನು ಹೈನುಗಾರಿಕೆ ಮಾಡುವವನನ್ನು ಕೇಳಬೇಕು. ಅದು ಬಿಟ್ಟು ಹಸುವನ್ನು ಕಾಮದೇನು ಎಂದೆಲ್ಲ ಹೇಳಿ, ಮತ್ತೊಬ್ಬರ ಆಹಾರ ಪದ್ದತಿಗಳನ್ನು ಪ್ರಶ್ನಿಸುವುದು ಎಷ್ಟರಮಟ್ಟಿಗೆ ಸರಿ? ನಿಮಗೆ ಒಂದು ಸತ್ಯ ಹೇಳುತ್ತೇನೆ, ಹಸುವಿಗೆ ಕರುವನ್ನು ಈಯುವ ಶಕ್ತಿ ಇಲ್ಲ ಎಂದಾಗ, ಹಸುವನ್ನೇ ಕಸಾಯಿಕಾನೆಗೆ ಮಾರಿಬಿಡುತ್ತಾರೆ. ಇನ್ನೂ ಮುದಿ ಎತ್ತು ಮತ್ತು ಹಸುಗಳನ್ನು ಸಾಕುತ್ತಾರೆಯೇ ಜನ? ಇದು ನಾನು ಕಣ್ಣಾರೆ ಕಂಡ ದೃಶ್ಯಗಳು. ನಾನು ಯಾಕೆ ಹೀಗೆ ಮಾಡುತ್ತೀರಿ ಎಂದಾಗ, ಆತ ಕೊಟ್ಟ ಉತ್ತರವೇನು ಗೊತ್ತೆ? “ಲಾಭ ತರದ ಹಸು ಮತ್ತು ಎತ್ತುಗಳನ್ನು ಸಾಕಿ ಏನು ತಾನೆ ಮಾಡುವುದು. ಅವುಗಳಿಗೆ ತಿನ್ನಲು ಒದಗಿಸುವ ಮೇವು, ಹುಲ್ಲು ಎಲ್ಲಾ ಬಿಟ್ಟಿ ಬರುತ್ತವೆಯೇ? ಸಾಯುವ ಜನಗಳಿಗೇ ಹೂಳಲು ಜಾಗವಿಲ್ಲ, ಇನ್ನು ದನಗಳನ್ನು ಎಲ್ಲಿ ಹೂಳುವುದು?”. ಇಲ್ಲಿ ಆಹಾರ ಪದ್ದತಿಗಿಂತ ಹೆಚ್ಚಿನ ಸಮಸ್ಯೆ ವಿಲೇವಾರಿಯದು. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಗೋಹತ್ಯಾ ಕಾಯ್ದೆ ಒಂದು ಚರ್ಚೆಯ ವಸ್ತು ಎಂದೇ ನನಗನ್ನಿಸುವುದಿಲ್ಲ.

ಕಡೆಯದಾಗಿ, ಕರ್ನಾಟಕದ ಜನರ ವಿಶ್ವಾಸ ಪಡೆದು ಗದ್ದುಗೆಯೇರಿರುವ ಸಿದ್ದರಾಮಯ್ಯನವರೂ ಎಲ್ಲರಂತೆಯೇ ಸ್ವಜನ ಪಕ್ಷಪಾತ ಮತ್ತು ತನ್ನ ಕುಟುಂಬದವರ ಉದ್ದಾರಕ್ಕೆ ನಿಂತರೆ ಅವರು ರಾಜ್ಯ ರಾಜಕೀಯದ ದುರಂತ ನಾಯಕರ ಸಾಲಿಗೆ ಸೇರುವುದು ಶತ ಸಿದ್ಧ. ಆದರೆ ಅದಕ್ಕೆ ಮುಂಚೆಯೇ ಅವರು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಜಾರಿಗೆ ತಂದ ೧ ರೂನಂತೆ ೩೦ ಕೆ.ಜಿ. ಅಕ್ಕಿ ಮತ್ತು ಮುಂತಾದ ಜನಪರ ಕಾರ್ಯಕ್ರಮಗಳನ್ನು ಅನಗತ್ಯವಾಗಿ ಟೀಕಿಸುವುದು ತರವಲ್ಲ. ಪ್ರಜ್ಞಾವಂತರಾಗಿ ಒಮ್ಮೆ ನೀವೇ ಯೋಚಿಸಿ ನೋಡಿ, ನಮಗೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ನಮಗಿದ್ದ ಆಯ್ಕೆಗಳಾದರೂ ಎಷ್ಟು? ಕಾಂಗ್ರೇಸ್ ಅಲ್ಲದೆ ಮತ್ತೆ ಅಸ್ಥಿರ ಮತ್ತು ಕರ್ನಾಟಕದ ಜನರ ಸ್ವಾಭಿಮಾನವನ್ನು ಗಾಳಿಗೆ ತೂರಿದ ಬಿ.ಜೆ.ಪಿ ಯನ್ನೇ ಚುನಾಯಿಸಲು ಸಾಧ್ಯವಿತ್ತೇ? (ನನ್ನ ಈ ನಿಲುವುಗಳು ಕೇಂದ್ರದಲ್ಲಿನ ಕಾಂಗ್ರೇಸ್ ಸರ್ಕಾರದ ಭ್ರಷ್ಟ ಆಡಳಿತವನ್ನು ಸಮರ್ಥಿಸುವುದಿಲ್ಲ!) ಕಾಂಗ್ರೇಸ್ ಗೆ ಅವಕಾಶ ಕೊಟ್ಟಾಗಿದೆ. ಈಗಲೇ ಅದು ಸರಿಯಿಲ್ಲ, ಹಾಗೆ ಮಾಡಿ ಬಿಡುತ್ತಾರೆ, ಹೀಗೆ ಮಾಡಿಬಿಡುತ್ತಾರೆ, ಎಂದು ಬೊಂಬಡ ಬಜಾಯಿಸುವುದಕ್ಕಿಂತ ಅವರು ತಪ್ಪು ಮಾಡಿದಾಗ ಪ್ರತಿಭಟಿಸಿ, ಬುದ್ಧಿ ಹೇಳುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.


ಕೊನೆ ಮಾತು: ಮೊದಲನೆಯದಾಗಿ, ನಾನು ಮೊಟ್ಟೆಯನ್ನಷ್ಟೇ ತಿನ್ನುವ ಶುದ್ಧ ಸಸ್ಯಾಹಾರಿ! ಮಾಂಸ ತಿನ್ನುವುದಿಲ್ಲ. ನಾನು ಕಾಂಗ್ರೇಸ್ ವಾದಿಯಂತೂ ಅಲ್ಲವೇ ಅಲ್ಲ. ನಿಜ ಹೇಳಬೇಕೆಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಓಟನ್ನೂ ಸಹ ನಾನು ಕಾಂಗ್ರೇಸ್ ಗೆ ಹಾಕಿಲ್ಲ. ಆದರೆ ಟೀಕಿಸಲೇಬೇಕು ಎಂಬ ಕಾರಣಕ್ಕೆ ಶೇ. ೭೦ ರಷ್ಟು ಮತದಾರರಿಂದ ಚುನಾಯಿತರಾದವರನ್ನು ಮತ್ತು ಅವರ ಜನಪರ ಕಾರ್ಯಕ್ರಮಗಳನ್ನೂ ಟೀಕಿಸುವುದಿಲ್ಲ! ನನಗೆ ಯಾರ ಮೇಲೂ ಪೂರ್ವಾಗ್ರಹಗಳಿಲ್ಲ. ಸರಿಯೆನಿಸಿದ್ದಷ್ಟನ್ನೇ ಹೇಳುತ್ತೇನೆ. ಬದುಕಿದ್ದನ್ನೇ ಬರೆಯುತ್ತೇನೆ. “ಮನುಜ ಮತ, ವಿಶ್ವ ಪಥ” ಇದು ನನ್ನ ಹಾದಿ.

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Tuesday, 28 May 2013

ನನ್ನ ದೇವರು!


ದೇವರು ಹುಟ್ಟುತ್ತಾನೆ
ನನ್ನೊಳಗೂ, ನಿನ್ನೊಳಗೂ,
ನಮ್ಮೆಲ್ಲರೊಳಗೂ
ದೇವರು ಹುಟ್ಟುತ್ತಾನೆ!
ಅವರವರ
ವ್ಯಾಖ್ಯಾನಗಳವರವರಿಗೆ!
ಒಬ್ಬರಿಗೆ ದೇವರು
ಗುಡಿಯಳೊಗವಿತು ಕುಳಿತರೆ,
ಮತ್ತೊಬ್ಬರಿಗೆ
ಮಸೀದಿಯ ನಾಲ್ಕು
ಗೋಡೆಗಳೊಳಗೆ ಜೀವಂತ!
ಮಗದೊಬ್ಬರಿಗೆ
ದೇವಾತ್ಮ ಶಿಲುಬೆಗೇರಿ
ಚರ್ಚಿನೊಳು ಬಂಧಿ!
ನನ್ನ ದೇವರು:
ಮಸೀದಿಯೊಳು ನೆಲೆ ನಿಂತ
ಯೇಸುವಿನ ಹೃದಯದೊಳು
ಶ್ರೀ ಕೃಷ್ಣ ತಾನಾಗಿದ್ದಾನೆ!
ಅಲ್ಲಿ ನಿಲ್ಲುವುದಷ್ಟೇ ಅಲ್ಲ
ನನ್ನ ಆತ್ಮನೊಳಗೂ
ಬೆರೆತುಬಿಟ್ಟಿದ್ದಾನೆ!
ನನ್ನನ್ನೀಗ ಕಾಡುವ ಪ್ರಶ್ನೆ:
ನಾನ್ಯಾವ ಧರ್ಮ?
ನನ್ನ ದೇವರಿಗೇನು ಹೆಸರು?

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ