ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 31 January 2013

'ಏಕಾಂಬರ' ಎಂಬ ಕಾದಂಬರಿಯೂ, ಓದುಗರೆಂಬ ನಾವೂ!

ಈ ವಿಮರ್ಶಾತ್ಮಕ ಲೇಖನ ಅವಧಿಯಲ್ಲಿ ಪ್ರಕಟಗೊಂಡಿದ್ದು ಅದರ ಲಿಂಕ್ ಇಲ್ಲಿದೆ:ನಾನೀಗ ಹೇಳ ಹೊರಟಿರುವುದು ಏಕಾಂಬರನೆಂಬ ಬ್ಯಾಂಕ್ ಮ್ಯಾನೇಜರ್ರೂ, ಅವಶೇಷದಂಚನ್ನು ತಲುಪಿರುವ ಕಳೇಬರದಂತಹ ಅವನುಡುಪುಗಳೂ, ಅವುಗಳ ಪ್ರೇರಣೆಯಿಂದ ಕಥೆ ಬರೆದು ಜಗದ್ವಿಖ್ಯಾತನಾದ ಮೂಲಿಮನಿಯೂ, ಆ ಕಥೆಯ ಭಾಗವಾಗಿ, ದೊಡ್ಡದೂ ಅಲ್ಲದ ಪುಟ್ಟದೂ ಅಲ್ಲದ ಪಟ್ಟಣವಾದ ಗುಣಸಾಗರದಲ್ಲಿ ಸಮಾವೇಶಗೊಳ್ಳಲಿರುವ 'ಸನಾತನ ಉಡುಪುಗಳ ಸಮಾವೇಶ'ವೂ, ಆ ಗುಣಸಾಗರದ ಶಾಸಕನಾದಂತಹ ರೇವಣ್ಣನೂ, ಮುಖ್ಯಮಂತ್ರಿಗಳಾಗಿದ್ದು ಮಾಜಿಗಳಾದಂತಹ ಮಾನ್ಯ ಮೂಗಪ್ಪನವರೂ, ದೇಶ ವಿದೇಶಗಳ ಗಣ್ಯಾತಿಗಣ್ಯರೂ, ಇವರೆಲ್ಲರನ್ನೂ ತನ್ನ ವಾರೆಗಣ್ಣಿನಲ್ಲಿ ಕುಣಿಸುವ ಭುವನೈಕ ಸುಂದರಿ ಈಶಾನ್ಯ ಜೈನಳೂ, ಅವಳನ್ನು ಎರಡನೇ ಪತ್ನಿಯಾಗಿ ಪಡೆದ ಗಾಯಕ್ವಾಡನೂ, ಅವನ ಕನಸಿನ ಕೂಸಾದ ಸಣಾಪುರ ಜಿಲ್ಲೆಯ ಗ್ರಾನೈಟ್ ಗಣಿಯ ಪರವಾನಿಗೆಯೂ, ಒಬೆರಾಯ್ ಗ್ರೂಪ್ ಆಫ್ ಹೋಟೆಲ್ಸ್ ನ ಮಾಲಕನಾದ ಪ್ರದ್ಯುಮ್ನ ರಾಯೂ, ಇವರೆಲ್ಲರ ಅವಾಂತರಗಳನ್ನು ಸಹಿಸುವ ನಿರುಪದ್ರವಿ ಗುಣಸಾಗರದ ಜನತೆಯೂ, ನಾವುಗಳಾದ ನಾವೂ, ಅವರುಗಳಾದ ಅವರೂ ಬಂದು ಹೋಗುವ ಸಕಾಲಿಕ, ಸಾರ್ವತ್ರಿಕ ಕಾದಂಬರಿ 'ಏಕಾಂಬರ'ದ ಬಗ್ಗೆ.

ಕುಂವೀಯವರ ಕೆಲವು ಸಣ್ಣ ಕಥೆಗಳನ್ನು ಹೊರತುಪಡಿಸಿ ಕಾದಂಬರಿಯಿಂದ ನಾನು ಅವರನ್ನು ಓದಲು ಪ್ರಾರಂಭಿಸಿದ್ದು ಈ ಏಕಾಂಬರನ ಮೂಲಕವೇ. ಇಲ್ಲಿ ನನ್ನನ್ನು ಬಹುವಾಗಿ ಹಿಡಿದಿಟ್ಟಿದ್ದು ಅವರ ಬರವಣಿಗೆಯ ಶೈಲಿ. ಅವರು ರೂಪಕಗಳ ಮೂಲಕ ವಾಸ್ತವಗಳನ್ನು ಸಮೀಕರಿಸುವ ರೀತಿ ನೋಡಿ ಬೆಕ್ಕಸ ಬೆರಗಾದೆ. ಅವರ ಭಾಷೆ ನಮ್ಮ ದಕ್ಷಿಣ ಕರ್ನಾಟಕದ ಕನ್ನಡಕ್ಕಿಂತ ಭಿನ್ನವಾಗಿದ್ದುದು ಮೊದಮೊದಲು ಓದಿಕೊಳ್ಳಲು ಕಷ್ಟವೆನಿಸಿದರೂ, ನಂತರದಲ್ಲಿ ಅದೇ ಇಷ್ಟವಾಗಿ ಓದಿಕೊಂಡೆ. ತನ್ಮೂಲಕ ಭಾಷೆ ಮತ್ತು ಶೈಲಿ ಒಬ್ಬ ಬರಹಗಾರನ ತಾಕತ್ತು ಎಂಬುದನ್ನು ಅರ್ಥೈಸಿಕೊಂಡೆ. ಈ ಕಾದಂಬರಿ ನನ್ನ ಶಬ್ಧಕೋಶವನ್ನೂ ಹಿಗ್ಗಿಸಿದ್ದು ಸುಳ್ಳಲ್ಲ. ಒಬ್ಬ ಸಶಕ್ತ ಬರಹಗಾರ ತನ್ನ ಮುಂದಿನ ಪೀಳಿಗೆಯ ಯುವ ಬರಹಗಾರರಿಗೆ ಪರೋಕ್ಷವಾಗಿ ಮಾರ್ಗದರ್ಶನ ನೀಡುವುದೆಂದರೆ ಹೀಗೇ, ಅವರ ಯೋಚನಾಧಾಟಿಯ ಹರಿವನ್ನು ನೇರ್ಪಡಿಸುತ್ತಾ, ಅವರಲ್ಲಿನ ಕ್ರಿಯಾಶೀಲತೆಗೆ ಕಿಡಿಯಾಗುತ್ತಾ, ಒಂದು ವಸ್ತುವಿನ ಒಳಹೊಳವುಗಳನ್ನು ದಕ್ಕಿಸಿಕೊಳ್ಳುವುದು ಹೇಗೆಂದು ತನ್ನ ಬರವಣಿಗೆಯ ಮೂಲಕ ಬಿಚ್ಚಿಡುತ್ತಾ ಸಾಗುವುದು. ಆ ವಿಷಯದ ಮಟ್ಟಿಗೆ ಏಕಾಂಬರ ಒಂದು ಕ್ರಾಂತಿಯೇ ಹೌದು. ಲೇಖಕರು ವಿವರಿಸುವ ಪ್ರತಿಯೊಂದು ದೃಷ್ಟಿಕೋನಗಳು ಭಿನ್ನವೇ ಆಗಿದ್ದು, ಆ ಸಂದರ್ಭಕ್ಕೆ ನಾವೇ ಪ್ರತ್ಯಕ್ಷದರ್ಶಿಗಳಾಗಿದ್ದರೂ ಲೇಖಕರು ಸೆರೆಹಿಡಿದಂತಹ ದೃಷ್ಟಿಕೋನಗಳನ್ನು ಸಿಕ್ಕಿಸಿಕೊಳ್ಳಲು ಸಾಧ್ಯವಿತ್ತೇ ಎಂಬ ಬಗ್ಗೆ ನನಗೆ ಅನುಮಾನವಿದೆ! ಓದುಗನಿಗಂತೂ ಭರಪೂರ ಮನೋರಂಜನೆಯಿದೆ.

ಏಕಾಂಬರದ ವಸ್ತುವಿನ ಬಗ್ಗೆ ಅವಲೋಕಿಸುವುದಾದರೆ, ಲೇಖಕರೇ ಹೇಳಿಕೊಳ್ಳುವಂತೆ ಓದುಗನಿಗೆ ಒಂದೇ ಓದಿಗೆ ಗ್ರಾಹ್ಯವಾಗಬಲ್ಲ ಸಮಕಾಲೀನ ವಸ್ತುವನ್ನು ಒಳಗೊಂಡಿದೆ. ಸನಾತನ ದೇಶೀಯ ಉಡುಪುಗಳು, ಬಟ್ಟೆ ಉದ್ಯಮಗಳು ಭಾರತದಂತಹ ನಾಡಲ್ಲಿ ಬೆಳೆದು ನಿಲ್ಲಲು ಪಟ್ಟ ಪರಿಪಾಟಲುಗಳೂ, ಕಾರ್ಮಿಕರು ಮತ್ತು ರೈತರ ಕಷ್ಟ ಕಾರ್ಪಣ್ಯಗಳೂ, ಕಾರ್ಲ್ ಮಾರ್ಕ್ಸ್ ಮತ್ತು ಚೆಗುವೆರಾರಂತಹ ಎಡ ಪಂಥೀಯ ನಾಯಕರ ಚಿಂತನೆಗಳೂ, ರಾಜಕೀಯ ಮೇಲಾಟಗಳೂ, ಅವರ ಆಷಾಡಭೂತಿ ನಡಾವಳಿಗಳೂ, ಈ ರಾಜಕೀಯ ಮೇಲಾಟಗಳಿಗೆ ಪರೋಕ್ಷಕವಾಗಿ ಕಾರಣವಾಗಿದ್ದುಕೊಂಡು ಅದನ್ನು ಸಹಿಸುತ್ತಲೂ ಇರುವ ಜನತೆ, ಜಾಗತೀಕರಣ, ಹೀಗೆ ಸಾಕಷ್ಟು ಒಳನೋಟಗಳನ್ನು ಹಾಸ್ಯಮಯವಾಗಿ ಶಾಂತ ಸಾಗರದಂಥ ಓದುಗನ ಮನದಾಳಕ್ಕೆ ಕಲ್ಲು ತೂರುವಂತೆ ತೂರಿದ್ದಾರೆ. ಹಾಗೆ ತೂರಿದ ಕಲ್ಲುಗಳು ಒಂದರ ಮೇಲೊಂದರಂತೆ ಆಂತರಿಕ ಜಿಜ್ಞಾಸು ತರಂಗಗಳನ್ನೆಬ್ಬಿಸುತ್ತಾ ಯೋಚನೆಗೆ ಹಚ್ಚುತ್ತವೆ. ಇಲ್ಲಿ ಹಾಸ್ಯ ಪ್ರಧಾನವಾದ ಕೆಲಸ ಮಾಡಿದ್ದು, ಕಾದಂಬರಿಯನ್ನೋದಿಸುತ್ತಾ ತನಗೆ ಕೊಟ್ಟ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಗಂಭೀರ ವಿಷಯಗಳನ್ನೂ ಮನದಾಳದ ಕೊಕ್ಕೆಗೆ ಸಲೀಸಾಗಿ ಸಿಕ್ಕಿಸುತ್ತಾ ತಮ್ಮ ಬರವಣಿಗೆಯ ಪಾರಮ್ಯ ಮೆರೆಯುತ್ತಾರೆ ಲೇಖಕರು.

ನನ್ನ ಮಟ್ಟಿಗೆ ಹೇಳುವುದಾದರೆ ಒಂದು ಒಳ್ಳೆಯ ಓದಿನೊಂದಿಗೆ ಸಾಕಷ್ಟು ವಿಷಯಗಳ ಬಗ್ಗೆ ಸ್ವ-ಅಧ್ಯಯನವನ್ನು ಉತ್ತೇಜಿಸಿದ ಕಾದಂಬರಿ ಇದು. ವಿಜ್ಞಾನವನ್ನು ವಿಷಯವಾಗಿ ಓದಿರುವ ನನಗೆ ಈ ಎಡಪಂಥೀಯ ಒಳನೋಟಗಳ ಬಗ್ಗೆ ಅರಿವು ಮೂಡಿಸಿ ಆ ಬಗ್ಗೆ ಒಂದಷ್ಟು ಅಧ್ಯಯನ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದು ಏಕಾಂಬರ. ಭಗತ್, ಶುಭಾಶ್, ಆಜಾದ್ ಮುಂತಾದವರನ್ನು ಹೀರೋಗಳಾಗಿ ಕಂಡ ಕಣ್ಣುಗಳಿಗೆ ಕಾರ್ಲ್ ಮಾರ್ಕ್ಸ್, ಚೆಗುವೆರಾರನ್ನೂ ದಕ್ಕಿಸಿದ್ದು ಏಕಾಂಬರದ ಹೆಗ್ಗಳಿಕೆ. ಒಂದು ಓದಿನ ಪ್ಯಾಕೇಜ್ ಆಗಿ ನೋಡುವುದಾದರೆ ಏಕಾಂಬರ ಮನೋರಂಜನೆಯನ್ನೂ, ಸಾಕಾಲಿಕ ರಾಜಕೀಯ ಸ್ಥಿತ್ಯಂತರಗಳನ್ನೂ, ಜಾಗತೀಕರಣದ ಮೇಲಾಟಗಳನ್ನೂ, ಸಮಾಜದ ವಿವಿಧ ಸ್ಥರಗಳಲ್ಲಿರುವ ಮಾನವನ ವಿವಿಧ ಮುಖವಾಡಗಳ ಅವಲೋಕನವನ್ನೂ ಒದಗಿಸುತ್ತದೆ. ಪ್ರತ್ಯೇಕವಾಗಿ ನಿಂತು ನೋಡುವಾಗ ಹಾಸ್ಯಾಸ್ಪದವಾಗಿ ಕಾಣುವ ಸನ್ನಿವೇಷಗಳು ಇಲ್ಲಿ ಸ್ವಾಭಾವಿಕವಾಗಿಯೂ ಅತೀ ರಂಜನೀಯವೆನಿಸದೆ ಸಹಜವಾಗಿಯೂ, ಪ್ರತಿಯೊಂದು ಸಂದರ್ಭಗಳೂ ಒಂದಕ್ಕೊಂದು ತಾರ್ಕಿಕವಾಗಿ ಅಂಟಿಕೊಂಡಂತೆಯೂ ಕಾಣುತ್ತವೆ. ಒಮ್ಮೊಮ್ಮೆ ಕಾದಂಬರಿಯ ಅಂತ್ಯ ಆವೇಗದಲ್ಲಿ ಹೊರಟ ಕಾರಿನ ಬ್ರೇಕುಗಳನ್ನು ತಕ್ಷಣಕ್ಕೆ ಅದುಮಿದಂತೆನಿಸಬಹುದು, ಇದ್ದಕ್ಕಿದ್ದಂತೆಯೇ ಎಲ್ಲವೂ ಉಪಾಂತ್ಯ ಕಂಡುವು ಎನಿಸಲೂಬಹುದು. ಆದರೆ ಯಾವುದೇ ಕಥೆಗೂ ವಾಸ್ತವದಲ್ಲಿ ಅಂತ್ಯವೆಂಬುದಿರುವುದಿಲ್ಲ ಎಂಬ ತಾರ್ಕಿಕ ಉಪಾಂತ್ಯವನ್ನು ನಾವಿಲ್ಲಿ ಕಾಣಬಹುದು. ಇದರ ಅಂತ್ಯವನ್ನು ನೋಡುವಾಗ ನನಗೆ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳಲ್ಲಿನ, ’ಇಲ್ಲಿಗೆ ಕಥೆ ಮುಗಿಯಿತೆಂದು ತಿಳಿಯಬೇಡಿ. ಕಥೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟನ್ನು ಹಾಕುತ್ತದೆಯಷ್ಟೆ.’ ಎಂಬ ಸಾಲುಗಳು ನೆನಪಾದವು.

ಈಗ್ಗೇ ಸ್ವಲ್ಪ ದಿನಗಳಂತರದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳನ್ನು, ಭ್ರಷ್ಟಾಚಾರಗಳನ್ನೂ ಕಂಡ ನಮ್ಮ ಜನತೆಯ ಮನಸ್ಥಿತಿಯನ್ನು ಕಾದಂಬರಿಯಲ್ಲಿ ಬರುವ ಗುಣಸಾಗರದ ಜನರ ಮನಸ್ಥಿತಿಗೆ ಹೋಲಿಸಿ ಬರೆದಿರುವ ತುಣುಕು ನನ್ನನ್ನು ಬಹಳವಾಗಿ ಸೆಳೆಯಿತು. ಆದ್ದರಿಂದ ಅದನ್ನಿಲ್ಲಿ ನಮೂದಿಸುತ್ತಿದ್ದೇನೆ:
"ಕಳೆದೊಂದು ತಿಂಗಳಲ್ಲಿ ನೊಣ ಕ್ರಿಮಿಕೀಟಗಳ ಉಪಟಳಗಳಿಂದ ಗುಣಸಾಗರದ ಜನತೆ ರೋಸಿ ಹೋಗಿತ್ತಷ್ಟೆ, ಎಷ್ಟು ರೋಸಿತ್ತೆಂದರೆ ಅವೆಲ್ಲ ತಮ್ಮ ಬದುಕಿನ ಅವಿಭಾಜ್ಯ ಅಂಗವೆಂದೋ, ತಮ್ಮ ಪೂರ್ವಜನ್ಮದ ಕರ್ಮವೆಂದೋ ಭಾವಿಸಿ ಕ್ರಮೇಣ ಅವುಗಳಿಗೆ ತಾವೋ, ತಮಗೆ ಅವೋ ಹೊಂದಿಕೊಂಡು ಸಹಜೀವನವನ್ನು ಆರಂಭಿಸಿದ್ದರು. ತಾವು ತಿನ್ನುವ ಆಹಾರದಲ್ಲಿ, ತಾವು ಕುಡಿಯುವ ನೀರಿನಲ್ಲಿ, ತಾವು ಸೇವಿಸುವ ಗಾಳಿಯಲ್ಲಿ ಅಂಥ ಕ್ರಿಮಿಕೀಟಗಳ ಅವಶೇಷಗಳಿರುವುದು ಅನಿವಾರ್ಯವೆಂದೇ ಭಾವಿಸಿದ್ದರು."
ಈ ಮೂಲಕ ಒಂದೊಳ್ಳೆಯ ಕಾದಂಬರಿಯನ್ನು ಕೊಟ್ಟ ಕುಂವೀಯವರ ಈ ವರ್ಷದ ಮಹಾತ್ವಾಕಾಂಕ್ಷೆಯ ಕೂಸಾದ ’ಒಳಚರಂಡಿಗಳು’ ಕಾದಂಬರಿಗೆ ಶುಭಾಶಯಗಳನ್ನು ಕೋರುತ್ತೇನೆ.

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ರಘು ಅಪಾರ

Tuesday, 22 January 2013

ಅಂತರಾತ್ಮ!
ಉಕ್ಕುಕ್ಕುವ ಗಂಗೆಯನ್ನು
ಹೇಗೆ ತಾನೇ ಒತ್ತಿ ಹಿಡಿಯಲಿ ನಾನು,
ಹರಿವುದದರ ಕ್ರಮ!
ಹರಿದು ತನುವನ್ನು ಹಗುರ ಮಾಡುವ
ಆತ್ಮಕ್ಕೆ ಸಾವಿರ ಪ್ರಣಾಮ!

ಮಾನವ, ದಾನವ, ತನ್ನೊಳಗೇ ದೈವಾ,
ಎಲ್ಲ ಅವತಾರವನ್ನೂ ಎತ್ತಿದ ಮೇಲೆ
ತನ್ನಿಂತಾನೇ ತಟಸ್ಥ!
ಎಲ್ಲಾ ಭಾವಗಳಿಗೆ ಮಿಡಿದಮೇಲೂ
ಮನಸಾ ಸಮಚಿತ್ತ ಭಾವ ಸ್ವಸ್ಥ!

ಮುಚ್ಚು ಮರೆಯಿರದೆ, ಮಡಿ ಮೈಲಿಗೆಯುಡದೆ
ಪೂರ್ವಾಪರಗಳ ಗೊಡವೆಯಿರದೆ
ಇದ್ದುದ್ದಿದ್ದಂತೆ ಹರವಿದೆ!
ಉತ್ತರಾಭಿಮುಖವಾಗಿ, ಸಿದ್ಧಕ್ಕೆ ಸಿದ್ಧನಾಗಿ
ಪರಿಶುದ್ಧ ಆತ್ಮನಾದ ಅಂತರಾತ್ಮ!

- ಪ್ರಸಾದ್.ಡಿ.ವಿ.

Thursday, 17 January 2013

ಕಂಡಷ್ಟು, ಉಂಡಷ್ಟು: ಆಧುನಿಕ ಕನ್ನಡ ಸಾಹಿತ್ಯ!ಸಾಹಿತ್ಯಿಕವಾಗಿ ಕನ್ನಡ ಕಾವ್ಯವನ್ನು ವಿಮರ್ಶಿಸುವುದಾದರೆ, ಕಾವ್ಯ ಪ್ರತಿಯೊಂದು ಕಾಲಘಟ್ಟದಲ್ಲಿಯೂ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾ ಸಾಗಿದೆ. ಕಾವ್ಯ ಹೀಗೇ ಇರಬೇಕೆಂಬ ಕಟ್ಟುಪಾಡುಗಳನ್ನು ಮೀರಿ ಬೆಳೆದು ನಿಂತಿದೆ. ಹಾಗೆ ಬೆಳೆದು ನಿಂತ ಪ್ರತಿಯೊಂದು ಸಾಹಿತ್ಯ ಪ್ರಕಾರಗಳನ್ನು ಸಾಹಿತ್ಯ ಕ್ರಾಂತಿಗಳೆಂದೂ ಅರ್ಥೈಸಬಹುದು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಾದ ಕ್ರಿಯಾಶೀಲ ಕ್ರಾಂತಿ ಕನ್ನಡ ಸಾಹಿತ್ಯಕ್ಕೆ ಮೆರುಗನ್ನು ನೀಡಿದ್ದಲ್ಲದೇ ಕನ್ನಡ ಸಾಹಿತ್ಯವನ್ನು ಜಾಗತಿಕ ಸಾಹಿತ್ಯದ ಮಟ್ಟಕ್ಕೆ ಕೊಂಡೊಯ್ಯಿತು ಎಂಬುದು ನಿರ್ವಿವಾದ. ಶಾಸ್ತ್ರೀಯ ಸಾಹಿತ್ಯ, ರಾಜಾಶ್ರಯ ಸಾಹಿತ್ಯ, ಹಳೆಗನ್ನಡ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಬೆಳೆದುಬಂದ ಕನ್ನಡ ಸಾಹಿತ್ಯ ಹದಿನೆಂಟನೆಯ ಶತಮಾನದ ಅಂತ್ಯಕ್ಕೆ ನವೋದಯ ಸಾಹಿತ್ಯವಾಗಿ ಚಿಗುರೊಡೆಯಿತು.

ಕುವೆಂಪು, ಬಿ.ಎಂ.ಶ್ರೀ, ಬೇಂದ್ರೆ ಅಜ್ಜ ಮತ್ತು ಮೊದಲಾದವರಿಂದ ಮೊದಲ್ಗೊಂಡ ನವೋದಯ ಸಾಹಿತ್ಯ ಓದುಗರಿಗೆ ಒಂದು ರೀತಿಯ ಏಕತಾನತೆಯನ್ನು ಅನುಭಾವಕ್ಕೆ ಕೊಟ್ಟಾಗ, ನವೋದಯೊತ್ತರ ಸಾಹಿತ್ಯ ರಚನೆಗೊಳ್ಳಲು ಪ್ರಾರಂಭವಾಯ್ತು. ಆ ಘಟನೆ ನವ್ಯ ಸಾಹಿತ್ಯದ ರಚನೆಗೆ ಪ್ರೇರಣೆಯಾಯ್ತು. ನವ್ಯ ಸಾಹಿತ್ಯವು ರಚನೆಗೊಂಡ ಹೊಸದರಲ್ಲಿ ಓದುಗರ ಮೆಚ್ಚುಗೆ ಪಡೆದದ್ದು ಸುಳ್ಳಲ್ಲ. ಆದರೆ ನವ್ಯ ಸಾಹಿತ್ಯವು ಬಹುವಾಗಿ ಪಾಶ್ಚಾತ್ಯ ಮತ್ತು ಆಂಗ್ಲ ಸಾಹಿತ್ಯದ ಪ್ರೇರಣೆಯಿಂದ ರೂಪುಗೊಂಡದ್ದು. ಇಲ್ಲಿ ಜನಸಾಮಾನ್ಯರ ದನಿ ಅವನತಿಯ ಹಾದಿ ಹಿಡಿದು, ಕನ್ನಡ ಸಾಹಿತ್ಯ ನಿಂತ ನೀರಾಗುವುದೇನೋ ಎಂಬ ಭ್ರಮಾತೀತ ಪರಿಸ್ಥಿತಿಗಳು ಸೃಷ್ಟಿಯಾದವು. ಈ ರೀತಿಯ ಸಾಹಿತ್ಯಿಕ ಭ್ರಾಂತಿ ಆ ಕಾಲದ ಕಾವ್ಯ ಕೃಷಿಯ ಮಾರ್ಗಗಳನ್ನು ತ್ಯಜಿಸುವುದಷ್ಟೇ ಅಲ್ಲದೇ ಅವುಗಳ ಸ್ಪೂರ್ತಿಯ ಮೂಲಗಳು, ಅಭಿವ್ಯಕ್ತಿ ಪರಿಕರಗಳು, ಅವುಗಳ ಮೌಲ್ಯಗಳನ್ನು ತ್ಯಜಿಸದ ಹೊರತು ದೂರವಾಗುವಂತದ್ದಾಗಿರಲಿಲ್ಲ. ಕೇವಲ ಅಚ್ಚಿಸುವ ತಂತ್ರಜ್ಞಾನಗಳು ಬದಲಾಗುವುದರಿಂದ ಅದು ಸಾಧ್ಯವಿಲ್ಲದ್ದಾಗಿತ್ತು! ಇಲ್ಲಿಯವರೆಗೂ ರಚನೆಗೊಂಡ ಕಾವ್ಯದ ಮೂಲ ಸ್ವರೂಪ ಲಯಬದ್ಧವಾಗಿದ್ದು, ಅದಕ್ಕೆ ತನ್ನದೇ ಆದ ಸಾಂಕೇತಿಕ ಸಿದ್ಧ ಶೈಲಿ ಮತ್ತು ತಂತ್ರಗಳನ್ನು ಒಳಗೊಂಡಿತ್ತು.

ಅಲ್ಲಿಯವರೆಗೂ ಕ್ರಾಂತಿ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗಿತ್ತು. ಜನರ ಆಗು ಹೋಗುಗಳಿಗೆ, ಗ್ರಾಮೀಣ ಪರಿಕಲ್ಪನೆಗಳಿಗೆ, ಜೀವನಾನುಭವ ಮತ್ತು ತಿಳುವಳಿಕೆಗಳಿಗೆ ಒಗ್ಗಿಕೊಂಡಂತೆ ಸಾಹಿತ್ಯ ಸೃಷ್ಟಿ ಅಸಾಧ್ಯ ಎಂದಾದಾಗ, ತೇಜಸ್ವಿ ಮತ್ತು ದೇವನೂರ ಮಹದೇವರವರ ಮುಂದಾಳತ್ವದಲ್ಲಿ ನವ್ಯೊತ್ತರ, ದಲಿತ ಮತ್ತು ಬಂಡಾಯ ಸಾಹಿತ್ಯಗಳ ಕಾವ್ಯ ಸೃಷ್ಟಿ ಸಾಧ್ಯವಾಯ್ತು. ಇದು ಜನರ ಮಧ್ಯೆ ನುಡಿದಂತೆ ಸಾಗಿಬೆಳೆದ ಸಾಹಿತ್ಯ. ಈ ಹಂತದಲ್ಲಿ ಕಾವ್ಯ ಕ್ರಾಂತಿಕಾರಕ ಧೋರಣೆಗಳಿಗೆ ಒಗ್ಗಿಕೊಂಡಿತು. ಕಾವ್ಯದ ಆಮೂಲಾಗ್ರ ಬದಲಾವಣೆಯಾಯ್ತು, ಇಲ್ಲಿ ಸೃಷ್ಟಿಯಾದ ಸಾಹಿತ್ಯದ ಉದ್ದೇಶಗಳು ನಿನಾದವಾಗಿರದೇ ಜನರ ನಾಡಿ ಮಿಡಿತಕ್ಕೆ ಸ್ಪಂದಿಸುವುದಾಗಿತ್ತು. ಹಾಗೆ ಸೃಷ್ಟಿಯಾದ ಕಾವ್ಯವನ್ನು ಕವಿ ನುಡಿಸಿದ್ದು ತನ್ನದೇ ಧಾಟಿಯಲ್ಲಿ. ಈ ಮೂಲಕ ಹರಿದು ಬಂದ ಸಾಹಿತ್ಯವು ಓದುಗನ ಕಾಲಿಗೆ ತೊಡರಿ, ಓದುಗನದಾಗುತ್ತದೆ. ಓದುಗ ಅದನ್ನು ತನ್ನದು ಮಾಡಿಕೊಳ್ಳಬೇಕಾದ ಜವಾಬ್ದಾರಿ ಓದುಗನದ್ದು. ಇಲ್ಲಿ ಕಾವ್ಯ ಮತ್ತು ಓದುಗ ಇಬ್ಬರೂ ಕ್ರಿಯಾಶೀಲರಾಗಿದ್ದು, ಪೂರ್ವಾಗ್ರಹ ಪೀಡಿತರಾಗದೇ ಇರಬೇಕು.

ಕಾವ್ಯ ಓದುಗನಿಗೆ ದಕ್ಕುವುದೇ ಇಲ್ಲ ಎಂದು ಸತ್ಯಾಗ್ರಹ ಹೂಡಿ ಕೂರುವುದಲ್ಲ! ಜೊತೆಗೆ ಓದುಗ ಕಾವ್ಯ ಅದಾಗದೇ ಬಂದು ನನ್ನನ್ನು ಸೋಕಿ ಹೋದರೆ ಹೋಗಲಿ, ನಾನು ಮಾತ್ರ ಪ್ರಯತ್ನಿಸುವುದಿಲ್ಲ ಎಂದು ಇದ್ದುಬಿಡುವುದೂ ಸಲ್ಲ. ಕಾವ್ಯವೂ ಕೈಚಾಚಬೇಕು, ಓದುಗನೂ ಕೈಚಾಚಬೇಕು. ಅವನ ಅರಗಿಸಿಕೊಳ್ಳುವಿಕೆಗೂ, ಕಾವ್ಯದ ಸಾರಕ್ಕೂ ಅನುಸಂಧಾನವಾಗಬೇಕು, ಆಗಷ್ಟೇ ಒಂದು ಸೌಹಾರ್ದಯುತವಾದ ಹೊಂದಾಣಿಕೆಯ ಜ್ಞಾನದ ಹಸ್ತಲಾಘವ ಸಾಧ್ಯ.  ನನಗೆ ಅನುಭಾವಕ್ಕೆ ಸಿಕ್ಕ ಸಾಹಿತ್ಯವನ್ನು ಇಷ್ಟು ಮಾತ್ರ ಅರುಹಲು ಪ್ರಯತ್ನಿಸಿದ್ದೇನೆ.

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

Thursday, 10 January 2013

ಉಸಿರಾಡಲಿ ತಾಯಿ ಭಾರತಿ!
ಕಾಡವೇ ಕಂದಾಚಾರಗಳು,
ಅವುಗಳ ಪಾಡಿಗವು ಕುಣಿಯವೇ,
ಕಾಂಚಾಣಕ್ಕೆ ಹೂಂಕರಿಸಿ
ಕುಣಿವ ದೈತ್ಯ ದೇವತೆಯಂತೆ!
ಕುಣಿದದ್ದೆ ಕುಣಿದದ್ದು,
ಉಂಡೆಲೆಯ ಮೇಲೂ
ಹೊರಳಿ ಬಿದ್ದವು ಮೌಲ್ಯಗಳು!
ಅಂಧಾಚರಣೆಯ ಹೆಸರಲ್ಲಿ
ಮೆತ್ತಿಕೊಂಡವು ಮೈಗೆ,
ಕಂಡಕಂಡವರ ಎಂಜಲಗಳು!
ಕಂದಾಚಾರ, ಡಂಬಾಚಾರಗಳು
ಗಂಟು ಬಿಡಲಿಲ್ಲ, ನಂಟೂ ಬಿಡಲಿಲ್ಲ!

ದೇವರಿಗೆ ಹಚ್ಚಿಟ್ಟ
ಧೀ ಶಕ್ತಿ ತೂಗು ದೀಪ,
ಮನೆ ಸುಟ್ಟ ಕೊಳ್ಳಿಯಾಯ್ತಂತೆ!
ಉರಿಸಿಟ್ಟ ಊದುಗಡ್ಡಿಯ ಹೊಗೆ
ಸಿಗರೇಟಿನ ಸುರುಳಿ ಸುತ್ತಿದ
ಧೂಮದೊಳು ಬೆರೆತಂತೆ!
ತಾಯಿಯೂ ಮಕ್ಕಳ
ಮಾನ ಕಾಯಲಾರದೆ
ಕೈ ಕಟ್ಟಿ ಕೂತಂತೆ!
ಬೆತ್ತಲಾದವು ಹೆಣ್ಮಕ್ಕಳು
ಹಾದಿ ಬೀದಿಯಲ್ಲಿ,
ಅವರವರನುಜರ ಕೈಯ್ಯಲ್ಲೇ!

ಸಮಾನತೆ ಕುಡಿಯೊಡೆಯಲಿಲ್ಲ,
ಸಾತ್ವಿಕತೆ ಮೊಲೆಯೂಡಲಿಲ್ಲ,
ತಾಯಿ ಅಳುತ್ತಲೇ ಇದ್ದಾಳೆ,
ಸೀರೆಯೆಳೆದಾರು
ಹೊಲಸು ಕೆಡುಕರು
ಎಂಬ ಭಯದಲ್ಲಿ!
ಮುಕ್ತವಾಗಿಸಿರೋ ಅವಳ
ಕಬಂದ ಬಾಹುಗಳ
ಕಪಿ ಮುಷ್ಠಿಯಿಂದ!
ಸಮಾನತೆ, ಸ್ವಸ್ಥ ಗಾಳಿಯ
ಉಸಿರಾಡಲಿ ಭಾರತಾಂಬೆ,
ಕಾಣದೇ ಅವಳ ದಣಿವು ನಿಮಗೆ?

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Wednesday, 2 January 2013

ಸದ್ಗುಣ ಸತಿ!
ಅಂಗಳ ಗುಡಿಸಿ,
ಆರತಿ ಹಚ್ಚಿಟ್ಟು ಕೈಮುಗಿಯುತ್ತಾಳೆ,
ಮಾಳಿಗೆ ಸೋರದಂತೆ
ಜಂತಿಯ ತೊಲೆ ಕಟ್ಟುತ್ತಾಳೆ,
ಮನೆಯ ಸಮವಿಟ್ಟು ಸರಿದೂಗುತ್ತಾಳೆ,
ಸೇವೆಗೆ ಸರಿನಿಂತು ಉಸಿರಾಗುತ್ತಾಳೆ!

ಅರಿವೊಳಗಿನ ಗುರುವವಳು,
ದಾರಿ ತೋರಿ ತಣ್ಣಗಿರುವಳು,
ಗೆದ್ದೆನೆಂದು ಬೀಗುವವು
ಗಂಡೆದೆ, ತೋಳುಗಳು!
ಯಶಸ್ಸಿನ ಹಿಂದೆ ನಿಂತ ಮಂತ್ರಿ,
ಅವನಾನಂದವ ಕಣ್ತುಂಬಿಕೊಳ್ವಳು!

ಅನ್ನ ಅನ್ನಕ್ಕೂ ಮುತ್ತಿಟ್ಟು,
ಪ್ರೀತಿಯಿಂದ ತುತ್ತಿಟ್ಟು,
ತನ್ನ ಹಸಿವ ಇಂಗಿಸಿಯಾದರೂ,
ಹೊತ್ತು ಹೊತ್ತಿಗೆ ಅನ್ನವುಣಿಸಿ
ಗಂಡ-ಮಕ್ಕಳ ಹೊಟ್ಟೆ ತುಂಬಿಸುವ
ಅನ್ನಪೂರ್ಣೇಶ್ವರಿ ಅವಳು!

ವಯ್ಯಾರದಿ ತುಳುಕಿ ಬಳುಕಿ,
ಶೃಂಗಾರದಿ ಬಳಿಗೆ ಬರುವ,
ಸುಖ-ಸಂತೋಷವ ಮೊಗೆದು ಸುರಿವ
ಚೈತನ್ಯದ ಬುಗ್ಗೆಯವಳು
ಶಯನ ಸುಖದಿ ಗಂಡನೆದೆಯಾ
ತಣಿಸಲುಕ್ಕಿ ಹರಿವಳು!

ಹಣೆಯಲ್ಲಿ ಕೆಂಪು ಬಿಂದಿ,
ಕೈಯಲ್ಲಿ ಹಸಿರ ಬಳೆ,
ಮೂಗಿನ ಮೇಲ್ ರತ್ನದಾ ನತ್ತು,
ನಕ್ಕರರಳುವ ದಂತಪಂಕ್ತಿ!
ಅರಳುವಳು ದೇವತೆ,
ಕಮಲದೊಳಗಿನ ಕಮಲದಂತೆ!

ತನ್ನಾಸೆಗಳ ಕೊಂದು,
ನೋವಲ್ಲಿ ಬೆಂದು
ಕಾವಲಿಯ ಮೇಲೆ ಬಿದ್ದರೂ,
ಎಲ್ಲವನ್ನೂ ಸಹಿಸಿ
ತಪ್ಪುಗಳ ಮನ್ನಿಸಿ ಮತ್ತೆ ಮಿಡಿವಳು
ಕುಲಧರ್ಮ ಪತ್ನಿ, ಕ್ಷಮಯಾ ಧರಿತ್ರಿ!


- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ