ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 27 December 2012

ಗಂಡಸರೆನ್ನಿಸಿಕೊಳ್ಳುವಂತಹ ನಾವೆಷ್ಟು ಸಭ್ಯರು!?!




ದೆಹಲಿಯಲ್ಲಿ 23 ವರ್ಷದ ಹೆಣ್ಣು ಮಗಳೊಬ್ಬಳು ತನ್ನ ಮಾನ ಹರಣಗೊಂಡು, ಮಾನಸಿಕವಾಗಿ ಮತ್ತು ದೈಹಿಕವಾಗಿ ಘಾಸಿಗೊಂಡು ತನ್ನ ಪ್ರಾಣವನ್ನೂ ಈ ರಕ್ತ ಪಿಪಾಸುಗಳಿಗೆ ಬಲಿಕೊಟ್ಟದ್ದನ್ನು ನೆನಪಿಸಿಕೊಂಡಾಗ ಮೈಯೆಲ್ಲಾ ಉರಿದು ಹೋಗಿ ನಮ್ಮ ಸಮಾಜದ ಮೇಲೆ, ನಮ್ಮ ಗಂಡು ಜಾತಿಯ ಮೇಲೇ ಅಸಹ್ಯ ಹುಟ್ಟುತ್ತದೆ! ಹೆಣ್ಣು ತನ್ನೆಲ್ಲಾ ಕಾಲಘಟ್ಟಗಳಲ್ಲಿ ನಂಬುವ ತಂದೆ, ಅಣ್ಣ, ತಮ್ಮ, ಗೆಳೆಯ, ಗಂಡ, ಮಾವ, ಭಾವ, ಮೈದುನ, ಮಗ ಹೀಗೆ ಹತ್ತು ಹಲವು ಅವತಾರಗಳಲ್ಲಿರುವ ಗಂಡಸರಾದ ನಾವೆಷ್ಟು ಸಭ್ಯರು ಎಂಬ ಅನುಮಾನ ಕಾಡುತ್ತದೆ! ಆ ಅನುಮಾನಕ್ಕೆ ಉತ್ತರ ಕಂಡುಕೊಳ್ಳುವ, ತನ್ನ ಹೀನ ನಡವಳಿಕೆಗಳನ್ನು ಪ್ರಶ್ನಿಸಿಕೊಳ್ಳುವ ಸಾತ್ವಿಕ ಪ್ರಜ್ಞೆ ನಮ್ಮಲ್ಲಿ ಜಾಗೃತಗೊಂಡದ್ದೇ ಆದರೆ ನಮ್ಮ ಸಮಾಜ 'ಅತ್ಯಾಚಾರ ಮುಕ್ತ' ಸಮಾಜವಾಗುವುದರಲ್ಲಿ ಅನುಮಾನವಿಲ್ಲ. ಅತ್ಯಾಚಾರವೆಂದರೆ ದೈಹಿಕವಾಗಿಯೇ ಆಗಬೇಕೆಂದಿಲ್ಲ, ಮಾನಸಿಕವಾಗಿ, ನೈತಿಕವಾಗಿಯೂ ಆಗಿರಬಹುದು. ಹೆಣ್ಣನ್ನು ಗೌರವ ಭಾವದಿಂದ ನಡೆಸಿಕೊಳ್ಳುವ ಜವಾಬ್ಧಾರಿ ಭಾರತಾಂಬೆಯ ಮಕ್ಕಳೆನಿಸಿಕೊಳ್ಳುವ ನಮ್ಮೆಲ್ಲರ ಮೇಲೂ ಇದೆ. ಗಂಡು ಮಕ್ಕಳ ತಾಯಿಯಂದಿರು ಮೊದಲು ತಮ್ಮ ಮಕ್ಕಳಿಗೆ ಇಂತಹ ಸಾತ್ವಿಕ ಶಿಕ್ಷಣವನ್ನು ಧಾರೆ ಎರೆಯಬೇಕು. 

ಹೀಗೆ ಎಷ್ಟೆಲ್ಲಾ ಸಂಬಂಧಗಳೊಡಗೂಡಿ ಹೆಣ್ಣಿನೊಂದಿಗೆ ಬೆಸೆದುಕೊಂಡ ನಾವು ಮತ್ತೊಬ್ಬ ಹೆಣ್ಣನ್ನು ಕಾಮುಕ ಕಂಗಳಿಂದ ನೋಡುವ ಮೊದಲು, ನಾವೂ ಒಂದು ಹೆಣ್ಣಿನ ಅಪ್ಪನೋ, ಸಹೋದರನೋ, ಗೆಳೆಯನೋ, ಸಂಬಂಧಿಯೋ ಆಗಿರುತ್ತೇವೆಂಬ ಅಲ್ಪ ಪ್ರಜ್ಞೆ ಅಥವಾ ನಮಗೆ ಸಂಬಂಧಪಟ್ಟ ಆ ಹೆಣ್ಣನ್ನೂ ಯಾರದರೂ ಹೀಗೆ ನೋಡಿದ್ದರೆ ಸಹಿಸುತ್ತಿದ್ದೆವೇ? ಎಂಬ ಅರಿವನ್ನು ತಂದುಕೊಂಡರೆ, ಉಗುಳುವ ಮೊದಲೇ ತಪ್ತವಾಗಿಬಿಡುತ್ತದೆ ಕಾಮಾಗ್ನಿ!

ಕೆಲವು ವರ್ಷಗಳ ಹಿಂದ ನನ್ನ ಗೆಳತಿಯೊಬ್ಬಳ ಜೀವನದಲ್ಲಿ ನಡೆದ ಘಟನೆ: ಆಕೆ ಮಾರ್ಕೆಟ್ ಗೆ ಹೋಗಿ ಹಿಂದಿರುಗುವ ಧಾವಂತದಲ್ಲಿ ನಡೆದು ಹೋಗುತ್ತಿರುವುದನ್ನು ಕಂಡ ಒಬ್ಬ 16 ರಿಂದ 17 ವರ್ಷ ವಯಸ್ಸಿನ ಹುಡುಗ ಸೈಕಲ್ ನಲ್ಲಿ ಹಿಂಬಾಲಿಸುತ್ತಿದ್ದನಂತೆ. ಅಕ್ಕ ಪಕ್ಕದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತನ್ನ ವಯಸ್ಸಿಗಿಂತಲೂ ದೊಡ್ಡವಳಾದ ಅವಳನ್ನು ತಬ್ಬಿ ಹಿಡಿಯುವ ಪ್ರಯತ್ನ ಮಾಡಿದನಂತೆ. ಆಕೆಗೆ ಜಂಘಾಬಲವೇ ಉಡುಗಿಹೋಗಿದೆ! ಆಕೆ ಹೇಗೋ ಪ್ರಯತ್ನ ಮಾಡಿ, ತನ್ನ ಕೈಯ್ಯಲ್ಲಿದ್ದ ತರಕಾರಿಗಳನ್ನು ಅವನ ಮೇಲೆ ಕುಕ್ಕಿ, ಕೂಗಿಕೊಂಡು ಪ್ರತಿಭಟಿಸಿದ್ದರಿಂದ ಹೆದರಿ ಸೈಕಲ್ ಮೇಲೇರಿ ಓಡಿಹೋದನಂತೆ. ಆದರೆ ಆ ಘಟನೆಯ ನಂತರ ಆಕೆಯ ಮನಸ್ಥಿತಿ, ಅಬ್ಬಾ ನನಗೀಗಲೂ ಮೈ ಕಂಪಿಸುತ್ತದೆ. ಗಂಡಸರೆಂದರೆ ಆಕೆಗೆ ಅಸಹ್ಯ ಮೂಡಿಬಿಟ್ಟಿತ್ತು! ಎಲ್ಲಾ ಗಂಡಸರೂ ಹಾಗಿರುವುದಿಲ್ಲ, ಅಪ್ಪ, ಅಣ್ಣ, ತಮ್ಮ ಹೀಗೆ ಬಾಂಧವ್ಯ ಹಂಚಿಕೊಂಡವರೂ ಗಂಡಸರಲ್ಲವೇ? ಭಯ ಪಡಬೇಡ ಎಂದರೂ ಆಕೆ ಕೇಳದ ಸ್ಥಿತಿ ತಲುಪಿಬಿಟ್ಟಿದ್ದಳು! ಆಕೆಯ ನಂಬಿಕೆಯ ಮೇಲೆ ಬಲವಾದ ಹೊಡೆತ ಬಿದ್ದಿತ್ತು! ಹೀಗೆ ಹುಡುಕುತ್ತಾ ಹೋದರೆ ಹೆಣ್ಣಿನ ಮೇಲೆ ನಡೆಯುವ ಪೈಶಾಚಿಕ ಮನಸ್ಥಿತಿಯ ರಾಕ್ಷಸರ ದೌರ್ಜನ್ಯಗಳು ಅಸಂಖ್ಯ. ಇವರಿಂದಾಗಿ ಸಭ್ಯರೂ ಮುಖ ಮುಚ್ಚಿಕೊಳ್ಳಬೇಕಾದ ಸ್ಥಿತಿಗೆ ನಮ್ಮ ನಾಗರೀಕ ಸಮಾಜ(!) ಬಂದು ನಿಂತಿದೆ.

ದೆಹಲಿಯಲ್ಲಿ, ಆ ಆರು ಜನರಿಂದಾದ ಅತ್ಯಾಚಾರದಂತಹ ದುಷ್ಕೃತ್ಯ ಕೇವಲ ಆಕೆಯ ಮೇಲಾದ ದೌರ್ಜನ್ಯವಷ್ಟೇ ಅಲ್ಲಾ, ಮಾನವೀಯತೆಯ ಮೇಲಾದ ದೌರ್ಜನ್ಯ, ಸಭ್ಯ ಗಂಡಸರ ಸಭ್ಯತೆಯ ಮೇಲಾದ ದೌರ್ಜನ್ಯ! ಆ ಕುಕೃತ್ಯದಿಂದಾಗಿ ಎಲ್ಲಾ ಗಂಡಸರ ಆತ್ಮೀಯತೆಯೂ ಹಳದಿಗಣ್ಣಿನ ಸೋಗಿನಲ್ಲಿ ಕಾಣುತ್ತಿರುವುದು ದುರಂತ. ಯಾವುದೋ ಒಂದು ದುರ್ಬಲ ಮನಸ್ಥಿತಿಯಲ್ಲಿ ಹೆಣ್ಣಿನ ಜೊತೆ ಕೀಳಾಗಿ ನಡೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ, ನಿಮ್ಮ ಮಗಳೇ ನಿಮ್ಮ ಅಕ್ಕರೆಯ ಸ್ಪರ್ಶವನ್ನು ಕಾಮ ಪ್ರೇರಿತವಾದದ್ದೆಂದು ಅಸಹ್ಯ ಪಟ್ಟುಕೊಂಡರೆ? ನಿಮ್ಮ ಸಹೋದರಿಯೇ ನಿಮ್ಮ ಆತ್ಮೀಯ ಸ್ಪರ್ಶಕ್ಕೆ ಕೆಂಡ ಮುಟ್ಟಿದಂತೆ ಕೈ ಎಳೆದುಕೊಂಡರೆ? ನಿಮ್ಮ ನಲ್ಲೆಗೆ ಹಿತವೆನಿಸಬೇಕಾದ ನಿಮ್ಮ ಸ್ಪರ್ಶ ಕಾದ ಸಲಾಕೆಯಾದರೆ? ನಿಮ್ಮ ತಾಯಿಗೂ ನೀವು ಕಾಮ ಪಿಶಾಚಿಯಂತೆ ಕಂಡರೆ? ನಿಮ್ಮ ಅಮ್ಮನನ್ನೋ, ಸಹೋದರಿಯನ್ನೋ, ಮಗಳನ್ನೋ ನೀವು ಕಾಮುಕ ದೃಷ್ಟಿಯಿಂದ ನೋಡಬಲ್ಲಿರೇ? ನಿಮ್ಮ ಪ್ರಜ್ಞೆ ನಿಮ್ಮ ಕೈಜಾರಿ, ಅಮಾಯಕ ಹೆಣ್ಣು ಮಗಳ ಮೇಲೆರಗುವ ಮುನ್ನ ಒಮ್ಮೆ ಪ್ರಶ್ನಿಸಿಕೊಳ್ಳಿ, ನೀವೆಷ್ಟು ಸಭ್ಯರು? ಒಬ್ಬಳ ತಂದೆಯೋ, ಸಹೋದರನೋ, ಇನಿಯನೋ, ಮಗನೋ ಆಗಿರುವ ನೀವೆಷ್ಟು ಸಭ್ಯರು? ನಿಮ್ಮ ಕುಕೃತ್ಯದಿಂದ ಇಡೀ ನಾಗರೀಕ ಜಗತ್ತಿನ ಸಭ್ಯ ಗಂಡಸರನ್ನೂ ಬೆತ್ತಲೆ ನಿಲ್ಲಿಸುತ್ತಿರುವ ನೀವೆಷ್ಟು ಸಭ್ಯರು? ಒಮ್ಮೆ ಪ್ರಶ್ನಿಸಿಕೊಳ್ಳಿ. 

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

ಬಾರದಿರು ಸಖೀ




ಬಾರದಿರು ಸಖೀ
ಬಾರದಿರು!
ಇನ್ನೆಂದು ಕನಸಲ್ಲೂ
ಹಿಂದಿರುಗಿ ಬಾರದಿರು!
ಕನಸು ಕಂಡ ಕಣ್ಣೇ
ಕುರುಡಾಗಿಬಿಡಲಿ!
ನೀನು ಮಾತ್ರ
ಹಿಂದಿರುಗಿ ಬಾರದಿರು!

ಕಪ್ಪು ಬಿಳುಪಿನ
ಯಾನವಾದರೂ ಸರಿ,
ಹಿಂದೆಂದೋ
ಮುರಿದುಬಿದ್ದ
ಗುಡಿಯೊಳಗೆ
ಬುಡ್ಡಿ ದೀಪವನ್ನೂ
ಹಚ್ಚದಿರು!
ಸಹಿಸಲಾರೆನು,
ಅದು ನನ್ನಣಕಿಸಿ
ನಗುವ ಪರಿಯ!

!! ಬಾರದಿರು ಸಖೀ !!

ಯಾರಾದರೂ ಸರಿಯೇ
ನಿನ್ನೆದುರು ಸಿಕ್ಕಿ,
ನನ್ನನ್ನೇನಾದರೂ
ಕೇಳಿದರೆ, ಅದೋ
ಆ ಪಾಳುಬಿದ್ದ ಪಂಟಪದಡಿಯಲ್ಲಿ
ಅತ್ತು ಹಗೆದು, ಹೂಳು ಹೊದ್ದು
ಮಲಗಿರುವ
ಗೋರಿಯನ್ನೊಮ್ಮೆ
ತೋರಿಬಿಡು ಸಖೀ,
ತೋರಿಬಿಡು!
ಇನ್ನೆಂದೂ ಬಾಳಲ್ಲಿ
ಬಣ್ಣ ಹೊದ್ದು ಬದುಕಲಾರೆ,
ಬಾರದಿರು ಸಖೀ,
ಇನ್ನೆಂದೂ ಹಿಂದಿರುಗಿ ಬಾರದಿರು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

Wednesday 12 December 2012

ಅರ್ಥವಾಗದ ಅವಳು, ತೇವವಾಗುವ ಅವನು!



ಅವನು
--------
ನನಗಿನ್ನೂ ಅರ್ಥವಾಗಿಲ್ಲ,
ಆಕೆ ನನ್ನಿಂದ
ದೂರಾದದ್ದಾದರೂ ಯಾಕೆಂದು?
ಅವಳಿಲ್ಲದ ದಿನಗಳಲಿ
ತೀರಿಲ್ಲದ ಬದುಕಲ್ಲಿ
ಉಳಿದದ್ದಾದರೂ ಏನೆಂದು?

ಆಕೆ ವಿಮುಖಳಾದಾಗಲೆಲ್ಲಾ
ಸಾಂತ್ವನ ಸುರಿದು,
ಕೈಯ್ಯಲ್ಲಿ ಕೈ ಹಿಡಿದು,
ಮಳೆಯಲ್ಲಿ ನೆನೆಯದಂತೆ,
ಎದೆಗವುಚಿಕೊಂಡದ್ದು!
ಅವಳು ಸುಮ್ಮನಿದ್ದು,
ನನ್ನನ್ನು ತಬ್ಬಿದ್ದು,
ಅಳುವಾಗಲೆಲ್ಲ ನನ್ನೆದೆಯೊಳಗೆ
ಮೊಗ ಉದುಗಿಸಿ ಬಿಕ್ಕಿದ್ದು ಯಾಕೆಂದು?
ಅರ್ಥವಾಗಲಿಲ್ಲ ನನಗೆ
ನೆನಪುಗಳೊಂದಿಗೆ ಒಬ್ಬಂಟಿ ಪಯಣ
ನನಗೊಬ್ಬನಿಗ್ಯಾಕೆಂದು?

ಅವಳು ನೋಡಲೆಂದೇ
ವಿಧ-ವಿಧದ ಕೇಶ ವಿನ್ಯಾಸ,
ಅವಳ ಮೆಚ್ಚಿಸಲೆಂದೇ
ಗಿಟ್ಟಿಸಿಕೊಂಡ ಉದ್ಯೋಗ,
ಅವಳಿಗಾಗಿ ಬದಲಿಸಿಕೊಂಡ
ಜೀವನ ಶೈಲಿ,
ಬಿಟ್ಟ ಸಿಗರೇಟು ಸೇವನೆ!
ನನ್ನ ಪ್ರೀತಿಯನ್ನು ಅವಳಿಗರ್ಥ
ಮಾಡಿಸಲು ಹೆಣಗಿದ್ದು!
ಇಷ್ಟೆಲ್ಲದರ ನಡುವೆ
ಅರ್ಥವಾಗಲಿಲ್ಲ ನನಗೆ,
ಆಕೆ ನನ್ನನ್ನು ಬಿಟ್ಟದ್ದು ಯಾಕೆಂದು?
ಅವಳ ಮದುವೆಗೆ ನನ್ನನ್ನು
ಬರಲೇ ಬೇಕೆಂದು
ಕರೆದದ್ದು ಯಾಕೆಂದು?

ಅವಳು
--------
ಅವನು ನನ್ನನ್ನು
ಪ್ರೀತಿಸಿದ್ದನೇನೋ ಹೌದು,
ನಾನೂ ಪ್ರೀತಿಸಿದ್ದಿರಬಹುದು,
ಆದರೆ ನಾನೆಂದು ಒಪ್ಪಿಲ್ಲ!
ಅದಕ್ಕಾಗೆ ಗೆಳೆಯ
ಎಂದಲ್ಲದೆ ಮತ್ತೇನೂ ಕರೆದಿಲ್ಲ!
ಆಗಾಗ ತಲೆ ಒರಗಿಸಿದ್ದುಂಟು,
ಅತ್ತು ಕರೆದದ್ದುಂಟು, ನಗುವ
ಬಯಸಿದ್ದುಂಟು!
ಹೊರಗೆ ಬೇಡವೆಂದರೂ,
ಒಳಗೊಳಗೇ ಬೇಕೆನಿಸಿದ್ದುಂಟು!
ಆದರೆ ಪೋಷಕರ ಮನವ
ನೋಯಿಸಲಾರೆ,
ಅವರ ಮಾನವ ಬೀದಿಗೆ ತಂದ
ಕೆಟ್ಟ ಮಗಳಾಗಲಾರೆ!
ಅವರಾದರೂ ಹೆತ್ತವರು,
ಹಾಳು ಬಾವಿಗೆ ತಳ್ಳಿಯಾರೇ?
ಜೋಪಾನ ಮಾಡಲೆಂದೇ
ಬಂದವನು ಅವನು,
ಅವನ ಜೀವನ ಸ್ಪರ್ಶದಿ
ಪುಳಕಿತಗೊಂಡೆನು!
ಅವನೊಲವಿಗೆ ಋಣಿಯೂ ನಾನು!
ಬದುಕ ಹೆಜ್ಜೆಯ ನಡುವೆ,
ಗೆಳೆಯನ ನೆನಪಿರಲೆಂದು
ಅವನನ್ನೂ ಕರೆದು ಬಂದೆ
ನನ್ನ ಮದುವೆಗೆ!

ನಾನು
---------
ಪ್ರೀತಿ ಪ್ರೇಮವೆಂಬ
ಈ ಕ್ಲಿಷ್ಟ ಎಳೆಗಳನು
ನಾ ವಿಮರ್ಶಿಸಿ
ಕೂರಲಾರೆ!
ಅವಳು - ಅವನಲ್ಲಿ
ಬೆರೆತ ನಮ್ಮನ್ನು
ನಾ ಹುಡುಕುತ್ತಿದ್ದೇನೆ!
ಅವಳು - ಅವನಲ್ಲಿ
ಬೆರೆತ ನಿಮ್ಮನ್ನೂ
ನಾ ಹುಡುಕುತ್ತಿದ್ದೇನೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Saturday 1 December 2012

ಕೈ ಬೀಸಿ ಕರೆದ ಕರ್ವಾಲೊ!



ನನಗೆ, ಒಬ್ಬ ಬರಹಗಾರ ಎಷ್ಟು ಸೃಜನಾತ್ಮಕವಾಗಿ ಯೋಚಿಸಬೇಕೆಂಬುದರ ದಿಕ್ಕಾದುದು ’ಕರ್ವಾಲೊ’. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರೇ ಹೇಳುವಂತೆ, ’ಸೃಷ್ಟಿಶೀಲ ಬರಹಗಾರ ಅನೇಕ ವೇಳೆ ತನ್ನ ಸಿದ್ಧಾಂತ, ತತ್ವ, ತರ್ಕ ಇತ್ಯಾದಿಗಳ ಇತಿಮಿತಿಗಳನ್ನು ತಿಳಿಯಲು ಅದನ್ನು ಅತಿರೇಖದ ಅಂಚಿನವರೆಗೆ ಒಯ್ಯಬೇಕಾಗುತ್ತದೆ. ಈ ರೀತಿ ತನ್ನ ಮಿತಿಯನ್ನು ಮೀರಿಯೇ ತನ್ನ ಸರಹದ್ದುಗಳನ್ನರಿಯಬೇಕಾದ ಅನಿವಾರ್ಯತೆ ಇರುವುದರಿಂದಲೇ ಎಲ್ಲಾ ಕಲಾಸೃಷ್ಟಿಯೂ ಅಪರಿಪೂರ್ಣತೆಯನ್ನು ಅನುಷಂಗಿಕವಾಗಿ ಒಳಗೊಂಡಿರುತ್ತದೆಂಬುದು ನನ್ನ ಭಾವನೆ’ ಎನ್ನುತ್ತಾರೆ. ಎಷ್ಟು ಸತ್ಯವಾದ ಮಾತು ಅಲ್ಲವೇ, ತನ್ನ ಸಿದ್ಧಾಂತ, ತತ್ವ ಮತ್ತು ತರ್ಕಗಳ ಪರಿಧಿಯನ್ನು ಅರಿಯುವ ಸೃಷ್ಟಿ ಅದಾಗಿದ್ದ ಮೇಲೆ ಅದರಲ್ಲಿ ಅನುಷಂಗಿಕವಾಗಿ ಅಪರಿಪೂರ್ಣತೆ ಸಹಜವೇ. ಇದು ಒಬ್ಬ ಬರಹಗಾರನ ದಿಕ್ಕನ್ನು ನಿರ್ದೇಶಿಸುವಷ್ಟು ಸತ್ವಯುತವಾದ ಪ್ರಸ್ತುತಿ ಎಂಬುದು ನನ್ನ ಭಾವನೆಯೂ ಹೌದು.

ಓದುವುದು ಕಡಿಮೆಯಾಗಿ ಬಹಳ ದಿನಗಳಾಗಿದ್ದವು. ಓದು ಎಂಬುದೂ ಮುಖ ಪುಸ್ತಕದ ಗೆಳೆಯರ ಬರಹಗಳಿಗೆ ಸೀಮಿತವಾಗಿತ್ತು. ನನ್ನ ಕಾಲೇಜಿನ ದಿನಗಳಲ್ಲಿ ಎಸ್.ಎಲ್.ಭೈರಪ್ಪ, ಜಿಎಸ್ಸೆಸ್, ಕುವೆಂಪು, ಎಂಡಮೂರಿ ಮತ್ತು ರವಿ ಬೆಳಗೆರೆಯವರನ್ನು ಖುಷಿಯಿಂದ ಓದುತ್ತಿದ್ದ ನಾನು, ಅದೇನೋ ಕೆಲಸ ಅಂತಾದ ಮೇಲೆ ಓದು ಕಡಿಮೆಯಾಯ್ತೆಂದೇ ಹೇಳಬೇಕು. ಇತ್ತೀಚೆಗೆ ಸುಮ್ಮನೆ ಎತ್ತಿಕೊಂಡ ಪುಸ್ತಕ ತೇಜಸ್ವಿಯವರ ’ಕರ್ವಾಲೊ’.

ಫಿಲಾಸಫಿ ಮತ್ತು ತತ್ವಶಾಸ್ತ್ರವನ್ನು ವಿಷಯವಾಗಿ ಆರಿಸಿಕೊಂಡು ಎಮ್.ಎ. ಪದವಿ ಮಾಡಿಕೊಂಡ ತೇಜಸ್ವಿಯವರಿಗೆ ಪ್ರಕೃತಿ ವೈಚಿತ್ರಗಳ ಬಗ್ಗೆ ಇಷ್ಟು ಮಟ್ಟಿಗಿನ ಒಳನೋಟ ಸಾಧ್ಯವಾದದ್ದಾದರೂ ಹೇಗೆ ಎಂಬುದು ನನ್ನನ್ನು ಕಾಡುವ ಪ್ರಶ್ನೆ. ಪ್ರಕೃತಿ ವೈಚಿತ್ರಗಳ ಬಗ್ಗೆ ನಮಗರಿವಿಲ್ಲದಂತೆ ಆಸಕ್ತಿ ಮೂಡಿಸಬಲ್ಲ ಕಾದಂಬರಿ ಕರ್ವಾಲೊ. ಕಥಾನಾಯಕ ಕರ್ವಾಲೊ, ಒಬ್ಬ ಸಸ್ಯ ವಿಜ್ಞಾನಿ ಮತ್ತು ಕೀಟ ಶಾಸ್ತ್ರಜ್ಞ. ನೀವು ಓದಿಕೊಂಡು ಹೋದಂತೆ ಅವರು ಒಂದು ನಿಗೂಢವೂ, ಒಬ್ಬ ತತ್ವ ಜ್ಞಾನಿಯೂ, ಮಾನವ, ಜೀವಿ ಮತ್ತು ಸಸ್ಯ ಸಂಕುಲಗಳ ಕೊಂಡಿಯಾಗಿಯೂ ಕಾಣುತ್ತಾರೆ. ಇನ್ನುಳಿದ ಪಾತ್ರಗಳು ಮಂದಣ್ಣ, ಕರಿಯಪ್ಪ, ಪ್ರಭಾಕರ, ಲೇಖಕರು ಮತ್ತು ಕಿವಿ. ಮಂದಣ್ಣ ಒಬ್ಬ ಹುಟ್ಟು ನಿಸರ್ಗ ತಜ್ಞ! ಮೊದಲಲ್ಲಿ ಅವನೊಬ್ಬ ಹೆಡ್ಡನಂತೆ ಕಂಡು ಬಂದರೂ ಎಲ್ಲರಲ್ಲಿಯೂ ಅಸಾಮಾನ್ಯವಾದುದ್ದೇನೋ ಇರುತ್ತದೆ ಎಂಬ ವಾದಕ್ಕೆ ಅನ್ವರ್ಥವಾಗಿ ನಿಲ್ಲುತ್ತಾನೆ. ಓದುಗರನ್ನು ಅಚ್ಚರಿಗೊಳಿಸುತ್ತಾನೆ. ಕರಿಯಪ್ಪ ಉದ್ದುದ್ದವಾದ ಮರಗಳನ್ನು ಹತ್ತುವ ಮತ್ತು ಮಾಂಸಾಹಾರಗಳನ್ನು ಹದವಾಗಿ ತಯಾರಿಸುವ ಬಾಣಸಿಗ! ಕಾದಂಬರಿಯ ಉದ್ದಕ್ಕೂ ಲವಲವಿಕೆ ಉಕ್ಕಿಸುತ್ತಾ, ನಗಿಸುತ್ತಾ ಓದಿಸುವುದು ಅವನ ಹೆಗ್ಗಳಿಕೆ! ಪ್ರಭಾಕರ ಒಬ್ಬ ಫೋಟೋಗ್ರಾಫರ್, ಪ್ರಕೃತಿಯ ವೈಚಿತ್ರಗಳನ್ನು ಸೆರೆ ಹಿಡಿಯಲು ಕರ್ವಾಲೊರವರೊಂದಿಗೆ ಇರುತ್ತಾನೆ. ಪ್ರಭಾಕರನ ಕ್ಯಾಮೆರಾದ ದೃಷ್ಟಿಕೋನಗಳನ್ನು ಕರ್ವಾಲೊ ಸೂಕ್ಷ್ಮಗೊಳಿಸಿರುವ ಕಾರಣದಿಂದಲೇ, ಅವನು ಅವರೊಂದಿಗೆ ಉಳಿದಿರುತ್ತಾನೆ ಅವರ ಸಂಶೋಧನೆಗಳಿಗೆ ಒತ್ತಾಸೆಯಾಗಿ.

ಇವೆಲ್ಲಾ ಪಾತ್ರಗಳನ್ನು ಒಂದು ತಹಬಂದಿಗೆ ತಂದು, ತಮ್ಮನ್ನೂ ನಿರೂಪಿಸಿಕೊಳ್ಳುವವರು ಲೇಖಕ. ಲೇಖಕ ಇಲ್ಲಿ ಒಬ್ಬ ಅಲೆಮಾರಿ ಮನೋಭಾವದ, ಮಾನವ ಸಹಜ ಭಾವಗಳನ್ನು ಹೊಂದಿರುವ, ಆರಕ್ಕೇರದ ಮೂರಕ್ಕಿಳಿಯದ ಬೇಸಾಯವನ್ನು ನೆಚ್ಚಿಕೊಂಡ ಕೃಷಿಕ. ಕೃಷಿಕರ ಕಷ್ಟಗಳು ಮತ್ತು ಅವರನುಭವಿಸುವ ತುಮುಲಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ತೇಜಸ್ವಿ. ಏಕತಾನತೆ ಬದುಕಿನ ಜಡ ಎಂದು ಭಾವಿಸುವ ಲೇಖಕ, ಈ ಕಷ್ಟಗಳ ಸರಮಾಲೆಯಲ್ಲಿ ಕೊಸರುತ್ತಾ ತನ್ನ ಜಮೀನನ್ನು ಮಾರಲು ಪ್ರಯತ್ನಿಸುತ್ತಾರೆ, ಮಾರುವುದಿಲ್ಲ! ಕೃಷಿಕನ ಕಷ್ಟದ ತೀವ್ರತೆ ಎಷ್ಟೆಂಬುದು ಓದುಗರ ಗಮನಕ್ಕೆ ಬರಲಿ ಎಂಬುದು ಲೇಖಕರ ಉದ್ದೇಶವಾಗಿತ್ತು ಎನಿಸುತ್ತದೆ! ಕಿವಿ ಲೇಖಕರ ಮನೆಯಲ್ಲಿ ಹುಟ್ಟಿ ಬೆಳೆದ ಸ್ಪ್ಯಾನಿಶ್ ನಾಯಿ, ಕಾದಂಬರಿಯ ಉದ್ದಕ್ಕೂ ಲೇಖಕರ ಅಪ್ತ ಮತ್ತು ಶಿಕಾರಿಯಲ್ಲಿ ಅವರಿಗೆ ಜೊತೆಗಾರ. ಇವೆಲ್ಲಾ ಪಾತ್ರಗಳನ್ನು ಕಾದಂಬರಿಯ ಹಂದರದೊಳಗೆ ಬಂಧಿಸಿರುವ ಅಪರೂಪದ ಪ್ರಾಣಿ, ದಶ-ದಶಮಾನಗಳ ಹಿಂದಿನ ’ಹಾರುವ ಓತಿ’. ಡೈನೋಸಾರ್ ನಂತೆ ಕಾಣಿಸಿಕೊಳ್ಳುವ ಅದು, ತನ್ನ ಪಕ್ಕೆಲುಬುಗಳ ಪಕ್ಕದಲ್ಲಿ ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತದೆ ಎಂಬುದು ಕರ್ವಾಲೊ ರವರ ನಂಬಿಕೆ. ಮಂದಣ್ಣ ಹೇಳುವಂತೆ ಅದು ನಾರ್ವೆ ಹಳ್ಳಿಯ ಸುತ್ತ ಮುತ್ತಲ ಪಶ್ಚಿಮ ಘಟ್ಟಗಳ ದಟ್ಟ ಕಾನನದಲ್ಲಿ ಇರುವುದು ಎಂಬ ಮೂಲದ ಜಾಡು ಹಿಡಿದು ಹೋಗುವ ಇವರ ಗುಂಪಿಗೆ ಹಾರುವ ಓತಿ ಸಿಕ್ಕೀತೆ? ಇವರಿಗೆ ಜೀವಿ ವೈವಿಧ್ಯಗಳ ಒಳಸುರುಳಿಗಳನ್ನು ಬಿಚ್ಚಿಡಲು ಸಹಕರಿಸೀತೇ? ಎಂಬುದೇ ಕಾದಂಬರಿಯ ಹಂದರ.



ತೇಜಸ್ವಿಯವರ ಬರವಣಿಗೆಯ ಶೈಲಿ ತುಂಬಾ ಸಾಮಾನ್ಯವಾಗಿದ್ದು, ಯುವ ಬರಹಗಾರರಿಗೆ ಮಾದರಿಯಾಗಬಲ್ಲದು. ಅಧ್ಯಾತ್ಮ, ಧರ್ಮ, ಧ್ಯಾನಗಳಂತೆ ವಿಜ್ಞಾನ ಮತ್ತು ಜೀವಿ ವೈವಿಧ್ಯವೂ ಸಾಕ್ಷಾತ್ಕಾರದ ಹಾದಿ ಎಂಬುದನ್ನು ವೇಧ್ಯವಾಗಿಸುವ ಕಾದಂಬರಿ ಕರ್ವಾಲೊ. ಓದುಗರಿಗೆ ಜೀವ ವೈವಿಧ್ಯಗಳ ಬಗ್ಗೆ ಆಸಕ್ತಿಯಿದ್ದರಂತೂ ಕರ್ವಾಲೊ, ರಸದೌತಣ! ಎಲ್ಲರೂ ’ಕರ್ವಾಲೊ’ ವನ್ನು ಒಮ್ಮೆಯಾದರೂ ಓದಲೇ ಬೇಕು.

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ