ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday 26 December 2014

ಸಿಗದೆ ಸತ್ತ ಸಾಲು!


ನಿನ್ನ ಕಣ್ಣ ಇಶಾರಿಗೆ
ಸಿಗದ ಸಾಲೊಂದು
ನೆನ್ನೆ ಸತ್ತುಹೋಯ್ತು,
ಅದರಲೆಂತಹ ಪದ್ಯವಿತ್ತೊ,
ಗದ್ಯವಿತ್ತೊ,
ಎದೆಯ ಬಾಣಲೆಯಲಿ
ಶುದ್ಧವಾಗಿ ಕುದ್ದ ಹದವಿತ್ತೊ?
ಅರಿಯುವ ಮುನ್ನವೇ
ಮುಗಿಯುವ ಧಾವಂತ,
ಬರೆಸಿಕೊಳ್ಳದೆ ಹೋಯ್ತು!

ಬೆಳದಿಂಗಳ ಚಂದಿರನ
ಕಚ್ಚಿ ತಿನ್ನುವ ಆಸೆಗೆ,
ನಿನ್ನ ಕೆನ್ನೆ ನೋಡಿ ಕರುಬುವ ಸಾಲು,
ನಾನು ಹುಡುಕಾಡಿ ತಂದ
ಮೊಲ್ಲೆ ಮುಡಿಸುವ ಸಾಲು,
ಒಲವ ದೀವಟಿಗೆಗೆ ಬತ್ತಿ ನೇಯುವ ಸಾಲು,
ನಮ್ಮಿಬ್ಬರ ಸಂಜೆಯ ಮಬ್ಬಿಗೆ
ಹಲ್ಲು ಸೆಟ್ಟಾದ ಸಾಲು,
ಅಲ್ಲೇ ಅಸು ನೀಗಿದೆ ನೋಡು
ನೀನು ನೋಡದೆ ಉಳಿದ ಸಾಲು!

ರಕ್ತ, ಮಾಂಸ, ಮಜ್ಜೆಗಳನ್ನೆಲ್ಲಾ
ತುಂಬಿಕೊಂಡೇ ಬೆಳೆದಿತ್ತು,
ಸಾಲದ್ದಕ್ಕೆ ಕನಸುಗಳ ಕಸುವಿತ್ತು,
ಧರ್ಮ ಬೆರೆಸಿದ ಕತ್ತಲ ಸಂಚಿಗೆ
ಅನೀಮಿಕ್ ಬಿಳಿ ರಕ್ತಕಣಗಳು,
ಪ್ರತಿರೋಧಿಸದೆ ಕುಂತಿವೆ ಗೆಳತಿ,
"ಐ ಲವ್ ಯೂ" ಅಂತಲೂ ಅನ್ನದೆ
ನಿನ್ನಿಶಾರಿಗೂ ಸಿಕ್ಕದೆ
ನೋವು, ನಂಜಿಗೆ ಹಲ್ಲು ಗಿಂಜಿದೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಅನ್ವರ್ಥವಾಗಿಯೇ ಉಳಿದೆ!


ಸುಲಭಕ್ಕೆ ಸಿಕ್ಕಿದ್ದು,
ಅನುಮಾನಕ್ಕೀಡಾಗಿದೆ,
ಪ್ರಶ್ನಿಸುತ್ತಾ
ನೆಮ್ಮದಿ ಕಳೆದುಹೋಗಿದೆ,
ನೋವುಗಳಿಗೆ
ಪುಳಕಗೊಂಡು ಅತಿಯಾಗಿ ಸುಖಿಯಾದೆ,
ನೀವು ಹುಚ್ಚನೆಂದರೆ ಹೌದು?
ಮಿತಿ ಮೀರಿದರೇನು,
ನಾನು ನಾನಾಗಿಯೇ ಉಳಿದೆ!

ಕೆನ್ನೆ ಕೆನ್ನೆ ಬಡಿದುಕೊಂಡು
ಜನಜಂಗುಳಿಯ ನಡುವೆ
ತಾಸುಗಟ್ಟಲೆ ಕಾದರೆ ಕ್ಷಣಗಳ ಮಟ್ಟಿಗೆ
ಕಾಣಿಸಿಕೊಳ್ಳುತ್ತಾನೆ,
ಉಧೋ ಉಧೋ ದೇವರೆನ್ನು,
ಎಂದರು... ನಾನು ನಕ್ಕುಬಿಟ್ಟೆ,
ಪಾಪ ಅಲ್ಲಿಲ್ಲದ ದೇವರೂ ನಕ್ಕುಬಿಟ್ಟ,
ಬಹಿಷ್ಕಾರಗೊಂಡು ಅನ್ನವಿರದವರ
ಮನೆಯಲ್ಲಿ ಹಸಿವಾಗಿದ್ದಾನಂತೆ,
ಅವರಂತೂ
ದಿನ ಹೊಟ್ಟೆತುಂಬಿಸುವ ಪೂಜೆ ಮಾಡುವರು,
ಸಂತೃಪ್ತಿಯಾಗಿಲ್ಲ
ಆದರೂ ಬದುಕಿರುವನು ಜೀವದಂತೆ,
ದೇವರ ನಂಬದ ನಾನು
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಸರ್ಕಾರವೊಂದು ಸರ್ವಾನುಮತದಿ
ವೋಟು ಗಿಟ್ಟಿಸಿ
ಅಧಿಕಾರ ಹಿಡಿಯಿತೆಂದುಕೊಳ್ಳಿ,
ಚುಕ್ಕಾಣಿಯ ಮೇಲೆ ಕಣ್ಣಿರಲಿ,
ನಾಯಕರೆಂದರೆ ನಾಯಕರು,
"ಡೊಂಕು ಬಾಲದ ನಾಯಕರು..."
ನೇರೆ ರಸ್ತೆಯಲಿ ಅಂಕುಡೊಂಕಾಗಿ ನುಸುಳಿದರೆ?
ಎಂದಿದ್ದೆ ಬಂತು,
ನಾಯಕರಿಲ್ಲದ ಪ್ರತಿಪಕ್ಷದ ಪಟ್ಟ ನನಗೆ,
ವ್ಯಂಗ್ಯಕ್ಕೆ ಬೆತ್ತವಾದೆ,
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಮುಂದೆ ಮುಂದೆ ನಡೆದವಳ ಹಿಂದೆ ಅಲೆದೆ,
ಬೇಡವೆಂದರೂ ಕಾಡಿ ಗೋಗರೆದೆ,
ಒಲಿದ ಹೂವು ಮುಡಿಯೇರುವ ಮುನ್ನ,
ವೈಫಲ್ಯದ ಹೊಳೆಯಲಿ ಕೊಚ್ಚಿ ಹೋಗಿದೆ,
ಅಂಗಾತ ಬಿದ್ದವನ
ಎದೆಬಿರಿವ ನೋವಿಗೆ ಮುಲುಗುಟ್ಟಿ,
ನೆನಪುಗಳ ಮುಲಾಮು ಹಚ್ಚುವೆ,
ಸುಖಕ್ಕೆ ಸಿಹಿಯಾಗಿ ನರಳುವೆ,
ಕವಿತೆಯೆಂದರು, ಕವಿಯೆಂದರು,
ಎದರಿ ಓಡಿದೆ, ಅಲೆದೆಡೆಯಲ್ಲೆ ಬದುಕಿದೆ,
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಸರಿಯಿದ್ದನ್ನೂ ಅನುಮಾನಿಸಿ,
ಸರಿಯಿಲ್ಲದ್ದನ್ನೂ ಪ್ರಶ್ನಿಸುವೆ,
ನೀವು ಆಗದೆಂಬಂತೆಯೇ ಬದುಕುವೆ,
ನೀನ್ಯಾಕೆ ಹೀಗೆಂದರೆ?
ನಾನೆನ್ನಲಿ? ನಾನಂತೂ ಹೀಗೇ..
ಅನ್ವರ್ಥವಾಗಿಯೂ ಇದ್ದೆ,
ಅನರ್ಥವಾಗಿಯೂ ಇದ್ದೆ,
ಬಹು ಅರ್ಥವಾಗಿಯೂ ಇದ್ದೆ,
ಸಂಕೋಚ, ಸಂಕುಚಿತ, ಹೇಗೆಲ್ಲಾ ಇದ್ದೆ,
ಒಟ್ಟು ಇದ್ದೆ,
ಅನ್ನ ತಿನ್ನುವ ಮನುಷ್ಯನಾಗಿಯೇ ಉಳಿದೆ,
ಅಟ್ ಲೀಸ್ಟ್ ಬದುಕಿಯೇ ಇದ್ದೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Sunday 14 December 2014

ಬಟವಾಡೆಗೆ ಬಣ್ಣಗಳು!


ಬಣ್ಣಗಳನು
ಮಾರಲು ತಂದಿದ್ದೇನೆ…
“ಕಾಸಿಗೊಂದು,
ಕೊಸರಿಗೊಂದೆಂದು ಕೇಳಬೇಡಿ”;
“ಸಾಲ ಕೇಳಿ, ಸ್ನೇಹ ಕಳೆದುಕೊಳ್ಳಬೇಡಿ..”
ಎಂಬ್ಯಾವ ಫಲಕಗಳೂ ಇಲ್ಲಿಲ್ಲ…
ಬಿಟ್ಟಿಯಾಗೇ ಬಿಕರಿಗಿಟ್ಟಿದ್ದೇನೆ,
ಬದಲಿಯಾಗಿ ಒಂದೊಂದು
ನೋವನ್ನು ಒತ್ತೆಯಿಡಿ,
ಬೇಕಿದ್ದರೆ ಬಾಂಡು ಬರೆದುಕೊಡಿ!

ಒಬ್ಬಳೇ ಮಗಳನ್ನು ಬೆಳೆಸಲು
ಹೆಣಗುವ ಅಮ್ಮನ ಆರ್ದ್ರತೆ,
ತಬ್ಬಲಿಯಾದ ಮಕ್ಕಳ ಕಣ್ಣೀರು,
ಜಾತಿಯ ಬಡಪಟ್ಟಿಗೆ ಮುದುರಿ
ಮೂಲೆ ಸೇರುವ ಸಹನೆಯ ಕೊರಗು,
ತಡರಾತ್ರಿಗೆ ನಲುಗುವ ವೇಶ್ಯೆಯ
ಮಲ್ಲಿಗೆ ಕಂಪು,
ನೋವಿಗೆ ಮದ್ದು ಹುಡುಕುವ
ಭಗ್ನ ಪ್ರೇಮಿಯ ಎದೆಯ ಕಾವು,
ಎದೆಯೊಡೆದು ಸತ್ತ ಸಾವು,
ಎಲ್ಲಕ್ಕೂ ಮುಲಾಮಿದೆ ನನ್ನ ಬಳಿ,
ಬೋಗುಣಿಗೆ ನೋವು ಸುರಿಯಿರಿ,
ಸ್ವಚ್ಛಂದ ಬಣ್ಣ ಹೆಕ್ಕಿರಿ!

ಸಾವಿರಾರು ಬಣ್ಣಗಳ
ಸುರಿದು ನಿಮ್ಮ ಮುಂದಿಡುತ್ತೇನೆ,
ಕಪ್ಪು ಹಲಗೆಯ ಮೇಲೆ,
ಬಿಳಿಯ ಕ್ಯಾನ್ವಾಸಿದೆ,
ಬೇಕಾದ ಬಣ್ಣ ಬಳಿದುಕೊಳ್ಳಿ.
ಕಲಾಕೃತಿಯಾಗಿ ನೀವು ನಕ್ಕರೆ ಸಾಕು;
ಕುಂಚವಾದವಗೆ ಇನ್ನೇನು ಬೇಕು?!
ತಿರುಕನಂತೆ ತಿರುಗುತ್ತಾ ಹೊರಡುತ್ತೇನೆ,
ಇರುವ ದಿಕ್ಕುಗಳಾದರೂ ನಾಕೇ ನಾಕು;
ಸಂಧಿಸುತ್ತಲೇ ಸಂದಾಯ
ಪದ್ಯದೊಂದಿಗೆ ಮತ್ತು ಮದ್ಯದೊಂದಿಗೆ!

--> ಮಂಜಿನ ಹನಿ

Sunday 23 November 2014

ಅವಳ ಧ್ಯಾನ!


ಈ ಕ್ಷಣಕೆ ನಾನು ನೀನಾಗಿ
ಬಿಡಬೇಕೆಂಬ
ಖಾಸಗಿ ಯೋಚನೆಯೊಂದು
ಎದೆಯ ಬಾಣಲೆಯೊಳಗೆ ಬಿದ್ದು
ಕುದಿಯುತ್ತದೆ,
ಮೇಲೆತ್ತಲು ಬರುವ
ನಿನ್ನ ಕೈಯ ಬಿಸಿ ಸ್ಪರ್ಶಕೆ
ಕಾದೇ ಕಾಯುತ್ತದೆ,
ಕನಸುಗಳು ಜಹಂಗೀರು ಕರಿದರೆ
ನಾಲಿಗೆಗೆ ಸಿಹಿ ಸಕ್ಕರೆ!

ನನ್ನ ಕಣ್ಣೋಟಗಳೋ
ನಿನ್ನ ಕುಡಿ ಹುಬ್ಬ ಮೇಲೆ ಕುಣಿದು,
ನೊಸಲ ಬಿಂದಿಯ ಮೇಲೇರಿ
ಮುಂಗುರುಳಿಳಿಜಾರಲಿ ಜಾರಿ,
ನನ್ನ ನೆನಪಿಗೆ ಕೆಂಪೇರಿದ
ನಿನ್ನ ತಂಟ ಕೆನ್ನೆಯ ಮೇಲೆ
ಗುಲಾಬಿ ವರ್ಣ ಕಲೆಸುತ್ತದೆ,
’ಜಾಸ್ತಿ ನಗಬೇಡ ಕಣೇ,
ಕೆನ್ನೆಗಳಿಗೊಳಿತಲ್ಲ’ವೆಂಬ
ನನ್ನೆಚ್ಚರಿಕೆಯೊಳಗೆ
ಸೇಬು ಕಚ್ಚುವ ಆಸೆಯೊಂದನು
ಬೆಚ್ಚಗೆ ತೂಗಿ ಮಲಗಿಸಿದೆ!

ಕಣ್ಣ ಕಾಡಿಗೆಯ ಗೆರೆ ತೀಡಿ
ಗಲ್ಲಕ್ಕೊಂದು ದೃಷ್ಟಿಬೊಟ್ಟು,
ನಿನ್ನ ಐ ಲೈನರುಗಳಿಗಿಂತ
ಚೆಂದದ ಕುಸುರಿ,
ಎದೆಯಾಳದ ಕಣ್ಣ ಕುಂಚ
ಒಲವೆಂಬ ಮಸಿಗದ್ದಿ
ನೀನೆಂಬ ಚಿತ್ರವಾಗಿದೆ,
ನಿನ್ನನೆಷ್ಟೇ
ಕನಸಿ, ನೆನೆಸಿದರೂ
ತೀರದ ಹಸಿವೊಂದು ವಿಚಿತ್ರವಾಗಿದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಲಾಲಿ ಹಾಡು!


ಚೆಂದಾನೆ ಚಂದ್ರಮ
ಕಣ್ಣೊಳಗೆ ತುಂಬಲಿ,
ಕಣ್ಮುಚ್ಚಿ ಮಲಗೆ ಚಿನ್ನಾರಿ,
ಬೆಳಕಿನ ಕಂಬಳಿ
ಹೊದ್ಕೊಂಡು ಬರ್ತಾವೆ,
ಸುಖದ ಸಿಂಪಡಿಕೆ
ಹಗಲುಗಳ ಬೆನ್ನೇರಿ...

ಒದ್ದೆಯಾದ ಕರ್ಚೀಫು,
ಹೊದೆಯದ ಕಂಬಳಿ
ಸಾಲ ಕೇಳುವವು ಜೋಕೆ,
ತಿಳಿಗೊಳದ ಬನದೊಳಗೆ,
ಉರಿವಂಥ ಉರಿಯೇಕೆ?
ಕಾಲ ಕಳಿತಾವೆ, ಮಳೆ ಬರುತಾವೆ,
ನಗುವೊಂದು ಮೊಗವರಳಲು ಸಾಕೆ,
ಮತ್ತೇನು ಬೇಕೆ?!

ಕಣ್ಮುಚ್ಚಿ ಮಲಗು ಜೋಜೋಜೋ,
ಆಗಸದ ಜೋಲಿ ಜೋಜೋಜೋ..

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday 18 October 2014

ಕತ್ತಲಿನ ಕವಿತೆ!


ನಿನ್ನೊಲವಿನ
ದಿವಿನಾದನುಭೂತಿಗಳು
ನನ್ನೆದೆಯನು ಹದವಾಗಿ
ಬೇಯಿಸಲು,
ಹಸಿ ಸೌದೆಯ ಬಿಸಿ ಶಾಖಕೆ
ಕಣ್ಣು ಪಸೆಯಾಡಿ
ಮತ್ತೆ ಮತ್ತೆ ನನ್ನ ಸಾವು,
ಒಲವ ಘೋರಿಯ ಮೇಲೆ
ನನ್ಹೆಸರ ಕೆತ್ತಿಟ್ಟ
ನಿನ್ನ ನುಣುಪು ಕೈ ರೇಖೆಗಳು
ನೆನಪಾಗಲು
ಮತ್ತೆ ಮರು ಹುಟ್ಟು, ಹೊತ್ತಿದ್ದೇನೆ!

ಎದುರಿಗೆ ಕೈ ಕೈ ಬೆಸೆದು
ನಡೆವ ಒಲವ ಜೋಡಿಗಳ ನೋಡಿ,
ಹಿಂದೊಮ್ಮೆ ನಾನೂ
ಒಲವ ಘಮಕ್ಕೆ ಅರಳಿಕೊಳ್ಳುವ
ದಿನಗಳ ನೆನಪು;
ಕತ್ತಲ ರಾತ್ರಿಗಳು ಕಾದ ಹೆಂಚು,
"ನಿಂಗೊತ್ತಲ್ಲ? ನಂಗೆ ಕತ್ತಲಂದ್ರೆ ಭಯ?"
ನೀ ಉಸುರಿದ್ದು ನನ್ನೆದೆಗಂಟಿ
ರಕ್ತದೊಂದಿಗೆ ಕುದ್ದ
ಕಮಟು ಕಮಟಾಗುತ್ತದೆ,
ಪ್ರೀತಿ ಉಳಿಸಿಕೊಳ್ಳಲಾಗದ ಅಸಹಾಯಕತೆ,
ಸಮಾಜದ ಮೇಲಿನ ನಂಬಿಕೆ
ಉರಿದು ಹೋಗುವುದು
ಸಣ್ಣ ಸಮಾಧಾನ ಕೊಡುತ್ತದೆ!

ಈ ರಾತ್ರಿಗಳು ಮಾತ್ರ
ಒಂದು ಸಮವಿರುವುದಿಲ್ಲ ನೋಡು,
ಮೈಯ ಕಣಕಣವೂ ಹುರಿಗೊಂಡು,
ರಕ್ತ ನಾಳಗಳಲಿ ಪಟಪಟ ಮಿಡಿತ,
ನೆರವೇರದ ಪೋಲಿ ಆಸೆಯೊಂದು
ಎದೆಯೊಳಗೆ ಭಗ್ಗನೆ
ಹೊತ್ತಿಕೊಂಡು ಉರಿದು,
ನಾ ಸ್ಖಲನಗೊಳ್ಳದೆ ಮಡುಗಟ್ಟುವಾಗ
ನಿನ್ನ ಮೈಥುನದ ಸವಿಯುಂಡ
ನರಳಿಕೆಗಳಿಗೆ
ಕನ್ನಡಿ ಸಾಕ್ಷಿಯಾಗಿ ನಗುತ್ತದೆ,
ನಾನು ಅಸಹನೆಯಿಂದ ಮುಖ ಮುಚ್ಚಲು,
ಕತ್ತಲಿನ ಕವಿತೆಯೊಂದು
ಆಹಾರ ಸಿಕ್ಕಂತಾಗಿ ಮಿಸುಕಾಡುತ್ತದೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday 4 October 2014

ಪ್ರೇಮದಮಲು!



ಬೆಳದಿಂಗಳ ಕೊಳದ ನಡುವೆ ನಿಂತಿದ್ದೇನೆಂದು ಭಾಸವಾಗುತ್ತದೆ, ಎದುರಿಗೆ ಅವಳಿದ್ದಾಳೆ. ರೂಪವತಿ ಚೆಲುವೆ. ಅವಳ ಬಳಿ ಸುಳಿದಾಡುವ ಗಾಳಿಗೇ ಚಂದನದ ಗಂಧ ತೀಡಿದೆಯೇನೋ! ಮೈಮರೆತು ಮತ್ತನಂತಾಗುವ ನಾನು ಆಳವಾದ ಪ್ರೇಮದ ಸೆಲೆಯೊಳಗೆ ಸಿಲುಕಿದ್ದೇನೆ. ಎಷ್ಟೆಲ್ಲಾ ಹೇಳಬೇಕೆಂದು ಚಡಪಡಿಸುತ್ತೇನೆ, ಸಾಧ್ಯವೇ ಆಗುವುದಿಲ್ಲ! ಮಾತಾಗಿಬಿಡುವ ಮೌನಕ್ಕೆ ಕಾಯುತ್ತೇನೆ. ಹೇಗೋ ಕಷ್ಟಪಟ್ಟು ಹೇಳಬೇಕಾದ್ದನು ಅವಳೆದೆಗೆ ದಾಟಿಸಲು ಬಾಯ್ದೆರೆದೆ

"ವಿನೂ, ನಿನ್ನಲ್ಲೇನೋ ಸಮ್ಮೋಹಿನಿ ವಿದ್ಯೆಯಿರಬಹುದು. ಕ್ಷಣ ಕ್ಷಣಕೂ ನಾನು ನೀನಾಗಿಬಿಡುವ ತವಕ, ನಾವಾಗಿಬಿಡುವ ಕಾತರ. ನೀನು ನಂಬುವುದಿಲ್ಲ, ಯಾರ್ಯಾರ ಕಣ್ಣಲ್ಲೋ ನೀನು ಕಾಣುವುದಿದೆ, ಥರದ ಭ್ರಮೆಗೆ ಅದೇನೆನ್ನುವರೋ? ನನಗೆ ಮಾತ್ರ ತೀರದ ಚಡಪಡಿಕೆ! ಒಮ್ಮೆ ಕನ್ನಡಿಯ ಮುಂದೆ ನಿಲ್ಲುತ್ತೇನೆ, ಕನ್ನಡಿಯೊಳಗಿನ ನನ್ನ  ಪ್ರತಿಫಲನದ ಕಣ್ಣೊಳಗೂ ನೀನೇ ಕಾಣುವಾಗ ನಾನದೆಷ್ಟು ಹಾಳಾಗಿರಬೇಡ? ನೀನೇ ಊಹಿಸು! ನಿನ್ನ ಪ್ರೇಮದಮಲೊಳಗೆ ಮುಳುಗೇಳುವ, ಹುಚ್ಚು ಹೊಳೆಯೊಳಗೆ ತೇಲಿ ಹೋಗುವ ಧ್ಯಾನ ನನಗೆ. ನನ್ನ ಮನಸು, ಭಾವ ಮತ್ತು ಎಲ್ಲವನ್ನೂ ನಿನ್ನೊಂದು ನೋಟ, ಮಾತು, ಸ್ಪರ್ಶ, ಹಾವಭಾವಗಳು ನಿಯಂತ್ರಿಸುತ್ತವೆ. ನಾನು ನನ್ನ ನಿಯಂತ್ರಣದಲ್ಲೇ ಇಲ್ಲ, ಎಂಥ ತಮಾಶೆ ನೋಡು? ಮೋಹದ ಕಾಯಿಲೆಗೆ ನಿನ್ನ ಒಪ್ಪಿಗೆಯೊಂದೇ ದಿವ್ಯೌಷಧವೆಂದು ಮನವರಿಕೆಯಾಗಿದೆ. ನನ್ನನ್ನು ಬಲೆಯಿಂದ ಪಾರು ಮಾಡ್ತೀಯಾ?" ನನ್ನೆಲ್ಲಾ ಮಾತುಗಾರಿಕೆಯನ್ನು ಉಪಯೋಗಿಸಿ ಇಷ್ಟು ಹೇಳಿ ಮುಗಿಸಿದ್ದೆ.

ನನ್ನ ಮಾತು ಕೇಳಿ ಅಮಾಯಕಳಂತೆ ನಕ್ಕ ಅವಳು, "ಮನು ನೀ ಏನು ಹೇಳಿದ್ಯೋ ಒಂದೂ ಅರ್ಥ ಆಗ್ಲಿಲ್ಲ. ನೀ ಯಾವ ಭಾಷೆಲೀ ಮಾತಾಡ್ತೀಯೋ?!" ಎನ್ನುತ್ತಾ ಪಿಳಿ ಪಿಳಿ ಕಣ್ಣು ಬಿಟ್ಟು, ಹುಬ್ಬೇರಿಸುತ್ತಾಳೆ.

ಅವಳ ರೀತಿಯ ಪ್ರತಿಕ್ರಿಯೆ ಕಂಡು ಕಂಗಾಲಾಗುವ ನಾನು, ಕಳವಳದಿಂದ ಅವಳ ಮುಖವನ್ನೇ ನೋಡುತ್ತೇನೆ..

ನಿಧಾನವಾಗಿ ನನ್ನ ಬಳಿ ಬರುವ ಅವಳು, ಕಂಗಾಲಾದ ನನ್ನ ಕಂಗಳಲ್ಲಿ ಅವಳ ನೋಟವಿಟ್ಟು, ನನ್ನ ಕೆಳ ತುಟಿಯ ಮೇಲೆ ನವಿರಾಗಿ ಚುಂಬಿಸುತ್ತಾಳೆ. ಕರೆಂಟು ಹೊಡೆದ ಕಾಗೆಯಂತಾಗುವ ನಾನು ಪಿಳಿ ಪಿಳಿ ಕಣ್ಣು ಬಿಟ್ಟು ಅವಳನ್ನೇ ನೋಡುತ್ತೇನೆ. ಅವಳು ಮಾತ್ರ ಎಂದಿನಂತೆ ತುಂಟ ನಗವಾಗುತ್ತಾಳೆ!

ಹೆಣ್ಣು ಹೇಗೆಲ್ಲಾ ನಮ್ಮ ಜೀವನದೊಂದಿಗೆ ಹಾಸು ಹೊಕ್ಕಾಗಿದ್ದಾಳೆ ಕರುಣೆಯಾಗಿ, ಮಮತೆಯಾಗಿ, ಪ್ರೀತಿಯಾಗಿ, ಅಕ್ಕರೆಯಾಗಿ, ಒಲವಾಗಿ, ಪ್ರೇಮವಾಗಿ... ಆದರೆ ನಾವೆಷ್ಟೇ ತಪಸ್ಸು ಮಾಡಿದರೂ, ಅವಳೊಳಗೆ ಸಿಗದೊಂದು ಮರೀಚಿಕೆಯಿದೆ, ಅದರ ಚಲನ ವಲನಗಳರಿವುದು ಸಾಧ್ಯವೇ ಆಗುವುದಿಲ್ಲ. ಯೋಚನಾ ಲಹರಿಯೊಳಗೆ ಸಿಕ್ಕುತ್ತೇನೆ...

ಬಾಗಿಲು ಬಡಿಯುವ ಶಬ್ದ, ದಡಕ್ಕೆನೇಳುವ ನನಗೆ ಮರೆಯದ ಸವಿ ನಿದ್ರೆ ಕಳೆದು ಹೋಗಿದ್ದು ಗೊತ್ತೇ ಆಗುವುದಿಲ್ಲ!

"ಅರೇ ಇದು ಕನಸಾ?" ತಲೆ ಕೊಡವಿಕೊಳ್ಳುತ್ತೇನೆ.

ಹಾಲ್ನಲ್ಲಿ ಕೆಂಪು ಬಣ್ಣದ ಸೆಲ್ವಾರ್ನಲ್ಲಿ ಮುದ್ದಾಗಿ ಸಿಂಗರಿಸಿಕೊಂಡು ಬಂದಿರುವ ವಿನೂ ನಿಂತಿದ್ದಾಳೆ. ಈಗಷ್ಟೇ ಏಳುತ್ತಿದ್ದ ನನ್ನ ಕಂಡು,
"ಹೇ ಕೋತಿ, ಈಗ ಏಳ್ತಿದ್ದೀಯೇನೋ? ಎಲ್ಲೋ ಕರೆದುಕೊಂಡು ಹೋಗ್ತೀನಿ ಬೇಗ ಬಾ ಅಂದಿದ್ದೆ?" ಎಂದು ಕೋಪ ನಟಿಸುವಳು.

"ಈಗ ರೆಡಿಯಾಗಿ ಬರ್ತೀನಿ, ಪೇಪರ್ ಓದ್ತಿರು" ಎಂದವನೆ, ಕಡೆ ತಿರುಗಬೇಕು, ಅವಳ ತುಟಿ ಮೇಲಿನ ಕೆಂಪು ಲಿಪ್'ಸ್ಟಿಕ್ ಪಳ ಪಳ ಎಂದು ಹೊಳೆಯುತ್ತದೆ.

--> ಮಂಜಿನ ಹನಿ


ಕಲೆ ಮತ್ತು ಧ್ವನಿ: ನಮ್ರತ ಸಿ ಸ್ವಾಮಿ

Wednesday 1 October 2014

ಹೇ ಬಾಪು...


ಮಹಾತ್ಮನೆನಿಸಿಕೊಳ್ಳುವ ಗಾಂಧಿ,
ಆಗಾಗ ಮನದ ಬಾಗಿಲವರೆಗೆ
ಬರುತ್ತಾರೆ, ಕದ ಬಡಿಯುತ್ತಾರೆ,
ಬಾಗಿಲ ಮುಂದಿಳಿಬಿಟ್ಟ
ಬಿಳಿ ಪರದೆಯ ಕಂಡು ಪುಳಕಿತರಾದಂತೆ
ತೋರುತ್ತಾರೆ...
ತಾನು ಬಿತ್ತಿ ಹೋದ ಶಾಂತಿ ಮಂತ್ರ
ಸಫಲವಾಗಿದೆ ಎಂದವರಿಗೆ ಹಿಗ್ಗೋ ಹಿಗ್ಗೋ..

ಪರದೆಯೊಳಗೆ ಸಮಾನತೆಗೆ ವಿಷವಿಕ್ಕಿ,
ಜನರ ಹುಟ್ಟಿಗೇ ಹಿಂದೂ, ಮುಸ್ಲೀಂ, ಕ್ರೈಸ್ತನೆಂಬ
ನಂಜು ಬೆರೆಸಿ, ಪ್ರಶಾಂತತೆ ಕಾಪಾಡಲಾಗಿದೆ,
ಗಣೇಶ ಚತುರ್ಥಿಗೆ ಗೋಲಿಬಾರ್ ಆದರೆ,
ರಂಜಾನ್ ಗೆ ಕರ್ಫ್ಯೂ ಹೇರಲಾಗಿದೆ,
ಚರ್ಚ್ ಗೆ ಕಲ್ಲು ಹೊಡೆದು ಜಕಂ ಮಾಡಲಾಗಿದೆ,
ಇಲ್ಲೇ ಕೇಳುತ್ತದೆ ಕೇಳಿಸಿಕೊಳ್ಳಿ...
"ಸರ್ವಜನಾಂಗದ ಶಾಂತಿಯ ತೋಟ.."
ಅದನೇ ಕೇಳಿಸಿಕೊಳ್ಳುವ ಗಾಂಧಿ
ತನ್ನ ಎದೆಯುಬ್ಬಿಸಿ ಹೆಮ್ಮೆಯಾಗುತ್ತಾರೆ!

ಮೇಲ್ನೋಟಕ್ಕೆ ವೈಭವದ ಸೋಗು ಹೊದ್ದ
ಮನದೊಳಗೆ ಬಿಲ ಕೊರೆದು
ಕನ್ನ ಹಾಕುವ ಹೆಗ್ಗಣಗಳಿವೆ,
ಹೇ ಬಾಪು ನೋಡು,
ನೀ ಕೊಡಿಸಿದ ಸ್ವಾತಂತ್ರ್ಯ ಇವರಿಗೆಷ್ಟು ಪ್ರಯೋಜನಕಾರಿ?
ದುಡ್ಡನ್ನೇ ತಿಂದುಂಡು ಗುಡಾಣ ಬೆಳೆಯುತ್ತದೆ,
ಕೆಲವರು ಪೇಚಾಡಿಕೊಳ್ಳುತ್ತಾರೆ,
ಗಾಂಧಿ ಇನ್ನೂ ತನ್ಹಳೇ ಮಂತ್ರವನ್ನೇ ಪಠಿಸುತ್ತಾರೆ,
"ಈಶ್ವರ ಅಲ್ಲಾ ತೇರೇ ನಾಮ್,
ಸಬ್ ಕೋ ಸನ್ಮತಿ ದೇ ಭಗವಾನ್..."

ಪಾಪ ವಯಸ್ಸಾದ ಗಾಂಧಿ
ಇನ್ನಷ್ಟು ಹೊತ್ತು ತಮ್ಮ ಕಾತರದ
ಮೂಟೆಯನ್ಹೊರಲಾಗದೆ,
ಒಳ ಪ್ರವೇಶ ಮಾಡಲು ಉತ್ಸುಕರಾಗಿ
ಪರದೆ ಸರಿಸಿ ನೋಡುತ್ತಾರೆ,
ಚಿಲಕವಿರದ ಬಾಗಿಲ ಮೇಲೆ
"ನಾಳೆ ಬಾ" ಎಂದು ಬರೆಯಲಾಗಿದೆ,
ನಿರೀಕ್ಷೆಗಳ ಭಾರಕ್ಕೆ ಕುಗ್ಗಿಹೋದ ಗಾಂಧಿ,
"ಹೇ ರಾಮ್" ಎನ್ನುತ್ತಾ ಕುಸಿದು ಬಿದ್ದವರು
ಸತ್ತೇ ಹೋದರೆ?!
ಭ್ರಮೆಯಾವರಿಸಿಬಿಟ್ಟಿದೆ!!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday 11 September 2014

ವಿರಹಿಯ ಸಾಲುಗಳು!


ಮಧುಶಾಲೆಯ
ಮೂಲೆಕೊನೆಯ ಟೇಬಲ್ಲೊಂದರಲಿ
ಕುಡಿದು ಬಿದ್ದವನು
ಸತ್ತುಹೋಗಿ ವರ್ಷಗಳೇ ಕಳೆದಿವೆ,
ಕುಯ್ಯದೆ, ಕತ್ತರಿಸದೆ
ಅವನ ಹೃದಯದ ಬಿಸಿರಕ್ತ ಕುಡಿದ
ನಿನ್ನ ಕಣ್ಣೋಟಗಳಿಗೆ
ತೃಪ್ತಿಯಾಗಿರಬಹುದಲ್ಲವೇ ಹುಡುಗಿ?
ನಿನಗೆ ನೆನಪಿರಬಹುದು, ಇಲ್ಲದೆಯೂ ಇರಬಹುದು!

ಎದುರು ಸಿಕ್ಕರೂ ಪರಿಚಯದ ನಗೆ ನಕ್ಕು
ಕೊಂದೇ ಬಿಡಬೇಡ ಪಾಪ,
ಅವನ ಸ್ಮೃತಿ, ವಿಸ್ಮೃತಿಯ ಪ್ರಜ್ಞೆಗಳೆಲ್ಲ
ನೀ ಬಿಟ್ಟು ಹೋದಷ್ಟೇ ಹಿಂದಿನವು,
ಹೆಸರು ಕರೆದಾನು ಜೋಕೆ?!
ತಲೆ ತಪ್ಪಿಸಿಕೊಂಡೋಡಿ ಬಿಡು,
ನಿನಗೆಂದೇ ಇಟ್ಟು ಕರೆದ ಹೆಸರುಗಳನ್ನು
ಕರೆದರಂತೂ,
ನಿನ್ನ ಕೊಂದ ಪಾಪ ತಟ್ಟುತ್ತದೆ,
ಮೊದಲೇ ಪ್ರೇಮಿಸಿ ಪಾಪಿಯಾಗಿದ್ದಾನೆ,
ಉಸಿರಾಡಿಕೊಂಡಿರಲಿ ಬಿಡು!

ಸದ್ದುಗಳಬ್ಬರದ ಸಂತೆಯಲಿ
ಕಳೆದುಹೋಗುವ ಒಂಟಿಪಯಣಿಗನಿಗೆ
ಶುದ್ಧ ಮೌನವೆಂದರೆ ತೀರದ ಅಸಹ್ಯ!
ನಿನ್ನ ನೆನಪುಗಳಾವಳಿಯಲಿ
ಶುದ್ಧ ಪಾಪಿಯಾಗುವವನು,
ನಕ್ಕಾಗ ಮುದ್ದು ಪಾಪುವಾಗುತ್ತಾನೆ,
ನೀನಿಟ್ಟ ಆಣೆ, ಪ್ರಮಾಣಗಳನು
ಮರೆತಂತೆ ಮಾಡಿ ಕ್ಷಮಿಸುವಾಗ
ನೋವುಗಳನು ನುಂಗಿ ನಡೆದ
ಬುದ್ಧನಾಗುತ್ತಾನೆ,
ಆದರೆ ವಿಪರ್ಯಾಸ ನೋಡು,
ಕಂಡವರಿಗೆ ಕುಡುಕನಾಗಿದ್ದಾನೆ,
ಬರಿಯ ಕುಡುಕನಾಗಿದ್ದಾನೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Tuesday 2 September 2014

ನಮ್ಮೂರಿನ ರಸ್ತೆಗಳಿಗೆ ಬಸ್ಸು ಬರಬೇಕು!


ನಮ್ಮೂರಿನ ರಸ್ತೆಗಳಿಗೆ
ಬಸ್ಸು ಬರುತ್ತದೆ,
ಮುಂಚೆಯೆಲ್ಲಾ ಕೆಂಪು ಬಣ್ಣದ
ಲೈಫ್ಬಾಯ್ ಸೋಪಿನ ಬಸ್ಸುಗಳಿಗೆ
ಕಾದಂತಹ ಜನರ ಚಡಪಡಿಕೆಯ ನೋಟಗಳು,
ಈಗಲೂ ನಮ್ಮೂರಿನ ಲಡ್ಡು ಬಿದ್ದ ರಸ್ತೆಗಳ ಮೇಲೆ
ಆಸೆಗಳನ್ನು ಹೊದ್ದು ಮಲಗಿವೆ...
ಅವು ಒಮ್ಮೆಯೂ ನಿದ್ರೆ ಮಾಡಿದ್ದನ್ನು ನೋಡಿಲ್ಲ,
ನಿದ್ರಾಹೀನ ಆಸೆಗಳು, ಅರೆತುಂಬಿದ ಹೊಟ್ಟೆಗಳು,
ಇಲ್ಲಿ ಸರ್ವೇ ಸಾಮಾನ್ಯ, ಸಿಕ್ಕುತ್ತವೆ...

ಮೇಲೆ ನೋಡಲೊಂದೇ ಊರು,
ಎಣಿಸಿದರೂ ಇನ್ನೂರು ಒಕ್ಕಲಿಲ್ಲ,
ಮಾರಿ-ಮಸಣಿಯರ ಹಬ್ಬಗಳೂ ಒಟ್ಟಿಗೇ ಆಗುತ್ತವೆ,
ಸಮಾನತೆ ಸಮಾನವಾಗಿ ಹಂಚಿಹೋಗಿದೆ,
ಹೊಲಗೇರಿಗೆ ಹೊಲಗೇರಿ ಎನ್ನುವುದಿಲ್ಲ,
ಒಕ್ಕಲುಗೇರಿಗೆ ಒಕ್ಕಲುಗೇರಿಯೆನ್ನುತ್ತಾರೆ,
ಆ ಜನಗಳಿಗೆ ಇವರ ಪಡಸಾಲೆಗಷ್ಟೇ ಪ್ರವೇಶ,
ಬೋರ್ಡು ಬರೆಸಲಾಗಿಲ್ಲ,
ಆದರೂ ಅಧಿಕೃತ ಪ್ರವೇಶ ನಿಷಿದ್ಧ,
ತುಟಿ ಬಿಚ್ಚುವಂತಿಲ್ಲ, ಬಾಯಿ ಹೊಲೆಯಲಾಗಿದೆ,
ಕೆಲವರಂತೂ ಸಮಾನತೆಯ ಕನಸು ಕಾಣುವುದು ಬಿಟ್ಟಿಲ್ಲ,
ಆದರೂ ಹೂವು ಅರಳಿಲ್ಲ...

ಬೀಳುವ ಕನಸುಗಳಿಗೆ,
ಸಾಮಾರ್ಥ್ಯಕ್ಕೆ ತಕ್ಕಂತೆಯೇ ಬೀಳೆಂದರೆ ಆದೀತೆ?
ಬಡವ, ಬಲ್ಲಿದರೆನ್ನದೆ
ಕನಸುಗಳನು ಬೀಳಿಸಿಕೊಳ್ಳುವ ಜನರನ್ನು ಕಂಡಿದ್ದೇನೆ,
ಅವರ ಕನಸುಗಳಲ್ಲಿ,
ಇರುವ ಸೋರುವ ಹೆಂಚಿನ ಮನೆಗಳು
ಆರ್ಸೀಸಿ ಮನೆಗಳಾಗುತ್ತವೆ,
ಬೆಳೆದ ಮಗಳಿಗೆ ಸಾಲವಿಲ್ಲದೆ ಮದುವೆಯಾಗುತ್ತದೆ,
ಮಗ ಕುಡಿತ ಬಿಟ್ಟು ಗೇಯುವುದಕ್ಕೆ ನಿಲ್ಲುತ್ತಾನೆ,
ಗೇಣುದ್ದದ ನೆಲ ಬಂಗಾರ ಬೆಳೆಯುತ್ತದೆ,
ಜನ ಹುಟ್ಟಿನೊಂದಿಗೆ ಅಂಟಿಸಿಕೊಳ್ಳುವ
ರಾಜಕೀಯ ಬಿಟ್ಟುಬಿಡುತ್ತಾರೆ, ಹೀಗೆ ನೂರಾರು...

ಈ ಎಲ್ಲಾ ಆಸೆ, ಕನಸುಗಳನ್ನು ಹೊತ್ತು,
ನಮ್ಮೂರಿಗೆ ಬಸ್ಸು ಬರುತ್ತದೆ,
ಇದುವರೆಗೂ ಊರಿಗೆ ಮೂರು ಕಿ.ಮೀ. ದೂರದಲ್ಲಿ
ತಲುಪಲಾರದ ದಾಹ ಉಳಿಸಿ
ನಿಲ್ಲುವ ಬಸ್ಸು, ಊರೊಳಗೆ ಬರುತ್ತದೆ,
ಬಂದೇ ಬಿಡುತ್ತದೆ ಎಂಬ ಕನಸು ಹೊತ್ತವರು ಕಾಯತ್ತಲೇ ಇದ್ದಾರೆ,
ಮುಂದೆ ಎಂದಾದರೂ ಬಸ್ಸು ಬರಬೇಕು,
ಆದರೆ ಈ ಕನಸುಗಳು ಮತ್ತು ಆಸೆಗಳಿಗೆ
ನಿಲ್ದಾಣ ಮಾತ್ರ ಇಲ್ಲೆಲ್ಲಿದೆಯೋ? ಕಾಯಬೇಕು...

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Wednesday 20 August 2014

ನಾನೆಂಬ ಮೌನ ಕಾವ್ಯ?!


ಕಷ್ಟಪಟ್ಟು, ಭಾವ ಬಿತ್ತಿ ಹುಟ್ಟಿಸಿದ ಅನುಭೂತಿಗೆ
ಹೀಗೊಂದು ಹೆಸರಿಟ್ಟಿರುತ್ತೀರಿ,
ನಗುವೆಂದರೆ ನಗು, ಅಳುವೆಂದರೆ ಅಳು,
ಆನಂದದ ಅಲೆಯೊಳಗೆ
ಮುಳುಗೆದ್ದ ಮನವೊಂದು
ಮುಖದ ಸ್ನಾಯು ಸಡಿಲಿಸಿ
ಪಕ್ಕೆಂದು ಹಲ್ಲು ಬಿಟ್ಟರೆ ನಗುವಾಗಿ,
ದುಃಖ ಮಡುಗಟ್ಟಿ,
ಅಲೆಯುವಾತ್ಮ ಬಂಧಿಯಾದರೆ,
ಕಣ್ಣಿಂದ ನೀರು ಒಸರುತ್ತದೆ; ಅಳುವಾಗಿ!
ಅಂದರೆ ಅಂದದ್ದೇ ಹೆಸರು,
ಅನ್ನದಿರೆ ಏನೆಂದು ಕರೆಯುವರು?

ಬಾಯಿ ಒಣಗಿ, ಹಸಿದು ಬಾಯಾರಿದ
ಮಗು ಹಾಲಿಗಾಗಿ ಪರಿತಪಿಸುವಾಗ
ಮೊಲೆಯೂಡುವ ತಾಯಿ,
ತನ್ನ ಮಾಂಸ, ಮಜ್ಜೆ, ರಕ್ತಗಳನು ಬಸಿದರೂ
ತಾಯ್ತನದ ಸುಖವನುಭವಿಸುವಳಂತೆ,
ಹಾಗಿರೆ ಸುಖವೆಂದರೇನು?
ಸಂಬಂಧಗಳ ಭಾರಕ್ಕೆ
ಜಗ್ಗಿ ಜೋತು ಬೀಳುವ ನಾವು,
ಅವುಗಳನ್ನು ಕತ್ತರಿಸಿಕೊಳ್ಳುವಾಗ
ಹಗುರಾಗರಾಗುವುದನು ಬಿಟ್ಟು
ದುಃಖ ಒತ್ತರಿಸಿಕೊಳ್ವುದೇಕೋ?
ಅಸಲಿಗೆ ಈ ದುಃಖವೆಂದರೇನು?
ಜಿಜ್ಞಾಸೆಯ ಬಿಂದು?

ಈ ಮನಸಿದೆಯಲ್ಲ, ಸರಿಯಿಲ್ಲ ಆಸಾಮಿ?
ಕುಳಿತಲ್ಲಿಯೇ ಊರೂರು ಸುತ್ತಿ,
ಕೇರಿಯ ವಿಳಾಸ ಹೊತ್ತು ತರುತ್ತಾನೆ,
ಯೋಚನೆಯ ಒಂದು ಬಿಂದುವಿನಿಂದ
ಮತ್ತೊಂದು ಬಿಂದುವಿಗೆ ಹಾರುವ
ಪರಾಗ ಕ್ರಿಯೆ, ಥಾಟ್ ಪ್ರೋಸೆಸ್ಸೇ ಹೌದಾದರೆ,
ಈ ಥಾಟೆಂದರೇನು? ನಾವು
ಕರೆದರದು ಯೋಚನೆ, ಯೋಜನೆ,
ಕರೆಯುವ ಮುನ್ನ ಅದು ಏನು?
ಗೊತ್ತೇ ಇರದ ಗೋಜಲುಗಳಲ್ಲಿ ಸಿಕ್ಕುತ್ತೇನೆ,
ಪದಗಳಿಲ್ಲದ ಕಾಲದ
ಭಾಷೆಗೆ ಕಿವಿಯಾನಿಸಿ ಕುಕ್ಕರಿಸಿರುತ್ತೇನೆ!

ಸನ್ನೆಗಳ ಭಾಷೆಯನು ಮೀರುವ
ಪದಗಳ ಭಾಷೆಯೂ ಗೋಜಲೆಂದರೆ ಗೋಜಲು,
ಹೊಸದಾದರೂ ಹುಟ್ಟಿಸಿಕೊಳ್ಳೋಣೆಂದರೆ
ಬಳಕೆಯ ಪದಗಳೆಲ್ಲವೂ ಎಂಜಲು,
ನಿರುತ್ತರನಾದ ಮೌನ ಮಾತ್ರ ಸ್ವಚ್ಛ,
ಅಮೂರ್ತವಾದ ಶೂನ್ಯ ಮಾತ್ರ ಕಾವ್ಯ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Tuesday 22 July 2014

ಗಾಝಾ-ಕ್ರೌರ್ಯ-ಯುದ್ಧ-ಪ್ರಾರ್ಥನೆ


1)
ಯುದ್ಧ ಮತ್ತು ಕ್ರೌರ್ಯಗಳು
ಅಫೀಮು ಗೆಳೆಯ,
ನೀನು ನಿನ್ನನ್ನು ಪರಾಕ್ರಮಿ ಎಂದು
ಬಿಂಬಿಸಿಕೊಳ್ಳುವ ಉಮೇದಿನಲ್ಲಿದ್ದೀ,
ಅದು ನಿನ್ನನ್ನೂ ತನ್ನೊಳಗೆ
ಮುಳುಗಿಸಿ,
ಬೂದಿಯನ್ನು ಹೊರಚೆಲ್ಲುತ್ತದೆ;
ನನ್ನೊಂದಿಗೆ ನೀನೂ
ಉರಿದು ಹೋಗುವುದನ್ನು
ಇತಿಹಾಸ
ಇಂಗಾಲದ ಕಪ್ಪು ಅಕ್ಷರಗಳಲ್ಲೇ
ಕೆತ್ತಿಡುತ್ತದೆ!


2)
ನೀ ಉಡಾಯಿಸಿದ ಅಷ್ಟೂ
ಮಿಸೈಲು, ಬಾಂಬು, ಮದ್ದು-ಗುಂಡುಗಳಿಗೆ
ಮನುಷ್ಯರ ಹಸಿವು, ದಾಹ,
ನೋವು, ರಕ್ತ, ಸಂಕಟಗಳ
ಅರಿವಿಲ್ಲ ಗೆಳೆಯ;
ನಿನ್ನಧಿಕಾರದರಮನೆಯಲ್ಲಿ
ಚಲಾವಣೆಗೊಳ್ಳುವ,
ಆಧುನಿಕತೆ, ಐಶಾರಾಮ,
ತಂತ್ರಜ್ಞಾನ, ದರ್ಪ, ಕ್ರೌರ್ಯ,
ಜೀ ಹುಜೂರುಗಳಿಗೆ
ಮೂಲೆಯಲ್ಲಿ ಮಡುಗಟ್ಟುವ
ಮೌನ, ಮಾನವೀಯತೆ, ಕಣ್ಣೀರುಗಳು
ಕವಡೆ ಕಿಮ್ಮತ್ತಿಲ್ಲದ
ಮೂರನೇ ದರ್ಜೆಯ ಆಟಿಕೆಗಳು,
ಬದುಕು ರೋಚಕ ಬಿಡು!

3)
ನೀ ಕೊಂದ ಆ ಗರ್ಭಿಣಿ
ಹೆಂಗಸಿನ ಹೊಟ್ಟೆಯ
ಸೀಳು ಒಡೆದು,
ಇನ್ನೂ ಹುಟ್ಟಿರದ ಮಗುವಿನ
ಬಿಸಿ ನೆತ್ತರು
ನಿನ್ನ ಕೈ ಸೋಕಬೇಕಿತ್ತು ಗೆಳೆಯ,
ತಾಯ ಗರ್ಭದ ನೆನಪು
ನಿನಗಾಗಬೇಕಿತ್ತು;
ಆ ಜೀವಗಳ
ರಕ್ತದೋಕುಳಿಯಲ್ಲಿ ಮೀಯುತ್ತಿರುವ
ಆ ಬಾಂಬನ್ನೊಮ್ಮೆ ಹಿಡಿದುಕೋ,
ಕಿವಿಯಿಟ್ಟು ಕೇಳಿಸಿಕೋ
ಅಮ್ಮ ಎಂದು ಕೂಗಬಹುದೇ?
ಕೆಡುವುವುದರಲ್ಲೇ ಖುಷಿಪಡುವವರಿಗೆ
ಕಟ್ಟುವುದರಲ್ಲಿನ
ನೋವು ಕಾಣುವುದಿಲ್ಲ...
ಭೂಮಿ ಹಿಂದೆ ಮುಂದಾಗಿ ಚಲಿಸುತ್ತದೆ,
ಪ್ರಳಯ ಸಮೀಪಿಸಿದ ಭೀತಿ ಹುಟ್ಟುತ್ತದೆ!

4)
ನನಗೀಗ ಅನ್ನಿಸುತ್ತದೆ,
ಮಾನವನ ಲೋಲುಪತೆಯನ್ನು
ಕಾಯ್ದುಕೊಂಡು
ಮುಂದೆ ಹೋದ ಪ್ರಳಯ,
ಆಗೇ ಬಿಡಬೇಕಿತ್ತು...
ಮನುಷ್ಯನಿಗೆ
ಕೆಡವಲು ಬಿಟ್ಟಿದ್ದೆ ತಪ್ಪಾಯ್ತು;
ಈಗ ನೋಡು,
ಆ ಸಣ್ಣ ಗಾಝಾ ಪಟ್ಟಿಯ
ಸುತ್ತಮುತ್ತ ಕೆಂಪು ಓಕಳಿ?!
ಮನುಷ್ಯ ಬದುಕುತ್ತಲೂ ಇಲ್ಲ,
ಬಾಳುವುದೂ ಇಲ್ಲ!

5)
ದೇವಕಣಗಿಲೆಯ
ಘಮವನ್ನು
ದೇವರ ನೈವೇಧ್ಯಕ್ಕಿಟ್ಟು
ಭಕ್ತಿಯಿಂದ
ಕೈ ಮುಗಿದು
'ಗಾಝಾ'ದಲ್ಲಿನ ಸ್ನೇಹಿತರ
ಬಂಧ ಮುಕ್ತಿಗೆ
ಪ್ರಾರ್ಥಿಸಲಾಗಿದೆ!


--> ಮಂಜಿನ ಹನಿ 

ಹೆದ್ದಾರಿಯ ಸಂಭ್ರಮಗಳು!


1)
ಅರ್ರೇ ಈ
ಹೆದ್ದಾರಿಯನು ನೋಡಿ,
ಎಷ್ಟು ಜನರ ತುಳಿತಗಳನು
ಸಹಿಸಿಕೊಂಡಿದೆ,
ಅದರ ಸಹನೆ ನಮಗೆ ಸಾಧ್ಯವಿಲ್ಲ!

2)
ಸೂತಕ ಸಂಭ್ರಮಗಳಿಗೆ
ಸಹಚಾರಿ ಹೆದ್ದಾರಿ;
ಅಜ್ಜಿ ಸತ್ತಾಗ ಅತ್ತದ್ದು,
ಮೊಮ್ಮಗಳ ಮದುವೆ ದಿಬ್ಬಣಕೆ
ಮರಿ ಮಕ್ಕಳನು
ಎತ್ತಿ ಆಡಿಸುವ ಕನಸು ಕಂಡಿದೆ!

3)
'ಅವಸರವೇ ಅಪಾಯಕ್ಕೆ ದಾರಿ'
ಎಂದು ಬೋರ್ಡು ಬರೆಸಿ
ತಗುಲಿ ಹಾಕಲಾಗಿದೆ,
ಆದರೆ ಒಮ್ಮೆಯೂ ಹೆದ್ದಾರಿ ಕರುಣೆ ತೋರಿದ್ದಿಲ್ಲ,
ಬಳಿಗೆ ಬಂದವರಲ್ಲನೇಕರನ್ನು
ಬಡಿದು ಬಾಯಿಗೆ ಹಾಕಿಕೊಳ್ಳುವುದನು
ಕಾಯಕ ಮಾಡಿಕೊಂಡಿದೆ;
ನಾವಾದರೂ ಅದನು
ಕೋಲ್ಡ್ ಬ್ಲಡೆಡ್ ಮರ್ಡರರ್ ಅನ್ನುವಂತಿಲ್ಲ,
ಕೊಂದವನನ್ನು ಅನ್ನಬಹುದೇ ಹೊರತು,
ಕೋವಿಯನ್ನು ಅನ್ನುತ್ತೇವೆಯೇ?!


4)
ಒಂದೊಂದು ಚಕ್ರ
ಓಡುವಾಗಲೂ
ಗತದಿಂದ್ಹಿಡಿದು ಗತಿಯವರೆಗೂ
ನೆನಪಾಗಬಹುದೀ ಹೆದ್ದಾರಿಗೆ;
ಅದೆಷ್ಟು ಇತಿಹಾಸ ಕಂಡಿದೆಯೋ?
ಅಡ್ಡದಾರಿ ತುಳಿದವರಷ್ಟೇ
ಇಲ್ಲಿ ಸಿಕ್ಕುವುದಿಲ್ಲ...

--> ಮಂಜಿನ ಹನಿ


ಬಾದಲ್ ನಂಜುಂಡಸ್ವಾಮಿಯವರ ಟ್ರೆಂಡಿಂಗ್ ನಲ್ಲಿದ್ದ, ’ಹೆದ್ದಾರಿ’ಯನ್ನು ಸಂಭ್ರಮಿಸಿದ ತುಣುಕುಗಳಿವು!

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Friday 18 July 2014

ಧೀ ಶಕ್ತಿಯೇ ಹೆಣ್ಣು!


ಅಲ್ಲೆಲ್ಲೋ ಹೆಣ್ಣ ಹಸಿ ಮೈ
ಹದವಾಯ್ತೆಂದರೆ ಸಾಕು,
ಈ ಗಂಡಸಿಗೆ
ತನ್ನ ಅಹಮ್ಮಿನ ಕೋಟೆಯೊಳಗೆ
ಸತ್ತ ನರಗಳನೂ ಸೆಟೆಸಿ
ಅತಿಕ್ರಮಿಸುವ ಕನಸು;
ನೀವು ತಪ್ಪು ತಿಳಿಯಕೂಡದು,
ಅವನು ಅನಾಗರೀಕನಲ್ಲ,
ಇಲ್ಲಿ ಆಕ್ರಮಣಕ್ಕೆ ನಾಗರೀಕತೆಯ
ವ್ಯಾಖ್ಯಾನ ಸಿಕ್ಕುತ್ತದೆ!

ಕಣ್ಣೆಲ್ಲಾ ನೀಲಿ ತಿರುಗಿ,
ಮನಸ ತುಂಬ ಕಡು ಕೆಂಪು...
ಸೆರಗು ಹೊದ್ದು ನಡೆವವರೆಡೆಗೂ
ತೀಕ್ಷ್ಣ ನೋಟ,
ಕಾಮನೆಗೆ ಕಣ್ಣಿಲ್ಲ, ಆಸೆಯಿದೆ ಇಲ್ಲಿ -
ಕಾಣಬಹುದೆ ಸೀಳು ಎದೆ?
ಸೆರಗ ಮರೆಯ ಬೆತ್ತಲೆ ನಡು?
ಹಾದರದ ಮನಸಿಗೆ
ತೃಷೆ ತೀರಿಸಲೊಂದು ರಂಧ್ರ ಬೇಕು;
ನಿಮಿರಿಸಲಾಗದ ನಾಮರ್ದ
ಕ್ರೌರ್ಯ ಮೆರೆಯುತ್ತಾನೆ,
ಸಾವಿರ ಜನ್ಮಕ್ಕೂ ಮಿಗಿಲಾದ
ಪ್ರೀತಿ, ಮಮತೆಗಳು
ಕೆಂಪು ಬಣ್ಣದ ಕೊಚ್ಚೆಯಲ್ಲಿ ಹರಿಯುತ್ತವೆ!

ಬೆಳಗಾಗುತ್ತಿದ್ದಂತೆ
ಸೂಕ್ಷ್ಮ ಸಂವೇಧನೆಯ
ಮಾಧ್ಯಮಗಳಿಗೆ ಉರಿದು ಮುಕ್ಕಲು
ಹಸಿ ಹಸಿಯ ವಿಷಯವಿದೆ,
"ಅಪ್ರಾಪ್ತೆಯ ಮಾನಭಂಗ",
"ಯುವತಿಯ ಶೀಲ ಹರಣ" ಎಂಬ
ಅಡಿ ಮತ್ತು ನುಡಿ ಬರಹಗಳು,
ಸ್ತ್ರೀ ಜಾಗೃತಿಯ ಫ್ಲೆಕ್ಸುಗಳು
ರಸ್ತೆಯ ತುಂಬ ಮೇಲೇರುತ್ತವೆ;
ತಮ್ಮ ಮಾನವನ್ನೇ ಭಂಗಿಸಿಕೊಂಡು
ಹೆಣ್ಣನ್ನು ಕಿತ್ತು ತಿಂದ ಗಂಡಸರು
ಸತ್ತು ಹುಟ್ಟಿಬಂದರೂ ಹರಣವಾಗದ ಶೀಲೆ
ನದಿಯಾಗುತ್ತಾಳೆ, ಅರಿವಾಗುತ್ತಾಳೆ,
ಹರವಾಗಿ ಎಲ್ಲರೆದೆಯ
ಕಣ್ಣಾಗಿ ಹರಿಯುತ್ತಾಳೆ...

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Sunday 6 July 2014

ಅತಿ ಸೂಕ್ಷ್ಮ 'ಗತಿ'ಯೊಳಗೆ!


ಸೂಕ್ಷ್ಮ ಸಂವೇಧನೆಯಿರುವ ನಾಟಕ ಎಂಬ ರಿವ್ಯೂವನ್ನು ಮೊದಲೇ ಕೇಳಿದ್ದ ನನಗೆ 'ಗತಿ'ಯನ್ನು ಒಮ್ಮೆಯಾದ್ರೂ ನೋಡಬೇಕೆನಿಸಿತ್ತು. ಮೈಸೂರಿನಲ್ಲಿ ನೆಲೆ ನಿಂತಿರುವ ಕಾರಣಕ್ಕೆ ಅವಕಾಶ ಇವತ್ತಿನವರೆಗೂ ಒದಗಿರಲಿಲ್ಲ. ಇಂದು ಇಲ್ಲೇ ಆಯೋಜನೆಯಾದ 'ಗತಿ' ನಾಟಕವನ್ನು ನೋಡಿದ ನಂತರದ ನನ್ನನಿಸಿಕೆಗಳನ್ನು ಹಾಗೆಯೇ ದಾಖಲಿಸುವ ಮನಸಾಗಿ ಲೇಖನ ಬರೆಯುತ್ತಿದ್ದೇನೆ. ಮೊದಲನೆಯದಾಗಿ ಒಂದು ಸೂಕ್ಷ್ಮ ಕಲಾಕೃತಿಯಂಥ ನಾಟಕವನ್ನು ರಂಗದ ಮೇಲೆ ತಂದ ನಾಟಕ ತಂಡಕ್ಕೆ ಮತ್ತು ಮೈಸೂರಿನಲ್ಲಿ ಆಯೋಜನೆಗೆ ನೆರವಾದ ಎಲ್ಲರನ್ನೂ ಅಭಿನಂದಿಸುತ್ತೇನೆ.


ಎಸ್.ಎನ್.ಸೇತುರಾಂ ಎಂದರೆ ಕಿರುತೆರೆಯಲ್ಲಿ ಚಿರಪರಿಚಿತ ಹೆಸರು. ತಮ್ಮ ಸಂವೇಧನಾಶೀಲ ಧಾರಾವಾಹಿಗಳಾದ 'ಅನಾವರಣ' ಮತ್ತು 'ಮಂಥನ'ಗಳಿಂದ ಹೆಸರಾದವರು. ಅವರ ಸೀರಿಯಲ್ಗಳಲ್ಲಿನ ಸೂಕ್ಷ್ಮಾನುಸೂಕ್ಷ್ಮ ಭಾವಾಭಿವ್ಯಕ್ತಿಗೆ ಫಿದಾ ಆಗಿದ್ದ ನನಗೆ ನಾಟಕದ ಬಗ್ಗೆಯೂ ಒಂದಷ್ಟು ನಿರೀಕ್ಷೆಗಳಿದ್ದವು. ಕಥೆಯ ಸೂಕ್ಷ್ಮತೆಯಿಂದ್ಹಿಡಿದು, ಸಂಭಾಷಣೆ ಮತ್ತು ಅದನ್ನು ನಿರೂಪಿಸುವ ಶೈಲಿಗಳಲ್ಲಿ ಅವರು ಅನುಸರಿಸಬಹುದಾದ ಕೌಶಲಗಳ ಬಗ್ಗೆ ಕುತೂಹಲಗಳಿದ್ವು. ಅವುಗಳನ್ನು ಭಾಗಶಃ ತಲುಪಿದ ನಾಟಕದ ಪ್ರಮುಖ ಅಂಶ, ಅದು ಇಳಿಯುವ ಸೂಕ್ಷ್ಮ ಸ್ಥರಗಳು ಮತ್ತು ಅದರ ಡೀಟೈಲ್ಸ್.

ಪ್ರಾರಂಭದಲ್ಲಿಯೇ ಕತ್ತಲು-ಬೆಳಕಿನ ಹಿನ್ನಲೆಯಲ್ಲಿ ಶುರುವಾಗುವ ನಾಟಕ, ತನ್ನಲ್ಲಿ ಉದುಗಿರಬಹುದಾದ ಸೂಕ್ಷ್ಮತೆಯ ಝಲಕ್ ಅನ್ನು ಸೇತುರಾಂ ರವರ ಪಾತ್ರದ ಡೈಲಾಗ್ಸ್ ಮೂಲಕ ಬಿಚ್ಚಿಡುತ್ತದೆ. ಮನುಷ್ಯ ವ್ಯವಹರಿಸುವಾಗ ಹೇಗೆಲ್ಲಾ ತನ್ನ ಪ್ರಜ್ಞೆಗಳನ್ನು ಕೊಂದುಕೊಂಡು ಬದುಕುತ್ತಾನೆ. ಹಾಗೆ ಬದುಕುವ ಬದುಕನ್ನು ಬದುಕಿದ್ದಾನೆ ಎನ್ನಲಾಗದು.. ಬದಲಿಗೆ, ನಾಡಿ ಮಿಡಿಯುತ್ತದೆ, ಹೃದಯ ಬಡಿಯುತ್ತದೆ, ಶ್ವಾಸಕೋಶಗಳು ಏರಿಳಿಯುತ್ತವೆ ಮತ್ತು ಮನುಷ್ಯ ಸತ್ತಿರುವುದಿಲ್ಲವಷ್ಟೆ ಎಂದು ಸಮೀಕರಿಸುತ್ತಾರೆ. ಸಮೀಕರಣದಿಂದ್ಮೊದಲ್ಗೊಳ್ಳುವ ಅವರ ಯೋಚನಾ ಲಹರಿ, ವಯಸ್ಸಾದ ನಂತರ ಮಕ್ಕಳು ಮಾಡುವ ಸೇವೆ ಹೇಗೆ ಸಾಯುವಿಕೆಯವರೆಗಿನ ಕಾಯುವಿಕೆಯಾಗಿ, ಕ್ರೌರ್ಯವಾಗಿ ಕಾಣುತ್ತದೆಂದು ತೆರೆದಿಡುತ್ತಾರೆ. ಇಲ್ಲಿಂದ ಪಾತ್ರಧಾರಿ ಅಜ್ಜ ಆಪ್ತನಾಗುತ್ತಾ ಹೋಗುತ್ತಾನೆ.

ನಂತರದಲ್ಲಿ ನಾಟಕದ ಭೂಮಿಕೆಗೆ ಬರುವ ದೀಪು ಅವರು, ಸೇತುರಾಂರವರ ಮೂರು ಮಕ್ಕಳಲ್ಲಿ ಮೊದಲ ಮಗನ ಮಗಳಾಗಿ (ಮೊಮ್ಮಗಳು) ಪಾತ್ರ ನಿರ್ವಹಿಸಿದ್ದಾರೆ. ಇಬ್ಬರ ಪಾತ್ರಗಳ ಸುತ್ತ ಸುತ್ತುವ ನಾಟಕ ನಾಲ್ಕು ತಲೆ ಮಾರುಗಳನ್ನು ಬೆಸೆಯುತ್ತದೆ ಎಂಬುದು ಅಚ್ಚರಿಯ ಸಂಗತಿ! ತಂದೆ ಸರ್ಕಾರಿ ಹುದ್ದೆಯಲ್ಲೂ, ತಾಯಿ ಬ್ಯಾಂಕ್ ಮ್ಯಾನೇಜರ್ ಆಗಿದ್ರೂ ಸ್ವಂತ ಕೆಲಸ ಹಿಡಿಯಲಾಗದ ಐಡೆಂಟಿಟಿ ಕ್ರೈಸಿಸ್ ಮತ್ತು ೨೮ ವರ್ಷವಾದ್ರೂ ಮದ್ವೆಯಾಗದೆ ಉಳಿದಿರುವ ಅಸಹಾಯಕತೆಯ ಪ್ರತೀಕವಾಗಿ ನಿಲ್ಲುತ್ತಾರೆ. ದೀಪು ಅಂದ್ರೆ ನಾಟಕದಲ್ಲಿ ಇಷ್ಟೇ ಅಲ್ಲಾ.. ನಮ್ಮ ನಾಗರೀಕ ಪ್ರಪಂಚ ಬೆಚ್ಚಿ ಬೀಳುವಂಥ ಮತ್ತೊಂದು ಆಯಾಮದ ಮುಖ್ಯ ಕೇಂದ್ರ. ನಮ್ಮ ಸಮಾಜದಲ್ಲೇ ಒಂದಿಲ್ಲೊಂದು ರೀತಿ ಮಾನಸಿಕ, ದೈಹಿಕ ಅತ್ಯಾಚಾರಕ್ಕೊಳಗಾಗುತ್ತಿರುವ ಹೆಣ್ಮಕ್ಕಳ ಮೇರು ದನಿ ಮತ್ತು ಅಂಥ ಸಮಾಜದ ಸೃಷ್ಠಿಗೆ ಕಾರಣವಾದವರೆಲ್ಲರ ವಿರುದ್ಧ ಸೆಟೆದುನಿಲ್ಲುವ ಸ್ತ್ರೀ ಸಂವೇಧನೆ.

ನಾಟಕದ ಮೊದಲ ಭಾಗದಲ್ಲಿ ಭೋರ್ಗರೆದು ಹರಿಯುವ ಅವರ ಕೆಲವು ಡೈಲಾಗ್ಸ್ ಅಂತೂ ನೇರ ಎದೆಗಿಳಿಯುವಂಥವು. “ಸೃಷ್ಠಿಕ್ರಿಯೆಯಲ್ಲಿ ಸುಖ ಇಟ್ಟಿದ್ದು ಸೃಷ್ಠಿಗೆ ಅಂತ, ಅದನ್ನು ಸುಖಕ್ಕಾಗಿ ಬಳಸಿಕೊಳ್ಳುವ ಮನುಷ್ಯ ಪ್ರಾಣಿಗಳಿಗಿಂತಲೂ ಕೀಳು. ಅವುಗಳಾದರೂ ಸೃಷ್ಠಿಗೆ ಯೋಗ್ಯವಾದುದ್ದನ್ನು ಹುಡುಕುತ್ತವೆ, ಇವನು ಸುಖಕ್ಕೆ ಯೋಗ್ಯವಾದುದ್ದನ್ನು ಹುಡುಕುತ್ತಾನೆ!” ಎನ್ನುತ್ತಿದ್ದಂತೆ ಪ್ರೇಕ್ಷಕರ ವಲಯದಲ್ಲಿ ನೀರವ ಮೌನ ಮನೆಮಾಡಿತ್ತು. ಇತ್ತ ತನ್ನ ಅಪ್ಪನ ಕ್ರೌರ್ಯ, ಹಸಿವುಗಳಲ್ಲಿಯೇ ಹುಟ್ಟಿ, ಬದುಕು ರೂಪಿಸಿಕೊಂಡ ಸೇತುರಾಂ ತಮ್ಮ ಲಹರಿಗಳಿಂದ ಮಾತಿಗೆ ನಿಲ್ಲುತ್ತಾರೆ. ಬಡತನದಲ್ಲಿ ಕ್ರೌರ್ಯವೂ ಹೇಗೆ ಮನೋರಂಜನೆಯಾಗಿ ರೂಪುಗೊಳ್ಳುತ್ತಿತ್ತು ಎಂಬುದನ್ನು ಅವರ ತಂದೆಯ ಕ್ರೌರ್ಯದೊಂದಿಗೆ ಬಿಚ್ಚಿಡುತ್ತಾರೆ. ಮದುವೆಯಾದಂದಿನಿಂದಲೂ ಹೆದರಿಕೆಯಲ್ಲೇ ಬದುಕುವ ಸೇತುರಾಂರ ಅಮ್ಮ, ತನ್ನ ಮಗ ನೆಂಟರಿಷ್ಟರ ಮಧ್ಯೆ ತನ್ನ ಗಂಡನಿಂದಲೇ ಅಪಹಾಸ್ಯಕ್ಕೀಡಾಗುವುದನ್ನು ಸಹಿಸದೆ ಕಾಳಿಯಾಗುವಾಗುವ ಬಗೆಯನ್ನು ವಿವರಿಸುವಾಗಿನ ಭಾವದ ಏರಿಳಿತಗಳು ಕಣ್ಣಾಲಿಗಳನ್ನು ಒದ್ದೆಯಾಗಿಸುವುದು ಅವರ ನಟನೆಯ ಶ್ರೇಷ್ಟತೆ.

ತನ್ನ ಬಾಲ್ಯದಲ್ಲಿಯೇ, ಸಂಬಂಧಿಯೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮೊಮ್ಮಗಳ ತುಮುಲ, ನೋವುಗಳು ಹೈ-ವೇ ಯಲ್ಲಿನ ಆಲೀಯ ಭಟ್ ಳನ್ನು ನೆನಪಿಸುತ್ತದೆ. ಅದೇ ದೌರ್ಜನ್ಯ ಹದಿನೈದು ವರ್ಷಗಳ ನಂತರವೂ ಮುಂದುವರೆಯುವುದು ಸಮಾಜದ ಮತ್ತು ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿನ ವೈರುಧ್ಯವನ್ನು ಭಿತ್ತರಿಸುತ್ತದೆ. ಇವರಿಬ್ಬರ ಸಂಭಾಷಣೆಯ ನಡುವೆಯೇ ಸಂಬಂಧಿಕನಿಂದ ಬರುವ ಫೋನ್ ಕಾಲ್ ಮತ್ತು ಆನಂತರದಲ್ಲಿ ಇವರ ಸಂಭಾಷಣೆ ಹೊರಳಿ ನಿಲ್ಲುವ ಸೂಕ್ಷ್ಮತೆಗಳನ್ನು ನಾಟಕ ನೋಡಿಯೇ ತಿಳಿಯಬೇಕು. ಸಂಭಾಷಣೆಯ ನಂತರ, ನೆಂಟ ತನ್ನ ಸ್ವಂತ ಚಿಕ್ಕಪ್ಪನಲ್ಲವೆಂದು ತಿಳಿದಾಗ ಆಕೆಯಲ್ಲಿ ಒಡಮೂಡುವ ಆತ್ಮಬಲ ಮತ್ತು ನೈತಿಕ ಸ್ಥೈರ್ಯ ಧನಾತ್ಮಕ ಅಂಶಗಳಲ್ಲೊಂದು.

ಅಜ್ಜ ಮತ್ತು ಮೊಮ್ಮಗಳ ಪಾತ್ರಧಾರಿಗಳಿಬ್ಬರೂ ಜಿದ್ದಿಗೆ ಬಿದ್ದಂತೆ ನಟಿಸಿ ನಮ್ಮ ಮನಸ್ಸು ಮತ್ತು ಕಣ್ಣುಗಳನ್ನು ಒದ್ದೆ ಮಾಡುವುದರಲ್ಲಿ ಎರಡು ಮಾತಿಲ್ಲ. ಸೂಕ್ಷ್ಮಗಳ ಸುಳಿಯಲ್ಲಿ ಸಿಲುಕುವ ಮನಸ್ಸು ಜೀವನದಲ್ಲಿ ಎದಿರುಗೊಳ್ಳುವ ಸಾಕಷ್ಟು ವಿಧದ ಹಸಿವುಗಳ ವಿಶ್ಲೇಷಣೆಗಿಳಿಯುತ್ತದೆ. ಅದನ್ನು ನಾಟಕದ ಯಶಸ್ಸು ಎನ್ನಬಹುದು.

ನಾಟಕವನ್ನು ಅದ್ಭುತ ಎನ್ನಬಹುದಾದರೂ, ಅದರ ಓಘ ಮತ್ತು ವಿಷಯಗಳ ಸೈಡ್ ಎಫೆಕ್ಟ್ಸ್ ನನ್ನ ಮನಸ್ಸನ್ನು ಕಾಡಿದವು. ಸ್ತ್ರೀ ಸಂವೇಧನೆಯ ಭರದಲ್ಲಿ ಅಭಿವ್ಯಕ್ತಿಗೊಳ್ಳುವ ಕೆಲವೇ ಕೆಲವು ತುಮುಲಗಳು ಅತಿರೇಖ ಅನ್ನಿಸದಿರದು. ಮೊದಲನೆಯದಾಗಿ ಸ್ತ್ರೀಯರು ರಸ್ತೆ, ಬಸ್ಸು, ಶಾಪಿಂಗ್ ಮಾಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಮಾನಗೇಡಿಗಳಿಂದ ಕಸಿವಿಸಿಯನುಭವಿಸುವುದು ನಿಜವಾದರೂ ಎಲ್ಲರ ದೃಷ್ಠಿಗಳೂ ಒಂದೇ ತೆರನಾಗಿರುವುದಿಲ್ಲ. ಎಲ್ಲವನ್ನೂ ಅಸಹ್ಯವೆಂದೇ ನೋಡುವುದು ಎಷ್ಟು ಸರಿ? ಶೃಂಗರಿಸಿಕೊಳ್ಳುವ ಮೂಲ ಉದ್ದೇಶವೇ ಚೆಂದವಾಗಿ ಕಾಣುವುದು, ಹಾಗೆ ಸುಂದರವಾಗಿ ಕಾಣುವವರನ್ನು ಪ್ರಶಂಶಾತ್ಮಕವಾಗಿ ನೋಡುವುದೂ ಅಸಹ್ಯವಾಗಬಹುದೇ? ಎನಿಸಿತು. ಆದರೆ ಮೊಮ್ಮಗಳು ಅನುಭವಿಸಿದ ದೌರ್ಜನ್ಯಗಳು ಆಕೆಯನ್ನು ರೀತಿಯಾಗಿ ಭಾವಿಸಿಕೊಳ್ಳಲು ಪ್ರೇರೇಪಿಸಿರಬಹುದು. ಎರಡನೆಯದಾಗಿ ಒಂದು ಲಾಜಿಕಲ್ ಪಾಯಿಂಟ್ ನನ್ನನ್ನು ಯೋಚನಾ ಮಗ್ನನಾಗುವಂತಾಗಿಸಿತು. ಸೃಷ್ಠಿಕ್ರಿಯೆ ಪುರುಷ ನೆಲೆಯನ್ನಷ್ಟೇ ಅಲ್ಲದೆ, ಮಹಿಳಾ ನೆಲೆಯನ್ನೂ ಹೊಂದಿರುತ್ತದೆ. ತನ್ನ ಚಿಕ್ಕಪ್ಪ ತಾತನ ಮಗನಾಗಿರದೆ ಅಜ್ಜಿಯ ಹೊಟ್ಟೆಯಲ್ಲಿ ಹುಟ್ಟುವ ಮತ್ತೊಬ್ಬರ ಮಗನಾಗಿರುವುದು, ಹೇಗೆ ಆತ ತನ್ನ ಸ್ವಂತ ಚಿಕ್ಕಪ್ಪನಲ್ಲ ಎಂಬ ಅಭಿಪ್ರಾಯವನ್ನು ಒಡಮೂಡಿಸಬಲ್ಲದು? ಆಗ ತಾಯಿ ನೆಲೆಯ ಸೃಷ್ಠಿಕ್ರಿಯೆ ಅರ್ಥ ಕಳೆದುಕೊಳ್ಳುವುದೇ? ಎಂಬ ಜಿಜ್ಞಾಸೆ ಆವರಿಸುತ್ತದೆ. ಮೂರನೆಯದಾಗಿ ಬದುಕಿನಲ್ಲಿರುವ ಅಷ್ಟೂ ಸೌಂದರ್ಯಗಳನ್ನು ಅವುಗಳು ಇರುವಂತೆಯೇ ಅನುಭವಿಸದೆ ಎಲ್ಲವನ್ನೂ ತುಲನಾತ್ಮಕ ಮತ್ತು ವಿಶ್ಲೇಷಣಾತ್ಮಕವಾಗಿ ನೋಡುವುದು, ಜೀವನವನ್ನು ಮತ್ತಷ್ಟು ಅಸಹನೀಯವಾಗಿಸುತ್ತದೆ ಮತ್ತು ಮಟ್ಟದ ಸೂಕ್ಷ್ಮತೆ ಜೀವನಕ್ಕೆ ಅನಗತ್ಯವೇನೋ ಅನಿಸುತ್ತದೆ. ಸಿನೇಮಾವನ್ನು ಸಿನೇಮಾ ಅಷ್ಟೇ ಎಂದು ಹೇಗೆ ಅಂದುಕೊಳ್ಳುತ್ತೇವೆಯೋ ಹಾಗೆಯೇ ನಾಟಕವನ್ನು ನಾಟಕವಷ್ಟೇ ಎಂದುಕೊಂಡರೆ ಇವುಗಳನ್ನು ಮರೆಯಲು ಸುಲಭವಾದೀತು.

ನನ್ನ ಯೋಚನಾ ಲಹರಿಗಳನ್ನು ಬದಿಗೆ ಸರಿಸಿ ಒಬ್ಬ ಪ್ರೇಕ್ಷಕನಾಗಿ ನಾಟಕವನ್ನು ಅದ್ಭುತ ಎನ್ನಲಡ್ಡಿಯಿಲ್ಲ. ಸಂಭಾಷಣೆಯಲ್ಲಂತೂ ಮೇರೆ ಮೀರುವಗತಿ’, ಅಭಿನಯ, ಬೆಳಕಿನ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತದಲ್ಲೂ ಮನೋಜ್ಞ ಎನಿಸುತ್ತದೆ. ರಂಗಾಯಣದಲ್ಲಿನ ಅಚ್ಚುಕಟ್ಟು ವ್ಯವಸ್ಥೆಯೂ ಅಭಿನಂದನಾರ್ಹ. ’ಗತಿಯನ್ನು ನೋಡಿಲ್ಲದವರು ಖಂಡಿತಾ ನೋಡಿ, ಬದುಕಿನ ಸೂಕ್ಷ್ಮಾನುಸೂಕ್ಷ್ಮಗಳಿಗೆ ತೆರೆದುಕೊಳ್ಳಲಿಚ್ಛಿಸುವವರು ನೋಡಲೇಬೇಕಾದ ನಾಟಕಗತಿ’.

- ಮಂಜಿನ ಹನಿ