ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 27 November 2013

ಬಿಡುಗಣ್ಣ ನಕ್ಷತ್ರ!


ನಿತ್ಯವೂ ಸಿಕ್ಕುತ್ತಾಳೆ ಆ ಹುಡುಗಿ,
ಕೈಯ್ಯಲ್ಲಿ ಕೆಂಪು ಹೂವು,
ಕಣ್ಣಲ್ಲಿ ಕೋಟಿ ಕನಸು!
ಕೆಂಪು ಹೂವೆಂದರೆ
ಬಹುಶಃ ಗುಲಾಬಿಯಿರಬಹುದು,
ಆ ಹುಡುಗಿಗೆ ಹೇಳಿಕೊಟ್ಟವರಾರೋ
ಕೆಂಪಿಗೆ ಬಿಕರಿಯಾಗುವ
ತಾಕತ್ತಿದೆಯೆಂದು?
ನನಗೋ ಆ ಕೆಂಪು
ರಕ್ತದ ಕಲೆಗಳಂತೆ ಕಾಣುತ್ತದೆ!
ಆ ಹುಡುಗಿಯೂ ರಕ್ತ ಬಸಿದಿರಬಹುದೆ,
ಬೆವರ ಬದಲಾಗಿ?!

ಅಕ್ಷರಗಳ ಹಂಗಿಲ್ಲದೆ,
ಓರಗೆಯ ಮಕ್ಕಳೊಂದಿಗೆ
ಬೆರೆತು ಕುಣಿಯುವ ಆಸೆಗಳಿಲ್ಲದೆ
ಬಾಲ್ಯ ಕಳೆಯಲು
ಆ ಹುಡುಗಿ ತೀರ್ಮಾನಿಸಿರಬಹುದು!
ಏಕೆಂದರೆ ರಸ್ತೆ ದಾಟುವ
ಯೂನಿಫಾರ್ಮ್ ತೊಟ್ಟ
ಇತರ ಮಕ್ಕಳು ಅವಳೊಳಗೆ
ಒಂದು ತಿರಸ್ಕಾರದ ನಗೆ ಮತ್ತು
ಬಿಸಿಕಣ್ಣೀರಾಗುತ್ತಾರಷ್ಟೆ!
ಹಸಿದು ಕುದುರೆಯೇರಿದ ಬಾಲ್ಯಕ್ಕೆ,
ಕಿತ್ತ ಲಗಾಮೇ ಸಾಥಿ!

ಬಡವನ ಹಸಿವಿಗೆ ಸಾವಿರ ಬಾಯಿ!
ಇವಳು ಒಂದಿಲ್ಲೊಂದು
ಬಾಯಿಗೆ ಗಂಜಿ ಹುಯ್ಯುತ್ತಲೇ ಇರಬಹುದು,
ಅವಳಮ್ಮ ಕಾಯಿಲೆಯಿಂದ
ಮೂಲೆ ಹಿಡಿದಿರಬಹುದು,
ಅಪ್ಪ ಕುಡಿದು ಬಡಿಯಬಹುದು,
ತಮ್ಮ-ತಂಗಿಯರು
ಅರೆಹೊಟ್ಟೆ ಉಣ್ಣಬಹುದು,
ಇವಳು ಅವರಿಗೆಲ್ಲಾ ಗಂಜಿ ಹುಯ್ದು,
ತನ್ನ ಹೊಟ್ಟೆಗೆ ತಣ್ಣೀರು ಬಟ್ಟೆ ತಟ್ಟಬಹುದು!
ಮತ್ತೆ ಬೆಳಗೆದ್ದೊಡನೆ
ಅದೇ ರಸ್ತೆಗಳು, ಟ್ರಾಫಿಕ್ಕು ಸಿಗ್ನಲ್ಗಳು!

ಅವಳ ಬೆವರಿಗೆ
ಒಂದು ಅಂಕಿಯ ಮುಂದೆ ಸಾವಿರಾರು
ಸೊನ್ನೆಗಳ ಸುತ್ತಿ ಅದರ ಮುಂದೆ
ರೂಪಾಯಿ ಬರೆದಷ್ಟು ಬೆಲೆಯಿರಬಹುದು,
ಏಕೆಂದರೆ ಅದು ಕೆಳಗೆ ಬಿದ್ದ
ಜಾಗವೆಲ್ಲಾ ಸುಟ್ಟುಹೋಗುತ್ತದೆ!
ಒಮ್ಮೊಮ್ಮೆ ಅದರೊಳಗೆ ಬೆವರಷ್ಟೆ ಇರದೆ
ಬಿಸಿಯುಸಿರು, ಕಣ್ಣೀರು, ಹತಾಶೆ,
ಕಾಮುಕರ ಕಣ್ಣಳತೆ-ಕೈಯಳತೆಗಳೂ ಇರುತ್ತವೆ!
ಅಸುಗೂಸನ್ನಾದರೂ ಬಿಟ್ಟಾವೆಯೇ ಇವು?
ಎಂಬ ವಾಕರಿಕೆಯೂ ಇರಬಹುದು!

ಅವಳು ಪ್ರತಿ ಸಿಗ್ನಲ್ನಲ್ಲೂ,
ಒಬ್ಬರ ಬಳಿಯಲ್ಲದಿದ್ದರೆ,
ಮತ್ತೊಬ್ಬರ ಬಳಿ, ಅವರಲ್ಲವೆಂದರೆ
ಮತ್ತಿನ್ನೊಬ್ಬರ ಬಳಿ
ತೆರಳುವುದನ್ನು ನೋಡಿದ್ದೇನೆ!
ಯಾವುದೋ ಒಂದು ಕಾರು ತೂರಿದ
ಕಡೆಗೆ ಬಿಡುಗಣ್ಣು ಬಿಟ್ಟು
ನೋಡುವುದನ್ನು ನೋಡಿದ್ದೇನೆ!
ಸಾಕಷ್ಟು ವಿಫಲ ಯತ್ನಗಳ
ನಡುವೆಯೂ ನಗು ಮಾಸುವುದಿಲ್ಲ,
ಆ ಹೂವಿನದು, ಆ ಹುಡುಗಿಯದು!
ಆ ನಿರಂತರ ಭರವಸೆಗೆ ಏನನ್ನಬಹುದು?
ಯೋಚಿಸಿ ಕೂತ ನನಗೆ,
ಫ್ಯಾನ್ ನ ಗಾಳಿ ಕೂಡ ಬೆವರಿಸುತ್ತದೆ!

ಆ ಹುಡುಗಿ ನಾಳೆಯೂ ಸಿಗಬಹುದು,
ನಾಡಿದ್ದೂ ಸಿಗಬಹುದು,
ಆಚೆ ನಾಳೆಯೂ ಕೂಡ,
ಗುಲಾಬಿಗೂ, ಕೆಂಪಿಗೂ ಬಿಕರಿಯಾಗುವ
ತಾಕತ್ತಿರುವವರೆಗೂ
ಸಿಗುತ್ತಲೇ ಇರಬಹುದು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಅಂತರ್ಜಾಲ

ಇಲ್ಲಿ ಕೆಂಪು ಎಂಬುದು ’ಕನಸುಗಳು’ ಎಂಬರ್ಥದಲ್ಲಿ ಬಳಕೆಯಾಗಿದೆ.

Sunday 24 November 2013

ನಾಮಕರಣಕ್ಕೊಂದು ಹೆಸರು!


ಪ್ರೀತಿಗೆ ಹೆಸರು
ಬರೆದಿದ್ದೇನೆ,
ಶ್ವಾಸ ತುಂಬಿ
ಉಫ್ಫೆಂದು
ಊದೇ ಗೆಳತಿ,
ಹೃದಯ ಬಡಿಯಬೇಕಿದೆ!

ಕಣ್ಣ ಕಣ್ಣೊಳಿಟ್ಟು
ನೋಡೇ ಗೆಳತಿ,
ಅಸ್ಪಷ್ಟ ಚಿತ್ರಗಳು
ಸುಸ್ಪಷ್ಟವಾಗಿ
ಮೂಡಿಕೊಳ್ಳಲಿ
ಕಣ್ಣುಕೂಡಿ ಕುಣಿಯಬೇಕಿದೆ!

ಒಮ್ಮೆ ಸ್ಪರ್ಷಿಸು
ಮಗಧೀರನನ್ನು
ಮೀರಿಸುವ
ಪ್ರೇಮಿಯಾಗಿ,
ಜನ್ಮಜನ್ಮಾಂತರಕೂ
ಕಾದು ಕೂರಬೇಕಿದೆ!

ನಿನ್ನ ಹೆಸರ
ಎದೆಯ ಮೇಲೆ
ಕೆತ್ತಿ ಹೋಗು,
ನನ್ನ ಪ್ರೀತಿಯ
ನಾಮಕರಣಕ್ಕೆ
ನಿನ್ನ ಮೊಹರು ಬೇಕಿದೆ!

- ಪ್ರಸಾದ್.ಡಿ.ವಿ.

’ಟೈಂ ಪಾಸ್ ಕವಿತೆ’  ಸುಮ್ನೆ ಓದಿಬಿಡಿ!
ಚಿತ್ರಕೃಪೆ: ಗೂಗಲ್ ಅಂತರ್ಜಾಲ

Sunday 17 November 2013

ಟೀಕಿಸಲೆಂದೇ ಟೀಕಿಸುವವರಿಗೆ!


ಸಚಿನ್ ಗೆ ’ಭಾರತ ರತ್ನ’ ಕೊಟ್ಟದ್ದು ಅಗತ್ಯವಿಲ್ಲದಿರಬಹುದೇನೋ, ಏಕೆಂದರೆ ಕ್ರೀಡೆಗೆ ಸಂಬಂಧಿಸಿದ ಪರಮೊಚ್ಛ ಗೌರವ ’ಖೇಲ್ ರತ್ನ’ವಿದೆ ಎಂದು ಹೇಳುವವರ ಮಾತಿನ ತಳಹದಿಗಳೇ ನಂಗೆ ಅರ್ಥವಾಗ್ತಿಲ್ಲ. ’ಭಾರತ ರತ್ನ’ವನ್ನು ಕ್ರೀಡಾ ಕ್ಷೇತ್ರಕ್ಕೆ ವಿಸ್ತರಿಸಬಹುದೆಂದು ಕಳೆದ ವರ್ಷವೇ ತಿದ್ದುಪಡಿಯಾಗಿದೆ. ಆದ್ದರಿಂದ ಕ್ರೀಡೆಯನ್ನೂ ಒಳಗೊಂಡಂತೆ ದೇಶದ ನಾಗರೀಕನಿಗೆ ಕೊಡಬಹುದಾದ ಪರಮೋಚ್ಛ ಗೌರವ ’ಭಾರತ ರತ್ನ’ವಾಗುತ್ತದೆ!

ಇನ್ನು ’ಭಾರತ ರತ್ನ’ ಪ್ರಶಸ್ತಿಗೆ ಪರಿಗಣಿಸಲು ಸಚಿನ್’ನ ಬಾದ್ಯತೆಯ ಪ್ರಶ್ನೆ. ಸಚಿನ್ ತನಗೆ ’ಭಾರತ ರತ್ನ’ ಕೊಡಿ ಎಂದು ಸರ್ಕಾರದ ಹಿಂದೆ ಹಿಂದೆ ಓಡಿರಲಿಕ್ಕಿಲ್ಲ. ಅದು ಅವರ ಜಾಯಮಾನವೂ ಅಲ್ಲ. ಅಷ್ಟು ಸಾಕು ಆ ಅರ್ಹತೆ ಗಳಿಸಿಕೊಳ್ಳಲು! ಇನ್ನೂ ಆತ ’ಬಹುರಾಷ್ಟ್ರೀಯ ಕಂಪೆನಿ’ಗಳ ಜೇಬು ತುಂಬಿಸಿದ, ಹಣದಾಹಿ ಎಂಬ ಅಪವಾದ. ದುಡ್ಡು ಮಾಡಿದವರೆಲ್ಲ ಹಣದಾಹಿಗಳಲ್ಲ! ಆತ ತನ್ನ ಆಟದ ಹೆಮ್ಮಯೆಂಬಂತೆ ಮೆರೆದು, ವಿಶ್ವಕ್ಕೆ ಕ್ರಿಕೇಟ್ ನ ರಾಯಬಾರಿ ಎಂಬಂತೆ ಆಡಿ ತೋರಿಸಿದವ. ತನ್ನ ಕ್ರೀಡೆಯಲ್ಲಿ ಅತ್ಯುನ್ನತ ಶಿಖರವೇರಿದವ. ಇನ್ನೇನು ಸಾಧಿಸಲು ಉಳಿದಿತ್ತು ಕ್ರಿಕೇಟ್ ನಲ್ಲಿ ಅವನಿಗೆ? ಸೋ ಅವನು ಕ್ರಿಕೇಟ್ ನಲ್ಲಿ ಸಲ್ಲಿಸಿದ ಸೇವೆಯನ್ನು ’ಭಾರತ ರತ್ನ’ ಪ್ರಶಸ್ತಿಗೆ ಪರಿಗಣಿಸುವ ಅರ್ಹತೆ ಆತನಿಗಿತ್ತು.

ಇನ್ನೂ ’ಬಹುರಾಷ್ಟ್ರೀಯ ಕಂಪೆನಿ’ಗಳು ಎಂದು ತಂಪು ಪಾನೀಯದ ಪೆಪ್ಸಿ, ಕೋಲಾಗಳನ್ನಷ್ಟೇ ಕರೆದದ್ದು? ಬಹುರಾಷ್ಟ್ರೀಯ ಕಂಪೆನಿಗಳೆಂದರೆ ಬಹುರಾಷ್ಟ್ರಗಳಲ್ಲಿ ತನ್ನ ನೆಲೆಯನ್ನು ಹೊಂದಿರುವ ಎಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳು, ಪೆಪ್ಸಿ-ಕೋಲಗಳಷ್ಟೆ ಅಲ್ಲ. ಆತ ಪೆಪ್ಸಿ-ಕೋಲಗಳಿಗಲ್ಲದೆ ಭಾರತೀಯ ಮೂಲದ ಅನೇಕ ಉತ್ಪನ್ನಗಳಿಗೂ ರಾಯಭಾರಿಯಾಗಿದ್ದ ಎನ್ನುವುದು ಎಲ್ಲರ ನೆನಪಿನಲ್ಲಿದ್ದರೆ ಸಾಕು! ಈ ತಂಪು ಪಾನೀಯಗಳ ಉದ್ಯಮ ಕಾರ್ಯ ನಿರ್ವಹಿಸುವುದಾದರೂ ಹೇಗೆ? ಪೆಪ್ಸಿ-ಕೋಲಗಳ ಬ್ರಾಂಡ್ ನೇಮ್ ಇಲ್ಲದಿದ್ದರೆ ಆ ತಂಪು ಪಾನೀಯಗಳು ಮಾರುಕಟ್ಟೆಯಲ್ಲಿ ಉಳಿಯಲೂ ಸಾಧ್ಯವಿಲ್ಲ! ಈ ಸಂದರ್ಭದಲ್ಲಿ ಟೋರಿನೋ ಮುಂತಾದ ಪೆಪ್ಸಿ ಬ್ರಾಂಡ್ ನೇಮ್ ಇಲ್ಲದ ತಂಪು ಪಾನೀಯಗಳಿಗೆ ಒದಗಿದ ದುಃಸ್ಥಿತಿಯನ್ನು ಎಲ್ಲರೂ ನೆನೆಯಬಹುದು. ಈ ಪರಿಸ್ಥಿತಿಗೆ ಕಾರಣ ಪೆಪ್ಸಿ-ಕೋಲ ಕಂಪೆನಿಗಳೇ ವಿನಃ ಸಚಿನ್ ಅಲ್ಲ ಎಂಬುದು ಎಲ್ಲರೂ ಒತ್ತತಕ್ಕಂಥದ್ದು.

ಸಚಿನ್ ಕ್ರಿಕೇಟ್ ನಲ್ಲಿ ಸಲ್ಲಿಸಿದ, ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗಮನಿಸುವುದಾದರೆ, ಆತ ೨೪ ವರ್ಷಗಳಿಂದ ತನ್ನ ಫಾರ್ಮ್ ನಲ್ಲಿ ಸ್ಥಿರತೆ ಕಾಯ್ದುಕೊಂಡು, ದೇಶದ ಹೆಸರನ್ನು ವಿರಾಜಮಾನವಾಗಿ ಹಾರಿಸಿದವ. ಸಚಿನ್ ಆಡಿದ್ದು ತನ್ನದೇ ಸ್ವಾಯತ್ತತೆ ಹೊಂದಿರುವ ಬಿ.ಸಿ.ಸಿ.ಐ ಎಂಬ ಸಂಸ್ಥೆಗೇ ಹೊರತು ಭಾರತಕ್ಕಾಗಿಯಲ್ಲ ಎನ್ನುವ ಮಾತು ಹಾಸ್ಯಾಸ್ಪದವೆನಿಸುತ್ತದೆ ನನಗೆ. ಸಚಿನ್ ನ ಫೇರ್’ವೆಲ್ ನಲ್ಲಿ ಆತ ಹೇಳಿಕೊಂಡದ್ದು "ಇಟ್ಸ್ ಮೈ ಡ್ರೀಂ ಟು ಪ್ಲೇ ಫಾರ್ ಇಂಡಿಯಾ ಅಂಡ್ ಐ ಹ್ಯಾವ್ ಲೀವ್ಡ್ ಇಟ್ ಫಾರ್ 24 ಇಯರ್ಸ್" ಮತ್ತು "ಇಟ್ಸ್ ಅವರ್ ಪ್ರಿವಿಲೇಜ್ ಅಂಡ್ ಪ್ರೈಡ್ ಟು ಪ್ಲೇ ಫಾರ್ ಇಂಡಿಯಾ". ಇಲ್ಲಿ ಇಂಡಿಯಾದ ಬದಲಾಗಿ ಆತ ಬಿ.ಸಿ.ಸಿ.ಐ ಎಂದು ಬಳಸಲಿಲ್ಲ! ತಮ್ಮದು ಸ್ವಾಯತ್ತತೆಯ ಸಂಸ್ಥೆ ಎಂದು ಘೋಷಿಸಿಕೊಂಡದ್ದು ಬಿ.ಸಿ.ಸಿ.ಐ ನ ದುರಾಸೆಯಿಂದಲೇ ಹೊರತು, ಸಚಿನ್ ನ ದುರಾಸೆಯಿಂದಲ್ಲ.

ಕ್ರಿಕೇಟ್ ಅನ್ನು ಒಲಂಪಿಕ್ ನಲ್ಲಿ ಸೇರಿಸಿದ್ದರೆ ಧ್ಯಾನ್ ಚಂದ್, ಮಿಲ್ಖಾ ಸಿಂಗ್ ಮತ್ತಿತರ ಮಹಾನ್ ಆಟಗಾರರು ಮಾಡಿರುವ ಸಾಧನೆಯಷ್ಟೇ ಸಚಿನ್ ಕೂಡ ಮಾಡಿರುತ್ತಿದ್ದ. ೨೪ ವರ್ಷ ಆಡಿದವನಿಗೆ ಅದು ಸಾಧ್ಯವಾಗುತ್ತಿರಲಿಲ್ಲ ಎಂಬುದು ತಳವಿಲ್ಲದ ವಾದ! ಆತ ತನ್ನ ಆಟದಿಂದಷ್ಟೇ ಅಲ್ಲದೆ, ತನ್ನ ವ್ಯಕ್ತಿತ್ವದಿಂದಲೂ ಎಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾನೆ ಎನ್ನುವುದು ಒಪ್ಪತಕ್ಕಂಥ ವಿಷಯ. ಅಂದ ಮಾತ್ರಕ್ಕೆ ಧ್ಯಾನ್ ಚಂದ್, ಮಿಲ್ಖಾ ಸಿಂಗರ ಸಾಧನೆಯನ್ನು ನಾನು ಅಲ್ಲೆಗೆಳೆಯುತ್ತಿಲ್ಲ, ಸಚಿನ್ ಗಿಂಥ ಮೊದಲು ಅವರಿಬ್ಬರಿಗೆ ಕೊಟ್ಟಿದ್ದರೂ ನನಗೆ ಸಂತೋಷವಾಗುತ್ತಿತ್ತು. ಆದರೆ ಸಚಿನ್ ಗೆ ಕೊಟ್ಟಿದ್ದರಲ್ಲಿ ಯಾವುದೇ ತಪ್ಪೂ ನನಗೆ ಕಾಣುವುದಿಲ್ಲ, ಕಾಂಗ್ರೇಸ್ ನವರ ಆಷಾಢಭೂತಿತನದ ರಾಜಕೀಯ ನಡೆಯೊಂದನ್ನು ಬಿಟ್ಟು! ಆ ರೀತಿ ನೋಡುತ್ತಾ ಹೋದರೆ ’ಭಾರತ ರತ್ನ' ಪ್ರಶಸ್ತಿಯ ’ತಮ್ಮ ಅಧಿಕಾರಾವಧಿಯ ಸಂದರ್ಭದಲ್ಲೇ ಪ್ರಶಸ್ತಿ ಪಡೆದ ಇಂದಿರಾ ಗಾಂಧಿ’ ಮತ್ತು ’ಸರ್ದಾರ್ ವಲ್ಲಭಬಾಯಿ ಪಟೇಲರೊಂದಿಗೆ ೧೯೯೧ ರಲ್ಲಿ ಪ್ರಶಸ್ತಿ ಪಡೆದ ರಾಜೀವ್ ಗಾಂಧಿ’ ಈ ಎರಡು ಸಂದರ್ಭಗಳು ಹಾಸ್ಯಾಸ್ಪದವೂ, ವಿಷಾದನೀಯವೂ ಅನ್ನಿಸುತ್ತದೆ!

- ಪ್ರಸಾದ್.ಡಿ.ವಿ.

Thursday 14 November 2013

ಕೊಡಲಾಗದುಡುಗೊರೆ!


ನಿನಗೆಂದು ಕೊಡಲು
ಎತ್ತಿಟ್ಟ ಹೂವು ಬಾಡಿದೆ!
ಚೆನ್ನಿತ್ತು, ಚೆಲುವಿತ್ತು,
ಕೆಂಪಿತ್ತು, ಅರಳಿತ್ತು!
ನಿನ್ನ ಮುಡಿ ಸೇರದಿದ್ದರೂ,
ಉಡಿ ಸೇರದಿದ್ದರೂ,
ಕೈ ಸೇರಿದ್ದರೂ ಸಾಕಿತ್ತು,
ತಾನೂ ನಗುತಿತ್ತು!
ಬಾಡಿದ ಹೂವ ಅರಳಿಸಬೇಕು,
ನಗು ಬೇಕು ನನ್ನೆದೆಗೆ!
ಪ್ರೀತಿಯೇ ದಿಕ್ಕೆನಗೆ!

ನನ್ನ ಅಂಗೈ ಹಿಡಿದ ನಿನ್ನ
ಬೆರಳ ಗುರುತುಗಳ
ಮುದ್ದಿಸಿ ಎದೆಗಾನಿಸಿಕೊಂಡಿದ್ದೇನೆ,
ನೀನು ಕೇಳಬೇಕವುಗಳ
ಪಿಸುನುಡಿಯ,
ಹಾಲನ್ನು ಜೇನಿಗೆ ಬೆರೆಸಿ
ಗಟಗಟನೆ ಕುಡಿದಂತೆನಿಸುತ್ತದೆ!
ಸ್ವಲ್ಪವಾದರೂ ಕಹಿಯಿಲ್ಲ,
ಒಗರಿಲ್ಲ, ಹುಳಿಯಂತೂ ಮೊದಲಿಲ್ಲ!
ಸಿಹಿಯೊಂದೇ ಉಳಿದಿದೆ
ನಿನ್ನ ಸವಿಗಲ್ಲದಂತೆ!

ಹೇಳದೆ ಉಳಿದ ನೂರು ಮಾತಿವೆ
ಜೊತೆಯಾಗಿ, ಕೇಳದೆ
ಉಳಿದ ಹಲವಾರು ಪ್ರಶ್ನೆಗಳಿಗೆ!
ಉಸಿರು ಬಿಗಿಹಿಡಿದು
ನುಡಿದು ಬಿಡುವ ಆತುರವಿಲ್ಲ,
ಉತ್ತರ ಕೇಳಿ
ತಿಳಿದುಬಿಡುವ ಆವೇಗವಿಲ್ಲ!
ಉಳಿದದ್ದು ಉಳಿದುಬಿಡಲಿ,
ಸವಿನೆನಪ ಕುರುಹಾಗಿ!
ಋಣ ಉಳಿದರೆ ಉಳಿಯಲಿ,
ನಿನ್ನದೇ ಉಸಿರ ಸುಳಿಯಲಿ!

ಪಾಪಕ್ಕೆ ಪುಣ್ಯ ಜೋಡಿಸುವ
ಗೆಳತಿ ನೀನು!
ಕನಸು ಕಂಡು ಪಾಪ ಮಾಡುವೆ ನಾನು,
ಅವುಗಳಲ್ಲುಳಿದು
ಪಾಪ ತೊಳೆಯುವೆ ನೀನು!
ಆದರೆ ಕಮಲವದನೆ,
ಹಾಲುಗಲ್ಲದ ರಾಣಿ,
ಅತಿಲೋಕ ಸುಂದರಿ ಏನಲ್ಲ!
ನೀನು ಕಡಲೊಳಗಿನ ಮುತ್ತು,
ನಾನದನ್ನು ಕಾಯುವ ಕಪ್ಪೆಚಿಪ್ಪು!

ಇಷ್ಟೆಲ್ಲಾ ಭಾವಗಳ ನಿನಗಾಗೇ ಬೆಸೆದು,
ಕಾಗದದಿ ಪದಗಳ ಮರೆಯಲ್ಲಿ ಹೊಸೆದು,
ಹುಟ್ಟುಹಬ್ಬಕ್ಕೆ ಉಡುಗೊರೆಯ
ಕೊಡಬೇಕು ನಾನು!
ಬರೆಯುತ್ತಿದ್ದ ಲೇಖನಿಯ
ಮಸಿಯದು ಮುಗಿದಿದೆ,
ಇದ್ದ ಒಂದೇ ಹಾಳೆಯೂ ಗಾಳಿಗೆ ಹಾರಿದೆ!
ಮಸಿ ತುಂಬಬೇಕು, ಹಾಳೆಯೂ ಬೇಕು,
ಕೊಡಲಾಗದೇನೋ ಗೆಳತಿ ನಿನಗೆ,
ಕಾಯಬೇಡವೆ, ಬರಲಾಗದುಡುಗೊರೆಗೆ!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Friday 8 November 2013

ಬೆಳಕು ಬೆತ್ತಲು!


ಬೆತ್ತಲಾಗಬೇಕು ನಾನು,
ಅಂಜಿಕೆಗಳುಳಿಯದಂತಹ
ಹೊಳಪ ಬೆತ್ತಲು!

ಬೆತ್ತಲೆಂದರೆ,
ಕಪ್ಪು ಕತ್ತಲೆಯ ಬೆತ್ತಲಲ್ಲ,
ಪಚ್ಚೆ ಬಿಳಿಯ ಬೆಳಕ ಬೆತ್ತಲು,
ತೆರೆದುಕೊಂಡಷ್ಟೂ
ಬರಿದಾಗುವಂತಹ ಒಡಲು,
ಮರು ಕೃಷಿಗೆ
ಫಲವತ್ತಾಗುವ ಬಯಲು!

ಬೆತ್ತಲೆಂದರೆ,
ಸಂಚಿಯಿಸಿಕೊಂಡ
ಕರ್ಮಗಳ ಹೊಳೆಯಲ್ಲಿ
ಹುಣಸೆ ತೊಳೆದು,
ಹುಳಿ ಇಂಗಿದ ಹುಣಸೆಯ ಜುಂಗಲ್ಲಿ
ಬೆಳಕ ತೊಳೆದು,
ಬೆತ್ತಲನ್ನು ಬೆಳಕಿಗೂ, ಬೆಳಕನ್ನು ಬೆತ್ತಲೆಗೂ
ಆರೋಪಿಸಿಬಿಡುವ ಕ್ರಿಯೆ, ಪ್ರಕ್ರಿಯೆ!

ಬೆತ್ತಲೆಂದರೆ,
ಪ್ರೇಮದೊಂದಿಗೆ ಕಾಮವು,
ಕಾಮದೊಂದಿಗೆ ಪ್ರೇಮವೂ ಜಿದ್ದಿಗೆ ಬಿದ್ದು,
ನಗ್ನತೆಯೊಳಗೆ ಪ್ರೇಮಕ್ಕೆ ಬೆವರ ಗುರುತು!
ಆವೇಶವಿಳಿದ ಮೇಲೂ
ಕಣ್ಣುಗಳು ಕೂಡಿಕೊಂಡ ತುಟಿಗಳ ಬೆಸುಗೆ,
ನನ್ನೊಳಗಿನ ನಗ್ನತೆಯನ್ನು ಒಪ್ಪಿಕೊಂಡು
ಅಪ್ಪಿಕೊಳ್ಳುವ ಪ್ರೇಯಸಿಯ ಸಲುಗೆ!

ಬೆತ್ತಲೆಂದರೆ,
ಅದು ಬೆಳಕು, ನಾನು ನನಗೂ,
ಇತರರಿಗೂ ಉತ್ತರಿಸುವಗತ್ಯವನ್ನೇ
ಉಳಿಸದ ಬೆಳ್ಳಿ ಬೆಳಕು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ