ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 31 December 2013

ಭಾವದ ಬಟ್ಟಲು!


ಕಡಲಾಗಬಯಸಿದ್ದೇನೆ,
ಭಾವದ ಒಡಲಾಗ ಬಯಸಿದ್ದೇನೆ,
ವರುಷವೆಲ್ಲವೂ ಸುರಿದ ಹರ್ಷಕ್ಕೆ,
ಆವಿಯಾಗಿ, ಮೋಡವಾಗಿ,
ಒಲವಾಗಿ ಸುರಿದ ಮಳೆಗೆ,
ಬಟ್ಟಲಾಗಬಯಸಿದ್ದೇನೆ,
ತುಂತುರಾಗಿ ತೊಟ್ಟಿಕ್ಕುತ್ತೇನೆ!

ಅವಳ ನೆನಪಿಗೆ, ಕಡೆಯ ಮುತ್ತಿಗೆ,
ಮುಂಗುರುಳ ಸುರುಳಿಗೆ,
ಮಳೆಗೆ ಕೊಡೆ ಹಿಡಿದ ಕೋಪಕ್ಕೆ,
ತೆರೆದಿಟ್ಟರೆ ಹಬೆಯಾಡುವ ಘಮಕ್ಕೆ,
ಇನ್ನು ಎಷ್ಟೆಷ್ಟೆಕ್ಕೊ,
ಒಂದು ವರ್ಷ ಕಳೆದಿದೆ...
ಎಣಿಸಿ ೩೬೫ ಆದರೂ ಮುತ್ತಿಟ್ಟಿದ್ದೇನೆ,
ಮಳೆ ಹನಿಯ ಹೆಸರಲ್ಲಿ!

ಮರೆತಂತೆಯೇ ಆಗಿದೆ,
ಉಸಿರಾಡಿ, ಹೊಸ ಜೀವದಂತೆ ಮಿಸುಕಾಡಿ,
ಹೊಟ್ಟೆಯೊಳಗೆ ಚಿಟ್ಟೆ ಕುಣಿದು,
ಕಣ್ಣು ಕಣ್ಣು ನೋಟ ಬೆಸೆದು,
ಹೂವ ರಸಕೆ ತುಟಿ ನೆನೆಸಿ,
ಪರಾಗದ ಹೆಸರ್‍ಹೇಳಿ
ನನ್ನೊಳು ನಿನ್ನನರಸಿ...
ಎಲ್ಲವನ್ನೂ ಮತ್ತೆ ಬದುಕುತ್ತೇನೆ!
ಹೊಸ ವರ್ಷದ ಹೆಸರ್‍ಹೇಳುತ್ತೇನೆ!

ಮಳೆಗಾಲಕ್ಕೆ ಒಟ್ಟಿಗೆ ನೆನೆದು,
ಚಳಿಗಾಲಕ್ಕೆ ಬಿಗಿಯಪ್ಪುಗೆ ಬಿಗಿದು,
ಬೇಸಿಗೆಯ ಬೆಸುಗೆಗೆ,
ಬೆವರಾಗಿಬಿಡೋಣ...
ವಸಂತಕ್ಕೆ ಹೂ ಬಿಟ್ಟು,
ಹೊಸ ಕನಸುಗಳ ಹಡೆಯೋಣ!

- ಪ್ರಸಾದ್.ಡಿ.ವಿ.

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :-)

Wednesday 11 December 2013

ಬೋಳು ಮರದ ಕಾಗೆ!


ಕಾಗೆ ಅರಚುವುದಕ್ಕೊಂದು
ಹೊತ್ತುಂಟೆ, ಗೊತ್ತುಂಟೆ?!
ಕೋಳಿ ಕೂಗುವುದು ಬೆಳಗಿಗೆ,
ನವಿಲ ನರ್ತನ ಇಳಿ ಸಂಜೆಗೆ,
ಇದ್ಯಾಕೆ ಕೂಗುವುದೋ
ಅಷ್ಟೆತ್ತರದಿ ಕುಳಿತು?!
ಲೈಟು ಕಂಬವೋ,
ಮುರಿದ ಕೊಂಬೆಯೋ,
ಅದನೇರಿ ಕುಳಿತಿದೆ ಇದು,
ಕೂಗಲಿಕ್ಕೆ - ಕಾ ಕಾ ಕಾ...
ಕರ್ಕಶಕ್ಕೆ ಕಿವಿ ಗಡಚಿಕ್ಕುತ್ತದೆ!

ಅದು ಕೂಗುವಾಗಲೂ
ಒಂಥರದ ಹೀಯಾಳಿಕೆ,
ಕೂಗಿದ್ದು ಕಾಗೆಯಲ್ಲವೇ?!
ಅದು ಬೆಕ್ಕಾಗಿಯೋ,
ದೈತ್ಯ ಸರಿಸೃಪವಾಗಿಯೋ,
ಮತ್ತಾವುದೋ ಅಪರೂಪದ
ಜೀವಿಯಾಗಿಯೋ ಹುಟ್ಟಬೇಕಿತ್ತು!
ಬೆಕ್ಕಿಗೆ ನಿಂತು ಹೋಗುವ ಜನ,
ಅಪರೂಪದ ಜೀವಿಯ
ತಳಿಗಳ ಶ್ರೇಯೋಭಿವೃದ್ಧಿಗೆ ಹಣ
ಸುರಿಯುತ್ತಾರೆ!
ಅಳಿದ ಸರಿಸೃಪಗಳ
ಅಧ್ಯಯನಕ್ಕೆಂದು
ಇತಿಹಾಸವಗೆಯುತ್ತಾರೆ!
ಇದಕ್ಕೆ ಕಾಗೆಯೆಂಬ
ಮೂದಲಿಕೆಯೊಂದೇ ಗಟ್ಟಿ!

ಇದೇಕೋ, ಹೇಗೋ
ಆ ಮೂದಲಿಕೆಗೆ ತಗುಲಿಕೊಂಡಿದೆ!
ಇತಿಹಾಸವನ್ನೆಲ್ಲಾ
ಅದರ ಮಸ್ತಿಷ್ಕಕ್ಕೆ ಆರೋಪಿಸಿ
ಪುಂಗಿ ಊದಿದರೂ
ಅದು ಕಾ ಕಾ ಎಂದೇ ಅರಚುತ್ತದೆ!
ಈ ಕಾಗೆಯೋ
ಅಗುಳನ್ನೂ ಹಂಚಿ ತಿನ್ನುವ ಸಂಘ ಜೀವನ,
ಕೋಗಿಲೆಯ ಮೊಟ್ಟೆಗೂ
ಕಾವು ಕೊಡುವ ತ್ಯಾಗಕ್ಕೆ ಹೆಸರಾಗಬಹುದಿತ್ತು!
ಕಪ್ಪಾಗಿತ್ತೆಂಬ ಕಾರಣಕ್ಕೆ
ಕರೆಂಟು ತಂತಿ ತಗುಲಿ ಕರಕಲಾಯ್ತು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಫಣೀಂದ್ರ.ಹೆಚ್.

Sunday 8 December 2013

ಅವಳು: ಮಗು ಮರೆಯದ ಮೊದಲ ತೊದಲು!


ನಾನೊಬ್ಬ ಅಮಾಯಕ,
ಪ್ರೀತಿಯೆನ್ನುವುದೇ ಗೊತ್ತಿರದಷ್ಟು ಸಭ್ಯ!
ಎಂದುಕೊಂಡು ಎದೆ ಮುಟ್ಟಿಕೊಂಡೆ,
ಅವಳ ಹೆಸರೇ ಮಿಡಿಯುತ್ತಿದೆ!
ಭಯವಾಗುತ್ತದೆ, ಬೆಚ್ಚುತ್ತೇನೆ,
ಬಿಳುಚಿಕೊಳ್ಳುತ್ತೇನೆ
ನನ್ನ ಮೈಯ್ಯಿಂದ ಮನವ ಕಸಿದು
ತೊಲೆಗೆ ಜೋಲಿ ಕಟ್ಟಿ
ಅದರಲ್ಲಿ ನನ್ನ ಮನವ ತಟ್ಟಿ
ಜೋಗುಳ ಹಾಡುತ್ತಾಳೆ ನನ್ನವಳು!

ನೀಲಿ ದಾವಣಿಯ ಲಂಗ ತೊಟ್ಟು,
ಅಂಗಾಸಿ ಬಳಸಿ,
ಇಂಗಾಸಿ ಬಳುಕುವ ಬಳ್ಳಿ ನನ್ನವಳು,
ನೋಡಲು ಸ್ವಲ್ಪ ಸಪೂರವಾದರೇನು?
ನನ್ನ ಕಣ್ಣು ತುಂಬಾ ತುಂಬಿದ್ದಾಳೆ!
ನೋಡಲು ಎರಡು ಕಣ್ಣು ಸಾಲದೆ,
ಇನ್ನೆರಡನ್ನು ಎರವಲು ಪಡೆದಿದ್ದೇನೆ!

ಹೆಣ್ಣು ಕಣ್ಣ ಕಾಡಿಗೆ ಹಚ್ಚಿ,
ಹಣೆಗೆ ಬಿಂದಿಯನಿಟ್ಟು,
ಪ್ರಶಾಂತವಾಗಿ ನಗಬೇಕೆಂದು
ಹೇಳಿಕೊಟ್ಟವಳು ಅವಳು,
ಹೀಗಿಲ್ಲದೆ ಹುಡುಗಿಯರನ್ನು
ಹೆಣ್ಣೆಂದು ಕರೆಯಲಾರೆ...
ನನ್ನನ್ನು ದೂಷಿಸಬೇಡಿ,
ಇದು ಅವಳು ಹೇಳಿಕೊಟ್ಟ ಸಂಸ್ಕಾರ!
ಅವಳ ಮೇಲಿನ ಪ್ರೀತಿಗೆ ನಾ
ನನ್ನ ಮೇಲ್ ಹೇರಿಕೊಂಡ ಆಚಾರ-ವಿಚಾರ!

ಅಲ್ಲಲೆದು ಇಲ್ಲಲೆದೆ,
ಇಲ್ಲಿಲ್ಲೆ ಸುಳಿದಾಡುತ್ತಾಳೆ!
ನಾನು ಅವಳ ಮುಂದೆ ಹಲ್ ಕಿರಿದು
ಕಣ್ಣೊಳಗೆ ಕುಡಿನೋಟ ಬೆಸೆಯಲು
ಪಟ್ಟ ಪಾಡು ಅಷ್ಟಿಷ್ಟಲ್ಲ!
ಹೀಗೆ ಹೇಳುವಾಗೆಲ್ಲ ಅವಳನ್ನು
ಮನಸಾರೆ ದ್ವೇಷಿಸಬೇಕೆನಿಸುತ್ತದೆ!
ಆದರೇನು ಮಾಡಲಿ,
ಆ ದ್ವೇಷ ನನ್ನ ಆನೆಭಾರದ
ಪ್ರೀತಿಯ ಮುಂದೆ
ಗುಲಗಂಜಿಯಷ್ಟೂ ತೂಗುವುದಿಲ್ಲ!

ನನ್ನೀ ಹೃದಯ ಲಬ್-ಡಬ್ ಎಂದು
ಬಡಿದಿದ್ದರೆ, ಬಡಿಯುತ್ತಿದ್ದರೆ
ಅದು ಅವಳ ದೆಸೆಯಿಂದ!
ಹೃದಯಕ್ಕೆ ಬಡಿತ ಕಲಿಸಿ,
ಮನಸಿಗೆ ಹಾರಾಟ ಕಲಿಸಿ,
ಮಾತಿಗೆ ಮೌನ ಕಲಸಿ ಹೋಗಿದ್ದಾಳೆ,
ಮುಂದೆ ಮನೆ ತುಂಬುವವಳೊಬ್ಬಳು
ಬರಬಹುದು... ಆದರೂ
ಮನಸು ಮಾತ್ರ ಮರೆಯುವುದಿಲ್ಲವಳ,
ಮಗು ಮರೆಯದ ಮೊದಲ ತೊದಲಿನಂತೆ!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ