ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 31 December 2013

ಭಾವದ ಬಟ್ಟಲು!


ಕಡಲಾಗಬಯಸಿದ್ದೇನೆ,
ಭಾವದ ಒಡಲಾಗ ಬಯಸಿದ್ದೇನೆ,
ವರುಷವೆಲ್ಲವೂ ಸುರಿದ ಹರ್ಷಕ್ಕೆ,
ಆವಿಯಾಗಿ, ಮೋಡವಾಗಿ,
ಒಲವಾಗಿ ಸುರಿದ ಮಳೆಗೆ,
ಬಟ್ಟಲಾಗಬಯಸಿದ್ದೇನೆ,
ತುಂತುರಾಗಿ ತೊಟ್ಟಿಕ್ಕುತ್ತೇನೆ!

ಅವಳ ನೆನಪಿಗೆ, ಕಡೆಯ ಮುತ್ತಿಗೆ,
ಮುಂಗುರುಳ ಸುರುಳಿಗೆ,
ಮಳೆಗೆ ಕೊಡೆ ಹಿಡಿದ ಕೋಪಕ್ಕೆ,
ತೆರೆದಿಟ್ಟರೆ ಹಬೆಯಾಡುವ ಘಮಕ್ಕೆ,
ಇನ್ನು ಎಷ್ಟೆಷ್ಟೆಕ್ಕೊ,
ಒಂದು ವರ್ಷ ಕಳೆದಿದೆ...
ಎಣಿಸಿ ೩೬೫ ಆದರೂ ಮುತ್ತಿಟ್ಟಿದ್ದೇನೆ,
ಮಳೆ ಹನಿಯ ಹೆಸರಲ್ಲಿ!

ಮರೆತಂತೆಯೇ ಆಗಿದೆ,
ಉಸಿರಾಡಿ, ಹೊಸ ಜೀವದಂತೆ ಮಿಸುಕಾಡಿ,
ಹೊಟ್ಟೆಯೊಳಗೆ ಚಿಟ್ಟೆ ಕುಣಿದು,
ಕಣ್ಣು ಕಣ್ಣು ನೋಟ ಬೆಸೆದು,
ಹೂವ ರಸಕೆ ತುಟಿ ನೆನೆಸಿ,
ಪರಾಗದ ಹೆಸರ್‍ಹೇಳಿ
ನನ್ನೊಳು ನಿನ್ನನರಸಿ...
ಎಲ್ಲವನ್ನೂ ಮತ್ತೆ ಬದುಕುತ್ತೇನೆ!
ಹೊಸ ವರ್ಷದ ಹೆಸರ್‍ಹೇಳುತ್ತೇನೆ!

ಮಳೆಗಾಲಕ್ಕೆ ಒಟ್ಟಿಗೆ ನೆನೆದು,
ಚಳಿಗಾಲಕ್ಕೆ ಬಿಗಿಯಪ್ಪುಗೆ ಬಿಗಿದು,
ಬೇಸಿಗೆಯ ಬೆಸುಗೆಗೆ,
ಬೆವರಾಗಿಬಿಡೋಣ...
ವಸಂತಕ್ಕೆ ಹೂ ಬಿಟ್ಟು,
ಹೊಸ ಕನಸುಗಳ ಹಡೆಯೋಣ!

- ಪ್ರಸಾದ್.ಡಿ.ವಿ.

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :-)

1 comment:

  1. ಹೊಸ ವರುಷದ ಹೊಸಿಲಲಿ ಬ್ಲಾಗ್ ಪುಷ್ಕಳವಾಗಲಿ.

    ಕವಿತೆಯ ಆರಂಭವೇ ಆಶಾದಾಯಕ. ಹೊಸವರ್ಷಕ್ಕೆ ನಿರ್ಧಾರಗಳ ಮಹಾಪೂರದಂತಿರುವ ಹೂರಣ. ಇಷ್ಟವಾಯಿತು.

    ReplyDelete