ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 18 January 2014

ಕವಿತೆಯೆಂದರೆ?!


ಕವಿತೆಯೆಂದರೆ ನಿನ್ನಂತೆಯೇ ಇರುವುದು,
ಬಾರೆನೆಂದ ಕಡೆ ಬರುವುದು,
ಬರುವೆನೆಂದ ಕಡೆ ಬಾರದು,
ಮುನಿಸಿಕೊಂಡು ಮಾತಿಗೆ ನಿಂತು,
ಮಾತು ಮಾತಿಗೂ ಮುನಿಸಿಕೊಳ್ಳುವುದು,
ಥೇಟ್ ನಿನ್ನಂತೆಯೇ,
ಪಿಳಿ ಪಿಳಿ ಕಣ್ಣು ಬಿಡುವುದು,
ಮಾಡುವುದೆಲ್ಲವ ಮಾಡಿ ಸುಮ್ಮನಿರುವುದು!

ಕಣ್ಣಿಗೆ ಕಾಡಿಗೆ ತೀಡಿ,
ಅರಳು ತುಟಿಗೆ ನಗು ಮುಡಿಸಿ,
ಗಲ್ಲಕ್ಕಿಟ್ಟ ದೃಷ್ಟಿಬೊಟ್ಟು,
ಊರ ಮಾರಿಯ ಕಣ್ಣು ಬೀಳದಿರಲಿ,
ನಟಿಕೆ ತೆಗೆದು ಕಣ್ಣಿಗೊತ್ತಿಕೊಂಡೆ,
ಕಂಡವರ ಕಣ್ಣು ಹೊಳೆದು,
ಕವಿತೆ ಎದೆಗಿಳಿವುದು...
ನನ್ನವೆಂದುಕೊಂಡ ಯೋಚನೆಗಳಿಗೆ
ನನ್ನವಳೇ ರೂಪದರ್ಶಿ!
ಕವಿತೆಯೆಂದರೆ ಹೀಗೇ ಇರುವುದು,
ತುಟಿ ಕಚ್ಚಿ, ಓರೆ ನೋಟ ಬೀರಿ
ನಿನ್ನಂತೆಯೇ ಬಳಿಗೆ ಕರೆವುದು!

ನನ್ನವಳೆಂದು ಪಾರಮ್ಯ ಮೆರೆಯುವಂತಿಲ್ಲ,
ನೀನೇ ಎಂದು ಪರವಶನಾಗಬೇಕು,
ಅರ್ಥಾತ್ ಗುಲಾಮನಾಗಬೇಕು,
ಪ್ರೀತಿಯಲ್ಲಿ ಬೀಳುವವರೆಗೂ ನಾನೆಂದರೆ ನಾನು,
ಬಿದ್ದಮೇಲೆ ನಾನೂ ನೀನು, ನೀನೂ ನೀನು!
ಅವಸರಿಸಿದರೆ ಶೀಘ್ರ ಸ್ಖಲನ,
ಅನುಮಾನಿಸಿ ಅವಮಾನಿಸಿದರೆ
ಕಡೆವರೆಗೂ ಉಳಿಯುವ ಹಸ್ತ ಮೈಥುನ!
ಕವಿತೆಯೆಂದರೆ ನಿನ್ನಂತೆಯೇ ಇರುವುದು,
ಸಿಗದೆ ಸಿಕ್ಕು, ಸಿಕ್ಕೂ ಸಿಗದಂತೆ
ಮರೀಚಿಕೆಯ ಬೆನ್ನೇರಿಬಿಡುವುದು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ.