ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 30 April 2016

ಹೊಸತನದ ಭಾವಗಳು!


ಈ ಮನೆಗೀಗಾಗಲೇ
ಐವತ್ತು ವರ್ಷ ಸಂದಿರಬಹುದು,
ನಡುಮನೆಯ ತೊಲೆಗಳಿಗೆ
ಅಜಾನುಬಾಹು ತಾತನ
ತೋಳುಗಳ ಆಧಾರ,
ಅದೋ ಅಲ್ಲಿ ನೋಡಿ
ಆ ಕಡೆಯ ಕೊಂಬೆಗೆ
ದೊಡ್ಡಪ್ಪನ ಉಸಿರು,
ಈ ಕಡೆಯ ಜಂತಿಗೆ ಅಪ್ಪಜಿಯ
ಜೀವದ ಜೀವದ ಕಸುವು!

ಇದರ ಇತಿಹಾಸ ದೊಡ್ಡದು.. ಬಗೆದಷ್ಟೂ
ಬದುಕೇ ಸಿಕ್ಕುತ್ತದೆ,
ಎಳೆ ವಯಸ್ಸಿಗೆ ಓಡಲು
ಶುರು ಮಾಡಿದ ನಾಲ್ಕು ಕಂದಮ್ಮಗಳ
ಬದುಕು, ಬವಣೆ, ತಬ್ಬಲಿತನಗಳು,
ನಿಟ್ಟುಸಿರು, ಹಸಿವು, ಅಳಲು,
ಎಷ್ಟೋ ಕಾಲ ಹೊಟ್ಟೆ ತಣ್ಣಗಿಟ್ಟ
ಹಿಟ್ಟು ಮತ್ತು ಬಸಿದ ಗಂಜಿ,
ಎಲ್ಲವನ್ನೂ ಇಂಗಿಕೊಂಡಿದೆ...
ಮತ್ತೆ ತಲೆ ಎತ್ತಿ ನಿಂತಿದೆ,
ಮುಂದೇನೆಂದು ತಿಳಿಯದಾದಾಗ
ಇಲ್ಲಿಗೆ ಬಂದು ನಿಲ್ಲುವುದು ಸೂಕ್ತ,
ಬಸವಳಿದು ಬಂದವನ ಬಿಗಿದಪ್ಪುವ
ಮಮತೆಯ ಭಾವವೊಂದು ಇಲ್ಲಿ ಅವ್ಯಕ್ತ!

ಇಷ್ಟು ಕಾಲ ಮುಗಿಲೆತ್ತರಕ್ಕೆ
ಕಾಣುತ್ತಿದ್ದವು,
ಹೆಂಚಿನ ಛಾವಣಿ, ಜಂತಿಗಳು, ರಿಪೀಸುಗಳು,
ಇಂದು ಭುಜಕ್ಕೊರಗುತ್ತಿರಬಹುದು,
ಸಂಚಿಯಿಸಿಕೊಂಡ ಶಕ್ತಿಯನ್ನು
ನೊಗಕ್ಕೆ ಕೊಡಬೇಕು;
ಮತ್ತೊಂದು ತಲೆಮಾರನ್ನು ಸ್ವಾಗತಿಸುವ ಕನಸಿಗೆ
ಮೈದಳೆದು ನಿಂತ ಮನೆಯ ಸಂಭ್ರಮ,
"ಮದುಮಗ ಒಬ್ಬೊಬ್ಬನೆ ಅಡ್ಡಾಡಬಾರದು ಮಗ.."
ಎಂದು ಕರೆದ ಅಜ್ಜಿ,
"ಹೂಂ..." ಎಂದು ಹೊರಗೆ ಹೊರಟ ನಾನು,
ತಲೆಮಾರುಗಳನ್ನು ಜಂಗಮವಾಗಿಸಿ
ತಾನು ಸ್ಥಾವರವಾಗಿ ನಿಂತಿದೆ,
ಸಂತನಾರೆಂಬ ಪ್ರಶ್ನೆಗೆ ಉತ್ತರವಿಲ್ಲ?

--> ಮಂಜಿನ ಹನಿ

ಚಿತ್ರಕೃಪೆ: ನಂದೇ ಫೋಟೋಗ್ರಫಿ