ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 29 March 2014

ನಾ ಕಂಡ ’ಉಳಿದವರು ಕಂಡಂತೆ!’


ಒಂದು ಸಿನೇಮಾಕ್ಕೆ ತನ್ನದೇ ಆದ ಸಿದ್ಧ ಸೂತ್ರಗಳಿರುತ್ತವೆ. ಕಲಾತ್ಮಕವಾದ ಸಿನೇಮಾಗಳು, ಮನೋರಂಜನೆಯನ್ನು ಕೇಂದ್ರವಾಗಿಟ್ಟುಕೊಂಡ ಸಿನೇಮಾಗಳು, ಆಕ್ಷನ್, ಕಾಮೆಡಿ, ಥ್ರಿಲ್ಲರ್, ಲವ್-ರೊಮ್ಯಾನ್ಸ್, ಹೀಗೆ… ಸೃಜನಾತ್ಮಕ ನಿರ್ದೇಶಕ ಇವೆಲ್ಲವನ್ನೂ, ದುಡ್ಡು ಮಾಡುವ ಸಿನೇಮಾಗಳನ್ನಷ್ಟೇ ಮಾಡಬೇಕೆಂಬ ಒತ್ತಡಗಳನ್ನೂ ಮೀರಿ ಯೋಚಿಸುತ್ತಾನೆ. ತನ್ನ ಸಿನೇಮಾದ ಮೂಲಕ ಇಂಡಸ್ಟ್ರಿಗೆ ಹೊಸ ತರಹದ ಪ್ರೇಕ್ಷಕವರ್ಗವನ್ನು ಹುಟ್ಟಿಹಾಕಲು ಪ್ರಯತ್ನಿಸುತ್ತಾನೆ. ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮಿಸ್ಸಿಂಗ್ ಲಿಂಕ್ ಮತ್ತಿತರ ವೈಜ್ಞಾನಿಕ ಭೂಮಿಕೆಗಳ ಮೂಲಕ ವಿಭಿನ್ನವಾದ ಓದುಗ ವರ್ಗವನ್ನು ಸೃಷ್ಟಿಸಲು ಶ್ರಮಿಸಿದ್ದರು.  ಇಂಥದೇ ಸೃಜನಾತ್ಮಕ ಕೆಲಸ ಹೊಸ ತರಹದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸುವುದು.

ಆ ಮಟ್ಟಿಗೆ ನೋಡುವುದಾದರೆ, ’ಉಳಿದವರು ಕಂಡಂತೆ’ ದಿಲೈಟ್’ಫುಲ್ ವಾಚ್ ಮತ್ತು ವಿಶುವಲ್ ಎಕ್ಸಲೆನ್ಸ್. ಇಂಥದ್ದೊಂದು ಪರಿಕಲ್ಪನೆ ಸ್ಯಾಂಡಲ್’ವುಡ್ ನ ಮಟ್ಟಿಗೆ ತೀರ ಹೊಸದು. ಒಂದು ಘಟನೆಯನ್ನು ಮತ್ತು ಅದಕ್ಕೆ ತಳುಕು ಹಾಕಿಕೊಂಡ ಹಲವಾರು ಘಟನೆಗಳನ್ನು ಐದಾರು ಆಯಾಮಗಳಲ್ಲಿ ಹೇಳುತ್ತಾ ಹೋಗುತ್ತದೆ ಕಥೆ. ಅವುಗಳನ್ನೆಲ್ಲಾ ಬಂಧಿಸುವ ಪ್ರತಿಬಂಧಕ ಶಕ್ತಿ, ರೆಜೀನಾ(ಶೀತಲ್ ಶೆಟ್ಟಿ) ಎಂಬ ಪತ್ರಕರ್ತೆ. ಆ ಕಥೆಯನ್ನು ನಿರೂಪಿಸುವಾಗ ಮೂಲ ಕಥೆಗೆ ಧಕ್ಕೆಯಾಗದಂತೆ ಹೇಳುವುದು ಹೇಗೆ ಎಂಬ ಅವಳ ಜಿಜ್ಞಾಸೆಗೆ ಅವಳು ಕಂಡುಕೊಳ್ಳುವ ಉತ್ತರ: ತನ್ನ ಯಾವುದೇ ಇನ್ಟ್ಯೂಷನ್’ಗಳು ಮತ್ತು ಕನ್’ಕ್ಲೂಶನ್’ಗಳು ಕಥೆಯ ಭಾಗವಾಗದಂತೆ ಎಚ್ಚರ ವಹಿಸುವುದು ಮತ್ತು ಪ್ರತಿಯೊಂದು ಮೈನ್ಯೂಟ್ ಅಂಶಗಳನ್ನೂ ಬಿಡದಂತೆ ದಾಖಲಿಸುವುದು. ಈ ಉತ್ತರಗಳು ಬೆಳೆದಂತೆ ರೂಪುಗೊಳ್ಳುವ ಕಥೆಯೇ, ’ಆಸ್ ಸೀನ್ ಬೈ ದ ರೆಸ್ಟ್’ ಅರ್ಥಾತ್ ಉಳಿದವರು ಕಂಡಂತೆ.

ರಘು(ರಿಷಬ್ ಶೆಟ್ಟಿ) ಮತ್ತು ರಿಚ್ಚಿ(ರಕ್ಷಿತ್ ಶೆಟ್ಟಿ) ಬಾಲ್ಯದ ಗೆಳೆಯರು. ಗೆಳೆಯನಿಗಾಗಿ ಒಬ್ಬನ ಕೊಲೆ ಮಾಡುವ ರಿಚ್ಚಿ ರಿಮ್ಯಾಂಡ್ ಹೋಮ್ ಸೇರುತ್ತಾನೆ, ಆ ಕೊಲೆಯಿಂದ ಹೆದರಿದ ರಘು ಮುಂಬೈ ಪಾಲಾಗುತ್ತಾನೆ. ಮುಂಬೈ ನ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು, ಕ್ರಮೇಣ ಒಂದು ಸ್ಮಗ್ಲಿಂಗ್ ಗ್ಯಾಂಗ್ ಸೇರಿಕೊಳ್ಳುತ್ತಾನೆ. ಅಮ್ಮನ ಪ್ರೀತಿ, ಊರಿನ ಮಮತೆ, ಗೆಳೆಯ ಎಲ್ಲರನ್ನೂ ಬಿಟ್ಟು ಹದಿನೈದು ವರ್ಷಗಳ ಕಾಲ ಮುಂಬೈ ನಲ್ಲಿ ಓಡುತ್ತಾನೆ. ಅದೇ ಸಂದರ್ಭದಲ್ಲಿ ಅಚಾನಕ್ ಆಗಿ ಸಿಗುವ ಐಶ್ವರ್ಯದ ಪ್ರತೀಕವಾದ ’ಅದು’ ಅವನ ಕೈ ಸೇರುತ್ತದೆ. ತಮ್ಮ ಗುಂಪಿಗೆ ತಿಳಿಯದಂತೆ ಅದನ್ನು ಅಪಹರಿಸಿ ತನ್ನ ಹುಟ್ಟೂರಾದ ಮಲ್ಪೆಗೆ ಬರುತ್ತಾನೆ. ಆ ನಿಧಿಯನ್ನು ಪಡೆಯುವ ರೇಸ್ ನಲ್ಲಿರುವ ಎಲ್ಲರನ್ನೂ ಅವನಿಗೇ ಅರಿವಿಲ್ಲದೆ ಎದಿರುಗೊಳ್ಳುತ್ತಾನೆ. ತಾಯಿಯ ಪಾತ್ರದಲ್ಲಿ ತಾರರವರ ನಟನೆ ಮನೋಜ್ಞವಾಗಿದೆ ಮತ್ತು ಅಮ್ಮ ಮಗನ ಸೆಂಟಿಮೆಂಟ್ ಬಹಳ ಅಚ್ಚುಕಟ್ಟಾಗಿ ವರ್ಕೌಟ್ ಆಗಿದೆ.

ಇತ್ತ ಗೆಳೆಯನಿಗಾಗಿ ಕೊಲೆ ಮಾಡಿ ೮ ವರ್ಷ ರಿಮ್ಯಾಂಡ್ ಹೋಮ್ ನಲ್ಲಿ ಕಳೆಯುವ ರಿಚ್ಚಿ ಒಬ್ಬ ತಿಕ್ಕಲು ಸ್ವಭಾವದ ಗ್ಯಾಂಗ್ ಸ್ಟರ್ ಆಗಿ ಬೆಳೆಯುತ್ತಾನೆ. ಮಲ್ಪೆಯ ಬಂದರುಗಳಲ್ಲಿ ಮೀನುಗಾರಿಕೆ ಮತ್ತು ಸ್ಮಗ್ಲಿಂಗ್ ಮಾಡಿಕೊಂಡಿರುವ ಶಂಕರ್ ಪೂಜಾರಿ ಸಹಜವಾಗೇ ರಿಚ್ಚಿಯ ಒತ್ತಾಸೆಯಾಗಿ ನಿಲ್ಲುತ್ತಾನೆ. ತನ್ನ ಮಗನಂತೆ ಬೆಳೆಸುತ್ತಾನೆ. ಇಷ್ಟರೆಲ್ಲದರ ನಡುವೆಯೂ ಹದಿನೈದು ವರ್ಷಗಳಿಂದಲೂ ಒಮ್ಮೆಯಾದರೂ ತನ್ನನ್ನು ನೋಡಲು ಬಾರದ ಗೆಳೆಯನ ಮೇಲೆ ಸಣ್ಣದಾದ ಅಸಹನೆಯೂ ಅವನನ್ನು ಬಾಧಿಸುತ್ತಿರುತ್ತದೆ. ಮಲ್ಪೆಗೆ ಗುಟ್ಟಾಗಿ ಹಿಂದಿರುಗಿರುವ ಗೆಳೆಯನನ್ನು ಮತ್ತೆ ಭೇಟಿ ಮಾಡುವ ರಿಚ್ಚಿಯೂ ಹೇಗೆ ಆ ಸಂಪತ್ತಿನ ಹಿಂದೆ ಬಿದ್ದಿರುತ್ತಾನೆ ಎಂಬುದು ಕಥೆಯ ರೋಚಕ ಅಂಶಗಳಲ್ಲೊಂದು.

ಇಷ್ಟೆಲ್ಲಾ ಸೆಂಟಿಮೆಂಟ್ ಮತ್ತು ಥ್ರಿಲ್ಲರ್ ಗಳ ನಡುವೆ ಒಂದು ನವಿರಾದ ಪ್ರೇಮಕಥೆಯೂ ಇದೆ. ಅದರ ನಾಯಕನೇ ಮುನ್ನ(ಕಿಶೋರ್) ಅರ್ಥಾತ್ ಪ್ರಣಯರಾಜ. ಬೋಟ್ ರಿಪೇರಿ ಮಾಡುವ ಮ್ಯಾಕಾನಿಕ್ ಆದ ಮುನ್ನ ಬಾಲಣ್ಣ(ಅಚ್ಯುತ್)ನ ತಂಗಿ(ಯಜ್ಞಾ ಶೆಟ್ಟಿ)ಯ ಪ್ರೇಮ ಪಾಶಕ್ಕೆ ಬಿದ್ದಿರುತ್ತಾನೆ. ಅವಳ ನಗುವಿಗೆ ಹಗುರಾಗುವ ಅವನು, ’ಫೀಲಿಂಗ್ಸ್’ಗಳಲ್ಲೇ ತೇಲಾಡುತ್ತಾನೆ. ಒಮ್ಮೆಯೂ ಅವಳೊಂದಿಗೆ ಮಾತನಾಡುವುದಿಲ್ಲ! ತನಗೇ ಅರಿವಿಲ್ಲದೆ ಈ ಥ್ರಿಲ್ಲರ್ ಗಳ ಮಧ್ಯೆ ಸೇರಿಕೊಳ್ಳುತ್ತಾನೆ. ಮುಂದೆ ಕಥೆ ಮೂರು ಕೋಲ್ಡ್ ಬ್ಲಡ್ಡೆಡ್ ಮರ್ಡರ್ ಗಳಿಗೆ ಸಾಕ್ಷಿಯಾಗುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಅಂದ್ರೆ: ಯಾವ ಪಾತ್ರಗಳಿಗೂ ಯಾಕೆ, ಯಾರಿಗಾಗಿ, ಏನು ಮಾಡುತ್ತಿದ್ದೇವೆ ಎಂಬ ಕಲ್ಪನೆಯೇ ಇಲ್ಲದಂತೆ ಪ್ರತಿಯೊಂದು ಘಟನೆಗಳೂ ನಡೆದುಹೋಗುತ್ತವೆ. ಅದನ್ನು ಸಿನೇಮಾದಲ್ಲಿ ನೋಡಿದರೆನೇ ಮಜ.

ಲೈವ್ ಸೌಂಡ್ ಮಿಕ್ಸಿಂಗ್ ಸೂಪರ್ ಆಗಿದೆ, ಕಣ್ಣಿಗೆ ಹಬ್ಬವೆನ್ನಿಸುವಂಥ ಕ್ಯಾಮೆರಾ ವರ್ಕ್, ಅದ್ಭುತವೆನ್ನಿಸುವ ಮೇಕಿಂಗ್ ಮತ್ತು ಹುಲಿ ಕುಣಿತ ಖುಷಿ ಕೊಟ್ಟವು. ಎಲ್ಲರ ಆಕ್ಟಿಂಗ್ ಚೆನ್ನಾಗಿದೆ. ತಾರ, ಅಚ್ಯುತ್ ಮತ್ತು ಕಿಶೋರ್ ರವರ ಅಭಿನಯ ಮತ್ತು ರಿಚ್ಚಿಯ ಮ್ಯಾನರಿಸಂ ಬಹಳ ಇಷ್ಟ ಆಯ್ತು. ಇನ್ನು ನೆಗೆಟೀವ್ ಅಂಶಗಳಿಗೆ ಬರುವುದಾದರೆ, ಚಿತ್ರಕತೆ ಸ್ವಲ್ಪ ಸ್ಲೋ ಮತ್ತು ಲ್ಯಾಗ್ ಆದಂತೆನ್ನಿಸುತ್ತದೆ. ಪ್ರೇಕ್ಷನ ಮನಸ್ಸಿನಲ್ಲಿ ಕನ್’ಫ್ಯೂಶನ್ ಗಳನ್ನು ರೆಜಿಸ್ಟರ್ ಮಾಡಿಸುವ ಭರದಲ್ಲಿ ತುಂಬಾ ರಿಸ್ಕ್ ತೆಗೆದುಕೊಂಡಂತನ್ನಿಸುತ್ತದೆ. ಪ್ರೇಕ್ಷಕ ಒಮ್ಮೆ ತನ್ನ ಇಂಟರೆಸ್ಟ್ ಕಳೆದುಕೊಂಡರೆ ಸಿನೇಮಾ ಅವನಿಗೆ ರೀಚ್ ಆಗದೆ ಇರಬಹುದಾದ ಸಾಧ್ಯತೆಯಿದೆ. ಒಂದಷ್ಟು ಡೈಲಾಗ್ ಗಳನ್ನು ಅರ್ಥ ಮಾಡಿಕೊಳ್ಳಲು ಮಂಗಳೂರು ಭಾಗದವರಲ್ಲದ ಪ್ರೇಕ್ಷಕರು ಕಷ್ಟಪಡಬೇಕಾಗಬಹುದು. ಒಟ್ಟಾರೆಯಾಗಿ,  ಸಿನೇಮಾವನ್ನು ನೋಡಿದ ಪ್ರೇಕ್ಷಕನಲ್ಲಿ ಇಂಗ್ಲೀಷ್ ಸಿನೇಮಾ, ’ವಾಂಟೇಜ್ ಪಾಯಿಂಟ್’ ನ ಶೇಡ್ ಕಾಣಿಸಬಹುದು. ಇನ್ನೊಂದು ಕುತೂಹಲದ ಸಂಗತಿ ಎಂದರೆ ನಾನು ಕಂಡಂತೆ ಸಿನೇಮಾದಲ್ಲಿ ತೇಜಸ್ವಿಯವರ ’ಜುಗಾರಿ ಕ್ರಾಸ್’ ಕಾದಂಬರಿಯ ಶೇಡ್ ಕೂಡ ಕಾಣಿಸುತ್ತದೆ.  ’ಅದು’ ಮಾತ್ರ ಕೊನೆಗೂ ಏನೆಂದು ತಿಳಿಯಲಾಗದ್ದು ಸಿನೇಮಾ ಅಪೂರ್ಣವಾದಂಥ ಫೀಲ್ ಕೊಡುತ್ತದೆ. ನಾನು ಈ ಪ್ರಯೋಗಾತ್ಮಕ ಪರಿಕಲ್ಪನೆಗೆ ಮತ್ತು ರಕ್ಷಿತ್ ಶೆಟ್ಟಿಯ ಫಿಲ್ಮ್ ಮೇಕಿಂಗ್ ಗೆ 4/5(★★★★) ಕೊಡುತ್ತೇನೆ. I have become a fan of Rakshit shetty’s style of making a movie J


- ಮಂಜಿನ ಹನಿ

Tuesday 18 March 2014

ಕಾದ ನಿರೀಕ್ಷೆಗಳು!


ಮಾಯದೂರಿನ ರಾಜ
ಏಳು ಕೋಟೆಯ ದಾಟಿ,
ಬಂದೇ ಬರುವನು
ಜಾಜಿ, ಮೊಲ್ಲೆಯ ಹೊತ್ತು
ಕಾದ ಕದಪಿಗೆ ಮುತ್ತು
ತಂದೇ ತರುವನು...

ಕಾಡಿಗೆಯ ಕೊಳದೊಳಗೆ
ನಗುವ ನೈದಿಲೆ ಮೊಗ್ಗು
ನಿದ್ದೆಗೆಡಿಸುವ ನಲ್ಲನವನೆ?
ಏನೆಂದು ಹೆಸರಿಡಲಿ,
ಕನಸೂರ ದಾರಿಯಲಿ
ಕಂಡ ಚಂದ್ರನವನೆ...

ಕೈತುಂಬು ಬಳೆಗಳಿಗೆ,
ಹಣೆತುಂಬ ಸಿಂಧೂರ;
ಸಿಹಿಯಾದ ನಿದ್ದೆಯಲಿ
ಮದುವೆಯ ಕನಸೊಂದು ಬಿತ್ತು,
ಅಲ್ಲಿದ್ದವನೂ ಅವನೇ,
ಹೊನ್ನ ಮೂಗುತಿಗೆ ಕೆಂಪು ನತ್ತು!

ಹತ್ತು ಹಲ ಕನವರಿಕೆ
ಅವ ಕನಸೇರಿ ಬರುವಾಗ..
ನಿದ್ದೆಗೆಡಿಸುವ
ನಿರೀಕ್ಷೆಗಳಿಗೇನು ಕಮ್ಮಿ?
ಎಲ್ಲಿರುವ, ಹೇಗಿರುವ, ಒಂದಾದಮೇಲೊಂದು
ಬರುವವು ಪ್ರಶ್ನೆಗಳು ಚಿಮ್ಮಿ ಚಿಮ್ಮಿ...

- ಮಂಜಿನ ಹನಿ

ಚಿತ್ರಕೃಪೆ: ದೀಪಕ್.ಡಿ.
ರೂಪದರ್ಶಿ: ರಮ್ಯ.ಹೆಚ್.ಕೆ.

Wednesday 12 March 2014

ನೆರಳು ಬೆಳಕಿನ ಹಾದಿ!


ಕವಿತೆಯನ್ನು
ಹುಡುಕಿ ಹಿಡಿಯುವ
ಹಾದಿಗಳ್ಯಾವುವೂ
ಸಿಗುತ್ತಲೇ ಇಲ್ಲ...

ಎಲ್ಲಿ ಹಿಡಿಯುವುದು
ಮರಳುಗಾಡ ಮರೀಚಿಕೆಯ?
ಕಂಡಂತೆ ಕಾಣ್ವ
ಕಾಣದ ಭ್ರಮೆಯ?

ದೇವನಲ್ಲಿ ಹುಡುಕಲೆ
ವೈಚಾರಿಕತೆಯ ಬಿಂಬ?
ಪ್ರೇಮನಲ್ಲಿ ಹುಡುಕಲೆ
ಅಮೂರ್ತತೆಯ ಪ್ರತಿಬಿಂಬ?
ಸಾವಿನಲ್ಲಿ ಹುಡುಕಲು
ಆಕಾಶ ಮುಟ್ಟಿಹುದು
ಸಾವಿನಾಚೆಯ ಸೃಷ್ಠಿ ದಿಬ್ಬ!

ಕರಗುತ್ತಿವೆ ಪ್ರಯತ್ನಗಳು
ಪ್ರಶ್ನಾರ್ಥಕಗಳಲ್ಲಿ,
ಪೂರ್ಣವಿರಾಮಗಳು ಹಾಳಾಗಲಿ
ಅಲ್ಪವಿರಾಮಗಳಾದರೂ
ಬೇಡವೇ ದಣಿವಾರಿಸಿಕೊಳಲು?

ಕಣ್ಣಿಗೆ ಕಪ್ಪು ಕತ್ತಲೆ ಕಟ್ಟಿ
ಅಗಾಧತೆಗೆ ತಳ್ಳಿದ್ದಾರೆ,
ಸೂರ್ಯ ಹುಟ್ಟುವುದೂ
ಕಾಣುತ್ತಿಲ್ಲ,
ಚಂದಿರನ ನೆರಳೂ
ಮೈಮೇಲೆ ಬೀಳುತ್ತಿಲ್ಲ!

ನಿರ್ವಿಕಾರ ನಿರ್ಲಜ್ಜ
ಚೀತ್ಕಾರಗಳು ಚೀರುತ್ತವೆ,
ಯಾವಕ್ಕೂ
ಸವಿಯಾದ ಬೆಸುಗೆಯಿಲ್ಲ,
ನವಿರಾದ ಹೊಸುಗೆಯಿಲ್ಲ,
ಎದೆಯ ಮೇಲಣ
ಸಿವುರುಗಳಿಗೆ ಹಚ್ಚಲು
ತುಪ್ಪ ಸಿಗಲಿಲ್ಲ,
ಕೈಗೆ ಸಿಕ್ಕುವುದಲ್ಲ ಕವಿತೆ?
ಸಿಕ್ಕು ಸಿಕ್ಕಾಗಿ ಕುಕ್ಕುವುದು!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ