ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 28 May 2013

ನನ್ನ ದೇವರು!


ದೇವರು ಹುಟ್ಟುತ್ತಾನೆ
ನನ್ನೊಳಗೂ, ನಿನ್ನೊಳಗೂ,
ನಮ್ಮೆಲ್ಲರೊಳಗೂ
ದೇವರು ಹುಟ್ಟುತ್ತಾನೆ!
ಅವರವರ
ವ್ಯಾಖ್ಯಾನಗಳವರವರಿಗೆ!
ಒಬ್ಬರಿಗೆ ದೇವರು
ಗುಡಿಯಳೊಗವಿತು ಕುಳಿತರೆ,
ಮತ್ತೊಬ್ಬರಿಗೆ
ಮಸೀದಿಯ ನಾಲ್ಕು
ಗೋಡೆಗಳೊಳಗೆ ಜೀವಂತ!
ಮಗದೊಬ್ಬರಿಗೆ
ದೇವಾತ್ಮ ಶಿಲುಬೆಗೇರಿ
ಚರ್ಚಿನೊಳು ಬಂಧಿ!
ನನ್ನ ದೇವರು:
ಮಸೀದಿಯೊಳು ನೆಲೆ ನಿಂತ
ಯೇಸುವಿನ ಹೃದಯದೊಳು
ಶ್ರೀ ಕೃಷ್ಣ ತಾನಾಗಿದ್ದಾನೆ!
ಅಲ್ಲಿ ನಿಲ್ಲುವುದಷ್ಟೇ ಅಲ್ಲ
ನನ್ನ ಆತ್ಮನೊಳಗೂ
ಬೆರೆತುಬಿಟ್ಟಿದ್ದಾನೆ!
ನನ್ನನ್ನೀಗ ಕಾಡುವ ಪ್ರಶ್ನೆ:
ನಾನ್ಯಾವ ಧರ್ಮ?
ನನ್ನ ದೇವರಿಗೇನು ಹೆಸರು?

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

Saturday, 4 May 2013

ಸರಗೂರಿನ ಗುಮಾಸ್ತ!
ಸರಗೂರು ಎಂಬುದು ಪಟ್ಟಣಕ್ಕೆ ಪಟ್ಟಣವೂ ಅಲ್ಲದ, ಹಳ್ಳಿಗೆ ಹಳ್ಳಿಯೂ ಅಲ್ಲದ ಅವುಗಳೆರಡರ ಮಧ್ಯ ಇರುವ ಸಣ್ಣದೂ ಅಲ್ಲದ, ದೊಡ್ಡದೂ ಅಲ್ಲದ ಒಂದು ಊರು. ಸರಗೂರಿಗೆ ಆ ಹೆಸರು ಬಂದ ಬಗ್ಗೆ ಸಾಕಷ್ಟು ಕಥೆಗಳೂ, ಉಪಕಥೆಗಳೂ ಹುಟ್ಟಿಕೊಂಡಿದ್ದವು ಮತ್ತು ಅವುಗಳು ಅಲ್ಲಲ್ಲಿ ಪ್ರಚಲಿತದಲ್ಲಿಯೂ ಇದ್ದವು. ಅವುಗಳಲ್ಲಿ ಹಾವಿಗೆ ಸಂಬಂಧಪಟ್ಟಂಥ ಉಪಕಥೆಯೂ ಒಂದು. ’ಸರಗೂರಿನಲ್ಲಿ ಹಾವುಗಳ ಸಂಖ್ಯೆ ಅತ್ಯಧಿಕವಾಗಿತ್ತಂತೆ. ಅದು ಎಷ್ಟರಮಟ್ಟಿಗೆ ಎಂದರೆ ಆ ಊರಿನಲ್ಲಿದ್ದ ಜನರಿಗೂ, ಸರ್ಪಗಳಿಗೂ ಜನಗಣತಿಯನ್ನೂ, ಸರ್ಪಗಣತಿಯನ್ನೂ ಏರ್ಪಡಿಸಿದ್ದರೆ ಸರ್ಪಗಳ ಸಂಖ್ಯೆಯೇ ಅಧಿಕವಾಗಿ ಹಾವುಗಳೂ ತಮ್ಮ ಮೂಲಭೂತ ಹಕ್ಕುಗಳಾದ ತಮ್ಮ ಪ್ರತಿನಿಧಿಯನ್ನು ತಾವೇ ಚುನಾಯಿಸಿಕೊಳ್ಳುವ ಮತದಾನದ ಹಕ್ಕು, ದಿನವೂ ಹೊಟ್ಟೆ ತುಂಬುವಷ್ಟು ಮೊಟ್ಟೆಗಳು ಮತ್ತು ಅವುಗಳಿಗೇ ಪ್ರತ್ಯೇಕ ವಾಸಸ್ಥಳಗಳನ್ನು ಕೇಳಬಹುದೆಂಬ ಭಯ ಅಲ್ಲಿನ ಜನಪ್ರತಿನಿಧಿಗಳಲ್ಲಿ ಮನೆ ಮಾಡಿತ್ತಂತೆ! ಆ ರೀತಿಯ ಒಂದು ಸನ್ನಿವೇಶ ಸೃಷ್ಠಿಯಾದದ್ದೇ ಆದಲ್ಲಿ ಆ ಊರಿನಲ್ಲಿ ಅಲ್ಪಸಂಖ್ಯಾತರಾಗುವವರಿದ್ದ ಜನರು ಸರ್ಪಗಳಿಂದ ಆಳಿಸಿಕೊಳ್ಳುವುದೂ, ನಿರ್ಗತಿಕರಾಗುವ ಆಪಾಯವೂ ಇತ್ತಂತೆ. ಹೀಗೆ ಜನರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡಿದ್ದ ಹಾವುಗಳು ತಾವು ಹರಿದಾಡುವಾಗ ಸರ ಸರ ಎಂದೂ, ಜನರು ಗರ ಗರ ಎಂದೂ ಸುತ್ತುತ್ತಿದ್ದರಂತೆ. ಸರ ಗರ ಎಂದು ಸರಿದಾಡುವ ಸರ್ಪಗಳು ಮತ್ತು ಜನಗಳ ಊರು ಎಂಬ ಹೆಸರು ಕಾಲಕ್ರಮೇಣ ಹ್ರಸ್ವಗೊಂಡು ಸರಗೂರು ಎಂದಾಯ್ತಂತೆ. ಕಾಲಕ್ರಮೇಣ ಸರ್ಪಗಳು ಹೇಗೋ ಅವಶೇಷ ಹೊಂದಿದವಂತೆ! ಎಂಬುದೂ ಅಲ್ಲಲ್ಲಿ ಜನಜನಿತವಾದ ಕಥೆಯಾಗಿದೆ’.

ಇಂತಿಪ್ಪ ಸರಗೂರು ಎಂಬ ಊರು ಹೆಚ್ಚಲ್ಲದಿದ್ದರೂ ಒಂದಷ್ಟು ಅಭಿವೃದ್ಧಿ ಕಂಡು ಬಸ್ ವ್ಯವಸ್ಥೆಯನ್ನೂ, ಕೇಳುವವರೇ ದಿಕ್ಕಿಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ, ಆಗ ತಾನೇ ಅನುಮತಿ ಸಿಕ್ಕಿದ ಸರ್ಕಾರಿ ಶಾಲೆಯನ್ನೂ ಹೊಂದಿತ್ತು. ಆ ಸರ್ಕಾರಿ ಶಾಲೆಯಲ್ಲಿ ಬಹಳಷ್ಟಲ್ಲದಿದ್ದರೂ ಒಂದಷ್ಟು ವಿದ್ಯಾರ್ಥಿಗಳಿದ್ದರು ಮತ್ತು ಶಿಕ್ಷಕರೂ ಇದ್ದರು, ಒಂದರಿಂದ ಹತ್ತನೇ ತರಗತಿಯವರೆಗೂ ಪಾಠ ಪ್ರವಚನಗಳು ನಡೆಯುತ್ತಿದ್ದವಂತೆ ಎಂಬುದು ಖುದ್ದು ನೋಡದವರ ಉವಾಚ! ಇಂಥ ಶಾಲೆಗೆ ಗುಮಾಸ್ತನಾಗಿ ಬಂದವನೇ ಮಾದೇವ. ಮಾದೇವ ಮಧ್ಯ ವಯಸ್ಕನಾಗಿದ್ದು. ಸರಿಯಾದ ಸೂರಿಲ್ಲದ ಸರಗೂರಿನ ಶಾಲೆಯ ಗುಮಾಸ್ತನಾಗಿ ನೇಮಕಗೊಂಡಿದ್ದನ್ನೇ ಒಂದು ವೃತ್ತಾಂತವಾಗಿ ಬರೆಯಬಹುದು! ಆತ ಇದಕ್ಕೆ ಮೊದಲು ಪುರಾತತ್ವ ಇಲಾಖೆ, ಮೈಸೂರು ಮುನ್ಸಿಪಾಲಿಟಿ, ಮೂಡಾ, ಕಾಡ ಹೀಗೆ ಸಾಕಷ್ಟು ಸರ್ಕಾರಿ ಇಲಾಖೆಗಳಲ್ಲಿ ಅರೆಕಾಲಿಕ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದವನು. ಅರೆಕಾಲಿಕ ಹುದ್ದೆಯ ಅರೆಗಂಜಿ ಮತ್ತು ಅರೆ ಹೊಟ್ಟೆಯ ತಾಪದ ಅರಿವಿದ್ದ ಮಾದೇವ, ಸರಗೂರಿನ ಸರ್ಕಾರಿ ಶಾಲೆಯ ಗುಮಾಸ್ತನ ಹುದ್ದೆ ಖಾಯಂ ಆಗಬಹುದೆಂಬ ಆಸೆಯಿಂದ ತನ್ನೂರೇ ಆದ ಸರಗೂರಿಗೆ ಬಂದು ನೆಲೆಸಿದ್ದನು. ಸರ್ಪಗಳ ಶಾಪ ಹೊತ್ತಿದ್ದ ಸರಗೂರನ್ನು ಯಾರೂ ಅಪ್ಪದಿದ್ದ ಕಾರಣ, ಅದೇ ಊರಿನ ಓದಿದ ವಿದ್ಯಾವಂತರೂ ಅಲ್ಲಿ ನೆಲೆ ನಿಲ್ಲಲು ಇಚ್ಛಿಸದ ಕಾರಣ ಆ ಗುಮಾಸ್ತನ ಕೆಲಸ ಯಾವುದೇ ದೊಡ್ದ ಆತಂಕಗಳಿಲ್ಲದೆ ಮಾದೇವನಿಗೆ ಒಲಿದಿತ್ತು. ಆ ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ಸಣ್ಣಪ್ಪನ ಸಣ್ಣ ಇರುಸು ಮುರುಸನ್ನು ಹೊರತುಪಡಿಸಿ!

ಸಣ್ಣಪ್ಪನ ಈ ಇರುಸು ಮುರುಸಿಗೆ ಕಾರಣವಿಲ್ಲದೇನಿಲ್ಲ. ಸರ್ಕಾರದ ಸಾಕಷ್ಟು ಇಲಾಖೆಗಳಲ್ಲಿ ಸುಮಾರು ಹನ್ನೆರಡು ವರ್ಷಗಳಷ್ಟು ಮಣ್ಣು ಹೊತ್ತಿದ್ದ ಮಾದೇವನಿಗೆ ಸರ್ಕಾರದಿಂದ ಸಿಗುತ್ತಿದ್ದ ಸವಲತ್ತುಗಳು ಮತ್ತು ಅನುದಾನಗಳ ಬಗ್ಗೆ ಒಂದಷ್ಟು ಅರಿವಿತ್ತು. ತನ್ನೂರಿನಿಂದ ಯಾವುದೇ ವ್ಯಕ್ತಿ ಆ ರೀತಿಯ ಫಲಾನುದಾನಕ್ಕೆ ಅರ್ಹನಾಗಿದ್ದು ಮತ್ತು ಅವನು ಮಾದೇವನ ಬಳಿಗೆ ಹೋದರೆ. ಮಾದೇವ ಆತನಿಂದ ಯಾವುದೇ ಪ್ರತಿಫಲಾಪೇಕ್ಷೆಯನ್ನೂ ಬಯಸದೆ ಅವನಿಗೆ ಅರ್ಜಿ ಬರೆದುಕೊಟ್ಟು ಹೇಗೆ ಕೆಲಸ ಮಾಡಿಸಿಕೊಳ್ಳಬೇಕೆಂಬ ಅರಿವು ನೀಡಿ ಸಹಕರಿಸುತ್ತಿದ್ದನು ಮತ್ತು ಅರ್ಹನಾಗಿದ್ದೂ ಅನುದಾನ ಸಿಗಲಿಲ್ಲವಾದ ಪಕ್ಷದಲ್ಲಿ ಸಂಬಂಧಪಟ್ಟ ಇಲಾಖೆಗೆ ಮೂಗರ್ಜಿ ಗುಜರಾಯಿಸಿ, ಆ ಕೆಲಸ ಆಗುವವರೆಗೂ ಮಲಗುತ್ತಿರಲಿಲ್ಲ! ಇದರಿಂದಲೇ ಅವನಿಗೆ ಮೂಗರ್ಜಿ ಮಾದೇವ ಎಂಬ ಅನ್ವರ್ಥ ನಾಮವೂ ತಗಲಿಸಿಕೊಂಡಂತಿತ್ತು! ಇಂಥ ಉದಾತ್ತ ಗುಣಗಳಿಂದಲೇ ಅರೆಕಾಲಿಕ ಕೆಲಸದಲ್ಲಿದ್ದ ಮಾದೇವನ ಹೊಟ್ಟೆಯೂ ಅರೆಬರೆಯಾಗಿಯೇ ಇರುತ್ತಿತ್ತು! ತನ್ನ ಈ ರೀತಿಯ ವೃತ್ತಿಯಲ್ಲದ ಕೆಲಸಗಳೂ ಕೆಲವರಿಗೆ ರೊಟ್ಟಿ ಗಿಟ್ಟಿಸಬಲ್ಲವು ಎಂಬುದು ಮಾದೇವನಿಗೆ ಗೊತ್ತಿರಲಿಲ್ಲವೋ ಅಥವಾ ಆ ರೀತಿಯ ಕೆಲಸಗಳ ಮೂಲಕ ಹಣ ಗಳಿಸಲು ಪ್ರಯತ್ನಿಸಿದ್ದರೆ ಕೈಯ್ಯಲ್ಲಿದ್ದ ಅರೆಕಾಲಿಕ ಕೆಲಸವೂ ಕೈಬಿಡಬಹುದೆಂಬ ಭಯದಿಂದಲೋ ಅವುಗಳಿಂದ ಬಾಹ್ಯವಾಗಿ ಗಳಿಸಿಕೊಳ್ಳಬಹುದಾದ ಪಗಾರಕ್ಕೆ ಆತ ಆಸೆ ಪಡುತ್ತಿರಲಿಲ್ಲ. ಇಂತಿದ್ದ ಮಾದೇವ ತನ್ನ ಸಹಾಯದಿಂದ ಯಾರಿಗಾದರೂ ಕೆಲಸವಾದದ್ದು ತಿಳಿದರೆ, “ಮನುಷ್ಯ ಏನ್ಬೇಕಾದ್ರೂ ಮಾಡಿ ಹೊಟ್ಟೆ ತುಂಬುಸ್ಕೊಳ್ಳಲಿ ಆದರೆ ಒಬ್ಬರ ಮುಂದೆ ಕೈಯ್ಯೊಡ್ಡುವುದು ಮತ್ತು ತಲೆ ಹೊಡೆಯುವುದು ಮಾತ್ರ ಮಾಡಬಾರ್ದು. ಚೆನ್ನಾಗಿ ಬದ್ಕಿ ಬಾಳು…” ಎಂದು ಹರಸಿ ಕಳುಹಿಸುತ್ತಿದ್ದನು. ಇವನ ಈ ವೃತ್ತಾಂತವೆಲ್ಲಾ ಗೊತ್ತಿದ್ದ ಸಣ್ಣಪ್ಪನಿಗೆ, ಈ ಮಾದೇವನೇ ನಮ್ಮ ಶಾಲೆಗೆ ಗುಮಾಸ್ತನಾಗಿ ಬಂದರೆ ತಾನು ಅಲ್ಲಿನ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನೆಂದುಕೊಂಡು ಮಾಡುತ್ತಿರುವ ಅನಾಚಾರಗಳ ಬಗ್ಗೆ ಯಾವುದಾದರೂ ಇಲಾಖೆಗೆ ಮೂಗರ್ಜಿ ಬರೆದುಬಿಟ್ಟರೆ ತನ್ನ ಇಮೇಜೆಲ್ಲಾ ಹಾಳಾಗಿ, ತಾನು ಪದವಿ ಭ್ರಷ್ಟನಾಗಿಬಿಡಬಹುದೆಂಬ ಆತಂಕ ಕಾಡುತ್ತಿತ್ತು! ಇಷ್ಟಲ್ಲದೆ ಅವರಿಬ್ಬರ ಕುಟುಂಬಗಳ ನಡುವೆ ಒಂದಷ್ಟು ಹಳೆ ವೈಷಮ್ಯವೂ ಇತ್ತು!

ಮೊದಲೇ ಸರ್ಪಗಳ ಊರಿನವರಲ್ಲವೇ ವೈರವನ್ನೂ ಕೊರಳಿಗೇ ಕಟ್ಟಿಕೊಂಡು ಸುತ್ತುವವರು. ಸಣ್ಣಪ್ಪನ ಇರುಸು ಮುರುಸು ಎಷ್ಟಿತ್ತಪ್ಪ ಅಂದ್ರೆ ಆ ಇರುಸು ಮುರುಸು ದ್ವೇಷವಾಗಿ, ಅವನನ್ನು ಹೇಗಾದರೂ ಮಾಡಿ ಕೆಲಸದಿಂದ ಹೊರದಬ್ಬಬೇಕೆಂದು ಹವಣಿಕೆ ಶುರುವಿಟ್ಟುಕೊಂಡಿದ್ದನು. ಇಂಥ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಗುಮಾಸ್ತನಾಗಿ ಬಂದ ಮಾದೇವನಿಗೆ ಅದ್ಯಾವುದರ ಪರಿವೆಯೂ ಇರಲಿಲ್ಲ. ಖಾಯಂ ಕೆಲಸ ಸಿಕ್ಕ ಬಗ್ಗೆ ಖುಷಿಯಿತ್ತು. ತಾನಾಯ್ತು ತನ್ನ ಲೆಡ್ಜರ್ ಗಳು, ಮಕ್ಕಳ ಅಡ್ಮಿಶನ್ ರೆಕಾರ್ಡ್ಸ್’ಗಳು, ಎಲ್ಲಾ ಶಿಕ್ಷಕರ ಸ್ಯಾಲರಿ ಸ್ಲಿಪ್ಗಳು, ಇನ್ಕಂ ಟ್ಯಾಕ್ಸ್ ರೆಕಾರ್ಡ್ಸ್’ಗಳು ಮತ್ತು ಮುಂತಾದ ಕೆಲಸಗಳಾಯ್ತು ಎಂದು ಇದ್ದುಬಿಡುತ್ತಿದ್ದನು. ಜೊತೆ ಜೊತೆಯಲ್ಲಿಯೇ ಮೂಗರ್ಜಿಗಳು ಮತ್ತು ಸರ್ಕಾರಿ ಅರ್ಜಿಗಳನ್ನು ಬರೆದುಕೊಡುವ ಮುಖೇನ ತನ್ನ ಸಮಾಜಸೇವೆಯನ್ನೂ ಮುಂದುವರೆಸುತ್ತಿದ್ದನು! ಅವನ ಈ ಸಮಾಜಸೇವೆಯಿಂದ ಒಳಗೊಳಗೆ ಕುದಿಯುತ್ತಿದ್ದ ಸಣ್ಣಪ್ಪ ಮಾದೇವನ ಪ್ರತಿಯೊಂದು ಕೆಲಸದಲ್ಲೂ ಕೊಂಕು ಹುಡುಕಿ ಕಟಕಿಯಾಡುತ್ತಿದ್ದನು. ಎಷ್ಟಿದ್ರೂ ಅಧಿಕಾರದಲ್ಲಿರುವವನು ಒಂದು ಮಾತು ಹೆಚ್ಚಿಗೆ ಆಡಿದ್ರೆ ಪರ್ವಾಗಿಲ್ಲ ಬಿಡು ಅಂತ ಸುಮ್ಮನಾಗಿ ಬಿಡುತ್ತಿದ್ದನು ಮಾದೇವ.

ಒಮ್ಮೆ ಮಾದೇವನ ನಾದಿನಿಗೆ ಹೆರಿಗೆ ನೋವು ಬಂದು ಆಸ್ಪತ್ರೆಗೆ ಸೇರಿಸಬೇಕಿತ್ತು, ತಮ್ಮಾ ಊರಿನಲ್ಲಿರದಿದ್ದ ಕಾರಣ ಮಾದೇವನೇ ಹೆಡ್ಮಾಸ್ಟರ್’ರಿಂದ ಅನುಮತಿ ಪಡೆದು ಶಾಲೆಯಿಂದ ಬೇಗ ಹೊರಟುಬಿಡುತ್ತಾನೆ. ಅವನ ಗ್ರಹಚಾರವೋ ಏನೋ ಎಂಬಂತೆ ಶಿಕ್ಷಣಾ ಇಲಾಖೆಯವರು ಅಂದೇ ಇನ್ಸ್’ಪೆಕ್ಶನ್’ಗೆ ಬರುತ್ತಾರೆ. ಆ ತಾಲ್ಲೂಕು ಶಿಕ್ಷಣಾಧಿಕಾರಿಯೋ ಮಹಾನ್ ಕೋಪಿಷ್ಠ! ಅವನ ಉಗ್ರ ನರಸಿಂಹಾವತಾರಕ್ಕೆ ಹೆದರಿದ ಹೆಡ್ಮೇಷ್ಟ್ರು ಮಾದೇವ ತನ್ನ ಅನುಮತಿಯಿಲ್ಲದೆ ಶಾಲೆಯಿಂದ ಹೊರಟುಹೋಗಿದ್ದಾನೆ ಎಂದುಬಿಡುತ್ತಾನೆ. ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ ಸಣ್ಣಪ್ಪ ಅಲ್ಲಿಂದ ತನ್ನ ಪ್ರಭಾವ ಬೀರಿ ಮಾದೇವನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಸಿದ. ಮಾದೇವ ಮೈಂಟೇನ್ ಮಾಡುತ್ತಿದ್ದ ಶಾಲಾ ದಾಖಲೆಗಳಾವುವೂ ಸರಿಯಾಗಿಲ್ಲವೆಂದೂ, ಅವುಗಳನ್ನು ತನ್ನಿಚ್ಛೆಯಂತೆ ಮಾಡುತ್ತಾನೆಂದೂ, ತನಗಿಷ್ಟ ಬಂದಾಗ ಶಾಲೆಗೆ ಬರುವುದು, ಹೋಗುವುದು ಮಾಡುತ್ತಾನೆಂದೂ ಪುಕಾರೆಬ್ಬಿಸಿದನು! ಇದನ್ನೆಲ್ಲಾ ಕೇಳಿ ಕುಪಿತಗೊಂಡ ಬಿ.ಈ.ಓ ಮಾದೇವನ ಕರ್ತವ್ಯ ಲೋಪದ ಬಗ್ಗೆ ಸಮಜಾಯಿಷಿ ಕೊಡುವಂತೆ ವಾರ್ನಿಂಗ್ ಲೆಟರ್ ಇಶ್ಯೂ ಮಾಡುತ್ತಾರೆ. ಹೊಗುವ ಮುನ್ನ ಒಂದು ಸಣ್ಣ ಬಾಂಬ್ ಸಿಡಿಸಿ ಹೋಗುತ್ತಾರೆ, “ಇನ್ನು ಮುಂದಿನ ಶಾಲೆಯ ಎಲ್ಲಾ ಕಡತಗಳು ಮತ್ತು ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡಬೇಕೆಂದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ, ಆದ್ದರಿಂದ ಶಾಲೆಯ ದಾಖಲೆಗಳನ್ನು ನೋಡಿಕೊಳ್ಳುವ ಗುಮಾಸ್ತನಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ. ಆದ್ದರಿಂದ ಮಾದೇವನಿಗೆ ಕಂಪ್ಯೂಟರ್ ಜ್ಞಾನ ತೆಗೆದುಕೊಳ್ಳಲು ಹೇಳಿ, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಲು ಹೇಳಿ” ಎಂದುಬಿಟ್ಟರು.

ನಾದಿನಿಯ ಆರೈಕೆಯಲ್ಲಿ ಅಂದು ಮಾದೇವ ಶಾಲೆಗೆ ಬರಲಾಗಲೇ ಇಲ್ಲ. ನಾಳೆಯ ದಿನ ಶಾಲೆಗೆ ಸ್ವಲ್ಪ ತಡವಾಗಿ ಬಂದವನನ್ನು ಸ್ವಾಗತಿಸುತ್ತಿದ್ದುದು ಅವನ ಟೇಬಲ್ ಮೇಲಿದ್ದ ಕರ್ತವ್ಯ ಲೋಪದ ಛೀಮಾರಿ ಪತ್ರ. ಅವನಿಗೆ ಎಲ್ಲಿಲ್ಲದ ವ್ಯಥೆಯಾಯ್ತು, ತಾನು ಎಷ್ಟೇ ನಿಷ್ಠನಾಗಿ ಕೆಲಸ ಮಾಡಿಕೊಂಡಿದ್ದರೂ ತನ್ನ ಕೈಮೀರಿ ಹೀಗೆಲ್ಲಾ ನಡೆಯುತ್ತಿದೆಯಲ್ಲಾ ಎಂಬ ಕೊರಗು ಅವನ ಹೃದಯವನ್ನು ಹಿಂಡುತ್ತಿತ್ತು. ಅರೆಕಾಲಿಕ ಗುಮಾಸ್ತನಾಗಿದ್ದಾಗಿನ ನೆಮ್ಮದಿಯೂ ಈಗ ಇಲ್ಲವಲ್ಲ ಎಂಬುದು ಅವನನ್ನು ಬಹಳವಾಗಿ ಬಾದಿಸುತ್ತಿತ್ತು. ಶಾಲೆಯ ಜವಾನ ಮುನಿಯಾ, ನೆನ್ನೆ ನಡೆದ ಪ್ರಹಸನವನ್ನು ಚಾಚೂ ತಪ್ಪದೆ ವಿವರಿಸಿದಾಗ ಉರಿಯುತ್ತಿದ್ದ ದುಃಖದ ದಾವಾಗ್ನಿಗೆ ತುಪ್ಪ ಸುರಿದಂತಾಯ್ತು! ತನ್ನ ಅಸಹಾಯಕತೆ ಗೊತ್ತಿದ್ದೂ ತನ್ನ ಪರ ನಿಲ್ಲದಿದ್ದ ಹೆಡ್ಮಾಸ್ಟರ್’ರ ಬಗ್ಗೆ ಬೇಸರವಾಯ್ತು. ಆ ವಿಷಯ ತಿಳಿದ ನಂತರ ಎಷ್ಟೇ ಪ್ರಯತ್ನಪಟ್ಟರೂ ಮಾದೇವನಿಗೆ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ಕಡೆಗೆ ಹೊರಗೆ ಹೋಗಿ ಒಂದು ಸಿಗರೇಟು ಸೇದಿ ಬಂದರೆ ಸರಿಯಾಗಬಹುದೆಂದು ಹೊರಗೆ ಬಂದನು. ಅದೇ ಸಮಯಕ್ಕೆ ಶಾಲೆಯ ಆವರಣದೊಳಕ್ಕೆ ಬರುತ್ತಿದ್ದ ಸಣ್ಣಪ್ಪ,

"ಏನೋ ಮಾದೇವ ಶಾಲೆಗೆ ಹೊತ್ತಲ್ಲದ್ ಹೊತ್ತಲ್ಲಿ ಬರೋದು, ಹೋಗೋದಲ್ದೇ ಶಾಲೇಲಿದ್ದಾಗ್ಲೂ ನೆಟ್ಟಗೆ ಕೆಲ್ಸ ಮಾಡ್ದೆ ಹೀಗೆ ಕಾಲ ಕಳೀತಿಯಲ್ಲಾ?" ಎಂದು ಚುಚ್ಚಿದನು.

ಅಲ್ಲಿಯವರೆಗೂ ಮನಸ್ಸಿಗೆ ಆಗಿದ್ದ ಗಾಯವನ್ನು ಮರೆಯಲು ಪ್ರಯತ್ನಿಸುತ್ತಿದ್ದ ಮಾದೇವನ ಸಹನೆ ಈ ಮಾತುಗಳನ್ನು ಕೇಳಿ ತನ್ನ ಕಟ್ಟೆಯನ್ನು ಒಡೆಯಿತು.

"ಅಲ್ರೀ ಅಧ್ಯಕ್ಷರೇ ನಾ ಏನ್ಮಾಡೀನಿ ಅಂಥ ನನ್ಮೇಲೆ ನಿಮಗೀ ಹಗೆ? ನಾನೂ ಎಷ್ಟು ಅಂಥ ಸಹಿಸೋದು. ಪ್ರತಿಯೊಂದು ವಿಷ್ಯಕ್ಕೂ ಕ್ಯಾತೆ ತೆಗೆದು ರಂಪ ಮಾಡ್ತಿದ್ರಿ. ನಾನು ಊರ ಹಿರಿಯರು, ಎದುರಾಡ್ಬಾರ್ದೂಂಥ ಹಲ್ಕಚ್ಕೊಂಡಿದ್ರೆ ಸವಾರಿನೇ ಮಾಡ್ತೀರಿ. ನೆನ್ನೆ ನೋಡಿದ್ರೆ ಸಾಹೇಬ್ರು ಇನ್'ಸ್ಪೆಕ್ಷನ್ಗೆ ಬಂದಾಗ ಇಲ್ದಿರೋ ಆರೋಪಾನೆಲ್ಲಾ ಹೊರ್ಸಿದ್ದೀರಿ? ನಾನು ಕರ್ತವ್ಯ ಲೋಪ ಮಾಡಿದ್ದು ನೋಡಿದ್ರಾ, ನೋಡಿದ್ರೆ ಅಂಥದ್ದೇನು ಮಾಡಿದ್ದೀನಿ ಹೇಳಿ? ಸುಖಾ ಸುಮ್ನೆ ಯಾಕ್ ಹೀಗೆ ತೊಂದ್ರೆ ಕೊಡ್ತೀರಿ?" ಎಂದು ಅಹವಾಲತ್ತುಕೊಂಡನು.

ಅವನ ಈ ನೇರವಾದ ಪ್ರತಿಪ್ರಹಾರದಿಂದ ಮತ್ತೂ ಕೆರಳಿದ ಸಣ್ಣಪ್ಪ, "ಲೇ ಮಾದೇವಾ, ನಾನು ಊರಿಗೆ ಹಿರಿಯನಿದ್ದೀನಿ ಅನ್ನೋದು ಕಾಣ್ದೆ ಎದುರು ಮಾತಾಡ್ತೀಯಾ? ಇಲ್ದಿರೋದು ನಾನೆಲ್ಲಿ ಹೇಳಿದ್ದೀನಿ? ನೆನ್ನೆ ಇನ್'ಸ್ಪೆಕ್ಶನ್ ಟೈಮಲ್ಲಿ ಯಾರಿಗೂ ಹೇಳದೆ ಎಲ್ಲಿಗ್ಹೋಗಿದ್ದೆ?" ಎಂದು ತಾನೂ ಮಾತಿಗೆ ನಿಂತನು.

"ನೆನ್ನೆ ಹೆಡ್ಮಾಷ್ಟರ್ ಪರ್ಮಿಶನ್ ತಗೊಂಡೇ ನನ್ನ ನಾದಿನಿಯನ್ನ ಆಸ್ಪತ್ರೆಗೆ ಸೇರಿಸೋಕೆ ಹೋಗಿದ್ದು ಕಣ್ರಿ, ಗೊತ್ತಿಲ್ದಿರೋವ್ರು ತಿಳ್ಕೊಂಡು ಮಾತಾಡ್ಬೇಕು" ಎಂದನು ಮಾದೇವ.

ಕೋಪಕ್ಕೆ ಬುದ್ದಿ ಕೊಟ್ಟ ಸಣ್ಣಪ್ಪ ಸ್ವಲ್ಪ ನಾಲಿಗೆ ಜಾರಿಸಿ, "ಆ ಸುವರ್ ಹೆಡ್ಮಾಸ್ಟ್ರು ನೆನ್ನೆ ಸಾಹೇಬ್ರು ಕೇಳ್ದಾಗ ಯಾಕೋ ಹಲ್ಕಚ್ಕೊಂಡಿದ್ದಾ ಮತ್ತೆ ನೀನು ಪರ್ಮಿಷನ್ ತಕ್ಕಂಡ್ ಹೋಗಿದ್ರೆ? ಇಬ್ರೂ ಸೇರ್ಕಂಡ್ ಅದೇನ್ ನಡೆಸ್ತಿದ್ದೀರಿ ಈ ಶಾಲೇಲಿ, ಹೇಳೋರು ಕೇಳೋರು ಯಾರೂ ಇಲ್ವಾ? ನೀನು ಕೆಲ್ಸದ್ ಟೈಮಲ್ಲಿ ಪರ್ಮಿಷನ್ನೂ ತಕ್ಕಳ್ದೆ ನಿಮ್ಮನೆ ಕೆಲ್ಸ ಮಾಡ್ಕೊಳ್ಳೋಕೆ ಸರ್ಕಾರ ಸಂಬ್ಳ ಕೊಡ್ತದೇನೋ ಸೂಳೇಮಗ್ನೆ" ಎಂದುಬಿಟ್ಟನು.

ಆ ಮಾತನ್ನು ಕೇಳಿದ್ದೇ ತಡ ಮಾದೇವನ ಕೋಪ ನೆತ್ತಿಗೇರಿತು. ಸಣ್ಣಪ್ಪನಿಗೆ ತೆಗೆದು ಸರಿಯಾಗಿ ಒಂದು ಬಾರಿಸಿದ. ಮೊದಲೇ ಸಪೂರವಿದ್ದ ಸಣ್ಣಪ್ಪ ಗಾಳಿಯಲ್ಲಿ ತೇಲಿಕೊಂಡು ಹೋದವನಂತೆ ಹೋಗಿ ಬಿದ್ದ. ತಲೆ ಒಂದು ಸಣ್ಣ ಕಲ್ಲಿಗೆ ತಗುಲಿ ಗಾಯವಾಯ್ತು. ಇದನ್ನೇ ನೆಪ ಮಾಡಿಕೊಂಡು, 'ಮಾದೇವ ತನ್ನನ್ನು ಕೊಲೆ ಮಾಡಲು ಪ್ರಯತ್ನಪಟ್ಟ' ಎಂದು ಚೀರಿಕೊಂಡನು ಸಣ್ಣಪ್ಪ.

ಈ ವಿಷಯದಲ್ಲಿ ಹಿರಿಯ ತಲೆಗಳು ಸೇರಿದ್ದರಿಂದ ವಿಷಯ ಊರೆಲ್ಲಾ ಹರಡಲು ಹೆಚ್ಚು ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ! ಜನರು ಊರು ಕೇರಿ ದಾಟಿ ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದರು. ಸಣ್ಣಪ್ಪ ತನ್ನ ಪ್ರಭಾವ ಬಳಸಿ ಸಾಂದರ್ಭಿಕ ಸಾಕ್ಷಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದ. ಅದರ ಮರ್ಮ ಅರಿಯದ ಮಾದೇವ, ತನ್ನ ಪರಿಸ್ಥಿತಿಯನ್ನೂ ತಾನು ಶಾಲೆಯಲ್ಲಿ ಕರ್ತವ್ಯ ಲೋಪವಾಗುವಂತೆ ನಡೆದುಕೊಂಡಿಲ್ಲದಿರುವುದನ್ನೂ ಸಮರ್ಥಿಸಲು ಪ್ರಯತ್ನಿಸುತ್ತಿದ್ದ. ಆದರೆ ಅವನು ಸಣ್ಣಪ್ಪನ ಮೇಲೆ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಅಪರಾಧದಂತೆ ಗೋಚರಿಸುತ್ತಿತ್ತು. ಮಾದೇವನಿಂದ ಸಹಾಯ ಸ್ವೀಕರಿಸಿದ್ದವರು ಅವನಿಗೊದಗಿರುವ ಪರಿಸ್ಥಿತಿ ನೋಡಿ ಮರುಗಿದರೂ ಅವನ ಪರ ಗಟ್ಟಿಯಾಗಿ ನಿಲ್ಲದಾದರು. ಈ ಎಲ್ಲಾ ವಿಷಯಗಳು ಮಾದೇವನ ಮೇಲೆರಗಲು ಮುಖ್ಯ ಕಾರಣವೇ ಸಣ್ಣಪ್ಪ ಆ ಊರಿನಲ್ಲಿ ಬಲಾಢ್ಯನೂ, ಧನಿಕನೂ ಆಗಿರುವುದಾಗಿತ್ತು.

ಸಣ್ಣಪ್ಪನ ಮುನ್ಸೂಚನೆಯಂತೆ ಪಕ್ಕದ ಕಾಳೇನಳ್ಳಿ ಪೋಲೀಸ್ ಠಾಣೆಗೆ ಫೋನ್ ಮಾಡುತ್ತಾರೆ ಅವನ ಪಟಾಲಂಗಳು. ಅಲ್ಲಿನ ದಫೇದಾರನಾದ ಕಾಳಪ್ಪನೋ, ಸಣ್ಣಪ್ಪನ ದೂರದ ಸಂಬಂಧಿ. ಈ ಸಂದರ್ಭದ ಅವಕಾಶ ಪಡೆದು ಮಾದೇವನನ್ನು ಅರೆಸ್ಟ್ ಮಾಡಿಸುವಲ್ಲಿ ಸಣ್ಣಪ್ಪ ಯಶಸ್ವಿಯಾಗುತ್ತಾನೆ. ಈ ವಿಷಯ ಕಾಳ್ಗಿಚ್ಚಿನಂತೆ ಊರಿನಲ್ಲೆಲ್ಲಾ ಗುಲ್ಲಾಯ್ತು.  ಮಾದೇವನ ಮೇಲೆ ಒಂದು ಕೊಲೆ ಯತ್ನದ ಕೇಸ್ ಕೂಡ ದಾಖಲಾಯ್ತು. ತನ್ನ ಕೈಲಾದ ಮಟ್ಟಿಗೆ ತನ್ನೂರಿನ ಮತ್ತು ತನ್ನ ಜನಗಳ ಸೇವೆ ಮಾಡಿಕೊಂಡಿದ್ದವನಿಗೆ ಕ್ರಿಮಿನಲ್ ಎಂಬ ಹಣೆಪಟ್ಟಿ ಕಟ್ಟಲಾಯ್ತು! ಇದೇ ಕಾರಣ ಹೇಳಿ ಮಾದೇವನ ಕೈಯ್ಯಲ್ಲಿ 'ಸರ್ಕಾರಿ ಗುಮಾಸ್ತ’ನ ಹುದ್ದೆಗೂ ರಾಜೀನಾಮೆ ಕೊಡಿಸಲಾಯ್ತು.

ಈಗ ಖಾಯಂ ಹುದ್ದೆಯೂ ಇಲ್ಲ, ಸರ್ಕಾರಿ ಅರೆಕಾಲಿಕ ಹುದ್ದೆಯೂ ಇಲ್ಲದಂತೆ ಅತಂತ್ರನಾಗಿದ್ದಾನಂತೆ. ಊರನ್ನೂ ಬಿಟ್ಟುಬಿಟ್ಟಿದ್ದಾನಂತೆ! ಆಗಾಗ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸಲು ಹಾಜರಾಗುತ್ತಾನಂತೆ! ಯಾವುದೋ ಖಾಸಗಿ ಕಂಪೆನಿಯಲ್ಲಿ ಅರೆಕಾಲಿಕ ಸೆಕ್ಯೂರಿಟಿ ಹುದ್ದೆ ಮಾಡುತ್ತಿದ್ದಾನೆಂಬುದು ಸದ್ಯದ ಸುದ್ದಿ.

“ಏನಪ್ಪಾ ನೀನು ಸರಗೂರವ್ನು ಅಲ್ವೇನಪ್ಪಾ? ನಾನು ನಿನ್ ಅಲ್ಲೇ ಎಲ್ಲೋ ನೋಡ್ದಂಗದೆ.” ಎಂದು ಯಾರಾದ್ರೂ ಕೇಳಿದ್ರೆ.

“ಆ ಊರು ಯಾವ್ದು ಅಂತಾನೇ ನಂಗೊತ್ತಿಲ್ಲ ಸಾ… ಕೆಲವು ಕಂತ್ರಿ ನಾಯಿಗಳು ನನ್ ಮೇಲೆ ದಾಳಿ ಮಾಡಿ ನಿರ್ಗತಿಕನನ್ನಾಗಿ ಮಾಡಿದ್ವು! ಅವು ಎಲ್ಲರ ನಿದ್ದೆ ಕೆಡ್ಸುವಂಗೆ ಬೊಗಳ್ತಿದ್ವು ಅಂತ ಯೋಳಿದ್ದೇ ನನ್ ತಪ್ಪು ಅಂತ ಕೇಸ್ ಹಾಕ್ಕಂಡವ್ರೆ ಈ ಪೋಲೀಸ್ನೋರು! ನಂಗೆ ನನ್ನೂರ್ ಯಾವ್ದು ಅಂತ್ಲೇ ಮರ್ತೋಗದೆ ಈಗ! ಊರಿಲ್ಲದ ತಿರುಕನಿಗೆ ಯಾವ್ ಊರಾದ್ರೇನೂ, ಕಾಡಾದ್ರೇನು” ಎಂದು ಹೇಳಿ, ಬೆನ್ನು ಹಾಕಿ ಹೊರಟುಬಿಡುತ್ತಾನಂತೆ!


- ಪ್ರಸಾದ್.ಡಿ.ವಿ.

ಈ ಕಥೆ ’ವಿಜಯ ನೆಕ್ಸ್ಟ್’ನಲ್ಲಿ ಪ್ರಕಟವಾಗಿದೆ. ’ವಿಜಯ ನೆಕ್ಸ್ಟ್’ ಪತ್ರಿಕಾ ವೃಂದಕ್ಕೆ ನನ್ನ ಧನ್ಯವಾದಗಳು.ಚಿತ್ರಕೃಪೆ: ಗೂಗಲ್ ಅಂತರ್ಜಾಲ