ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday 26 December 2014

ಸಿಗದೆ ಸತ್ತ ಸಾಲು!


ನಿನ್ನ ಕಣ್ಣ ಇಶಾರಿಗೆ
ಸಿಗದ ಸಾಲೊಂದು
ನೆನ್ನೆ ಸತ್ತುಹೋಯ್ತು,
ಅದರಲೆಂತಹ ಪದ್ಯವಿತ್ತೊ,
ಗದ್ಯವಿತ್ತೊ,
ಎದೆಯ ಬಾಣಲೆಯಲಿ
ಶುದ್ಧವಾಗಿ ಕುದ್ದ ಹದವಿತ್ತೊ?
ಅರಿಯುವ ಮುನ್ನವೇ
ಮುಗಿಯುವ ಧಾವಂತ,
ಬರೆಸಿಕೊಳ್ಳದೆ ಹೋಯ್ತು!

ಬೆಳದಿಂಗಳ ಚಂದಿರನ
ಕಚ್ಚಿ ತಿನ್ನುವ ಆಸೆಗೆ,
ನಿನ್ನ ಕೆನ್ನೆ ನೋಡಿ ಕರುಬುವ ಸಾಲು,
ನಾನು ಹುಡುಕಾಡಿ ತಂದ
ಮೊಲ್ಲೆ ಮುಡಿಸುವ ಸಾಲು,
ಒಲವ ದೀವಟಿಗೆಗೆ ಬತ್ತಿ ನೇಯುವ ಸಾಲು,
ನಮ್ಮಿಬ್ಬರ ಸಂಜೆಯ ಮಬ್ಬಿಗೆ
ಹಲ್ಲು ಸೆಟ್ಟಾದ ಸಾಲು,
ಅಲ್ಲೇ ಅಸು ನೀಗಿದೆ ನೋಡು
ನೀನು ನೋಡದೆ ಉಳಿದ ಸಾಲು!

ರಕ್ತ, ಮಾಂಸ, ಮಜ್ಜೆಗಳನ್ನೆಲ್ಲಾ
ತುಂಬಿಕೊಂಡೇ ಬೆಳೆದಿತ್ತು,
ಸಾಲದ್ದಕ್ಕೆ ಕನಸುಗಳ ಕಸುವಿತ್ತು,
ಧರ್ಮ ಬೆರೆಸಿದ ಕತ್ತಲ ಸಂಚಿಗೆ
ಅನೀಮಿಕ್ ಬಿಳಿ ರಕ್ತಕಣಗಳು,
ಪ್ರತಿರೋಧಿಸದೆ ಕುಂತಿವೆ ಗೆಳತಿ,
"ಐ ಲವ್ ಯೂ" ಅಂತಲೂ ಅನ್ನದೆ
ನಿನ್ನಿಶಾರಿಗೂ ಸಿಕ್ಕದೆ
ನೋವು, ನಂಜಿಗೆ ಹಲ್ಲು ಗಿಂಜಿದೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಅನ್ವರ್ಥವಾಗಿಯೇ ಉಳಿದೆ!


ಸುಲಭಕ್ಕೆ ಸಿಕ್ಕಿದ್ದು,
ಅನುಮಾನಕ್ಕೀಡಾಗಿದೆ,
ಪ್ರಶ್ನಿಸುತ್ತಾ
ನೆಮ್ಮದಿ ಕಳೆದುಹೋಗಿದೆ,
ನೋವುಗಳಿಗೆ
ಪುಳಕಗೊಂಡು ಅತಿಯಾಗಿ ಸುಖಿಯಾದೆ,
ನೀವು ಹುಚ್ಚನೆಂದರೆ ಹೌದು?
ಮಿತಿ ಮೀರಿದರೇನು,
ನಾನು ನಾನಾಗಿಯೇ ಉಳಿದೆ!

ಕೆನ್ನೆ ಕೆನ್ನೆ ಬಡಿದುಕೊಂಡು
ಜನಜಂಗುಳಿಯ ನಡುವೆ
ತಾಸುಗಟ್ಟಲೆ ಕಾದರೆ ಕ್ಷಣಗಳ ಮಟ್ಟಿಗೆ
ಕಾಣಿಸಿಕೊಳ್ಳುತ್ತಾನೆ,
ಉಧೋ ಉಧೋ ದೇವರೆನ್ನು,
ಎಂದರು... ನಾನು ನಕ್ಕುಬಿಟ್ಟೆ,
ಪಾಪ ಅಲ್ಲಿಲ್ಲದ ದೇವರೂ ನಕ್ಕುಬಿಟ್ಟ,
ಬಹಿಷ್ಕಾರಗೊಂಡು ಅನ್ನವಿರದವರ
ಮನೆಯಲ್ಲಿ ಹಸಿವಾಗಿದ್ದಾನಂತೆ,
ಅವರಂತೂ
ದಿನ ಹೊಟ್ಟೆತುಂಬಿಸುವ ಪೂಜೆ ಮಾಡುವರು,
ಸಂತೃಪ್ತಿಯಾಗಿಲ್ಲ
ಆದರೂ ಬದುಕಿರುವನು ಜೀವದಂತೆ,
ದೇವರ ನಂಬದ ನಾನು
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಸರ್ಕಾರವೊಂದು ಸರ್ವಾನುಮತದಿ
ವೋಟು ಗಿಟ್ಟಿಸಿ
ಅಧಿಕಾರ ಹಿಡಿಯಿತೆಂದುಕೊಳ್ಳಿ,
ಚುಕ್ಕಾಣಿಯ ಮೇಲೆ ಕಣ್ಣಿರಲಿ,
ನಾಯಕರೆಂದರೆ ನಾಯಕರು,
"ಡೊಂಕು ಬಾಲದ ನಾಯಕರು..."
ನೇರೆ ರಸ್ತೆಯಲಿ ಅಂಕುಡೊಂಕಾಗಿ ನುಸುಳಿದರೆ?
ಎಂದಿದ್ದೆ ಬಂತು,
ನಾಯಕರಿಲ್ಲದ ಪ್ರತಿಪಕ್ಷದ ಪಟ್ಟ ನನಗೆ,
ವ್ಯಂಗ್ಯಕ್ಕೆ ಬೆತ್ತವಾದೆ,
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಮುಂದೆ ಮುಂದೆ ನಡೆದವಳ ಹಿಂದೆ ಅಲೆದೆ,
ಬೇಡವೆಂದರೂ ಕಾಡಿ ಗೋಗರೆದೆ,
ಒಲಿದ ಹೂವು ಮುಡಿಯೇರುವ ಮುನ್ನ,
ವೈಫಲ್ಯದ ಹೊಳೆಯಲಿ ಕೊಚ್ಚಿ ಹೋಗಿದೆ,
ಅಂಗಾತ ಬಿದ್ದವನ
ಎದೆಬಿರಿವ ನೋವಿಗೆ ಮುಲುಗುಟ್ಟಿ,
ನೆನಪುಗಳ ಮುಲಾಮು ಹಚ್ಚುವೆ,
ಸುಖಕ್ಕೆ ಸಿಹಿಯಾಗಿ ನರಳುವೆ,
ಕವಿತೆಯೆಂದರು, ಕವಿಯೆಂದರು,
ಎದರಿ ಓಡಿದೆ, ಅಲೆದೆಡೆಯಲ್ಲೆ ಬದುಕಿದೆ,
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಸರಿಯಿದ್ದನ್ನೂ ಅನುಮಾನಿಸಿ,
ಸರಿಯಿಲ್ಲದ್ದನ್ನೂ ಪ್ರಶ್ನಿಸುವೆ,
ನೀವು ಆಗದೆಂಬಂತೆಯೇ ಬದುಕುವೆ,
ನೀನ್ಯಾಕೆ ಹೀಗೆಂದರೆ?
ನಾನೆನ್ನಲಿ? ನಾನಂತೂ ಹೀಗೇ..
ಅನ್ವರ್ಥವಾಗಿಯೂ ಇದ್ದೆ,
ಅನರ್ಥವಾಗಿಯೂ ಇದ್ದೆ,
ಬಹು ಅರ್ಥವಾಗಿಯೂ ಇದ್ದೆ,
ಸಂಕೋಚ, ಸಂಕುಚಿತ, ಹೇಗೆಲ್ಲಾ ಇದ್ದೆ,
ಒಟ್ಟು ಇದ್ದೆ,
ಅನ್ನ ತಿನ್ನುವ ಮನುಷ್ಯನಾಗಿಯೇ ಉಳಿದೆ,
ಅಟ್ ಲೀಸ್ಟ್ ಬದುಕಿಯೇ ಇದ್ದೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Sunday 14 December 2014

ಬಟವಾಡೆಗೆ ಬಣ್ಣಗಳು!


ಬಣ್ಣಗಳನು
ಮಾರಲು ತಂದಿದ್ದೇನೆ…
“ಕಾಸಿಗೊಂದು,
ಕೊಸರಿಗೊಂದೆಂದು ಕೇಳಬೇಡಿ”;
“ಸಾಲ ಕೇಳಿ, ಸ್ನೇಹ ಕಳೆದುಕೊಳ್ಳಬೇಡಿ..”
ಎಂಬ್ಯಾವ ಫಲಕಗಳೂ ಇಲ್ಲಿಲ್ಲ…
ಬಿಟ್ಟಿಯಾಗೇ ಬಿಕರಿಗಿಟ್ಟಿದ್ದೇನೆ,
ಬದಲಿಯಾಗಿ ಒಂದೊಂದು
ನೋವನ್ನು ಒತ್ತೆಯಿಡಿ,
ಬೇಕಿದ್ದರೆ ಬಾಂಡು ಬರೆದುಕೊಡಿ!

ಒಬ್ಬಳೇ ಮಗಳನ್ನು ಬೆಳೆಸಲು
ಹೆಣಗುವ ಅಮ್ಮನ ಆರ್ದ್ರತೆ,
ತಬ್ಬಲಿಯಾದ ಮಕ್ಕಳ ಕಣ್ಣೀರು,
ಜಾತಿಯ ಬಡಪಟ್ಟಿಗೆ ಮುದುರಿ
ಮೂಲೆ ಸೇರುವ ಸಹನೆಯ ಕೊರಗು,
ತಡರಾತ್ರಿಗೆ ನಲುಗುವ ವೇಶ್ಯೆಯ
ಮಲ್ಲಿಗೆ ಕಂಪು,
ನೋವಿಗೆ ಮದ್ದು ಹುಡುಕುವ
ಭಗ್ನ ಪ್ರೇಮಿಯ ಎದೆಯ ಕಾವು,
ಎದೆಯೊಡೆದು ಸತ್ತ ಸಾವು,
ಎಲ್ಲಕ್ಕೂ ಮುಲಾಮಿದೆ ನನ್ನ ಬಳಿ,
ಬೋಗುಣಿಗೆ ನೋವು ಸುರಿಯಿರಿ,
ಸ್ವಚ್ಛಂದ ಬಣ್ಣ ಹೆಕ್ಕಿರಿ!

ಸಾವಿರಾರು ಬಣ್ಣಗಳ
ಸುರಿದು ನಿಮ್ಮ ಮುಂದಿಡುತ್ತೇನೆ,
ಕಪ್ಪು ಹಲಗೆಯ ಮೇಲೆ,
ಬಿಳಿಯ ಕ್ಯಾನ್ವಾಸಿದೆ,
ಬೇಕಾದ ಬಣ್ಣ ಬಳಿದುಕೊಳ್ಳಿ.
ಕಲಾಕೃತಿಯಾಗಿ ನೀವು ನಕ್ಕರೆ ಸಾಕು;
ಕುಂಚವಾದವಗೆ ಇನ್ನೇನು ಬೇಕು?!
ತಿರುಕನಂತೆ ತಿರುಗುತ್ತಾ ಹೊರಡುತ್ತೇನೆ,
ಇರುವ ದಿಕ್ಕುಗಳಾದರೂ ನಾಕೇ ನಾಕು;
ಸಂಧಿಸುತ್ತಲೇ ಸಂದಾಯ
ಪದ್ಯದೊಂದಿಗೆ ಮತ್ತು ಮದ್ಯದೊಂದಿಗೆ!

--> ಮಂಜಿನ ಹನಿ