ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 24 October 2013

ಸಾವಿಗೂ ಪ್ರೀತಿ!“ಪ್ರೀತಿ, ಮೈಥುನಕ್ಕೆ ಮಂಚ ಹತ್ತಿಸುವ ಕಾಮವಲ್ಲ ಕಣೆ, ಆದ ಮೇಲೆ ಮೆಲುಕು ಹಾಕುತ್ತ ಮೈತಡವಿ ಮರೆತುಬಿಡಲು. ಜೀವಂತಿಕೆ ಹೊತ್ತು ತರುವ ನೆನಪುಗಳು, ಕಾಪಿಟ್ಟ ಕನಸುಗಳು ಕಾಡುವಾಗ ಜೀವ ಹೋದಂತೆನಿಸುತ್ತದೆ. ನಿನಗೇನು, ಗೊತ್ತೂ ಗೊತ್ತಿಲ್ಲದಂತೆ, ಮರೆತು ಮರೆಯಾದಂತೆ ಹೋಗಿ ಬಿಟ್ಟೆ. ನಾನೇನು ಮಾಡಲಿ, ಸಾಯುವ ಮನಸ್ಸಿಲ್ಲ ಬದುಕುವ ಚೈತನ್ಯವಿಲ್ಲ! ದಿನವೂ ಸತ್ತು ಉಸಿರಾಡುತ್ತಿದ್ದೇನೆ…” ಎಂದು ಸ್ವಗತವೆಂಬಂತೆ ಹೇಳಿಕೊಂಡು ತನ್ನ ಶವ ಎತ್ತಿಕೊಂಡು ಬೆಡ್ ರೂಮ್ನಿಂದ ಲಿವಿಂಗ್ ರೂಮ್ ಗೆ ಬಂದನು ರಾಜೇಶ್.

ನಡೆಯುತ್ತಿದ್ದವನ ಹೆಜ್ಜೆಗಳು ತಪ್ಪಿ ಹೊರಳಿದಂತೆಯೂ, ತನ್ನ ಮೇಲೆಯೇ ಎರಗಿ ಬಿದ್ದಂತೆಯೂ ಭಾಸವಾಗಿ ಮುಂದೆಂಬುದು ಹಿಂದಾಗಿ, ಹಿಂದೆಂಬುದು ಮುಂದಾಗಿ ಚಲಿಸುವ ಭೀತಿ ಹುಟ್ಟಿಸುತ್ತಿದ್ದವು. ತಾನು ತಡವರಿಸಿ ಬಿದ್ದು ಮುಗ್ಗರಿಸಿದೆನೇ? ಎಂಬ ಭಯವೂ ಕಾಡುತ್ತಿತ್ತು. ಓಡುವ ಆಲೋಚನೆಗಳಿಗೆ ಕಡಿವಾಣ ಹಾಕುವ ಕಲೆ ಗೊತ್ತಿದ್ದರೆ ಚೆನ್ನಾಗಿತ್ತು ಅನಿಸುತ್ತಿತ್ತು. ಸರಿಯಿದ್ದ ಜೀವನದಲ್ಲಿ ತಾನೇ ಧಾಳಿಕೋರನಾಗಿ, ನೆನಪುಗಳನ್ನು ’ಛೂ’ ಬಿಡುತ್ತಿರುವುದು ಅತಿರೇಖವೇನೋ? ಜೀವಂತವಲ್ಲದ ಜೀವನವನ್ನವನು ಬದುಕುತ್ತಿರಬಹುದು. ಆದರೆ ತಾನು ಧಾಳಿಕೋರನೋ ಇಲ್ಲ ಧಾಳಿಯ ತರಗೆಲೆಯೋ ತಿಳಿಯುತ್ತಿಲ್ಲ! ತಲೆ ಚಿಟ್ಟೆನಿಸುತ್ತದೆ, ಮತ್ತೆ ಗಂಟಲು ಒಣಗುತ್ತದೆ. ಪಕ್ಕದಲ್ಲಿದ್ದ ಬಾಟಲ್ ನಲ್ಲಿನ ನೀರು ಗಟಗಟನೆ ಗಂಟಲೊಳಗಿಳಿಯುತ್ತದೆ. ಫ್ಯಾನ್ ಇದ್ದರೂ ಬೆವತ ಮುಖವನ್ನು ಒರೆಸಿಕೊಳ್ಳುತ್ತಾನೆ!

ಮನೆಯಲ್ಲಿ ಯಾರೂ ಇಲ್ಲದಿರುವುದು ಬೆಚ್ಚಿ ಬೀಳಿಸುತ್ತದೆ. ತಾನು ಬಾಲ್ಯವನ್ನೂ ಕಳೆದ ಮನೆ ತನ್ನನ್ನು ಹೀಗೆಂದೂ ಕಾಡಿದ್ದನ್ನು ನೆನಪಿಸಿಕೊಂಡರೂ ನೆನಪಿಲ್ಲ. ಕತ್ತಲೆಯೇ ಭಯವೋ, ಒಬ್ಬಂಟಿತನವೇ ಭಯವೋ ತೀರ್ಮಾನಕ್ಕೆ ಬರದ ಸ್ಥಿತಿ ತಲುಪಿದ್ದ ರಾಜೇಶ್. ಅಪ್ಪ-ಅಮ್ಮ ಈ ಹೊತ್ತಿನಲ್ಲೇ ಕಾಶೀ ಯಾತ್ರೆಗೆ ಹೋಗಬೇಕಿತ್ತೆ? ತಾನೂ ಜೊತೆಗೆ ಹೋಗಿದ್ದರೆ ಮನಸ್ಸಿಗಾದರೂ ನೆಮ್ಮದಿ ಸಿಗುತ್ತಿತ್ತೆ ಎಂದು ಯೋಚಿಸಿ ಸೋಲುತ್ತಿದ್ದ. ಈ ಚಿಲ್ಲರೆ ಯೋಚನೆಗಳು, ಆ ನೆನಪುಗಳು ಬಡಿದೆಬ್ಬಿಸುವ ಭೀಕರತೆಯ ಮುಂದೆ ಜಾಹಿರಾತುಗಳಂತಿರುತ್ತಿದ್ದವು. ಸರಿ ಇನ್ನೂ ಎಷ್ಟೊತ್ತು ಹೀಗೇ ಕೂತಿರೋದು, ತಲೆ ಸುತ್ತುತ್ತಿತ್ತು, ಗೋಡೆಯ ಮೇಲಿನ ಗಡಿಯಾರ ಈ ಸರಿ ರಾತ್ರಿಯ ಹೊತ್ತಲ್ಲಿ ’ಢಣ್ ಢಣ್ ಢಣ್’, ಹನ್ನೊಂದು ಸಲ ಬಡಿಯುತ್ತದೆ. ಗುಂಡಿಗೆಯೂ ಡವಡವಗುಟ್ಟುವ ಶಬ್ಧ ಮಾಡುತ್ತಾ ತಾನು ಬದುಕಿರುವುದನ್ನು ತೋರಿಸುತ್ತಿತ್ತು. ಕಣ್ಣು ಮತ್ತೆ ಮಂಜಾದಂತಾಗಿ ತಾನು ಊಟ ಮಾಡಿಲ್ಲದ ಅರಿವಾಯ್ತು ರಾಜೇಶ್ ಗೆ.

ಡೈನಿಂಗ್ ಟೇಬಲ್ ಮೇಲೆ ಅದಾಗಲೇ ಬಿಸಿ ಮಾಡಿಟ್ಟಿದ್ದ ಹುಳಿಸಾರು ಘಮ್ಮೆನ್ನುವ ಪರಿಮಳವನ್ನೇನೂ ಬೀರುತ್ತಿರಲಿಲ್ಲ. ಸರಿ ಹೇಗಾದರೂ ಊಟ ಮಾಡಿ, ಮಲಗಿಬಿಟ್ಟರೆ ಈ ಯೋಚನೆಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಸಿಕ್ಕಬಹುದೆಂದು ಯೋಚಿಸಿದವನು, ಒಂದು ತಟ್ಟೆ ತೆಗೆದು ಒಂದಷ್ಟು ಅನ್ನವನ್ನು ಸುರುವಿಕೊಂಡ. ಸಾರು ಹಾಕಿಕೊಂಡ. ನೆಂಚಿಕೊಳ್ಳಲು ಇದ್ದ ಖಾರ ಬೂಂದಿಯನ್ನು ಒಂದು ಪ್ಲೇಟ್ ಗೆ ಹಾಕಿಕೊಂಡು, ಒಂದೆರಡು ಕಾಳುಗಳನ್ನು ದವಡೆಗೆ ಒತ್ತರಿಸಿ ಜಗಿದ. ಊಟ ಮಾಡಬಹುದು ಎಂಬ ಸೂಚನೆ ಸಿಕ್ಕಿತು ಜಠರದಿಂದ! ಇತ್ತೀಚೆಗೆ ಯಾವ ಆಹಾರ ಪದಾರ್ಥವನ್ನೂ ಒಳಗೆ ಸೇರಿಸದ ಜಠರ ತನ್ನ ನಿಷೇಧಾರ್ಥಕ ಅಡ್ಡ ಗೋಣನ್ನು ಉದ್ಧುದ್ಧ ಕುಣಿಸಿದ್ದು ಸಮಾಧಾನವಾಗಿತ್ತು. ಒಂದೊಂದೇ ತುತ್ತುಗಳಂತೆ ಅನ್ನ ಹೊಟ್ಟೆಯೊಳಗಿಳಿದಂತೆ ಸಮಾಧಾನವೆನ್ನಿಸಲು ಶುರುವಾಯ್ತು. ತನ್ನ ಮನಸ್ಸು ಸರಿಯಿಲ್ಲವೆಂದು ಊಟವನ್ನೂ ತಪ್ಪಿಸುವುದು ಬುದ್ಧಿಗೇಡಿ ಕೆಲಸವೆಂದೂ, ಅದು ಮನಸ್ಸಿನ ದುಃಖವನ್ನು ದೇಹದ ಅಸಹಾಯಕತೆಯನ್ನಾಗಿ ಪರಿವರ್ತಿಸಿ ಬುದ್ಧಿ ನಿಷ್ಕ್ರಿಯವಾಗುವಂತೆ ಮಾಡುತ್ತದೆಂದೂ ಅರಿವಾಗುತ್ತಿತ್ತು. ಊಟ ಮುಗಿಸಿ, ಕೈ ತೊಳೆದು ತಟ್ಟೆಯನ್ನು ಸಿಂಕ್ ನೊಳಗಿಟ್ಟನು.

ಹೆಚ್ಚು ದಣಿದಿದ್ದರಿಂದಲೋ, ಮನಸ್ಸು ರಾಢಿಯಾಗಿದ್ದರಿಂದಲೋ ಅವನ ಮನಸ್ಸು ಬೆಡ್ ರೂಮನ್ನು ಹುಡುಕುತ್ತಿತ್ತು. ಹೆಜ್ಜೆಗಳು ತಾವಾಗಿಯೇ ಎಡ ಬದಿಯ ರೂಮಿನ ಹಾದಿ ಹುಡುಕಿ, ನಡೆದವು.

---------------------------------------------------------------------------------

“ನಿನ್ನ ಕೈಯೊಳಗೆ ನನ್ನಂಗೈ ಬೆಸೆದು ಕುಳಿತುಬಿಟ್ಟರೆ ಆಕಾಶದಲ್ಲಿ ಬೆಳದಿಂಗಳು ಕಾಣುತ್ತದೆ ರಾಜೀ…” ಖುಷಿ ನಿಧಾನವಾಗಿ ರಾಜೇಶ್’ನ ಭುಜದ ಮೇಲೊರಗುತ್ತಿದ್ದಳು. ಅವನೋ ಅವನೊಳಗೇ ಮಂಡಿಗೆ ತಿನ್ನುತ್ತಾ ಎದೆಯುಬ್ಬಿಸಿಕೊಳ್ಳುತ್ತಿದ್ದ!

“ಲೇ, ನೀವ್ ಹುಡ್ಗಿಯರು ಭಾರೀ ಛಾಲಾಕಿ… ಐಸ್ ಇಟ್ಟಂಗೆ, ನೈಸ್ ಮಾಡಿ ನಮ್ಮಂಥ ಒಳ್ಳೆ ಹುಡುಗ್ರ ತಲೆ ಕೆಡಿಸ್ಬಿಡ್ತೀರಿ… ಪಾಪ ನಾವು!” ಅವನು ಮೆಲ್ಲಗೆ ಕಣ್ಣು ಮಿಟುಗಿಸಿದ. ಅವನು ಹಾಗಂದಿದ್ದೇ ತಡ, ಅವಳು ತಡೆದರೂ ನಗುವೆಂಬುದು ಒದ್ದುಕೊಂಡು ಬಂತು. ಅವನೂ ಆ ನಗುವಿನಲ್ಲಿ ಒಂದಾದ.

“ಅಬ್ಬಾ ಮಾತು ನೋಡು.. ಪಾಪಿ, ನಾನ್ ಬಂದಿದ್ನಾ ಹಿಂದ್ ಹಿಂದೆ? ಪ್ರೀತಿ ಮಾಡ್ತೀನಿ ಅಂತ? ಈಗ ಅಯ್ಯೋ ಪಾಪ ನನ್ನ ಬಲೆ ಹಾಕಿ ಕೆಡವಿಕೊಂಡಳು ಅನ್ನೋ ಥರ ಮಾತಾಡ್ತಾನೆ…” ಅಂತ ಹುಸಿ ಕೋಪ ನಟಿಸಿದಳು ಖುಷಿ.

“ನಾನೇ ಬಂದಿದ್ದೆ ಅಂತಿಟ್ಕೋ, ಆದ್ರೆ ನನ್ನ ಮನಸ್ಸು ಕೆಡಿಸಿ ಕರೆಂಟ್ ಹೊಡೆಸಿದವಳು ನೀನೇ. ಹಾಗಂದಾಗ ಫ್ಲೋರೆಸೆಂಟ್ ಬಲ್ಬ್ ಥರ ನಗೋದು ಬೇರೆ…” ಎಂದು ಜೋರಾಗಿ ನಕ್ಕ. ಅವಳು ಅವನೊಳಗೆ, ಅವನು ಅವಳ ಕಣ್ಣೊಳಗೆ ಸಿಲುಕುತ್ತಿದ್ದರು. ಆ ತಕ್ಷಣಕ್ಕೆ ಅಪ್ಪ ಹೇಳಿದ್ದ ಯಾವುದೋ ಕೆಲಸದ ನೆನಪಾಗಿ… “ಖುಷಿ ನಾನು ಮತ್ತೆ ಸಿಗ್ತೀನಿ ಕಣೇ, ನೀನು ಆಟೋ ಹಿಡ್ಕೊಂಡು ಪಿ.ಜಿ. ಗೆ ಹೋಗು. ಬೇಡ, ನಾನೇ ಗೊತ್ತಿರೋ ಹುಡುಗನ ಆಟೋ ಹತ್ತಿಸ್ತೀನಿ ಬಾ…” ಎಂದು ಎಬ್ಬಿಸಲು ಪ್ರಯತ್ನಿಸಿದ.

ಅವಳು ಕೈಯ ಹಿಡಿತವನ್ನ ಬಿಗಿ ಮಾಡಿದಳು. “ಚಿನ್ನು ಹಠ ಮಾಡ್ಬೇಡ್ವೇ ಅಪ್ಪಾ ಬ್ಯಾಂಕ್ ಗೆ ಹೋಗ್ಬಾ ಅಂತ ಹತ್ ಸಲ ಹೇಳಿದ್ದಾರೆ. ನಾನು ಸಂಜೆ ಕಾಲ್ ಮಾಡ್ತೀನಿ. ಈಗ ಮೇಲೇಳು” ಅಂದ.

ಅವಳು, “ನಂಗದು ಬೇಕು” ಅಂದಳು. “ಅದು ಅಂದ್ರೆ ಏನು?” ಕೇಳಿದ ಅವನು. “ನನ್ನ ಯಾವಾಗ್ಲೂ ಹಿಡಿದುಕೊಂಡಿರೋಕೆ ಈ ಕೈ ಬೇಕು ನಂಗೆ” ಎಂದು ಅವಳ ಬೆರಳುಗಳಲ್ಲಿ ಬೆರಳಹುದುಗಿಸಿದ್ದ ಅವನ ಕೈಯನ್ನು ಎತ್ತಿ ತೋರಿಸಿದಳು.

“ಹೋ ಅದಾ.. ಅದು ಯಾವಾಗ್ಲೂ ನಿಂದೇ… ಈಗ ಎದ್ದು ನಡಿ” ಎಂದು ಎಬ್ಬಿಸಲು ಪ್ರಯತ್ನಿಸಿದ ರಾಜೇಶ್. ಅವಳು ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಿ, “ನಾನು ಹೇಳಿಲ್ವಾ, ಯಾವಾಗ್ಲೂ ಅಂದ್ರೆ ಯಾವಾಗ್ಲೂ” ಅಂದಳು ನಗುತ್ತಾ. “ಅಯ್ಯೋ ಯಾವಾಗ್ಲೂ ಕೈ ಬೇಕು ಅಂದ್ರೆ ಕಿತ್ ಕೊಡ್ಲಾ? ಆಟದ ವಸ್ತು ಕೇಳೋಥರ ಕೇಳ್ತೀಯಲ್ಲೇ?” ಎಂದು ಹುಸಿ ಕೋಪ ನಟಿಸಿದನವನು. ಅವಳು, “ಕಿತ್ ಕೊಡು, ಅದ್ರಲ್ಲೇನು?” ಎಂದು ನಗುವುದೇ? ಅವನಿಗೆ ಅವಳನ್ನು ಅಲ್ಲೇ ಅಪ್ಪಿ ಮುದ್ದಿಸಬೇಕು ಎನ್ನಿಸುತ್ತಿತ್ತು. ಅವಳು ಹೀಗೆ ಮುದ್ದು ಮುದ್ದಾಗಿ ಹಠ ಹಿಡಿದಾಗೆಲ್ಲಾ, ಎದೆಗಾತುಕೊಂಡು ಲಾಲಿ ಹಾಡುವಾ… ಎನಿಸುತ್ತದೆ ಅವನಿಗೆ!

ಅವಳು ಮೆಲುವಾಗಿ ಅವನ ಭುಜಕ್ಕೊರಗುತ್ತಿದ್ದಾಳೆ, ಅವನು ಅವಳ ಹಣೆಯನ್ನು ಮುತ್ತುತ್ತಿದ್ದ ತಲೆ ಕೂದಲನ್ನು ಸರಿಪಡಿಸಿ ತಲೆ ನೇವರಿಸುತ್ತಾನೆ. ಅವಳ ಕಣ್ಣುಗಳು ಹೊಳೆಯುತ್ತವೆ. ಸೂರ್ಯ ಸಂಜೆಯ ಗೋಧೂಳಿಗೋ, ಇವರಿಬ್ಬರ ಪ್ರೇಮದ ಸಿಗ್ಗಿಗೋ ಕೆಂಪಾಗುತ್ತಾನೆ!

***

“ಹಲೋ ರಾಜೀ, ನಾನು ಹೇಳೋದು ಕೇಳೋ… ನಾನು ಅಮರಪ್ರೇಮಿ, ಅವಳು ಪ್ರೇಮದೇವತೆ ಅಂತ ಫೂಲ್ ಥರ ಯೋಚಿಸ್ಬೇಡ. ನಂಗನ್ಸೋ ಪ್ರಕಾರ ಅವ್ಳು ನಿನ್ ನಿಷ್ಕಲ್ಮಷ ಪ್ರೀತಿಗೆ ಅರ್ಹಳಲ್ಲ!” ಸುನೀಲ್ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ.

“ಇಲ್ಲ ಸುನೀಲ್, ನೀನು ಹೇಳೋ ಥರದ ಹುಡ್ಗಿ ಅಲ್ಲ ಕಣೋ ಅವ್ಳು. ಯೂ ಹ್ಯಾವ್ ಮಿಸ್ಟೇಕನ್. ಅವ್ಳು ಎಲ್ಲಾ ಹುಡುಗ್ರು ಜೊತೆ ಸ್ನೇಹದಿಂದಿರ್ತಾಳೆ ಅಂದ ಮಾತ್ರಕ್ಕೆ ಅವ್ಳನ್ನ ಅನುಮಾನಿಸ್ಬೇಡ…” ರಾಜೇಶ್ ಏನನ್ನೋ ಹೇಳಿ ತನ್ನ ಪ್ರೀತಿಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದ. ಅವನಿಗೇ ಅರಿವಾಗದಂತೆ ಅವನ ಹಣೆ ಗೆರೆಗೊಳ್ಳುತ್ತಿತ್ತು. ಒಂದೊಂದು ಗೆರೆಗಳೂ ಯೋಚನೆಯ ಅಲೆಗಳಲ್ಲಿ ಮುಳುಗೇಳುತ್ತಿದ್ದವು. ’ಇವ್ನು ಏನಂತ ತಿಳ್ಕೊಂಡಿದ್ದಾನೆ ನನ್ ಖುಷಿ ಬಗ್ಗೆ? ಅವ್ಳು ಪುಟಕಿಟ್ಟ ಚಿನ್ನ. ಸ್ವಲ್ಪ ತುಂಟತನವೇನೋ ಇದೆ, ಅದು ಅವಳಿಗೆ ಶೋಭೆಯೇ! ಆದರೆ ನನಗೆ ಎಂದಿಗೂ ಮೋಸ ಮಾಡಲಾರಳು. ಅದನ್ನು ತನ್ನ ಕನಸ್ಸಿನಲ್ಲಿಯೂ ಯೋಚಿಸಲಾರಳು! ಅಯ್ಯೋ ಸುನೀಲ ಯಾರು? ನನ್ನ ಗೆಳೆಯ, ನನ್ನ ಜಿಗ್ರಿ ದೋಸ್ತ್. ಅವ್ನ-ನನ್ನ ನಡುವೆ ಯಾವುದೇ ಮುಚ್ಚುಮರೆಗಳೇ ಇಲ್ಲ. ಅವನು ನನಗೆ ಕೆಟ್ಟದಾಗ್ಲಿ ಅಂತ ಯೋಚಿಸ್ತಾನ? ನನ್ನ ಪ್ರೀತಿಗೆ ಉಳಿ ಹಿಂಡೋದುಂಟಾ? ಅವ್ನು ಹೇಳ್ತಿರೋದ್ರಲ್ಲಿ. ಏನಾದ್ರೂ ಸತ್ಯ ಉಂಟಾ?’ ರಾಜೇಶ್’ನ ತಲೆ ಧಿಂ ಎನ್ನುತ್ತದೆ. ಅವನು ರಿಸೀವರ್ ಹಿಡಿದುಕೊಂಡು ಕುಸಿಯುತ್ತಾನೆ!

“ಅದ್ನೇ ಮಾಡ್ಬೇಡ ಅಂದಿದ್ದು ನಾನು. ಪ್ಲೀಸ್ ಕಣೋ ನನ್ನ ನಂಬು. ಇಲ್ದಿದ್ರೆ ಜೀವ್ನ ಹಾಳು ಮಾಡ್ಕೊತೀಯ…” ಸುನೀಲ್ ಆ ಕಡೆಯಿಂದ ಬಡಬಡಿಸುತ್ತಾನೆ.

“ಸರಿ ನೀ ಹೇಳೋದೆಲ್ಲ ನಿಜ ಅಂತ್ಲೇ ಇಟ್ಕೊಳ್ಳೋಣ. ನಿಂಗೆ ಈ ವಿಷ್ಯ ಹೇಗ್ ಗೊತ್ತಾಯ್ತು?” ಸಾವರಿಸಿಕೊಂಡ ರಾಜೇಶ್ ಕೇಳುತ್ತಾನೆ.

“ಅವಳ ಹೊಸ ಬಾಯ್ ಫ್ರೆಂಡ್ ಕೂಡ ನನ್ನ ಸ್ನೇಹಿತ. ಒಂದೆರಡು ಸಲ ನಿನ್ನ ಹುಡುಗಿಯೊಂದಿಗೆ ಅವನನ್ನ ನೋಡಿದ್ನಲ್ವಾ, ಸುಮ್ನೆ ಛೇಡ್ಸೋಕೆ ಅವ್ನಿಗೆ, ಏನೋ ಹುಡ್ಗಿ ಜೊತೆ ಫುಲ್ ರೊಮ್ಯಾನ್ಸಾ? ಅಂತ ಕೇಳ್ದೆ. ಅವ್ನೇ ಬಾಯಿ ಬಿಟ್ಟ ಕಣೋ. ಇದೆಲ್ಲ ನಿನ್ನ ವಿಷ ವರ್ತುಲದಲ್ಲಿ ಸಿಕ್ಸುತ್ತೆ ರಾಜೀ. ಪ್ಲೀಸ್ ಸ್ಟೇ ಔಟ್ ಆಫ್ ಇಟ್.” ಸುನೀಲ್ ರಾಜೇಶ್’ನ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದ. ’ಸುನೀಲ ಹೇಳುವುದರಲ್ಲಿ ನಿಜವಿದ್ದರೂ ಇರಬಹುದು. ಅವನು ಪಿ.ಜಿ. ಓದುತ್ತಿರುವ ಕಾಲೇಜ್ ನಲ್ಲೇ ಖುಷಿ ಕೂಡ ಪಿ.ಜಿ. ಮಾಡ್ತಿದ್ದಾಳೆ. ಎಷ್ಟೋ ಬಾರಿ ಖುಷಿಗೆ ಸರ್ಪ್ರೈಸ್ ಗಿಫ್ಟ್ ಗಳನ್ನ ಕಳಿಸಲು ಸಹಾಯ ಮಾಡ್ತಿದ್ದವನೇ ಅವ್ನು. ನಾನು ಅವರಿಬ್ಬರಿಗೆ ಒಮ್ಮೆ ಮುಖತಃ ಭೇಟಿ ಮಾಡಿಸಿದ್ದೂ ನೆನಪು. ಅಯ್ಯೋದೇವ್ರೆ ಇವ್ನು ಹೇಳ್ತಿರೋದೆಲ್ಲಾ ಸುಳ್ಳಾಗ್ಲಿ!’ ರಾಜೇಶ್ ಅಧೀರನಾಗುತ್ತಿದ್ದಾನೆ.

ತನ್ನೊಳಗೇ ತತ್ತರಿಸುತ್ತಿದ್ದ ಅವನು. “ನೀನು ಏನ್ ಹೇಳಿದ್ರೂ ನಂಬಲ್ಲ ನಾನು. ನನ್ನ ಪಾಡಿಗೆ ನನ್ನ ಬಿಟ್ಬಿಡು. ನನ್ನ ಪ್ರೀತಿನ ಹೇಗೆ ಉಳಿಸ್ಕೊಳ್ಬೇಕು, ಹೇಗೆ ಕಾಪಾಡ್ಕೊಳ್ಬೇಕು ಅಂತ ನಂಗೆ ಗೊತ್ತಿದೆ…” ಎಂದ ರಾಜೇಶ್ ನ ತಲೆಯಲ್ಲಿ ನೂರಾರು ಯೋಚನೆಗಳು ಓಡಾಡುತ್ತಿದ್ದವು.

“ಸರಿ ನನ್ನ ನಂಬ್ದಿದ್ರೆ ಬೇಡ, ನಂಬಬೇಡ! ಆದ್ರೆ ಇವತ್ತು ಸಂಜೆ ಕಾರಂಜಿ ಕೆರೆಗೆ ಹೋಗು. ಅಲ್ಲಿ ಅವರಿಬ್ರೂ ಭೇಟಿ ಮಾಡ್ತಿದ್ದಾರೆ ಅನ್ನೋ ವಿಷ್ಯಕ್ಕೆ ನಾನು ಕಿವಿಯಾದೆ. ಅದೂ ಅಚಾನಕ್ ಆಗಿ ಕಿವಿಗೆ ಬಿದ್ದದ್ದು! ಆಮೇಲೆ ಏನ್ ಮಾಡ್ಬೇಕು ಅಂತ ನೀನೇ ಯೋಚ್ನೆ ಮಾಡ್ತೀಯಂತೆ!” ಸುನೀಲ್ ತನ್ನ ಬಳಿ ಇದ್ದ ಎಲ್ಲಾ ವಿಷಯಗಳನ್ನು ಒದರಿ ರಿಸೀವರ್ ಇಟ್ಟುಬಿಟ್ಟ.

ಖುಷಿ ಇತ್ತೀಚೆಗೆ ನನ್ನೊಂದಿಗೆ ಮಾತು ಕಡಿಮೆ ಮಾಡಿದ್ದಾಳೆ. ಕೇಳಿದ್ರೆ ಕಾಲೇಜು, ಸ್ಟಡೀಸ್ ಅಂತ ನೆವ ಹೇಳ್ತಾಳೆ. ನಾನೋ ಈ ಕಂಪೆನಿ ಕೆಲ್ಸಗಳ ಮಧ್ಯೆ ಸಿಕ್ಕೊಂಡಿದ್ದೀನಿ. ನಾನು ಭೇಟಿಯಾಗ್ಬೇಕು ಅಂದಾಗ ಓದು ಅಂತ ಕಾರಣ ಹೇಳ್ತಾಳೆ, ತಾನೇ ಭೇಟಿ ಮಾಡು ಅಂತಾನೂ ಕೇಳ್ತಿಲ್ಲ. ಇವ್ಳು ಹಿಂದೆ ಹೀಗಿರ್ಲಿಲ್ಲ. ಈ ಹುಡ್ಗಿಯರೆಲ್ಲಾ ಹೀಗೇನಾ? ಗೆಳೆಯ ಅಂತನ್ನಿಸ್ಕೊಂಡ ಹುಡ್ಗ ಕಣ್ಣೆದುರಿಗಿಲ್ಲ ಅಂದ ತಕ್ಷಣ ಅವನ ಮೇಲಿನ ಎಲ್ಲಾ ಭಾವನೆಗಳು ಕಣ್ಣೆದುರಿಗಿರುವ ಮತ್ತೊಬ್ಬನ ವಶವಾಗಿಬಿಡ್ತವಾ? ಅವಳು ಆ ಇನ್ನೊಬ್ಬನ ತೆಕ್ಕೆಯೊಳಗೆ ಜಾರಿ ಬಿಡ್ತಾಳಾ? ಬೇರೆ ಹುಡ್ಗಿಯರು ಹೋಗ್ಲಿ, ನನ್ನ ಖುಷಿ ಕೂಡ ಹೀಗೇನಾ? ರಾಜೇಶನ ಯೋಚನೆಗಳು ಎಲ್ಲಾ ಎಲ್ಲೆಗಳನ್ನೂ ಮೀರುತ್ತಿದ್ದವು. ’ಸರಿ, ಅವ್ನೇನಂದ ಕಾರಂಜಿ ಕೆರೆ ಅಲ್ವಾ? ಇವತ್ತು ಸಂಜೆ ಹೋಗಿ ನೋಡೇ ಬಿಡೋಣ!’ ರಾಜೇಶ್ ತನ್ನೊಳಗೇ ಒಂದು ನಿರ್ಧಾರಕ್ಕೆ ಬಂದ.

***

ಸಂಜೆಯ ತಂಪು ಗಾಳಿ ಹಿತವಾಗಿತ್ತು. ರಾಜೇಶ್ ಒಂದು ಕಡೆಯಿಂದ ಕಾರಂಜಿ ಕೆರೆ ಉದ್ಯಾನವನ್ನು ಜಾಲಾಡಲು ಪ್ರಾರಂಭಿಸಿದ್ದನು. ಒಂದು ಕಡೆಯ ಎಲ್ಲಾ ಬೆಂಚುಗಳನ್ನೂ ಪರಿಶೀಲಿಸಿದ ನಂತರ ಇನ್ನೊಂದು ದಿಕ್ಕಿನೆಡೆಗೆ ಹೆಜ್ಜೆಗಳು ನಡೆದು ಹೋಗುತ್ತಿದ್ದವು. ಅವರಿಬ್ಬರನ್ನೂ ಕಂಡ ನಂತರ ಅದೇ ಹೆಜ್ಜೆಗಳು ಅದುರಿದವು, ತರತರಗುಟ್ಟಿದವು. ಹೊಂಬಿಸಿಲಲ್ಲೂ ಮೈ ಬೆವರುತ್ತಿತ್ತು.

ರಾಜೇಶ್ ತನ್ನೊಳಗೇ, ’ರಾಜೇಶ್ ಕಾಮ್ ಡೌನ್, ರೆಡಿ ಟು ಫೇಸ್ ದ ರಿಯಾಲಿಟಿ!’ ಎಂದು ಧೈರ್ಯ ಹೇಳಿಕೊಳ್ಳುತ್ತಿದ್ದನು. ಸ್ವಲ್ಪ ಸಮಯದವರೆಗೂ ಅವರಿಬ್ಬರ ಮಾತುಗಳನ್ನಾಲಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ. ಕಡೆಗೆ ಇದೆಲ್ಲದಕ್ಕೂ ಇತಿಶ್ರೀ ಹಾಡುವ ಗಟ್ಟಿ ಮನಸ್ಸು ಮಾಡಿ ಅವರಿಬ್ಬರ ಮುಂದೆ ಪ್ರತ್ಯಕ್ಷನಾದನು.

ಅವನನ್ನು ಕಾಣುತ್ತಿದ್ದಂತೆ ಸ್ವಲ್ಪ ವಿಚಲಿತಳಾದಂತೆ ಕಂಡು ಬಂದ ಖುಷಿ, ಬಾಯಿ ತೆರೆಯಲಾಗದೆ ’ಬೆಬ್ಬೆಬ್ಬೆ…’ಗುಟ್ಟುತ್ತಿದ್ದಳು. ಸ್ವಲ್ಪ ಸಮಯದ ನಂತರ ಸಾವರಿಸಿಕೊಂಡು, “ಹೇ ರಾಜೇಶ್ ನೀನೇನಿಲ್ಲಿ. ನಿನ್ನ ನೋಡ್ತಿರೋದು ಆಶ್ಚರ್ಯ ಆಗ್ತಿದೆ!” ಎಂದಳು.

“ಹೌದು ವಾಸ್ತವಗಳನ್ನು ಎದುರಿಸುವಾಗ ಎಲ್ರಿಗೂ ಹಾಗಾಗಬಹುದು!” ಎಂದನು ರಾಜೇಶ್. ಅವಳ ಮುಖ ಕಪ್ಪಿಟ್ಟಿತು.

ಆದರೂ ಸಾವರಿಸಿಕೊಂಡು, ಪಕ್ಕದಲ್ಲಿದ್ದ ಹುಡುಗನಿಗೆ, “ಹೇ ಜ಼ರೀನ್, ಇವ್ನು ನನ್ನ ಇಂಜಿನಿಯರಿಂಗ್ ಕಾಲೇಜ್ ಮೇಟ್ ಮತ್ತು ಗೆಳೆಯ ರಾಜೇಶ್” ಎಂದಳು. ನಂತರ ರಾಜೇಶ್ ನೆಡೆಗೆ ತಿರುಗಿ, “ರಾಜೇಶ್, ಯೂ ಕ್ನೋ, ಹೀ ಈಸ್ ಜ಼ರೀನ್. ನನ್ನ ಬಾಯ್ ಫ್ರೆಂಡ್” ಎಂದು ಪರಿಚಯಿಸಿದಳು.

ಜ಼ರೀನ್ ಸಹಜವೆಂಬಂತೆ ತನ್ನ ಕೈ ಮುಂದೆ ಚಾಚಿದ. ಅವನ ಕೈ ಕುಲುಕಿದ ರಾಜೇಶ್ ಖುಷಿಯೆಡೆಗೆ ತಿರುಗಿ, “ಇಟ್ಸ್ ಗುಡ್ ಟು ಕ್ನೋ, ಲಾಟ್ ಆಫ್ ಇನ್ಫರ್ಮಾಷನ್ಸ್ ಇನ್ ಅ ಡೇ!” ಅಂದನು. ತಾನೇ ಮುಂದುವರೆಸುತ್ತಾ… ”ಖುಷಿ ಅಕ್ಟೋಬರ್ ೧೦ಕ್ಕೆ ನನ್ನ ಭೇಟಿ ಮಾಡು. ನಾನು ನಿಂಗೆ ಸೆಂಡ್ ಆಫ್ ಕೊಡ್ಬೇಕು!” ಎಂದನು. ಅವಳು ದಿಗ್ಭ್ರಾಂತಳಾಗಿ ನಿಂತಿದ್ದಳು. “ನನಗೆ ಪ್ರೀತಿಯೆಂದರೇನೆಂದು ತಿಳಿಸಿ ದೊಡ್ಡ ಉಪಕಾರ ಮಾಡಿದ ನಿನಗೆ ನಾನು ಅಷ್ಟೂ ಮಾಡಿಲ್ಲ ಅಂದ್ರೆ ತಪ್ಪಾಗುತ್ತೆ!” ಎಂದ ರಾಜೇಶನ ಹೆಜ್ಜೆಗಳು ಬಿರುಸು ಪಡೆದುಕೊಂಡವು.

***

ಅಸಾಧಾರಣವಾಗಿ ಬೆವರುತ್ತಿದ್ದ ರಾಜೇಶನಿಗೆ ಗಕ್ಕನೆ ಎಚ್ಚರವಾಯ್ತು. ತಾನು ಕಂಡದ್ದು ಕನಸೋ, ನಿಜವೋ ತಿಳಿಯದೆ ತೊಳಲಾಡಲಾರಂಭಿಸಿದ. ಗಡಿಯಾರ ಮತ್ತೆ, ’ಢಣ್ ಢಣ್’ ಎಂದು ಎರಡು ಸಲ ಬಡಿದು ಸುಮ್ಮನಾಯ್ತು. ತಡೆಯಲಸಾಧ್ಯವಾದ ದಾಹವನ್ನು ತಣಿಸಿಕೊಳ್ಳಲು ಅವನು ನೀರಿಟ್ಟಿದ್ದ ಲೋಟ ಹುಡುಕಲೇಬೇಕಾಯ್ತು. ಗಟಗಟನೆ ನೀರು ಗಂಟಲೊಳಗಿಳಿಸಿಕೊಂಡವನು, ಸಮಾಧಾನದ ನಿಟ್ಟುಸಿರು ಬಿಟ್ಟನು. ಎದ್ದು ತನ್ನ ಮಂಚದ ಪಕ್ಕದಲ್ಲಿದ್ದ ಕಿಟಕಿಗಳನ್ನು ತೆರೆದು ಸುಯ್ಯನೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿಕೊಂಡನು. ಇನ್ನೂ ನಿದ್ದೆ ಕಳೆದಿಲ್ಲ ಎಂದೆನಿಸಲು ಶುರುವಾಗುತ್ತದೆ, ಸುಮ್ಮನೆ ಯೋಚನೆ ಮಾಡುತ್ತ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕೂರುತ್ತಾನೆ. ಕುರ್ಚಿಯನ್ನು ಹಿಂದಿನಿಂದ ಮುಂದಕ್ಕೂ, ಮುಂದಿನಿಂದ ಹಿಂದಕ್ಕೂ ಜೋಕಾಲಿ ಜೀಕಿಸುತ್ತಾನೆ. ಈಗವನಿಗೆ ಹಾಯೆನಿಸುತ್ತದೆ!

---------------------------------------------------------------------------------

“ಹಲೋ, ರಾಜೇಶ್ಅವರ ಮಾತಾಡ್ತಿರೋದು?” ಎಂದು ಹೆಣ್ಣು ದನಿಯೊಂದು ರಾಜೇಶ್’ನ ಮೊಬೈಲೊಳಗಿಂದ ಕೇಳಿ ಬರುತ್ತದೆ. ’ಐಸ್ ಕ್ರೀಂ ಕಾರ್ನರ್’ ನ ಒಂದು ಮೂಲೆಯಲ್ಲಿ ಕೂತಿದ್ದ ಅವನು ಆ ಕಡೆ, ಈ ಕಡೆ ನೋಡಿ… “ಹೌದು, ಹೇಳಿ” ಎಂದನು.

“ನಾನು ಖುಷಿ ತಂಗಿ ಅನೀತ ಮಾತಾಡ್ತಿರೋದು” ಎಂದಿತು ಆ ಕಡೆಯ ಧ್ವನಿ. ರಾಜೇಶ್’ನಿಗೆ ಅನೀತಾಳ ನೆನಪಾಯ್ತು. ಆ ಥರ ನೋಡೋದಾದ್ರೆ ಅವನು ಖುಷಿ ಮನೆಯವ್ರನ್ನ ಒಂದೆರಡು ಸಲ ಭೇಟಿ ಮಾಡಿಯೂ ಇದ್ದ! ಆ ಕುಟುಂಬದಲ್ಲಿ ತಾನೂ ಕಳೆದುಹೋಗಬೇಕೆಂದು ಬಯಸಿದ್ದ.

“ಹೇಳು ಅನೀತಾ, ಏನ್ ಸಮಾಚಾರ?” ಅವನು ಕರೆ ಮಾಡಿದ ಕಾರಣ ವಿಚಾರಿಸಿಕೊಳ್ಳುತ್ತಿದ್ದ.

“ಅಕ್ಕನಿಗೆ ಆಕ್ಸಿಡೆಂಟ್ ಆಗಿದೆ. ಐ.ಸಿ.ಯೂ ನಲ್ಲಿದ್ದಾಳೆ. ನಿಮ್ಮ ಹೆಸರನ್ನು ಪದೇ ಪದೇ ಕನವರಿಸುತ್ತಿದ್ದಳು ಅದಕ್ಕೆ ನಿಮಗೆ ಫೋನ್ ಮಾಡಿದ್ದು” ಎಂದಿತು ಆ ಕಡೆಯ ಧ್ವನಿ.

ರಾಜೇಶ್ ಆಗಷ್ಟೆ ಕೇಳಿದ ವಿಷಯವನ್ನು ಅರಗಿಸಿಕೊಳ್ಳಲಾಗದೆ ತತ್ತರಿಸುತ್ತಿದ್ದ. ಅವ್ಳು ಅಷ್ಟು ವೇಗವಾಗಿ ಗಾಡಿ ಓಡ್ಸೋಳಲ್ಲ ಆದ್ರೂ ಯಾಕ್ ಹೀಗಾಯ್ತು. ಕೈಗಳು ನಡುಗಲು ಪ್ರಾರಂಭಿಸುತ್ತವೆ. ಸ್ವಲ್ಪ ಸಾವರಿಸಿಕೊಂಡು… “ಯಾವ ಆಸ್ಪತ್ರೆಲಿದ್ದಾಳೆ?” ಅವನಿಗರಿವಿಲ್ಲದಂತೆ ಹೊರಟಿತ್ತು ಮಾತು.

“ಅಪೋಲೋ ಆಸ್ಪತ್ರೆ. ಅಪ್ಪ-ಅಮ್ಮ ಎಲ್ರೂ ಬಂದಿದ್ದಾರೆ. ಅಕ್ಕ ಪದೇ ಪದೇ ನಿಮ್ಮ ಹೆಸ್ರನ್ನ ಕನವರಿಸ್ತಿದ್ದಾಳೆ. ಒಂದ್ಸಲ ಬಂದ್ ಹೋಗೋಕಾಗುತ್ತಾ?” ದೈನ್ಯವಾಗಿ ಕೇಳಿದಳು ಅನೀತ. “ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರ್ತೀನಿ” ಮೊಬೈಲ್ ಅನ್ನು ಜೇಬಿಗಿಳಿಸಿದವನ ಬೈಕ್ ವೇಗವಾಗಿ ಓಡಲಾರಂಬಿಸುತ್ತದೆ.

***

ಖುಷಿ ಐ.ಸಿ.ಯೂ ನಲ್ಲಿರೋದು ನೋಡಿ ರಾಜೇಶನ ಕಣ್ಣುಗಳು ಹನಿಗೂಡುತ್ತಿದ್ದವು. ಅವನು ಖುಷಿಯ ಪರಿಸ್ಥಿತಿ ಹೇಗಿದೆ ಎಂದು ತಿಳಿಯುವ ಧಾವಂತ ತೋರಿಸುತ್ತಾನೆ. ಅವಳನ್ನು ಟ್ರೀಟ್ ಮಾಡ್ತಿರೋ ಡಾಕ್ಟರ್ ಗಾಗಿ ಅಲ್ಲಲ್ಲಿ ತಡಕಾಡುತ್ತಾನೆ. ಅವನಿಗೆ ಏನು ಮಾಡಬೇಕೆಂದೇ ತೋಚದಾಗುತ್ತದೆ.

ಮುಂದೆ ನಡೆದು ಹೋಗುವಾಗ, ಯಾರೋ ಖಾಕಿ ತೊಟ್ಟ ಒಂದಷ್ಟು ಜನ ಮಧ್ಯ ವಯಸ್ಕರೊಬ್ಬರೊಂದಿಗೆ ಮಾತನಾಡುತ್ತಿರುತ್ತಾರೆ. “ನಿಮ್ಮ ಮಗಳೇನಾದ್ರು ಹೊಸದಾಗಿ ಡ್ರೈವಿಂಗ್ ಕಲಿಯುತ್ತಿದ್ದರಾ? ಯಾಕಂದ್ರೆ ಇದು ಡೆಲಿಬರೇಟ್ ಆಗಿ ಆಗಿರುವಂತಹ ಆಕ್ಸಿಡೆಂಟ್. ಒನ್ ವೇ ಟ್ರಾಫಿಕ್ ನಲ್ಲಿ, ಅದೂ ಪೀಕ್ ಅವರ್ಸ ಅಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದಿದ್ದಾರೆ. ಅಲ್ಲಾರೀ ಕಲ್ತಿರೋ ಜನಾನೇ ಟ್ರಾಫಿಕ್ ರೂಲ್ಸ್ ನ ಗಾಳಿಗೆ ತೂರಿದ್ರೆ ಕಲಿತಿಲ್ಲದೆ ಜನಕ್ಕೆ ನಾವೇನ್ ಹೇಳೋದು?.” ಆ ಖಾಕಿ ಆಸಾಮಿ ವಿಚಾರಿಸುತ್ತಲೇ ಇದ್ದ. ರಾಜೇಶ್ ಸುಸ್ತಾಗಿ ಬಳಲಿದವನಂತೆ ಕಾಣುತ್ತಿದ್ದ ಆದರೂ ಡಾಕ್ಟರ್ ನ ಕೊಠಡಿ ಹುಡುಕುತ್ತಲೇ ಇದ್ದ.

ಡಾಕ್ಟರ್ ಬಳಿ ನಿಂತವನೇ, “ಡಾಕ್ಟರ್ ಏನಿದೆಲ್ಲಾ? ಖುಷಿಗೇನಾಗಿದೆ? ಪ್ಲೀಸ್ ಅವ್ಳಿಗೇನೂ ಆಗಿಲ್ಲ. ಬದುಕ್ತಾಳೆ ಅಂತ ಹೇಳಿ ಪ್ಲೀಸ್… ನಿಮ್ ದಮ್ಮಯ್ಯ ಅಂತೀನಿ” ರಾಜೇಶ್ ನ ಕಣ್ಣೀರು ಧಾರಕಾರವಾಗಿತ್ತು.

“ನಮ್ ಕೈಯ್ಯಲ್ಲಾಗೋ ಎಲ್ಲಾ ಪ್ರಯತ್ನಾನೂ ಮಾಡ್ತೀವಿ ಮಿಸ್ಟರ್. ಇನ್ನುಳಿದದ್ದು ದೇವ್ರಿಛ್ಛೆ.” ಡಾಕ್ಟರ್ ಎಲ್ಲವನ್ನೂ ದೇವರ ಮೇಲೆ ಹಾಕಿ ನಿರಾಳರಾದರು.

ಪಕ್ಕದಲ್ಲಿದ್ದ ನರ್ಸ್ ಒಂದು, ಇನ್ನೊಬ್ಬರೊಂದಿಗೆ, “ಆ ಹುಡ್ಗಿ ಹಣೆಬರಹ ನೋಡಿ, ಮೊದ್ಲೇ ಕ್ಯಾನ್ಸರ್ ಬೇರೆ ಇತ್ತು. ಅದು ಸಾಲ್ದು ಅಂತ ಈಗ ಆಕ್ಸಿಡೆಂಟ್ ಬೇರೆ ಆಗಿದೆ. ಅವಳ ಹಣೆಯಲ್ಲಿ ಇನ್ನೆಷ್ಟ್ ದಿನ ಅಂತ ಬರ್ದಿದ್ದಾನೋ ಬ್ರಹ್ಮ! ಆದ್ರೂ ಎಂತಹ ಉತ್ಸಾಹದ ಚಿಲುಮೆ ಅವ್ಳು. ಆ ಸಾವಿಗೂ ಅವ್ಳನ್ನ ಕಂಡು ಅಸೂಯೆಯಾಗಿರ್ಬೇಕು!” ಎಂದು ಹೇಳುತ್ತಿದ್ದರು.

ರಾಜೇಶ್ ಗರಬಡಿದವನಂತೆ ನಿಂತಿದ್ದ. ಯಾಂತ್ರಿಕವಾಗಿ ಐ.ಸಿ.ಯೂ ನ ಕಡೆ ತಿರುಗಿ ನಿಂತ. ಅವನು ಬೆವತಿದ್ದನ್ನು ನೋಡಿದ ಅನೀತಾಳಿಗೆ ಅವನ ಪರಿಸ್ಥಿತಿಯ ಅರಿವಾಗಿತ್ತು. “ಇದೆಲ್ಲ ನಿಮ್ಗೆ ಗೊತ್ತಾಗೋದು ಖುಷಿಗೆ ಬೇಕಿರ್ಲಿಲ್ಲ. ಅದಕ್ಕಾಗೇ ಇಷ್ಟೆಲ್ಲಾ… ಇಷ್ಟೆಲ್ಲಾ…” ಎನ್ನುವಾಗ ಅವಳ ಗಂಟಲು ಉಬ್ಬಿ ಬಂತು.

“ಅದ್ರೂ ಈ ಕ್ಯಾನ್ಸರ್ ಹೇಗೆ… ಈ ಕ್ಯಾನ್ಸರ್, ನನ್ನ ಖುಷಿಗೆ…” ರಾಜೇಶ್’ನ ಮಾತುಗಳು ಮುಂದುವರೆಯಲು ಸೋಲುತ್ತವೆ. ಅವನಿಗೆ ಒಂದು ಕ್ಷಣವೂ ಅಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. “ಖುಷಿ… ಖುಷಿ… ಖುಷಿ…” ಐ.ಸಿ.ಯೂ ನ ಕಡೆಗೆ ಒಂದಷ್ಟು ಜನರು ದೌಡಾಯಿಸುತ್ತಾರೆ. 

***

“ಖುಷಿ, ಖುಷಿ, ಖುಷಿ…” ಎಂದು ಜೋರಾಗಿ ಚೀರುತ್ತಿದ್ದನು ರಾಜೇಶ್. ಮೈಯೆಲ್ಲ ಒದ್ದೆಯಾಗಿ ಬೆವರ ಝಳವೆಲ್ಲ ಹರಿದು ಹೋದಂತೆನಿಸಿದ್ದರಿಂದ, ದಡಕ್ಕನೆ ಎದ್ದು ಕೂತ. ಯಾವುವೋ ಒಂದಷ್ಟು ಕೈಗಳು ಮನೆಯ ಬಾಗಿಲು ಬಡಿಯುತ್ತಿದ್ದವು.


- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ