ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday, 17 February 2013

ಅಸ್ತಿತ್ವ


ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಈ ಕಥೆ ಪ್ರಕಟವಾಗಿದ್ದು ಅದರ ಲಿಂಕ್ ಇಲ್ಲಿದೆ:


ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಗಡಗಳು ಸಂಭವಿಸಿ ಭೂತ ಪ್ರೇತಗಳಾವೋ ಬಂದು ಸೇರಿಕೊಂಡಿದ್ದ ಕಾರಣವೂ ಇರಬಹುದು! ಒಟ್ಟಿನಲ್ಲಿ ಒಂದು ನರ ಪ್ರಾಣಿಯ ಸುಳಿವೂ ಆ ಬಂಗಲೆಯ ಸುತ್ತಾ ಇದ್ದಂತಿರಲಿಲ್ಲ. ನಾನು ಮಾತ್ರ ನಿರ್ಲಿಪ್ತನಾಗಿ, ಧೈರ್ಯವಹಿಸಿ ಆ ಸರಿ ರಾತ್ರಿಯ ಕಗ್ಗತ್ತಲ ನಡುವಲ್ಲಿ ದೀಪವಿಲ್ಲದೆಯೂ ನಿರಾತಂಕವಾಗಿ ಉಸಿರಾಡುತ್ತಾ ನಿಂತಿದ್ದೆ. ನನ್ನುಸಿರ ಉಚ್ಛ್ವಾಸ - ನಿಚ್ಛ್ವಾಸಗಳ ಏರಿಳಿತಗಳು ಅಕ್ಕ ಪಕ್ಕದಲ್ಲಿರುವವರಿಗೂ ಕೇಳಿಸಬಹುದಿತ್ತು, ಆದರೆ ಅಲ್ಲಿ ನನ್ನನ್ನು ಬಿಟ್ಟು ಮತ್ತಾರೂ ಇರಲಿಲ್ಲ!

ನಿಧಾನವಾಗಿ ನನ್ನ ಭಾವಾಂತರಂಗದಲ್ಲಿನ ಭಯಗಳನ್ನು ನಿಗ್ರಹಿಸುತ್ತಾ, ಆಚೀಚೆ ಯಾರಾದರೂ ಇರಬಹುದೇ? ಈ ಸ್ಥಳ ಇರುವುದಾದರೂ ಎಲ್ಲಿ ಎಂಬ ಅರಿವನ್ನು ತಂದುಕೊಳ್ಳುವ ಪ್ರಯತ್ನ ಮಾಡಬೇಕು ಎಂದುಕೊಳ್ಳುತ್ತಿದ್ದೆ! ಅಸಲಿಗೆ ನಾನು ಅಲ್ಲಿಗೆ ಹೇಗೆ ಬಂದೆ ಎಂಬ ನೆನಪೂ ಇದ್ದಂತೆ ತೋರುತ್ತಿರಲಿಲ್ಲ! ತಲೆ ಧಿಂ ಎಂದು ಹಿಡಿದುಕೊಂಡಿದೆ ಎನಿಸುತ್ತಿತ್ತು. ತಲೆ ಒತ್ತಿ ನೋಡಿಕೊಂಡೆ, ತಲೆಯ ಹಿಂಬದಿಗೆ ಯಾರಾದರೂ ಹೊಡೆದಿರಬಹುದು ಎನಿಸುತ್ತಿತ್ತು. ತಲೆಯ ಹಿಂಬಾಗ ಊದಿಕೊಂಡಂತೆನಿಸುತ್ತಿತ್ತು, ಮುಟ್ಟಿದ ಕೈಗಳಿಗೆ. ಸರಿ ಇನ್ನು ಎಷ್ಟು ಹೊತ್ತು ಈ ಅಜ್ಞಾತ ಸ್ಥಳದಲ್ಲಿ ಅಜ್ಞಾತವಾಸ ಅನುಭವಿಸುವುದು, ಇಲ್ಲಿಂದ ಹೇಗಾದರೂ ಹೊರಗೆ ಹೋಗುವ ದಾರಿ ಹುಡುಕಬೇಕು ಎಂದು ಒಳ ಮನಸ್ಸು ಹೇಳುತ್ತಿತ್ತು. ನಾನು ನಿಧಾನವಾಗಿ ನನ್ನ ಕಾಲುಗಳನ್ನೆಳೆದುಕೊಂಡು ಯಾವುದೋ ಒಂದು ದಿಕ್ಕಿನಲ್ಲಿ ಸರಿಯಲು ಪ್ರಾರಂಭಿಸಿದೆ, ಆ ಉಗ್ರ ನರಸಿಂಹನನ್ನು ನೆನೆಯುತ್ತಾ!

ಈಗ ನಾನು ಸಾಗುತ್ತಿರುವುದು ನನ್ನ ಅತೀ ದುರ್ಗಮದ ಹಾದಿಯಿರಬಹುದು ಎನಿಸಿತು! ಆ ಕಡೆ - ಈ ಕಡೆ ನೋಡುತ್ತಾ, ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತಾ ಬೆಳಕನ್ನು ಹುಡುಕುತ್ತಿದ್ದೆ. ಬಂಗಲೆ ಸುಮಾರು ಏಳೆಂಟು ಅಂತಸ್ತಿನದಾಗಿದ್ದು, ನಾನು ಈಗಿರುವುದು ಕಡೆಯ ಅಂತಸ್ತು ಎನಿಸುತ್ತಿತ್ತು. ಸಾವಕಾಶವಾಗಿ ಮೆಟ್ಟಿಲಿಳಿಯುವ ಹಾದಿಯನ್ನು ಹುಡುಕುತ್ತಿದ್ದೆ. ಪ್ರತಿಯೊಂದು ಅಂತಸ್ತೂ ವೃತ್ತಾಕಾರವಾಗಿದ್ದು, ಒಂದು ದಿಕ್ಕಿನಲ್ಲಿ ಪ್ರಾರಂಭಿಸಿದರೆ ಒಂದು ಆವೃತ್ತದ ನಂತರ ಮತ್ತೆ ಪ್ರಾರಂಭಕ್ಕೇ ತಂದು ನಿಲ್ಲಿಸುತ್ತಿತ್ತು. ಮಧ್ಯದಲ್ಲಿ ಕೆಳ ಅಂತಸ್ತನ್ನೂ, ಮೇಲಂತಸ್ತನ್ನೂ ನೋಡಬಹುದಾದ ವೃತ್ತಾಕಾರದ ಪ್ಯಾಸೇಜ್ ಇತ್ತು. ಕೆಳಗೆ ಇಳಿಯುವ ಮೆಟ್ಟಿಲುಗಳ ಕುರುಹೇ ಸಿಗುತ್ತಿರಲಿಲ್ಲ. ಹೇಗೋ ಮೂರು ಸುತ್ತು ಸುತ್ತಿದ ನಂತರ ಆರನೇ ಅಂತಸ್ತಿಗೆ ಇಳಿಯಲು ಒಂದು ಸಣ್ಣ ಕಿಂಡಿಯಾಕಾರದ ದಾರಿ ಸಿಕ್ಕಿತು. ಅದರೊಳಗೆ ಕಷ್ಟ ಪಟ್ಟು ತೂರಿ ಕೆಳಗಿಳಿದೆ. ಆರನೇ ಅಂತಸ್ತು ತಲುಪಿದ ನಾನು ಉಸಿರು ಬಿಡುತ್ತಾ ಹೇಗಾದರೂ ಇಲ್ಲಿಂದ ಬಚಾವಾಗಬಹುದೇನೋ ಎಂದು ಆಶಾಕಿರಣ ಹಚ್ಚಿಟ್ಟೆ, ನನ್ನ ಮನದೊಳಗೆ! ಹಾಗೆ ನನ್ನದೇ ಯೋಚನೆಗಳಲ್ಲಿ ಮೈಮರೆತಿದ್ದ ನನ್ನ ಪಕ್ಕದಲ್ಲಿ ಎಲ್ಲಿಂದಲೋ ತೂರಿಕೊಂಡು ಬಂದು ದೊತ್ತೆಂದು ಅದೇನೋ ಬಿದ್ದ ಸಪ್ಪಳವಾಯ್ತು. ನನ್ನ ಎದೆ ಬಡಿತ ಜೋರಾಯ್ತು! ಹಾಗೆ ದೊತ್ತೆಂದು ಬಿದ್ದ ವಸ್ತು ನಿಧಾನಕ್ಕೆ ಚಲಿಸುವ ಶಬ್ದ ಮಾಡಿತು. ನಾನು ಒಮ್ಮೆಲೇ ಬೆಚ್ಚಿಬಿದ್ದೆ! ನಿಧಾನಕ್ಕೆ ಬಾಲ ಗುಡಿಸಿದಂತಾಗಿ, ತನ್ನ ಹೊಳೆಯುವ ಕಣ್ಣುಗಳನ್ನೊಮ್ಮೆ ಜಳಪಿಸಿದ ಆ ಪ್ರಾಣಿ, 'ಮೀಯಾಂ...' ಎಂದೊಡನೆ ನನಗೆ ಚಳಿ ಜ್ವರ ಬಂದು ಬಿಟ್ಟಂತಾಯ್ತು! "ಥೂ ಹಾಳಾದ್ದು ಬೆಕ್ಕು" ಎಂದು ನನ್ನನ್ನು ನಾನೇ ಸಂತೈಸಿಕೊಂಡೆ.

ಹಾಗೆ ನಡೆಯುತ್ತಾ ನನ್ನ ಕೆಳ ಅಂತಸ್ತಿಗೆ ತಲುಪುವ ಮೆಟ್ಟಿಲುಗಳ ಹುಡುಕಾಟವನ್ನು ಮುಂದುವರೆಸಿದೆ. ಆರನೆಯ ಅಂತಸ್ತಿನಲ್ಲಿ ಕೆಲವು ರೂಮುಗಳಿರುವಂತೆ ಕಂಡುಬಂತು. ನಾನು ಆ ಅಂತಸ್ತನ್ನೂ ಒಂದು ಆವೃತ್ತ ಬಂದ ನಂತರ, ರೂಮುಗಳಲ್ಲಿ ಹೇಗಾದರೂ ಕೆಳಗಿಳಿಯಬಹುದೇನೋ ಎಂದು ಪ್ರತಿಯೊಂದು ರೂಮುಗಳ ಸಂದರ್ಶನವನ್ನು ಶುರು ಮಾಡಿದೆ. ಎರಡನೇ ರೂಮಿನಲ್ಲಿ ಐದನೇ ಅಂತಸ್ತಿಗಿಳಿಯುವ ದಾರಿ ಸಿಕ್ಕಿತು. ಐದನೇ ಅಂತಸ್ತಿಗೆ ಬರುತ್ತಿದ್ದಂತೆ ಅದು ಒಂದು ದೊಡ್ಡ ಹಾಲ್ ನಂತೆ ಕಾಣಿಸಿತು. ಅದನ್ನು ಮನೆಯ ವಾರಸುದಾರರು ಸಮಾರಂಭಗಳನ್ನು ಆಯೋಜಿಸಲು, ಇಲ್ಲವೇ ಪಾರ್ಟಿಗಳನ್ನು ಹಮ್ಮಿಕೊಳ್ಳಲು ಬಳಸುತ್ತಿದ್ದಿರಬಹುದು ಎನಿಸಿತು. ಅಲ್ಲಲ್ಲಿ ದುಂಡನೆಯ ಮೇಜುಗಳು ಮತ್ತು ವೈಭವೋಪೇತ ಕುರ್ಚಿಗಳು ಕಾಣುತ್ತಿದ್ದವು. ಹಾಗೆ ಆ ಅಂತಸ್ತನ್ನು ಪರಿಶೀಲಿಸುತ್ತಿದ್ದಂತೆ ಕೆಲವರ ಓಡಾಟ ಮತ್ತು ಪಿಸುಗುಟ್ಟುವಂತಹ ಮಾತುಗಳು ಕೇಳಿಸಲು ಶುರುವಾದವು. ನನಗೆ ಇನ್ನಿಲ್ಲದ ಭಯ ಶುರುವಾಯ್ತು. ಇದೇನು ಯಾರು ಇಲ್ಲವೆಂದುಕೊಂಡಿದ್ದ ಬಂಗಲೆಯಲ್ಲಿ ಈ ಪಿಸುಮಾತುಗಳು ಎಲ್ಲಿಂದ ಬರುತ್ತಿವೆಯಪ್ಪಾ ಎಂದು ಭಯವಾಗಿ 'ಹನುಮಂತ ಚಾಳೀಸ'ವನ್ನು ಹೇಳಿಕೊಳ್ಳಲು ಶುರುಮಾಡಿದೆ, ಭಯಕ್ಕೆ ನಾಲಿಗೆ ತೊದಲುತ್ತಿತ್ತು! ಆದದ್ದು ಆಗಲಿ ಎಂದು ಪಿಸುಮಾತುಗಳ ಶಬ್ದ ಬರುತ್ತಿದ್ದೆಡೆಗೆ ಹೆಜ್ಜೆ ಹಾಕಿದೆ. ಅದ್ಯಾವುದೋ ರೂಮಿನಲ್ಲಿ ನಾಲಿಗೆ ಚಪ್ಪರಿಸುತ್ತಿರುವ ಶಬ್ಧವಾಗುತ್ತಿತ್ತು! ನಾನು ಆ ಕಡೆಗೆ ನಡೆಯುತ್ತಿದ್ದಂತೆ, ಆಯ ತಪ್ಪಿ ಮೆಟ್ಟಿಲುಗಳ ಮೇಲುರುಳಿ ನಾಲ್ಕನೇ ಅಂತಸ್ತಿಗೆ ಬಿದ್ದಿದ್ದೆ!

ಎದುರಿಗೆ ಯಾರೋ ನನ್ನ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಅದೇನನ್ನೋ ತಿನ್ನುತ್ತಿರುವಂತೆನಿಸುತ್ತಿತ್ತು. ನಾನು ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತಾ ಆ ಆಕೃತಿಯನ್ನು ಸಮೀಪಿಸಿದೆ. ಆ ಆಕೃತಿ ಯಾವುದೋ ರುಂಡವಿಲ್ಲದ ದೇಹದಿಂದ ಬಾಯಿ ಹಾಕಿ ರಕ್ತ ಕುಡಿಯುತ್ತಿತ್ತು. ನಾನು ಅದನ್ನು ನೋಡಿ ಬೆಚ್ಚಿ ಬಿದ್ದು, ಅಯ್ಯೋ ಎಂದು ಕೂಗಲು ಪ್ರಯತ್ನಿಸಿದೆ, ಮಾತುಗಳು ಮಾತ್ರ ಹೊರಬರಲಿಲ್ಲ! ಆಡಿಸಲು ಪ್ರಯತ್ನಪಟ್ಟ ಕೈಕಾಳುಗಳೂ ಅಲುಗಾಡಲಿಲ್ಲ. ನನಗೆ ಇದು ಕನಸೇ ಅಥವಾ ನನಸೇ ಎಂಬ ಬಗ್ಗೆ ಜಿಜ್ಞಾಸೆ ಶುರುವಾಯ್ತು! ನನ್ನ ಮೈಯ್ಯನ್ನೊಮ್ಮೆ ಚಿವುಟಿ ನೋಡಿಕೊಂಡೆ! ಎಲ್ಲವೂ ನಿಜವೇ ಎನ್ನುವುದು ಖಾತ್ರಿಯಾಯ್ತು! ಇನ್ನೇನು ಮಾಡುವುದು, ಪರಿಣಾಮ ಏನೇ ಆದರೂ ಆ ಕುರೂಪ ಆಕೃತಿಯನ್ನು ಎದುರಿಸುವುದೇ ಈಗ ಉಳಿದಿರುವ ದಾರಿ ಎಂದು ನಿಶ್ಚಯಿಸಿಕೊಂಡೆ. ಕಡೆಗೆ ಧೈರ್ಯ ಮಾಡಿ ಆ ಕುರೂಪ ಆಕೃತಿಯನ್ನುದ್ದೇಶಿಸಿ, "ಹೇ, ಯಾರು ನೀನು? ನಿನಗೆ ತಿನ್ನಲು ಮನುಷ್ಯ ಮಾಂಸವೇ ಬೇಕೇ? ಮನುಷ್ಯರ ಮಾಂಸವನ್ನು ತಿನ್ನಲು ನಿನಗೆ ಹೇಸಿಗೆಯಾಗುವುದಿಲ್ಲವೇ? ನೀನೂ ನೋಡಲು ಹೆಚ್ಚೂ ಕಮ್ಮಿ ಮನುಷ್ಯರಂತೆಯೇ ಇರುವೆ! ಒಬ್ಬ ಮನುಷ್ಯ ಮತ್ತೊಬ್ಬನನ್ನು ಹೀಗೆ ಬಗೆದು ತಿನ್ನುವುದು ಅನಾಗರೀಕತೆಯಲ್ಲವೇಆ ದೇಹವನ್ನು ಅಲ್ಲಿಯೇ ಬಿಟ್ಟು ಮೇಲೆ ಏಳು ಪ್ರಾರಬ್ಧ ಕರ್ಮವೇ!" ಎಂದು ಗದರಿಸಿದೆ. ಅದಕ್ಕೆ ನನ್ನ ಯಾವೊಂದು ಮಾತುಗಳೂ ಮುಟ್ಟಿದಂತೆ ಕಾಣಲಿಲ್ಲ, ಅದು ಅದರ ಪಾಡಿಗೆ ತನ್ನ ಅಮಾನುಷ ಕೆಲಸ ಮುಂದುವರೆಸಿಯೇ ಇತ್ತು! ಆ ಮನುಷ್ಯನ ರಕ್ತವನ್ನು ಸಂಪೂರ್ಣ ಹೀರಿ, ಮಾಂಸವನ್ನು ತಿನ್ನಲು ಶುರು ಮಾಡಿತ್ತು.

ನನಗೆ ಆ ಅಮಾನವೀಯ ದೃಶ್ಯವನ್ನು ನೋಡಿ, ಅಸಹ್ಯದೊಂದಿಗೆ ರೋಷವೂ ಉಕ್ಕಿ ಬಂತು! ನಾನು ನನ್ನ ಕಾಲನ್ನು ಜಾಡಿಸಿ ಆ ಆಕೃತಿಗೆ ಒದ್ದೆ. ಅದು ಒಂದಿಂಚೂ ಕದಲಲಿಲ್ಲ! ತನ್ನ ಪಾಡಿಗದು ಎದೆಯನ್ನು ಬಗೆದು ಹೃದಯವನ್ನು ಹೊರಗೆಳೆದು, ತಿನ್ನಲು ಶುರು ಮಾಡಿತು. ನಾನು ಅದನ್ನು ಎಚ್ಚರಿಸಲು ಇಷ್ಟೆಲ್ಲಾ ಪ್ರಯತ್ನಪಟ್ಟರೂ ಸಫಲವಾಗದಾದಾಗ, ಅವಮಾನಿತನಾದಂತೆನಿಸಿ ಆ ಆಕೃತಿಯೆಡೆಗೆ ರೋಷದಿಂದ ನೋಡಿದೆ. ಅದರ ಮುಂದೆ ನನ್ನ ತ್ರಿವಿಕ್ರಮ ಪೌರುಷ ಪ್ರದರ್ಶಿಸುವ ಆಸೆಯಿಂದ ಅಕ್ಕಪಕ್ಕ ಏನಾದರೂ ಆಯುಧಗಳು ಸಿಗಬಹುದೇ ಎಂದು ಅತ್ತಿತ್ತ ನೋಡುತ್ತಾ ಹುಡುಕುತ್ತಿದ್ದೆ. ಆ ಕೋಣೆಯ ಬಲಮೂಲೆಯಲ್ಲಿದ್ದ ಒಂದು ಕೊಡಲಿ ತಾನಿರುವುದರ ಸುಳಿವು ಕೊಟ್ಟಿದ್ದೇ ತಡ, ಅದರೆಡೆಗೆ ಧಾವಿಸಿ ಅದನ್ನು ಎರಡೂ ಕೈಗಳಲ್ಲಿ ಸೇರಿಸಿ ಎತ್ತಿ ಜಳಪಿಸುವ ರೀತಿಯಲ್ಲೊಮ್ಮೆ ಬೀಸಿದೆ. ಕೊಡಲಿಯನ್ನು ಕೈಯ್ಯಲ್ಲಿಡಿದದ್ದೇ ತಡ ಆಕ್ರೋಶವನ್ನು ದೇಹದಲ್ಲಿ ಆವಾಹಿಸಿಕೊಂಡವನಂತೆ ಆ ಆಕೃತಿಯೆಡೆಗೆ ಮುನ್ನುಗ್ಗಿ ಕೊಡಲಿಯನ್ನು ಬೀಸಿದೆ! ಅದು ಯಾವ  ಚಲನೆಯನ್ನೂ ತೋರಲಿಲ್ಲ! ಈ ರೀತಿಯಾಗಿ  ಆಕೃತಿ ಪದೇ ಪದೇ ನನ್ನಸ್ಥಿತ್ವವನ್ನು ಕೆಣಕುತ್ತಿರುವುದು ನನ್ನಲ್ಲಿ ಇನ್ನಷ್ಟು ರೋಷ ಉಕ್ಕುವಂತೆ ಮಾಡಿತ್ತು. ಹೇಗಾದರೂ ಮಾಡಿ ಆ ಆಕೃತಿಯ ಗಮನವನ್ನು ನನ್ನೆಡೆಗೆ ಸೆಳೆಯಲು ಯೋಚಿಸುತ್ತಿದ್ದಾಗ, ಅದು ನನ್ನೆಡೆಗೆ ತಿರುಗಿ ತನ್ನ ಬಾಯಿಗೆ ಮೆತ್ತಿಕೊಂಡಿದ್ದ ರಕ್ತವನ್ನು ಒರೆಸಿಕೊಂಡಿತು! ಎದುರಿಗೆ ಕಂಡ ದೃಶ್ಯ ಕಂಡು ಹೌಹಾರಿಬಿಟ್ಟಿದ್ದೆ, ಆ ವಿಕಾರ ಆಕೃತಿ ನಾನೇ ಆಗಿದ್ದೆ! ಅದು ಹೇಗೆ ನಾನಾಗಲು ಸಾಧ್ಯ ಎಂದು ನನ್ನನ್ನೇ ನಾನು ಪರಿಶೀಲಿಸುವ ರೀತಿಯಲ್ಲಿ ನನ್ನ ಮುಖ ಮೂತಿಯನ್ನೆಲ್ಲಾ ಮುಟ್ಟಿ ನೋಡಿಕೊಂಡೆ. ನನ್ನ ಮೈ ಕೈಗಳಲ್ಲಿ ಅಸಾಧ್ಯ ನೋವಿರುವಂತೆಯೂ ಹಿಂಬದಿಯ ತಲೆಯ ಭಾಗದಲ್ಲಿ ಒಡೆದು ರಕ್ತ ಸೋರುತ್ತಿರುವಂತೆಯೂ ಭಾಸವಾಯ್ತು. ಈ ಎಲ್ಲಾ ವ್ಯತಿರಿಕ್ತ ಪರಿಸ್ಥಿತಿಗಳು ಉತ್ಪಾದಿಸಿದ ಭಯವನ್ನು ಪ್ರತಿಭಟಿಸುವ ತೆರದಿ ಆ ಕೋಣೆಯನ್ನು ಬಿಟ್ಟು ಓಡಿ ಹೋಗಲು ಈ ಕಡೆ ತಿರುಗಿದೆ. ದೇಹದಿಂದ ಬೇರ್ಪಡಿಸಿದ ನನ್ನ ರುಂಡ ಅಲ್ಲಿ ಬಿದ್ದು ಒದ್ದಾಡುತ್ತಿತ್ತು! ನನ್ನನ್ನೇ ನಾನೇ ಬಗೆದು ತಿಂದುಕೊಳ್ಳುತ್ತಿದ್ದೆ ಆ ಏಳಂತಸ್ತಿನ ಬಂಗಲೆಯೊಳಗೆ! ನನ್ನ ಹುಚ್ಚು ಆಸೆಗಳೇ ಭೂತವಾಗಿ, ನನ್ನೊಳಗಿನ ಒಳ್ಳೆಯತನಗಳ ಇಂಚಿಂಚನ್ನೂ ತಿನ್ನುತ್ತಿದ್ದೆ! ಹೊರಗಿನ ಜಗತ್ತಿಗೆ ಪ್ರೇತವಾಗಿದ್ದೆ! ಭೌತಿಕವಾಗಿ ಅಸ್ಥಿತ್ವವೇ ಇಲ್ಲದವನಾಗಿದ್ದೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Wednesday, 13 February 2013

ತೊರೆಯ ಮೇಲಿನ ಬದುಕು! - ೩

ಒಡಲು ಸೇರಿದ ತೊರೆ!
----------------------

ಬೇರೆಲ್ಲೋ ನೆಲೆಸಿದ್ದಾರೆ ಎಂಬುದು ಗೊತ್ತಾಯಿತು ಆದರೆ ಎಲ್ಲಿ, ಅದನ್ನು ಪತ್ತೆ ಹಚ್ಚುವ ಬಗೆ ಹೇಗೆ? ಹುಡುಕಿದ ಮೇಲೆ ಅವರ ಮನೆಯವರನ್ನು ನಮ್ಮ ಮದುವೆಗೆ ಒಪ್ಪಿಸುವುದು ಹೇಗೆ? ಅಕಸ್ಮಾತ್ ಅವಳಿಗೆ ಈಗಾಗಲೇ ಮದುವೆ ಆಗಿಬಿಟ್ಟಿದ್ದರೆ? ಎಂಬ ಯೋಚನೆಗಳು ಬರುತ್ತಿದ್ದಂತೆಯೇ ಬಾಳು ಬತ್ತಿದಂತೆ ಭಾಸವಾಯ್ತು! ಅವಳಿಲ್ಲದೇ ಈ ರಾಘು ನಡೆದಾಡುವ ಶವವಾಗಿಬಿಡುವ ಅಪಾಯವಿತ್ತು!

ಅಲ್ಲಿಂದ ನನ್ನ ಪ್ರೀತಿಯನ್ನು ಹುಡುಕುವ ಕಾರ್ಯ ಆರಂಭವಾಯ್ತು! ಮಧೂನ ತಂದೆ ಸಿ.ಪಿ.ಸಿ ಪಾಲಿಟೆಕ್ನಿಕ್ ಅಲ್ಲಿ ಹಿರಿಯ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದುದು ಗೊತ್ತಿತ್ತು. ಅಲ್ಲಿ ಹೋಗಿ ವಿಚಾರಿಸಿದರೆ ಅವರು ಎಲ್ಲಿಗೆ ವರ್ಗವಾದರು ಎಂಬ ಬಗ್ಗೆ ಮಾಹಿತಿ ಸಿಗಬಹುದಿತ್ತು. ಆ ಯೋಚನೆ ನನ್ನ ತಲೆಯಲ್ಲಿ ರೂಪುಗೊಂಡಿದ್ದೇ ತಡ, ಒಂದು ಕ್ಷಣವನ್ನೂ ಕಾಯದೆ ಸಿ.ಪಿ.ಸಿ ಯ ಹಾದಿ ಹಿಡಿದೆ. ಅಲ್ಲಿ ಮ್ಯೆಕಾನಿಕಲ್ ಡಿಪಾರ್ಟ್ಮೆಂಟ್ ಗೆ ಹೋಗಿ, ನಾನು ನಾಗೇಶ್ ಅಯ್ಯರ್ ರವರ ಶಿಷ್ಯ, ಯಾವುದೋ ಬ್ಯಾಚ್ ಎಂದು ಸುಳ್ಳು ಹೇಳಿ, ಅವರ ವರ್ಗಾವಣೆಯ ಸಂಪೂರ್ಣ ಮಾಹಿತಿ ಕೇಳಿ ತಿಳಿದೆ! ಅವರು ಬೆಂಗಳೂರಿನ ಸರ್ಕಾರೀ ಪಾಲಿಟೆಕ್ನಿಕ್ ಗೆ ಆರು ತಿಂಗಳುಗಳ ಹಿಂದಷ್ಟೇ ವರ್ಗವಾದರು ಎಂಬ ಮಾಹಿತಿ ಸಿಕ್ಕಿತು! ಬೆಂಗಳೂರಿನಲ್ಲಿ ಮಧೂನ ಮನೆ ಹುಡುಕುವ ಶ್ರಮ ನೆನಪಿಸಿಕೊಂಡೇ ಬೆವತು ಹೋದೆ!

ಸರಿ ಅಲ್ಲಿಂದ ನನ್ನ ಪಯಣ ಬೆಂಗಳೂರಿನತ್ತ… ನನ್ನ ಬೈಕ್ ಹತ್ತಿ ಕುಳಿತುಕೊಂಡವನೇ ಲಾಂಗ್ ಜರ್ನಿಯಾಗುವುದನ್ನೂ ಲೆಕ್ಕಿಸಿದೆ ಬೆಂಗಳೂರಿನ ಕಡೆ ಹೊರಟೆ! ಆ ನೂರೈವತ್ತು ಪ್ಲಸ್ ಕಿಲೋಮೀಟರುಗಳ ಪ್ರಯಾಣದಲ್ಲಿ ಮನಸ್ಸು ಆಗಬಹುದಾದ ಎಲ್ಲಾ ಸಾಧ್ಯತೆಗಳನ್ನೂ ಚಿಂತಿಸುತ್ತಿತ್ತು!

ನಾನು ಮಾಂಸ ತಿನ್ನುವ ಜಾತಿಯಿಂದ ಬಂದವನು ಅವಳೋ ಮೊಟ್ಟೆ ಕೂಡ ಮಾಂಸಾಹಾರಿ ಎನ್ನುವ ಶುದ್ಧ ಸಸ್ಯಾಹಾರಿ ಬ್ರಾಹ್ಮಣರ ಹುಡುಗಿ, ನಮ್ಮ ವಿಷಯ ತಿಳಿಯುತ್ತಿದ್ದಂತೆ ಅವರ ಮನೆಯಲ್ಲಿ ಮಡಿ ಮೈಲಿಗೆ ಎಂದು ಬಾಯಿ ಬಾಯಿ ಬಡಿದರೆ ಏನು ಮಾಡುವುದು? ನಾನೂ ಅವರಂತೆಯೇ ರಕ್ತ ಮಾಂಸಗಳನ್ನೇ ತುಂಬಿಕೊಂಡಿರುವ ಮನುಷ್ಯನಲ್ಲವೇ? ನನ್ನಲ್ಲೂ ಮನುಷ್ಯ ಸಹಜ ಪ್ರೀತಿ, ಪ್ರೇಮ, ಅನುಬಂಧ, ಸಂವೇಧನೆ, ಆಸೆ - ಆಕಾಂಕ್ಷೆಗಳೆಲ್ಲವೂ ಇಲ್ಲವೇ? ಅವರಿಗಿಂತ ನಾನು ಹೇಗೆ ಭಿನ್ನ? ಕೇವಲ ಆಹಾರ ಪದ್ಧತಿಗಳು ನಮ್ಮೀರ್ವರಲ್ಲಿ ಇಂಥ ಭಿನ್ನತೆಗಳನ್ನೂ ಸೃಷ್ಟಿಸಬಲ್ಲವೆ? ಹಾಗೆ ನೋಡುವುದಾದರೆ ಅವರೂ ಜೀವವಿರುವ ಸಸ್ಯಗಳನ್ನು ಕೊಂದು ತಿಂದೇ ಬದುಕುತ್ತಾರೆ ತಾನೇ? ನಾನು ಮಾಂಸಹಾರಿ ಎಂದ ಮಾತ್ರಕ್ಕೆ ಸಸ್ಯಗಳನ್ನು ತಿಂದು ಬದುಕುವ ಅವರಲ್ಲಿಲ್ಲದ ಕ್ರೂರತೆ ನನ್ನಲ್ಲಿ ಮಾತ್ರ ಬಂದು ಸೇರಲು ಹೇಗೆ ಸಾಧ್ಯ? ಪ್ರೀತಿ ಮಾಡಲು ಅಡ್ಡಬರದ ಈ ಜಾತಿ ಪದ್ಧತಿ ಮತ್ತು ಧರ್ಮಗಳು ಮದುವೆ ಸಮಯದಲ್ಲೇಕೆ ಅಡ್ಡ ಬರುತ್ತವೆ? ಮನುಷ್ಯತ್ವವೂ ಒಂದು ಜಾತಿಯೂ, ಧರ್ಮವೂ ಎಂದೇಕೆ ಈ ಜನ ಭಾವಿಸುವುದಿಲ್ಲ? ಎಂಬಿತ್ಯಾದಿ ಕೇಂದ್ರವಿಲ್ಲದೆ ಗಿರಕಿ ಹೊಡೆಯುವ ತರ್ಕಗಳಲ್ಲಿ ಮನ ಜರ್ಜರಿತವಾದಂತಿತ್ತು! ಇಷ್ಟೆಲ್ಲಾ ತೊಡಕುಗಳ ನಡುವೆ ಒಂದೊಮ್ಮೆ ಇಷ್ಟರಲ್ಲಾಗಲೇ ಮಧೂವಿಗೆ ಮದುವೆ ಆಗಿಬಿಟ್ಟಿದ್ದರೆ? ಎಂಬ ಪ್ರಶ್ನೆ ಹೃದಯದೊಳಕ್ಕೆ ತೂರಿದೊಡನೆ ಹೃದಯಸ್ಥಂಭನವಾಗಿಬಿಡಬಹುದೇನೋ ಎನಿಸಿತು! ಆದರೆ ಮನದ ಗಮ್ಯ ಮಾತ್ರ ಸ್ಪಷ್ಟವಿತ್ತು, ’ಮಧೂನ ಪ್ರೀತಿ’!

ನಾಗೇಶ್ ಅಯ್ಯರ್ ರವರ ಸರ್ಕಾರಿ ಪಾಲಿಟೆಕ್ನಿಕ್ ಪತ್ತೆ ಹಚ್ಚಿದವನೇ ನೇರ ಅವರಲ್ಲಿಗೆ ಹೋಗಿ ಮಾತನಾಡಲೇ? ಎಂದು ಒಮ್ಮೆ ಯೋಚಿಸಿದೆ. ಮೊದಲು ಮಧೂನೊಂದಿಗೆ ಮಾತನಾಡಿ ನಂತರ ಮುಂದುವರೆದರೆ ಒಳ್ಳೆಯದೇನೋ ಎಂಬ ಯೋಚನೆಯೂ ಬಂತು! ಆದರೆ ನನಗೆ ನನ್ನ ಪ್ರೀತಿಯ ಮೇಲಿದ್ದ ಅದಮ್ಯ ವಿಶ್ವಾಸ ನೇರವಾಗಿ ನಾಗೇಶ್ ಅಯ್ಯರ್ ರವರ ಮುಂದೆಯೇ ನಿಲ್ಲಿಸಿತು. ನಾನು ನೇರವಾಗಿ ಮ್ಯಾಕಾನಿಕಲ್ ಅಧ್ಯಾಪಕರ ಕೊಠಡಿ ಹುಡುಕಿ ನಾಗೇಶ್ ರವರ ಮುಂದೆ ನಿಂತಿದ್ದೆ! ನನ್ನನ್ನು ಕಂಡ ಅವರ ಕಣ್ಣುಗಳಲ್ಲಿದ್ದ ಅಸಹನೆಯನ್ನು ಗುರ್ತಿಸಬಲ್ಲ ಸಂವೇಧನಾಶೀಲತೆ ನನ್ನಲ್ಲಿತ್ತು ಅನ್ನೀ! ಯಾರಿಗೆ ತಾನೇ ತನ್ನ ಮಗಳನ್ನು ಯಾವನೋ ಅನ್ಯ ಜಾತಿಯವನಿಗೆ ಕೊಟ್ಟು ಮದುವೆ ಮಾಡುವಷ್ಟು ಸಹನೆ ಇರುತ್ತದೆ?! ಅವರು ತಮ್ಮ ಕಡೆಯ ಕ್ಲಾಸ್ ಮುಗಿಸಿ ಹೊರಡುವ ತರಾತುರಿಯಲ್ಲಿದ್ದಂತೆ ಕಾಣುತ್ತಿತ್ತು! ಅವರ ಮುಂದೆ ನಿಂತಿದ್ದ ನಾನು,

“ಹಲೋ ಸರ್, ನಾನು ರಾಘವಾ… ಮಧುವಂತಿಯ ಗೆಳೆಯ, ನಿಮಗೆ ನೆನಪಿರಬಹುದೆಂದು ಭಾವಿಸುವೆ” ಎಂದೆ.

ಅವರಿಗೆ ಅಲ್ಲಿ ಎಲ್ಲಾ ಸ್ಟಾಫ್ ಗೂ ನಮ್ಮ ಮಾತೂಕತೆ ತಿಳಿಯುವುದು ಬೇಕಿರಲಿಲ್ಲ, ಅದನ್ನು ತಮ್ಮ ಮುಖಭಾವದಿಂದಲೇ ಸಂವಹನಗೈಯ್ಯುತ್ತಿದ್ದರು! ಪರಿಸ್ಥಿತಿಯನ್ನು ಗಮನಿಸಿದ ನಾನು ಹೊರಗೆ ಪಾರ್ಕ್ ಇದೆ, ಅಲ್ಲಿ ಸಾವಕಾಶವಾಗಿ ಮಾತನಾಡೋಣ ಎಂದು ಕರೆದುಕೊಂಡು ಹೋದೆ. ಅಲ್ಲಿ ಅವರೇ ನಾನು ಅವರಲ್ಲಿಗೆ ಬಂದುದರ ಬಗ್ಗೆ ವಿಚಾರಿಸಿದರು. ನಾನು ಮುಂದುವರೆಸುತ್ತಾ,

“ಸರ್ ನೀವು ಹೇಳಿದ್ದಿರಿ, ’ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲು’ ಎಂದು, ಈಗ ನಾನು ಪ್ರತಿಷ್ಠಿತ ’ಎಕ್ಸಲೆಂಟ್ ಎಲೆಕ್ಟ್ರಾನಿಕ್ಸ್’ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಜವಾಬ್ದಾರಿಯಂತಿದ್ದ ನನ್ನ ತಂಗಿಯ ಮದುವೆಯನ್ನೂ ಮಾಡಿ ಮುಗಿಸಿದ್ದೇನೆ! ನಾನು ಮಧುವಂತಿಯನ್ನು ಮನಸಾರೆ ಪ್ರೀತಿಸುತ್ತೇನೆ, ಅವಳನ್ನು ನನಗೆ ಕೊಟ್ಟು ಮದುವೆ ಮಾಡುತ್ತೀರಾ?” ಎಂದು ಕೇಳಿದೆ.

ನನ್ನ ನೇರ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡು ಬಂದ ಅವರು, “ಮಧೂನೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದೀಯಾ? ಅವಳ ಅಭಿಪ್ರಾಯವೇನು ಎಂಬ ಬಗ್ಗೆ ನಿನ್ನಲ್ಲಿ ಸ್ಪಷ್ಟತೆ ಇದೆಯೇ?” ಎಂದರು.

ನಾನು, “ಮಧೂಗೆ ನಾನು ಅವಳನ್ನು ಪ್ರೀತಿಸುತ್ತೇನೆ ಎಂಬುದು ಗೊತ್ತು, ಅವಳೂ ನನ್ನನ್ನು ಪ್ರೀತಿಸುತ್ತಾಳೆ! ನಿಮಗೆ ಗೊತ್ತಿರಲಿಕ್ಕಿಲ್ಲ ನೀವು ನನಗೆ ಅಂದು ಕರೆ ಮಾಡಿದಾಗಿನಿಂದ ನಾನು ಮತ್ತು ಮಧೂ ಮತ್ತೆಂದೂ ಮಾತನಾಡಲಿಲ್ಲ! ಯಾವುದೇ ರೀತಿಯ ಕಮ್ಯುನಿಕೇಶನ್ ಇಲ್ಲ! ಈ ಎರಡು ವರ್ಷಗಳ ನಮ್ಮ ನಡುವಿನ ಮೌನ ನಮ್ಮ ಪ್ರೀತಿಯನ್ನು ಕಡಿಮೆ ಮಾಡಿರುತ್ತದೆ ಎಂದು ನನಗನ್ನಿಸುವುದಿಲ್ಲ” ಎಂದೆ.

“ಸರಿ ನಡಿ, ಮನಗೆ ಹೋಗಿ ಅಲ್ಲಿಯೇ ಮಾತನಾಡೋಣ” ಎಂದು ನನ್ನನ್ನು ಅವರೊಂದಿಗೆ ಅವರ ಮನೆಗೆ ಕರೆದೊಯ್ದರು. ನಾನು ಅವರ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡ ಮಧೂ ತನಗೆ ಸಂಬಂಧವೇ ಇಲ್ಲದಂತೆ ಒಳಗೆ ಹೋದಳು! ನನ್ನ ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯ್ತು ಆದರೆ ಅವಳ ಕಾಲುಗಳಲ್ಲಿ ಕಾಲುಂಗರವಿಲ್ಲದ್ದು ಕಂಡು ಸ್ವಲ್ಪ ನಿರಾಳನಾದೆ. ನಂತರ ನಾಗೇಶ್ ರವರೇ ಮಧೂವನ್ನೂ, ಅವರ ಮಡದಿಯನ್ನೂ ಹೊರಗೆ ಕರೆದು, ನಾನು ಅವರಿಗೆ ಏನೆಲ್ಲಾ ಹೇಳಿದ್ದೆನೋ ಅದನ್ನೆಲ್ಲಾ ಹೇಳಿ, ಮಧೂನ ಅಭಿಪ್ರಾಯಕ್ಕೆ ಕಾದು ಕುಳಿತವರಂತೆ ಅವಳೆಡೆಗೆ ತಿರುಗಿದರು! ಅವಳು ನನ್ನನ್ನು ಕಣ್ಣಿನಾಳದಿಂದ ನೋಡುವಂತೆ ಸೂಕ್ಷ್ಮವಾಗಿ ನೋಡಿ,

“ನಾನು ಇಂಥಹ ಸಾತ್ವಿಕ ಕುಟುಂಬದಲ್ಲಿ ಹುಟ್ಟಿ ನಿಮ್ಮಂಥ ಸಂಸ್ಕಾರವಂತ ತಂದೆ ತಾಯಿಗಳ ಆರೈಕೆಯಲ್ಲಿ ಬೆಳೆದಿದ್ದರ ಬಗ್ಗೆ ಹೆಮ್ಮೆ ಇದೆ. ನೀವು ನನಗೆ ಕೊಟ್ಟ ಸಂಸ್ಕಾರದಲ್ಲಿ ನಾನು ಗುರ್ತಿಸಿದ್ದು ’ಮನುಷ್ಯತ್ವ ಎಂಬುದು ಜಾತಿ, ಧರ್ಮ ಎಲ್ಲವುಗಳಿಗಿಂತಲೂ ದೊಡ್ಡದು’ ಎಂಬುದನ್ನೇ! ನಾನು ರಾಘುವನ್ನು ಪ್ರೀತಿಸುತ್ತೇನೆ, ನೀವು ಒಪ್ಪುವುದಾದರೆ ಅವನನ್ನು ಮದುವೆ ಆಗುತ್ತೇನೆ, ಆದರೆ ನನ್ನ ಎಮ್.ಟೆಕ್ ಪೂರ್ಣಗೊಂಡ ನಂತರವೇ!” ಎಂದಳು.

ನನಗೆ ಅಲ್ಲಿಯವರೆಗೆ ಅವಳು ಎಮ್.ಟೆಕ್ ಓದುತ್ತಿರುವುದೇ ಗೊತ್ತಿರಲಿಲ್ಲ! ನನಗೆ ಅವಳಲ್ಲಿ ನನ್ನ ಮೇಲಿದ್ದ ಪ್ರೀತಿಯನ್ನು ಕಂಡು ಹೆಮ್ಮೆ ಎನಿಸಿ ಅವಳನ್ನೇ ನೋಡುತ್ತಿದ್ದೆ! ಇತ್ತ ಮಧೂನ ಅಪ್ಪ ಅಮ್ಮನ ನಡುವೆ ಕಣ್ಸನ್ನೆಯ ಸಂವಹನ ನಡೆದಿತ್ತು! ಒಂದೈದು ನಿಮಿಷಗಳ ದೀರ್ಘ ಮೌನದ ನಂತರ ನಾಗೇಶ್ ರವರು,

“ನಮಗೂ ನಮ್ಮ ಮಗಳ ಸಂತೋಷವೇ ಮುಖ್ಯ. ನೀನು ಹಿರಿಯರಿಗೆ ಗೌರವ ಕೊಟ್ಟು ಒಂದೊಳ್ಳೇ ಕೆಲಸ ಹಿಡಿದ ನಂತರವೇ ಮದುವೆಯ ಬಗ್ಗೆ ನನ್ನೊಂದಿಗೆ ಪ್ರಸ್ಥಾಪಿಸಿದ್ದು ಹಿಡಿಸಿತು. ನೀನು ನಿಮ್ಮ ಅಪ್ಪಾ – ಅಮ್ಮನ ಒಪ್ಪಿಗೆಯನ್ನೂ ಪಡೆದುಕೋ, ಒಂದು ವರ್ಷದ ನಂತರ ನಿನ್ನ ಮತ್ತು ಮಧೂಳ ಮದುವೆಯನ್ನು ಮಾಡೋಣ” ಎಂದರು.

ನನಗೆ ಆಕಾಶಕ್ಕೆ ಎಷ್ಟೂ ಗೇಣುಗಳ ಅಂತರವೂ ಇಲ್ಲ ಎನಿಸಿತು. ಮಧೂನ ಕೈ ಹಿಡಿದು ಹಾರಿ ಕುಣಿಯಬೇಕು ಎನಿಸಿತು. ಮಗನ ಸಂತೋಷವನ್ನೇ ಬಯಸುವ ನನ್ನಪ್ಪ ಅಮ್ಮಾ ಸಂತೋಷದಿಂದ ನಮ್ಮ ಮದುವೆಗೆ ಒಪ್ಪಿಕೊಂಡರು! ಒಂದು ವರ್ಷದ ನಂತರ ನಮ್ಮ ಮದುವೆಯೂ ಆಯ್ತು, ಇನ್ನೊಂದು ವರ್ಷದೊಳಗೆ ನನ್ನ ಮುದ್ದು ಶಾರೀಯೂ ನಮ್ಮ ಕುಟುಂಬಕ್ಕೆ ಸೇರಿಕೊಂಡಳು! ನಮ್ಮ ಅಪ್ಪಾ ಅಮ್ಮನನ್ನು ಮಧೂ ತನ್ನ ತಂದೆ-ತಾಯಿಯರಂತೆ ನೋಡಿಕೊಳ್ಳುತ್ತಾಳೆ, ನನ್ನ ಮಾವ-ಅತ್ತೆಯನ್ನು ನಾನು ನನ್ನ ಅಪ್ಪ-ಅಮ್ಮನಂತೆಯೇ ಗೌರವಿಸುತ್ತೇನೆ! ಆಹಾರ ಪದ್ಧತಿಗಳು, ಜಾತಿಗಳು ಮತ್ತು ನಂಬಿಕೆಗಳು ಬೇರೆಬೇರೆಯಾಗಿದ್ದರೂ ನಮ್ಮದು ಸುಖೀ ಕುಟುಂಬ! ಹಳ್ಳ ಕೊಳ್ಳಗಳು, ಕೊರಕಲು ಕಲ್ಲುಗಳು, ಉದ್ದದ ಜಲಪಾತಗಳ ಮೇಲೆಲ್ಲ ಹರಿದ ತೊರೆಯಂಥ ನಮ್ಮ ಪ್ರೀತಿ ಈಗ ನಿರ್ಮಲ ಒಡಲನ್ನು ತಲುಪಿದೆ, ಒಂಬತ್ತು ವರ್ಷಗಳ ನಂತರವೂ ಹರಿಯುತ್ತಲೇ ಇದೆ, ನಮ್ಮೊಳಗಿನ ಅಂತರ್ಮುಖಿಯಾಗಿ!

ಈ ಫೆಬ್ರವರಿಯ ಹದಿನಾಲ್ಕರ ಪ್ರೇಮಿಗಳ ದಿನಕ್ಕೆ ನನ್ನ ಪುಟ್ಟ ಸಂಸಾರವನ್ನು ನಿಮಗೆ ಪರಿಚಯಿಸುತ್ತಿದ್ದೇನೆ! ನಾನು ರಾಘವ ಮಧುವಂತಿಯ ಪ್ರೇಮಿ, ಅವಳು ನನ್ನರ್ಧಾಂಗಿ ಮಧುವಂತಿ, ಇವಳು ನಮ್ಮಿಬ್ಬರ ಪ್ರೀತಿಯ ಬಿಂದು ಶಾರ್ವಾರಿ!

- ಪ್ರಸಾದ್.ಡಿ.ವಿ.

Tuesday, 12 February 2013

ತೊರೆಯ ಮೇಲಿನ ಬದುಕು! - ೨

ಹಿಂದಿನ ಸಂಚಿಕೆ: ಬೆರಳಿಗೊಂದು ಉಂಗುರ, ಎದೆ ತುಂಬ ಪ್ರೀತಿ!
ನಮ್ಮದೂ ಒಂದು ಪ್ರೇಮ ಪ್ರಹಸನ!
---------------------------------------

ನನ್ನ ಕಾಲೇಜಿನ ದಿನಗಳವು, ಇಂಜಿನಿಯರಿಂಗ್ ಓದುತ್ತಿದ್ದ ರಾಘವನೆಂಬ ನಾನೂ, ನಮ್ಮ ಕಾಲೇಜಿನಲ್ಲಿ ಸಿವಿಲ್ ನಲ್ಲಿ ಓದುತ್ತಿದ್ದ ಮಧುವಂತಿಯೂ ಪ್ರೀತಿಯಲ್ಲಿ ಬಿದ್ದ ಬಗೆ ಹೀಗೆ! ಈ ಪ್ರೀತಿ ಹುಟ್ಟಿದ್ದು ಎಲ್ಲಿಂದ ಎಂದರೆ ನನಗೆ ಗೊತ್ತಿಲ್ಲ! ಅವಳು ಚಿನಕುರುಳಿ ಮಾತಿನ ಮಲ್ಲಿ, ನಾನು ಅಳೆದು ತೂಗಿ ಮಾತನಾಡುವ ವ್ಯಾಪಾರಿ! ಅವಳಾಗಿಯೇ ನನ್ನ ಹತ್ತಿರ ಬಂದಳೋ, ನಾನಾಗಿಯೇ ಅವಳ ಹತ್ತಿರ ಹೋದೆನೋ, ಗೊತ್ತಿಲ್ಲ! ನಾವೆಲ್ಲಾ ಮೊದಲ ವರ್ಷದ ಎರಡನೇ ಸೆಮ್ ನಲ್ಲಿ ಕಲಿಯುತ್ತಿರುವಾಗ ನಡೆಯುತ್ತಿದ್ದ ಕಾಲೇಜಿನ ಸಾಂಸ್ಕೃತಿಕ ಸಮಾರಂಭವೊಂದರ ನಿರೂಪಕಿಯಾಗಿದ್ದಳು ಮಧೂ, ಆದರೆ ಅವಳ ಸ್ಪೀಚ್ ಇನ್ನೂ ರೆಡಿ ಇರಲಿಲ್ಲ. ಮೊದಲಿಂದಲೂ ಒಂದಷ್ಟು ಗೀಚುವ ಗೀಳಿದ್ದ ನನಗೆ ಅವಳ ಸ್ಪೀಚ್ ಬರೆದುಕೊಡುವ ಜವಾಬ್ದಾರಿ ಕೊಡಲಾಯಿತು. ಅಲ್ಲಿಯವರೆಗೂ ಕೇವಲ ನೋಟಗಳಲ್ಲಿದ್ದ ನಮ್ಮ ಪರಿಚಯ ಮಾತಿನ ರೂಪ ಪಡೆಯಲು ಆ ಸಾಂಸ್ಕೃತಿಕ ಕಾರ್ಯಕ್ರಮ ಭೂಮಿಕೆಯಾಯಿತು. ಆ ಕಾರ್ಯಕ್ರಮದ ತನ್ನ ಹರಳು ಹುರಿದಂಥಾ ನಿರೂಪಣೆಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿಬಿಟ್ಟಳು ಮಧೂ! ಯಾರಾದರೂ ಅವಳನ್ನು ಆ ಬಗ್ಗೆ ಅಭಿನಂದಿಸಲು ಬಂದರೆ 'ರಾಘು ಇಲ್ಲದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎಂದು ನನ್ನನ್ನು ರೆಫರ್ ಮಾಡುತ್ತಿದ್ದಳಂತೆ!'. ನನ್ನ ಮನದಲ್ಲಾಗಲೇ ಸಣ್ಣಗೆ ಗಾಳಿ ಬೀಸಲು ಪ್ರಾರಂಭಿಸಿತ್ತು. ಆದರೆ ಪ್ರೀತಿ ಎಂದು ಹೆಸರಿಡುವಷ್ಟು ಒಡನಾಟವನ್ನು ಆಗಷ್ಟೇ ಪ್ರಾರಂಭಿಸಬೇಕಿತ್ತು! ಬಹಳ ಬೇಗನೇ ಆತ್ಮೀಯರಾದ ನಾವು, ಕಾಲೇಜಿನ ವಿರಾಮದ ಸಮಯಗಳಲ್ಲಿ ಲೋಕಾಭಿರಾಮರಾಗಿ ಕುಳಿತು ಹರಟುವುದು, ಅವಳು ಅವಳ ಸಿವಿಲ್ ವಿಷಯಗಳ ಬಗ್ಗೆ ಹೇಳುವುದು, ನಾನು ನನ್ನ ಎಲೆಕ್ಟ್ರಾನಿಕ್ಸ್ ವಿಷಯಗಳ ಬಗ್ಗೆ ಹೇಳುವುದು ಹೀಗೇ ಒಂದಷ್ಟು ಹರಟೆ ಹೊಡೆಯುವುದು! ಒಬ್ಬರಿಗೊಬ್ಬರ ಸಾನಿಧ್ಯ ಬೇಕಿತ್ತಷ್ಟೆ! ಆನಂತರದಲ್ಲಿ ನಾನೊಂಥರಾ ಎಲೆಕ್ಟ್ರಾನಿಕ್ಸ್ ಸಿವಿಲ್ ಇಂಜಿನಿಯರ್ರೂ, ಅವಳೊಂಥರಾ ಸಿವಿಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ರೂ ಆಗಿಬಿಟ್ಟೆವು!

ಹೀಗೆ ಸ್ನೇಹವಾಗಿ ಕುಡಿಯೊಡೆದು ಆತ್ಮೀಯತೆಯಾಗಿದ್ದ ನಮ್ಮ ಸಂಬಂಧ ಎರಡನೇ ವರ್ಷದ ಆರಂಭದ ದಿನಗಳಲ್ಲೇ ಪ್ರೀತಿಯಾಗಿ ಬದಲಾಗಿತ್ತು. ಒಬ್ಬರಿಗೊಬ್ಬರು ನಿವೇಧಿಸದೇ ಪ್ರೀತಿಸಲು ಪ್ರಾರಂಭಿಸಿದ್ದೆವು. ಅದು ಪ್ರೀತಿಯೆಂದು ಇಬ್ಬರಿಗೂ ಗೊತ್ತಿತ್ತು! ನಾನೇ ಆ ಬಗ್ಗೆ ಮೌನ ಮುರಿದು 'ನಾನು ಅವಳನ್ನು ಪ್ರೀತಿಸುವುದಾಗಿ ಹೇಳಿದೆ' ಹೆಸರಿಲ್ಲದೆ ನಡೆದಿದ್ದ ಪ್ರೀತಿ ಆಗ ಅಧಿಕೃತವಾಗಿ ಹೆಸರು ಪಡೆದಿತ್ತು.  ಹೀಗೆ ನಮ್ಮ ಮೊದಲ ಮದುವೆ ಓದುವಾಗಲೇ ನಡೆದು ಹೋಯ್ತು!

ನಮ್ಮದು ಎಲ್ಲರಂತೆ ಪಾರ್ಕು, ಸಿನೆಮಾ, ಔಟಿಂಗ್ ಎಂದು ತೋರಿಕೆಗೆ ಸುತ್ತುವ ಪ್ರೀತಿಯಲ್ಲ! ಅವಳು ಮೇಲೆ ನೋಡಲು ಫಾಸ್ಟ್ ಫಾರ್ವರ್ಡ್ ಹುಡುಗಿಯಂತೆ ಕಂಡರೂ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಬಂದವಳು, ನಾನು ಒಕ್ಕಲುತನವನ್ನೇ ವೃತ್ತಿಯಾಗಿಸಿಕೊಂಡಿರುವ ಗೌಡರ ಮನೆ ಹುಡುಗ! ಅವಳಿಗೆ ಸಂಪ್ರದಾಯಗಳು ಮೈಗೂಡಿದ್ದರೆ, ನನಗೆ ಕಷ್ಟಗಳ ಅರಿವಿತ್ತು! ಆದ್ದರಿಂದ ಈ ಆಡಂಬರದ ಪ್ರೀತಿಯ ತೋರಿಕೆಯಲ್ಲಿ ನಮಗೆ ಸ್ವಲ್ಪವೂ ನಂಬಿಕೆಯಿರಲಿಲ್ಲ!

ನಮ್ಮ ಪ್ರೀತಿ ಎಂದೂ ನಮ್ಮ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರಲು ಬಿಡುತ್ತಿರಲಿಲ್ಲ. ಒಬ್ಬರಿಗೆ ಮತ್ತೊಬ್ಬರ ಸಾನಿಧ್ಯ ಬೇಕೆಂದಾದಾಗ ಹೇಗಾದರೂ ಸಮಯ ಮಾಡಿಕೊಂಡೇ ಮಾಡಿಕೊಳ್ಳುತ್ತಿದ್ದೆವು. ಇದು ನಮ್ಮ ನಡುವಿದ್ದ ಅಲಿಖಿತ ನಿಯಮ! ಹೀಗೆ ಸುಂದರವಾಗಿ ಸಾಗಿದ್ದ ನಮ್ಮ ಪ್ರೀತಿಯ ನಡುವೆ ಫೈನಲ್ ಇಯರ್ ನ ಪ್ರಾಜೆಕ್ಟುಗಳು, ಸೆಮಿನಾರುಗಳು ಮತ್ತು ಪ್ಲೇಸ್ಮೆಂಟುಗಳ ಭರಾಟೆ ಶುರುವಾಗಿತ್ತು! ಎಷ್ಟೇ ಒತ್ತಡಗಳಿದ್ದರೂ ನಮ್ಮ ಭೇಟಿಗಳ ಸಂಖ್ಯೆ ಕಡಿಮೆಯಾಗಿದ್ದರೂ ನಮ್ಮ ಪ್ರೀತಿ ಮಾತ್ರ ಒಂದಿಂಚೂ ಕಳೆಗುಂದಿರಲಿಲ್ಲ, ಕಳೆಗುಂದಲು ಸಾಧ್ಯವೂ ಇರಲಿಲ್ಲ! ಹೀಗೆ ನಡೆದಿದ್ದ ಸಮಯದಲ್ಲಿ ನಮ್ಮ ಪ್ರೀತಿಯ ಎರಡನೇ ವರ್ಷಾಚರಣೆಗೆ ಅವಳಿಗೊಂದು ಗಿಫ್ಟ್ ಪ್ಯಾಕ್ ಮಾಡಿಸಿದವನೇ, ಅವಳ ಮನೆಗೇ ಕೊರಿಯರ್ ಮಾಡಿಬಿಟ್ಟೆ! ಹಾಗೆ ನಾನು ಮಾಡಿದ್ದೇಕೆ ಎಂದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ನನ್ನ ದುರಾದೃಷ್ಟಕ್ಕೆ ಅದು ಅವರಪ್ಪನ ಕೈಯ್ಯಲ್ಲೇ ಸಿಕ್ಕಿ ಹೋಯ್ತು! ನಾನು ಹಿಂದೆ ಒಂದೆರಡು ಬಾರಿ ಅವರ ಮನೆಗೆ ಹೋಗಿದ್ದರಿಂದ ಅವರಿಗೆ ಆ ಗಿಫ್ಟ್ ಪ್ಯಾಕ್ ಕಳುಹಿಸಿರುವ ರಾಘು ನಾನೇ ಎಂಬುದು ಗೊತ್ತಾಗಿ ಹೋಗಿತ್ತು. ಅವಳಪ್ಪನಿಗೆ ಮಧೂವನ್ನು ನೋಯಿಸುವುದು ಬೇಕಿರಲಿಲ್ಲ ಅದಕ್ಕೆ ಉಪಾಯವಾಗಿ ನನ್ನ ಮೊಬೈಲ್ ನಂಬರ್ ತೆಗೆದುಕೊಂಡವರೇ, ಕರೆ ಮಾಡಿದರು,

"ಹಲೋ ನಾನು ಮಧುವಂತಿಯ ಅಪ್ಪ ಮಾತನಾಡುತ್ತಿರುವುದು..." ಎಂದರು.

ನಾನು ಗಾಬರಿಯಾದರೂ ತೋರಗೊಡದೆ, "ಹಲೋ, ಹೇಳಿ ಅಂಕಲ್" ಎಂದೆ.

"ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ಮಕ್ಕಳು ಓದುವಾಗ ಓದಬೇಕು, ಆಡುವಾಗ ಆಡಬೇಕು, ಪ್ರೀತಿ ಮಾಡುವಾಗ ಪ್ರೀತಿ ಮಾಡಬೇಕು! ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲು ಆನಂತರದಲ್ಲಿ ಈ ಪ್ರೀತಿ ಪ್ರೇಮವೆಲ್ಲಾ ಇದ್ದರೆ ಸಾಕು..." ಎಂದು ಒಂದೇ ಉಸುರಿನಲ್ಲಿ ಹೇಳಿ ಮುಗಿಸಿ ಫೋನ್ ಕೆಳಗಿಟ್ಟರು.

ನಾನು ಭಯದಿಂದ ತರ ತರ ನಡುಗುತ್ತಿದ್ದೆ. ಪರಿಣಾಮಗಳ ಅರಿವಿಲ್ಲದೆ ಪ್ರೀತಿ ಮಾಡಿದರೆ ಆಗುವ ಅವಾಂತರಗಳಿಗೆ ನಾನೇ ಉದಾಹರಣೆಯಾಗಿದ್ದೆ. ಮಧೂನ ಅಪ್ಪ ಹೇಳಿದ 'ಮೊದಲು ನಿನ್ನ ಕಾಲಮೇಲೆ ನೀನು ನಿಲ್ಲು' ಎಂಬ ಮಾತು ಮಾತ್ರ ಮನಕ್ಕೆ ನಾಟಿಬಿಟ್ಟಿತ್ತು. ಆ ತಕ್ಷಣವೇ ನಾನು ನನ್ನ ಕಾಲ ಮೇಲೆ ನಿಲ್ಲುವವರೆಗೂ ಮಧುವಂತಿಯೊಂದಿಗಿನ ಒಡನಾಟ ಬೇಡ ಎಂಬ ತೀರ್ಮಾನಕ್ಕೆ ಬಂದುಬಿಟ್ಟೆ!

ಆನಂತರದಲ್ಲಿ ನಾನು ಪಟ್ಟ ಪರಿಪಾಟಲುಗಳಿಗೆ ಲೆಕ್ಕವಿಲ್ಲ. ಮೊದ ಮೊದಲು ಕರೆಗಳು, ಸಂದೇಶಗಳಿಲ್ಲದೆ ಕಡಿತಗೊಳ್ಳಲಾರಂಭಿಸಿದ ನಮ್ಮ ಮಾತುಕತೆ, ಎದುರಿಗೆ ಸಿಕ್ಕರೂ ಅಪರಿಚಿತರಂತೆ ಸಾಗುವಲ್ಲಿಗೆ ಬಂತು! ನಾನು ಮಾತಾಡಿಸುತ್ತೇನೆ ಎಂದು ನನ್ನೆಡೆಗೆ ನೋಡುತ್ತಿದ್ದ ಆ ಮುದ್ದು ಕಣ್ಣುಗಳ ದೃಷ್ಟಿಯನ್ನು ಎದುರಿಸಲಾಗದೆ ಕಣ್ತಪ್ಪಿಸಲು ಪ್ರಯತ್ನಿಸುತ್ತಿದ್ದೆ! ಮೊದಲು ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸ ಹಿಡಿಯಬೇಕು ಎಂಬುದು ನನ್ನ ಮೂಲ ಮಂತ್ರವಾಯಿತು. ಅವಳ ಸಾನಿಧ್ಯ ಬೇಕೆಂದು ರಚ್ಚೆ ಹಿಡಿಯುತ್ತಿದ್ದ ಎದೆಗಣ್ಣುಗಳಿಗೆ ಸಾಂತ್ವನ ಹೇಳುತ್ತಿದ್ದೆ, ಆದರೆ ಅವುಗಳು ಮಾತ್ರ ನನ್ನ ಮಾತು ಕೇಳುತ್ತಿರಲಿಲ್ಲ, ಅಳುವುದನ್ನು ನಿಲ್ಲಿಸುತ್ತಿರಲಿಲ್ಲ!

ಅವಳ ಕೃಷ್ಣನ ಕೃಪೆಯೋ, ನನ್ನ ಪರಿಶ್ರಮದ ಫಲವೋ 'ಎಕ್ಸಲೆಂಟ್ ಎಲೆಕ್ಟ್ರಾನಿಕ್ಸ್' ಎಂಬ ಒಂದೊಳ್ಳೇ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಇನ್ನು ಇಂಜಿನಿಯರಿಂಗ್ ಮುಗಿಸಿ ಮೊದಲೆರಡು ತಿಂಗಳ ಸಂಬಳ ಕೈಗೆ ಬಂದ ಮೇಲೆ ಮಧುವಂತಿಯನ್ನು ಮಾತನಾಡಿಸುವುದೆಂದು ತೀರ್ಮಾನಿಸಿಕೊಂಡೆ. ಅಷ್ಟರಲ್ಲಾಗಲೇ ಪ್ರಾಜೆಕ್ಟ್ ಸಬ್ಮಿಷನ್, ಸೆಮಿನಾರ್ ಕಂಡಕ್ಷನ್ ಮತ್ತು ಫೇರ್ವೆಲ್ ಗಳ ಮಧ್ಯೆ ಇಂಜಿನಿಯರಿಂಗ್ ಮುಗಿದೇ ಹೋಯಿತು! ನಾನು ಮಾತ್ರ ಆಫರ್ ಲೆಟರ್ ಗಾಗಿ ಕಾದು ಕುಳಿತೆ, ಜಾತಕ ಪಕ್ಷಿಯ ಹಾಗೆ!

ದುಡಿಯಲು ಪ್ರಾರಂಭಿಸುವ ಮಗನ ಮೇಲೆ ತಂದೆ ತಾಯಿಗಳಿಗೆ ಒಂದಷ್ಟು ನಿರೀಕ್ಷೆಗಳು ಇದ್ದೇ ಇರುತ್ತವೆ! ಆ ನಿರೀಕ್ಷೆಗಳನ್ನು ಪೂರೈಸಲೇಬೇಕಾದ ಜವಾಬ್ದಾರಿ ನನ್ನ ಮೇಲೂ ಇತ್ತು. ಮೊದಲು ಪದವಿ ಮುಗಿಸಿದ್ದ ನನ್ನ ತಂಗಿಯ ಮದುವೆ ಮಾಡಬೇಕಿತ್ತು, ಅಪ್ಪ, ತಮ್ಮ ಜವಾಬ್ದಾರಿಗಳನ್ನು ಕಳಚಿ ನಿರಾಳರಾಗಿ, ಅಮ್ಮನೂ ಸಂತೋಷವಾಗಿ ಬದುಕುವುದನ್ನು ನೋಡಬೇಕಿತ್ತು. ಇಷ್ಟೆಲ್ಲಾ ಜವಾಬ್ದಾರಿಗಳನ್ನು ಪೂರೈಸಿ ಮನೆಯನ್ನು ದಡ ಮುಟ್ಟಿಸುವುದರೊಳಗೆ ಒಂದು ವರ್ಷವೇ ಕಳೆದು ಹೋಯಿತು! ನಾನು ಮಧುವಂತಿಯೊಂದಿಗೆ ಮಾತಾಡುವುದನ್ನು ಬಿಟ್ಟು ಬರೋಬ್ಬರಿ ಎರಡು ವರ್ಷಗಳು ಕಳೆದು ಹೋಗಿದ್ದವು. ಕಣ್ಣೊಳಗೆ ಕಂಡ ಪ್ರೀತಿ ಒಡೆಯುವುದು ಬೇಕಿಲ್ಲದ ನಾನು, ಎರಡು ವರ್ಷಗಳಲ್ಲಿ ಕಂಡೂ ಕಾಣದಂತೆ ಬಚ್ಚಿಟ್ಟಿದ್ದ ನನ್ನ ಮೊಬೈಲ್ ನೊಳಗಿನ 'ಮಧೂ' ಎಂಬ ಹೆಸರಿನ ನಂಬರಿಗೆ ಕರೆಯ ಗುಂಡಿ ಒತ್ತಿದೆ. ಅದು 'ಔಟ್ ಆಫ್ ಆರ್ಡರ್' ಎಂದು ಬಂದುಬಿಡುವುದೇ! ಸರಿ ಅವಳ ಮನೆಯ ಅಡ್ರೆಸ್ ಹೇಗೋ ಇತ್ತಲ್ಲ, ಹೊರಟೆ ಮೈಸೂರಿಗೆ! ಅವರ ಮನೆಯನ್ನು ಪತ್ತೆ ಹಚ್ಚಿದವನೇ ನಿರಾಳತೆಯ ಉಸಿರುಬಿಡುವುದರೊಳಗೆ ಅವರಪ್ಪನಿಗೆ ವರ್ಗವಾಗಿ ಮನೆಯವರ ಸಮೇತ ಬೇರೆ ಊರಿಗೆ ಹೊರಟುಹೋಗಿದ್ದರು ಎಂಬುದು ತಿಳಿಯಿತು!

ಮುಂದಿನ ಸಂಚಿಕೆ: ಒಡಲು ಸೇರಿದ ತೊರೆ!

Saturday, 9 February 2013

ತೊರೆಯ ಮೇಲಿನ ಬದುಕು! - ೧
ಬೆರಳಿಗೊಂದು ಉಂಗುರ, ಎದೆ ತುಂಬ ಪ್ರೀತಿ!
------------------------------------------
ನಾನು ನಿಶ್ಚಿಂತನಾಗಿ ಮಲಗಿದ್ದೆ, ಅದು ಬೆಳಗ್ಗಿನ ಏಳು ಗಂಟೆಯಿರಬಹುದು! ಆ ಸೂರ್ಯನಿಗೂ ನನ್ನನ್ನು ಕಂಡರೆ ಅದೇನೋ ಹೊಟ್ಟೆ ಉರಿ, ಆರು ಗಂಟೆಗೆಲ್ಲಾ ಎದ್ದು ಬಂದು ನನ್ನ ಕೋಣೆಯ ಕಿಟಕಿಯ ಮುಂದೆ ನಿಂತು ಬಿಡುತ್ತಾನೆ, ಹಾಳಾದವನು! ನನ್ನ ಶ್ರೀಮತಿ ಒಳಗೆ ಧೂಪ ಹಚ್ಚಿಟ್ಟು, ಪಿಳ್ಳಂಗೋವಿ ಕಳ್ಳ ಕೃಷ್ಣನ ಎದುರು, ’ಕೃಷ್ಣ ಸ್ತುತಿ’ ಮಾಡುತ್ತಿದ್ದುದು ಕೇಳಿಸುತ್ತಿತ್ತು! ನಮ್ಮ ಮೂರು ವರ್ಷದ ಪುಟಾಣಿ ಪುಟ್ಟಿ ಹತ್ತಿರ ಬಂದು,

“ಪಪ್ಪಾ ಏಳು ಪಪ್ಪಾ, ನೀನು ಏಳದಿದ್ದರೆ ಅಮ್ಮ ಕೋಲು ತರ್ತಾಳಂತೆ” ಎನ್ನುತ್ತಾ ನನ್ನನ್ನು ಅಲುಗಾಡಿಸಿ ಎಬ್ಬಿಸಲು ಪ್ರಯತ್ನಿಸುತ್ತಿದ್ದಳು.

“ಹೇ ಶಾರೀ ಪುಟ್ಟಿ, ಇಷ್ಟು ಬೇಗ ಎದ್ದು ಏನ್ಮಾಡ್ತಿದೆ ನನ್ನ ಮುದ್ದು? ಪಪ್ಪಾಗೆ ಭಾನುವಾರ ರಜಾ ಇದೆ.. ಹಾಗೆಲ್ಲಾ ಡಿಸ್ಟರ್ಬ್ ಮಾಡಬಾರ್ದು ಅಲ್ವಾ? ಪಪ್ಪ ಇನ್ನೊಂದ್ ಸ್ವಲ್ಪ ಹೊತ್ತು ಮಲ್ಗುತ್ತೆ ಅಂತ ಅಮ್ಮಂಗೆ ಹೇಳಮ್ಮ” ಎಂದು ಲಲ್ಲೆ ಗರೆದು ಅವಳನ್ನು ಕಳುಹಿಸಲು ನೋಡಿದೆ.

ಅವಳು ಬಿಡಬೇಕಲ್ಲಾ, ತನ್ನ ಅಮ್ಮನ ರಾಯಭಾರಿಯಂತೆ ನನ್ನನ್ನು ಎಬ್ಬಿಸುವ ಕೆಲಸ ಮುಂದುವರೆಸಿಯೇ ಇದ್ದಳು! ಇತ್ತ ಕಡೆ ಅವಳಮ್ಮ, ಅರ್ಥಾತ್ ನನ್ನ ಅರ್ಧಾಂಗಿ ಶುಶ್ರಾವ್ಯವಾಗಿ ’ಬೆಣ್ಣೆ ಕದ್ದನಮ್ಮ ಕೃಷ್ಣಾ, ಬೆಣ್ಣೆ ಕದ್ದನಮ್ಮಾ…” ಹಾಡನ್ನು ಗುನುಗುತ್ತಾ ಬಂದವಳು, ಮೆಲ್ಲಗೆ ನನ್ನ ಕಿವಿಯ ಹತ್ತಿರ ಬಂದು,

“ಏನು ಸಾಹೇಬ್ರು ಇನ್ನೂ ಮಲ್ಗಿದ್ದೀರಿ? ಇವತ್ತಿನ ಸ್ಪೆಷಲ್ ಏನು ಅಂಥಾ ನೆನಪಿಲ್ವಾ?” ಎಂದಳು ಪಿಸುಗುಟ್ಟುವಂತೆ. ಶಾರೀ ಅಲ್ಲಿಲ್ಲದಿದ್ದರೆ ನನ್ನವಳನ್ನು ಹಾಗೆಯೇ ಬರಸೆಳೆದಪ್ಪಿ ಮುದ್ದಿಸುತ್ತಿದ್ದೆ. ಏಕೆಂದರೆ ಶಾರೀ ಮುಂದೆ ನಾನಾರನ್ನೂ ಮುದ್ದಿಸುವಂತಿಲ್ಲ, ನನ್ನ ಹೆಂಡತಿಯನ್ನೂ ಸಹ! ನನ್ನ ಮಗಳಿಗೆ ತನ್ನ ಪಪ್ಪನ ಮೇಲೆ ಅಷ್ಟು ಪೊಸ್ಸೆಸ್ಸಿವ್ ನೆಸ್! ಆ ಕ್ಷಣಕ್ಕೆ, ನನ್ನ ಮೇಲೆ ನನ್ನ ಮಗಳಿಗಿದ್ದ ಪ್ರೀತಿಗೆ ಖುಷಿಪಡಲೇ ಇಲ್ಲ ಒಂದು ರಸಮಯ ರೊಮ್ಯಾಂಟಿಕ್ ಕ್ಷಣ ಮಿಸ್ ಆಗುತ್ತಿದೆ ಎಂದು ದುಃಖಿಸಲೇ? ಎರಡೂ ತೋಚದೆ ಸುಮ್ಮನೆ ಎದ್ದು ಕೂತೆ! ಹೌದುರೀ… ನೀವೇ ಹೇಳಿ, ನಲ್ಲೆ ಕಿವಿಯಲ್ಲುಸುರುವಾಗ ಯಾರು ತಾನೆ ರೋಮಾಂಚನಗೊಳ್ಳಲಾರರು?! ನನ್ನ ಕಣ್ಣುಗಳು ಸಾವಿರ ಭಾವಗಳನ್ನೂ ತಮ್ಮೊಳಗಿಂದ ಸೂಸಿ, ತನ್ನ ಮನದನ್ನೆಯನ್ನು ತಮ್ಮೊಳಗೆ ತುಂಬಿಸಿಕೊಳ್ಳುತ್ತಿದ್ದವು…

“ಸಾಹೇಬ್ರು ತುಂಬಾ ರೋಮ್ಯಾಂಟಿಕ್ ಆಗಬೇಡಿ, ಮಗಳು ಎದುರಿಗಿರುವುದು ನೆನಪಿರಲಿ” ಎಂದುಬಿಡುವುದೇ ಅವಳು! ಹಾಂ ಮಧುವಂತಿ ನನ್ನ ಮಡದಿ, ಮನದನ್ನೆ, ಪಟ್ಟದರಸಿ, ನನಗಾಗಿ ನನ್ನ ಮುದ್ದು ಶಾರೀಯನ್ನು ಕೊಟ್ಟ ನನ್ನೊಳಗಿನರ್ಧ.

“ಮಧೂ…” ಎಂದು ನನ್ನ ಕಣ್ಣುಗಳಲ್ಲಿದ್ದ ಎಲ್ಲಾ ಭಾವಗಳನ್ನೂ ಒಮ್ಮೆಲೇ ಒಂದೇ ಸವಿನುಡಿಯ ಮೂಲಕ ಚಿಮ್ಮಿಸಲು ಪ್ರಯತ್ನಿಸಿದೆ! ಹೂ ಹೂಂ, ವರ್ಕ್ ಔಟ್ ಆದಂತೆ ಕಾಣಲಿಲ್ಲ! ಯಾವುದೋ ಪರವಶತೆಯಿಂದ ಎಚ್ಚೆತ್ತುಕೊಂಡವಳಂತೆ ಮತ್ತೆ ಕೇಳಿದಳು,

“ಇವತ್ತು ಏನು ಸ್ಪೆಷಲ್ ಎಂದು ಗೊತ್ತಿದೆ ತಾನೇ? ಇನ್ನೂ ಹೀಗೇ ಮಲ್ಗಿದ್ದೀರಲ್ರೀ?” ಎಂದು ಜೋರು ಮಾಡಿದಳು.

ನಾನು ತಲೆ ಕೆರೆದುಕೊಳ್ಳುತ್ತಾ, “ಇವತ್ತು ಭಾನುವಾರ ಅಂತ ಗೊತ್ತು, ಮತ್ತೇನು ಸ್ಪೆಷಲ್? ನನಗೆ ನೆನಪಿಲ್ವಲ್ಲೇ” ಎಂದೆ. ಪಾಪ ಹಾಯಾಗಿ ಹಕ್ಕಿಯಂತೆ ಹಾರುತ್ತಿದ್ದವಳು ಜರ್ರೆಂದು ಭೂಮಿಗೆ ಇಳಿದು ಹೋದಳು! ಆದರೂ ತನ್ನ ಬೇಸರವನ್ನು ತೋರಗೊಡದೆ,

“ಏನಿಲ್ಲ ಇವತ್ತು ಭಾನುವಾರ ಅಲ್ವಾ… ಅದಕ್ಕೆ ಕೃಷ್ಣನ ಗುಡಿಯಲ್ಲಿ ಪೂಜೆಗೆ ಕೊಟ್ಟಿದ್ದೇನೆ. ಬೇಗ ರೆಡಿಯಾಗಿ ಬನ್ನಿ, ಎಂಟು ಗಂಟೆಗೆಲ್ಲಾ ಪೂಜೆಗೆ ಹೋಗಬೇಕು” ಎಂದಳು.

ಅವಳು ನನ್ನೊಳಗಿನರ್ಧ ಎಂದು ಮೊದಲೇ ಹೇಳಿದ್ದೇನೆ, ಅವಳ ಮನದ ತಳಮಳಗಳು, ಸಂಭ್ರಮಗಳು ನನಗೆ ತಿಳಿಯದಿರುತ್ತವೆಯೇ? ನನಗೂ ಅವಳನ್ನು ಸತಾಯಿಸುವುದೆಂದರೆ ಅದೇನೋ ಒಂಥರಾ ಖುಷಿ!

“ಸರಿ ಹಾಗಿದ್ರೆ ಸ್ನಾನ ಮಾಡಿ ಬರುತ್ತೇನೆ” ಎಂದು ಮೇಲೆದ್ದು ಸ್ನಾನದ ಮನೆ ಕಡೆಗೆ ಹೆಜ್ಜೆ ಹಾಕಿದೆ. ಹದಿನೈದು ನಿಮಿಷಗಳಲ್ಲಿ ಸ್ನಾನ ಮುಗಿಸಿದವನೇ, ಇನ್ನು ಹತ್ತು ನಿಮಿಷಗಳಲ್ಲಿ ರೆಡಿಯಾಗಿ ಹೊರಗೆ ಬಂದೆ. ಅದಾಗ ಗಡಿಯಾರ ೭.೩೦ ತೋರಿಸುತ್ತಿತ್ತು! ಹೊರಗೆ ಬಂದವನ ಮೊಗದಲ್ಲಿ ಏನಾದರೂ ಸಂಭ್ರಮಗಳು ಇಣುಕುತ್ತಿರಬಹುದೇ ಎಂದು ನಿರೀಕ್ಷಿಸುತ್ತಿದ್ದ ಮಧೂಗೆ ನಿರಾಸೆ ಕವಿದು, ಗಂಗೆ ಕಣ್ಣುಗಳಿಂದ ಹರಿಯಲು ಹವಣಿಸುತ್ತಿದ್ದಳು. ನನಗೆ ಆ ಕ್ಷಣಗಳನ್ನು ಸಂಪೂರ್ಣ ಸವಿಯಬೇಕೆಂಬ ಹಂಬಲವಿದ್ದ ಕಾರಣ, ನಾನು ಅವಳ ದುಃಖವನ್ನಾಗಲಿ, ತುಳುಕಲು ಹವಣಿಸಿದ್ದ ಗಂಗೆಯನ್ನಾಗಲಿ ತಡೆಯಲು ಪ್ರಯತ್ನಿಸಲಿಲ್ಲ!

ತನ್ನ ನಿರಾಸೆಯ ಬೆಟ್ಟದಿ ಪ್ರಯಾಸಪಟ್ಟು ಹನಿಗೂಡಿ ಮಂಜು, ಮಂಜಾಗಿದ್ದ ತನ್ನ ಕಣ್ಣಾಲಿಗಳ ಮೂಲಕ ನನ್ನನ್ನು ನೋಡುತ್ತಿದ್ದವಳನ್ನು ಎಚ್ಚರಿಸುವ ತೆರದಿ,

"ಏನೇ ಹಾಗೇ ನೋಡುತ್ತಾ ನಿಂತೆ, ತಡವಾಗುತ್ತದೆ ಎಂದೆಯಲ್ಲ ನಡೀ ಕೃಷ್ಣ ಮಂದಿರಕ್ಕೆ ಹೋಗಿ ಬರೋಣಾ..." ಎಂದೆ.

ಅವಳಿಗೆ ಇನ್ನು ತಡೆಯಲು ಆಗಲಿಲ್ಲ! ಕಣ್ಣುಗಳಲ್ಲಿ ಗಂಗಾಜಲ ಉಕ್ಕಿ ಹರಿಯತೊಡಗಿತು, ಪ್ರವಾಹ ನನ್ನ ಮನಸಲ್ಲಿ!

"ರೀ... ನಿಜ ಹೇಳಿ, ಇವತ್ತು ಏನು ವಿಶೇಷ ಎಂದು ನಿಮಗೆ ನೆನಪಿಲ್ವಾ? ಎಲ್ಲಿ ನೆನಪಿರಬೇಕು ಹೇಳಿ, ನಾನು ಯಾರು ನಿಮಗೆ? ಇದನ್ನೆಲ್ಲಾ ಸಂಭ್ರಮವೆಂದು ಆಚರಿಸುತ್ತೇನಲ್ಲಾ ನಾನು ದಡ್ಡಿ!" ಎಂದು ಸೈರನ್ ಸ್ಟಾರ್ಟ್ ಮಾಡಿದಳು! ನಾನು ಏನೂ ನೆನಪಿಲ್ಲದವನಂತೆ ನಟಿಸುತ್ತಾ,

"ಅಂಥದ್ದೇನು ಸಂಭ್ರಮವೇ ಇವತ್ತು? ನನಗಂತೂ ನೆನಪಿಲ್ಲ! ಹಾಂ ನನ್ನ ಕರ್ಚೀಫ್ ಮರೆತಿದ್ದೇನೆ. ತಾಳು ಬಂದೆ" ಎಂದು ನಮ್ಮ ರೂಮು ಹೊಕ್ಕೆ.

ಅವಳು ತನ್ನೊಳಗೇ, 'ದಿನವೂ ನಾನು ನೆನಪಿಸಿ ನಿಮ್ಮ ಜೇಬಿಗೆ ತುರುಕುವ ಕರ್ಚೀಫು ನೆನಪಿಗೆ ಬರುತ್ತದೆ, ಈ ದಿನ ನೆನಪಿಲ್ಲ ಆಲ್ವಾ?' ಎಂದುಕೊಂಡಿರಬಹುದೇ? ನನ್ನೊಳಗೇ ಭಾವಿಸಿಕೊಂಡು ನಕ್ಕೆ! ಕರ್ಚೀಫಿನೊಂದಿಗೆ ಹೊರಬಂದ ನಾನು ಅವಳಿಗೆ ಹೊರಡೋಣವೆಂಬಂತೆ ಸನ್ನೆ ಮಾಡಿದೆ. ಇನ್ನು ನನ್ನ ಮುಂದೆ ಹೀಗೆ ಕಣ್ಣೀರು ಸುರಿಸುವುದರಿಂದ ಲಾಭವಿಲ್ಲವೆಂದು ಭಾವಿಸಿದ ಅವಳು,

"ನನಗೆ ತಲೆ ನೋವು ಶುರುವಾಯ್ತು, ನಾನು ಎಲ್ಲಿಗೂ ಬರುವುದಿಲ್ಲ!" ಎಂದು ಸೋಫಾದ ಮೇಲೊರಗಿ ಕೂತಳು.

"ನನಗೆ ಆ ತಲೆನೋವು ಹೋಗಿಸುವ ವಿದ್ಯೆ ಗೊತ್ತಿದೆ..." ಎಂದು ನಿಧಾನವಾಗಿ ಅವಳ ಪಕ್ಕದಲ್ಲಿ ಹೋಗಿ ಕುಳಿತೆ.

"ಇಷ್ಟೆಲ್ಲಾ ಮಾಡಿ ಈಗ ನಾಟಕ ಆಡಬೇಡಿ..." ಎಂದು ಕೋಪ ನಟಿಸುತ್ತಾ ನನ್ನನ್ನು ದೂರ ತಳ್ಳಿದಳು. ಹೊರಗೆ ನಮಗಾಗಿ ಕಾದಿದ್ದ ಶಾರೀ ಒಳಗೆ ಬಂದು ಅವರಮ್ಮನ ತೊಡೆಯ ಮೇಲೆ ಆಸೀನಳಾದಳು. ನಾನು ಸಾವರಿಸಿಕೊಂಡು, ಜೋಬಿನೊಳಗಿಂದ ಬೆಚ್ಚಗೆ ನನ್ನೆಲ್ಲಾ ಆಟಗಳನ್ನು ನೋಡಿ ನಗುತ್ತಿದ್ದ ಆ ವಜ್ರದುಂಗುರವನ್ನು ಅವಳ ಮುಂದೆ ರೋಮಿಯೋನಾ ರೀತಿಯಲ್ಲಿ ತೆಗೆದಿಡುತ್ತಾ,

"ಐ ಲವ್ ಯೂ" ಎಂದೆ. ಅವಳ ಮೊಗದ ಮೇಲೆ ಕೋಪವಾಗಿ ನಲಿಯುತ್ತಿದ್ದ ಭಾವ ನಗುವಾಗಿ ಪರಿವರ್ತನೆಯಾಯ್ತು!

"ರಾಘು ಇಷ್ಟು ಹೊತ್ತು ಸತಾಯಿಸಿದಿರಲ್ಲಾ, ನನಗೆ ಅಳುವೇ ಬಂದಿತ್ತು..." ಎಂದು ಹುಸಿಮುನಿಸು ತೋರಿಸಿದಳು, ಆದರೆ ಆ ನಗು ಮಾತ್ರ ಅವಳ ಮೊಗದ ಮೇಲೆ ಹೊಳೆಯುತ್ತಲೇ ಇತ್ತು. ಅವಳ ನಗು ನನ್ನನ್ನು ಸಂಪೂರ್ಣ ಭಾವಪರವಶನಾಗುವಂತೆ ಮಾಡಿಬಿಡುವ ಔಷಧ! ಹೌದು ಇಂದು ನಮ್ಮ ಮೊದಲ ಮದುವೆಯ ಒಂಬತ್ತನೇ ವಾರ್ಷಿಕೋತ್ಸವ!

ಇದೇನು ಇವರು ಎಷ್ಟು ಸಾರಿ ಮದುವೆಯಾಗಿದ್ದಾರೆ ಎಂದು ಹುಬ್ಬೇರಿಸಬೇಡಿ! ಇಂದಿಗೆ ಒಂಬತ್ತು ವರ್ಷಗಳ ಹಿಂದೆ ಅಧಿಕೃತವಾಗಿ ನಮ್ಮ ನಡುವೆ ಹೊತ್ತಿಸಿದ ಪ್ರೀತಿಯೆಂಬ ನಂದಾದೀಪಾ, ನಮ್ಮ ಜೀವನಕ್ಕೆ ಬೆಳಕಾಗಿರುವುದಲ್ಲದೆ, ನಮಗೆ ನಮ್ಮ ಮುದ್ದು ಶಾರೀಯನ್ನೂ ಕೊಟ್ಟಿದೆ. ನಾವು ವರ್ಷಕ್ಕೆರಡು ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ! ಒಂಬತ್ತು ವರ್ಷಗಳ ಹಿಂದಾದ ಪ್ರೀತಿಯೆಂಬ ಮದುವೆಯ ವಾರ್ಷಿಕೋತ್ಸವ ಮತ್ತು ನಾಲ್ಕು ವರ್ಷದಿಂದೀಚೆಗೆ ಅಧಿಕೃತ ವಿವಾಹ ವಾರ್ಷಿಕೋತ್ಸವ!

ಮಧೂವನ್ನೂ, ಶಾರ್ವಾರಿಯನ್ನೂ ನೋಡುತ್ತಿದ್ದ ನನ್ನ ಮನಸ್ಸು ಹಿಂದಿಂದೆ ಓಡುತ್ತಿತ್ತು...


ಚಿತ್ರಕೃಪೆ: ರತೀಶ್ ನರೂರ್, ಅಂತರ್ಜಾಲ