ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 5 May 2016

ಅವಳೊಲವೇ ಉಪಶಮನದ ಹಾದಿ!


ಉಪಶಮನದ ಹಾದಿ
ಪ್ರೇಮವೊಂದೇ ಎಂದ
ಬುದ್ಧ, ಬಸವ, ಗಾಂಧಿಯರು
ಪೂರ್ಣ ದಕ್ಕಿರಲೇ ಇಲ್ಲ,
ಅವಳೊಲವ ಭೋರ್ಗರೆತ
ನನ್ನೊಡಲ ತಣಿಸಿ,
ಎದೆಗಮೃತವ ಉಣಿಸುವವರೆಗೂ!

ಪ್ರೀತಿಯ ಗುಚ್ಛಕ್ಕೆ
ಮದುವೆಯ ರಂಗು ಬಳಿದು
ಅಂದ ನೋಡಿದ್ದೇ ನೆನಪು,
ಅವಳ ಕೈಯ ಮದರಂಗಿಯಿನ್ನೂ ಹಸಿ ಹಸಿ,
ತಾಳಿಯ ತುದಿ ಸೋಕಿದ್ದ
ನನ್ನ ಬೆರಳ ತುದಿಯ ಹರಿಶಿಣದ
ತೇವವಿನ್ನೂ ಎದೆಗೆ ಹಚ್ಚೆ ಬಿದ್ದಿದೆ,
ಅವಳ ಕೈಬಳೆಗಳ ಗಲಗಲ,
ಕಿರುಗೆಜ್ಜೆಯ ಇನಿದನಿ ಮಾರ್ದನಿ,
ಎಷ್ಟೆಲ್ಲವೂ ಸ್ಮೃತಿ ಪಟಲದೊಳಗೆ...

ಬಿಟ್ಟಿರಲಾಗದ ಸೆಳೆತದಿ
ನಾಳಿನ ಅಮಾವಾಸ್ಯೆಯ ಅಗಲಿಕೆ
ಭರಿಸಲಾಗುತ್ತಿಲ್ಲ,
ಏನು ಮಾಡಲಿ ಎಂದು ಅವಳನ್ನು ಕೇಳಿದೆ?
ಅವಳ ಕಣ್ಣಾಲಿಗಳು ಜಿನುಗಿ
ಎದೆ ತೋಯ್ಸಿದ ವಿರಹಕ್ಕೆ
ಅದೆಂತಹ ಉಪಶಮನವ ತರಲಿ?
ಅಗಲಿಕೆಯ ಕಾತರಕ್ಕದೆಂತಹ
ಮುಲಾಮು ಇದೆ ಹೇಳಿ?

--> ಮಂಜಿನ ಹನಿ

ಚಿತ್ರಕೃಪೆ: ನಮ್ ಎಂಗೇಜ್ಮೆಂಟ್ ಫೋಟೋಗ್ರಾಫರ್

Saturday, 30 April 2016

ಹೊಸತನದ ಭಾವಗಳು!


ಈ ಮನೆಗೀಗಾಗಲೇ
ಐವತ್ತು ವರ್ಷ ಸಂದಿರಬಹುದು,
ನಡುಮನೆಯ ತೊಲೆಗಳಿಗೆ
ಅಜಾನುಬಾಹು ತಾತನ
ತೋಳುಗಳ ಆಧಾರ,
ಅದೋ ಅಲ್ಲಿ ನೋಡಿ
ಆ ಕಡೆಯ ಕೊಂಬೆಗೆ
ದೊಡ್ಡಪ್ಪನ ಉಸಿರು,
ಈ ಕಡೆಯ ಜಂತಿಗೆ ಅಪ್ಪಜಿಯ
ಜೀವದ ಜೀವದ ಕಸುವು!

ಇದರ ಇತಿಹಾಸ ದೊಡ್ಡದು.. ಬಗೆದಷ್ಟೂ
ಬದುಕೇ ಸಿಕ್ಕುತ್ತದೆ,
ಎಳೆ ವಯಸ್ಸಿಗೆ ಓಡಲು
ಶುರು ಮಾಡಿದ ನಾಲ್ಕು ಕಂದಮ್ಮಗಳ
ಬದುಕು, ಬವಣೆ, ತಬ್ಬಲಿತನಗಳು,
ನಿಟ್ಟುಸಿರು, ಹಸಿವು, ಅಳಲು,
ಎಷ್ಟೋ ಕಾಲ ಹೊಟ್ಟೆ ತಣ್ಣಗಿಟ್ಟ
ಹಿಟ್ಟು ಮತ್ತು ಬಸಿದ ಗಂಜಿ,
ಎಲ್ಲವನ್ನೂ ಇಂಗಿಕೊಂಡಿದೆ...
ಮತ್ತೆ ತಲೆ ಎತ್ತಿ ನಿಂತಿದೆ,
ಮುಂದೇನೆಂದು ತಿಳಿಯದಾದಾಗ
ಇಲ್ಲಿಗೆ ಬಂದು ನಿಲ್ಲುವುದು ಸೂಕ್ತ,
ಬಸವಳಿದು ಬಂದವನ ಬಿಗಿದಪ್ಪುವ
ಮಮತೆಯ ಭಾವವೊಂದು ಇಲ್ಲಿ ಅವ್ಯಕ್ತ!

ಇಷ್ಟು ಕಾಲ ಮುಗಿಲೆತ್ತರಕ್ಕೆ
ಕಾಣುತ್ತಿದ್ದವು,
ಹೆಂಚಿನ ಛಾವಣಿ, ಜಂತಿಗಳು, ರಿಪೀಸುಗಳು,
ಇಂದು ಭುಜಕ್ಕೊರಗುತ್ತಿರಬಹುದು,
ಸಂಚಿಯಿಸಿಕೊಂಡ ಶಕ್ತಿಯನ್ನು
ನೊಗಕ್ಕೆ ಕೊಡಬೇಕು;
ಮತ್ತೊಂದು ತಲೆಮಾರನ್ನು ಸ್ವಾಗತಿಸುವ ಕನಸಿಗೆ
ಮೈದಳೆದು ನಿಂತ ಮನೆಯ ಸಂಭ್ರಮ,
"ಮದುಮಗ ಒಬ್ಬೊಬ್ಬನೆ ಅಡ್ಡಾಡಬಾರದು ಮಗ.."
ಎಂದು ಕರೆದ ಅಜ್ಜಿ,
"ಹೂಂ..." ಎಂದು ಹೊರಗೆ ಹೊರಟ ನಾನು,
ತಲೆಮಾರುಗಳನ್ನು ಜಂಗಮವಾಗಿಸಿ
ತಾನು ಸ್ಥಾವರವಾಗಿ ನಿಂತಿದೆ,
ಸಂತನಾರೆಂಬ ಪ್ರಶ್ನೆಗೆ ಉತ್ತರವಿಲ್ಲ?

--> ಮಂಜಿನ ಹನಿ

ಚಿತ್ರಕೃಪೆ: ನಂದೇ ಫೋಟೋಗ್ರಫಿ

Monday, 21 March 2016

ಮೌನ: ಕವಿತೆ?


ಅಂದುಕೊಂಡು ವರುಷವಾಗಿರಬೇಕು,
ಉಳಿಯುವ
ಕವಿತೆಯೊಂದನು ಬರೆಯಬೇಕೆಂದು,
ನಡುಗಡಲಲಿ ಉಕ್ಕುಕ್ಕಿ
ದಡ ಸೇರರುವುದರೊಳಗೆ ಶಾಂತವಾಗಬೇಕು,
ಮೊಗ್ಗೊಂದು ಹಿಗ್ಗಿ ಬಿಗಿಗೊಂಡು
ಕಳಚಿ ಬೀಳುವ ತವಕದಿ
ಅದನ್ನು ಕಚ್ಚಿಹಿಡಿದ ತೊಟ್ಟಿನ ಮೌನ?
ಕೇಳಬೇಕು ನೀವು,
ನಾನು ಕಿವಿಗೊಟ್ಟಿದ್ದೇನೆ...
ನಿಮಗೊಂದು ಕವಿತೆ ಬರೆದುಕೊಡುತ್ತೇನೆ,
ಇಂಕು ತುಂಬಿಕೊಡಿ!

ಎಲ್ಲಾ ಪದ್ಯಗಳಿಗೂ
ನಿಲುವಿರರಬೇಕು, ಏನನ್ನೊ ಹೇಳಬೇಕು,
ಏನನ್ನೋ ಅರ್ಥೈಸಬೇಕು,
ಬಿಡಿಸಿಡದ ಬಾಳೆ ಕಾವ್ಯ;
ದಕ್ಕಿಸಿಕೊಳ್ಳಬೇಕು...
ಕೈಯ ಸಂಧುಗಳಲ್ಲಿ ರಸ ಸುರಿಯುವ
ಮಾವಿನ ಹಣ್ಣುಗಳಂತೆ,
ಎಷ್ಟೆಷ್ಟು ವ್ಯಾಖ್ಯಾನ ಕಾವ್ಯಕ್ಕೆ?
ನನ್ನದು ಎದೆಯ ಹಾಡು,
ಕವಿತೆಯಾಗಬಲ್ಲುದೆ?
ಪ್ರಾಮಾಣಿಕೆತೆಯೊಂದಿದೆ,
ಲಯವಿಲ್ಲ, ಘಮವಿಲ್ಲ, ಓಘವಿದ್ದೀತು?
ಹಾಗೆಂದರೇನು?

ಮೊನ್ನೆಯೊಂದು ಕವಿತೆ ಓದುತ್ತಿದ್ದೆ,
ಆಫ್ರೋ ಅಮೇರಿಕನ್ನರು ಬರೆದುದ್ದನ್ನು
ಶ್ರೇಷ್ಟ ಕವಿತೆಗಳೆಂದು ಒಪ್ಪಿಕೊಳ್ಳಲಾಗದಂತೆ ಹೌದೇ?
ಆ ಕಪ್ಪು ಕವಿ ಅಂಗಲಾಚುತ್ತಾನೆ,
ಮನುಷ್ಯರನ್ನು ಗುಲಾಮರಂತೆ ಕಾಣದ
ಬಿಕಾರಿ ಸಮಾಧಿಯೊಳಗೆನ್ನ ಊಳಿರೆಂದು...
ಅದಕ್ಕೆಷ್ಟು ಕಿಮ್ಮತ್ತಿದ್ದೀತು?
ಆಳುವ ಜನರ ಬೂಟಿನ ಸದ್ದಿಗೆ
ಅವನದೊಂದು ಆರ್ತನಾದ ಕಿರುಚಾಟ ಬಿಡಿ,
ಸುಖದ ಸುಪ್ಪತ್ತಿಗೆಯೇರುವ ವಿಟನದು ಕಾವ್ಯ,
ವೇಶ್ಯೆ ಹಾದರದವಳು ಹಾಡಬಾರದು...
ಒತ್ತಿ ಹಿಡಿದ ಕೈಗಳು ಸಡಿಲಗೊಳ್ಳದು,
ಸರಳುಗಳು ಕಳಚಿಕೊಳ್ಳವು,
ಎಲ್ಲಿ ಹುಡುಕಲಿ
ನನ್ನ ಲೇಖನಿಗೆ ಇಂಕು?

ಮನುಷ್ಯ ನೆಲ ನೆನೆದಿದೆ
ರಕ್ತದ ಕಲೆಗಳಿವೆ,
ನನಗೆ ಅವುಗಳನ್ನೆಲ್ಲಾ ಬಿಡಿಸಿಬಿಡಬೇಕು,
ಭೂಮಿಯನ್ನು ತೊಳೆದುಬಿಡಬೇಕು,
ನೀರಿನಿಂದ ತೊಳೆದರೆ ತೊಳೆಯಬಹುದೆ?
ಹಾಲಿನಿಂದ ಕಳೆದರೆ ಕಳೆಯಬಹುದೆ?
ಗಂಜಲ ಪವಿತ್ರ, ಅದು ಆಗಬಹುದೆ?
ಅಮ್ಮಳುಣಿಸಿದ ಎದೆ ಹಾಲು
ನಂಜಾದ ಕತೆ ಕೇಳಿದ್ದೆ ನಿಜ ಹೌದೆ?
ಎಲ್ಲಿ ಹುಡುಕಲೋ ಶಿವನೇ,
ಹಾಳಾದ ಕವಿತೆಗೆ ಇಂಕು ಬೇಕು;
ನೀನು ಜಗದ ಕಣ್ಣಂತೆ,
ಖಾಲಿಯಾದ ಲೇಖನಿಗೆ
ಇಂಕು ತುಂಬಿಸದ ನೀನೆಷ್ಟರವನು?

ಮುಂದೆ ಬರೆದ ಒಂದೊಂದು
ಪದಗಳನೂ ಎಚ್ಚರಿಕೆ ನುಂಗುತಿದೆ,
ನಿದ್ರಾವಸ್ಥೆ; ನನಗೆ ನಾನೇ
ಆರೋಪಿಸಿಕೊಂಡು ಮಲಗಬೇಕು,
ಯೋಚನೆಗಳಿಗೆ ಕರ್ಫ್ಯೂ ಇದೆ,
ಗುಂಪುಗೂಡಬೇಡಿ ಭಾವಗಳೇ,
ಬರೆಯಲು ಇಂಕಿಲ್ಲ,
ಕೊಳ್ಳಲು ಕಸುವಿಲ್ಲ,
ಬತ್ತಿ ಸಾಯುವ ಮುನ್ನ,
ಎಲ್ಲಿಗಾದರು ಹೋಗಿ,
ಬಂಧನದಲ್ಲಿರುವ ಕೈದಿಯ
ಮನದೊಳಗೆಂತಹ ಕೆಲಸ?
ಕೋಲಾಹಲ ಸಾಕು ಹೊರಡಿ,
ಮೌನಕ್ಕೆ ಕಿವಿಗೊಟ್ಟಿದ್ದೆನೆಂದೆನಲ್ಲ
ಅದು ಮಾತನಾಡಲಿಲ್ಲ,
ಹಾಗೆಂದುಕೊಳ್ಳಿ ದಯವಿಟ್ಟು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday, 28 January 2016

ಸೋಲೊಪ್ಪಿಕೊಂಡೆವು!


ನಿರಂತರ ಜೀತದ ಧ್ಯಾನಕ್ಕೆ ಮೈಯೊಡ್ಡಿಕೊಂಡೆವು ನಮ್ಮನ್ನು ಕ್ಷಮಿಸಿ, ಚಿಟ್ಟೆಯ ಅಂದವನ್ನು ಸಹಿಸದ ನೀವು ರೆಕ್ಕೆಗಳನ್ನು ಸಿಗಿದಿರಿ, ವಿರೂಪಗೊಂಡರೂ ನಿರ್ಲಿಪ್ತತೆ ನಟಿಸಿದರಾಯ್ತು, ಬಿಟ್ಟುಬಿಡಿ ಸೋಲೊಪ್ಪಿಕೊಂಡೆವು! ತತ್ವ ಸಿದ್ಧಾಂತ ಎಂದು ಬಾಯಿ ಬಡಿದುಕೊಳ್ಳಲು ನಾವೆಷ್ಟರವರು? ಅರೆ ಹೊಟ್ಟೆ ಹಾಕಿದರೂ, ಮುಚ್ಚಿದ ಬಟ್ಟೆಯೊಳಗೆ ಸಾವಿರಾರು ತೂತು ಬಿದ್ದರೂ ರಟ್ಟೆ ತುಂಬಿಸಿಕೊಂಡು ಹೋರಾಟಕ್ಕೆ ನಿಂತದ್ದು ತಪ್ಪೇ, ತಪ್ಪು; ಆದರೆ ನೀವು ನಿಮ್ಮ ಘನತೆ ಮೀರಿ ರೋಹಿತನನ್ನು ಬಾಣಲೆಯಲ್ಲಿ ಉರಿದದ್ದು, ಅವ ಮೇಲೇಳದಂತೆ ಆತ್ಮದ ಕಾಲು ಮುರಿದದ್ದು, ಕಣ್ಣಂಚಿನ ಕಂಬಿನಿಯ ಉಸಿರು ಕದ್ದು ನಿಶಬ್ಧ ಅಡರಿತು, ಇಷ್ಟಕ್ಕೆ ಬಿಡಿ ನಾವು ಸೋಲೊಪ್ಪಿಕೊಂಡೆವು! ಹಿಟ್ಟಿಲ್ಲದ ಅವನು ತನ್ಹೊಟ್ಟೆ ತುಂಬಿಸಿಕೊಳ್ಳುವುದು ಬಿಟ್ಟು ನ್ಯಾಯ, ಶಾಂತಿ, ಸಮಾನತೆ, ಗಾಂಧೀ-ಅಂಬೇಡ್ಕರ್, ಮನುಷ್ಯ ಪ್ರೀತಿ ಎಂದು ಹೊರಟದ್ದು ತಪ್ಪೇ, ಜೀವಕ್ಕಾದರೆ ಜಾತಿ, ಸಾವಿಗೂ ಜಾತಿಯೇ? ಹೋಗಲಿ ಬಿಡಿ, ನಾವು ಸೋಲೊಪ್ಪಿಕೊಂಡೆವು! ಶತ ಶತಮಾನಗಳು ವಿದ್ಯೆ, ವಿವೇಕಗಳನ್ನು ಕಸಿದಿರಿ, ಅಂತಃಸತ್ವ, ಮಾಂಸ ಖಂಡದ ಶಕ್ತಿಯನ್ನು ಬಸಿದಿರಿ, ಮನುಷ್ಯರನ್ನು ಮನುಷ್ಯರೆನಿಸಲು ಬ್ರಿಟೀಷರು ಬರಬೇಕಾಯ್ತು, ಈಗಲೂ ಸಂಸ್ಕೃತದೊಳಗೆ ಬ್ರಾಹ್ಮಣ್ಯ ನಾಜೂಕಾಗಿ ಚಲಾವಣೆಯಾಗುತ್ತದೆ; ಜನಪದರ ಆಚರಣೆಗಳು ಹೇಳ ಹೆಸರಿಲ್ಲದೆ ಮಕಾಡೆ ಮಲಗುತ್ತವೆ, ಅನಾಗರೀಕವೆಂದು ಬೀಗ ಜಡಿಸಿಕೊಂಡು! ಮೀರುವುದಿಲ್ಲ ಬಿಡಿ, ಏರುವುದಿಲ್ಲ ಬಿಡಿ, ನಿಮಗೆ ಜಿಂದಾಬಾದ್, ನಮ್ಮನ್ನು ಬದುಕಲು ಬಿಡಿ, ನಾವು ಸೋಲೊಪ್ಪಿಕೊಂಡೆವು! - ಮಂಜಿನ ಹನಿ

Thursday, 26 November 2015

ನಾನು ಕವಿಯಾಗುಳಿಯುವುದು?


ಮಿಸುಕಾಡುತ್ತಿದ್ದ
ಕವಿತೆಯನ್ನು
ಅರ್ಧಕ್ಕೆ ತುಂಡರಿಸಿ
ಅಪೂರ್ಣವಾಗುಳಿಸಿದ
ಪಾಪಕ್ಕೆ,
ರಟ್ಟೆಯ ಬೆವರು, ಕರುಳ ಹಸಿವು,
ಕಣ್ಣೀರ ಬಿಸುಪು,
ಹುಟ್ಟು ಸಾವು, ಕ್ಲೀಷೆ - ಸಾಂತ್ವನ,
ಆದರದ ಭಾವಗಳು,
ಎಲ್ಲವೂ ಅಸಹಕಾರ ಹೂಡಿ,
ಲೇಖನಿಯಲ್ಲಿಳಿಯುತ್ತಿಲ್ಲ...

ತಿಂಗಳೊಪ್ಪತ್ತಿಗೆ ಮುಗಿದು
ಜೇಬು ಹರಿದ
ಖಾಲಿ ಸಂಬಳಗಳು,
ವ್ಯಾಪಾರದಲ್ಲೇ ಮುಗಿದುಬಿಡುವ
ಒಲವು, ದಾಂಪತ್ಯ,
ಹಸೆ ಹೊಸುಗೆ, ಪೋಲಿತನಗಳು,
ಆಧ್ಯಾತ್ಮ, ಮೌನ, ಧ್ಯಾನ
ಎಂದು ದಿಗಿಲ್ಹತ್ತಿಸಿ
ಭ್ರಮೆಯಾಗುವ ನಕಲಿತನಗಳು,
ಯಾವುವೂ ಸ್ಫುಟವಾಗುತ್ತಿಲ್ಲ,
ಭಾವಸೆಲೆಯಾಗುತ್ತಿಲ್ಲ...

ದೇಹಿ ಎಂದವನ ಹೊಟ್ಟೆ ತುಂಬಿಸದೆ
ಅಭಿಷೇಕಕ್ಕೆ ಎರವಾದ ಹಾಲು,
ಬತ್ತಿದೆದೆಯ ಕಚ್ಚಿ
ಬಾಯೊಣಗಿಸಿಕೊಳ್ಳುವ
ಅಪೌಷ್ಠಿಕ ಮಗು,
ಮಿಷಿನರಿಗಳ ಹಣದ ದಾಹಕ್ಕೆ
ಸೊರಗಿ ಕಣ್ಣೀರು ಹರಿಸುತ್ತ
ಶಿಲುಬೆಗೊರಗಿ ನಿಂತ ಯೇಸು,
ಬುರ್ಖಾದೊಳಗೆ ಕಣ್ಣೀರು ಸುರಿಸುವ
ಇಂಝಮಾಮನ ಆರನೇ ಪತ್ನಿ,
ದಲಿತನನ್ನು ಒಳಗೆ ಕೂಡದ
ಮಹಾಮಹಿಮ ಪರಮಾತ್ಮನ
ದೇವಳಗಳು, ಗೋಮಾತೆ,
ಮನಷ್ಯರನ್ನು ಕೊಂದು ಜಿಹಾದಿಗೆ
ಕುರಾನಿನ ಬಣ್ಣ ಹಚ್ಚುವ
ISIS ಮಹಾತ್ಮರು,
ಯುದ್ಧದ ಅಮಲೇರಿಸಿಕೊಂಡ
ಅಮೇರಿಕದಂತಹ ದೇಶಗಳು,
ಯಾವುವೂ ನನ್ನೊಳಗೆ
ಸಂವೇದನೆ ಹುಟ್ಟಿಸುತ್ತಿಲ್ಲ;
ಕಾವಲು ಪಡೆಗಳ ನಡುವೆ?

ಹೀಗಿರುವಾಗ ಅನಿಸಿದ್ದನ್ನು ಬರೆದು,
ನಾನು ಕವಿಯಾಗುಳಿಯುವುದು
ಕಷ್ಟದ ಮಾತೆ? ಕನಸಿಂದೆದ್ದು
ಮೈ ಚಿವುಟಿಕೊಂಡೆ,
ನಿಜ ನಿಜ ನೋಯುವುದು?

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 24 October 2015

ಕವಿ ನಾನು; ಕೊಲೆಗಡುಕನಲ್ಲ!


ಕೈಗೆ ಕಟ್ಟಿರುವ
ಬೇಡಿಗಳನ್ನೆಲ್ಲಾ ಬಿಡಿಸಿ
ಬಿಡುಗಡೆ ನೀಡಿ ಸ್ವಾಮಿ,
ನಾನು ಕವಿಯಷ್ಟೆ,
ಕೊಲೆಗಡುಕನಲ್ಲ!

ಗಂಟಲು ಬಿಗಿದು
ಉಸಿರುಗಟ್ಟಿಸಬೇಡಿ
ದಮ್ಮಯ್ಯ;
ಬರೆದುದರಲ್ಲೇ ಉಸಿರಾಡುವ ನಾವು
ಸತ್ಯ ನುಡಿಯುತ್ತೇವೆಂದು
ಭಯವೆ?
ಬನ್ನಿ ನಿಮ್ಮ ಕೆಂಪು ಬಣ್ಣದ
ಕೋವಿಗೆ ಕೊರಳು ಕೊಡಲು
ಸಿದ್ಧರಿದ್ದೇವೆ,
ಕೊಂದುಬಿಡಿ ಬದುಕಿಕೊಳ್ಳುತ್ತೇವೆ!

ಅದಕ್ಕೂ ಮೊದಲೆ ಹೇಳಿಬಿಡುತ್ತೇನೆ,
ನನ್ನ ಸಾವಿನ ಘೋರಿ,
ನಿಮಗೆ ಮಹಲಂತೂ ಅಲ್ಲ...
ನಿಮ್ಮ ಮದ್ದು ಗುಂಡು,
ಕೋವಿ, ಕತ್ತಿಗಳಿಗೆ ಪ್ರತಿಯಾಗಿ
ನನ್ನ ನೀಲಿ ಶಾಯಿ ಹರಿಯುತ್ತದೆ,
ತಾಕತ್ತಿದ್ದರೆ
ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ;
ರಕ್ತ ಬೀಜಾಸುರನ
ವಂಶಸ್ಥರು ನಾವು ನಿಮಗೀಗಾಗಲೆ
ಗೊತ್ತಿರಬೇಕಲ್ಲ?
ಈಗಾಗಲೇ ಲಕ್ಷಾಂತರ ಅನಂತ ಮೂರ್ತಿಗಳು,
ಕಲಬುರ್ಗಿಗಳು, ಪನ್ಸಾರೆಗಳ
ಉಪಟಳದಿಂದ ಬಸವಳಿದಿದ್ದೀರಿ?!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Saturday, 29 August 2015

ಅದೊಂದು ಕೊರತೆ!


ಅದೊಂದು ಕೊರತೆಯಿದೆ,
ಮನೆಗೆ ತಡವಾಗಿ ಬಂದಾಗ
'ಎಲ್ಲಿ ಹೋಗಿದ್ಯೋ ಇಷ್ಟ್ ಹೊತ್ತು?'
ಎಂದು ರೋಫು ಹಾಕಿ
ಭದ್ರಕಾಳಿಯಾಗುವ ತಂಗಿಯದು,
ಅವಳನ್ನು ಛೇಡಿಸಿ ಅಳಿಸಿ
ಕಿತ್ತಾಡಿ, ಮಾತು ಬಿಟ್ಟು...
ಓಡಿ ಹೋಗಿ ಬಿಗಿದಪ್ಪಿ,
'ಸಾರಿ ಕಣಪ್ಪಿ' ಎಂದು
ಲಲ್ಲೆಗರೆಯುವ ಕನಸು ಕಂಡಾಗೆಲ್ಲಾ
ಕಣ್ಣೀರು ಕೂಡುತ್ತವೆ!

ಅದೊಂದು ಕೊರತೆಯಿದೆ,
ನಾನಿರುವುದೇ ಹೀಗೆ,
ಏನಿವಾಗ? ಹಾಗೆ ಹೀಗೆ
ಎಂದು ಮೊಂಡು ಮಾಡುವಾಗೆಲ್ಲಾ
ನನ್ನ ಮೊಂಡುಗಳನ್ನೆಲ್ಲಾ ಮುದ್ದಿಸಿ
ತಿದ್ದಿ, ತೀಡಿ
ಬದುಕಿನ ದಾರಿ ತೋರುವ,
ಬಿದ್ದಾಗ
ಅಮ್ಮನಿಗಿಂತ ಮೊದಲೇ
ಓಡಿ ಬಂದು ಸಂತೈಸುವ
ಅಕ್ಕನಿಲ್ಲ ಎಂಬುದನ್ನು ನೆನೆವಾಗೆಲ್ಲಾ
ಅದೊಂದು ಕೊರತೆಯಿರುತ್ತದೆ!

ಜಗಳವಾಡಿ ಬೈದು,
ಸೂಕ್ಷ್ಮತೆಗಳನ್ನು ಮೀರಿ
ಆರೊಗೆಂಟಾಗಿ ನಡೆದುಕೊಳ್ಳುವಾಗೆಲ್ಲಾ
ಕಣ್ಣೀರಾಗುವ 'ಅವಳು'
'ನಿನಗೊಬ್ಬಳು ತಂಗಿನೋ, ಅಕ್ಕನೋ ಇರ್ಬೇಕಿತ್ತು'
ಅಂದಾಗೆಲ್ಲಾ ಅನಿಸುತ್ತದೆ,
ಹೌದು ಅದೊಂದು ಕೊರತೆಯಿದೆ,
ಈ ಸಮಪಾಕದ ಬದುಕೊಳಗೆ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ