ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday 14 September 2020

'ಹಿಂದಿ ದಿವಸ' ಎಂಬ ಕಂಟಕ



ಹಿಂದಿ ಹೇರಿಕೆಯ ಈ ಕಾಲಘಟ್ಟದಲ್ಲಿ, ನೆನ್ನೆಯಿಂದ ಕೆಲವು ಘಟನೆಗಳು ನಡೆದವು. ಗಮನಿಸಿದೆ, ಇಲ್ಲಿ ಪರ ವಿರೋಧ ಚರ್ಚೆಗಳು ನಡೆದಿವೆ.

ಇರಲಿ, ಸಂವಾದಗಳು ಅಗತ್ಯ. ಅವುಗಳೇ ನಮ್ಮ ನಡುವೆ ಇರುವ ಕಂದಕಗಳನ್ನು ಮುಚ್ಚಲು ಇರುವ ಸಣ್ಣ ಬೆಳಕಿಂಡಿಗಳು. ಸಾಧ್ಯವಾದಷ್ಟು ಸಂಯಮ ಇಟ್ಟುಕೊಂಡು ಎಲ್ಲಾ ತೀವ್ರಗಾಮಿಗಳನ್ನೂ ಸೋಲಿಸುವ ಜವಾಬ್ಧಾರಿ ನಮ್ಮ ಮೇಲಿದೆ.

ಇಷ್ಟು ಮಾತು ದಾಖಲಿಸುತ್ತೇನೆ.

1) ನೆನ್ನೆ ಪವನ್ ಕುಮಾರ್ ಹಿಂದಿ ಹೇರಿಕೆ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರ ಅಭಿಪ್ರಾಯ ಎಲೈಟಿಸ್ಟ್ ಎಂದು ಒಂದು ಗುಂಪು, ಅವರು ಕನ್ನಡದ ಒಳ್ಳೆಯ ನಿರ್ದೇಶಕ, ಒಳ್ಳೆ ಸಿನೇಮಾಗಳನ್ನು ನೀಡಿದ್ದಾರೆ, ಅವರ ಕೆಲಸ ಸರಿ ಇದ್ದಾಗ ಇಂತಹ ಅಭಿಪ್ರಾಯಗಳನ್ನು ಉಪೇಕ್ಷಿಸಬೇಕು ಅಂತ ಇನ್ನೊಂದು ಲಿಬರಲ್ ಗಳ ಗುಂಪು ಹೇಳಿದೆ. ಬಲಪಂಥೀಯರು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಕನ್ನಡ ಮತ್ತು ಕರ್ನಾಟಕ ಪರ ವಿಷಯಗಳನ್ನು ಇನ್ಮುಂದೆ ರಾಜಕೀಯ ವಿಷಯವಾಗಿಯೇ ನೋಡಬೇಕು. ಇವು ಭಾವನಾತ್ಮಕ ವಿಷಯವಾಗಿಯಷ್ಟೇ ಉಳಿಯಬಾರದು. ಅದರ ಬಗ್ಗೆ ಕನ್ನಡಿಗರು ಗಮನಹರಿಸಬೇಕು. ರಾಜ್ಯದ, ಭಾಷೆಯ ಪರ ನಿಲುವುಗಳನ್ನು ಯಾವ ಪಕ್ಷ ತಳೆಯುತ್ತದೋ ಅದರ ಪರವಾಗಿ ನಾವು ನಿಲ್ಲಬೇಕು. ಇಷ್ಟು ಹೇಳುತ್ತಾ, ಪವನ್ ರ ಅಭಿಪ್ರಾಯ, ರಾಜಕೀಯ ಅಭಿಪ್ರಾಯ, ಅದಕ್ಕೆ ಬರುವ ಪ್ರತಿಕ್ರಿಯೆಗಳೂ ರಾಜಕೀಯವಾಗಿಯೇ ಇರುತ್ತವೆ. ಅದು ಹಾಗೆಯೇ ಇರಬೇಕು ಕೂಡ. ಕನ್ನಡ, ಕರ್ನಾಟಕದಿಂದ ಪವನ್ ಕುಮಾರ್ ಮತ್ತು ಉಳಿದವರೇ ವಿನಃ ಅವರಿಂದ ಕನ್ನಡವಲ್ಲ, ಕರ್ನಾಟಕವಲ್ಲ.

2) ಕೇಂದ್ರ ಸರ್ಕಾರಗಳು ಮೊದಲಿನಿಂದಲೂ ಹಿಂದಿಯೇತರ ಭಾಷೆಗಳ ಕತ್ತು ಹಿಸುಕುತ್ತಲೇ ಬಂದಿವೆ. ಅದು ಈ ಸರ್ಕಾರದಲ್ಲಿ ತೀವ್ರವಾಗಿದೆಯಷ್ಟೆ. ಅದಕ್ಕೂ ರಾಜಕೀಯ ಕಾರಣಗಳೇ ಇರುವುದು. ನಾವು ನಮ್ಮ ಅಸ್ಮಿತೆ ಮರೆತು ಬಿಜೆಪಿಯ 26 ಎಂಪಿಗಳನ್ನು ಗೆಲ್ಲಿಸಿಕೊಟ್ಟೆವು. ಅದರಿಂದಾಗಿರುವ ಲಾಭ ಎಲ್ಲಿರಿಗೂ ಗೊತ್ತಿರುವಂತಹದ್ದೇ. ಜಿಎಸ್ಟಿ ಹಂಚಿಕೆಯಲ್ಲಾದ ಮೋಸವನ್ನು ಧ್ವನಿ ಮಾಡಿ ಕೇಳುವ ಧೈರ್ಯ ಯಾರೂ ಮಾಡುತ್ತಿಲ್ಲ, ಯಡಿಯೂರಪ್ಪನಂತಹವರೇ ಸುಮ್ಮನಿರುವುದು ಆತಂಕ ಮೂಡಿಸಿದೆ. ಕೊರೋನಾ ಪರಿಹಾರದಲ್ಲಿ ನಮಗೆ ಮೋಸವಾಗಿದೆ, ನೆರೆ ಪರಿಹಾರದಲ್ಲಿ ಮೋಸವಾಗಿದೆ, ಅನುದಾನಗಳಲ್ಲಿ ಮೋಸವಾಗಿದೆ. ಹಾಗಿದ್ದಾಗ್ಯೂ ನಾವು ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದ್ದೇವೆ. ಇದು ಕೇವಲ ಭಾಷಾ ವೈರುಧ್ಯವಲ್ಲ, ಬದಲಾಗಿ, ಕನ್ನಡ ಅಥವಾ ಕೇವಲ ಕನ್ನಡವಷ್ಟೇ ಬರುವ ಸಾಮಾನ್ಯ ಕನ್ನಡಿಗನಿಗೆ ಕರ್ನಾಟಕದಲ್ಲೇ ಅವಕಾಶ ಕಲ್ಪಿಸುವುದು ಮತ್ತು ಬದುಕು ಕಟ್ಟಿಕೊಳ್ಳುವ ಸಾಧ್ಯತೆಗಳನ್ನು ಕಲ್ಪಿಸಿಕೊಡುವುದಾಗಿದೆ. ಹಾಗಿದ್ದಾಗ ಅದು ಕೇವಲ ಭಾಷಾ ವಿಷಯ ಹೇಗೆ ಅನ್ನುವುದನ್ನು ನಂಗೆ ಅರ್ಥ ಮಾಡಿಸಿ.

3) ಕರ್ನಾಟಕ ಕಾಂಗ್ರೇಸ್ ಮತ್ತು ಕಾಂಗ್ರೇಸ್ ನ ರಾಜಕಾರಣಿಗಳು 'ಹಿಂದಿ ದಿವಸ' ಆಚರಣೆಯ ಬಗ್ಗೆ ಸಕಾರಣವಾಗಿಯೇ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಇದು ಸ್ವಾಗತಾರ್ಹವೇ. ಆದರೆ ಹಿಂದಿ ಹೇರಿಕೆ ಎಂಬುದು ಅವರಿಂದಲೇ ಶುರುವಾದ ಭೂತ ಎಂಬುದನ್ನು ಮರೆಯಬಾರದು. ಈಗ ಅವರ ಅಭಿಪ್ರಾಯಗಳನ್ನು ಬೆಂಬಲಿಸಿದರೂ ಮುಂದೆ ಅವರು ಅಧಿಕಾರಕ್ಕೆ ಬಂದಾಗ ಮತ್ತೆ ಹಿಂದಿ ಹೇರಿಕೆಯ ಹಿಂದೆ ನಿಲ್ಲುವುದಿಲ್ಲ ಅನ್ನುವುದನ್ನು ಹೇಗೆ ನಂಬುವುದು? ದ್ವಿಭಾಷಾ ನೀತಿ, ಕರ್ನಾಟಕದ ಕೆಲಸಗಳು ಕನ್ನಡಿಗರಿಗೆ, 8ನೇ ಪರಿಚ್ಛೇದದಲ್ಲಿ ನಮೂದಾದ ಕನ್ನಡ ಮತ್ತು 21 ಇತರೆ ಭಾಷೆಗಳಿಗೆ ದೇಶದ ಆಡಳಿತ ಭಾಷೆಯ ಸ್ಥಾನ ಮತ್ತು ಜಿಎಸ್ಟಿಯಲ್ಲಿನ ಲೋಪಗಳನ್ನು ಸರಿಪಡಿಸುವ ಬಗ್ಗೆ ನಿಮ್ಮ ಮುಂದಿನ ಪ್ರಣಾಳಿಕೆಗಳಲ್ಲಿ ಸೇರಿಸುತ್ತೀರಾ?

4) ಇತ್ತೀಚೆಗೆ ಕನ್ನಡ ಮತ್ತು ಕರ್ನಾಟಕ ಪರ ಹೋರಾಟಗಾರರಿಗೆ ಒತ್ತಾಸೆಯಾಗಿ ನಿಲ್ಲುತ್ತಿರುವ ಸದ್ಯದಲ್ಲಿ ರಾಜ್ಯದಲ್ಲಿರುವ ಏಕೈಕ ಸದೃಢ ಪ್ರಾದೇಶಿಕ ಪಕ್ಷ ಜೆಡಿಎಸ್. ಕುಮಾರಸ್ವಾಮಿಯವರೂ ಹಿಂದಿ ಹೇರಿಕೆ ಮತ್ತು 'ಹಿಂದಿ ದಿವಸ' ಆಚರಣೆಯ ವಿರುದ್ಧ ಗಟ್ಟಿ ಧ್ವನಿ ಮಾಡಿದ್ದಾರೆ. ಅಭಿನಂದನಾರ್ಹ. ಆದರೆ ಪ್ರಾದೇಶಿಕ ಪಕ್ಷದ ಜವಬ್ಧಾರಿಗಳನ್ನು ಅರಿತುಕೊಂಡು ಇದುವರೆಗೂ ಕೆಲಸ ಮಾಡಲು ಪ್ರಯತ್ನ ಮಾಡಿಲ್ಲವೇಕೆ ಎಂಬುದು ಅರ್ಥವಾಗದ ಸಂಗತಿ. ಇದುವರೆಗೂ ಜೆಡಿಎಸ್ ನ ತತ್ವ ಸಿದ್ಧಾಂತವೇನು ಎಂಬ ಬಗ್ಗೆಯೇ ಸಾಕಷ್ಟು ಅನುಮಾನಗಳಿವೆ. ಇನ್ನು ಮುಂದೆಯಾದರೂ ತನ್ನ ಪ್ರಣಾಳಿಕೆಯನ್ನು ನವೀಕರಿಸಿಕೊಂಡು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇಷ್ಟೆಲ್ಲಾ ಹೇಳಿದ ಮೇಲೂ ಯಾವ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು, ಕನ್ನಡ ಮತ್ತು ಕರ್ನಾಟಕ ಪರವಾಗಿ ಮಾತನಾಡಿದರೂ ಅವರ ಹಿಂದಿನ ತಪ್ಪುಗಳನ್ನು ಹೆಚ್ಚಿಗೆ ಕೆದಕದೆ ವಿಶಾಲ ಮನಸ್ಸಿನಿಂದ ನಾವು, ಕನ್ನಡಿಗರು ಸ್ವಾಗತಿಸುತ್ತೇವೆ. ಆದರೆ ಕನ್ನಡ ಮತ್ತು ಕರ್ನಾಟಕಪರ ವಿಷಯಗಳು ಇನ್ಮುಂದೆ ರಾಜಕೀಯದ ವಿಷಯಗಳಾಗುತ್ತವೆ. ನಿಮ್ಮನ್ನು ನೀವು ತಿದ್ದುಕೊಂಡು ರಾಜ್ಯದ ಒಳಿತಿಗಾಗಿ ದುಡಿದರೆ ನಿಮಗೂ ಉತ್ತಮ, ನಮಗೂ ಉತ್ತಮ.

ಜೈ ಕನ್ನಡಾಂಬೆ, ಜೈ ಕರ್ನಾಟಕ.

~ ಮಂಜಿನ ಹನಿ

No comments:

Post a Comment