ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday, 6 July 2014

ಅತಿ ಸೂಕ್ಷ್ಮ 'ಗತಿ'ಯೊಳಗೆ!


ಸೂಕ್ಷ್ಮ ಸಂವೇಧನೆಯಿರುವ ನಾಟಕ ಎಂಬ ರಿವ್ಯೂವನ್ನು ಮೊದಲೇ ಕೇಳಿದ್ದ ನನಗೆ 'ಗತಿ'ಯನ್ನು ಒಮ್ಮೆಯಾದ್ರೂ ನೋಡಬೇಕೆನಿಸಿತ್ತು. ಮೈಸೂರಿನಲ್ಲಿ ನೆಲೆ ನಿಂತಿರುವ ಕಾರಣಕ್ಕೆ ಅವಕಾಶ ಇವತ್ತಿನವರೆಗೂ ಒದಗಿರಲಿಲ್ಲ. ಇಂದು ಇಲ್ಲೇ ಆಯೋಜನೆಯಾದ 'ಗತಿ' ನಾಟಕವನ್ನು ನೋಡಿದ ನಂತರದ ನನ್ನನಿಸಿಕೆಗಳನ್ನು ಹಾಗೆಯೇ ದಾಖಲಿಸುವ ಮನಸಾಗಿ ಲೇಖನ ಬರೆಯುತ್ತಿದ್ದೇನೆ. ಮೊದಲನೆಯದಾಗಿ ಒಂದು ಸೂಕ್ಷ್ಮ ಕಲಾಕೃತಿಯಂಥ ನಾಟಕವನ್ನು ರಂಗದ ಮೇಲೆ ತಂದ ನಾಟಕ ತಂಡಕ್ಕೆ ಮತ್ತು ಮೈಸೂರಿನಲ್ಲಿ ಆಯೋಜನೆಗೆ ನೆರವಾದ ಎಲ್ಲರನ್ನೂ ಅಭಿನಂದಿಸುತ್ತೇನೆ.


ಎಸ್.ಎನ್.ಸೇತುರಾಂ ಎಂದರೆ ಕಿರುತೆರೆಯಲ್ಲಿ ಚಿರಪರಿಚಿತ ಹೆಸರು. ತಮ್ಮ ಸಂವೇಧನಾಶೀಲ ಧಾರಾವಾಹಿಗಳಾದ 'ಅನಾವರಣ' ಮತ್ತು 'ಮಂಥನ'ಗಳಿಂದ ಹೆಸರಾದವರು. ಅವರ ಸೀರಿಯಲ್ಗಳಲ್ಲಿನ ಸೂಕ್ಷ್ಮಾನುಸೂಕ್ಷ್ಮ ಭಾವಾಭಿವ್ಯಕ್ತಿಗೆ ಫಿದಾ ಆಗಿದ್ದ ನನಗೆ ನಾಟಕದ ಬಗ್ಗೆಯೂ ಒಂದಷ್ಟು ನಿರೀಕ್ಷೆಗಳಿದ್ದವು. ಕಥೆಯ ಸೂಕ್ಷ್ಮತೆಯಿಂದ್ಹಿಡಿದು, ಸಂಭಾಷಣೆ ಮತ್ತು ಅದನ್ನು ನಿರೂಪಿಸುವ ಶೈಲಿಗಳಲ್ಲಿ ಅವರು ಅನುಸರಿಸಬಹುದಾದ ಕೌಶಲಗಳ ಬಗ್ಗೆ ಕುತೂಹಲಗಳಿದ್ವು. ಅವುಗಳನ್ನು ಭಾಗಶಃ ತಲುಪಿದ ನಾಟಕದ ಪ್ರಮುಖ ಅಂಶ, ಅದು ಇಳಿಯುವ ಸೂಕ್ಷ್ಮ ಸ್ಥರಗಳು ಮತ್ತು ಅದರ ಡೀಟೈಲ್ಸ್.

ಪ್ರಾರಂಭದಲ್ಲಿಯೇ ಕತ್ತಲು-ಬೆಳಕಿನ ಹಿನ್ನಲೆಯಲ್ಲಿ ಶುರುವಾಗುವ ನಾಟಕ, ತನ್ನಲ್ಲಿ ಉದುಗಿರಬಹುದಾದ ಸೂಕ್ಷ್ಮತೆಯ ಝಲಕ್ ಅನ್ನು ಸೇತುರಾಂ ರವರ ಪಾತ್ರದ ಡೈಲಾಗ್ಸ್ ಮೂಲಕ ಬಿಚ್ಚಿಡುತ್ತದೆ. ಮನುಷ್ಯ ವ್ಯವಹರಿಸುವಾಗ ಹೇಗೆಲ್ಲಾ ತನ್ನ ಪ್ರಜ್ಞೆಗಳನ್ನು ಕೊಂದುಕೊಂಡು ಬದುಕುತ್ತಾನೆ. ಹಾಗೆ ಬದುಕುವ ಬದುಕನ್ನು ಬದುಕಿದ್ದಾನೆ ಎನ್ನಲಾಗದು.. ಬದಲಿಗೆ, ನಾಡಿ ಮಿಡಿಯುತ್ತದೆ, ಹೃದಯ ಬಡಿಯುತ್ತದೆ, ಶ್ವಾಸಕೋಶಗಳು ಏರಿಳಿಯುತ್ತವೆ ಮತ್ತು ಮನುಷ್ಯ ಸತ್ತಿರುವುದಿಲ್ಲವಷ್ಟೆ ಎಂದು ಸಮೀಕರಿಸುತ್ತಾರೆ. ಸಮೀಕರಣದಿಂದ್ಮೊದಲ್ಗೊಳ್ಳುವ ಅವರ ಯೋಚನಾ ಲಹರಿ, ವಯಸ್ಸಾದ ನಂತರ ಮಕ್ಕಳು ಮಾಡುವ ಸೇವೆ ಹೇಗೆ ಸಾಯುವಿಕೆಯವರೆಗಿನ ಕಾಯುವಿಕೆಯಾಗಿ, ಕ್ರೌರ್ಯವಾಗಿ ಕಾಣುತ್ತದೆಂದು ತೆರೆದಿಡುತ್ತಾರೆ. ಇಲ್ಲಿಂದ ಪಾತ್ರಧಾರಿ ಅಜ್ಜ ಆಪ್ತನಾಗುತ್ತಾ ಹೋಗುತ್ತಾನೆ.

ನಂತರದಲ್ಲಿ ನಾಟಕದ ಭೂಮಿಕೆಗೆ ಬರುವ ದೀಪು ಅವರು, ಸೇತುರಾಂರವರ ಮೂರು ಮಕ್ಕಳಲ್ಲಿ ಮೊದಲ ಮಗನ ಮಗಳಾಗಿ (ಮೊಮ್ಮಗಳು) ಪಾತ್ರ ನಿರ್ವಹಿಸಿದ್ದಾರೆ. ಇಬ್ಬರ ಪಾತ್ರಗಳ ಸುತ್ತ ಸುತ್ತುವ ನಾಟಕ ನಾಲ್ಕು ತಲೆ ಮಾರುಗಳನ್ನು ಬೆಸೆಯುತ್ತದೆ ಎಂಬುದು ಅಚ್ಚರಿಯ ಸಂಗತಿ! ತಂದೆ ಸರ್ಕಾರಿ ಹುದ್ದೆಯಲ್ಲೂ, ತಾಯಿ ಬ್ಯಾಂಕ್ ಮ್ಯಾನೇಜರ್ ಆಗಿದ್ರೂ ಸ್ವಂತ ಕೆಲಸ ಹಿಡಿಯಲಾಗದ ಐಡೆಂಟಿಟಿ ಕ್ರೈಸಿಸ್ ಮತ್ತು ೨೮ ವರ್ಷವಾದ್ರೂ ಮದ್ವೆಯಾಗದೆ ಉಳಿದಿರುವ ಅಸಹಾಯಕತೆಯ ಪ್ರತೀಕವಾಗಿ ನಿಲ್ಲುತ್ತಾರೆ. ದೀಪು ಅಂದ್ರೆ ನಾಟಕದಲ್ಲಿ ಇಷ್ಟೇ ಅಲ್ಲಾ.. ನಮ್ಮ ನಾಗರೀಕ ಪ್ರಪಂಚ ಬೆಚ್ಚಿ ಬೀಳುವಂಥ ಮತ್ತೊಂದು ಆಯಾಮದ ಮುಖ್ಯ ಕೇಂದ್ರ. ನಮ್ಮ ಸಮಾಜದಲ್ಲೇ ಒಂದಿಲ್ಲೊಂದು ರೀತಿ ಮಾನಸಿಕ, ದೈಹಿಕ ಅತ್ಯಾಚಾರಕ್ಕೊಳಗಾಗುತ್ತಿರುವ ಹೆಣ್ಮಕ್ಕಳ ಮೇರು ದನಿ ಮತ್ತು ಅಂಥ ಸಮಾಜದ ಸೃಷ್ಠಿಗೆ ಕಾರಣವಾದವರೆಲ್ಲರ ವಿರುದ್ಧ ಸೆಟೆದುನಿಲ್ಲುವ ಸ್ತ್ರೀ ಸಂವೇಧನೆ.

ನಾಟಕದ ಮೊದಲ ಭಾಗದಲ್ಲಿ ಭೋರ್ಗರೆದು ಹರಿಯುವ ಅವರ ಕೆಲವು ಡೈಲಾಗ್ಸ್ ಅಂತೂ ನೇರ ಎದೆಗಿಳಿಯುವಂಥವು. “ಸೃಷ್ಠಿಕ್ರಿಯೆಯಲ್ಲಿ ಸುಖ ಇಟ್ಟಿದ್ದು ಸೃಷ್ಠಿಗೆ ಅಂತ, ಅದನ್ನು ಸುಖಕ್ಕಾಗಿ ಬಳಸಿಕೊಳ್ಳುವ ಮನುಷ್ಯ ಪ್ರಾಣಿಗಳಿಗಿಂತಲೂ ಕೀಳು. ಅವುಗಳಾದರೂ ಸೃಷ್ಠಿಗೆ ಯೋಗ್ಯವಾದುದ್ದನ್ನು ಹುಡುಕುತ್ತವೆ, ಇವನು ಸುಖಕ್ಕೆ ಯೋಗ್ಯವಾದುದ್ದನ್ನು ಹುಡುಕುತ್ತಾನೆ!” ಎನ್ನುತ್ತಿದ್ದಂತೆ ಪ್ರೇಕ್ಷಕರ ವಲಯದಲ್ಲಿ ನೀರವ ಮೌನ ಮನೆಮಾಡಿತ್ತು. ಇತ್ತ ತನ್ನ ಅಪ್ಪನ ಕ್ರೌರ್ಯ, ಹಸಿವುಗಳಲ್ಲಿಯೇ ಹುಟ್ಟಿ, ಬದುಕು ರೂಪಿಸಿಕೊಂಡ ಸೇತುರಾಂ ತಮ್ಮ ಲಹರಿಗಳಿಂದ ಮಾತಿಗೆ ನಿಲ್ಲುತ್ತಾರೆ. ಬಡತನದಲ್ಲಿ ಕ್ರೌರ್ಯವೂ ಹೇಗೆ ಮನೋರಂಜನೆಯಾಗಿ ರೂಪುಗೊಳ್ಳುತ್ತಿತ್ತು ಎಂಬುದನ್ನು ಅವರ ತಂದೆಯ ಕ್ರೌರ್ಯದೊಂದಿಗೆ ಬಿಚ್ಚಿಡುತ್ತಾರೆ. ಮದುವೆಯಾದಂದಿನಿಂದಲೂ ಹೆದರಿಕೆಯಲ್ಲೇ ಬದುಕುವ ಸೇತುರಾಂರ ಅಮ್ಮ, ತನ್ನ ಮಗ ನೆಂಟರಿಷ್ಟರ ಮಧ್ಯೆ ತನ್ನ ಗಂಡನಿಂದಲೇ ಅಪಹಾಸ್ಯಕ್ಕೀಡಾಗುವುದನ್ನು ಸಹಿಸದೆ ಕಾಳಿಯಾಗುವಾಗುವ ಬಗೆಯನ್ನು ವಿವರಿಸುವಾಗಿನ ಭಾವದ ಏರಿಳಿತಗಳು ಕಣ್ಣಾಲಿಗಳನ್ನು ಒದ್ದೆಯಾಗಿಸುವುದು ಅವರ ನಟನೆಯ ಶ್ರೇಷ್ಟತೆ.

ತನ್ನ ಬಾಲ್ಯದಲ್ಲಿಯೇ, ಸಂಬಂಧಿಯೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮೊಮ್ಮಗಳ ತುಮುಲ, ನೋವುಗಳು ಹೈ-ವೇ ಯಲ್ಲಿನ ಆಲೀಯ ಭಟ್ ಳನ್ನು ನೆನಪಿಸುತ್ತದೆ. ಅದೇ ದೌರ್ಜನ್ಯ ಹದಿನೈದು ವರ್ಷಗಳ ನಂತರವೂ ಮುಂದುವರೆಯುವುದು ಸಮಾಜದ ಮತ್ತು ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿನ ವೈರುಧ್ಯವನ್ನು ಭಿತ್ತರಿಸುತ್ತದೆ. ಇವರಿಬ್ಬರ ಸಂಭಾಷಣೆಯ ನಡುವೆಯೇ ಸಂಬಂಧಿಕನಿಂದ ಬರುವ ಫೋನ್ ಕಾಲ್ ಮತ್ತು ಆನಂತರದಲ್ಲಿ ಇವರ ಸಂಭಾಷಣೆ ಹೊರಳಿ ನಿಲ್ಲುವ ಸೂಕ್ಷ್ಮತೆಗಳನ್ನು ನಾಟಕ ನೋಡಿಯೇ ತಿಳಿಯಬೇಕು. ಸಂಭಾಷಣೆಯ ನಂತರ, ನೆಂಟ ತನ್ನ ಸ್ವಂತ ಚಿಕ್ಕಪ್ಪನಲ್ಲವೆಂದು ತಿಳಿದಾಗ ಆಕೆಯಲ್ಲಿ ಒಡಮೂಡುವ ಆತ್ಮಬಲ ಮತ್ತು ನೈತಿಕ ಸ್ಥೈರ್ಯ ಧನಾತ್ಮಕ ಅಂಶಗಳಲ್ಲೊಂದು.

ಅಜ್ಜ ಮತ್ತು ಮೊಮ್ಮಗಳ ಪಾತ್ರಧಾರಿಗಳಿಬ್ಬರೂ ಜಿದ್ದಿಗೆ ಬಿದ್ದಂತೆ ನಟಿಸಿ ನಮ್ಮ ಮನಸ್ಸು ಮತ್ತು ಕಣ್ಣುಗಳನ್ನು ಒದ್ದೆ ಮಾಡುವುದರಲ್ಲಿ ಎರಡು ಮಾತಿಲ್ಲ. ಸೂಕ್ಷ್ಮಗಳ ಸುಳಿಯಲ್ಲಿ ಸಿಲುಕುವ ಮನಸ್ಸು ಜೀವನದಲ್ಲಿ ಎದಿರುಗೊಳ್ಳುವ ಸಾಕಷ್ಟು ವಿಧದ ಹಸಿವುಗಳ ವಿಶ್ಲೇಷಣೆಗಿಳಿಯುತ್ತದೆ. ಅದನ್ನು ನಾಟಕದ ಯಶಸ್ಸು ಎನ್ನಬಹುದು.

ನಾಟಕವನ್ನು ಅದ್ಭುತ ಎನ್ನಬಹುದಾದರೂ, ಅದರ ಓಘ ಮತ್ತು ವಿಷಯಗಳ ಸೈಡ್ ಎಫೆಕ್ಟ್ಸ್ ನನ್ನ ಮನಸ್ಸನ್ನು ಕಾಡಿದವು. ಸ್ತ್ರೀ ಸಂವೇಧನೆಯ ಭರದಲ್ಲಿ ಅಭಿವ್ಯಕ್ತಿಗೊಳ್ಳುವ ಕೆಲವೇ ಕೆಲವು ತುಮುಲಗಳು ಅತಿರೇಖ ಅನ್ನಿಸದಿರದು. ಮೊದಲನೆಯದಾಗಿ ಸ್ತ್ರೀಯರು ರಸ್ತೆ, ಬಸ್ಸು, ಶಾಪಿಂಗ್ ಮಾಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಮಾನಗೇಡಿಗಳಿಂದ ಕಸಿವಿಸಿಯನುಭವಿಸುವುದು ನಿಜವಾದರೂ ಎಲ್ಲರ ದೃಷ್ಠಿಗಳೂ ಒಂದೇ ತೆರನಾಗಿರುವುದಿಲ್ಲ. ಎಲ್ಲವನ್ನೂ ಅಸಹ್ಯವೆಂದೇ ನೋಡುವುದು ಎಷ್ಟು ಸರಿ? ಶೃಂಗರಿಸಿಕೊಳ್ಳುವ ಮೂಲ ಉದ್ದೇಶವೇ ಚೆಂದವಾಗಿ ಕಾಣುವುದು, ಹಾಗೆ ಸುಂದರವಾಗಿ ಕಾಣುವವರನ್ನು ಪ್ರಶಂಶಾತ್ಮಕವಾಗಿ ನೋಡುವುದೂ ಅಸಹ್ಯವಾಗಬಹುದೇ? ಎನಿಸಿತು. ಆದರೆ ಮೊಮ್ಮಗಳು ಅನುಭವಿಸಿದ ದೌರ್ಜನ್ಯಗಳು ಆಕೆಯನ್ನು ರೀತಿಯಾಗಿ ಭಾವಿಸಿಕೊಳ್ಳಲು ಪ್ರೇರೇಪಿಸಿರಬಹುದು. ಎರಡನೆಯದಾಗಿ ಒಂದು ಲಾಜಿಕಲ್ ಪಾಯಿಂಟ್ ನನ್ನನ್ನು ಯೋಚನಾ ಮಗ್ನನಾಗುವಂತಾಗಿಸಿತು. ಸೃಷ್ಠಿಕ್ರಿಯೆ ಪುರುಷ ನೆಲೆಯನ್ನಷ್ಟೇ ಅಲ್ಲದೆ, ಮಹಿಳಾ ನೆಲೆಯನ್ನೂ ಹೊಂದಿರುತ್ತದೆ. ತನ್ನ ಚಿಕ್ಕಪ್ಪ ತಾತನ ಮಗನಾಗಿರದೆ ಅಜ್ಜಿಯ ಹೊಟ್ಟೆಯಲ್ಲಿ ಹುಟ್ಟುವ ಮತ್ತೊಬ್ಬರ ಮಗನಾಗಿರುವುದು, ಹೇಗೆ ಆತ ತನ್ನ ಸ್ವಂತ ಚಿಕ್ಕಪ್ಪನಲ್ಲ ಎಂಬ ಅಭಿಪ್ರಾಯವನ್ನು ಒಡಮೂಡಿಸಬಲ್ಲದು? ಆಗ ತಾಯಿ ನೆಲೆಯ ಸೃಷ್ಠಿಕ್ರಿಯೆ ಅರ್ಥ ಕಳೆದುಕೊಳ್ಳುವುದೇ? ಎಂಬ ಜಿಜ್ಞಾಸೆ ಆವರಿಸುತ್ತದೆ. ಮೂರನೆಯದಾಗಿ ಬದುಕಿನಲ್ಲಿರುವ ಅಷ್ಟೂ ಸೌಂದರ್ಯಗಳನ್ನು ಅವುಗಳು ಇರುವಂತೆಯೇ ಅನುಭವಿಸದೆ ಎಲ್ಲವನ್ನೂ ತುಲನಾತ್ಮಕ ಮತ್ತು ವಿಶ್ಲೇಷಣಾತ್ಮಕವಾಗಿ ನೋಡುವುದು, ಜೀವನವನ್ನು ಮತ್ತಷ್ಟು ಅಸಹನೀಯವಾಗಿಸುತ್ತದೆ ಮತ್ತು ಮಟ್ಟದ ಸೂಕ್ಷ್ಮತೆ ಜೀವನಕ್ಕೆ ಅನಗತ್ಯವೇನೋ ಅನಿಸುತ್ತದೆ. ಸಿನೇಮಾವನ್ನು ಸಿನೇಮಾ ಅಷ್ಟೇ ಎಂದು ಹೇಗೆ ಅಂದುಕೊಳ್ಳುತ್ತೇವೆಯೋ ಹಾಗೆಯೇ ನಾಟಕವನ್ನು ನಾಟಕವಷ್ಟೇ ಎಂದುಕೊಂಡರೆ ಇವುಗಳನ್ನು ಮರೆಯಲು ಸುಲಭವಾದೀತು.

ನನ್ನ ಯೋಚನಾ ಲಹರಿಗಳನ್ನು ಬದಿಗೆ ಸರಿಸಿ ಒಬ್ಬ ಪ್ರೇಕ್ಷಕನಾಗಿ ನಾಟಕವನ್ನು ಅದ್ಭುತ ಎನ್ನಲಡ್ಡಿಯಿಲ್ಲ. ಸಂಭಾಷಣೆಯಲ್ಲಂತೂ ಮೇರೆ ಮೀರುವಗತಿ’, ಅಭಿನಯ, ಬೆಳಕಿನ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತದಲ್ಲೂ ಮನೋಜ್ಞ ಎನಿಸುತ್ತದೆ. ರಂಗಾಯಣದಲ್ಲಿನ ಅಚ್ಚುಕಟ್ಟು ವ್ಯವಸ್ಥೆಯೂ ಅಭಿನಂದನಾರ್ಹ. ’ಗತಿಯನ್ನು ನೋಡಿಲ್ಲದವರು ಖಂಡಿತಾ ನೋಡಿ, ಬದುಕಿನ ಸೂಕ್ಷ್ಮಾನುಸೂಕ್ಷ್ಮಗಳಿಗೆ ತೆರೆದುಕೊಳ್ಳಲಿಚ್ಛಿಸುವವರು ನೋಡಲೇಬೇಕಾದ ನಾಟಕಗತಿ’.

- ಮಂಜಿನ ಹನಿ

1 comment:

  1. ಸೇತುರಾಮ್ ಅವರ ಗತಿ ನಾಟಕದ ಬಗ್ಗೆ ತುಂಬಾ ಕೇಳಿದ್ದೆ.
    ಒಳ್ಳೆಯ ವಿಮರ್ಶೆ ಬರೆದುಕೊಟ್ಟಿದ್ದೀರಾ.
    ಮುಂದಿನ ಪ್ರದರ್ಶನಕ್ಕೆ ನಾನು ಹಾಜರು.

    ReplyDelete