ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday, 20 August 2014

ನಾನೆಂಬ ಮೌನ ಕಾವ್ಯ?!


ಕಷ್ಟಪಟ್ಟು, ಭಾವ ಬಿತ್ತಿ ಹುಟ್ಟಿಸಿದ ಅನುಭೂತಿಗೆ
ಹೀಗೊಂದು ಹೆಸರಿಟ್ಟಿರುತ್ತೀರಿ,
ನಗುವೆಂದರೆ ನಗು, ಅಳುವೆಂದರೆ ಅಳು,
ಆನಂದದ ಅಲೆಯೊಳಗೆ
ಮುಳುಗೆದ್ದ ಮನವೊಂದು
ಮುಖದ ಸ್ನಾಯು ಸಡಿಲಿಸಿ
ಪಕ್ಕೆಂದು ಹಲ್ಲು ಬಿಟ್ಟರೆ ನಗುವಾಗಿ,
ದುಃಖ ಮಡುಗಟ್ಟಿ,
ಅಲೆಯುವಾತ್ಮ ಬಂಧಿಯಾದರೆ,
ಕಣ್ಣಿಂದ ನೀರು ಒಸರುತ್ತದೆ; ಅಳುವಾಗಿ!
ಅಂದರೆ ಅಂದದ್ದೇ ಹೆಸರು,
ಅನ್ನದಿರೆ ಏನೆಂದು ಕರೆಯುವರು?

ಬಾಯಿ ಒಣಗಿ, ಹಸಿದು ಬಾಯಾರಿದ
ಮಗು ಹಾಲಿಗಾಗಿ ಪರಿತಪಿಸುವಾಗ
ಮೊಲೆಯೂಡುವ ತಾಯಿ,
ತನ್ನ ಮಾಂಸ, ಮಜ್ಜೆ, ರಕ್ತಗಳನು ಬಸಿದರೂ
ತಾಯ್ತನದ ಸುಖವನುಭವಿಸುವಳಂತೆ,
ಹಾಗಿರೆ ಸುಖವೆಂದರೇನು?
ಸಂಬಂಧಗಳ ಭಾರಕ್ಕೆ
ಜಗ್ಗಿ ಜೋತು ಬೀಳುವ ನಾವು,
ಅವುಗಳನ್ನು ಕತ್ತರಿಸಿಕೊಳ್ಳುವಾಗ
ಹಗುರಾಗರಾಗುವುದನು ಬಿಟ್ಟು
ದುಃಖ ಒತ್ತರಿಸಿಕೊಳ್ವುದೇಕೋ?
ಅಸಲಿಗೆ ಈ ದುಃಖವೆಂದರೇನು?
ಜಿಜ್ಞಾಸೆಯ ಬಿಂದು?

ಈ ಮನಸಿದೆಯಲ್ಲ, ಸರಿಯಿಲ್ಲ ಆಸಾಮಿ?
ಕುಳಿತಲ್ಲಿಯೇ ಊರೂರು ಸುತ್ತಿ,
ಕೇರಿಯ ವಿಳಾಸ ಹೊತ್ತು ತರುತ್ತಾನೆ,
ಯೋಚನೆಯ ಒಂದು ಬಿಂದುವಿನಿಂದ
ಮತ್ತೊಂದು ಬಿಂದುವಿಗೆ ಹಾರುವ
ಪರಾಗ ಕ್ರಿಯೆ, ಥಾಟ್ ಪ್ರೋಸೆಸ್ಸೇ ಹೌದಾದರೆ,
ಈ ಥಾಟೆಂದರೇನು? ನಾವು
ಕರೆದರದು ಯೋಚನೆ, ಯೋಜನೆ,
ಕರೆಯುವ ಮುನ್ನ ಅದು ಏನು?
ಗೊತ್ತೇ ಇರದ ಗೋಜಲುಗಳಲ್ಲಿ ಸಿಕ್ಕುತ್ತೇನೆ,
ಪದಗಳಿಲ್ಲದ ಕಾಲದ
ಭಾಷೆಗೆ ಕಿವಿಯಾನಿಸಿ ಕುಕ್ಕರಿಸಿರುತ್ತೇನೆ!

ಸನ್ನೆಗಳ ಭಾಷೆಯನು ಮೀರುವ
ಪದಗಳ ಭಾಷೆಯೂ ಗೋಜಲೆಂದರೆ ಗೋಜಲು,
ಹೊಸದಾದರೂ ಹುಟ್ಟಿಸಿಕೊಳ್ಳೋಣೆಂದರೆ
ಬಳಕೆಯ ಪದಗಳೆಲ್ಲವೂ ಎಂಜಲು,
ನಿರುತ್ತರನಾದ ಮೌನ ಮಾತ್ರ ಸ್ವಚ್ಛ,
ಅಮೂರ್ತವಾದ ಶೂನ್ಯ ಮಾತ್ರ ಕಾವ್ಯ!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

2 comments:

  1. ಚಂದ ನಿಮ್ಮ ಕಾವ್ಯ ಪ್ರಸಾದ್....

    ReplyDelete
  2. ಮನಸ್ಸಿಗಿಂತಲೂ ಪಾಕಡಾ ಮತ್ತೊಂದಿಲ್ಲ! ಅದು ಸುಳಿಯದ ತಾವಿಲ್ಲ. ಲೆಕ್ಕಿಸದ ಅಗಣಿತವಿಲ್ಲ!
    ನಮ್ಮ ಮನಸ್ಸುಗಳ ಕಾವ್ಯವನ್ನು ಬರೆದ ಕೊಟ್ಟ ಕವಿ ನೀವು.

    ReplyDelete