ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday, 14 September 2013

ಕದ್ದಿಂಗಳಾ ಬೆಳದಿಂಗಳು!?


ಕೌಮಾರ್ಯ ಕೈಬೀಸಿ
ಕರೆದಂತೆ,
ತನುವಿನೊಂದಿಗೆ ಮನವೂ
ಹೆಣ್ಣಾಗುತ್ತಿತ್ತು!
ಹಣ್ಣೊಳಗಿನ ಬೀಜಗಳು ಮೊಳೆತು
ಸಸಿಯಾಗಿ, ಮರವಾಗಿ
ಮತ್ತೆ ಜೊಂಪೆ ಜೊಂಪೆಯ
ಹಣ್ಣುಗಳು ತೂಗಬೇಕು,
ವಂಶ ಬೆಳಗಬೇಕು!

ವರದ ಬಲದಿಂದ
ಮದುವೆಗೆ ಮುನ್ನವೇ
ಒಂದು ಹೆತ್ತ
ಫಲಭರಿತ ಒಡಲು ನನ್ನದು,
ರಾಜ್ಯ ಕಟ್ಟಿ ಆಳಬಲ್ಲ
ರಾಜಕುಮಾರರೇ
ಹುಟ್ಟಿಬರುತ್ತಾರೆಂಬ ಆಸೆ!
ಮದುವೆಗೆ ಮೊದಲ ಬಸಿರ
ಗಂಗೆಯಲ್ಲಿ ತೊಳೆದುಬಿಟ್ಟೆ!

ಸ್ವಯಂವರದ ಸಿದ್ಧತೆ,
ದೂರ ದೂರದ ದೇಶದ
ರಾಜರು ಸಾಲುಗಟ್ಟಿಹರು,
ಅಪ್ಪ-ಅಮ್ಮನ ವರ್ಣನೆಯಿಂದ
ಕಣ್ಣೊಳಗೆ ಹೊಳೆದವನು
ಅವನೊಬ್ಬನು ಮಾತ್ರ!
ಪಾಂಡು ರಾಜಕುಮಾರ!
ಮೈಬಣ್ಣ ಸ್ವಲ್ಪ ಒಣಗಿದಂತೆ ಕಂಡರೂ
ಬಲಶಾಲಿ ಮೈಕಟ್ಟು!
ಮರು ಕ್ಷಣವೇ ನಾನು
ಕುರುವಂಶದ ಸ್ವತ್ತು!

ಕೌಮಾರ್ಯದಿ ಕಂಡ ಕನಸುಗಳು
ತಿಂಗಳಿಗೂ ಉಳಿಯದೆ
ಗಾಳಿ ಗೋಪುರ!
ರಾಜ್ಯ ಕಟ್ಟುವುದರಲ್ಲಿ
ಪಾಂಡುವಿಗಿದ್ದ ಆಸಕ್ತಿ,
ವಂಶ ಬೆಳೆಸುವುದರಲ್ಲಿ ಕಾಣುವುದಿಲ್ಲ!
ಅಷ್ಟರಲ್ಲಿ ನನ್ನೊಡಲನ್ನು ಶಂಕಿಸಿದ
ಭೀಷ್ಮ, ಮಾದ್ರಿಯನ್ನು
ನನ್ನ ಸವತಿಯಾಗಿ ತಂದ!
ಉಹೂಂ... ವಂಶ ಚಿಗುರಲಿಲ್ಲ!

ಸರಿ, ಹೇಗಾದರೂ ದೇಶ ಬೆಳೆದಂತೆ
ವಂಶ ಬೆಳೆಯಬೇಕು,
ಯಮಧರ್ಮ, ವಾಯು, ಇಂದ್ರರ
ಜಪಿಸಿ ಅನುಗ್ರಹದಿ
ಮಕ್ಕಳ ಪಡೆದರೂ
ಮನದಲ್ಲಿದ್ದುದು ಪಾಂಡುವೊಬ್ಬನೇ!
ಸಾದ್ವಿ ಈ ಕುಂತಿ, ಕುಲಟೆಯಲ್ಲ!
ಅಶ್ವಿನಿ-ದೇವತೆಯರ ಅನುಗ್ರಹದಿಂದ
ಮಾದ್ರಿಯೂ ಎರಡು ಹಡೆದಳು!

ಐವರೂ ಪಾಂಡು ಕುಮಾರರು,
ಒಬ್ಬರಿಗಿಂತೊಬ್ಬ ವೀರ ಯೋಧರು!
ಅವನೇನೆಂದನಂತೆ,
ಆ ಗಾಂಧಾರಿಯ ಮಗ ದುರ್ಯೋದನ...
ಆ ಕುಂತಿಯ ಮಕ್ಕಳನ್ನು
ಪಾಂಡುಕುಮಾರರು ಎನ್ನಲು
ಅವರೇನು
ಪಾಂಡು ಮಹರಾಜನಿಗೆ ಹುಟ್ಟಿದವರೇ?
ಎಂದನಂತಲ್ಲ, ಅವನ
ನಾಲಿಗೆ ಸೀಳಬೇಕು!
ಹಸ್ತಿನಾವತಿಯಲ್ಲಿ ಪಾಂಡವರಿಗೆ
ಪಟ್ಟ ಕಟ್ಟಬೇಕು!
ಈ ಬೆಳದಿಂಗಳೇಕೆ ಮೈ ಬೆವರಿಸುತ್ತಿದೆ,
ಕಣ್ಣು ಕತ್ತಲೆ ಕಟ್ಟುತ್ತಿದೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಗೂಗಲ್ ಅಂತರ್ಜಾಲ

No comments:

Post a Comment