ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 29 November 2012

ಅರಿಷಡ್ವರ್ಗಗಳ ಉರಿಕಾರುತ್ತವೆ, ಉರಿಯುತ್ತವೆ,
ದೇಹವನ್ನೇ ದಹಿಸುತ್ತವೆ,
ನಿಗ್ರಹಿಸಿದವನು ಸಂತ,
ನಿಗ್ರಹಿಸದವಗವು ಸ್ವಂತ!
ಸೊಂಪಾದ ಬತ್ತಿಗೆ ಕಿಡಿಯಿಟ್ಟವನು
ಅವನೋ ಆಟವಾಡುತ್ತಾನೆ!
ಉರಿದವರು ಮಾತ್ರ ನಾವೇ!
ಅರಿಷಡ್ವರ್ಗಗಳ ಉರಿಗೆ!

ದಗದಗಿಸಿ ಉರಿದು
ಸ್ಖಲಿಸಿ ಉಗಿದದ್ದಷ್ಟೇ
ಪ್ರೇಮಕ್ಕೆ ಹಿಡಿಯಷ್ಟು ಮಣ್ಣು!
ಕಾಮಕ್ಕೆ ನೂರೆಂಟು ಕಣ್ಣು!
ಕ್ರೋಧದ ದಾವಾಗ್ನಿಗೆ
ಬೆಂದುಹೋಯಿತು ಕುರುವಂಶ
ಕಾರಿಕೊಂಡವನು ಸುಯೋಧನ
ಪಡೆದದ್ದು ಏನು?

ಶಕುನಿಯ ಕುಯುಕ್ತಿಗೆ
ಸುಯೋಧನನ ದಾಹ ಬೆಸೆತ!
ರಾಜ್ಯದಾಸೆಯ ಲೋಭಕ್ಕೆ
ಬರೆಸಿಕೊಂಡ ಭಾರತ!
ತಾರುಣ್ಯವತಿ ದ್ರೌಪದಿ,
ಏನ ಕಂಡನೋ ಕೀಚಕ!
ಮೋಹಕ್ಕೆ ಮತ್ತೊಂದು ಬಲಿ
ಬಲ ಭೀಮನ ಕೈಯ್ಯಲ್ಲಿ!

ಋಷಿಗಳ ಕೊರಳ್ ಹಿಡಿದು
ಗೋಪಿಕೆಯರ ಸೆರೆ ಹಿಡಿದ
ಅದಮ ನರಕನ ಬಲಿ ತೆಗೆದದ್ದು
ಮದ, ಭಾಮೆಯು ಸುಳಿಮದ್ದು!
ಶಕುನಿಯ ಮಾತ್ಸರ್ಯವು
ಕುರುಕ್ಷೇತ್ರಕೆ ಧಾಳ ಹೂಡಿ,
ಅವನಾದರೂ ಉಳಿದನೆ?
ಅವನೂ ಹಳಿದು ಹತನಾದವನೇ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

1 comment:

  1. ಎಲ್ಲವೂ ಒಳಗಿರಲೇಬೇಕು ಆದರೆ ಹಿಡಿತ ನಮ್ಮಲಿರಬೇಕು! ನಾವು ಅದರೊಳಗಾದರೆ ಬೆಂದು ಸುಣ್ಣವಾಗುವುದು ಇದ್ದದ್ದೇ!

    ಉರಿ ಹಿತವಾಗಿದೆ. ಅರಿಯೋಣ ಅರಿಯ ಮೆಟ್ಟಿ ನಿಲ್ಲಲು!

    ReplyDelete