ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday, 8 February 2012

ಯುವ ಮನಸ್ಸಿನ ಹತ್ತು ಹಲವು ಮುಖಗಳು - 2

ಅವನು, ಅವಳು ಮತ್ತು ಪ್ರೀತಿ
-------------------------------

ಹರೆಯ ಎಂಬುದೇ ಹೀಗೆ, ಯಾವುದೇ ಪ್ರತ್ಯೇಕ ವ್ಯಾಖ್ಯಾನಕ್ಕೆ ದಕ್ಕದ ನಜೂಕಿನ ವಿಷಯ. ಅದರ ಅರ್ಥಾನ್ವೇಷಣೆಗಳು ತೆರೆದಿಟ್ಟಷ್ಟೂ ವಿಸ್ತಾರ, ಸಂವೇಧನೆಗೆ ಸಿಕ್ಕಷ್ಟೂ ನಿಗೂಢ.

ಅವನೊಬ್ಬ ಸಾಮಾನ್ಯ ಹುಡುಗ, ಹೆಸರು ಆದಿತ್ಯ. ತಂದೆ ಸರ್ಕಾರಿ ಕಛೇರಿಯಲ್ಲಿ ಹೆಡ್ ಕ್ಲಾರ್ಕ್, ತಾಯಿ ಸಾಮಾನ್ಯ ಗೃಹಿಣಿ. ಒಬ್ಬನೇ ಮಗನಾದ ಕಾರಣ ಮನೆಯ ರಾಜಕುಮಾರನಂತೆ ಬೆಳೆಯುತ್ತಿದ್ದ. ಮೊದ ಮೊದಲು ಈ ಅತಿಯಾದ ಪ್ರೀತಿ ಮತ್ತು ಕಾಳಜಿಗಳು ಹಿತವೆನಿಸಿದರೂ ಅವನು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಅವುಗಳೆಲ್ಲಾ ಉಸಿರುಗಟ್ಟಿಸುವಂತೆ ಭಾಸವಾಗುತ್ತಿತ್ತು. ಈ ಹರೆಯದ ಪ್ರಮುಖ ಲಕ್ಷಣವೆಂದರೆ ತನ್ನ ಅಪ್ಪ-ಅಮ್ಮನ ಮಾತುಗಳು ಮತ್ತು ಕಾಳಜಿ ತಂತಿ ಬೇಲಿಗಳಂತೆ ಭಾಸವಾಗುತ್ತವೆ. ಆ ಬೇಲಿಯನ್ನು ಹಾರಬೇಕೆನಿಸುತ್ತದೆ. ಮತ್ತು ಹೆಚ್ಚು ಸಮಯವನ್ನು ಏಕಾಂತದಲ್ಲಿ ಕಳೆಯುವಂತೆ ಪ್ರೇರೇಪಿಸುತ್ತದೆ. ಬೇಕಾಗಿಯೇ ದಕ್ಕಿಸಿಕೊಂಡ ಏಕಾಂತವನ್ನು ಓದು ಸೆಳೆದಿತ್ತು. ಹಾಗಂತ ಪಠ್ಯದ ಓದಲ್ಲ, ಬದಲಾಗಿ ಪ್ರೀತಿ-ಪ್ರೇಮದ ಬಗ್ಗೆ ಯಾವುದೇ ನಿಯತಕಾಲಿಕೆಗಳಲ್ಲಿ ಬಂದಿದ್ದರೂ ತುಂಬಾ ಅಸ್ಥೆ ವಹಿಸಿ ಓದುತ್ತಿದ್ದ..! ಆಗ ಅವನನ್ನು ಆಕರ್ಷಿಸಿದ್ದು ’ಓ ಮನಸೇ’ ಅದರಲ್ಲಿ ಬರುತ್ತಿದ್ದ ಲೇಖನಗಳಲ್ಲಿನ ಪ್ರೀತಿಯ ನವ್ಯ ವ್ಯಾಖ್ಯಾನಗಳು ಅವನಲ್ಲಿ ಕುತೂಹಲಗಳನ್ನು ಹುಟ್ಟಿಸುತ್ತಿದ್ದವು.

ನಿವೇಧಿತಾ ಆದಿತ್ಯನ ಸಹಪಾಠಿ, ಮಾತೂ ಹೆಚ್ಚು, ಪಲುಕೂ ಹೆಚ್ಚು. ಆದಿತ್ಯ ಅವನಿಗೇ ಅರಿವಿಲ್ಲದೆ ಅವಳೆಡೆಗೆ ಸರಿಯುತ್ತಿದ್ದ. ಅವಳೊಂದಿಗೆ ಬೆರೆಯಲು ಕಾರಣಗಳನ್ನು ಹುಡುಕುತ್ತಿದ್ದ. ಇವರ ಆತ್ಮೀಯತೆಯನ್ನು ಗಮನಿಸಿದ ಆದಿತ್ಯನ ತಾಯಿಯ ಮನಸ್ಸಿನಲ್ಲಿ ಅವ್ಯಕ್ತವಾದ ಭಯ ಮೂಡುತ್ತಿತ್ತು. ಅವರು ಇವರಿಬ್ಬರ ಆತ್ಮೀಯತೆಗೆ ಬೇಲಿಯನ್ನು ಹಾಕಲು ಪ್ರಯತ್ನಿಸಿದರು. ಇದೇ ಪೋಷಕರು ಮಾಡುವ ತಪ್ಪು, ಅವರು ಈ ರೀತಿಯ ವಿಚಾರಗಳಲ್ಲಿ ಅತಿಯಾಗಿ ಮೂಗು ತೂರಿಸದಿದ್ದರೆ ಅದು ಆಕರ್ಷಣೆಗಷ್ಟೇ ಸೀಮಿತವಾಗಿ, ಸ್ನೇಹವಾಗಿಯೇ ಉಳಿಯುವ ಸಾಧ್ಯತೆಯುಂಟು. ಆದರೆ ಪೋಷಕರು ಆ ವಿಷಯಗಳ ಮಧ್ಯೆ ಪ್ರವೇಶಿಸಿದರೆ ಆ ಆಕರ್ಷಣೆ ಪ್ರೀತಿಯಾಗಿಯೇ ತೀರುತ್ತದೆ. ಆದಿತ್ಯ ಈಜು ಬರದಿದ್ದರೂ ಸಹ ಆಳ ನೋಡುವ ದುಸ್ಸಾಹಸಕ್ಕೆ ಕೈ ಹಾಕಿದ್ದ. ಇವನೋ ಪ್ರೀತಿಯ ಆಳ ತಿಳಿಯದವನು, ಅವಳು ಪ್ರೀತಿ-ಸ್ನೇಹಗಳಿಗೆ ವ್ಯತ್ಯಾಸವೇ ತಿಳಿಯದವಳು. ಇಬ್ಬರೂ ಪ್ರೀತಿಯಲ್ಲಿ ಬಿದ್ದರು, ಸ್ವಯಂಕೃತ ಅಪರಾಧ..! ಮೊದಲು ಪ್ರೀತಿಯಲ್ಲಿ ಬೀಳುವವರಿಗೆ ಅದರ ಬಣ್ಣ ಆಕರ್ಷಣೀಯ ಎನಿಸುತ್ತದೆ. ಆದರೆ ಅದು ಮಾಸಿ ಹೋಗುತ್ತದೆ ಎಂಬ ಕಲ್ಪನೆಯೂ ಇರುವುದಿಲ್ಲ. ಇನ್ನು ಪ್ರೀತಿಯಲ್ಲಿ ಅನುಭವ ಪಡೆದವರನ್ನೂ ಮತ್ತೆ ಪ್ರೀತಿ ನುಂಗೇ ನುಂಗುತ್ತದೆ. ಏಕೆಂದರೆ ಮಾಸಿದ ಹಳೇ ಅಂಗಿಗೆ ಹೊಸ ಬಣ್ಣ ಬಳಿದು ಹಳೆಯ ಕೆರೆತಗಳನ್ನು ಮುಚ್ಚಿ ಹಾಕಿಕೊಳ್ಳುವ ತವಕ. ಏನಾದರಾಗಲಿ, ಯಾರಾದರಾಗಲಿ ಪ್ರೀತಿಗೆ ಬಲಿ ಶತ ಸಿದ್ಧ.

ಪೋಷಕರ ಅಡೆತಡೆಗಳ ನಡುವೆಯೂ, ’ನಾವಿಬ್ಬರು ಸ್ನೇಹಿತರಷ್ಟೆ’ ಎಂದು ಹೇಳಿಕೊಂಡು ಎಗ್ಗಿಲ್ಲದೆ ಸಾಗಿತ್ತು ಅವರಿಬ್ಬರ ಪ್ರೀತಿ. ಸ್ಕೂಲ್ ನಲ್ಲಿ ಅವರಿಬ್ಬರ ಗಪ್-ಚುಪ್ ಗಳೇನು, ಕ್ಲಾಸಿನಲ್ಲಿ ಒಬ್ಬರ ಕೈಯನ್ನು ಒಬ್ಬರು ಹಿಡಿದು ಕುಳಿತುಕೊಳ್ಳುವುದೇನು.. ಎಲ್ಲರ ಕಣ್ಣುಗಳನ್ನೂ ಕುಕ್ಕುತ್ತಿದ್ದ ಪ್ರಣಯ ಪಕ್ಷಿಗಳಾಗಿದ್ದರು. ಮೆಸೇಜಿಂಗ್ ನಲ್ಲಿ ಕಂಬೈನ್ಡ್ ಸ್ಟಡಿ ಮಾಡ್ತೇವೆ ಎಂದೇಳಿ ಮಧ್ಯರಾತ್ರಿಯವರೆಗೂ ಸಂದೇಶಗಳು ಇಬ್ಬರ ಮೊಬೈಲ್ ಗಳನ್ನೂ ಎಡತಾಕುತ್ತಿದ್ದವು. ಮಿಸ್ಡ್ ಕಾಲ್ ಗಳೂ ಎಗ್ಗಿಲ್ಲದೆ ಸಾಗಿದ್ದವು. ತಕ್ಷಣ ಪ್ರತಿಕ್ರಿಯೆ ನೀಡದಿದ್ದರೆ ಅದು ಮಾರಾ-ಮಾರಿಯಲ್ಲಿ ಕೊನೆಯಾಗುತ್ತಿತ್ತು. ಹೀಗೆ ಶಾಲಾ ಪ್ರವಾಸದಲ್ಲಿ ಇವರಿಬ್ಬರ ಸಲುಗೆಯನ್ನು ಗಮನಿಸಿದ ಅವರ ಹಿಂದಿ ಶಿಕ್ಷಕರಾದ ಶ್ರೀಧರ್ ಅವರಿಬ್ಬರನ್ನೂ ಕರೆದು ’ಈ ವಯಸ್ಸಿನಲ್ಲಿ ಪ್ರೀತಿ-ಪ್ರೇಮಗಳ ಬಲೆಯಲ್ಲಿ ಬಿದ್ದು ಜೀವನವನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ತಿಳಿಹೇಳಿ. ನಿವೇಧಿತಾಳಿಂದ ಆದಿತ್ಯನ ಕೈಗೆ ರಾಖಿ ಕಟ್ಟಿಸಿಬಿಟ್ಟರು. ಇನ್ನುಮುಂದೆ ನೀವಿಬ್ಬರು ಅಣ್ಣ-ತಂಗಿಯರೆಂದು ಹರಸಿ ಕಳುಹಿಸಿಕೊಟ್ಟರು. ಇದು ಅವರಿಬ್ಬರಿಗೂ ಜೀರ್ಣಿಸಿಕೊಳ್ಳಲಾಗದ ವಿಷಯವಾಯಿತು. ಅವರ ಪ್ರೀತಿ ಈ ಪರಿಸ್ಥಿತಿ ಎಂಬ ಸ್ಪೀಡ್ ಬ್ರೇಕರ್ ಗೆ ಸಿಕ್ಕಿ ಆಕ್ಸಿಡೆಂಟ್ ಆಗಿತ್ತು. ನಂತರದಲ್ಲಿ ತಕ್ಕ ಮಟ್ಟಿಗೆ ಓದಿ ಇಬ್ಬರೂ ಹತ್ತನೆ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಅವರ ಮನೆಗಳಲ್ಲಿ ಮಕ್ಕಳು ಸರಿ ದಾರಿಗೆ ಬಂದರು ಎಂದು ನಿಟ್ಟುಸಿರು ಬಿಡುವಂತಾಗಿತ್ತು.

ನಂತರ ಬೇರೆ ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರಿಂದ ಒಬ್ಬರಿಗೊಬ್ಬರು ಸಂಧಿಸುವುದು ಕಡಿಮೆಯಾಯಿತು. ಸಂಧಿಸಿದರೂ ಮಾತಿಲ್ಲ, ಕಥೆಯಿಲ್ಲ. ಸಂದೇಶಗಳಂತೂ ತಮ್ಮ ಗುರಿ ಮರೆತಿದ್ದವು. ಹೀಗಿದ್ದಾಗ ಆದಿತ್ಯನ ಮೊಬೈಲ್ ತೆಗೆದುಕೊಂಡ ಅವನ ಸ್ನೇಹಿತ ನಿವೇಧಿತಾಳಿಗೆ ಹುಡುಗಾಟಿಕೆಗೆಂದು ಕಳುಹಿಸಿದ ’ಐ ಲವ್ ಯೂ ನಿವೀ..’ ಎಂಬ ಸಂದೇಶ ಅವರಿಬ್ಬರನ್ನೂ ಮತ್ತೆ ಮಾತನಾಡುವಂತೆ ಮಾಡಿತ್ತು. ಗೆಳೆಯ ಮಾಡಿದ ಅಚಾತುರ್ಯವನ್ನು ವಿವರಿಸಲು ಅವನು ನೆನಪುಗಳ ಮೆಲುಕು ಹಾಕುತ್ತಾ ಅವಳು ಮತ್ತೆ ಪ್ರೀತಿಯ ತೆಕ್ಕೆಯಲ್ಲಿ ಬಿದ್ದರು. ಇಬ್ಬರೂ ತಮ್ಮ ಪೊಸೆಸ್ಸಿವ್ ನೆಸ್ ನಿಂದಾಗಿ ಆಗಾಗ ಜಗಳ ಮಾಡಿಕೊಳ್ಳಲು ಶುರು ಮಾಡಿದ್ದರು. ಸ್ನೇಹದ ಪರಿಧಿಯ ಅರಿವಿರದ ನಿವೇಧಿತ ಬೇರೆ ಹುಡುಗರೊಂದಿಗೆ ಕೈ ಕೈ ಹಿಡಿದು ಸುತ್ತುತ್ತಿದ್ದಳು. ಆದಿತ್ಯ ಇದನ್ನು ಅವಳಿಗೆ ಎಷ್ಟು ತಿಳಿ ಹೇಳಿದರೂ ಅವಳು ಅವನ ಮಾತನ್ನು ಕೇಳುತ್ತಿರಲಿಲ್ಲ. ಈ ವಿಷಯ ಅವರಿಬ್ಬರ ನಡುವೆ ಜಗಳಗಳು ತಾರಕಕ್ಕೇರುವಂತೆ ಮಾಡುತ್ತಿತ್ತು. ಅವನ ಪರೀಕ್ಷಾ ಸಮಯಗಳಲ್ಲಿಯೇ ಈ ವಿಷಯಗಳು ಅವನನ್ನು ತೀರಾ ಬಾಧಿಸುತ್ತಿದ್ದವು. ಅವನು ಅತ್ತುಕೊಂಡು ಪರೀಕ್ಷೆಗಳನ್ನು ಬರೆದದ್ದೂ ಇದೆ. ಹೀಗಿದ್ದರೂ ಬೇರೆಯ ಹುಡುಗರೊಂದಿಗಿನ ಅವಳ ಓಡಾಟಗಳು ಕಡಿಮೆಯಾಗಲೇ ಇಲ್ಲ. ಇವುಗಳೆಲ್ಲವುಗಳಿಂದ ರೋಸಿ ಹೋದ ಆದಿತ್ಯನಿಗೆ ಪ್ರೀತಿ ಬಂಧನದಂತೆ ಭಾಸವಾಗುತ್ತಿತ್ತು. ಆಕೆ ತನ್ನನ್ನು ಕೇವಲ ಬಳಸಿಕೊಂಡಳು, ತಾನು ಅವಳ ಆಟಿಕೆಯ ವಸ್ತುವಾದೆ ಎನಿಸಿಬಿಟ್ಟಿತ್ತು.

ಇವೆಲ್ಲಾ ನೋವುಗಳು ಯಾವಾಗ ಅವನ ಮನಸ್ಸನ್ನು ಘಾಸಿಗೊಳಿಸಿತು ಅವನು ಅವನ ಸ್ಥಿಮಿತವನ್ನು ಕಳೆದುಕೊಂಡು ಬಿಟ್ಟ. ಮಾನಸಿಕವಾಗಿ ಕೃಶವಾಗಿ ಅವನ ದ್ವೀತಿಯ ಪಿಯೂಸಿಯ ಪರೀಕ್ಷೆಗಳನ್ನೂ ಎದುರಿಸಲಾಗಲಿಲ್ಲ. ಅಷ್ಟು ಪ್ರತಿಭಾವಂತ ತನ್ನ ಜೀವನನ್ನು ಹಾಳು ಮಾಡಿಕೊಳ್ಳುತ್ತಿದ್ದಾನಲ್ಲಾ ಎಂದು ಪೋಷಕರು ತಲೆ ಮೇಲೆ ಕೈ ಹೊತ್ತು ಕುಳಿತರು. ಇವನು ಹೊರಗಿನ ಪ್ರಪಂಚದ ಎಲ್ಲಾ ಕೊಂಡಿಗಳನ್ನು ಕಳೆದುಕೊಂಡು ತನ್ನ ಕೊಠಡಿ ಸೇರಿ ಬಿಟ್ಟನು. ಪ್ರೀತಿ ಮತ್ತು ಹುಡುಗಿಯರ ವಿರುದ್ಧ ತಿರಸ್ಕಾರ ಹುಟ್ಟಲು ಶುರುವಾಯಿತು. ಆ ಕೋಪಗ್ನಿ ಅವನನ್ನು ಎಲ್ಲಿಯವರೆಗೂ ತಂದು ನಿಲ್ಲಿಸಿತೆಂದರೆ ಅವನು ನಿವೇಧಿತಾಳ ಮೇಲೆ ಆಸೀಡ್ ಹಾಕಿಬಿಡುವ ತೀರ್ಮಾನಕ್ಕೆ ಬಂದುಬಿಟ್ಟ. ಅವನ ಮನಸ್ಥಿತಿಯನ್ನು ತಕ್ಷಣವೇ ಗ್ರಹಿಸಿದ ಅವನ ಪೋಷಕರು ಅವನಿಗೆ ಮಾನಸಿಕ ವೈದ್ಯರಲ್ಲಿ ಒಂದು ಕೌನ್ಸಿಲಿಂಗ್ ಕೊಡಿಸಿದ ನಂತರ ಅವನು ಖಿನ್ನತೆಯಿಂದ ಹೊರ ಬಂದನು. ಆದರೆ ಹುಡುಗಾಟದ ವಯಸ್ಸಿನಲ್ಲಿಯೇ ಮಾನಸಿಕವಾಗಿ ಸಂತನಾಗಿಬಿಟ್ಟ. ಪ್ರೀತಿ ಅವನ ಹುಡುಗಾಟಿಕೆಯನ್ನು ಕಸಿದಿತ್ತು. ಈಗ ಅವನು ಬಿ.ಬಿ.ಎಮ್ ಓದುತ್ತಿದ್ದಾನೆ, ಆಕೆ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ಈಗಲೂ ಆಕೆ ಅವನ ಮುಂದೆ ಸಿಗುತ್ತಾಳೆ. ಆಕೆ ಬೇರೆ ಹುಡುಗನ ತೋಳ ತೆಕ್ಕೆಯಲ್ಲಿರುವುದನ್ನು ನೋಡಿ ತನ್ನೊಳಗೆ ನಕ್ಕು ’ಈ ಹುಡುಗಿಗೆ ಹಾಳಾಗುವ ಮುನ್ನ ಒಳ್ಳೆಯ ಬುದ್ಧಿ ಬಂದು ಕೆಲವು ಹುಡುಗರ ಜೀವನಗಳಾದರು ಉಳಿಯುವಂತಾಗಲಿ’ ಎಂದುಕೊಳ್ಳುತ್ತಾ ಮುನ್ನಡೆಯುತ್ತಾನೆ.

ಹುಡುಗರೇ ಆಗಲಿ, ಹುಡುಗಿಯರೇ ಆಗಲಿ. ಪ್ರೀತಿ ಮತ್ತು ಸ್ನೇಹಗಳ ಸರಿಯಾದ ವ್ಯತ್ಯಾಸಗಳನ್ನು ಅರಿತಿರಬೇಕು. ಯಾವುದೇ ಸಲಿಗೆಗಳೂ ಅತಿಯಾಗಬಾರದು ವಯಕ್ತಿಕ ಭಾವ ಸಂವೇಧನೆಗೆ ಒಂದಷ್ಟು ಅಂತರ ಅಗತ್ಯವೆನಿಸುತ್ತದೆ. ಜೀವನವನ್ನು ಭಾವುಕವಾಗಿ ನೋಡುವ ಬದಲು ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಬೇಕಾಗುತ್ತದೆ. ಹರೆಯದ ಹುಚ್ಚಾಟಗಳಿಗೆ ಬುದ್ಧಿಯನ್ನು ಕೊಟ್ಟರೆ ಅದು ಎಲ್ಲಿ ನಿಲ್ಲಿಸುತ್ತದೆ ಎಂಬುದೇ ತಿಳಿಯುವುದಿಲ್ಲ. ಆದಿತ್ಯನ ಪೋಷಕರು ಅವನ ಮನಸ್ಥಿತಿಯನ್ನು ಗಮನಿಸದೇ ಇರುತ್ತಿದ್ದರೆ ಅವನು ಈಗ ಒಬ್ಬ ಹಂತಕನಾಗಿಯೋ, ಇಲ್ಲ ಸಮಾಜ ಘಾತುಕನಾಗಿಯೋ ಇರುತ್ತಿದ್ದ. ಆ ಹುಡುಗಿ ಪ್ರೀತಿ ಮಾಡಿದ ಮೇಲೆ ಅದನ್ನು ಟೈಂ ಪಾಸ್ ಗೆ ಎಂದುಕೊಳ್ಳದೆ ಜೀವನ ಪರ್ಯಂತಕ್ಕೆ ಎಂದುಕೊಳ್ಳಬೇಕಾಗುತ್ತದೆ. ಪ್ರೀತಿಯಲ್ಲಿ ನಂಬಿಕೆ ಎಷ್ಟು ಮುಖ್ಯವೋ ಬದ್ಧತೆಯೂ ಅಷ್ಟೇ ಮುಖ್ಯ.

- ಪ್ರಸಾದ್.ಡಿ.ವಿ.

7 comments:

 1. ತು೦ಬಾ ಚೆನ್ನಾಗಿ ಬರೆದಿದ್ದೀರಿ...
  ಬೆಳಕಿಗೆ ಆಕರ್ಷಣೆಯಾಗುವ ಪತ೦ಗದ೦ತೆ ಈ ಪ್ರೀತಿ..
  ಸುದುವುದೆ೦ದು ತಿಳಿಯುವುದೇ ಇಲ್ಲ ಅದಕ್ಕೆ ..,.. ಹಾಗೆ
  ಸ್ನೇಹ ಪ್ರೀತಿಯ ವ್ಯತ್ಯಾಸ ತಿಳಿದಿರ ಬೇಕು...
  ಯಾವುದೋ ಹಟಕ್ಕಾಗಿ ಸ್ನೇಹವನ್ನು ಪ್ರೀತಿಗೆ ತಿರುಗಿಸಿ ನಡೆದದ್ದು ತಪ್ಪು...
  ಆ ಎಳೆ ವಯಸ್ಸೇ ಹಾಗೆ... ಏನು ಯೋಚಿಸದೆ ಏನು ತೋಚುಉದೋ ಹಾಗೆ ನಡೆದು ಕೊಳ್ಳುತ್ತಾರೆ...
  ಅದಕ್ಕೆ ತ೦ದೆ ತಾಯಿಯರೇ ಆಗ ಗೆಳೆಯರಂತೆ ಜೊತೆಗಿರಬೇಕು ....
  ಆಗ ಇ೦ತ ಅವಗಡ ಗಳು ಸ೦ಭವಿಸುವುದಿಲ್ಲಾ....
  ತ೦ದೆ ತಾಯಿಯರ ಒತ್ತಡದ ಕೆಲಸದ ನಡುವೆ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎ೦ಬುದನ್ನೆ ಗಮನಿಸದಿದ್ದರೆ ಕೆಟ್ಟ ಪರಿಣಾಮ ಎದುರಿಸ ಬೇಕಾಗುತ್ತದೆ ಎ೦ಬುದು ಸುಳ್ಳಲ್ಲ...

  ಸ್ವಲ್ಪ ಯೋಚಿಸಿದರೆ ಆ ಹುಡುಗಿಯ ಕತೆ ಮು೦ದೆ ಏನಾಗುವುದೋ ಎ೦ಬ ಭಯ ಕಾಡುವುದು... ಯಾರೇ ಆಗಲಿ,
  ಜೀವನ ಎನ್ನುವುದು ಮೋಜು ಮಾಡಲು ಇರುವುದು ,
  ನಾಲ್ಕು ದಿನದ ಬದುಕಿನಲಿ ಹಾಗೆ ಇರೋಣ ಎ೦ಬುದು ಅವರ ಹುಚ್ಚಾಟವೇ ಸರಿ... ನಾವು ಯಾಕೆ ಬ೦ದಿದ್ದೆವೆ ನಮ್ಮ ಗುರಿ ಏನು ಎ೦ಬುದರ ಬಗ್ಗೆ ಯೋಚಿಸಬೇಕು... ಹಾಗೆ ಹೆತ್ತವರು ಸರಿಯಾದ ವಯಸ್ಸಿನಲ್ಲಿ ಅದರ ಬಗ್ಗೆ ಮಾರ್ಗದರ್ಶನ ನೀಡಬೇಕು

  ReplyDelete
 2. ಹೌದು ಹರೆಯವೇ ಹೀಗೆ ಬಿರುಗಾಳಿಯಂತೆ ಬಂದು ಸುಳಿಗಾಳಿಯಂತೆ ಸುತ್ತಲೇ ಸುತ್ತುತ್ತಿರುತ್ತದೆ. ಬಣ್ಣ ಬಣ್ಣದ ಚಿತ್ತಾರಗಳು ಕನಸು ಕಣ್ಣ ತುಂಬೆಲ್ಲಾ. ಪ್ರೀತಿ ಪ್ರೇಮ ಸ್ನೇಹ ಇವುಗಳಿಗಿರುವ ವ್ಯತ್ಯಾಸಗಳು ಸ್ಪಷ್ಟವಾಗುವುದರೊಳಗೆ ಆಕರ್ಷಣೆಯ ಪ್ರಪಾತಕ್ಕೆ ಬಿದ್ದು ಅದನ್ನೇ ಪ್ರೇಮವೆಂದು ನಂಬಿ, ಆಕರ್ಷಣೆ ತಗ್ಗಿದ ಮೇಲೆ ಕಾಮ ಪ್ರೇಮಗಳ ನಡುವಿನ ನಿಜವಾದ ವ್ಯತ್ಯಾಸ ತಿಳಿಯುವುದರೊಳಗೆ ಕಾಲ ಮಿಂಚಿಹೋಗಿರುತ್ತದೆ. ವಯಸ್ಸಿಗೆ ಬಂದ ಮಕ್ಕಳನ್ನು ಪೋಷಕರು ಸಹ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಮಕ್ಕಳು ನಡೆಯುವ ದಾರಿಯ ದಿಕ್ಕನ್ನು ಅವಲೋಕಿಸುತ್ತಿರಬೇಕು. ಆಗ ನಡೆಯಬಹುದಾದ ಕೆಲವು ಅಚಾತುರ್ಯಗಳನ್ನು ತಡೆಯಬಹುದು. ಪ್ರಸಾದ್ ನಿಮ್ಮ ಯುವ ಮನಸ್ಸಿನ ಹತ್ತು ಹಲವು ಮುಖಗಳಲ್ಲಿ ಈ ವಿಷಯಗಳನ್ನು ಚಿಂತನೆಗೆ ಗ್ರಾಸವಾಗುವಂತೆ ಸರಳವಾಗಿ ನಿರೂಪಿಸಿ ಆಕರ್ಷಣೆಯ ಹೊರಗಿನ ಸತ್ಯದರ್ಶನವನ್ನು ಮಾಡಿಸಿದ್ದೀರಿ. ವಂದನೆಗಳು.

  ReplyDelete
 3. "ಸ್ವಯಂಕೃತ ಅಪರಾಧ"
  "ಯಾರಾದರಾಗಲಿ ಪ್ರೀತಿಗೆ ಬಲಿ ಶತ ಸಿದ್ಧ."
  " ಪ್ರೀತಿಯಲ್ಲಿ ನಂಬಿಕೆ ಎಷ್ಟು ಮುಖ್ಯವೋ ಬದ್ಧತೆಯೂ ಅಷ್ಟೇ ಮುಖ್ಯ."

  ಈ ಥರದ ಸಾಲುಗಳು ನಿಮ್ಮ ಲೇಖನದಲ್ಲಿ ಬಹು ಪ್ರಿಯವಾಗುತ್ತದೆ...ಲೇಖನಕ್ಕೊಂದು ತೂಕ ನೀಡುತ್ತದೆ...
  ಹರೆಯದ ಪ್ರೀತಿಯ ಕುರಿತು ಒಳ್ಳೆಯ ಬರಹ....
  ಚೆನ್ನಾಗಿದೆ..

  -ಸುಷ್ಮಾ ಮೂಡುಬಿದರೆ

  ReplyDelete
 4. ಪ್ರೀತಿ ಮಾಯೆ ಹುಷಾರು ಅಂತ ದೊಡ್ಡವರು ಹೇಳಿದ್ದರೂ ರುಚಿ ನೋಡುವ ಹಂಬಲ ಹರೆಯದಲ್ಲಿ...

  ReplyDelete
 5. ಬರವಣಿಗೆ ಹಿಡಿಸಿತು, ನಡುವಲ್ಲಿ ಬಂದ "’ಈ ಹುಡುಗಿಗೆ ಹಾಳಾಗುವ ಮುನ್ನ ಒಳ್ಳೆಯ ಬುದ್ಧಿ ಬಂದು ಕೆಲವು ಹುಡುಗರ ಜೀವನಗಳಾದರು ಉಳಿಯುವಂತಾಗಲಿ" ಕುಶಿ ಕೊಟ್ಟಿತು.

  ReplyDelete
 6. ಮನ ಮುಟ್ಟುವ ಲೇಖನ ಪ್ರಸಾದ್..!
  ತುಂಬಾ ಸೊಗಸಾಗಿ ಬರೆದಿದ್ದೀಯಾ..
  ಪ್ರೀತಿಯಾ ಆಕರ್ಷಣೆಗೆ ಒಳಗಾಗಿ ಬಲಿಯಾಗೋ ಮುಗ್ಧ ಮನಸುಗಳ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದೆ ಪ್ರತಿನಿತ್ಯವೂ ಕಾಣಸಿಗುತ್ವೆ..!!

  ಇದನ್ನು ನೋಡಿಯಾದರೂ ಅಂತಹ ಮನಸುಗಳು ಅರಿತುಕೊಂಡಲ್ಲಿ
  ನಿನ್ನಾ ಪ್ರಯತ್ನಕ್ಕೂ ಒಂದು ಸಾರ್ಥಕತೆ ಸಿಗುತ್ತೆ..!!

  Al De Bst ಗೆಳೆಯಾ..!!

  ReplyDelete
 7. ಇದು ನಾನು ಹತ್ತಿರದಿಂದ ಒಂದು ಕಥೆಯಿಂದ ಪ್ರೇರಿತವಾದದ್ದು.. ಈ ಪ್ರೀತಿ ಹದಿ ಹರೆಯದವರನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಕುಣಿಸುತ್ತಾ ಅವರ ಜೀವನಗಳನ್ನು ಹಾಳು ಮಾಡುವುದನ್ನು ನೋಡಿದ್ದೇನೆ ಆದ್ದರಿಂದ ಈ ಕಥೆಯನ್ನು ನಿರೂಪಿಸಿದೆ.. ಈ ಕಥೆಗಳಿಂದ ಒಂದಾದರೂ ಯುವ ಮನಸ್ಸು ಎಚ್ಚರಗೊಂಡರೆ ನನಗಷ್ಟೇ ಸಾಕು.. ನಿಮ್ಮೆಲ್ಲಾ ಪ್ರತಿಕ್ರಿಯೆಗೆ ನನ್ನ ಪ್ರೀತಿಪೂರ್ವಕ ಧನ್ಯವಾದಗಳು ಸಹೃದಯರೆ..

  ReplyDelete