ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday, 13 January 2012

ಆ ವಿಧಿಯಾಟವ ಬಲ್ಲವರಾರು


ನಾನು ಇಂತಹದ್ದೊಂದು ಲೇಖನ ಬರೆಯುತ್ತೇನೆಂದು ನನ್ನ ಕನಸ್ಸು ಮನಸ್ಸಿನಲ್ಲಿಯು ಎಣಿಸಿರಲಿಲ್ಲ. ನನ್ನ ನಂಬಿಕೆಗಳ ವಾಸ್ತವದ ನೆಲೆಗಟ್ಟನ್ನೆ ಆ ಸಂದರ್ಭ ಅಲ್ಲಾಡಿಸುತ್ತದೆಂದು ನಾನು ಎಂದೂ ಭಾವಿಸಿರಲಿಲ್ಲ. ನೆನ್ನೆ ನನ್ನ ಕಣ್ಣೆದುರೆ ಗತಿಸಿದ ಘಟನೆ ನನ್ನನ್ನು ಈ ಲೇಖನ ಬರೆಯುವವರೆಗೂ ಸರಿಯಾಗಿ ನಿದ್ರಿಸಲು ಬಿಡುತ್ತಿಲ್ಲ.

ನನ್ನ ತಾತನಿಗೆ ಆರೋಗ್ಯ ಕೈಕೊಟ್ಟು ಎರಡು ವರ್ಷವೇ ಸರಿದಿರಬಹುದು. ವಯಸ್ಸಾದ ದೇಹ ರೋಗಗಳ ಕಣಜವೆಂಬಂತೆ. ನನ್ನವ್ವ(ಅಜ್ಜಿ)ನಿಗೆ ಅವಳ ಗಂಡನೇ ದೈವ. ಆ ದೇವತೆಯ ಇಚ್ಛಾಶಕ್ತಿಯೆ ಆಕೆಯ ಗಂಡನ ಪ್ರಾಣವನ್ನು ಹಿಡಿದಿಟ್ಟಿದೆ ಎನಿಸುತ್ತದೆ. ನನ್ನ ಅಮ್ಮ, ಚಿಕ್ಕಮ್ಮಂದಿರು ಮತ್ತು ಮಾವನಿಗೆ ನನ್ನಜ್ಜನನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂಬ ಆಸೆ. ಆದ್ದರಿಂದ ಅಜ್ಜನನ್ನು ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ದಿನವೂ ಅವರನ್ನು ಕಾಯುತ್ತಿದ್ದಾರೆ. ನಾನು ಭಾವನೆಗಳನ್ನು ಅಪ್ಪಿ ಜೋತಾಡುವ ಮನೋಭಾವದವನಲ್ಲವೇ ಅಲ್ಲ. ವಾಸ್ತವಿಕ ಮತ್ತು ವೈಚಾರಿಕ ನೆಲೆಗಟ್ಟುಗಳೆ ನನ್ನ ಯೋಚನಾಧಾಟಿಯ ಅಡಿಪಾಯಗಳು, ಬಂಧನಗಳು ಮತ್ತು ಸಂಬಂಧಗಳೆಂದರೆ ತುಸು ತಟಸ್ಥನೆ. ಕೆಲವೊಮ್ಮೆ ತುಂಬಾ ಭಾವುಕನಾಗುವುದುಂಟು ಆದರೆ ಅದು ತೀರಾ ವಿರಳ. ನನ್ನ ಯೋಚನಾಧಾಟಿಯೋ ಇಲ್ಲವೆ ತಟಸ್ಥ ಭಾವದ ಉದ್ದಟತನವೋ, "ಅಜ್ಜನಿಗೆ ವಯಸ್ಸಾಯ್ತು, ಮಗನ ಮದುವೆಯನ್ನೂ ನೋಡಿದ್ದಾಯ್ತು ಮೊಮ್ಮಗನನ್ನು ಮುದ್ದಿಸಿದ್ದೂ ಆಯ್ತು, ಅವರು ಹೊರಡುವ ಕಾಲ ಸನ್ನಿಹಿತವಾಯಿತೆಂದರೆ ಹೋಗಲಿ ಬಿಡಿ. ಯಾಕಷ್ಟು ಭಾವುಕರಾಗುತ್ತೀರಿ?" ಎಂದುಬಿಟ್ಟೆ. ಎಲ್ಲರೂ ನನ್ನನ್ನು ಯಾವುದೇ ಭಾವನೆಗಳಿಲ್ಲದ ಬಂಡೆಯೆಂಬಂತೆ ನೋಡಿ, "ಬಾಯಿಗೆ ಬಂದಂತೆ ಹರಟಬೇಡ, ಕಾಲು ಮುರಿಯುತ್ತೇನೆ" ಎಂದು ಅಮ್ಮ ಗದರಿದರು. ನಾನು ನನ್ನಲ್ಲೆ ಇವರಿಗೆ ಬುದ್ಧಿಯಿಲ್ಲ, ಯಾರು ಪುಂಗಿ ಊದಿದರು ಸರಿಯಾಗದವರು ಇವರು ಎಂದು ಸುಮ್ಮನೆ ಹೊರಬಂದೆ. ಅವರ ಭಾವೋತ್ಕಟತೆಯ ಆಳವನ್ನು ವಿಮರ್ಶಿಸುವ ಗೋಜಿಗೂ ಹೊಗಲಿಲ್ಲ ನಾನು.

ಹೀಗೇ ನೆನ್ನೆ ಅಪ್ಪ ಮತ್ತು ಅವ್ವನಿಗೆ ಊಟ ತೆಗೆದುಕೊಂಡು ಹೋಗು ಎಂದು ಹೇಳಿ ಅಮ್ಮ ನನ್ನನ್ನು ಆಸ್ಪತ್ರೆಗೆ ಕಳುಹಿಸಿದರು. ನನಗೂ ಅಜ್ಜನನ್ನು ನೋಡಿ ಎರಡು ದಿನಗಳಾಗಿದ್ದರಿಂದ ಅವರ ಆರೋಗ್ಯದ ಬಗ್ಗೆ ತಿಳಿಯಬಹುದೆಂದು ನಾನೇ ಹೋದೆ.

ನನ್ನಜ್ಜ ಇರುವ ವಾರ್ಡಿನಲ್ಲಿಯೆ ಇನ್ನೊಬ್ಬ ವಯಸ್ಸಾದ ವ್ಯಕ್ತಿ ದಾಖಲಾಗಿದ್ದರು. ವಯಸ್ಸು ೭೫ ದಾಟಿರಬಹುದು. ಆತನಿಗೂ ವಯಸ್ಸಾದ ಕಾರಣ ದೇಹದ ಅಂಗಗಳ ಸಾಮರ್ಥ್ಯ ಕ್ಷೀಣಿಸಿ ಒದ್ದಾಡುತ್ತಿದ್ದರು. ಆದರೆ ನನ್ನ ಅಜ್ಜನಿಗಿಂತ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ಅವರಾಗಿಯೆ ತಿಂಡಿ ತಿನ್ನುತ್ತಿದ್ದರು. ಆರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರು. ಈ ವಯಸ್ಸಾದವರಿಗೆ ಮಾತು ಜಾಸ್ತಿ. ಅನುಭವ ಪಡೆದಿದ್ದೇವೆಂದು ಎಲ್ಲರಿಗೂ ಧಾರಾಳವಾಗಿ ಧಾರೆ ಎರೆಯುತ್ತಾರೆ. ಆ ವಿಷಯದಲ್ಲಿ ಆ ತಾತನನ್ನು ಅವರ ಮಗ ಬಯ್ಯುವುದೂ ಇತ್ತು. ಅಂದು ಅವರ ಹೆಂಡತಿಯ ಸಹಾಯ ಪಡೆದು ಮೇಲೆದ್ದ ಆ ತಾತ ನೈಸರ್ಗಿಕ ಕರ್ಮಗಳನ್ನು ಮುಗಿಸಲು ಹೋದರು. ಎಲ್ಲವನ್ನೂ ಮುಗಿಸಿ ಹೊರಬಂದವರು ಕೈತೊಳೆದುಕೊಳ್ಳಲು ವಾಶ್ ಬೇಸಿನ್ ಹತ್ತಿರ ನಿಂತಿರಬಹುದೆಂದು ಕಾಣುತ್ತದೆ. ತಕ್ಷಣವೇ ಕುಸಿದು ಬಿದ್ದರು. ನಾವು ನಮ್ಮ ತಾತನ ಬಳಿಯಿದ್ದುದ್ದರಿಂದ ಅದರ ಅರಿವೇ ನಮಗಿರಲಿಲ್ಲ. ಆ ಅಜ್ಜಿ ’ಯಾಕೋ ನಮ್ಮನೆಯವರು ಕುಸಿದು ಕುಳಿತಿದ್ದಾರೆ ಅವರನ್ನು ತಂದು ಮಲಗಿಸಲು ಸಹಕರಿಸಿ’ ಎಂದು ನನ್ನನ್ನು ಮತ್ತು ನಮ್ಮ ಮಾವನನ್ನು ಕರೆದರು. ನಾವು ಮತ್ತಿಬ್ಬರು ವಾರ್ಡ ಬಾಯ್ಸ್ ಸಹಾಯ ಪಡೆದು ಆ ಅಜ್ಜನನ್ನು ತಂದು ಅವರ ಹಾಸಿಗೆಯ ಮೇಲೆ ಮಲಗಿಸಿದೆವು. ಆ ಅಜ್ಜ ತುಂಬಾ ನಿತ್ರಾಣಗೊಂಡಂತೆ ಕಾಣುತ್ತಿದ್ದರು. ನಾವು ಸಾವಧಾನವಾಗಿ ಅವರಿಗೆ ಗಾಳಿ ಹಾಕಿ ಡಾಕ್ಟರ್ ಗೆ ವಿಷಯ ಮುಟ್ಟಿಸಿದೆವು. ಅಯಪ್ಪನ ಸ್ಥಿತಿ ನೋಡಿದ ನಮ್ಮ ಅಜ್ಜಿ ’ಹೋಗಿ ಅವರ ಬಾಯಿಗೆ ನಿಮ್ಮ ಕೈಯಿಂದಲೆ ನೀರು ಬಿಡಿ’ ಎಂದು ಅವರ ಹೆಂಡತಿಗೆ ಹೇಳಿದರು. ನಾನು ಗರಬಡಿದವನಂತೆ ನಿಂತಿದ್ದೆ. ಎರಡು ಗುಟುಕು ನೀರು ಗುಟುಕಿಸಿದ ಆ ಜೀವ ದೇಹವನ್ನು ತೊರೆದಿತ್ತು. ಇದೇ ಮೊದಲು ನಾನು ಒಬ್ಬರು ಸಾಯುವುದನ್ನು ಕಣ್ಣಾರೆ ಕಂಡಿದ್ದು. ಅವರ ಕುಟುಂಬದ ಆಕ್ರಂದನ ನನ್ನ ಮನಸ್ಸನ್ನು ಕಲಕಿತು. ಅವರು ಆ ತಾತನ ಶವವನ್ನು ಆಸ್ಪತ್ರೆಯಿಂದ ಸಾಗಿಸುತ್ತಿದ್ದಂತೆ ನಮ್ಮ ಮನಸ್ಸು ತಡೆಯದೆ ನಮ್ಮ ತಾತನನ್ನು ಮತ್ತೊಂದು ವಾರ್ಡಿಗೆ ವರ್ಗಾಹಿಸಿ ಬಿಟ್ಟೆವು.

ಆ ದೃಶ್ಯ ಕಂಡ ನನ್ನ ಮನಸ್ಸು ಜರ್ಜರಿತಗೊಂಡಿತ್ತು. ಆ ಸಾವು ನನ್ನ ವೈಚಾರಿಕ ಮತ್ತು ವಾಸ್ತವದ ನೆಲೆಗಟ್ಟುಗಳನ್ನು ಅಲುಗಾಡಿಸುತ್ತಿತ್ತು. ’ಅಹಂ ಬ್ರಹ್ಮಾಸ್ಮಿ’ ಹಾಗೇ ಹೀಗೆ ಎಂಬ ಎಷ್ಟೆಲ್ಲಾ ಗಟ್ಟಿ ತಟಸ್ಥ ಭಾವಗಳಿದ್ದ ನಾನೇ ಇಷ್ಟು ಸೂಕ್ಷ್ಮವಾಗಿಬಿಟ್ಟೆನೆ ಎಂದೆನಿಸುತ್ತಿತ್ತು. ಸಾವು ಯಾವಾಗ ಬಂದರೂ ಅದು ಸಾವೇ. ವಯಸ್ಸಾದವರು ಸತ್ತರೆಂದ ಮಾತ್ರಕ್ಕೆ ಅದರಿಂದಾಗುವ ನೋವು ಮತ್ತು ದುಃಖಗಳೇನೂ ಕಡಿಮೆಯಲ್ಲ. ಒಂದು ಸಾವು ಒಂದು ತಲೆಮಾರಿನ ಕೊಂಡಿಯನ್ನು ಕಡಿದಂತೆಯೇ ಸರಿ. ಆ ಜನರೇಷನ್ ಗ್ಯಾಪ್ ನಮ್ಮನ್ನು ಕಾಡುತ್ತಲೇ ಇರುತ್ತದೆ. ’ಈ ಮನುಷ್ಯನ ಜೀವನ ಸಾವು ನೋವುಗಳಿಂದ ಮುಕ್ತವಾಗಿಬಿಡಲಿ ದೇವರೆ’ ಎಂದು ಮೊರೆಯಿಟ್ಟರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಈ ಎಲ್ಲಾ ವಿಷಯಗಳನ್ನು ನನ್ನಮ್ಮನ ಬಳಿ ಹೇಳಿ ಅವಳ ಮಡಿಲಲ್ಲಿ ಮುದುಡಿ ಮಲಗಿದೆ. ಅಮ್ಮ ಎಂದಳು "ಯಾಕೋ ಅಪ್ಪೀ ಚಿಕ್ಕ ಮಗುವಾಗಿಬಿಟ್ಟೆ, ನಮಗೆಲ್ಲಾ ಧೈರ್ಯ ತುಂಬುತ್ತಿದ್ದವನು ನೀನು, ಕಮ್ ಆನ್ ಚಿಯರ್ ಅಪ್ ಮೈ ಡಿಯರ್" ಎಂದು ಸಾಂತ್ವಾನ ಹೇಳಿದ ಮೇಲೆಯೆ ನಾನು ವಾಸ್ತವಕ್ಕೆ ಬಂದದ್ದು.

ಯಾವುದೇ ಸಂಬಂಧವಿಲ್ಲದ, ವಯಸ್ಸಾಗಿ ಸತ್ತ ಯಾರೋ ಒಬ್ಬರ ಸಾವೇ ಇಷ್ಟು ನೋವನ್ನು ಕೊಡುವಾಗ ಅಪಘಾತದಲ್ಲಿಯೊ, ಆತ್ಮಹತ್ಯೆ ಮಾಡಿಕೊಂಡೊ ಇಲ್ಲವೆ ಕೊಲೆಯಾಗುವ ಸಾವುಗಳು ಎಷ್ಟು ನೋವನ್ನು ಕೊಡಬಹುದು?? ಪ್ರಿಯ ಸ್ನೇಹಿತರೆ ನಿಮಗೇನು ನೀವು ಹೋಗಿಬಿಡುತ್ತೀರಿ ಆದರೆ ನಿಮ್ಮ ಸಾವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕೊಡುವ ನೋವು ಸಹಿಸಲಸಾಧ್ಯವಾದುದು. ಆದ್ದರಿಂದ ದುಡುಕುವ ಮುನ್ನ, ವಾಹನ ಚಲಾಯಿಸುವಾಗ ಒಮ್ಮೆ ಯೋಚಿಸಿ. ಜೀವನ ಅಮೂಲ್ಯವಾದುದು, ಅದನ್ನು ಮಾತ್ರ ಮರೆಯಬೇಡಿ.

- ಪ್ರಸಾದ್.ಡಿ.ವಿ.

13 comments:

 1. ಸಾವಾನ್ನಾ ತೀರ ಹತ್ತಿರದಿಂದ ನೋಡಿರದಿದ್ದರೆ, ನಿಮ್ಮ ಮನಸ್ಸು ಸಹ , ಈ ರೀತಿಯಲ್ಲಿ ಆಲೋಚಿಸ್ತಾ ಇರ್ಲಿಲ್ವೇನೋ ಅಲ್ವಾ ? ಪ್ರಸಾದ್. ಅದೇ ಕಾರಣಕ್ಕೆ , ಜೀವನದ ಸನ್ತಸ ಸಮಾರಂಭಗಳಿಗೆ , ಮರಣಕ್ರಿಯೆಗಳಿಗೆ , ಇಲ್ಲವೇ ಸಾವಿನ ಕೊನೆಯ ಹಂತದಲ್ಲಿರೊರ್ನ ನೋಡುವ , ಮಾತನಾಡಿಸ್ಕೊಂಡು ಬರುವ ರೀತಿ , ರಿವಾಜುಗಳು ಚಾಲ್ತಿಯಲ್ಲಿರೊದು.. ಇವು ತಾನು, ತನ್ನದು, ಮತ್ತು ನಾನೇ ಎಲ್ಲಾ ! ! ಅನ್ನುವಾ ಭಾವಗಳಿಗೆ ಬೆಂಕಿ , ಹಚ್ಚಿ , ಮನುಶ್ಯನನ್ನ , ಮನುಶ್ಯನನ್ನಾಗಿಯೆ ಇರಿಸುವತ್ತವೆ..

  ReplyDelete
  Replies
  1. ನನ್ನ ಪ್ರಕಾರ ಸಾವು ಎಂಬುದು ಹುಟ್ಟಿನಷ್ಟೆ ಸಾಮಾನ್ಯ, ನಾವು ಹುಟ್ಟಿದಾಗ ಯಾಕೆಂದು ದೇವರಲ್ಲಿ ಕೇಳದ ನಾವು ಸಾವಿನ ಸಂದರ್ಭದಲ್ಲಿ ಅಳುತ್ತಾ ಕೂರುವುದು ಏಕೆ? ಸಾವು ಜೀವನ ಚಕ್ರದ ಸಾಮಾನ್ಯ ಪ್ರಕ್ರಿಯೆಯಲ್ಲವೆ? ಎಂಬುದು ನನ್ನ ಅಭಿಪ್ರಾಯಗಳಾಗಿದ್ದವು ಪ್ರತಾಪಣ್ಣ.. ಆದರೆ ಕಣ್ಣ ಮುಂದಿನ ಆ ವೃದ್ಧರ ಸಾವು ನನ್ನೆಲ್ಲ ನಂಬಿಕೆಗಳನ್ನು ಬುಡಮೇಲು ಮಾಡಿತು.. ಸಾವು ನೋವುಗಳು ತರುವ ದುಃಖ ಭರಿಸಲಸಾಧ್ಯವಾದುದು ಎಂಬ ಸತ್ಯದರಿವಾಯಿತು.. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ನಿಮಗೆ..:)

   Delete
 2. ಪ್ರಸಾದ್....! ತುಂಬಾ ಚೆನ್ನಾಗಿದೆ ಅರಿವಿಗದ್ದಿದ ಅನುಭವದ ಕಥನ. ಕೆಲವು ಕಡೆ ತುಂಬಾ ಭಾವಕ್ಕೆ ಒಳಗಾಗುವ ಸಂದರ್ಭಗಳು ಮನಸ್ಸಿನಲ್ಲಿ ಕುಳಿತುಕೊಳ್ಳುತ್ತವೆ.ಒಂದು ನೆನಪಿನ ಪುಟ ಅಜ್ಜನಿಗೆ ನಮಸ್ಕರಿಸಿತು. ತುಂಬಾ ಭಾವುಕ ಲೇಖನ.

  ReplyDelete
  Replies
  1. ಧನ್ಯವಾದಗಳು ರವಿಯಣ್ಣ ಈ ಸಾವೆಂಬುದೇ ಹೀಗೆಂದು ಕಾಣುತ್ತದೆ.. ನಾನು ಈಗಲು ನಾನು ಯಾಕೆ ನನಗೆ ಸಂಬಂಧವೇ ಇಲ್ಲದ ನನ್ನಜ್ಜನ ವಾರ್ಡ್ ನಲ್ಲಿ ಜೊತೆಗಿದ್ದ ಯಾರೋ ಒಬ್ಬ ವೃದ್ಧರು ಸತ್ತಿದ್ದು ನನ್ನನ್ನು ಅಷ್ಟು ಕಾಡಿತೋ ಗೊತ್ತಿಲ್ಲ..:( ನನಗೇನೆನ್ನಿಸಿತು ಅದನ್ನು ಹಾಗೇ ಬರದೆ.. ನಿಮ್ಮ ಮೆಚ್ಚುಗೆ ಮತ್ತು ಆರೈಕೆಗೆ ನಾನು ಆಭಾರಿ..:)))

   Delete
 3. ಸಾವನ್ನಾ ತೀರ ಹತ್ತಿರದಿಂದ ನೋಡಿರದಿದ್ದರೆ, ನಿಮ್ಮ ಮನಸ್ಸು ಸಹ , ಈ ರೀತಿಯಲ್ಲಿ ಆಲೋಚಿಸ್ತಾ ಇರ್ಲಿಲ್ವೇನೋ ಅಲ್ವಾ ? ಪ್ರಸಾದ್. ಅದೇ ಕಾರಣಕ್ಕೆ , ಜೀವನದ ಸಂತಸ ಸಮಾರಂಭಗಳಿಗೆ , ಮರಣಕ್ರಿಯೆಗಳಿಗೆ , ಇಲ್ಲವೇ ಸಾವಿನ ಕೊನೆಯ ಹಂತದಲ್ಲಿರೊರ್ನ ನೋಡುವ , ಮಾತನಾಡಿಸಿಕೊಂಡು ಬರುವ ರೀತಿ , ರಿವಾಜುಗಳು ಚಾಲ್ತಿಯಲ್ಲಿರೊದು.. ಇವು ತಾನು, ತನ್ನದು, ಮತ್ತು ನಾನೇ ಎಲ್ಲಾ ! ! ಅನ್ನುವಾ ಭಾವಗಳಿಗೆ ಬೆಂಕಿ , ಹಚ್ಚಿ , ಮನುಷ್ಯನನ್ನ , ಮನುಷ್ಯನನ್ನಾಗಿಯೆ ಇರಿಸುವತ್ತವೆ..

  ReplyDelete
 4. ಆತನದು ಸಾಯುವ ವಯಸ್ಸಲ್ಲ ಎಂಬುದೊಂದು, ಅವರಿಗೆ ತುಂಬಾ ವಯಸ್ಸಾಗಿತ್ತು ಆದರು ತುಂಬಾ ಒಳ್ಳೆಯ ಮನುಷ್ಯ, ಇನ್ನು ಸ್ವಲ್ಪ ದಿನ ಇರಬೇಕಾಗಿತ್ತು ಎಂಬುದೊಂದು, ಸಾವು ಯಾವಾಗಲೇ ಬರಲಿ ನರಳದೆ ಸಾಯುವಂತಾಗಲಪ್ಪ ಎಂಬುದೊಂದು, ಈ ರೀತಿ ಸಾವಿನ ಬಗ್ಗೆ ವೇದಾಂತಿಗಳಂತೆ ಮಾತನಾಡುವವರನ್ನು ನೋಡಿದ್ದೇವೆ. ಆದರೆ ಸಾವು ಎದಿರು ಬಂದಾಗ ಅಷ್ಟೊಂದು ಸುಲಭಕ್ಕೆ ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗಿರೋಲ್ಲ. ಹುಟ್ಟಿದವನು ಸಾಯಲೇ ಬೇಕು ಎಂಬ ಅಂಶ ಗೊತ್ತಿದ್ದರು ಸಹ, ಅದರಲ್ಲೂ ಹತ್ತಿರದವರು ಸಾವಿಗೀಡಾದಾಗ ಅಷ್ಟೊಂದು ಸುಲಭವಾಗಿ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ನಿಮ್ಮ ಲೇಖನ, ಹತ್ತಿರ ಬರುವ ಸಾವು, ಆನಂತರದಲ್ಲಿ ಬಿಚ್ಚಿಕೊಳ್ಳುವ ಸೂಕ್ಷ್ಮತೆಗಳನ್ನು ಚನ್ನಾಗಿ ತೆರೆದಿಟ್ಟಿದ್ದೀರಿ.

  ReplyDelete
  Replies
  1. ನಿಮ್ಮ ಮಾತು ಅಕ್ಷರಶಃ ನಿಜ ಸತ್ಯ ಮಿತ್ರ.. ವೇದಾಂತಕ್ಕೇನು ಕಮ್ಮಿಯಿಲ್ಲದಂತೆ ವೇದಾಂತಗಳ ಬಗ್ಗೆ ಮಾತನಾಡಬಹುದು ಆದರೆ ಆ ಪರಿಸ್ಥಿತಿಗಳಿಗೆ ಎಲ್ಲ ಥಿಯರಿಗಳನ್ನೂ ಬುಡಮೇಲು ಮಾಡುವ ತಾಕತ್ತಿದೆ ಆ ಸತ್ಯದ ಅರಿವೇ ನನ್ನನ್ನು ಬಹುವಾಗಿ ಕಾಡಿಸಿದ್ದು.. ಆ ವೃದ್ಧರು ಸತ್ತಾಗಲೇ ಅಷ್ಟು ನೋವಾಗುತ್ತದೆಂದರೆ ಇನ್ನು ನಮ್ಮಜ್ಜನೇ ನನ್ನ ಕಣ್ಣೆದುರು ಹೀಗೆ.. ಬೇಡಪ್ಪ ದೇವರೆ.. ನೋಡಲಾಗದು.. ಅಳದವನು ಅತ್ತುಬಿಡುತ್ತೇನೆ..:( ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ನಿಮಗೆ..

   Delete
 5. saavu krooravaadudu... avaru namma jote inne0doo iruvudillavalla e0budu kaTu satya,.... naamma ba0dugaLoo illa, namma nerehoreyavaroo maraNa ho0didaroo ashTe bEsaravaaguttade... kaarana avara preetiyalli ba0diyaagirutteve haagaagi...

  ReplyDelete
  Replies
  1. ಹೌದು ಸಿಂಧು.. ನಿಮ್ಮ ಅಭಿಪ್ರಾಯಗಳು ಸರಿ, ಸಾವು ಎಂತಹವರನ್ನು ಹೈರಾಣಾಗಿಸಿ, ಮರುಗುವಂತೆ ಮಾಡಿಬಿಡುತ್ತದೆ.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..:)

   Delete
 6. ಸಾವು ಅನ್ನೋದೆ ಹಾಗೆ ಪ್ರಸಾದ್..!!
  ನಿನ್ನಾ ಈ ಲೇಖನವನ್ನು ಓದುವಾಗ
  ನನ್ನಾ ಮನಸ್ಸಿಗೆ ಬಂದದ್ದು ಒಂದೇ ಅದು ನನ್ನಮ್ಮನಾ ಸಾವು..!
  ಅವರ ಉಸಿರು ನಿಲ್ಲುವಾ ಕೊನೆ ಕ್ಷಣದಲ್ಲೂ ಅವರ ಬಾಯಲ್ಲಿ ಬಂದದ್ದು ಒಂದೇ ಮಾತು "ದೀಪು"..:(

  ಬಹುಷ ಅದೇ ಅವರ ಕೊನೆ ಮಾತು... ಜೊತೆಯಲ್ಲಿದ್ದು ನಾನು., ಅಜ್ಜಿ ಮಾತ್ರ..:(

  ಆ ವಿಧಿಯಾಟವ ಬಲ್ಲವರಾರು..!

  ReplyDelete
  Replies
  1. ಆ ಪರಿಸ್ಥಿತಿ ಯಾರಿಗೂ ಬರುವುದು ಬೇಡಾ ಗೆಳತಿ.. ಆತ್ಮೀಯರನ್ನು ಕಳೆದುಕೊಂಡಾಗಲೇ ಅಷ್ಟು ಗೋಳಾಡುತ್ತೇವೆ ಅಂತದ್ದರಲ್ಲಿ ನಮ್ಮನ್ನು ಈ ಜಗತ್ತಿಗೆ ತಂದ ಜೀವ ನಮ್ಮೆದುರೇ ಜಗತ್ತನ್ನು ತೊರೆಯುವುದನ್ನು ಅರಗಸಿಕೊಳ್ಳಲೂ ಸಾಧ್ಯವಿಲ್ಲ, ಇನ್ನು ತಡೆದುಕೊಳ್ಳುವುದೆಂತು.. ಆದರೂ ಜಗದ ನಿಯಮಕ್ಕೆ ತಲೆಬಾಗಿ, ಹೋಗುವವರನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಕಳುಹಿಸಿಕೊಡುವುದೇ ಧರ್ಮ.. ಇಂತಹ ಸಂದರ್ಭಗಳಲ್ಲಿ ನನಗೆ ನೆನಪಾಗುವುದು ಈ ಕೆಳಗಿನ ಸಾಲುಗಳು..
   ’ಹೋದೋರೆಲ್ಲ ಒಳ್ಳೆಯವರು
   ನಮ್ಮ ಹಿರಿಯರು...’

   Delete
 7. yeh kannaedurigae jeeva ogodu yavathu nodilla... adarae neevu yehlida ajjana kathae matra mana kalakithu.... adarallu nimma konae maathu esta aythu....

  ReplyDelete
  Replies
  1. ಧನ್ಯವಾದಗಳು ಪೂರ್ಣಿಮಾ. ನಮ್ಮನ್ನಗಲಿ ಹೋಗುವ ಎಲ್ಲರೂ ಚಿರಶಾಂತಿಯನ್ನೊಂದಲಿ ಎಂಬ ಪ್ರಾರ್ಥನೆ ನನ್ನದು.

   Delete