ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 22 November 2011

ಪಾಳೇಗಾರನ ದರ್ಪಒಂದೂರಿನಲ್ಲೊಬ್ಬ ಪಾಳೇಗಾರ,
ಪಾಳೇಗಾರಿಕೆ ಅವನಿಗೆ ಸಿಕ್ಕ
ಅನುವಂಶೀಯ ಸ್ವತ್ತು,
ಗೆದ್ದಲು ಕಟ್ಟುವ ಹುತ್ತದೊಳಗೆ
ನುಸುಳುವ ಹಾವು ಅವನು,
ಬಡವರ, ಕೂಲಿಗಳ, ರೈತರ,
ದುಡಿಯುವವರ ಅಸ್ಥಿಗಳೇ
ಅಡಿಪಾಯ ಅವನ ಮಹಲಿಗೆ..!!
ಹಸಿದ ಜನರ ಹಸಿವಿನ
ದಳ್ಳುರಿಯಲ್ಲಿ ಮೈ-ಚಳಿ
ಕಾಯಿಸಿಕೊಳ್ಳುವ ಅವನ
ಚೇಲಾಗಳೋ ರಕ್ತ ಪೀಪಾಸುಗಳು..!!
ಅವನ ಗದ್ದುಗೆಗೆ ಗೊಡ್ಡು
ಸಲಾಮು ಹೊಡೆದು ನಿಂತವರೇ
ಅವನ ಪ್ರಿಯ ಅಧಿಕಾರಿಗಳು,
ಅವನೊಟ್ಟಿಗೆ ಸಹಕರಿಸುವ
ಎಲ್ಲರಿಗೂ ಅವರವರ ಶಂಡತನಕ್ಕೆ
ತಕ್ಕಂತೆ ಇನಾಮು..!!
ಇಂದೂ ಅಧಿಕಾರಿಯೊಬ್ಬನ
ಸಹಕಾರಕ್ಕೆ ದೊಡ್ಡ ಗಾತ್ರದ
ಇನಾಮು ಕೊಟ್ಟು ಗಹಗಹಿಸಿ ನಕ್ಕಿದ್ದ,
ಜನರನ್ನು ಬಡಿದು
ಬಾಯಿಗೆ ಹಾಕಿಕೊಂಡ ದರ್ಪದಲಿ..!!

ಇತ್ತ ಇವನೊಬ್ಬ ಅಧಿಕಾರಿ,
ಹೆಂಡತಿ ಅಹಂಕಾರಿ,
ದುಂದು ಮಾಡಿ ರೇಷ್ಮೆವಸ್ತ್ರ,
ಆಭರಣಗಳನ್ನು ಖರೀದಿಸುವ ಸೋಗಲಾಡಿ..!!
ಮಕ್ಕಳೋ ಅರೆಬೆಂದ ಮಡಿಕೆಗಳು,
ಮಡಿವಂತಿಕೆಯ ಸೋಗಿನಲ್ಲಿ
ಗಳಿಸಿದ ಹಣವನ್ನು ತೋಯಿಸಿಬಿಟ್ಟರು
ಹುಣಸೆ ಹಣ್ಣಿನಂತೆ ಹೊಳೆಯಲ್ಲಿ,
ವಯಸ್ಸದರೂ ಚಪಲ ಬಿಡದ ಅಪ್ಪ,
ಎಲ್ಲರೂ ಹಣಕ್ಕಾಗಿ
ಬಾಯಿ ಬಿಡುವ ರಣಹದ್ದುಗಳು..!!
ಇವನೊಬ್ಬನೇ ಧಾತಾರ
ಇವರೆಲ್ಲರ ವಾಂಚೆಗಳಿಗೆ..!!
ಎಲ್ಲರ ಸೌಕರ್ಯಕ್ಕಾಗಿ ಸಹಕರಿಸಿಬಿಟ್ಟ,
ಪಾಳೇಗಾರನೊಟ್ಟಿಗೆ ಅನಿವಾರ್ಯದಲಿ..!!
ಹಣದ ವಾಸನೆ ಹಿಡಿದು
ಅಧಿಕಾರಿ ವೃಂದ ಮೇಲೆರುಗೆ,
ನಿಜ ಬಣ್ಣ ಬಯಲಾಗಿತ್ತು..!!
ಬಣ್ಣ ಬಯಲಾಯಿತೆಂದು
ಮನ ಚಡಪಡಿಸಿ ಮರುಗಿತ್ತು,
ಜೀವ ಇಹವನ್ನು ತ್ಯಜಿಸೆ ಬಯಸಿತ್ತು,
ಅದರಂತೆ ತ್ಯಜಿಸಿತ್ತು..!!

ಬಲಿ ತೆಗೆದುಕೊಂಡಿತ್ತು ಬಡಜನರ
ಹಸಿವು, ರೋಧನ, ಹತಾಶೆಗಳು
ಯಾರನ್ನು ಎಂಬುದೇ ಪ್ರಶ್ನೆ??
ಈಗ ಪಾಳೇಗಾರನಿಗೆ ಅಧಿಕಾರಿಯ
ತಿತಿಯೂಟದ ಕರೆಯೋಲೆ,
ಅವನ ರಕ್ತ ಮಾಂಸಗಳೇ
ಪಾಳೇಗಾರನ ನೈವೇಧ್ಯಕ್ಕಿಂದು,
ಹೊಸ ಅಧಿಕಾರಿಯನ್ನು ಕರೆಸಿಕೊಂಡ
ಪಾಳೇಗಾರ ಗಹಗಹಿಸಿ
ನಕ್ಕಿದ್ದ ಮತ್ತದೇ ದರ್ಪದಿಂದ..!!

- ಪ್ರಸಾದ್.ಡಿ.ವಿ.


7 comments:

 1. ಈ pic ನಲ್ಲಿರುವ ನಾಣ್ಯಗಳು ಮೊಹಮ್ಮದ್ ಬಿನ್ ತುಘಲಕ್ ಕಾಲದ್ದು. ದರ್ಪದ ಪ್ರತೀಕವಾದ ಅವನ ಆಡಲಿತದ ನಾಣ್ಯಗಳನ್ನು ತುಘಲಕ್ ನ ಪ್ರತೀಕವಾಗಿ ಇಲ್ಲಿ ಉಪಯೋಗಿಸಿಕೊಂಡಿದ್ದೇನೆ. ಇಲ್ಲಿ ನಾನು ಪಾಳೇಗಾರಿಕೆಯನ್ನು ಪ್ರಸ್ತುತ ಆಡಳಿತ ವ್ಯವಸ್ತೆ ಅಥವ ಶಾಸಕಾಂಗ ವ್ಯವಸ್ತೆಗೆ ಹೋಲಿಸಿದ್ದೇನೆ. ಪ್ರಸ್ತುತ ಜನ ನಾಯಕರೆಂದು ಮೆರೆಯುವವರಿಗೆ ಜನರ ಸುಖ-ದುಃಖಗಳಿಗೆ ಸ್ಪಂದಿಸುವ ಮನಸ್ಸಾಗಲಿ, ಇಚ್ಚಾಶಕ್ತಿಯಾಗಲಿ ಇರುವುದಿಲ್ಲ.. ಅಧಿಕಾರಿಗಳನ್ನೂ ಭ್ರಷ್ಟರನ್ನಾಗಿಸಿ ಅವರ ಬೇಳೆ ಬೇಯಿಸಿಕೊಳ್ಳುವ ನೀಚರು. ಅಂತಹ ಒಂದು ಪ್ರಸಂಗವನ್ನು ನಿಮ್ಮೆದುರಿಡುವ ಒಂದು ಪುಟ್ಟ ಪ್ರಯತ್ನ ಇದು.

  ReplyDelete
 2. ಚೆನ್ನಾಗಿ ಬರೆದಿದ್ದೀರ ಪ್ರಸಾದರೇ.. ನಿಮ್ಮೀ ಕಾವ್ಯ ಕೃಷಿಯನ್ನು ಮುಂದುವರೆಸಿ :-) ತುಘಲಕ್ ಕಾಲದ ನಾಣ್ಯಗಳನ್ನು ಪಠ್ಯಪುಸ್ತಕದಲ್ಲಷ್ಟೇ ನೋಡಿದ್ದೆ. ಇಲ್ಲೂ ನೋಡಿ ಸಂತೋಷ(ಬೇಸರ)ವಾಯಿತು.. ನನ್ನ ಲೇಖನಿಯ ಮನೆಗೂ ಬನ್ನಿ ಬಿಡುವಾದಾಗೊಮ್ಮೆ :-) :-)

  ReplyDelete
 3. ವ್ಯವಸ್ಥೆಗೆ ಸಡ್ಡು ಹೊಡೆದ ಮನಸ್ಸು ಇಂತಹ ಕವಿತೆ ಬರೆಯಲು ಸಾಧ್ಯವಿದೆ. ಇಲ್ಲಿ ಕಾಳಜಿ ,ವೇದನೆ ಉಂಟು.ಸುಂದರ ಕವಿತೆ ಪ್ರಮೋದ್.

  ReplyDelete
 4. ಧನ್ಯವಾದಗಳು Prashasti..:)) ಖಂಡಿತವಾಗಿ ಮುಂದುವರೆಸುತ್ತೇನೆ ನಿಮ್ಮ ಸಹಕಾರ ಪ್ರೋತ್ಸಾಹ ಹೀಗೆಯೇ ಇರಲಿ.. ನಿಮ್ಮ ಬ್ಲಾಗ್ ಗೆ ಭೇಟಿ ನೀಡುತ್ತೇನೆ ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು..:))

  ReplyDelete
 5. ಧನ್ಯವಾದಗಳು ರವಿಯಣ್ಣ..:)) ಈ ಕವಿತೆಯಲ್ಲಿನ ಕೆಲವು ಸನ್ನಿವೇಶಗಳು ನಾನು ಕಣ್ಣಾರೆ ನೋಡಿದ್ದವು, ಇನ್ನೂ ಕೆಲವು ಅನುಭವಿಸಿದವರು ಹೇಳಿದವುಗಳು.. ಒಟ್ಟಿನಲ್ಲಿ ಕಣ್ಣಲ್ಲಿ ಕಾಣ ಸಿಗಬಹುದಾದಂತಹ ದೃಶ್ಯಗಳೇ ಆಗಿವೆ..:(

  ReplyDelete
 6. ನಿಮ್ಮ ಕವಿತೆಯ ಸೊಗಡಿರುವುದು :
  1. ಸಾತ್ವಿಕ ಸಿಟ್ಟು
  2. ಪ್ರಶ್ನಿಸುವ ನೈತಿಕತೆ
  3. ವಿಡಂಬನೆ
  4. ತಿಳಿಗನ್ನಡ

  ಅಂದಿಗೂ ಇಂದಿಗೂ ಉಳಿದಿರುವ ಪಾಳೇಗಾರಿಕೆಯನ್ನು ಸರಿಯಾಗಿ ಝಾಡಿಸಿದ್ದೀರಿ.

  ನನ್ನ ಬ್ಲಾಗಿಗೂ ಸ್ವಾಗತ:
  www.badari-poems.blogspot.com

  ReplyDelete
 7. ಧನ್ಯವಾದಗಳು ಬದ್ರಿನಾಥ್ ಸರ್.. ನೀವು ಕೊಟ್ಟ ಕವಿತೆಯ ವಿಮರ್ಷೆ ಸರಳವಾಗಿ ಕವಿತೆಯ ವೈಶಿಷ್ಠ್ಯತೆಯನ್ನು ವಿವರಿಸಲು ಸಹಕಾರಿ.. ನಿಮ್ಮ ಸಹಕಾರ ಹೀಗೆಯೇ ಇರಲಿ.. ತುಂಬು ಹೃದಯದ ಧನ್ಯವಾದಗಳು..:))) ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು, ಕಂಡಿತವಾಗಿ ಭೇಟಿ ನೀಡುತ್ತೇನೆ..:)))

  ReplyDelete