ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday 11 November 2011

ನೀನಿರದ ಸಂಜೆ (ಮನದ ಮಾತು)

                                        

  
ನನ್ನ ಪದವಿಯ ಪ್ರಾರಂಭದ ದಿನಗಳವು. ತುಂಬಾ innocent ಅಲ್ಲದಿದ್ದರೂ, ತಕ್ಕ ಮಟ್ಟಿಗೆ ಒಳ್ಳೆಯ ಹುಡುಗನೇ. ಎಲ್ಲರೊಂದಿಗೂ ಬೇಗನೆ ಬೆರೆಯುವ ಸ್ನೇಹ ಜೀವಿಯಾದರೂ ಹುಡುಗಿಯರೊಂದಿಗೆ ಮಾತು ಅಷ್ಟಕ್ಕಷ್ಟೆ. ನನ್ನ ಸಂಕೋಚ ಸ್ವಭಾವವೂ ಅದಕ್ಕೆ ಕಾರಣವಿದ್ದಿರಬಹುದು. ಆದರೆ ನೀ ನನ್ನ ಬಾಳಲ್ಲಿ ಬಂದ ನಂತರ ನನಗೇ ಅರಿವಿಲ್ಲದಂತೆ ನಾ ನಿನ್ನ ಹತ್ತಿರವಾಗಿದ್ದೆ. ಸ್ನೇಹವಾಗಿ ಪ್ರಾರಂಭವಾದ ನಮ್ಮ ಅನುಬಂಧ ಪ್ರೀತಿಯ ರೂಪ ಪಡೆಯಲು ಬಹಳ ದಿನಗಳೇನೂ ಬೇಕಾಗಲಿಲ್ಲ. ನಾ ನಿನ್ನೊಂದಿಗೆ ಕಳೆದ ಆ ರಸ ನಿಮಿಷಗಳೆಷ್ಟೊ, ಸುಮ್ಮನೆ ನಿನ್ನ ಮಾತು ಕೇಳುತ್ತಾ ಕುಳಿತ ಸಂಜೆಗಳೆಷ್ಟೋ, ನಿನ್ನ ಧ್ವನಿ ಕೋಗಿಲೆಯಂತೆ ಇಂಪಲ್ಲದಿದ್ದರೂ ನಾನದನ್ನು ಕೇಳಿದೊಡನೆ ಮಂತ್ರ ಮುಗ್ಧನಾಗುತ್ತಿದ್ದೆ. ಪ್ರೀತಿಯ ಬಾವಿಯಲ್ಲಿ ಬಿದ್ದವನಿಗೆ ಕಾಗೆಯ ಕಂಠವೂ ಕೋಗಿಲೆಯ ಕುಹೂ ಕುಹೂ...;-) ಬೆದರು ಬೊಂಬೆಯೂ ಮೋಹನಾಂಗಿಯೇ...;-) ಹ್ಹ ಹ್ಹ ಹ್ಹ ಹ್ಹಾ... ಕೋಪಿಸಿಕೊಳ್ಳಬೇಡ ಚಿನ್ನು ಸುಮ್ಮನೆ ಛೇಡಿಸಿದೆನಷ್ಟೇ.

ವಿನಿಮಯಗೊಳ್ಳುತ್ತಿದ್ದ ಆ ಹುಚ್ಚು-ಹುಚ್ಚು sms ಗಳು, leisure ಸಮಯಗಳಲ್ಲಿನ ಹರಟೆಗಳು, decent ಆದ ಆ ಭೇಟಿಗಳು, ಆ ಸಂಧ್ಯಾ ಸಮಯದ ನಮ್ಮ ಬಸ್ ಪ್ರಯಾಣಗಳು, ನಾನು ನಿನ್ನಲ್ಲಿ ಪ್ರೇಮ ನಿವೇಧಿಸಿಕೊಂಡ ಆ canteen ಪುರಾಣ, ನಮ್ಮ ಆ ಸಣ್ಣ-ಪುಟ್ಟ ಪ್ರೀತಿಯ fight ಗಳೂ... ಅಬ್ಬಾ ಎಂಥಾ ಸುಂದರ ರಸ ನಿಮಿಷಗಳಲ್ವಾ..?? ಮೈ ಜುಂಮೆನ್ನಿಸುತ್ತದೆ... ಆ ನೆನಪುಗಳೊಂದಿಗೆ ನೀನೇ ಕಣ್ಮುಂದೆ ಬಂದು ನಿಲ್ಲುತ್ತೀಯ. ಇಂದು ನೀನು ನನ್ನೊಂದಿಗಿಲ್ಲ ಎಂಬುದನ್ನು ನೆನಪಿಸಿಕೊಂಡೊಡನೆ ಎಲ್ಲಿ ನೀನು ನಮ್ಮ ನೆನಪುಗಳೊಂದಿಗೆ ಜಾರಿ ಹೋಗುವೆಯೋ ಎಂದು ಕಣ್ ಮುಚ್ಚಿಬಿಡುತ್ತೇನೆ. ನೀನು ಹನಿಯಾಗಿ ಕಣ್ಣಿನಲ್ಲಿ ಬಂದರೂ ಕಣ್ಣಾಲಿಗಳಲ್ಲೇ ಬತ್ತಿಹೋಗಲೆಂದು. ಆದ್ದರಿಂದಲೆ ನೀನಿನ್ನೂ ಇರುವೆ ನನ್ನ ಕಣ್ಣ ಹನಿಗಳಲ್ಲಿ ಬಿಸಿಯಾಗಿ, ನನ್ನ ಮನದಲ್ಲಿ ಮಗುವಾಗಿ.

ಗೆಳತಿ ನಿನಗೆ ತಿಳಿದಿರಲಿಕ್ಕಿಲ್ಲ, ನಿನ್ನೊಂದಿಗೆ ಕೆಲ ಸಮಯ ಕಳೆಯಲು ನಾ ಕಾದು ಕೂತ ಸಂಜೆಗಳೆಷ್ಟೋ, ನಿನ್ನ ಸಾನಿಧ್ಯ ಬಯಸಿ ನಾ ನಿಮಿಷ ಕಳೆದರೂ ಯುಗದಂತೆ ಭಾಸವಾಗುತ್ತಿದ್ದರೂ ಗಂಟೆಗಟ್ಟಲೆ ನಿನಗಾಗಿ ಕಾಯುತ್ತಿದ್ದೆ. ಪ್ರೀತಿಸಿದವರಿಗಾಗಿ ಕಾಯುವುದರಲ್ಲೂ ಏನೋ ಒಂಥರ ಹಿತವಿದೆ, ಅನುಭವಿಸಿದವರಿಗೇ ಗೊತ್ತು ಅದರ ಸುಖ. ನಮ್ಮ ಭೇಟಿಯನ್ನು ಯೋಜಿಸಿ ಆಯೋಜಿಸಿಕೊಂಡರೂ ಕಾಕತಾಳೀಯ ಭೇಟಿಗಳೆಂದು ನಿನ್ನೆದುರು pose ಕೊಡುತ್ತಿದ್ದ ದಿನಗಳೆಷ್ಟೋ? ನನಗೇ ನನ್ನ ಬುದ್ಧಿವಂತಿಕೆಯ ಅರಿವಾದ ದಿನಗಳವು...;-) ಹ್ಹ ಹ್ಹ ಹ್ಹಾ... ನೀನು ಒಮ್ಮೆ ನನ್ನ ನೋಡಿ ನಕ್ಕಾಗ, ಪ್ರೀತಿಯಿಂದ ಕೈ ಹಿಡಿದು ನೇವರಿಸಿದಾಗ ನಾನು ನನ್ನಲ್ಲೇ ಪುಳಕಿತನಾಗಿಬಿಡುತ್ತಿದ್ದೆ... ಆ ಭಾವದಲ್ಲಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತಿದ್ದೆ. ಎಷ್ಟು ಸುಂದರ ಗೆಳತಿ ಆ ಪ್ರಣಯದ ಭೇಟಿಗಳು. ನನ್ನ ಮನಸ್ಸಿಗೆ ಹೊಕ್ಕು ನನ್ನ ಹೃದಯವನ್ನೇ ದೋಚಿಬಿಟ್ಟಿದ್ದೆ ನೀ ಮಾಟಗಾತಿ. ನೀನಿನ್ನೂ ನನ್ನ ಮನಸ್ಸಿನ ಅಥಿತಿ ನಿನ್ನ ನೆನಪುಗಳೊಂದಿಗೆ, ಅಂತರಾಳದಲ್ಲಿ ಹುದುಗಿರುವ ಪ್ರೀತಿಯೊಂದಿಗೆ...

ನಿನ್ನ ಮುಚ್ಚು-ಮರೆಯಿಲ್ಲದ ನೇರ ವ್ಯಕ್ತಿತ್ವ, ನಿನ್ನ ಸರಳತೆಗೆ ಮಾರು ಹೋದ ನನ್ನ ಮನಸ್ಸು ಇನ್ನೂ ನನ್ನ ತಹಬದಿಗೆ ಸಿಕ್ಕಿಲ್ಲ. ನಿನ್ನ ಮನದ ಖೈದಿ ನಾನು ಬಂಧಿಸಿಬಿಟ್ಟೆಯಲ್ಲ ನನ್ನ ನಿನ್ನ ಪ್ರೀತಿಯಿಂದ. ನನ್ನ ಮನಸ್ಸು ಆ ಬಂಧನವನ್ನೇ ಇಷ್ಟಪಡುವಷ್ಟು. ಅಂದಿನ ನನ್ನ ಮನಸ್ಸಿಗೆ ಸಂಗೀತದ ಜೊತೆ ಕೊಟ್ಟದ್ದು ಸಿ. ಅಶ್ವತ್ ಸಂಗೀತ ಸಂಯೋಜನೆಯ ಕವಿತೆ...

"ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು...

ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು..."

ಎಂಥಹ ಸಾಲುಗಳಲ್ವಾ? ಸಂಗೀತ ಸಂಯೋಜನೆಯಂತೂ ಅದ್ಭುತ. ಒಮ್ಮೆ ಕೇಳು ನೀನೂ ಇಷ್ಟ ಪಡ್ತೀಯ. ಎಲ್ಲಾ ಪ್ರೇಮಿಗಳಿಗೂ ಸಂಗೀತವೆಂದರೆ ಪ್ರಿಯವೇ ಅವನು ಎಷ್ಟೇ ಒರಟನಾಗಿದ್ದರೂ ಸೂಕ್ಷ್ಮ ಸಂವೇದನೆಯವನನ್ನಾಗಿ ಮಾರ್ಪಡಿಸಿಬಿಡುತ್ತದೆ ಈ ಸಂಗೀತ. ಈ ಹಾಡನ್ನಂತೂ ಪ್ರೀತಿಯಲ್ಲಿರುವವರು ಒಮ್ಮೆಯಾದರೂ ಕೇಳಲೇ ಬೇಕು.


        
ನೀನು ಒಮ್ಮೊಮ್ಮೆ ನನ್ನಲ್ಲಿ ಬಿಕ್ಕಿದಾಗ, ನನ್ನ ಹೃದಯವೂ ಬಿಕ್ಕುತ್ತಿತ್ತು. ಆದರೂ ಹುಡುಗನಲ್ಲವೇ ಅಳಬಾರದೆಂದು ಸಾವರಿಸಿಕೊಂಡು ನಿನ್ನ ಕಣ್ಣೊರೆಸಿ ಸಾಂತ್ವಾನವೇಳುವ ಪ್ರಯತ್ನ ಮಾಡುತ್ತಿದ್ದೆ. ಆಗೆಲ್ಲ ನೀನು ತಮಾಷೆಯಾಗಿ ಕೇಳುತ್ತಿದ್ದೆಯಲ್ಲಾ, ’ಈ ಕೈಗಳನ್ನು ನನಗೆ ಕೊಟ್ಟುಬಿಡೋ’ ಎಂದು... ನಾ ನಿನಗೆ ಉತ್ತರಿಸಿದ್ದು, ’ಏನೇ ಇದು ಆಟಿಕೆಗಳನ್ನು ಕೇಳುವಂತೆ ಕೈಗಳನ್ನು ಕೊಡು ಅಂತೀಯಲ್ಲಾ, ಕೈ cut ಮಾಡ್ಕೊಡ್ಲಾ?’ ಅದಕ್ಕೆ ನೀನು ’ಹೂಂ ಮತ್ತೆ cut ಮಾಡ್ಕೋ, ನನ್ನ ಮುದ್ಧು ಕೋತಿ’... ನಾನು ಪ್ರತಿಕ್ರಿಯಿಸಿದ್ದು ’ಆ ಎರಡು ಕೈಗಳೂ ನಿನ್ನವೆ ಪುಟ್ಟ, ಓಹೋ ನಾಲ್ಕು ಕೈಗಳಾಗಿಬಿಟ್ಟವು ನಿನಗೆ, ನೀನೇನು ದೇವತೆಯೋ?....’ ಈಗಲೂ ಆ ನೆನಪುಗಳು ಅಚ್ಚ ಹಸಿರು ನನ್ನ ಮನದಲ್ಲಿ ನೆನ್ನೆ-ಮೊನ್ನೆ ನೆಡೆದವೆಂಬಂತೆ.

ನಂತರದ ದಿನಗಳಲ್ಲಿ ನೇರವೆಂದು ತಿಳಿದಿದ್ದ ನೀನೇ ನಿಗೂಢವಾಗಿಬಿಟ್ಟೆ. ನನ್ನಿಂದ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದೆ. ನನಗೋ ಭಯ ಏನನ್ನು ಮನಸ್ಸಿನಲ್ಲಿ ಹಚ್ಚಿಕೊಂಡು ಕೊರಗ್ತಾಳೋ, ಯಾಕೆ ಹೀಗೆ ನನ್ನನ್ನು avoid ಮಾಡ್ತಿದ್ದಾಳೋ? ಜೊತೆಗಿದ್ದರೂ ಮಾರು ದೂರವಿದ್ದಂತೆ ಅನಿಸ ಹತ್ತಿತು. ನಾ ಕಂಡ ಕನಸ್ಸುಗಳು ಕಣ್ಮುಂದೆಯೇ ಒಡೆದು ಚೂರಾಗುವಂತೆ ಭಾಸವಾಗುತ್ತಿತ್ತು. ಕಾರಣವೇ ಇಲ್ಲದಂತೆ ದೂರವಾಗುತ್ತಿದ್ದೆ. ನಾನು ಎಷ್ಟೇ ಹಿಡಿದಿಡಲು ಪ್ರಯತ್ನಿಸಿದರೂ ಸಿಗದ ಮರೀಚಿಕೆಯಾಗಿಬಿಟ್ಟೆ. ನಾನಿನ್ನೂ ನಿನ್ನ ಪ್ರೀತಿಸುತ್ತಲೇ ಇದ್ದೆ, ನೀನು ಕಣ್ಣೆದುರಿದ್ದರೂ ಕಿವುಡಳಾಗಿಬಿಟ್ಟೆ. ನಾನು ಎಷ್ಟೆ ನಿನ್ನ ಮನದ ಕದ ತಟ್ಟಿದರೂ ಪ್ರತಿಕ್ರಿಯೆ ಬಾರದಾದಾಗ ನಾನೂ ಮೂಕಾಗಿಬಿಟ್ಟೆ. ನೀ ಹೊರಟ ಮೇಲೂ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳಲ್ಲಿ ಬೇಯುತ್ತಿದ್ದೇನೆ, ಉತ್ತರಿಸುವವರಾರು?? :-( "ನಾನು ಮಾಡಿದ ತಪ್ಪಾದರೂ ಏನು? ಎಲ್ಲಾ ವಿಷಯಗಳಲ್ಲೂ ನನ್ನ ಆಸರೆಯನ್ನು ಬಯಸುತ್ತಿದ್ದ ನಿನಗೆ ಈಗ ಆಸರೆ ಕೊಡುವವರಾದರೂ ಯಾರು? ಬಿಟ್ಟು ಹೋಗುವ ಮುನ್ನ ನನಗೆ ಒಮ್ಮೆಯಾದರು ಹೇಳಿ ಹೋಗಬೇಕೆನಿಸಲಿಲ್ಲವೇ? ನಾನು ನಿನಗೆ ಅಷ್ಟು ಬೇಡವಾದೆನೆ? ನೀನೇ ಕಟ್ಟಿಕೊಟ್ಟ ನೂರಾರು ಕನಸುಗಳಿಗೆ ತಣ್ಣೀರೆರಚಿದೆಯಲ್ಲ, ಸ್ವಲ್ಪವೂ ನನ್ನ ನೆನಪು ಕಾಡಲಿಲ್ಲವೆ?’ ಪ್ರೀತಿಯ ಅಪ್ಪುಗೆಯಲ್ಲಿ ಬಚ್ಚಿಟ್ಟ ಬೆಚ್ಚನೆಯ ಗೂಡನ್ನು ನೀನೇ ಹೊಡೆದು ಬಿಟ್ಟೆಯಲ್ಲ ಕಾರಣವೇ ಇಲ್ಲದೆ..! :-(

        

ಇಂದೂ ಸಂಜೆಯಾಗಿದೆ ಗೆಳತಿ, TV ಯಲ್ಲಿ "ಈ ಸಂಜೆ ಯಾಕಾಗಿದೆ ನೀನಿಲ್ಲದೆ" song ಕೂಡ ಬರ್ತಿದೆ. ನಿನ್ನ ಮಾತನ್ನು ಜೀವನ ಪರ್ಯಂತ ಕೇಳಲು ಮನ ಹಾತೊರೆಯುತ್ತಿದೆ ಮತ್ತೊಮ್ಮೆ ಬಾರೆ, ಕಾದು ಕುಳಿತಿದ್ದೇನೆ. ನಾನು ಹಿಂದಿಗಿಂತಲೂ ಬುದ್ಧಿವಂತನಾಗಿದ್ದೇನೆ, ಒಮ್ಮೆ ಬಾರೆ ಪರೀಕ್ಷಿಸಲು. ನಿಮಿಷಗಳೇ ಯುಗಗಳಾಗಿರುವಾಗ, ಯುಗಗಳನ್ನು ನಿಮಿಷಗಳಂತೆ ಕಳೆದೇನೆ, ಒಮ್ಮೆ ಬಾ ಯುಗಗಳನ್ನು ನಿಮಿಷಗಳನ್ನಾಗಿಸಿಕೊಳ್ಳುವಾಸೆ. ನಿನ್ನ ನೆನಪುಗಳು ಕಣ್ಣ ಹನಿಗಳಾಗಿ ಹರಿಯಲು ತವಕಿಸುತ್ತಿವೆ ಅವುಗಳನ್ನು ಕಣ್ಮುಚ್ಚಿ ಹಿಡಿದಿದ್ದೇನೆ. ಆ ನನ್ನ ಕಂಗಳನ್ನು ಚುಂಬಿಸಲಾದರೂ ಒಮ್ಮೆ ಬಾ. ನಿನ್ನ ನೆನಪಿನಲ್ಲಿ ದಿನವೂ ಸತ್ತು ಬದುಕಿದ್ದೇನೆ. ಈಗಲೂ ಅದೇ ಹಾಡನ್ನು ಇಷ್ಟಪಡುತ್ತಿದ್ದೇನೆ. ನೀ ನನ್ನನ್ನು ಕಾಡುತ್ತಿರುವುದು ನನಗೆ,

"ತೀರದಲಿ ಬಳುಕುವಲೆ
ಕಣ್ಣ ಚುಂಬಿಸಿ ಮತ್ತೆ,
ಸಾಗುವುದು ನೆರಳಿನಂತೆ
ನಿನ್ನೊಳಿದೆ ನನ್ನ ಮನಸು..."

ಎಂಬಂತೆ ಭಾಸವಾಗುತ್ತಿದೆ. ಆ ಹಾಡನ್ನು ಒಮ್ಮೆ ನಿನಗೂ ಕೇಳಿಸುವಾಸೆ ಒಮ್ಮೆ ಬಾ. ನಿನ್ನ ಕಣ್ಣೊರೆಸಲು ನನ್ನ ಕೈಗಳು ಚಡಪಡಿಸುತ್ತಿವೆ, ಒಮ್ಮೆ ಬಾರೆ ಈ ಕೈಗಳನ್ನೇ ಕಾಣಿಕೆಯಾಗಿ ಕೊಟ್ಟೇನು ನೀ ಕೇಳಿದಂತೆ ಜೀವನ ಪರ್ಯಂತ, ಉಡುಗೊರೆಯಾಗಿ...

ನೀನಿರದ ಸಂಜೆ ಕಗ್ಗತ್ತಲಂತೆ ಭಾಸವಾಗುತ್ತಿದೆ, ನೀನೆಲ್ಲಿ ಕಣ್ಣ ಹನಿಗಳಾಗಿ ಜಾರಿ ಕಗ್ಗತ್ತಲಲ್ಲಿ ಕರಗಿ ಹೋಗುವೆಯೋ ಎಂದು ಭಯವಾಗುತ್ತಿದೆ. ಆ ಕಣ್ಣ ಹನಿಗಳನ್ನು ಹಿಡಿದುಕೊಳ್ಳಲು ಮನಸ್ಸು ನಿನ್ನ ಕೈಗಳ ಆಸರೆಯನ್ನು ಬಯಸುತ್ತಿದೆ. ಎಲ್ಲಿ ಕುಳಿತಿರುವೆ ಗೆಳತಿ ನನ್ನ ನೆನಪಾಗದೆ? ಈ ಸಂಜೆಯ ಭೀಕರತೆಯನ್ನು ಹೊಡೆದೋಡಿಸಲು ಹಿಂದಿರುಗಿ ಬರಬಾರದೇ? ಕಾದಿರುವ ಧರೆಯಂತಿರುವ ನನ್ನ ಮನಸ್ಸನ್ನು ಅಪ್ಪಿ ಹಿಡಿದು, ಪ್ರೀತಿಯ ಮಳೆ ಸುರಿಸಬಾರದೆ? ಕಾಯುತ್ತಿದೆ ಮನಸ್ಸು ನಿನ್ನನ್ನೇ ಶಬರಿ ರಾಮನನ್ನು ಕಾದಂತೆ ಈ ನೀನಿರದ ಸಂಜೆಯಲಿ....

- ಪ್ರಸಾದ್.ಡಿ.ವಿ.

3 comments:

  1. ಇದು ಒಂದು ಲೇಖನವೆಂದುಕೊಂಡರೆ ಲೇಖನ, ಕಥೆ ಎಂದುಕೊಂಡರೆ ಕಥೆ... ಒಟ್ಟಿನಲ್ಲಿ ಹೇಳದೆ ಮನದಲ್ಲಿ ಉಳಿದ ಮನದ ಮಾತು..:)))

    ReplyDelete
  2. ಅದ್ಭುತವಾಗಿದೆ ಪ್ರಸಾದ್... ಕಳೆದುಕೊಂಡ ಪ್ರೀತಿಯ ನೆನಪು ಯಾರಿಗೆ ಬಂದರೂ ಕೂಡ ಹೃದಯ ಕಣ್ಣೀರಿಡುತ್ತೆ..!
    ಅವರಿಗೇನು ಕಾರಣ ಹೇಳದೆ ಹೊರಟು ಬಿಡ್ತಾರೆ.., ಆದರೆ ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳನ್ನು ಮನದಲ್ಲಿ ಇಟ್ಟುಕೊಂಡು ಉತ್ತರಕ್ಕಾಗಿ ಹಂಬಲಿಸಿ ಕಣ್ಣೀರು ಹಾಕುವವರು ನಾವಲ್ಲವಾ ಗೆಳೆಯಾ..:(

    ಹೊರ ಹೊಕ್ಕ ಪ್ರತಿ ಕಣ್ಣೀರಿನ ಮನೋಭಾವ ಇದು.,
    ನಿಂತ ನಿಲುವಲ್ಲೆ ಕುಸಿದು ಬೀಳುವಂತ ವ್ಯಥ್ಯೆ ಇದು.,
    ಕಣ್ಣಾ ನೀರ ಒಂದೊಂದು ಹನಿಗಳು ನೆತ್ತರಂತೆ ಹರಿದ ಅನುಭವ ಇದು..
    ಪ್ರೀತಿಸಿದ ಪ್ರೀತಿ ಮಾಯೆ ಆದರೂ ಅದರ ಸವಿ ನೆನಪಲ್ಲೆ ಬದುಕೋ ಮನಸು ಇದು..!:(:(

    ಈ ಮನದಲ್ಲಿರುವ ಪ್ರಶ್ನೆಗಳಿಗೂ ಯಾವತ್ತಾದರೂ ಉತ್ತರ ಸಿಗಬಹುದೆಂದು ನಿಮ್ಮಂತೆ ಕಾಯೋ ಅವಕಾಶ ಕೂಡಾ ನನಗಿಲ್ಲಾ.., ಉತ್ತರಿಸುವವರೆ ಇಲ್ಲದಿರುವಾಗ ಕಾಯುವ ಅವಕಾಶ ಇನ್ನೆಲ್ಲಿದೆ..!!:(:(

    ReplyDelete
  3. ಧನ್ಯವಾದಗಳು ದೀಪು ನಿನ್ನ ಮೆಚ್ಚುಗೆಗೆ..:))) ಪ್ರೀತಿ ಅಂದ್ರೇನೇ ಹಾಗೆ ಅನ್ಸುತ್ತೆ ಪ್ರೀತಿ ಆಗೋವಾಗ ಗೊತ್ತೇ ಆಗೊಲ್ಲ ಆದ್ರೆ ಬಿಟ್ಟು ಹೋದಾಗ ಮರೆಯೋಕಾಗಲ್ಲ..:))
    "ಪ್ರೀತಿ ಅಂದರೆ ಹಾಗೇನೇ,
    ತಿಳಿದೂ, ತಿಳಿಯದ ಹಾಗೇನೇ..."
    ಆದರೆ ಜೀವನ ನಮಗೆ ತುಂಬಾ ವಿಷಯಗಳನ್ನ ಕಲಿಸ್ತಾ ಹೋಗುತ್ತೆ ಅದರಲ್ಲಿ ಪ್ರೀತಿ ಕೂಡಾ ಒಂದು.. ಜೀವನದಲ್ಲಿ ಗತಿಸುವ ಎಲ್ಲಾ ಘಟನೆಗಳನ್ನು ನಾವು accidents ಗಳಲ್ಲ, ಕೇವಲ incidents ಅಂದುಕೊಳ್ಳಬೇಕು.. ಆಗ ಪ್ರತಿಯೊಂದನ್ನೂ practical ಆಗಿ ನೋಡೋಕೆ ಸಾಧ್ಯವಾಗುತ್ತೆ..:))) ಜೀವನ ಅಮೂಲ್ಯವಾದುದು ಗೆಳತಿ.. ಸವಿಯುವ ಮನಸ್ಸು ಮಾಡಿದ್ರೆ ಪ್ರತಿಯೊಂದರಲ್ಲೂ ಸಿಹಿಯಿರುತ್ತದೆ..:))) ಮನುಷ್ಯನ ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟಗಳೂ ಮನುಷ್ಯನನ್ನು ಧೃಡವಾಗಿಸಲು ಸಹಕರಿಸುತ್ತವೆ ಎಂದು ನಂಬಿರುವವನು ನಾನು so ದೇವರು ಕಷ್ಟದಲ್ಲಿರುವವರನ್ನು ಪ್ರೀತಿಯಿಂದ ಹರಸುತ್ತಾನೆ..:))) be positive and show the world that you are difficult and strong to beat..:))) thats what we call a spirit of life..:)))

    ReplyDelete