ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 31 December 2011

ಮಧುರ ಪಿಸುಮಾತಿಗೆ, ಅದರ ತುಸು ಪ್ರೀತಿಗೆ

ಜನವರಿ ೧, ಸದಾ ನನ್ನ ನೆನಪಿನಲ್ಲುಳಿಯುವ ದಿನ. ಅದು ನವ ವಸಂತದ ಆರಂಭವೆಂಬ ಕಾರಣಕ್ಕೆ ಮಾತ್ರವಲ್ಲ. ನನ್ನ ಜೀವನದಲ್ಲಿನ ಒಂದು ಅನಿರೀಕ್ಷಿತ ತಿರುವು, ಒಂದು ಸುಮಧುರ ಯಾತನೆಯಾಗಿ ಉಳಿದ ಕಾರಣದಿಂದ. "ಆತ(?)" ನನ್ನ ಜೀವನದಲ್ಲಾಡಿದ ಆಟವನ್ನು ನಾನೆಂದಿಗೂ ಮರೆಯುವಂತಿಲ್ಲ..! ಇಂದು ಆ ಕ್ಷಣವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.


ನನ್ನ ಕ್ಯಾಂಟೀನ್ ಪುರಾಣದಲ್ಲಿ "ನಾನು ನಿನ್ನನ್ನು ನನ್ನ ಜೀವದ ಗೆಳೆಯನೆಂದು ತಿಳಿದಿದ್ದೇನೆಯೇ ಹೊರತು ನಲ್ಲನಾಗಿ ಅಲ್ಲ" ಎಂದು ಆಕೆ ನನ್ನ ಪ್ರೀತಿಗೆ ಅಲ್ಪವಿರಾಮವಿಟ್ಟಿದ್ದಳು..! ನನಗೋ ಅದ್ಯಾವುದಕ್ಕೂ ಹೊಂದಿಕೊಳ್ಳಲಾಗದೆ ಸ್ನೇಹಕ್ಕೆ ಪ್ರೀತಿಯನ್ನು ತ್ಯಾಗ ಮಾಡಿದ ಅಮರ ಪ್ರೇಮಿಯಾಗಿದ್ದೆ. ಆನಂತರದಲ್ಲಿ ಆಕೆ ಮತ್ತೊಂದು ಕತೆ ಹೇಳಲು ಶುರುವಚ್ಚಿದ್ದಳು. ನಾನು ಒಬ್ಬ ಹುಡುಗನನ್ನು ಪ್ರೇಮಿಸಿದ್ದೇನೆ, ಆತನನ್ನು ನನ್ನ ಜೀವದ ಗೆಳೆಯನಾದ ನಿನಗೆ ಪರಿಚಯಿಸಬೇಕೆಂದು ಹೇಳಿದಳು.ನನಗೋ ಹೃದಯದಲ್ಲಿ ಹೇಳಿಕೊಳ್ಳಲೂ, ತಾಳಿಕೊಳ್ಳಲೂ ಆಗದ ತಳಮಳ. ನನ್ನವಳೆಂದು ತಿಳಿದವಳು ನನ್ನೆದುರಿಗೆ ಮತ್ತೊಬ್ಬನನ್ನು ಪ್ರೀತಿಸುವುದು ಸಹಿಸಲಾಗದ ನೋವನ್ನು ನೀಡಿತ್ತು, ನಿದ್ರೆ ಬಿಟ್ಟ ಉದಾಹರಣೆಗಳೂ ಉಂಟು. ಇವೆಲ್ಲವುಗಳ ನಡುವೆಯೇ ಆಕೆ ಮತ್ತು ಆಕೆಯ ಮನೆಯವರೊಂದಿಗೆ ನಿಮಿಷಾಂಬಾ ದೇವಿಯ ದರ್ಶನವೂ ಆಗಿತ್ತು. ಅವಳ ಕುಟುಂಬದ ಎಲ್ಲ ಸದಸ್ಯರೂ ನನಗೆ ತುಂಬಾ ಹಿಡಿಸಿದ್ದರು, they were so cool together. ಆಕೆ ಅಂದು ನನ್ನೊಂದಿಗೆ ಏನನ್ನೋ ಹೇಳಲು ಚಡಪಡಿಸಿದ್ದಳು, ನಾನು ಆ ನಿಮಿಷಾಂಬಾ ದೇವಿಗೆ ನನ್ನ ಪ್ರೀತಿಯನ್ನು 'ನಮ್ಮ ಪ್ರೀತಿಯಾಗಿ' ಮಾಡೆಂದು ಅರ್ಜಿ ಹಾಕಿದ್ದೂ ಆಗಿತ್ತು.

ಅಂದು ಡಿಸೆಂಬರ್ 31ರ ಸಂಜೆ , ಆಕೆಯೊಂದಿಗೆ ಮೊಬೈಲ್ ನಲ್ಲಿ ಒಂದು ಗಂಟೆಯ ಸಂಭಾಷಣೆಯಾಗಿತ್ತು. ಅದು ನನ್ನ ಪ್ರೀತಿಯ ಸುಮಧುರ ನೆನಪುಗಳಲ್ಲೊಂದು. ಅವಳ ಜೀವನದ ನೂರಾರು ಕನಸುಗಳ ಬಗ್ಗೆ, ನಮ್ಮ ಗೆಳೆತನದ ಬಗ್ಗೆ, ನಾನು ಆಕೆಯ ಜೀವನದಲ್ಲಿ ಬಂದ ನಂತರ ಆದ ಬದಲಾವಣೆಗಳ ಬಗ್ಗೆ, ಅವಳ ಹುಚ್ಚು ಕಲ್ಪನೆಗಳ ಬಗ್ಗೆ ನಲಿವಿನಂತೆ ಉಲಿದಿದ್ದಳು. ನನಗಂತೂ ಅವಳ ಮಾತು ಕೇಳುವುದೇ ಸಿರಿ. ಹಾಗೆ ಆಗಸದಲ್ಲಿ ತೇಲುತಿದ್ದವನಿಗೆ ತಂತಿ ಬೇಲಿಯಾಗಿತ್ತು ಅವಳ ಕಡೆಯ ಮಾತು "ನನ್ನವನು ನಿನ್ನನ್ನು ಆದಷ್ಟು ಬೇಗ ಭೇಟಿಯಾಗಬೇಕಂತೆ". ನಾನು ಹೌಹಾರಿಬಿಟ್ಟಿದ್ದೆ!! ನಾನು ತುಂಬಾ ಬ್ಯುಸಿಯಾಗಿದ್ದೇನೆ ಪರೀಕ್ಷೆಗೆ ತಯಾರಿ ನಡೆಯುತ್ತಿದೆ, ಹಾಗೆ-ಹೀಗೆ ಎಂದು ಚೋಡಿದ್ದೆ. ನಿಜವಾದ ಕಾರಣವೇನೆಂದರೆ ನಾನು ಆಕೆಯ ಧ್ಯಾನದಲ್ಲಿಯೇ ಮುಳುಗಿ ಹೋಗಿದ್ದೆ. ಆತ ಮೋಹನನಾಗಿ ಬಂದು ನನ್ನವಳನ್ನು "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು(!)" ಎಂಬಂತೆ ನನ್ನಿಂದ ದೂರಕ್ಕೆ ಸರಿಸಿ ಬಿಟ್ಟರೆ? ಎಂಬ ಭಯ. ಸರಿ ಏನೋ ಸಬೂಬು ಹೇಳಿ ಸಂಭಾಷಣೆ ತುಂಡರಿಸಿದ್ದೆ.

ಅಂದು ರಾತ್ರಿ ಮನೆಯಲ್ಲಿ ಕೇಕ್ ಕತ್ತರಿಸಿ ವರ್ಷದಾರಂಭದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ನಾನು ಮೊಬೈಲ್ ಹಿಡಿದು ಶತಪಥ ಹಾಕುತ್ತಿದ್ದೆ. ಕಡೆಗೆ ಆ ಕಡೆಯಿಂದ ಕರೆ ಬರದಾದಾಗ ತಾಳಲಾರದೆ ನಾನೇ ಫೋನಾಯಿಸಿದೆ, "ನಾನೂ ನಿನಗೇ ಪ್ರಯತ್ನಿಸುತ್ತಿದ್ದೆ ಕಣೋ, ಆದರೆ ನೆಟ್ ವರ್ಕ್ ಪ್ರಾಬ್ಲಮ್, ನಾಳೆ ಸಿಗು, ಮಾತನಾಡಬೇಕು" ಉಲಿಯಿತು ಅವಳ ಧ್ವನಿ. ಇದ್ದ ಕೋಪವೆಲ್ಲ ಮಾಯವಾಗಿ "ಹೌದಾ, ಸರಿ ಅದೋಗ್ಲಿ ಬಿಡೆ, happy new year, ನಾಳೆ ಸಿಗುತ್ತೇನೆ" ಎಂದ್ಹೇಳಿ ಸಂಪರ್ಕ ಕಡಿದು ಮನೆಯವರ ಸಂಭ್ರಮಾಚರಣೆಯಲ್ಲಿ ಮುಳುಗಿಹೋದೆ.


ಜನವರಿ 1 ರಂದು ಆಕೆಯನ್ನು ಭೇಟಿಮಾಡುವ ಸಂಭ್ರಮ. ಕ್ಲೀನ್ ಆಗಿ ಶೇವ್ ಮಾಡಿ, ಟ್ರಿಮ್ ಆಗಿ ಅಪ್ಪ ಕೊಡಿಸಿದ್ದ ಹೊಸ ಬಟ್ಟೆ ತೊಟ್ಟು ಮನೆಯಿಂದ ಹೊರಟೆ. ಕಾಲೇಜ್ ತಲುಪಿ, ನಾನಿಲ್ಲಿದ್ದೇನೆ ಎಂದು ಆಕೆಯ ಮೊಬೈಲಿಗೊಂದು ಸಂದೇಶ ರವಾನಿಸಿದೆ. ಆಕೆ ಎದುರಿನಲ್ಲೇ ಪ್ರತ್ಯಕ್ಷ! ನನ್ನ ಎದೆಬಡಿತ ಅವಳಿಗೂ ಕೇಳಿಸಬಹುದೆಂದು ಹೆದರಿಬಿಟ್ಟೆ. ಆಕೆಯೋ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಕ್ಯಾಂಪಸ್ ನ ಪಾರ್ಕಿನಲ್ಲಿನ ಬೆಂಚ್ ಮೇಲೆ ಕುಳಿತು ಹರಟೆ ಶುರುವಚ್ಚಿದೆವು. ಅದು-ಇದು ಮಾತನಾಡುತ್ತಾ ಸಾಗಿತ್ತು ನಮ್ಮ ಮಾತುಕತೆ. ಹಾಗೆ ಸಾಗಿದ್ದ ಸಂಭಾಷಣೆ ಆಕೆಯ ಪ್ರೀತಿಯೆಡೆಗೆ ಹೊರಳಿತು. "ಇಂದು ನೀನು ಅವನನ್ನು ಭೇಟಿ ಮಾಡು, ಅವನು ಮೈಸೂರಿಗೆ ಬಂದಿದ್ದಾನಂತೆ, ನಾನಿನ್ನೂ ಅವನಿಗೆ ವಿಷ್ ಕೂಡ ಮಾಡಿಲ್ಲ, ಬೈಸಿಕೊಳ್ಳಬೇಕೇನೋ? ತಾಳು ಅವನಿಗೆ ಕಾಲ್ ಮಾಡಿ ಇಲ್ಲಿಗೆ ಬರಲು ಹೇಳುತ್ತೇನೆ". ಎಂದಾಕೆ ಒಂದೇ ಸ್ವರದಲ್ಲಿ ಉಸುರಿದಾಗ ನನ್ನ ಹೃದಯ ದಸಕ್ಕೆಂದಿತು. ನಾನು ಪ್ರತಿಕ್ರಿಯಿಸುವ ಮೊದಲೆ ಅವನ ನಂಬರ್ ಗೆ ಡಯಲ್ ಮಾಡಿಯೇ ಬಿಟ್ಟಳು. ಹೃದಯ ತನ್ನ ಬಡಿತ ಹೆಚ್ಚಿಸಿತು, ಎಲ್ಲಿ ಒಡೆದು ಹೋಗುವುದೋ ಎಂದು ಭಯಪಟ್ಟೆ. "ರಿಂಗ್ ಆಗ್ತಿದೆ, ತೆಗೀತಾನೇ ಇಲ್ಲ... ಕಾಲರ್ ಟ್ಯೂನ್ ಚೆನ್ನಾಗಿದೆ ಕೇಳು" ಎಂದು ನನ್ನ ಕಿವಿಗಿಟ್ಟಳು. ನನ್ನ ಕೈ ನಡುಗುತ್ತಿತ್ತು, ಮೈ ಬೆವರುತ್ತಿತ್ತು. "ಮಧುರ ಪಿಸುಮಾತಿಗೆ" ಎಂಬ ಬಿರುಗಾಳಿ ಸಿನೆಮಾದ ಸಾಂಗ್ ಕೇಳಿಸುತ್ತಿತ್ತು. ತಟ್ಟನೆ ಹೃದಯ ನಿಂತಂತಾಯ್ತು..!

ಅಯ್ಯೋ ಇದು ನನ್ನದೇ ಕಾಲರ್ ಟ್ಯೂನ್, ನನ್ನ ಮೊಬೈಲ್ ಎತ್ತಿ ನೋಡಿದೆ. silent mode ನಲ್ಲಿದ್ದ ಫೋನ್ ಹಾಗೆಯೇ ಜುಂಯ್ ಜುಂಯ್ ಎಂದು ವೈಬ್ರೇಟ್ ಆಗ್ತಿತ್ತು. ಅವಳ ಮೊಬೈಲ್ ಅನ್ನು ಅವಳ ಕೈಗಿಟ್ಟು ಒಂದು ಕ್ಷಣ ಮೌನವಾಗಿ ಕುಳಿತುಬಿಟ್ಟೆ. ಅವಳು "wish you happy new year" ಎಂದು ನನ್ನ ಕಿವಿಯಲ್ಲುಸುರಿದಳು. ನೂರಾರು ಭಾವಗಳಲ್ಲಿ ಮನ ತೋಯಿಸಿ ಹೋದಂತೆನಿಸಿತು. ಅಬ್ಬಾ! ಎಷ್ಟು ಜಾಣೆಯವಳು, ನನಗೀಗಲೂ ಮೈ ರೋಮಾಂಚನವಾಗುತ್ತದೆ. ನಾನವಳಿಗೆ ಪ್ರೇಮ ನಿವೇದಿಸಿಕೊಂಡ ಕ್ಯಾಂಟೀನ್ ಪುರಾಣ ನೆನಪಾಗುತ್ತದೆ. ಬರೋಬ್ಬರಿ ಎರಡು ತಿಂಗಳುಗಳ ನಂತರ ನನ್ನ ಅವಳು ನಮ್ಮ ಪ್ರೇಮಕ್ಕೆ ಅಧಿಕೃತ ಮುದ್ರೆಯೊತ್ತಿದ್ದಳು! ನನ್ನ ಮುಖದ ಭಾವಗಳನ್ನರಿಯಲು ಓರೆಗಣ್ಣಿನಲ್ಲಿ ನನ್ನ ಮೇಲೆ ದೃಷ್ಠಿ ನೆಟ್ಟ ಅವಳೆಡೆಗೆ ಮುಗುಳುನಗೆ ಬೀರಿ ಸ್ವಲ್ಪ ಹತ್ತಿರಕ್ಕೆ ಸರಿದು ಕುಳಿತೆ. ಒಮ್ಮೆಲೇ ಅಪ್ಪಿ ಮುದ್ದಿಸಬೇಕೆಂಬ ಭಾವೋತ್ಕಟತೆ. ಎಂದೂ ಸಭ್ಯತೆಯ ಎಲ್ಲೆ ಮೀರದ ನಾನು, ಅವಳ ಕೈಯನ್ನು ನನ್ನ ಕೈಯಲ್ಲಿಟ್ಟುಕೊಂಡು ನೇವರಿಸಲಷ್ಟೆ ಶಕ್ತನಾದೆ. ಹಿಡಿದ ಕೈಯನ್ನು ಎಂದೂ ಬಿಡೆನು ಎಂದು ಕಣ್ಣಿನಲ್ಲಿಯೇ ಸಂದೇಶ ರವಾನಿಸಿದೆ. ಅವಳು ಹಿಡಿತವನ್ನು ಬಿಗಿಗೊಳಿಸಿದಳು. ಅಕ್ಕ-ಪಕ್ಕದಲ್ಲಿದ್ದ ಕಣ್ಣುಗಳು ನಮ್ಮನ್ನೇ ನೋಡುತ್ತಿವೆ ಎಂದೆನಿಸುತ್ತಿತ್ತು ನನಗೆ. ಆದರೂ ಹಾಗೇ ಕೈಹಿಡಿದು ಕುಳಿತೆವು. ಹತ್ತು ನಿಮಿಷ ನೆಲೆಸಿದ್ದ ನಿರ್ಮಲ ಮೌನದಲ್ಲಿ ಹೃದಯಗಳೆರಡೂ ಕಣ್ಣುಗಳೊಳಗಿಳಿದು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದವು.


ಸ್ವಲ್ಪ ಸಮಯದ ನಂತರ ಕೈಹಿಡಿದೇ ಅವಳ PG ಯೆಡೆಗೆ ಹೆಜ್ಜೆ ಹಾಕಿದೆವು, ಮುಂದೆ ಹೀಗೆಯೇ ಸಪ್ತಪದಿ ತುಳಿದೇವು ಎಂಬ ಕನಸಲ್ಲಿ.

ಇಂದು ಆಕೆ ನನ್ನೊಂದಿಗಿಲ್ಲ, ಯಾವ ಕ್ಷುದ್ರಶಕ್ತಿಯ ಕಣ್ಣು ಬಿತ್ತೋ ಗೊತ್ತಿಲ್ಲ., ಆದರೆ ಅವಳೊಂದಿಗೆ ಅವಳ ನೆನಪುಗಳು ಮಧುರ ಮತ್ತು ಶಾಶ್ವತ..!

ಪುಟ್ಟಾ, ಈ ಲೇಖನವನೊಮ್ಮೆ ನೀನು ನೋಡುವಂತಾದರೆ ಸಾಕು ಕಣೆ, ನಾನು ಧನ್ಯ ಧನ್ಯ ಧನ್ಯ.

ಎಲ್ಲರೂ ದಯವಿಟ್ಟು, ಮೂರು ವಸಂತ ಪೂರೈಸಿ, ನಾಲ್ಕನೇ ವಸಂತಕ್ಕೆ ಕಾಲಿರಿಸಿರುವ ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಬಿಡಿ...:-)

ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು, ದೇವರು ಎಲ್ಲರನ್ನೂ ಹರಸಲಿ, ಕಾಪಾಡಲಿ...:-)

- ಪ್ರಸಾದ್.ಡಿ.ವಿ.

8 comments:

  1. ಪ್ರಸಾದ್..., ಒಬ್ಬ ಪ್ರೇಮಿಯ ತಳಮಳ,ತಲ್ಲಣಗಳನ್ನು ನವಿರಾಗಿ ಚಿತ್ರಿಸಿದ್ದಿರಿ....ಬಹಳ ಆಪ್ತ ಲೇಖನ....
    ನಿಮ್ಮ ಪ್ರೀತಿಗೆ ನನ್ನ ಶುಭಾಶಯಗಳು....ನಿಮ್ಮ ಪ್ರೀತಿ ಮತ್ತೇ ನಿಮಗೆ ಸಿಗಲಿ...

    happy new year...

    ReplyDelete
  2. @ಮೌನರಾಗ: ತುಂಬು ಮನದ ಧನ್ಯವಾದಗಳು ನಿಮಗೆ..:))) ಹೊಸ ವರ್ಷದೊಂದಿಗೆ ನನ್ನ ಪ್ರೀತಿಯ ನೆನಪುಗಳು ನವೀಕರಣಗೊಳ್ಳುತ್ತವೆ.. ನನ್ನ ಪ್ರೀತಿಗೆ ಶುಭಾಶಯ ಕೋರಿದ್ದೀರಿ ಮತ್ತು ನನಗೆ ನಿಮ್ಮ ಹಾರೈಕೆ ನೀಡಿದ್ದೀರಿ, ತುಂಬಾ ಖುಷಿಯಾಯ್ತು..:))) ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು..

    ReplyDelete
  3. ಸ್ವಲ್ಪ ಬೇಸರವಾಯಿತು. ದೂರವಾದ ಕಾರಣ ಏನಿರಬಹುದೋ ಗೊತ್ತಿಲ್ಲ. ಇಲ್ಲಿಯವರೆಗೂ ಅವಳನ್ನ ಎಳೆತಂದಿದ್ದೀರೆಂದರೆ ಆ ಸುಂದರ ಹುಡುಗಿ ಖಂಡಿತಾ ದುರದೃಷ್ಟವಂತೆ. ಈ ಮಾತು ನೆನಪಾಗುತ್ತಿದೆ "ಹುಡುಗಿಯರಿಗೆ ಹುಡುಗರೆಂದರೇ ಹೀಗೆ, ಊಟದ ನಂತರ ಎತ್ತಿ ಬಿಸಾಡುವ ಬಾಳೆ ಎಲೆಯ ಹಾಗೆ!!" / ಪ್ರಸಾದ್, ಮತ್ತೆ ಆ 'ಪಾಪ'ದ ಹುಡುಗಿಯನ್ನ ನೆನಪಿಸಿಕೊಟ್ಟಿರಿ. ಧನ್ಯವಾದ. ಮತ್ತು ನಿಮ್ಮ ಪ್ರೀತಿಯ ಗೋರಿಗೊಂದು ನನ್ನ ಕಪ್ಪುಗುಲಾಬಿ....

    ReplyDelete
  4. ನೀವು ಏನಾದರೂ ತಿಳಿದುಕೊಳ್ಳಿ.. ಆದರೆ ನಾವು ಮೊದಲು ಓದುತ್ತಿರುವಾಗಲೇ ಅಂದುಕೊಂಡಂತೆ ಆ ಗೆಳಯ ನೀವೇ.. ಅದು ಫೋನ್ ವಿಚಾರದ ಆಧಾರದ ಮೇಲೆ ನಮ್ಮ ಊಹೆ ಆಗಿತ್ತು.. ನಂತರ ಓದುತ್ತಾ ಅದು ನಿಜವಾಗಿದೆ ಎಂದು ಸಂತೋಷ ಆಯಿತು.. ಪ್ರೀತಿಯ ಆ ದಿನಗಳು ಮತ್ತು ಆ ನಿಮಿಷಗಳು ಸುಂದರ ... ಅತೀ ರೋಮಾಂಚಕಾರಿಯಾದ ಅನುಭವದ ನಡುವೆ ಪ್ರೇಮ ಜೋಡಿಯ ಸೌಂದರ್ಯ ಸನ್ನಿವೇಶಗಳು... ಆದರೆ ಕೊನೆಗೆ ಬಿಟ್ಟು ಹೋದ ಕಾರಣ ಸರಿಯಾಗಿ ಅರ್ಥ ಆಗಿಲ್ಲ... ನಿಮ್ಮೊಂದಿಗೆ ಅವಳು ಏಕಿಲ್ಲ ಅನ್ನುವುದೇ ಒಂದು ಪ್ರಶ್ನೆ ಆಗಿದೆ.. ನೀವು ಸರಿಯಾದ ಉತ್ತರ ನೀಡಬೇಕು.. ಮತ್ತು ನಿಮ್ಮ ಪ್ರೀತಿಯು ಉತ್ತಮ ಆರಂಭ ಹಾಗು ಮುಂದಿನ ಕ್ಷಣಗಳು ಸೊಗಸಾಗಿಯೇ ಇದ್ದಂತೆ ಕಂಡರೂ ಸಹ ಅಂತ್ಯ ಏನಾಗಿದೆ.. ಏಕೆ ಆ ರೀತಿ.. ಸಂಭಂದ ಸಮಾಜ ಜಾತಿ ಸಂಪ್ರದಾಯ ಏನು ಕಾರಣ... ಅವಳು ಎಲ್ಲಿ .. ಹೇಗೆ .. ಯಾರು .. ಯಾವ ರೀತಿ .. ಅನ್ನುವುದು ಕಥೆಯು ಇಲ್ಲಿ ಮುಂದುವರೆಯುವುದು ಎಂದು ಹೇಳಿ ನಿಲ್ಲಿಸಿದಂತೆ ಅನಿಸುತ್ತಿದೆ.. :)

    ನಿಮ್ಮ ಪ್ರೀತಿಯು ಮತ್ತು ಅವಳ ಪ್ರೀತಿಯು ಎರಡೂ ಸತ್ಯವೇ ಆಗಿದ್ದರೆ ನಮ್ಮ ಒಂದು ಸಲಹೆ.. ನೇರ ನೇರ ಮಾತುಗಳು ಇಲ್ಲಿ ಅತ್ಯವಶ್ಯಕ ಮತ್ತು ಲೆಕ್ಕಾಚಾರದ ಜೀವನಗಳ ಕುರಿತು ಒಂದು ದಿನ ಪೂರ್ತಿ ಅವಳೊಂದಿಗೆ ಮಾತನಾಡಿ ನಿರ್ಧಾರ ಮಾಡಿಕೊಳ್ಳಿ... ನೆನಪುಗಳ ಜೊತೆಯಲ್ಲಿ ಬಾಳುವುದೋ ಅಥವಾ ಭಾವನೆಗಳ ಮತ್ತು ಮನಸ್ಸುಗಳ ಜೊತೆ ಜೊತೆಯಲ್ಲಿ ಬದುಕುವುದೋ.. ಎಂದು... :)

    ನಾವು ಈಗಷ್ಟೇ ಒಂದು ಕವನ ಬರೆದಿದ್ದೆವು.. ಅದು ಇಲ್ಲಿ ನೆನಪಾಯಿತು... ಕೆಲವು ಸಾಲುಗಳು ನಿಮಗಾಗಿ ಇಲ್ಲಿ ಹಾಕುತ್ತಿದ್ದೇವೆ... ಆದರೆ ನಿಮಗಾಗಿ ಸ್ವಲ್ಪ ಅದಲು ಬದಲು ಮಾಡಿರುವ ಸಾಲುಗಳು.. ಅದು ಸ್ನೇಹವನ್ನು ನೆನೆದು ಬರೆದ ಕವನ.. ನಿಮಗಾಗಿ ಇಲ್ಲಿ ಮಾತ್ರ ಪ್ರೀತಿಯ ಕವನವಾಗಿ ಬದಲಾವಣೆಯ ಮಾಡಿ ಹೇಳಿರುವುದು.. :)

    ಬಾಳೋದು ಚದುರಂಗದಾಟ..
    ಅದರಲ್ಲಿ ಬಹು ಮುಖ್ಯ ಪಾತ್ರ
    ರಾಜ ರಾಣಿ ..
    ರಾಣಿಯೇ ಅಲ್ಲಿ ರಾಜನಿಗೆ ಕಾವಲು
    ನೀನೇ ಈಗ..
    ನಮ್ಮ ಈ ಸುಂದರ ಪ್ರೀತಿಯನ್ನು
    ಜೀವಂತ ಉಳಿಸಲು ಕಾವಲು.. :)

    Prasad V Murthy...
    ಅದೇನೇ ಆಗಲಿ ನಿಮ್ಮ ಗೆಳತಿಗೆ ಜನುಮದಿನದ ಶುಭಾಶಯಗಳು
    ಮತ್ತು ನಿಮ್ಮ ಪ್ರೇಮದ ಹುಟ್ಟು ಹಬ್ಬಕ್ಕೂ ಕೂಡ ಶುಭಾಶಯಗಳು..
    ಹಾಗೂ ನಿಮ್ಮ ಜನುಮದಿನದ ಶುಭಾಶಯಗಳ ಜೊತೆಯಲ್ಲಿ
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. 2012.. :)

    ReplyDelete
  5. ಪ್ರೀತಿಯ ಪಳಯುಳಿಕೆಗಳು ನಿರಂತರ ಕಾಡುವ ಹಚ್ಚ ಹಳೇ ನೋವುಗಳು.

    ವಿಷಾದ ಮಾಗಿ ಹರ್ಷವಷ್ಟೇ ನಿಮಗೆ ಹೊಸ ವರ್ಷದ ದಿನಚರಿಯಾಗಲಿ.

    ReplyDelete
  6. ಸತ್ತಾರಣ್ಣ ನೀವು "ಕಪ್ಪು ಗುಲಾಬಿ" ಎಂದ ತಕ್ಷಣ ಮನಸ್ಸಿಗೆ ಸ್ವಲ್ಪ ನೋವೆನಿಸಿತು ಆದರೆ ಅದೇ ವಾಸ್ತವ..:( ಆಕೆ ಬಿಟ್ಟುಹೋಗಲು ಏನು ಕಾರಣವೋ ನನಗೂ ಸರಿಯಾಗಿ ತಿಳಿಯದು ಒಟ್ಟಿನಲ್ಲಿ ನಮಗೆ ನಮ್ಮನ್ನುಳಿಸಿಕೊಳ್ಳುವ ಋಣವಿಲ್ಲವೆಂದು ಕಾಣುತ್ತದೆ.. ಒಮ್ಮೊಮ್ಮೆ ನಿಮ್ಮ ಮಾತು ನಿಜವೆನಿಸುತ್ತದೆ, ಏನಾದರಾಗಲಿ ಎದುರಿಸಲು ನಿಂತಮೇಲೆ ಹಿಂದಿರುಗಲಾಗದು ಬಂದದ್ದು ಬರಲಿ "ನಡೆ ಮುಂದೆ, ನಡೆ ಮುಂದೆ" ಎಂದು ಸಾಗುತ್ತಿರುವುದಷ್ಟೆ.. ನನ್ನ ಲೇಖನ ಇಷ್ಟು ಚೆಂದವಾಗಿ ಮೂಡಿಬರಲು ತಿದ್ದಿ ತೀಡಿದ ನಿಮಗೆ ನಾನು ಅಭಾರಿ..:))) ಪ್ರೀತಿಯ ಧನ್ಯವಾದಗಳು ನಿಮಗೆ..:)))

    ReplyDelete
  7. ತುಂಬು ಮನದ ಧನ್ಯವಾದಗಳು ಪ್ರಶಾಂತಣ್ಣ..:))) ಲೇಖನದಲ್ಲಿ ಜನವರಿ ೧ ಹೇಗೆ ನನ್ನ ಜೀವನದಲ್ಲಿ ನೆನಪಿನಲ್ಲುಳಿಯುವ ದಿನ ಎಂಬುದನ್ನು ಈ ರೀತಿಯಾಗಿ ನಮೂದಿಸಿದೆ.. ಸ್ಪಷ್ಟತೆಗೆ ಆಕೆ ನನ್ನೊಂದಿಗಿಲ್ಲ ಎಂದು ಕಡೆಯಲ್ಲಿ ಸೇರಿಸಿದೆನಷ್ಟೆ.. ಕೆಲವು ಪ್ರೀತಿಗಳು ಯಾವುದೆ ಕಾರಣ ಇಲ್ಲದೆಯೂ ಒಡೆಯುತ್ತವೆ ಸ್ವಲ್ಪ ಅಜಾಗರೂಕತೆ, ಕಮ್ಯುನಿಕೇಷನ್ ಗ್ಯಾಪ್, ನಮ್ಮ ನಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿ ಒಬ್ಬರೆಡೆಗೆ ಒಬ್ಬರು ಸಾಕಷ್ಟು ಮಟ್ಟಿಗೆ ಗಮನ ಹರಿಸದಿರುವುದು(ಅದರರ್ಥ ಪ್ರೀತಿ ಇಲ್ಲವಾಯಿತೆಂದಲ್ಲ), ಇಲ್ಲ ಮನೆಯವರು ನಮ್ಮ ನಮ್ಮ ಕಾಲುಗಳ ಮೇಲೆ ನಾವು ನಿಂತ ನಂತರ ಮುಂದುವರೆಯಬುಹುದೆಂದು ಹೇಳಿರಬಹುದು.. ಎಲ್ಲಕ್ಕೂ ಕಾಲವೇ ಉತ್ತರಿಸಬೇಕು.. ’ಕಾಲಾಯಾ ತಸ್ಮೈ ನಮಃ’..

    ReplyDelete
  8. ಬದರಿ ಸರ್ ನಿಮ್ಮ ಹಾರೈಕೆಯನ್ನು ಗಮನಿಸಿದ ಮೇಲೆ ವಿಷಾದ ಮಾಗಿದ ನಂತರ ಹರ್ಷದ ಹೊನಲರಿಯಬಹುದೆಂಬ ಆಸೆ ಚಿಗುರೊಡೆದಿದೆ.. ನಲ್ಮೆಯ ಧನ್ಯವಾದಗಳು ನಿಮಗೆ..:)))

    ReplyDelete