ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday, 27 December 2011

ಅಹಂ ಬ್ರಹ್ಮಾಸ್ಮಿಹುಟ್ಟಿನಿಂದ ಪಡೆದು ತಂದೆ
ಸಾವಿರಾರು ಬಂಧಗಳ...
ಅಪ್ಪನಿಂದ ಪಡೆದವು
ಅಜ್ಜ-ಅಜ್ಜಿ, ಚಿಕ್ಕಪ್ಪ,
ದೊಡ್ಡಪ್ಪ, ಅತ್ತೆ...
ಅಮ್ಮನಿಂದ ಪಡೆದವು
ಅಜ್ಜ-ಅಜ್ಜಿ, ಚಿಕ್ಕಮ್ಮ,
ದೊಡ್ಡಮ್ಮ, ಮಾವ...
ಇಬ್ಬರಿಂದಲೂ ಪಡೆದವು
ಅಣ್ಣ-ಅಕ್ಕ, ತಮ್ಮ-ತಂಗಿ...
ನಿನಗಾಗಿ ಮಿಡಿದ
ಹೃದಯಗಳೆಷ್ಟು ಇಲ್ಲಿ..?
ಎಲ್ಲರವರವರ ಅನುಕೂಲತೆಗಳಿಗೆ
ಜೋತು ಬಿದ್ದವರು,
ಬಣ್ಣ ಕಟ್ಟಿಕೊಂಡು ಕುಣಿವರು,
ಹೊಗಳುವರು ನೀನೇ ಇಂದ್ರ-ಚಂದ್ರ
ನಂಬಬೇಡವೋ ಮೂಢ
ನಂಬಿಕೆಯ ಬೆಟ್ಟವೇರಿಸಿ
ಆಳ ನೋಡುವ ಹುನ್ನಾರ,
ನಿನಗಾಗಿ ಮಿಡಿದ ಹೃದಯವೊಂದೆ,
ಎದೆಯ ಮೇಲೆ ಕೈಯಿಟ್ಟು
ಕೇಳು ಅದರ ಬಡಿತವ,
ನಿನ್ನಿರುವ ಸಂಕೇತಿಸುವ ಮಿಡಿತವ...

ಬದುಕುವ ರೀತಿ-ನೀತಿಗಳು
ಕಲ್ಪಿಸಿದವು ನೂರಾರು ಅನುಬಂಧಗಳ,
ಶತ್ರು-ಮಿತ್ರ, ಗೆಳೆಯ-ಗೆಳತಿ,
ನಲ್ಲೆ ಹೆಂಡತಿ,
ಮಕ್ಕಳು-ಮರಿಗಳು,
ಸಹವರ್ತಿಗಳು,
ಎಲ್ಲವೂ ಸಹಜವೇ, ಸಹ್ಯವೇ...
ಆದರೆ ಅವರವರ
ಬದುಕು ಅವರವರಿಗೆ,
ಸಮಾನಾಂತರ ರೇಖೆಯ
ಬಾಳು ನಮ್ಮದು
ಸಂದಿಸುವುದನಂತದಲಿ...
ಮುಖ ನೋಡಿ ನಗುವೆವು,
ಅಳು ನೋಡಿ ಮಿಡಿವೆವು...
ಮತ್ತದೇ ನಾಟಕವೇ..!
ಬದುಕೊಂದು ನಾಟಕರಂಗ
ವಿಧಿಯದರ ಸಾಹೇಬ..!

ಬಂಧ-ಅನುಬಂಧಗಳಲ್ಲಿ
ಸಿಲುಕಿದ ಮೀನಾದೆ,
ಸಾಧನೆಯು ಶೂನ್ಯವಾಗಿ,
ದುರಾಸೆಯಲ್ಲಿ ನಿರಾಸೆಯ ಮೂಟೆ ಹೊತ್ತು
ಸವೆಸಿರುವೆ ಬದುಕಹಾದಿ,
ವರ್ಷಗಟ್ಟಲೆ ಉಸಿರಾಡಿದ್ದೀ,
ಆದರೆ ಬದುಕಿದ ಕ್ಷಣಗಳೆಷ್ಟು..?
ನಿನಗಾಗಿ ನಿನ್ನ ಹೃದಯ
ಬಡಿದ ಬಡಿತಗಳೆಷ್ಟು..?
ಅನಂತದಲ್ಲಿನ ಬದುಕಿಗಾಗಿ
ಕೂಡಿಟ್ಟ ಪುಣ್ಯದ ಗಂಟುಗಳೆಷ್ಟು..?
ಮಾನವನ ಬದುಕು
ನೀರಮೇಲಿನ ಗುಳ್ಳೆ..!
ಇನ್ನಾದರೂ ಬದುಕಬಾರದೆ ಬದುಕ..?
ನಿನಗಾಗಿ, ನಿನ್ನೊಳಗಿನ
ಆತ್ಮದ ಪರಮಾತ್ಮನ ಸಂತೃಪ್ತಿಗಾಗಿ...
ಅಹಂ ಬ್ರಹ್ಮಾಸ್ಮಿ...!

- ಪ್ರಸಾದ್.ಡಿ.ವಿ.
---------------------------------------------------------------------------------------------------
ಕೇವಲ ಜಂಜಡಗಳಲ್ಲಿ ಸಿಲುಕಿ ನರಳದೆ ನಿಮ್ಮ ಮನಸ್ಸಿನ ಸಂತೋಷಕ್ಕೆ ಬದುಕ ಕಟ್ಟಿಕೊಳ್ಳಬೇಕು.. ನಗು, ಅಳು, ಪ್ರೀತಿ, ನಿರಾಶೆ, ನೋವು, ಯಶಸ್ಸು ಎಲ್ಲವು ಸಮ್ಮಿಳಿತಗೊಂಡ ಬಾಳಾಗಬೇಕು ನಮ್ಮದು.. ಹೊಸ ಹೊಸ ತಪ್ಪುಗಳನ್ನು ಮಾಡಬೇಕು ಮತ್ತು ಅವುಗಳಿಂದ ಪಾಠ ಕಲಿಯಬೇಕು, ತಪ್ಪುಗಳು ಗತಿಸಿದವೆಂದು ಚಿಂತಿಸುವ ಅಗತ್ಯವಿಲ್ಲ ಯಾಕೆಂದರೆ ಈ ರೀತಿಯ ಪೆದ್ದುತನಗಳು ಜೀವನದಲ್ಲಿಲ್ಲದಿದ್ದರೆ ವಯಸ್ಸಾದ ಮೇಲೆ ನೆನೆಸಿ ನಗಲು ಕಾರಣಗಳೇ ಉಳಿಯದು.. ತಪ್ಪು ಮತ್ತು ಬದಲಾವಣೆಗಳು ಹರಿಯುವ ನೀರಿನಂತೆ..! ಬದುಕನ್ನ ಸಹಜವಾಗಿ ನಿರ್ಮಿಸಕೊಳ್ಳಬೇಕು, ಕೃತಕತೆ ಆದಷ್ಟು ಕಡಿಮೆಯಾಗಲಿ ಎಂಬುದು ಕವಿತೆಯ ಆಶಯ..

8 comments:

 1. ಓದಿ ಆನಂದಿಸಿದೆ ಪ್ರಸಾದ್,ನೋವು ನಲಿವು ,ಹತಾಶೆ,ಸಿಟ್ಟು,ಆಕ್ರೋಷ ಗಳು ಮುಂದಿನ ಜೀವನಕ್ಕೆ ದಾರಿ ಮಾಡಿವೆ.ಬದುಕು ಸ್ಪುರಣಗೊಳ್ಳಬೇಕಾದರೆ ಈ ಎಲ್ಲವೂ ಸಹಜ ಮತ್ತು ವಾಸ್ತವ ಸತ್ಯ.ಕವಿತೆಗೆ ಮನದಲ್ಲಿರುವ ಅಹಮ್ಮಿಕೆಯನ್ನು ವಿಷಯ ವಸ್ತುವಾಗಿಸಿ ಹೆಣೆದಿದ್ದೀರಿ.
  ನಂಬಬೇಡವೋ ಮೂಢ
  ನಂಬಿಕೆಯ ಬೆಟ್ಟವೇರಿಸಿ
  ಆಳ ನೋಡುವ ಹುನ್ನಾರ,
  .......ಈ ಸಾಲುಗಳು ನನಗೆ ಮೆಚ್ಚಿಗೆಯಾಯಿತು.ನಮ್ಮನ್ನೆ ನಾವು ಎಚ್ಚರಿಸಿಕೊಳ್ಳದಿದ್ದರೆ ಮುಗ್ಗರಿಸಿ ಬೀಳುವೆವೆಂಬ ನಿಮ್ಮ ಖಾಳಜಿಯ ಸಾಂತ್ವನ ಹಿತ ನೀಡುವುದು.

  ReplyDelete
 2. ಆಧುನಿಕ ಮನುಷ್ಯ ಬದುಕ ಹಾದಿಯಲ್ಲಿ ಎಲ್ಲಿಗೆ ಹೊರಟಿದ್ದಾನೆ ಎನ್ನುವುದನ್ನ ಅವಲೋಕಿಸಿದಾಗ ನಮಗೆ ಕಾಣಸಿಗುವಂತಾದ್ದು - ಪ್ರೀತಿರಾಹಿತ್ಯತೆ, ಹತಾಶೆ, ಅಸಂತೃಪ್ತಿ, ದುರಾಸೆ. ಕೈಗೆ ನಿಲುಕುವಷ್ಟು ಬದುಕಿನ ಮೌಲ್ಯಗಳು ಬದಲಾವಣೆಗೊಂಡ ಸನ್ನಿವೇಶದಲ್ಲಿ, ನಮ್ಮನ್ನು ನಾವೇ ಕಾರಿರುಳ ಕೂಪದತ್ತ ದೂಡಿಕೊಳ್ಳುತ್ತಿದ್ದೇವೆ. ಬದುಕ ಪಯಣ ಪ್ರೀತಿ, ವಾತ್ಸಲ್ಯ, ನೆಮ್ಮದಿಗಳನ್ನು ಗಾಳಿಗೆ ತೂರಿ 'ಗಣಿತ'ದಂತೆ ಕೂಡಿ ಕಳೆವ ಯಾಂತ್ರಿಕತೆಯತ್ತ ಸಾಗುತ್ತಿದೆ ಸಂತೋಷವೆಂಬ ತೊಟ್ಟಿಲ ಸರಪಳಿ ಕಳಚಿಕೊಂಡು.
  ಹಾಗಾದಿರಲಿ ಎಂಬ ಆಶಯ ನಿಮ್ಮ ಕವಿತೆಯಲ್ಲಿ ಕಂಡು ದಿಘ್ಮೂಡನಾದೆ ಪ್ರಸಾದ್. ಹೃದಯದಲ್ಲಿ ಶರಣಾಗತಿ, ಕೃತಜ್ಞತೆಯ ಭಾವ ಸುಳಿದು ಮನಸಿನ ಅಹಂ ಅಳಿದು, ಬದುಕಿನ ಮೌಲ್ಯಗಳಿಗೆ ಒಂದು ಸಾರಿ ತಲೆ ಬಾಗಿ ಜೀವನವನ್ನು ಸುಲಭವಾಗಿ ಗೆಲ್ಲೋಣ ಎಂಬ ಸಾರ ಹೊತ್ತು ನಿಂತಿದೆ.

  ReplyDelete
 3. ಬಾಳಿನ ಗೋಳಿನ.. ಸುಂದರ ಕವನ..
  ನುಡಿದಿರಲು ನಿಮ್ಮ ಮನ
  ಎಲ್ಲ ವಿಷಯಗಳ ಸಮ್ಮಿಲನ
  ಅಗುಹುದು ಸಂಭಂದಗಳ ಅನಾವರಣ

  ಮಾಡಿರುವಿರಿ ನೆಂಟರುಗಳ ಪರಿಚಯ
  ಒಡಹುಟ್ಟುವವರ ಕೆಲವು ವಿವರಣೆಯ
  ನಂತರದೊಳು ಬಾಳಿನ ಅರ್ಥ ವಿಸ್ಮಯ
  ಹೇಳಲು ಹೀಗೆ ಕಾರಣವಿದೆ ಕೊನೆಯ ವಿಷಯ

  ಮುಂದೇನೋ ಹಿಂದೇನೋ ಬ್ರಹ್ಮ ಸೃಷ್ಟಿಯ ಮಾಯೆ
  ನಿಮ್ಮ ಕವಿತೆಯ ಅಂತ್ಯದಲ್ಲಿ ಸ್ವಾರ್ಥ ಬದುಕಿನ ಛಾಯೆ
  ಸಂಪೂರ್ಣ ಸಾಮಾಜಿಕ ಚಿಂತನೆಯಲ್ಲಿ ಬರೆದು ಈ ಕವಿತೆಯ
  ಕೊಟ್ಟಿರುವಿರಿ ಸ್ಪೂರ್ತಿಯ ಅರ್ಥ ಸಂಗತಿಗಳ ಸೂಚನೆಯ

  ಹೇಳುವುದೆಲ್ಲಾ ಹೇಳಿದ ಮೇಲೆ ..
  ಮತ್ತೇನು ಉಳಿದಿಲ್ಲ ಹೇಳಲು ತಾತ್ಪರ್ಯ.
  ಕವನದ ವಿಷಯವನ್ನು ಮನಸ್ಪೂರ್ವಕ ಮೆಚ್ಚಿ
  ಕವಿ ಮನದ ಆಲೋಚನಗೆ ಒಂದು ಸಲಾಮ್ ನಮಸ್ತೆ.. :)


  "ಓಂ ಶ್ರೀ ಗಣೇಶಾಯ ನಮಃ"
  "ಓಂ ಬ್ರಹ್ಮ ದೇವಾಯ ನಮಃ"
  "ಓಂ ಶ್ರೀ ಯೋಗೀಶ್ವರಾಯ ನಮಃ"
  "ಓಂ ನಮಃ ಶಿವಾಯ"

  || ಪ್ರಶಾಂತ್ ಖಟಾವಕರ್ ||

  ReplyDelete
 4. ಚೆಂದವಾದ ಕವಿತೆಯ ವಿಶ್ಲೇಷಣೆ ಸೋಮಣ್ಣ, ಪ್ರೀತಿಯ ಧನ್ಯವಾದಗಳು ನಿಮಗೆ..:))) ಈ ಕವಿತೆಗೆ ನಿಜವಾಗಲು ವಿಷಯ ಒದಗಿಸಿದ್ದು: ನನಗೂ ಈ ಸಾವು ನೋವುಗಳೆಂದರೆ ಮನ ಮಿಡಿಯುತ್ತದೆ, ದುಃಖ ಉಮ್ಮಳಿಸಿ ಬರುತ್ತದೆ.. ಆದರೆ ಸಾವು ನೋವುಗಳು ಜೀವನಚಕ್ರದ ಅವಿಭಾಜ್ಯ ಅಂಗಗಳು.. ಆತ್ಮೀಯರ ಸಾವೊಂದು ಸಂಭವಿಸಿದ ತಕ್ಷಣವೇ ಜೀವನವೇ ಮುಗಿದು ಹೋಯ್ತು ಎಂಬ ಹತಾಶೆಯಲ್ಲಿ ಮುಳುಗುತ್ತಾರೆ ಜನ ಆದರೆ ಜೀವನ ಚಕ್ರದಲ್ಲಿ ಸಾವು-ನೋವುಗಳು ಸಹಜವೇ, ಬುದ್ಧನ ನುಡಿಗಳಂತೆ "ಸಾವಿರದ ಮನೆ ಯಾವುದು?".. ಈ ಎಲ್ಲಾ ನೋವುಗಳನ್ನು ಮೆಟ್ಟಿ ಸಂತೋಷದೆಡೆಗೆ ತುಡಿವುದೇ ಜೀವನ ಎಂಬ ಭಾವಗಳನ್ನು ಗಟ್ಟಿಗೊಳಿಸಲು ಈ ಎಲ್ಲಾ ಸಂಬಂಧ-ಅನುಬಂಧಗಳ ಬಗ್ಗೆ ತಟಸ್ಥ ಭಾವ ಅಗತ್ಯ ಮತ್ತು ಇರುವವರೆಗೂ ಸಂತೋಷದಿಂದ ಬದುಕಬೇಕೆಂಬ ಆಶಯವನ್ನಿಟ್ಟುಕೊಂಡು ಈ ಕವಿತೆಯನ್ನು ಹೆಣೆದೆ.. ಮಾನವನ ಜೀವವೆಂಬುದು ನೀರಮೇಲಿನ ಗುಳ್ಳೆ, ಇಂದು ಅವರು ನಾಳೆ ನಾವು..! ನನ್ನ ಅಜ್ಜ ಬಾಳಿನ ಮುಸ್ಸಂಜೆಯಲ್ಲಿದ್ದಾರೆ.. ನಾನು ಹೇಳಿದ, "ಜೀವನದಲ್ಲಿ ಎಲ್ಲವನ್ನು ಅನುಭವಿಸಿಯಾಗಿದೆ, ಎಲ್ಲ ಜವಬ್ಧಾರಿಗಳನ್ನು ನಿಭಾಯಿಸಿ ಆಗಿದೆ ಹೊರಡಲಿ ಬಿಡಿ" ಎಂದು ಅದಕ್ಕೆ ನನ್ನಮ್ಮ ಮತ್ತು ಅಜ್ಜಿ, "ಬಾಯಿಗೆ ಬಂದಂತೆ ಒದರಬೇಡ, ನಾವು ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ" ಎಂದು.. ಜೀವನ ಅನುಭವಿಸಿ, ವಯಸ್ಸಾದ ಕಾಲಕ್ಕೂ ವ್ಯಾಮೋಹವೇ? ದೇವರು ಕರೆದಾಗ ಹೋಗುವುದೇ ಅಲ್ಲವೆ? ಕವಿತೆ ಮನಮುಟ್ಟಿರುವುದು ಕಂಡು ಖುಷಿಪಟ್ಟೆ.. ಪ್ರೀತಿಯ ಧನ್ಯವಾದಗಳು ನಿಮ್ಮ ಆರೈಕೆಗೆ..:)))

  ReplyDelete
 5. ಕವಿತೆಯನ್ನು ಸಮರ್ಥವಾಗಿ ವಿಮರ್ಶಿಸಿದೆ ನಿಮ್ಮ ಪ್ರತಿಕ್ರಿಯೆ ಪುಷ್ಪಣ್ಣ, ನಿಮಗೆ ತುಂಬು ಮನದ ಧನ್ಯವಾದಗಳು..:))) ಇಲ್ಲಿ ಯಾವುದೇ ವೇಧಾಂತವನ್ನಾಗಲಿ, ಸಿದ್ಧಾಂತವನ್ನಾಗಲಿ ಹೇಳಲು ಪ್ರಯತ್ನಿಸಿಲ್ಲ ಕೇವಲ ಸರಳ ಜೀವನದ ಔಚಿತ್ಯಗಳ ಬಗ್ಗೆ ಬೆಳಕು ಚೆಲ್ಲಲು ಪ್ರಯತ್ನ ಪಟ್ಟಿದ್ದೇನೆ.. ಮನಸ್ಸನ್ನು ಸಂತೋಷವಾಗಿಡಲು ಪ್ರಯತ್ನಿಸಬೇಕು ಅದಕ್ಕಾಗಿ ಕೆಲವು ತಪ್ಪುಗಳಾದರೂ ತಪ್ಪುಗಳು ಗತಿಸಿದವೆಂದು ಚಿಂತಿಸುವ ಅಗತ್ಯವಿಲ್ಲ ಯಾಕೆಂದರೆ ಈ ರೀತಿಯ ಪೆದ್ದುತನಗಳು ಜೀವನದಲ್ಲಿಲ್ಲದಿದ್ದರೆ ವಯಸ್ಸಾದ ಮೇಲೆ ನೆನೆಸಿ ನಗಲು ಕಾರಣಗಳೇ ಉಳಿಯದು.. ಆದ್ದರಿಂದ ಮಾನವನ ಕೆಟ್ಟ ಗುಣಗಳಾದ ಅಹಂ, ನಾನು-ನನ್ನದೆಂಬ ವ್ಯಾಮೋಹ ತೊರೆದು ಬದುಕನ್ನು ಹಸನಾಗಿಸಿಕೊಳ್ಳುವ ಎಂಬ ಆಶಯ.. ನಿಮ್ಮ ಪ್ರತಿಕ್ರಿಯೆ ಮನಸ್ಸಿಗೆ ಇನ್ನಷ್ಟು ಆತ್ಮವಿಶ್ವಾಸ ತುಂಬಿದೆ, ಪ್ರೀತಿಯ ಧನ್ಯವಾದಗಳು ನಿಮಗೆ..:)))

  ReplyDelete
 6. ನನ್ನನ್ನು ಅಭಿನಂದಿಸಲು ಮತ್ತೊಂದು ಕವಿತೆಯನ್ನೇ ಕೊಡುಗೆಯಾಗಿ ನೀಡಿದ್ದು ಇನ್ನಷ್ಟು ಖುಷಿ ತಂದಿತು ಪ್ರಶಾಂತಣ್ಣ (Prashanth P Khatavakar) ತುಂಬು ಮನದ ಧನ್ಯವಾದಗಳು ನಿಮಗೆ.. "ಸರ್ವಂ ಗುರುಸಮರ್ಪಯಾಮಿ.." :)))

  ReplyDelete
 7. ಪೊಳ್ಳು ಭ್ರಮಾ ಜೀವಿಗಳಿಗೆ ಛಡೀ ಏಟು. ದೇಹ ತನ್ನ ಜೀವಿತ ಕಾಲದಲ್ಲಿ ಸಂಪರ್ಕಕ್ಕೆ ಬರುವ ಸಂಬಂಧಗಳೆಷ್ಟು ಪೊಳ್ಳು ಎಂಬುವಂತೆ ಸವಿವರವಾಗಿ ವಿವರಿಸಿದ್ದೀರ.

  ಯಾರನೋ ಮೆಚ್ಚಿಸಲು ಬದುಕೋ ಬದಲು, ಕಾರಣಕರ್ತನಾದ ಭಗವಂತನು ನೆಚ್ಚಿಸುವಂತೆ ಬದುಕಬೇಕು ಎಂಬ ನಿಮ್ಮ ಮಾತು ಶ್ರೇಷ್ಟ ಸಂದೇಶ.

  ReplyDelete
 8. ತುಂಬು ಮನದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಬದರಿ ಸರ್..:))) ಕವಿತೆಯನ್ನು ಆಶಯವನ್ನು ಸರಳ ಸುಂದರವಾಗಿ ಅರ್ಥೈಸಿದ್ದೀರಿ..

  ReplyDelete