ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 12 February 2014

ಕ್ಷಮಿಸು ನಾ ಸಾವ ಬಯಸಿದ್ದೇನೆ!


ಕುಡಿ ನೋಟ ಕುಣಿವಾಗ
ನಸು ನಗೆಯ ತಂಪಲ್ಲಿ
ಮೈಮನಸು ಅರಳಿ,
ನಿನ್ನ ಕೊರಳಿಗೆ
ಜೋತು ಬಿದ್ದಿದೆ ಹೃದಯ,
ಏನೆಂದು ರಮಿಸಲದನು?
ಮೀರುವ ತೀರದಲ್ಲಲ್ಲದಿದ್ದರೂ,
ಸೇರುವ ತೀರದಲ್ಲಿ
ನಾ ನನ್ನ ಸಾವ ಬಯಸಿದ್ದೇನೆ!

ಕಾದ ಬಯಕೆಗಳಿಗೂ,
ಕಾಮ ಪ್ರೇಮದ ಹಸಿವು,
ಅರೆಗಳಿಗೆಯವಕಾಶ
ಸಿಕ್ಕರೂ ಸಾಕು,
ಕಾಮವನು ದಾಟಿ
ಪ್ರೇಮವನು ಮೀಟಿ
ಜೀವ ಕೂಡುವ ಕನಸು ಕಂಡಿದ್ದೇನೆ!
ಆಕಾಶ ಸೆರಗಿಗೆ ಉಸಿರಾನಿಸಿದೆ
ನಿನ್ನ ಮಡಿಲ ಕೊಡು,
ನಾ ನನ್ನ ಸಾವ ಬಯಸಿದ್ದೇನೆ!

ಬೆರಳ ತುದಿಯ ಕಡೆ ಸ್ಪರ್ಷ,
ತೊನೆದು ತೂಗಿದ
ಮುಂಗುರುಳ ಹಾಡು,
ಪದಗಳಾಡದ ನನ್ನ ಪಾಡು,
ಖಾಲಿ ಹಾಳೆಯ ಪ್ರೇಮಕವನ,
ಕನಸು ಹಿಡಿದ ಜಾಡಿ
ಎಲ್ಲವನ್ನೂ ನಿನ್ನ ಉಡಿಗೆಸೆದು
ನಿರಾಯುಧನಾಗಿ ನಿಂತೆ
ಎದೆಗೂಡು ಖಾಲಿಯಿಡು,
ನಾ ನನ್ನ ಸಾವ ಬಯಸಿದ್ದೇನೆ!

ನನ್ನಲ್ಲಿ ನಾ ಸತ್ತು, ನಿನ್ನಲ್ಲಿ ಹುಟ್ಟುತ್ತೇನೆ,
ಪ್ರೇಮವೆಂಬುದಿದ್ದರೆ ಉಳಿಯಲಿ,
ಚಿರವಾಗದ್ದಿದ್ದರೆ ಅಳಿಯಲಿ!
ಹೇಗಿದ್ದರೂ
ನಾ ನನ್ನ ಸಾವ ಬಯಸಿದ್ದೇನೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

No comments:

Post a Comment