ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

46682

Friday, 8 November 2013

ಬೆಳಕು ಬೆತ್ತಲು!


ಬೆತ್ತಲಾಗಬೇಕು ನಾನು,
ಅಂಜಿಕೆಗಳುಳಿಯದಂತಹ
ಹೊಳಪ ಬೆತ್ತಲು!

ಬೆತ್ತಲೆಂದರೆ,
ಕಪ್ಪು ಕತ್ತಲೆಯ ಬೆತ್ತಲಲ್ಲ,
ಪಚ್ಚೆ ಬಿಳಿಯ ಬೆಳಕ ಬೆತ್ತಲು,
ತೆರೆದುಕೊಂಡಷ್ಟೂ
ಬರಿದಾಗುವಂತಹ ಒಡಲು,
ಮರು ಕೃಷಿಗೆ
ಫಲವತ್ತಾಗುವ ಬಯಲು!

ಬೆತ್ತಲೆಂದರೆ,
ಸಂಚಿಯಿಸಿಕೊಂಡ
ಕರ್ಮಗಳ ಹೊಳೆಯಲ್ಲಿ
ಹುಣಸೆ ತೊಳೆದು,
ಹುಳಿ ಇಂಗಿದ ಹುಣಸೆಯ ಜುಂಗಲ್ಲಿ
ಬೆಳಕ ತೊಳೆದು,
ಬೆತ್ತಲನ್ನು ಬೆಳಕಿಗೂ, ಬೆಳಕನ್ನು ಬೆತ್ತಲೆಗೂ
ಆರೋಪಿಸಿಬಿಡುವ ಕ್ರಿಯೆ, ಪ್ರಕ್ರಿಯೆ!

ಬೆತ್ತಲೆಂದರೆ,
ಪ್ರೇಮದೊಂದಿಗೆ ಕಾಮವು,
ಕಾಮದೊಂದಿಗೆ ಪ್ರೇಮವೂ ಜಿದ್ದಿಗೆ ಬಿದ್ದು,
ನಗ್ನತೆಯೊಳಗೆ ಪ್ರೇಮಕ್ಕೆ ಬೆವರ ಗುರುತು!
ಆವೇಶವಿಳಿದ ಮೇಲೂ
ಕಣ್ಣುಗಳು ಕೂಡಿಕೊಂಡ ತುಟಿಗಳ ಬೆಸುಗೆ,
ನನ್ನೊಳಗಿನ ನಗ್ನತೆಯನ್ನು ಒಪ್ಪಿಕೊಂಡು
ಅಪ್ಪಿಕೊಳ್ಳುವ ಪ್ರೇಯಸಿಯ ಸಲುಗೆ!

ಬೆತ್ತಲೆಂದರೆ,
ಅದು ಬೆಳಕು, ನಾನು ನನಗೂ,
ಇತರರಿಗೂ ಉತ್ತರಿಸುವಗತ್ಯವನ್ನೇ
ಉಳಿಸದ ಬೆಳ್ಳಿ ಬೆಳಕು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

2 comments:

  1. ನಾನು ನನಗೂ ಇತರರಿಗೂ ಉತ್ತರಿಸುವಗತ್ಯವನ್ನೇ ಉಳಿಸದ ಬೆಳ್ಳಿ ಬೆಳಕು=ಬೆತ್ತಲು..... ಅರ್ಥಗರ್ಭಿತ ಕವಿತೆ

    ReplyDelete
  2. ನಿಜ ನಗ್ನತೆಯ ಭಾವಾರ್ಥ ಪದಪದಗಳಲ್ಲೂ ಮೈ ತುಂಬಿದೆ.

    ReplyDelete