ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday 23 March 2012

ಭಾವುಕತೆ ಮಾನವ ಜನುಮಕ್ಕಂಟಿದ ಕರ್ಮ



                 ಮನುಷ್ಯ ಏಕಿಷ್ಟು ಭಾವುಕ ಎಂದು ಒಮ್ಮೊಮ್ಮೆ ತುಂಬಾ ಯೋಚಿಸುತ್ತಿರುತ್ತೇನೆ. ಭವಿಷ್ಯತ್ತನ್ನು ಅರಸುತ್ತಾ ಹೊರಟ ಮಗನ ಕಾಲುಗಳನ್ನು ಅಪ್ಪ-ಅಮ್ಮ ತಮ್ಮ ಭಾವುಕತೆಯಲ್ಲಿ ಕಟ್ಟಿ ಹಾಕುತ್ತಾರೆ. ಮಗ ಇವರ ಬಂಧನಕ್ಕೆ ಸೋತು ಇದ್ದುದ್ದರಲ್ಲೇ ಜೀವನ ಕಟ್ಟಿಕೊಳ್ಳುವ ಜತನಕ್ಕೆ ಜೋತು ಬಿದ್ದು ಭಾವುಕತೆಗೆ ಶರಣಾಗುತ್ತಾನೆ. ಮಹಾತ್ವಾಕಾಂಕ್ಷೆಯೊಂದು ಕುಡಿಯೊಡೆಯುವ ಮೊದಲೇ ಪಯಣಿಗನಿಲ್ಲದೆ ಅರಿವಿಗೂ ಬಾರದೆ ಅನಾಥವಾಗುತ್ತದೆ. ಈ ಪರಿಸ್ಥಿತಿಯಲ್ಲಿ ನನಗೆ ಕವಿಯೊಬ್ಬರ ’ಅಮ್ಮ ನಿನ್ನ ಎದೆಯಾಳದಲ್ಲಿ..’ ಎಂಬ ಕವಿತೆ ನೆನಪಾಗುತ್ತದೆ. ’ದೂಡು ಹೊರಗೆ ನನ್ನ, ಓಟ ಕಲಿವೆ, ಒಳ ನೋಟ ಕಲಿವೆ, ನಾ ಕಲಿವೆ ಊರ್ಧ್ವಗಮನ.. ಓ ಅಗಾಧ ಗಗನ’ ಎಂಬ ಸಾಲುಗಳು ಮನಸ್ಸನ್ನೂ ತುಂಬಾ ಕಾಡುತ್ತಿರುತ್ತವೆ. ಇನ್ನು ಪ್ರೀತಿಯ ಅಲೆಯೇರಿ ತೇಲುವ ಪ್ರಣಯ ಪಕ್ಷಿಗಳ ಕಥೆ. ಅವರಿಬ್ಬರು ಸುತ್ತದ ತಾಣಗಳಿಲ್ಲ, ಉದ್ಯಾನಗಳಿಲ್ಲ. ಅಷ್ಟರಲ್ಲೇ ಅವರಿಬ್ಬರಲ್ಲೊಬ್ಬರಿಗೆ ಬದುಕಿನ ಅನಿವಾರ್ಯತೆಗಳು ಗಾಳ ಹಾಕಿ ಸೆಳೆವಾಗ, ವಿಧಿಯ ಬಯಲಾಟ ನಡೆದು ಅಗಲಿಕೆ ಅನಿವಾರ್ಯವಾಗುತ್ತದೆ. ಆಗಲೂ ನೆನಪುಗಳು ಮೇರೆ ಮೀರುತ್ತವೆ, ಕನಸುಗಳು ಒಡೆಯುತ್ತವೆ. ಭಗ್ನ ಪ್ರೇಮಿ ಭಾವುಕತೆಗೆ ಜೊತೆಯಾಗುತ್ತಾನೆ ಅಥವಾ ಜೊತೆಯಾಗುತ್ತಾಳೆ. ಜೀವನವನ್ನು ಕೊನೆಗಾಣಿಸಿಕೊಳ್ಳದೆ ಇದ್ದರೆ ಅದೇ ಪುಣ್ಯ. ಮನುಷ್ಯ ಏನೆಲ್ಲಾ ಸಾಧಿಸಿದ್ದಾನೆ. ನೀರಿನ ಮೇಲೂ ತೇಲುತ್ತಾನೆ, ಆಕಾಶದಲ್ಲೂ ಹಾರುತ್ತಾನೆ ಆದರೆ ಭಾವುಕತೆಗೆ ಕಣ್ಣೊದ್ದೆಯಾಗಿಸದೆ ಜೀವನವನ್ನು ದಾಟುವ ಕಲೆ ಮಾತ್ರ ಕರಗತವಾಗಲೇ ಇಲ್ಲ. ಮುಂದೆ ಆಗುವುದೂ ಇಲ್ಲ ಎನಿಸುತ್ತದೆ. ಈ ಸಮಯದಲ್ಲಿ "ಸಮುದ್ರವನ್ನು ಬೇಕಾದರೂ ಕಾಲೊದ್ದೆಯಾಗದೆ ದಾಟಬಹುದು ಆದರೆ ಕಣ್ಣೊದ್ದೆಯಾಗಿಸದೆ ಜೀವನವನ್ನು ದಾಟುವುದು ಅಸಾಧ್ಯ" ಎಂಬ ಬರಹಗಾರರೊಬ್ಬರ ಮಾತುಗಳು ನೆನಪಾಗುತ್ತವೆ.

               ಹಾಗೆ ಯೋಚಿಸಿದರೆ ಮನುಷ್ಯ ಜೀವಿ ಹೊಂದಿರುವ ಸಂಬಂಧಗಳು ಜಗತ್ತಿನ ಅನ್ಯ ಜೀವಿಗಳು ಹೊಂದಿರುವ ಸಂಬಂಧಗಳಿಗಿಂತ ತೀರಾ ಭಿನ್ನವಾಗೇನೂ ಇರುವುದಿಲ್ಲ ಆದರೆ ಅವುಗಳಿಗೆ ಕಾಡದ ಭಾವುಕತೆ ಮನುಷ್ಯರಿಗೇಕೆ ಕಾಡುತ್ತವೆ ಅಥವಾ ಅವುಗಳನ್ನು ಅರ್ಥ ಮಾಡಿಕೊಳ್ಳಲಾಗದೆ ನಾವು ಹಾಗೆಂದುಕೊಂಡಿದ್ದೇವೆಯೇ? ಏನೋ ಯಾವುದಕ್ಕೂ ಉತ್ತರ ಕಂಡುಕೊಳ್ಳಲಾಗಿಲ್ಲ. ಉದಾಹರಣೆಗೆ ನನ್ನ ಅಜ್ಜ ತೀರಿಕೊಂಡ ಆಘಾತದಿಂದ ಹೊರಬರಲು ಒಂದು ವಾರವೇ ಹಿಡಿದಿತ್ತು. ನಾನಾಗಿ ನಾನೇ ಆ ರೀತಿ ಭಾವಿಸಿಕೊಂಡಿದ್ದೆನೆ ಅಥವಾ ಅವರೊಂದಿಗಿನ ಬಂಧ ಅಷ್ಟು ಗಟ್ಟಿಯಾಗಿತ್ತೆ ಅರ್ಥವಾಗಲಿಲ್ಲ. ಆದರೆ ನಾನು ಕಂಡುಕೊಂಡ ಸತ್ಯ ಮನುಷ್ಯ ಭಾವುಕನಾಗುವುದಕ್ಕೆ ಕಾರಣ ಅವನು ವಾಸ್ತವದಲ್ಲಿ ಬದುಕುವುದಕ್ಕಿಂತ ಹೆಚ್ಚಾಗಿ ಭೂತ ಮತ್ತು ಭವಿಷ್ಯತ್ ಗಳಲ್ಲಿ ಬದುಕುತ್ತಾನೆ. ಇನ್ನೂ ಕೆಲವರು ಭ್ರಮೆಗಳಲ್ಲೂ ಉಸಿರಾಡುತ್ತಾರೆ. ಅದು ಅವರವರು ಕಂಡುಕೊಂಡ ಅಥವಾ ಕಟ್ಟಿಕೊಂಡ ಜೀವನ ಶೈಲಿಯಿರಬಹುದು. ಆದರೆ ಭಾವುಕತೆ ಬದುಕನ್ನು ಹಿಂಡುವುದು ಮಾತ್ರ ಸುಳ್ಳಲ್ಲ. ಇದನ್ನೆಲ್ಲಾ ನೋಡುವಾಗ ನನಗನ್ನಿಸುವುದು ಮನುಷ್ಯ ಮೊದಲು ಅತಿಯಾಗಿ ಭಾವಿಸಿಕೊಳ್ಳುವುದನ್ನು ಬಿಡಬೇಕು, ಜೀವಿಸುವುದನ್ನು ಕಲಿಯಬೇಕು. ನಾವಾಗೇ ನಮ್ಮ ಜೀವನವನ್ನು ಕ್ಲಿಷ್ಟವಾಗಿಸಿಕೊಳ್ಳುತ್ತಿದ್ದೇವೆ. ಬದುಕನ್ನು ಬದುಕುವುದು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದೇವೆ. ಭಾವಿಸಿಕೊಂಡದ್ದಕ್ಕಿಂತ ಜೀವನ ತುಂಬಾ ಭಿನ್ನ ಎಂಬ ಸತ್ಯವನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆಗೆ ಬಂದು ನಿಂತಿದ್ದೇವೆ ಎನಿಸುತ್ತದೆ.

            ಜೀವನ ನಮ್ಮ ಅತ್ಯುಚ್ಚ ಶಿಕ್ಷಕ, ನಮಗೆ ಬೇಡವೆಂದರೂ ತುಂಬಾ ಪಾಠಗಳನ್ನು ನಮಗೆ ಕಲಿಸುತ್ತದೆ. ಅದಕ್ಕೆ ವಿರುದ್ದವಾಗಿ ಹರಿಯುವ ಪ್ರಯತ್ನ ಮಾಡುವುದಕ್ಕಿಂತ ಅದರ ಹರಿವಿಗೆ ಒಗ್ಗಿಕೊಂಡು ಬದಲಾವಣೆಗೆ ಮನಸ್ಸನ್ನು ತೆರೆದಿಡುವುದು ಸಮಂಜಸ ಮತ್ತು ಬುದ್ಧಿವಂತ ನಡೆಯಾದೀತು. ಪ್ರೀತಿಸಿದ ಪ್ರೀತಿ ಕೈಕೊಟ್ಟ ಮಾತ್ರಕ್ಕೆ ಜೀವನ ಕೈಕಟ್ಟಿ ಕೂರುವುದಿಲ್ಲವಲ್ಲ, ಮತ್ತೆ ನಾವ್ಯಾಕೆ ತಲೆ ಮೇಲೆ ಕೈಹೊತ್ತು ಕೂರಬೇಕು ಅಲ್ಲವೆ? ಒಂದು ಮಾತ್ರ ಸತ್ಯ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಮುನ್ನಡೆಯುವ ಪ್ರಜ್ಞೆ ಇದ್ದರೆ ಜೀವನ ಸುಲಭವಾಗುತ್ತದೆ. ಜೀವನ ನಾವು ಹಿಂದೆ ಕಳೆದುಕೊಂಡಿದ್ದನ್ನೆಲ್ಲಾ ಮುಂದೆ ಸರಿದೂಗಿಸಿಯೇ ತೀರುತ್ತದೆ. ಕಾಯುವ ತಾಳ್ಮೆ ಮತ್ತು ಸಿಕ್ಕ ಅವಕಾಶಗಳನ್ನು ದೋಚುವ ಚಾಣಕ್ಷತನ ಮೈಗೂಡಿಸಿಕೊಳ್ಳಬೇಕಷ್ಟೆ. ನಾವು ಕಳೆದುಕೊಳ್ಳುವ ಎಲ್ಲವುಗಳಿಗೂ ಜೀವನ ಪರ್ಯಾಯಗಳನ್ನು ಕೊಡುತ್ತಾ ಸಾಗುತ್ತದೆ. ಪ್ರೀತಿ ಕೈಜಾರಿದರೆ, ಮತ್ತೊಬ್ಬರು ಬಂಧು ಆ ಸ್ಥಳವನ್ನು ತುಂಬುತ್ತಾರೆ. ಹಿರಿಯರು ಜವರಾಯನ ಕರೆಗೆ ಹೋಗೊಟ್ಟು ಮೂಟೆ ಕಟ್ಟಿದರೆ ಮತ್ತೊಂದು ಜೀವದ ಉಗಮದೊಂದಿಗೆ ಜೀವನ ಆ ಗ್ಯಾಪ್ ಅನ್ನು ಮುಚ್ಚುತ್ತದೆ. ಸ್ನೇಹಿತರು ಅನಿವಾರ್ಯ ಕಾರಣಗಳಿಗೆ ನಮ್ಮಿಂದ ದೂರವಾದರೆ, ಜೀವನ ಹೊಸ ಸ್ನೇಹಿತರನ್ನು ಕೊಟ್ಟು ಆ ಸ್ಥಳವನ್ನು ಭರ್ತಿ ಮಾಡುತ್ತದೆ. ಯಾರು ಯಾರಿಗೂ ಅನಿವಾರ್ಯವಲ್ಲ. ಎಲ್ಲರೂ ಕಾರ್ಯ ನಿಮಿತ್ತ ಜೊತೆಯಾಗಿರುತ್ತಾರಷ್ಟೆ. ಕಾರ್ಯ-ಕಲಾಪಗಳು ಮುಗಿದ ಮೇಲೆ ಅಗಲಿಕೆ ಅನಿವಾರ್ಯ. ಹಾಗೆ ಆ ಅಗಲಿಕೆಯ ನಂತರವೂ ಜೀವನವಿದೆ. ಹಳೆ ನೀರು ಹರಿದರೇನೇ ಹೊಸ ನೀರು ಮನಸ್ಸನ್ನು ತುಂಬುವುದು. ಎಲ್ಲರನ್ನೂ, ಎಲ್ಲವನ್ನೂ ಉಳಿಸಿಕೊಳ್ಳುವ ಭರದಲ್ಲಿ ಜೀವನ ಕಳೆದು ಹೋಗದಿರಲಿ. ಭಾವುಕತೆಗೆ ಬೆನ್ನು ಹಾಕಿ ಜೀವನವನ್ನು ರೂಪಿಸಿಕೊಳ್ಳುವತ್ತ ಮುಖ ಮಾಡಬೇಕಾಗುತ್ತದೆ. ಕರ್ಮವದು ಕಳೆದುಬಿಡಲಿ, ಪೊರೆ ಕಳಚಿಬಿಡಲಿ ನವಚೈತನ್ಯ ಪ್ರವಹಿಸಿ ಜೀವನ ಹಸನಾಗಲಿ. ಕಾಡುವ ಕರ್ಮವನ್ನು ಬೆನ್ನಿಗಿಟ್ಟು ಮುಂದಡಿಯಿಡುತ್ತಾ ಮುನ್ನಡೆದುಬಿಡಲಿ ಮನುಷ್ಯ ಕುಲ ಎಂಬ ಆಶಯ ನನ್ನದು.

- ಪ್ರಸಾದ್.ಡಿ.ವಿ.

15 comments:

  1. ಜೀವನದ ಭಾವನೆಗಳಲ್ಲಿ ಭಾವುಕತೆಯ ಭಾವವೂ ಒಂದು, ಭಾವನೆಗಳು ಅಂದರೆ ಮನಸು ಉಸುರುವ ಇಚ್ಚೆಗಳು ಅದು ಕೆಟ್ಟದ್ದು ಒಳ್ಳೆಯದು 2 ಜೊತೆಯಾಗಿಯೆ ತೆಗೆದುಕೊಳ್ಳೋದು ಸೂಕ್ತ, ಒಳ್ಳೆಯ ಭಾವನೆಯನ್ನು ತೆಗೆದುಕೊಂಡು ಮುನ್ನಡೆದಲ್ಲಿ ಜೀವನವನ್ನು ಮುದಗೊಳಿಸಬಲ್ಲುದಾದ ಖುಷಿ ನಮ್ಮದಾಗುತ್ತದೆ.ಮನಸಿನಲ್ಲಿ ಮೂಡಿದ ಎಲ್ಲಾ ಭಾವಗಳನ್ನ ಪಿಲ್ಟರ್ ಮಾಡದೆ ಸಾಗಿದಾಗ ಈ ಭಾವುಕತೆ ಕರ್ಮ ಜೀವನದಲ್ಲಿ ಎದುರುಗೊಳ್ಳುತ್ತದೆ. ಹೌದು ಭಾವುಕತೆ ಜೀವನವಲ್ಲ. ಚೆನ್ನಾಗಿದೆ ಈ ನಿಟ್ಟಲ್ಲಿ ಬರೆದ ಲೇಖನ. :)

    ReplyDelete
    Replies
    1. ರಾಘಣ್ಣ ನಿಮ್ಮ ಮಾತು ನಿಜವಾದುದು.. ಭಾವುಕತೆ ಹದವಾಗಿ ಬೆರೆತಿದ್ದರೆ ಜೀವನ ಸಮತೂಕದ್ದಾಗಿರುತ್ತದೆ ಆದರೆ ಭಾವುಕತೆಯೇ ಜೀವನವನ್ನೆಲ್ಲಾ ಆವರಿಸಿದರೆ ಭ್ರಮೆಯಲ್ಲಿ ಬದುಕಬೇಕಾಗುತ್ತದೆ.. ಭಾವಿಸಿಕೊಳ್ಳುವುದು ಬೇರೆ ಬದುಕುವುದು ಬೇರೆ.. ನಾವು ಮದುವೆಯ ಅಥವಾ ಹೊಸ ಸಂಬಂಧಗಳ ಉಗಮದಲ್ಲಿ ಅದು ನಮ್ಮ ಬದುಕನ್ನು ಹಸನಾಗಿಡುತ್ತದೆ ಎಂದು ಭಾವಿಸಿಕೊಳ್ಳುತ್ತೇವೆ ಆದರೆ ಅದು ಹಾಗೇ ಆಗಿರಬೇಕೆಂದೇನೂ ಅಲ್ಲವಲ್ಲ.. ಏಕೆಂದರೆ ಭಾವಿಸಿಕೊಳ್ಳುವುದೇ ಬೇರೆ ಬದುಕೇ ಬೇರೆ.. ಆ ನಿಟ್ಟಿನಲ್ಲಿ ಮೂಡಿ ನಿಂತ ಒಂದು ಚಿಂತನಾ ಲಹರಿ ಇದು.. ನಿಮ್ಮ ಮೆಚ್ಚುಗೆಗೆ ತುಂಬು ಮನದ ಧನ್ಯವಾದಗಳು..:)))

      Delete
  2. ಯಾವುದೋ ಭಾವುಕತೆಯಲ್ಲಿ ಹುಟ್ಟಿಕೊಂಡ ನಂಟೊಂದು ಮೊನ್ನೆ ಮೊನ್ನೆ ಕಳಚಿನಿಂತಾಗ ಮನಸು ತೊಳಲಾಟವಾಡ ತೊಡಗಿತ್ತು. ಎರಡು ದಿನ ಏನೂ ಮಾಡಲಾಗದ ಸ್ಥಿತಿ. ಆದರೆ ಕ್ಷಣದ ಧೃಡತೆ ಆ ತೊಳಲಾಟಕ್ಕೆ ಒಂದು ಸುಂದರ ಸಮಾಪ್ತಿಯನ್ನೊದಗಿಸಿದಾಗ ಮನಸು ತೃಪ್ತ. ಆ ಧೃಡ ನಿರ್ಧಾರಕ್ಕೆ ಕಾರಣ ನೀವೆ ನಿಮ್ಮೀ ಲೇಖನದಲ್ಲಿ ವಿಷದಿಸಿರುವಂತೆ "ಯಾರಿಗೂ ಯಾರೂ ಅನಿವಾರ್ಯರಲ್ಲ', ಹಾಗಿದ್ದಾಗ ಯಾರೋ ನನ್ನನ್ನು ದೂರ ಮಾಡಿದಾಗ ನಾನಂದುಕೊಂಡೆ 'ನಾನನಿವಾರ್ಯನಲ್ಲನೇನೋ ಅವರಿಗೆ'. ಈ ಘಟನೆಯೊಂದು ಹೊಸ ಅನುಭವವೆಂದುಕೊಂಡೆ ಮುಂದಿನ ನನ್ನ ಹೆಜ್ಜೆಗೆ. ನಡೆಗೆ.
    ಲೇಖನ ಸರಳ ಸುಂದರ. ಚಿಂತನಾ ಲಹರಿಯಲ್ಲಿನ ಆಶಯಗಳು ನಿಜ ಬದುಕಿಗೆ ದಾರಿದೀಪವಾಗಲಿ.

    ReplyDelete
    Replies
    1. ಪುಷ್ಪಣ್ಣ ನಿಮ್ಮ ಮಾತುಗಳಿಗೆ ಭಾವುಕನಾಗಿಬಿಟ್ಟೆ.. ನನ್ನ ಲೇಖನ ಸಾರ್ಥಕವೆನಿಸಿತು..:) ನಿಮ್ಮ ಮನಸ್ಸಿಗೆ ಸಾಂತ್ವಾನ ನೀಡಿದೆ ಎಂದರೆ ಅದಕ್ಕಿಂತ ಸಮಾಧಾನ ಬೇರೇನೂ ಇಲ್ಲ ನನಗೆ.. ಖಂಡಿತಾ ಅವರು ನಮ್ಮನ್ನು ಕಳೆದುಕೊಂಡರೆ ಕೋರಗಬೇಕಾದವರು ನಾವಲ್ಲ, ಅವರೇ.. ನಾವು ಅವರಿಗಾಗಿ ಕೂಡಿಟ್ಟ ಪ್ರೀತಿಯನ್ನು, ಮಮತೆಯನ್ನು ದಕ್ಕಿಸಿಕೊಳ್ಳದೆ ಬಡವರಾಗಿಯೇ ನಮ್ಮಿಂದ ದೂರಾದರಲ್ಲ ಆದ್ದರಿಂದ.. ’ಅವರಿಗೆ ನಾವು ಅನಿವಾರ್ಯವಲ್ಲವೆಂದಮೇಲೆ, ನಮಗೂ ಅವರು ಅನಿವಾರ್ಯರಲ್ಲ ಅಲ್ಲವೆ’.. ಆಗುವುದಲ್ಲೇ ಒಳ್ಳೆಯದಕ್ಕೆ ಎಂದು ಮುನ್ನಡೆದುಬಿಡುವುದು ಬುದ್ಧಿವಂತಿಕೆಯೇನೋ..:)
      ಪರೇಶಣ್ಣ ನಿಮ್ಮ ಮಾತುಗಳು ಬರೆಯುವ ಕೈಗಳಿಗೆ ಶಕ್ತಿ ನೀಡಿದಂತಿದೆ.. ನಿಮ್ಮೆಲ್ಲರ ಪ್ರೀತಿ ನನ್ನನ್ನು ಇನ್ನಷ್ಟು ಬರೆಯಲು ಹಚ್ಚುತ್ತದೆ..:) ನಿಮ್ಮಿಬ್ಬರಿಗೂ ನಲ್ಮೆಯ ಧನ್ಯವಾದಗಳು..:)))

      Delete
  3. ಲೇಖನ ಬಹಳ ಸರಳ ಸುಂದರವಾಗಿದೆ.. ಭಾವುಕತೆಯ ಹಲವು ಮುಖಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ.. ಬಹಳ ಹಿಡಿಸಿತು.
    ಮತ್ತಷ್ಟು ಇಂತಹ ಲೇಖನಗಳ ನಿರೀಕ್ಷೆಯಲ್ಲಿ.. ಶುಭವಾಗಲಿ ಪ್ರಸಾದಣ್ಣ:))

    ReplyDelete
    Replies
    1. ಧನ್ಯವಾದಗಳು ಪರೇಶಣ್ಣ :)ಕಾಡುವ ಭಾವಗಳನ್ನು ಹಾಗೆಯೇ ತೆರೆದಿಟ್ಟೆ, ಮನದ ಬಟ್ಟಲೊಳಗೆ ಸುರಿದದ್ದೊಂದಷ್ಟನ್ನು ಹಾಳೆಯ ಮೇಲೆ ಬರೆದಿಟ್ಟೆ :)

      Delete
  4. ಗೆಳೆಯ ತುಂಬಾ ಚೆನ್ನಾಗಿದ್ ಎಲ್ಲೋ ಒಂದು ರೀತಿ ಕಳೆದೋದ ಭಾವನೆ!

    ReplyDelete
    Replies
    1. ಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಪ್ರಕಾಶಣ್ಣ.. ಒಂದು ಚಿಂತನೆಗೆ ಬಣ್ಣ ಹಚ್ಚಿ ಹರಡಿದ್ದೇನೆ.. ನಿಮಗೆ ಹಿಡಿಸಿದ್ದು ಖುಷಿ ನೀಡಿತು..:)))

      Delete
  5. ಮನುಷ್ಯ ಭಾವುಕನಾಗುವುದಕ್ಕೆ ಕಾರಣ ಅವನು ವಾಸ್ತವದಲ್ಲಿ ಬದುಕುವುದಕ್ಕಿಂತ ಹೆಚ್ಚಾಗಿ ಭೂತ ಮತ್ತು ಭವಿಷ್ಯತ್ ಗಳಲ್ಲಿ ಬದುಕುತ್ತಾನೆ.
    ಜೀವನ ನಮ್ಮ ಅತ್ಯುಚ್ಚ ಶಿಕ್ಷಕ, ನಮಗೆ ಬೇಡವೆಂದರೂ ತುಂಬಾ ಪಾಠಗಳನ್ನು ನಮಗೆ ಕಲಿಸುತ್ತದೆ......
    ಜೀವನ ಏನೆ೦ಬುದನ್ನು ಸು೦ದರವಾಗಿ ತಿಳಿಸಿದ್ದಿರಿ
    ಉತ್ತಮ ಲೇಖನ... ಶುಭವಾಗಲಿ

    ReplyDelete
    Replies
    1. ನನ್ನದೊಂದು ಚಿಂತನಾ ಲಹರಿಗೆ ನಿಮ್ಮ ಮನಸ್ಸನ್ನು ತೆರೆದಿಟ್ಟಿದ್ದೀರಿ.. ನಿಜ ಜೀವನಕ್ಕೆ ಲೇಖನ ಹತ್ತಿರವಿದೆ ಎಂದು ನಿಮಗನಿಸಿದರೆ ಆದಕ್ಕಿಂತ ಬೇರೆ ಹೊಗಳಿಕೆ ಬೇರಿಲ್ಲ ನನಗೆ.. ಧನ್ಯವಾದಗಳು ಸಿಂಧುರವರೆ..:)))

      Delete
  6. ಭಾವುಕತೆ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಕನ್ನಡಿ ಮತ್ತು ನೆರಳಿನ ಹಾಗೇ.ಆದರೆ ಅದನ್ನು ಯಾರೂ ಹೆಚ್ಚಾಗಿ ಗಮನಿಸುವುದಿಲ್ಲ. ಬಣ್ಣಗಳು ಮಾತ್ರ ಆಗಾಗ ಭಾವ ಬಿಚ್ಚುತ್ತಿರುತ್ತವೆ.

    ReplyDelete
    Replies
    1. ಒಂದು ರಾತ್ರಿಯ ತೊಳಲಾಟಕ್ಕೆ ಉಸಿರು ಕೊಡಲು ಪ್ರಯತ್ನಪಟ್ಟಿದ್ದೇನೆ ಅದು ನಿಮಗೆ ಮೆಚ್ಚುಗೆಯಾದದ್ದು ತುಂಬಾ ಖುಷಿಯಾಯ್ತು ರವಿಯಣ್ಣ.. ನಿಮ್ಮ ಬೆನ್ನು ತಟ್ಟುವ ಕೈಗಳಿರುವವರೆಗೆ ನನ್ನ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತಲೇ ಇರುತ್ತದೆ.. ತುಂಬು ಮನದ ಧನ್ಯವಾದಗಳು..:)))

      Delete
  7. ಕರ್ಮ ಅನ್ನೋದೇನೋ ನಿಜ ಪ್ರಸಾದ್..:)
    ಜೀವನದ ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯಲ್ಲಿ
    ಭಾವುಕತೆಯನ್ನು ಪ್ರದರ್ಶಿಸುತ್ತಲೇ ಇರ್ತಿವಿ..!!
    ಯಾರು ಇಲ್ಲಾ ಅಂದ್ರೂ ನಾವು ಬದುಕಲೇ ಬೇಕು ಅನ್ನೋದಂತೂ ನಿಜ ಆಗಿರುವಾಗ.,
    ಅದನ್ನು ನಿಧಾನಕ್ಕಾದಾರೂ ಮನಸ್ಸು ಒಪ್ಪಿಕೊಂಡು ತನ್ನ ಭಾವುಕತೆಗೆ ಪೂರ್ಣವಿರಾಮ
    ಅಲ್ಲದಿದ್ದರೂ., ಅಲ್ಪ ವಿರಾಮವನ್ನಾದರೂ ನೀಡಿ ಮುಂದೆ ಸಾಗುತ್ತೆ ಅದೇ ಜೀವನ..:)
    ಲೇಖನದ ಭಾವ ಉತ್ತಮವಾಗಿದೆ ಗೆಳೆಯಾ..!!:)

    ReplyDelete
    Replies
    1. ಗೆಳತಿ..:))) ನಿನಗೆ ಗೊತ್ತೇ ಇದೆ ನಾನೂ ಭಾವುಕನೆಂದು, ಹಾಗೇ ಆ ಭಾವುಕತೆಗಳ ಮೂಲ ಹಿಡಿಯುವ ಪ್ರಯತ್ನ ಮಾಡಿದ್ದೇನೆ.. ನಿಜ ಜೀವನದಲ್ಲಿ ಬೇರೆಯವರ ಮತ್ತು ನನ್ನದೇ ಜೀವನದಲ್ಲಿ ಸಿಕ್ಕ ಒಡೆದ ಗಾಜಿನ ಪುಟಗಳನ್ನು ಒಟ್ಟುಗೂಡಿಸಿ ಕಡೆಯುವ ಪ್ರಯತ್ನ ಮಾಡಿದ್ದೇನೆ.. ಅದು ನಿನ್ನ ಮನಸ್ಸನ್ನು ಮುಟ್ಟಿದ್ದು ತಿಳಿದು ಖುಷಿಯಾಯಿತು.. ನಗು ಮೊಗದ ಜಾಡಿಡಿದು, ನಿಜ ಸಂತೋಷ ದಕ್ಕಿಸಿಕೊಳ್ಳುವ ಪ್ರಯತ್ನದಲ್ಲೊಂದು ಚಿಂತನಾ ಲಹರಿ ಈ ಲೇಖನ..:))

      Delete
  8. ನಾನೂ ಬಲು ಭಾವ ಜೀವಿ. ಬದುಕಿನ ಹಲ ಕೋನಗಳನ್ನು ವಿಶ್ಲೇಷಿಸಿದ ಬರಹ.

    ReplyDelete