ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday 13 February 2012

ಗೆಳತಿಗೊಂದು ಪತ್ರ, ಪ್ರೇಮದ ಗುಂಗಲ್ಲಿ


ನಲ್ಮೆಯ ಗೆಳತಿ,
ನಿನ್ನ ನೆನಪುಗಳು ಒತ್ತರಿಸಿ ಬರುವಾಗ ನಿನಗೇನಾದರು ಉಡುಗೊರೆ ಕೊಡಬೇಕೆಂದು ಯೋಚಿಸುತ್ತಿದ್ದೆ. ಆಗ ನೆನಪಿಗೆ ಬಂತು, ಅಯ್ಯೋ ನಾನೆಂತ ಪ್ರೇಮಿ? ಪ್ರೀತಿಸಿ ನಾಲ್ಕು ವರ್ಷಗಳಾಗಿವೆ ನಾನು ನಿನಗಾಗಿ ಒಂದೂ ಪ್ರೇಮಪತ್ರವನ್ನು ಬರೆಯಲಿಲ್ಲವಲ್ಲ. ಇಂದು ಫೆಬ್ರವರಿ ೧೪, ಅದೇನೊ ’ಪ್ರೇಮಿಗಳ ದಿನ’ವಂತೆ. ಕೆಲವರು ’ಫೆಬ್ರವರಿ ೧೪ ರಂದು ಪ್ರೇಮಿಗಳ ದಿನವೆಂದು ಆಚರಿಸಕೂಡದು ಅದು ಪಾಶ್ಚಾತ್ಯ ಅನುಕರಣೆ. ನಿಜವಾದ ಪ್ರೇಮಿಗಳಿಗೆ ದಿನವೂ ಪ್ರೇಮೋತ್ಸವವೆ’ ಎಂದು ಬೊಂಬಡ ಬಜಾಯಿಸುತ್ತಾರೆ. ಇನ್ನೂ ಕೆಲವರು ’ನಮ್ಮ ಯಾಂತ್ರಿಕ ಬದುಕಿನಲ್ಲಿ ಭಾವನೆಗಳಿಗೆ ಮತ್ತು ಮಾನವೀಯ ಮೌಲ್ಯಗಳಿಗೆ ಸ್ಥಾನವೇ ಇರುವುದಿಲ್ಲ, ಕೊಡಲು ನಮಗೆ ಸಮಯವೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರೇಮವನ್ನು ಮಾತ್ರ ಆಚರಿಸಲು, ಎಲ್ಲೆಂದರಲ್ಲಿ ಕೆಂಪು ಗುಲಾಬಿಗಳು ಮತ್ತು ಬಲೂನ್ ಗಳಿಂದ ಇಡೀ ಪ್ರಪಂಚ ತನ್ನನ್ನೇ ತಾನು ಸಿಂಗರಿಸಿಕೊಂಡು ಹಬ್ಬದಂತೆ ಕಣ್ಣಿಗಾನಂದ ನೀಡುವ ’ಪ್ರೇಮಿಗಳ ದಿನ’ ದ ಆಚರಣೆ ಬೇಡವೇಕೆ?’ ಎಂದು ಜಾಗಟೆ ಬಾರಿಸುತ್ತಾರೆ. ಬೊಂಬಡವಾದರೂ ಸರಿಯಾಗಲಿ, ಜಾಗಟೆಯಾದರೂ ಸರಿಯಾಗಲಿ ನಮಗೇಕೆ ಅವುಗಳ ಗೌಜು ಗದ್ದಲ ಅಲ್ಲವೆ? ನಾನಂತು ತೀರ್ಮಾನಿಸಿದೆ ನಿನಗೊಂದು ಪ್ರೇಮಪತ್ರ ಬರೆದು ಮತ್ತೊಮ್ಮೆ ಪ್ರೇಮಿಯಾಗುತ್ತೇನೆ.

ನನ್ನನ್ನು ನಿನ್ನ ತೋಳ ತೆಕ್ಕೆಯಲ್ಲಿ ಎಳೆದುಕೊಂಡದ್ದು ಬಸ್ ಪ್ರಯಾಣದಲ್ಲಿನ ನಮ್ಮ ಮೊದಲ ಭೇಟಿ. ಅದ್ಯಾವ ಕಾರಣಕ್ಕೆ ನಿನ್ನನ್ನು ಮೋಹಿಸಿದೆನೊ ನಾನು? ಅಂತಹ ಸುರಸುಂದರಿಯೂ ನೀನಲ್ಲ, ಕೋಗಿಲೆಯ ಕಂಠವೂ ಇಲ್ಲ. ನಿನಗೆ ಗೊತ್ತಿರಲಿಕ್ಕಿಲ್ಲ ಹುಡುಗಿ, ನಾನು ಹಿಂದೆ ಯಾವ ಹುಡುಗಿಯರನ್ನೂ ಕಣ್ಣೆತ್ತಿಯೂ ನೋಡಿರಲಿಲ್ಲ. ಅವರಾಗವರೆ ಮಾತನಾಡಿಸಿ ಬಂದರೆ ಪ್ರಶ್ನೋತ್ತರಗಳಂತಿರುತ್ತಿದ್ದವು ನನ್ನ ಸಂಭಾಷಣೆಗಳು. ಅದ್ಯಾವ ಮೋಡಿ ಇದೆ ನಿನ್ನಲ್ಲಿ. ನಿನ್ನ ಕುಡಿ ನೋಟಕ್ಕೆ ಮೋಹಿತನಾಗಿಬಿಟ್ಟೆ. ಆ ಕಣ್ಣೊಳಗಿನ ಪ್ರೀತಿಗೆ ಪರವಶನಾಗಿಬಿಟ್ಟೆ. ನನಗೂ, ನಿನಗೂ ಅದೆಷ್ಟು ವ್ಯತ್ಯಾಸವಿತ್ತು. ನಾನೋ ಮಾತು ಮರೆತ ಮಿತ ಭಾಷಿ, ನೀನು ಗಂಟೆಗಟ್ಟಲೆ ಮಾತನಾಡಬಲ್ಲ ಮಾತಿನಮಲ್ಲಿ. ’ಈ ಪ್ರೀತಿಯಲ್ಲಿ ನಮಗೆ ಉಳ್ಟಾ ಇರುವ ಕ್ಯಾರೆಕ್ಟರ್ ಗಳೆ ಇಷ್ಟ ಆಗ್ತವಂತೆ’. ಹಾಗಂತ ಪಂಚರಂಗಿಯಲ್ಲಿ ನಿಧಿ ಸುಬ್ಬಯ್ಯ ಹೇಳುತ್ತಾಳೆ, ಅದು ನಿಜ ಎನಿಸುತ್ತದೆ. ಇದೇನಿದು ಹುಡುಗ ಟ್ರ್ಯಾಕ್ ಬದಲಿಸುತ್ತಿದ್ದಾನೆ ಅಂತ ಕೋಪ ಮಾಡ್ಕೊಳ್ಬೇಡ ಮಾರಾಯ್ತಿ, ಅವಳನ್ನು ನಿನ್ನ ಮುಂದೆ ನೀವಾಳಿಸಿ ಬಿಸಾಕ್ತೇನೆ.

ಆ ಭೇಟಿಯಿಂದ ಮೊದಲ್ಗೊಂಡ ನಮ್ಮ ಪರಿಚಯ, ಆತ್ಮೀಯತೆಗೆ ತಿರುಗಿ ಸುಂದರ ಬಂಧ ಜನ್ಮ ತಾಳಿತ್ತು. ನಾನು ಎಷ್ಟೋ ಸಲ ಇದು ಕೇವಲ ಸ್ನೇಹ ಎಂದು ನನಗೇ ನಾನು ಹೇಳಿಕೊಂಡರೂ ಕೇಳದ ನನ್ನ ಮನಸ್ಸು ಪ್ರೀತಿಯ ಧಾವಂತಕ್ಕೆ ಬಿದ್ದಿತ್ತು. ನಾನೇನು ಮಾಡಲಿ ನನ್ನ ಮನಸ್ಸಿನ ಕಡಿವಾಣ ನನ್ನ ಹೃದಯದ ಕೈಯಲ್ಲಿತ್ತು. ನನ್ನ ಹೃದಯ ನಿನ್ನೊಳಗಿತ್ತು. ದಿನವೂ ಹರಟುತ್ತಿದ್ದೆವು ’ಊಟಕ್ಕಿಲ್ಲದ, ಉಪ್ಪಿನ ಕಾಯಿಗೆ ಬರದ ಕಾಡು ಹರಟೆ’ ಇಬ್ಬರಿಗೂ ಒಬ್ಬರಿಗೊಬ್ಬರ ಸಾನಿಧ್ಯ ಬೇಕಿತ್ತು. ನಾವಿಬ್ಬರೂ ಅಂದು ರಸ್ತೆ ದಾಟುವಾಗ ನಾನು ನಿನ್ನ ಮೊದಲ ಪ್ರೇಮಿ ಆಟೋ ರಿಕ್ಷಾ(ಕಾರಣ ನಿನಗೆ ಗೊತ್ತು!) ಬರುವುದನ್ನು ಗಮನಿಸದೆ ಮುನ್ನುಗ್ಗುವಾಗ ನೀನು ನನ್ನ ಕೈಹಿಡಿದು ಬರಸೆಳೆದುಕೊಂಡೆಯಲ್ಲಾ ಆ ಮೊದಲ ಸ್ಪರ್ಶ, ಈ ಪತ್ರ ಬರೆಯುವಾಗಲು ನನ್ನ ಬಲ ತೋಳನ್ನು ನೇವರಿಸಿಕೊಳ್ಳುತ್ತಿದ್ದೇನೆ. ಈಗ ನೀನೇನಾದರು ನನ್ನ ಬಳಿಯಿದ್ದಿದ್ದರೆ ಆ ಮುದ್ದಾದ ಕೈ ಬೆರಳುಗಳನ್ನಿಡಿದು ಮುದ್ದಿಸುತ್ತಿದ್ದೆ. ಹೀಗೆ ಪ್ರೀತಿಯ ಮೊದಲ ಮೆಟ್ಟಿಲೇರಿದವನಿಗೆ ಕಾಯುವಂತೆ ಮಾಡಿದ್ದು ಆ ಹಾಳಾದ ಸೆಮಿಸ್ಟರ್ ಹಾಲಿಡೇಸ್. ಒಂದೊಂದು ನಿಮಿಷಗಳನ್ನೂ, ಒಂದೊಂದು ಯುಗಗಳೆಂಬಂತೆ ಕಳೆದಿದ್ದೇನೆ. ಎರಡು ತಿಂಗಳು ನಿನ್ನನ್ನು ನೋಡದೆ, ಮಾತನಾಡದೆ ಕಳೆದೆನೆಂದರೆ ಸೋಜಿಗವಾಗುತ್ತದೆ. ಹೆಚ್ಚೂ ಕಡಿಮೆ ಹುಚ್ಚೇ ಹಿಡಿದಿತ್ತು.

ಎರಡು ತಿಂಗಳ ನಂತರ ಮತ್ತೆ ಕಾಲೇಜ್ ರೀ ಓಪನ್ ಆದದ್ದು ನಿಟ್ಟುಸಿರು ಬಿಡುವಂತೆ ಮಾಡಿತ್ತು. ದಿನವೂ ನಿನ್ನನ್ನು ಹುಡುಕುತ್ತಿದ್ದೆ, ನಿನ್ನನ್ನು ಕಂಡೊಡನೆ ದಿನದ ಉತ್ಸಾಹ ನನ್ನ ಮೈಯೊಳಗೆ ಪ್ರವಹಿಸುತ್ತಿತ್ತು. ಆಗ ನಮ್ಮ ಆತ್ಮೀಯತೆಯ ನಡುವೆ ತೂರಿದವಳೆ ’ಅನನ್ಯಾ ಶರ್ಮ’. ನನಗೆ ಮೊದಲು ಹೀಗೆ ನನ್ನನ್ನು ಅನನ್ಯ ಎಂದುಕೊಂಡು ಮೊಬೈಲ್ ನಲ್ಲಿ ಕಾಡುತ್ತಿರುವುದು ನೀನೇ ಎಂದು ಅನುಮಾನ ಬರುತ್ತಿತ್ತು. ಯಾವಾಗ ಅದು ನೀನಲ್ಲಾ ಎಂದು ತಿಳಿಯಿತೊ ಆಗ ನಮ್ಮಿಬ್ಬರ ನಡುವೆ ಯಾರೋ ತೂರಲು ಪ್ರಯತ್ನಿಸುತ್ತಿದ್ದಾರೆ. ಅವರು ನಿನ್ನನ್ನು ಕಸಿದೊಯ್ದುಬಿಟ್ಟರೆ ಎಂಬ ಭಯ ಕಾಡಲು ಶುರುವಾಯ್ತು. ಆದ್ದರಿಂದಲೆ ನಮ್ಮಿಬ್ಬರ ಇಂಜಿನಿಯರಿಂಗ್ ಮುಗಿದ ನಂತರ ನಿವೇದಿಸಿಕೊಳ್ಳಬೇಕೆಂದುಕೊಂಡಿದ್ದ ನನ್ನ ಪ್ರೇಮದ ಕಟ್ಟೆಯನ್ನು ತೆರೆದು ಭಾವನೆಗಳನ್ನು ನಿನ್ನೆದುರು ಹರಿಯಬಿಟ್ಟೆ. ನೀನು ನನ್ನ ನಿವೇದನೆಯನ್ನು ಕಂಡು ದಿಗ್ಭ್ರಾಂತಳಾದಂತೆ ಕಂಡುಬಂದೆ. ’ನೀನು ನನ್ನ ಒಳ್ಳೆಯ ಗೆಳೆಯ, ಹಾಗೇ ಇರು’ ಎಂದು ಚುಟುಕಾಗಿ ಉತ್ತರಿಸಿದ್ದೆ. ಅಂದು ಕ್ಯಾಂಟೀನ್ ನಲ್ಲಿ ನೀನು ಪೂರಿ ತಿಂದದ್ದಕ್ಕೆ ಕೊಟ್ಟ ಬಿಲ್ ನಲ್ಲಿ ಮಿಗಿಸಿಕೊಂಡ ಐದು ರುಪಾಯಿ ನಾಣ್ಯವನ್ನು ಇನ್ನೂ ಜೋಪಾನವಾಗಿ ಕಾಯ್ದಿರಿಸಿಕೊಂಡಿದ್ದೇನೆ, ಆ ದಿನದ ಸವಿ ನೆನಪಿಗಾಗಿ.

’ಪ್ರೀತಿ ಕಾಡುವುದರಿಂದ ಹುಟ್ಟುವುದಲ್ಲ, ತಾನೇ ತಾನಾಗಿ ಹುಟ್ಟಬೇಕು’ ಎಂಬ ಅರಿವಿದ್ದ ನಾನು ನಿನ್ನನ್ನು ಪೀಡಿಸದೆ ಸ್ನೇಹಿತನಾಗಿರಲು ಪ್ರಯತ್ನಿಸಿ ಸೋತಿದ್ದೆ, ಅದರೆ ನಿನ್ನೆದುರು ಅದನ್ನು ಹೇಳಿಕೊಳ್ಳದೆ ಕೇವಲ ಸ್ನೇಹಿತನಂತೆ ನಟಿಸುತ್ತಿದ್ದೆ. ಅದಾದ ಎರಡು ತಿಂಗಳುಗಳ ನಂತರ ನೀನೇ ಬಂದು ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದೆ. ಆ ಕ್ಷಣದಲ್ಲಿ ನಾನನುಭವಿಸಿದ ಸಂತೋಷಕ್ಕೆ ಪಾರವೇ ಇರಲಿಲ್ಲ. ಜಗತ್ತಿನಲ್ಲಿ ಏನನ್ನೋ ಗೆದ್ದೆನೆಂಬ ಪುಳಕ ಮನಸ್ಸಿಗೆ ಹಿತವನ್ನು ನೀಡಿತ್ತು. ಮುಂದಿನ ಕೆಲವು ತಿಂಗಳುಗಳು ನಾನು ನನ್ನ ಕನಸ್ಸಿನಲ್ಲೂ ಮರೆಯಲಾಗದ ಸುಂದರ ಸುಮಧುರ ಕ್ಷಣಗಳು. ಪ್ರೀತಿ ಎಷ್ಟು ಸುಂದರ ಎಂಬುದನ್ನು ತೋರಿಸಿಕೊಟ್ಟ ಪ್ರೇಮ ದೇವತೆ ನೀನು. ನಾನು ಒಬ್ಬರನ್ನು ಜೀವಕ್ಕಿಂತಲು ಹೆಚ್ಚಾಗಿ ಪ್ರೀತಿಸಬಲ್ಲೆನೆಂಬುದನ್ನು ಅರಿವಿಗೆ ತರಿಸಿದ ಕ್ಷಣಗಳವು. ನಾನು ಯಾವಾಗಲಾದರು ನಿಸ್ತೇಜನಾಗಿ ಕೂತಾಗ ಸುಮ್ಮನೆ ಆ ನೆನಪುಗಳನ್ನು ಮೆಲುಕು ಹಾಕಿದರೂ ಸಾಕು, ಈಗಲೂ ಮೈ ಮನಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ನವೋಲ್ಲಾಸ ಚಿಮ್ಮುತ್ತದೆ.

ನಂತರದ ದಿನಗಳಲ್ಲಿ ನನ್ನ ಅಪ್ರಬುದ್ಧತೆಯೊ ಏನೊ, ಕೆಲವು ಒತ್ತಡಗಳಿಗೆ ಸಿಕ್ಕು ನಾನೇ ಮಾಡಿಕೊಂಡ ತಪ್ಪಿಗೆ ನಿನ್ನನ್ನು ಹೊಣೆ ಮಾಡಿದೆ. ನಿನ್ನನ್ನು ತುಂಬಾ ನಿರ್ಲಕ್ಷಿಸಿದೆ ಮತ್ತು ನಿನ್ನ ಮನಸ್ಸನ್ನು ನೋಯಿಸಿದೆ ಎನಿಸುತ್ತಿದೆ. ನಿನಗೆ ಆ ದೋಷಾರೋಪಣೆ ಹೊರೆಯಾಯ್ತೆಂದು ಕಾಣಿಸುತ್ತದೆ. ಆದ್ದರಿಂದಲೆ ನೀನು ನಿನ್ನದೇ ಕಾರಣಗಳನ್ನು ಕೊಟ್ಟು ದೂರ ಸರಿಯಲಾರಂಭಿಸಿದೆ. ನನಗೂ ಸ್ವಲ್ಪ ಅಹಂ ಇತ್ತೆನಿಸುತ್ತದೆ, ಹೋದರೆ ಹೋಗಲಿ ಎಂದು ಸುಮ್ಮನಿದ್ದುಬಿಟ್ಟೆ. ಈಗ ನಿನ್ನ ನೆನಪುಗಳು ಮತ್ತೆ ಕಾಡಲಾರಂಭಿಸಿವೆ. ನಡೆದ ಎಲ್ಲಾ ತಪ್ಪುಗಳಿಗೆ ಕ್ಷಮೆ ಕೋರುತ್ತಾ ಮತ್ತೆ ನನ್ನನ್ನು ಪರಿಚಯಿಸಿಕೊಳ್ಳುತ್ತಿದ್ದೇನೆ. ’ಕಳೆದು ಹೋದವಳ ಅರಸುತ್ತಾ ಕಳೆದು ಹೋದವನು ನಾನು’, ಹೆಸರಲ್ಲೇನಿದೆ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಮತ್ತೆ ಹಿಂತಿರುಗೆ ಚೆಲುವೆ, ನಾನು ನನ್ನನ್ನು ಕಂಡುಕೊಳ್ಳಬೇಕಿದೆ.
ಇಂತಿ ನಿನ್ನ ಗೆಳೆಯಾ...

- ಪ್ರಸಾದ್.ಡಿ.ವಿ.

5 comments:

  1. ತು೦ಬಾ ಚೆನ್ನಾಗಿದೆ ನಿಮ್ಮ ಲೇಖನ... ಪ್ರೀತಿ ಹಾಗೇನೆ,
    ಬಿದ್ದಾಗ ಕೈ ಹಿಡಿದು ನಿಲ್ಲುಸುತ್ತೆದೆ,
    ಆ ಪ್ರೀತಿಯ ಮಾತುಗಳು ನೋವನ್ನು ಮರೆಸುತ್ತವೆ
    ಹತ್ತಿರ ಇದ್ದಷ್ಟು ದಿನ ಕುಷಿ ಕೊಡುವ ದೂರ ಆದಗ ನೋವು ತರಿಸುವುದೇ ಈ ಪ್ರೀತಿ..
    ನಿಜವಾದ ಕಥೆ ಆದರೆ... ಕಾಯಿರಿ, ಬ೦ದರೂ ಬರಬಹುದು...
    ಆದರು ಪ್ರೀತಿ ಮಾಯೆ ಹುಶಾರೂ ಕಣ್ಣೀರ್ ಮಾರೊ ಬಜಾರು....

    ReplyDelete
    Replies
    1. ಕಾಯುವಿಕೆ ನಿರಂತರ ಅವಳಿಗಾಗಿ ನನ್ನೊಳಗಿನ ಪ್ರೀತಿಯ ರೀತಿ..:) ಪ್ರೀತಿಯೆಂಬುದು ವ್ಯಾಖ್ಯಾನಕ್ಕೆ ಸಿಗದ ಒಂದು ಸುಂದರ ಅನುಬಂಧ, ಬಿಟ್ಟರೂ ಬಿಡದೀ ಬಂಧ.. ’ಪ್ರೇಮಿಗಳ ದಿನ’ ಕ್ಕೆ ಏನಾದರೂ ಬರಯಬೇಕೆಂದುಕೊಂಡಾಗ ಮನಸ್ಸು ತನ್ನೊಳಗೆ ಗೀಚಿಕೊಂಡ ಸಾಲುಗಳಿವು.. ಆ ರೀತಿ ಹೆಪ್ಪುಗಟ್ಟಿದ ಭಾವಗಳನ್ನು ಪತ್ರದ ಆಕಾರ ನೀಡಿ ಹೀಗೆ ಹರಡಿದ್ದೇನೆ.. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ವಂದನೆಗಳು ಸಿಂಧು..:)))

      Delete
  2. ಈ ಪ್ರೀತಿಯೇ ಹೀಗೆ.....ದೂರವಾದಂತೆ ಹೆಚ್ಚು ಹೆಚ್ಚು ಕಾಡುತ್ತದೆ.....ನಿಮ್ಮ ಪ್ರೀತಿ ನಿಮಗೆ ಮರಳಿ ಸಿಗಲಿ ಎಂದು ಹಾರೈಸುತ್ತೇನೆ ...ಚೆನ್ನಾಗಿ ಬರೆದಿದ್ದೀರಿ.....ಧನ್ಯವಾದಗಳು...


    ನನ್ನ ಬ್ಲಾಗ್ ಗೂ ಬನ್ನಿ
    http://ashokkodlady.blogspot.com/

    ReplyDelete
    Replies
    1. ಹೌದು ಈ ಪ್ರೀತಿ ಹತ್ತಿರದಲ್ಲಿದ್ದಾಗ ಕಾಡುವುದಕ್ಕಿಂತ ದೂರದಲ್ಲಿದ್ದಾಗ ಕಾಡುವುದು ಹೆಚ್ಚು.. ನಿಮ್ಮ ಮೆಚ್ಚುಗೆ ಮತ್ತು ಹಾರೈಕೆಗೆ ತುಂಬು ಮನದ ಧನ್ಯವಾದಗಳು ಮಾನ್ಯರೆ.. ನಿಮ್ಮ ಬ್ಲಾಗ್’ಗೆ ಭೇಟಿ ನೀಡಿದ್ದೇನೆ, ನಿಮ್ಮನ್ನು ಹಿಂಬಾಲಿಸುತ್ತಿದ್ದೇನೆ.. ನಿಮ್ಮ ಸಾಹಿತ್ಯ ಕೃಷಿಯಲ್ಲಿ ನಿಮ್ಮ ಜೊತೆಗಿರುತ್ತೇನೆ.. ನೀವೂ ನನ್ನ ಸಾಹಿತ್ಯದ ಬೇರಿಗೆ ನೀರೆರೆದು ಪೋಷಿಸಬೇಕಾಗಿ ಕೋರುತ್ತೇನೆ..:)

      Delete
  3. ಪ್ರಭುದ್ದ ಬರಹ ಪ್ರಸಾದ್...
    ನನ್ ಆಫೀಸ್ ಗೆಳೆಯರಿಗೂ ಇಷ್ಟ ಆತು :)

    ReplyDelete