ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday, 4 June 2015

ಪದಗಳಿಗೆ ಪದ್ಯ ಕಟ್ಟುವ ಕಿಮ್ಮತ್ತಿಲ್ಲ


ಪದಗಳಿಗೆ ಪದ್ಯ ಕಟ್ಟುವ
ಕಿಮ್ಮತ್ತಿಲ್ಲ,

ಮರಳಿ ಬರುವ ಪದಗಳಿಗೆ
ಅರವತ್ತರ ಅರಳು ಮರಳು,
ನಿನಾದಕ್ಕೆ ಪದ ಹೆಕ್ಕಿ,
ಹುಕ್ಕಿನಲ್ಲಿ ಸಿಕ್ಕಿಸಿ
ಹೊಸೆದ ಸಾಲೊಳಗೆ ಪದ್ಯವೆಲ್ಲಿ?

ಅಭಿವ್ಯಕ್ತಿಯ ಅಡವಿಟ್ಟು,
ಚೌಕಟ್ಟಿನ ಕೊರಳುಪಟ್ಟಿ
ಬಿಗಿದುಕೊಂಡ ಭಾವಗಳಲಿ,
ನರಳಿ ಸತ್ತ ನೋವಿದೆ,
ಕಟ್ಟಕುಳಿತ ಪದ್ಯವೆಲ್ಲಿ?

ಸಂಜೆಯ ಕೆಂಧೂಳಿನ
ಹಿಂದೆ ಓಡಿ ಬಸವಳಿದು,
ದಾಹಕ್ಕೆ ಬೀರಿಳಿಸಿ
ಎಚ್ಚರ ತಪ್ಪುವಂತೆ ಮತ್ತೇರಿದೆ,
ನಶೆಯೊಳಗೆ ಪದ್ಯವೆಲ್ಲಿ?

ಬಿಡಿಸಿಕೊಂಡು ಹಗುರಾದೆ,
ಅಂಥದೊಂದು ಹುಂಬ ಆಸೆ,
ಸಮಾಜದ ಕಟಕಟೆಯಲಿ
ತೊಡರಿ ಬಿದ್ದ ಅವಮಾನ
ಸ್ವಾತಂತ್ರ್ಯದ ಪದ್ಯವೆಲ್ಲಿ?

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

No comments:

Post a Comment