ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday 26 December 2014

ಅನ್ವರ್ಥವಾಗಿಯೇ ಉಳಿದೆ!


ಸುಲಭಕ್ಕೆ ಸಿಕ್ಕಿದ್ದು,
ಅನುಮಾನಕ್ಕೀಡಾಗಿದೆ,
ಪ್ರಶ್ನಿಸುತ್ತಾ
ನೆಮ್ಮದಿ ಕಳೆದುಹೋಗಿದೆ,
ನೋವುಗಳಿಗೆ
ಪುಳಕಗೊಂಡು ಅತಿಯಾಗಿ ಸುಖಿಯಾದೆ,
ನೀವು ಹುಚ್ಚನೆಂದರೆ ಹೌದು?
ಮಿತಿ ಮೀರಿದರೇನು,
ನಾನು ನಾನಾಗಿಯೇ ಉಳಿದೆ!

ಕೆನ್ನೆ ಕೆನ್ನೆ ಬಡಿದುಕೊಂಡು
ಜನಜಂಗುಳಿಯ ನಡುವೆ
ತಾಸುಗಟ್ಟಲೆ ಕಾದರೆ ಕ್ಷಣಗಳ ಮಟ್ಟಿಗೆ
ಕಾಣಿಸಿಕೊಳ್ಳುತ್ತಾನೆ,
ಉಧೋ ಉಧೋ ದೇವರೆನ್ನು,
ಎಂದರು... ನಾನು ನಕ್ಕುಬಿಟ್ಟೆ,
ಪಾಪ ಅಲ್ಲಿಲ್ಲದ ದೇವರೂ ನಕ್ಕುಬಿಟ್ಟ,
ಬಹಿಷ್ಕಾರಗೊಂಡು ಅನ್ನವಿರದವರ
ಮನೆಯಲ್ಲಿ ಹಸಿವಾಗಿದ್ದಾನಂತೆ,
ಅವರಂತೂ
ದಿನ ಹೊಟ್ಟೆತುಂಬಿಸುವ ಪೂಜೆ ಮಾಡುವರು,
ಸಂತೃಪ್ತಿಯಾಗಿಲ್ಲ
ಆದರೂ ಬದುಕಿರುವನು ಜೀವದಂತೆ,
ದೇವರ ನಂಬದ ನಾನು
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಸರ್ಕಾರವೊಂದು ಸರ್ವಾನುಮತದಿ
ವೋಟು ಗಿಟ್ಟಿಸಿ
ಅಧಿಕಾರ ಹಿಡಿಯಿತೆಂದುಕೊಳ್ಳಿ,
ಚುಕ್ಕಾಣಿಯ ಮೇಲೆ ಕಣ್ಣಿರಲಿ,
ನಾಯಕರೆಂದರೆ ನಾಯಕರು,
"ಡೊಂಕು ಬಾಲದ ನಾಯಕರು..."
ನೇರೆ ರಸ್ತೆಯಲಿ ಅಂಕುಡೊಂಕಾಗಿ ನುಸುಳಿದರೆ?
ಎಂದಿದ್ದೆ ಬಂತು,
ನಾಯಕರಿಲ್ಲದ ಪ್ರತಿಪಕ್ಷದ ಪಟ್ಟ ನನಗೆ,
ವ್ಯಂಗ್ಯಕ್ಕೆ ಬೆತ್ತವಾದೆ,
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಮುಂದೆ ಮುಂದೆ ನಡೆದವಳ ಹಿಂದೆ ಅಲೆದೆ,
ಬೇಡವೆಂದರೂ ಕಾಡಿ ಗೋಗರೆದೆ,
ಒಲಿದ ಹೂವು ಮುಡಿಯೇರುವ ಮುನ್ನ,
ವೈಫಲ್ಯದ ಹೊಳೆಯಲಿ ಕೊಚ್ಚಿ ಹೋಗಿದೆ,
ಅಂಗಾತ ಬಿದ್ದವನ
ಎದೆಬಿರಿವ ನೋವಿಗೆ ಮುಲುಗುಟ್ಟಿ,
ನೆನಪುಗಳ ಮುಲಾಮು ಹಚ್ಚುವೆ,
ಸುಖಕ್ಕೆ ಸಿಹಿಯಾಗಿ ನರಳುವೆ,
ಕವಿತೆಯೆಂದರು, ಕವಿಯೆಂದರು,
ಎದರಿ ಓಡಿದೆ, ಅಲೆದೆಡೆಯಲ್ಲೆ ಬದುಕಿದೆ,
ಅನ್ವರ್ಥವಾಗಿಯೇ ಇದ್ದೆ,
ಆದರೇನು? ನಾನು ನಾನಾಗಿಯೇ ಉಳಿದೆ!

ಸರಿಯಿದ್ದನ್ನೂ ಅನುಮಾನಿಸಿ,
ಸರಿಯಿಲ್ಲದ್ದನ್ನೂ ಪ್ರಶ್ನಿಸುವೆ,
ನೀವು ಆಗದೆಂಬಂತೆಯೇ ಬದುಕುವೆ,
ನೀನ್ಯಾಕೆ ಹೀಗೆಂದರೆ?
ನಾನೆನ್ನಲಿ? ನಾನಂತೂ ಹೀಗೇ..
ಅನ್ವರ್ಥವಾಗಿಯೂ ಇದ್ದೆ,
ಅನರ್ಥವಾಗಿಯೂ ಇದ್ದೆ,
ಬಹು ಅರ್ಥವಾಗಿಯೂ ಇದ್ದೆ,
ಸಂಕೋಚ, ಸಂಕುಚಿತ, ಹೇಗೆಲ್ಲಾ ಇದ್ದೆ,
ಒಟ್ಟು ಇದ್ದೆ,
ಅನ್ನ ತಿನ್ನುವ ಮನುಷ್ಯನಾಗಿಯೇ ಉಳಿದೆ,
ಅಟ್ ಲೀಸ್ಟ್ ಬದುಕಿಯೇ ಇದ್ದೆ!

- ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

1 comment:

  1. ನಿಮ್ಮ ಕವನಗಳು, ನನಗೆ ಮಾಯಾಗನ್ನಡಿ ಇದ್ದಂತೆ ಗೆಳೆಯ.
    ಹಲವು ಸಂಗತಿಗಳೆಂಬ ಪುಕ್ಕಗಳೊಡನೆ ತಾವು ಹಾರಿ ಬಿಡುವ ಬಾನಾಡಿಗಳ ಅಂತರಂಗ ಹೊಕ್ಕರೆ ನೂರು ಭಾವಗಳ ರಿಂಗಣ.

    ಇಲ್ಲಿ ನಾನೂ ಸಹ,
    ’ಅನ್ವರ್ಥವಾಗಿಯೂ ಇದ್ದೆ,
    ಅನರ್ಥವಾಗಿಯೂ ಇದ್ದೆ’
    ಮತ್ತು ಕೇವಲ,
    ’ಅನ್ನ ತಿನ್ನುವ ಮನುಷ್ಯನಾಗಿಯೇ ಉಳಿದೆ’
    alt least ಬದುಕಿಯೇ ಇದ್ದೇ!

    ನಿಮ್ಮ ಬ್ಲಾಗನ್ನು ಅಕ್ಕರೆಯಿಂದ ಇಲ್ಲಿ ಹಂಚಿಕೊಂಡಿದ್ದೇನೆ.
    https://www.facebook.com/groups/191375717613653?view=permalink&id=435285689889320

    ReplyDelete