ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday 14 December 2014

ಬಟವಾಡೆಗೆ ಬಣ್ಣಗಳು!


ಬಣ್ಣಗಳನು
ಮಾರಲು ತಂದಿದ್ದೇನೆ…
“ಕಾಸಿಗೊಂದು,
ಕೊಸರಿಗೊಂದೆಂದು ಕೇಳಬೇಡಿ”;
“ಸಾಲ ಕೇಳಿ, ಸ್ನೇಹ ಕಳೆದುಕೊಳ್ಳಬೇಡಿ..”
ಎಂಬ್ಯಾವ ಫಲಕಗಳೂ ಇಲ್ಲಿಲ್ಲ…
ಬಿಟ್ಟಿಯಾಗೇ ಬಿಕರಿಗಿಟ್ಟಿದ್ದೇನೆ,
ಬದಲಿಯಾಗಿ ಒಂದೊಂದು
ನೋವನ್ನು ಒತ್ತೆಯಿಡಿ,
ಬೇಕಿದ್ದರೆ ಬಾಂಡು ಬರೆದುಕೊಡಿ!

ಒಬ್ಬಳೇ ಮಗಳನ್ನು ಬೆಳೆಸಲು
ಹೆಣಗುವ ಅಮ್ಮನ ಆರ್ದ್ರತೆ,
ತಬ್ಬಲಿಯಾದ ಮಕ್ಕಳ ಕಣ್ಣೀರು,
ಜಾತಿಯ ಬಡಪಟ್ಟಿಗೆ ಮುದುರಿ
ಮೂಲೆ ಸೇರುವ ಸಹನೆಯ ಕೊರಗು,
ತಡರಾತ್ರಿಗೆ ನಲುಗುವ ವೇಶ್ಯೆಯ
ಮಲ್ಲಿಗೆ ಕಂಪು,
ನೋವಿಗೆ ಮದ್ದು ಹುಡುಕುವ
ಭಗ್ನ ಪ್ರೇಮಿಯ ಎದೆಯ ಕಾವು,
ಎದೆಯೊಡೆದು ಸತ್ತ ಸಾವು,
ಎಲ್ಲಕ್ಕೂ ಮುಲಾಮಿದೆ ನನ್ನ ಬಳಿ,
ಬೋಗುಣಿಗೆ ನೋವು ಸುರಿಯಿರಿ,
ಸ್ವಚ್ಛಂದ ಬಣ್ಣ ಹೆಕ್ಕಿರಿ!

ಸಾವಿರಾರು ಬಣ್ಣಗಳ
ಸುರಿದು ನಿಮ್ಮ ಮುಂದಿಡುತ್ತೇನೆ,
ಕಪ್ಪು ಹಲಗೆಯ ಮೇಲೆ,
ಬಿಳಿಯ ಕ್ಯಾನ್ವಾಸಿದೆ,
ಬೇಕಾದ ಬಣ್ಣ ಬಳಿದುಕೊಳ್ಳಿ.
ಕಲಾಕೃತಿಯಾಗಿ ನೀವು ನಕ್ಕರೆ ಸಾಕು;
ಕುಂಚವಾದವಗೆ ಇನ್ನೇನು ಬೇಕು?!
ತಿರುಕನಂತೆ ತಿರುಗುತ್ತಾ ಹೊರಡುತ್ತೇನೆ,
ಇರುವ ದಿಕ್ಕುಗಳಾದರೂ ನಾಕೇ ನಾಕು;
ಸಂಧಿಸುತ್ತಲೇ ಸಂದಾಯ
ಪದ್ಯದೊಂದಿಗೆ ಮತ್ತು ಮದ್ಯದೊಂದಿಗೆ!

--> ಮಂಜಿನ ಹನಿ

4 comments:

  1. ಭಾವಗಳೂ ಅಸಲು ತರೇವಾರಿ ಬಣ್ಣಗಳೇ ಎನ್ನುವುದನ್ನು ಅದೆಷ್ಟು ಮಾರ್ಮಿಕವಾಗಿ ತೆರೆದಿಟ್ಟಿದ್ದೀರ ತಾವು...

    ReplyDelete
  2. ಆಹಾ..!
    ಮನಸ್ಸಿಗೆಂಥದೋ ಮುದ..

    ಇಂತವನೊಬ್ಬ ಇರಬಾರದೇ ಎಲ್ಲರ ಬಾಳಲ್ಲಿ ಎಂದು ಹಲುಬುವಂತೆ ಮಾಡಿದ ಕವಿತೆ..
    ಮತ್ತೆ ಮತ್ತೆ ಓದಿ ತೃಪ್ತಿ ಪಟ್ಟುಕೊಂಡೆ.

    ಮತ್ತೊಂದು ಬಂಪರ್‍ ಕವಿತೆಗೆ ಕಾಯುತ್ತಿರುತ್ತೇನೆ.

    -ಮೌನರಾಗ!

    ReplyDelete