ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 3 April 2013

ಎಂದೂ ಮುಳುಗದ ರವಿ





ಆತ ನನಗಾರೂ ಅಲ್ಲ,
ರಕ್ತ ಸಂಬಂಧವಂತೂ
ಮೊದಲೇ ಇಲ್ಲ,
ಈಗ ಒಂದೂವರೆ ವರ್ಷಗಳ ಹಿಂದೆ
ಪರಿಚಯವೂ ಇರಲಿಲ್ಲ...
ಸಾಹಿತ್ಯ, ಕನ್ನಡ
ಇವೆರಡೇ ಬಂಧಗಳು,
ಅಲ್ಲೆಲ್ಲೋ ಮಧ್ಯ ಆಫ್ರಿಕಾದಲ್ಲಿ
ಕೂತಿದ್ದವರನ್ನು
ಮೈಸೂರಿನವನಿಗೆ ಪರಿಚಯಿಸಿದವು!

ಸಾಕಷ್ಟು ಸಾಹಿತ್ಯ ವಿನಿಮಯ,
ಸಂದೇಶಗಳಲ್ಲಿ ಹರಿದ ಮಾತುಕತೆ,
ಒಂದಷ್ಟು ಫೋನಿನಲ್ಲಿ ಮಾತು,
ಅವರ ಸಾಹಿತ್ಯದಾಳಕ್ಕೆ
ಇಳಿದಷ್ಟೂ ಹೆಪ್ಪುಗಟ್ಟಿದ ಭಾವಗಳು,
ಆ ಹೆಪ್ಪುಗಟ್ಟಿದ ಭಾವಗಳು
ಬೆಸೆದ ಆತ್ಮೀಯತೆ,
ಅನುಬಂಧ, ಅವರಲ್ಲೊಬ್ಬ
ಹಿರಿಯಣ್ಣನನ್ನು ಕಂಡುಕೊಂಡ ಧನ್ಯತೆ!
ರಗುತ ಸಂಬಂಧಗಳಿಂದೇರ್ಪಡುವ
ಬಂಧಗಳಿಗಿಂತ ಗಟ್ಟಿ
ಬಂಧಗಳಿಲ್ಲ ಎಂದವರಾರು?

ಹೀಗೊಮ್ಮೆ ಅವರೊಂದಿಗೆ ಮಾತುಕತೆ:
ಹೇಗಿದ್ದೀರಿ ಅಣ್ಣಾ?
-ನಾನು ಚೆನ್ನಾಗಿದ್ದೇನೆ,
ನೀವು ಹೇಗಿದ್ದೀರಿ?
ನಾನೂ ಚೆನ್ನಾಗಿದ್ದೇನೆ!
-ಅಪ್ಪ, ಅಮ್ಮ, ಪ್ರಮೋದ್ ಹೇಗಿದ್ದಾರೆ?
ಅವರೆಲ್ಲರೂ ಚೆನ್ನಾಗಿದ್ದಾರೆ!
-ಕನ್ನಡ ಬ್ಲಾಗ್ ಹೇಗೆ ನಡೆಯುತ್ತಿದೆ?
ಎಲ್ಲರೂ ಹೇಗಿದ್ದಾರೆ?
ನಿಮ್ಮನ್ನೆಲ್ಲಾ ನೋಡಬೇಕೆಂದು ಆಸೆಯಾಗುತ್ತಿದೆ!
ನಿಮ್ಮನ್ನು ನೋಡಲು ನಮಗೂ ಆಸೆಯಾಗುತ್ತಿದೆ,
ಬಾಚಿ ತಬ್ಬಬೇಕೆನಿಸುತ್ತಿದೆ,
ಬನ್ನೀ ಬೇಗ ಬನ್ನೀ...
ಭಾರತಕ್ಕೆ ಬೇಗ ಬನ್ನೀ...
ಹೆಪ್ಪುಗಟ್ಟಿದ ಭಾವಗಳು,
ಒಂದೊಂದೇ ಹನಿಯನ್ನು ಬಸಿಯುತ್ತಿವೆ,
ಕಣ್ಣಿನಿಂದ ಜಾರಿ ಹರಿದ ಪ್ರತಿಯೊಂದು
ಕಣ್ಣ ಹನಿಯೂ
ಕೆನ್ನೆಯ ಮೇಲಿಳಿದು,
ಎದೆಯನ್ನು ತೋಯ್ಸುತ್ತಿವೆ,
ಅವಕ್ಕೂ ಗೊತ್ತಿರಬಹುದು...
ಮಧ್ಯ ಆಫ್ರಿಕಾದಲ್ಲಿ ಅಸ್ತಂಗತನಾದ ರವಿ,
ನಮ್ಮೆದೆಗಳಲ್ಲಿ
ಶಾಶ್ವತವಾಗಿ ಉಳಿದಿರುವರೆಂದು...

- ಪ್ರಸಾದ್.ಡಿ.ವಿ.

1 comment:

  1. ಕೆಲ ಸಂಬಂಧಗಳಿಗೆ ಪೂರ್ವಾಪರ ಮತ್ತು ಪೂರ್ವಾಗ್ರಹತೆಯ ಹಂಗಿರುವುದಿಲ್ಲ. ಅವು ಮಾತಿಗೆ ನಿಲುಕದ ತಾಕಿಗೂ ನಿಲುಕದ ಅನೂಹ್ಯ ಬಂಧಗಳು. ಎಲ್ಲೋ ದೂರದ ಕೇಮರೂನಿನಿಂದ ಶ್ರೀಯುತ ರವಿ ಮೂರ್ನಾಡ್ ಅವರು ನಮ್ಮ ಮೇಲೆಲ್ಲಾ ಬೀರಿದ 'ಕನ್ನಡ' ಪರಿಣಾಮವಿದೆಯಲ್ಲ ಅದು ಮಾನವನ ನಿಸ್ತಂತು ಸಂವೇದನೆಗೆ ಮೊದಲ ನಿದರ್ಶನ,

    ನನ್ನಂತಹ ಅಜ್ಞಾತ ಕವಿಯನ್ನು ಗುರುತಿಸಿ, ನನ್ನ ಬಗ್ಗೆ ತಮ್ಮ ಬ್ಲಾಗಿನಲ್ಲಿ ಪುಟಗಟ್ಟಳೆ ಬರೆದು ಪ್ರೋತ್ಸಾಹಿಸಿದ ಅವರ 'ಒಳಗೇನೋ ಅಡಗಿಸಿಟ್ಟು - ಹೊರಗೇನೋ ನಟಿಸುವ' ಪ್ರಮೇಯವೇ ಇಲ್ಲದ ಅನಂತ ಸಾಗರದಂತಹ ಒಲುಮೆ. ನನ್ನನ್ನೂ ಶ್ರೀ. ಮೋಹನ ಕೊಳ್ಳೇಗಾಲರನ್ನೂ ಗಲ್ಫ ಕನ್ನಡದಂತಹ ಅಂತರ್ಜಾಲ ಪತ್ರಿಕೆಗೆ ಅಂಕಣರಾಗಿಸಿದಾಗಲೂ ಅವರು ಬಯಸಿದ್ದು ನಮ್ಮಿಬ್ಬರ ಬೆಳವಣಿಗೆಯೇ.

    ಅವರು ಅಪರೂಪಕ್ಕೆ ಕರೆ ಮಾಡುತ್ತಿದ್ದಾಗ, ತೋರುತ್ತಿದ್ದ ಆತ್ಮೀಯತೆ ಮತ್ತು ನನ್ನ ಬರವಣಿಗೆ ಕುರಿತಾದ ಗುರುತಿಸುವಿಕೆ ನಾನು ಮರೆಯಲಾರದ ಕ್ಷಣಗಳು. ಕಡೆಗೂ ಮುಖಾ ಮುಖಿಯಾಗಲಿಲ್ಲವಲ್ಲ ಎಂಬ ಕೊರಗು ನನಗೆ ಕಾಡುತ್ತಲೇ ಒರುತ್ತದೆ.

    ಅವರ ಕಣ್ಮರೆ ನನಗೆ ಸಹಿಸಲಾರದ ನೋವು ಉಳಿಸಿದೆ. ಇಂದಿಗೂ ನನಗೆ ಅದು ಅರಗಿಸಿಕೊಳ್ಳಲಾರದ ಸತ್ಯ. ಅವರ ಆತ್ಮಕ್ಕೆ ಭಾಗವಂತನು ಚಿರ ಶಾಂತಿಯನ್ನು ಕರುಣಿಸಲಿ. ಮತ್ತೊಮ್ಮೆ ಸ್ಥಿತಿವಂತರಾಗಿ ಕನ್ನಡ ನೆಲದಲ್ಲೇ ಅವರ ಉದಯವಾಗಲಿ.

    ರವಿಯಣ್ಣ,
    ನಿನಗಾಗಿಯೇ ನಾನು ಬರೆದ ಬಂದರುಗಳಿಗೆ... ಕವನದ ಈ ನಾಲ್ಕು ಸಾಲುಗಳು ನಿಮಗೆ ನನ್ನ ನುಡಿ ನಮನ:
    "ಇದ್ದೀಯ ನೀನೆಂಬ
    ನಂಬುಗೆಯ ಹಂಬಲದೇ
    ಕವಿತೆ ಕಟ್ಟಿದೆ ನಾನೂ
    ಇಳಿಸಿಕೋ ತೆರೆದ ಮನದಿ"

    ReplyDelete