ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Saturday 31 December 2011

ಮಧುರ ಪಿಸುಮಾತಿಗೆ, ಅದರ ತುಸು ಪ್ರೀತಿಗೆ

ಜನವರಿ ೧, ಸದಾ ನನ್ನ ನೆನಪಿನಲ್ಲುಳಿಯುವ ದಿನ. ಅದು ನವ ವಸಂತದ ಆರಂಭವೆಂಬ ಕಾರಣಕ್ಕೆ ಮಾತ್ರವಲ್ಲ. ನನ್ನ ಜೀವನದಲ್ಲಿನ ಒಂದು ಅನಿರೀಕ್ಷಿತ ತಿರುವು, ಒಂದು ಸುಮಧುರ ಯಾತನೆಯಾಗಿ ಉಳಿದ ಕಾರಣದಿಂದ. "ಆತ(?)" ನನ್ನ ಜೀವನದಲ್ಲಾಡಿದ ಆಟವನ್ನು ನಾನೆಂದಿಗೂ ಮರೆಯುವಂತಿಲ್ಲ..! ಇಂದು ಆ ಕ್ಷಣವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.


ನನ್ನ ಕ್ಯಾಂಟೀನ್ ಪುರಾಣದಲ್ಲಿ "ನಾನು ನಿನ್ನನ್ನು ನನ್ನ ಜೀವದ ಗೆಳೆಯನೆಂದು ತಿಳಿದಿದ್ದೇನೆಯೇ ಹೊರತು ನಲ್ಲನಾಗಿ ಅಲ್ಲ" ಎಂದು ಆಕೆ ನನ್ನ ಪ್ರೀತಿಗೆ ಅಲ್ಪವಿರಾಮವಿಟ್ಟಿದ್ದಳು..! ನನಗೋ ಅದ್ಯಾವುದಕ್ಕೂ ಹೊಂದಿಕೊಳ್ಳಲಾಗದೆ ಸ್ನೇಹಕ್ಕೆ ಪ್ರೀತಿಯನ್ನು ತ್ಯಾಗ ಮಾಡಿದ ಅಮರ ಪ್ರೇಮಿಯಾಗಿದ್ದೆ. ಆನಂತರದಲ್ಲಿ ಆಕೆ ಮತ್ತೊಂದು ಕತೆ ಹೇಳಲು ಶುರುವಚ್ಚಿದ್ದಳು. ನಾನು ಒಬ್ಬ ಹುಡುಗನನ್ನು ಪ್ರೇಮಿಸಿದ್ದೇನೆ, ಆತನನ್ನು ನನ್ನ ಜೀವದ ಗೆಳೆಯನಾದ ನಿನಗೆ ಪರಿಚಯಿಸಬೇಕೆಂದು ಹೇಳಿದಳು.ನನಗೋ ಹೃದಯದಲ್ಲಿ ಹೇಳಿಕೊಳ್ಳಲೂ, ತಾಳಿಕೊಳ್ಳಲೂ ಆಗದ ತಳಮಳ. ನನ್ನವಳೆಂದು ತಿಳಿದವಳು ನನ್ನೆದುರಿಗೆ ಮತ್ತೊಬ್ಬನನ್ನು ಪ್ರೀತಿಸುವುದು ಸಹಿಸಲಾಗದ ನೋವನ್ನು ನೀಡಿತ್ತು, ನಿದ್ರೆ ಬಿಟ್ಟ ಉದಾಹರಣೆಗಳೂ ಉಂಟು. ಇವೆಲ್ಲವುಗಳ ನಡುವೆಯೇ ಆಕೆ ಮತ್ತು ಆಕೆಯ ಮನೆಯವರೊಂದಿಗೆ ನಿಮಿಷಾಂಬಾ ದೇವಿಯ ದರ್ಶನವೂ ಆಗಿತ್ತು. ಅವಳ ಕುಟುಂಬದ ಎಲ್ಲ ಸದಸ್ಯರೂ ನನಗೆ ತುಂಬಾ ಹಿಡಿಸಿದ್ದರು, they were so cool together. ಆಕೆ ಅಂದು ನನ್ನೊಂದಿಗೆ ಏನನ್ನೋ ಹೇಳಲು ಚಡಪಡಿಸಿದ್ದಳು, ನಾನು ಆ ನಿಮಿಷಾಂಬಾ ದೇವಿಗೆ ನನ್ನ ಪ್ರೀತಿಯನ್ನು 'ನಮ್ಮ ಪ್ರೀತಿಯಾಗಿ' ಮಾಡೆಂದು ಅರ್ಜಿ ಹಾಕಿದ್ದೂ ಆಗಿತ್ತು.

ಅಂದು ಡಿಸೆಂಬರ್ 31ರ ಸಂಜೆ , ಆಕೆಯೊಂದಿಗೆ ಮೊಬೈಲ್ ನಲ್ಲಿ ಒಂದು ಗಂಟೆಯ ಸಂಭಾಷಣೆಯಾಗಿತ್ತು. ಅದು ನನ್ನ ಪ್ರೀತಿಯ ಸುಮಧುರ ನೆನಪುಗಳಲ್ಲೊಂದು. ಅವಳ ಜೀವನದ ನೂರಾರು ಕನಸುಗಳ ಬಗ್ಗೆ, ನಮ್ಮ ಗೆಳೆತನದ ಬಗ್ಗೆ, ನಾನು ಆಕೆಯ ಜೀವನದಲ್ಲಿ ಬಂದ ನಂತರ ಆದ ಬದಲಾವಣೆಗಳ ಬಗ್ಗೆ, ಅವಳ ಹುಚ್ಚು ಕಲ್ಪನೆಗಳ ಬಗ್ಗೆ ನಲಿವಿನಂತೆ ಉಲಿದಿದ್ದಳು. ನನಗಂತೂ ಅವಳ ಮಾತು ಕೇಳುವುದೇ ಸಿರಿ. ಹಾಗೆ ಆಗಸದಲ್ಲಿ ತೇಲುತಿದ್ದವನಿಗೆ ತಂತಿ ಬೇಲಿಯಾಗಿತ್ತು ಅವಳ ಕಡೆಯ ಮಾತು "ನನ್ನವನು ನಿನ್ನನ್ನು ಆದಷ್ಟು ಬೇಗ ಭೇಟಿಯಾಗಬೇಕಂತೆ". ನಾನು ಹೌಹಾರಿಬಿಟ್ಟಿದ್ದೆ!! ನಾನು ತುಂಬಾ ಬ್ಯುಸಿಯಾಗಿದ್ದೇನೆ ಪರೀಕ್ಷೆಗೆ ತಯಾರಿ ನಡೆಯುತ್ತಿದೆ, ಹಾಗೆ-ಹೀಗೆ ಎಂದು ಚೋಡಿದ್ದೆ. ನಿಜವಾದ ಕಾರಣವೇನೆಂದರೆ ನಾನು ಆಕೆಯ ಧ್ಯಾನದಲ್ಲಿಯೇ ಮುಳುಗಿ ಹೋಗಿದ್ದೆ. ಆತ ಮೋಹನನಾಗಿ ಬಂದು ನನ್ನವಳನ್ನು "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು(!)" ಎಂಬಂತೆ ನನ್ನಿಂದ ದೂರಕ್ಕೆ ಸರಿಸಿ ಬಿಟ್ಟರೆ? ಎಂಬ ಭಯ. ಸರಿ ಏನೋ ಸಬೂಬು ಹೇಳಿ ಸಂಭಾಷಣೆ ತುಂಡರಿಸಿದ್ದೆ.

ಅಂದು ರಾತ್ರಿ ಮನೆಯಲ್ಲಿ ಕೇಕ್ ಕತ್ತರಿಸಿ ವರ್ಷದಾರಂಭದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ನಾನು ಮೊಬೈಲ್ ಹಿಡಿದು ಶತಪಥ ಹಾಕುತ್ತಿದ್ದೆ. ಕಡೆಗೆ ಆ ಕಡೆಯಿಂದ ಕರೆ ಬರದಾದಾಗ ತಾಳಲಾರದೆ ನಾನೇ ಫೋನಾಯಿಸಿದೆ, "ನಾನೂ ನಿನಗೇ ಪ್ರಯತ್ನಿಸುತ್ತಿದ್ದೆ ಕಣೋ, ಆದರೆ ನೆಟ್ ವರ್ಕ್ ಪ್ರಾಬ್ಲಮ್, ನಾಳೆ ಸಿಗು, ಮಾತನಾಡಬೇಕು" ಉಲಿಯಿತು ಅವಳ ಧ್ವನಿ. ಇದ್ದ ಕೋಪವೆಲ್ಲ ಮಾಯವಾಗಿ "ಹೌದಾ, ಸರಿ ಅದೋಗ್ಲಿ ಬಿಡೆ, happy new year, ನಾಳೆ ಸಿಗುತ್ತೇನೆ" ಎಂದ್ಹೇಳಿ ಸಂಪರ್ಕ ಕಡಿದು ಮನೆಯವರ ಸಂಭ್ರಮಾಚರಣೆಯಲ್ಲಿ ಮುಳುಗಿಹೋದೆ.


ಜನವರಿ 1 ರಂದು ಆಕೆಯನ್ನು ಭೇಟಿಮಾಡುವ ಸಂಭ್ರಮ. ಕ್ಲೀನ್ ಆಗಿ ಶೇವ್ ಮಾಡಿ, ಟ್ರಿಮ್ ಆಗಿ ಅಪ್ಪ ಕೊಡಿಸಿದ್ದ ಹೊಸ ಬಟ್ಟೆ ತೊಟ್ಟು ಮನೆಯಿಂದ ಹೊರಟೆ. ಕಾಲೇಜ್ ತಲುಪಿ, ನಾನಿಲ್ಲಿದ್ದೇನೆ ಎಂದು ಆಕೆಯ ಮೊಬೈಲಿಗೊಂದು ಸಂದೇಶ ರವಾನಿಸಿದೆ. ಆಕೆ ಎದುರಿನಲ್ಲೇ ಪ್ರತ್ಯಕ್ಷ! ನನ್ನ ಎದೆಬಡಿತ ಅವಳಿಗೂ ಕೇಳಿಸಬಹುದೆಂದು ಹೆದರಿಬಿಟ್ಟೆ. ಆಕೆಯೋ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಕ್ಯಾಂಪಸ್ ನ ಪಾರ್ಕಿನಲ್ಲಿನ ಬೆಂಚ್ ಮೇಲೆ ಕುಳಿತು ಹರಟೆ ಶುರುವಚ್ಚಿದೆವು. ಅದು-ಇದು ಮಾತನಾಡುತ್ತಾ ಸಾಗಿತ್ತು ನಮ್ಮ ಮಾತುಕತೆ. ಹಾಗೆ ಸಾಗಿದ್ದ ಸಂಭಾಷಣೆ ಆಕೆಯ ಪ್ರೀತಿಯೆಡೆಗೆ ಹೊರಳಿತು. "ಇಂದು ನೀನು ಅವನನ್ನು ಭೇಟಿ ಮಾಡು, ಅವನು ಮೈಸೂರಿಗೆ ಬಂದಿದ್ದಾನಂತೆ, ನಾನಿನ್ನೂ ಅವನಿಗೆ ವಿಷ್ ಕೂಡ ಮಾಡಿಲ್ಲ, ಬೈಸಿಕೊಳ್ಳಬೇಕೇನೋ? ತಾಳು ಅವನಿಗೆ ಕಾಲ್ ಮಾಡಿ ಇಲ್ಲಿಗೆ ಬರಲು ಹೇಳುತ್ತೇನೆ". ಎಂದಾಕೆ ಒಂದೇ ಸ್ವರದಲ್ಲಿ ಉಸುರಿದಾಗ ನನ್ನ ಹೃದಯ ದಸಕ್ಕೆಂದಿತು. ನಾನು ಪ್ರತಿಕ್ರಿಯಿಸುವ ಮೊದಲೆ ಅವನ ನಂಬರ್ ಗೆ ಡಯಲ್ ಮಾಡಿಯೇ ಬಿಟ್ಟಳು. ಹೃದಯ ತನ್ನ ಬಡಿತ ಹೆಚ್ಚಿಸಿತು, ಎಲ್ಲಿ ಒಡೆದು ಹೋಗುವುದೋ ಎಂದು ಭಯಪಟ್ಟೆ. "ರಿಂಗ್ ಆಗ್ತಿದೆ, ತೆಗೀತಾನೇ ಇಲ್ಲ... ಕಾಲರ್ ಟ್ಯೂನ್ ಚೆನ್ನಾಗಿದೆ ಕೇಳು" ಎಂದು ನನ್ನ ಕಿವಿಗಿಟ್ಟಳು. ನನ್ನ ಕೈ ನಡುಗುತ್ತಿತ್ತು, ಮೈ ಬೆವರುತ್ತಿತ್ತು. "ಮಧುರ ಪಿಸುಮಾತಿಗೆ" ಎಂಬ ಬಿರುಗಾಳಿ ಸಿನೆಮಾದ ಸಾಂಗ್ ಕೇಳಿಸುತ್ತಿತ್ತು. ತಟ್ಟನೆ ಹೃದಯ ನಿಂತಂತಾಯ್ತು..!

ಅಯ್ಯೋ ಇದು ನನ್ನದೇ ಕಾಲರ್ ಟ್ಯೂನ್, ನನ್ನ ಮೊಬೈಲ್ ಎತ್ತಿ ನೋಡಿದೆ. silent mode ನಲ್ಲಿದ್ದ ಫೋನ್ ಹಾಗೆಯೇ ಜುಂಯ್ ಜುಂಯ್ ಎಂದು ವೈಬ್ರೇಟ್ ಆಗ್ತಿತ್ತು. ಅವಳ ಮೊಬೈಲ್ ಅನ್ನು ಅವಳ ಕೈಗಿಟ್ಟು ಒಂದು ಕ್ಷಣ ಮೌನವಾಗಿ ಕುಳಿತುಬಿಟ್ಟೆ. ಅವಳು "wish you happy new year" ಎಂದು ನನ್ನ ಕಿವಿಯಲ್ಲುಸುರಿದಳು. ನೂರಾರು ಭಾವಗಳಲ್ಲಿ ಮನ ತೋಯಿಸಿ ಹೋದಂತೆನಿಸಿತು. ಅಬ್ಬಾ! ಎಷ್ಟು ಜಾಣೆಯವಳು, ನನಗೀಗಲೂ ಮೈ ರೋಮಾಂಚನವಾಗುತ್ತದೆ. ನಾನವಳಿಗೆ ಪ್ರೇಮ ನಿವೇದಿಸಿಕೊಂಡ ಕ್ಯಾಂಟೀನ್ ಪುರಾಣ ನೆನಪಾಗುತ್ತದೆ. ಬರೋಬ್ಬರಿ ಎರಡು ತಿಂಗಳುಗಳ ನಂತರ ನನ್ನ ಅವಳು ನಮ್ಮ ಪ್ರೇಮಕ್ಕೆ ಅಧಿಕೃತ ಮುದ್ರೆಯೊತ್ತಿದ್ದಳು! ನನ್ನ ಮುಖದ ಭಾವಗಳನ್ನರಿಯಲು ಓರೆಗಣ್ಣಿನಲ್ಲಿ ನನ್ನ ಮೇಲೆ ದೃಷ್ಠಿ ನೆಟ್ಟ ಅವಳೆಡೆಗೆ ಮುಗುಳುನಗೆ ಬೀರಿ ಸ್ವಲ್ಪ ಹತ್ತಿರಕ್ಕೆ ಸರಿದು ಕುಳಿತೆ. ಒಮ್ಮೆಲೇ ಅಪ್ಪಿ ಮುದ್ದಿಸಬೇಕೆಂಬ ಭಾವೋತ್ಕಟತೆ. ಎಂದೂ ಸಭ್ಯತೆಯ ಎಲ್ಲೆ ಮೀರದ ನಾನು, ಅವಳ ಕೈಯನ್ನು ನನ್ನ ಕೈಯಲ್ಲಿಟ್ಟುಕೊಂಡು ನೇವರಿಸಲಷ್ಟೆ ಶಕ್ತನಾದೆ. ಹಿಡಿದ ಕೈಯನ್ನು ಎಂದೂ ಬಿಡೆನು ಎಂದು ಕಣ್ಣಿನಲ್ಲಿಯೇ ಸಂದೇಶ ರವಾನಿಸಿದೆ. ಅವಳು ಹಿಡಿತವನ್ನು ಬಿಗಿಗೊಳಿಸಿದಳು. ಅಕ್ಕ-ಪಕ್ಕದಲ್ಲಿದ್ದ ಕಣ್ಣುಗಳು ನಮ್ಮನ್ನೇ ನೋಡುತ್ತಿವೆ ಎಂದೆನಿಸುತ್ತಿತ್ತು ನನಗೆ. ಆದರೂ ಹಾಗೇ ಕೈಹಿಡಿದು ಕುಳಿತೆವು. ಹತ್ತು ನಿಮಿಷ ನೆಲೆಸಿದ್ದ ನಿರ್ಮಲ ಮೌನದಲ್ಲಿ ಹೃದಯಗಳೆರಡೂ ಕಣ್ಣುಗಳೊಳಗಿಳಿದು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದವು.


ಸ್ವಲ್ಪ ಸಮಯದ ನಂತರ ಕೈಹಿಡಿದೇ ಅವಳ PG ಯೆಡೆಗೆ ಹೆಜ್ಜೆ ಹಾಕಿದೆವು, ಮುಂದೆ ಹೀಗೆಯೇ ಸಪ್ತಪದಿ ತುಳಿದೇವು ಎಂಬ ಕನಸಲ್ಲಿ.

ಇಂದು ಆಕೆ ನನ್ನೊಂದಿಗಿಲ್ಲ, ಯಾವ ಕ್ಷುದ್ರಶಕ್ತಿಯ ಕಣ್ಣು ಬಿತ್ತೋ ಗೊತ್ತಿಲ್ಲ., ಆದರೆ ಅವಳೊಂದಿಗೆ ಅವಳ ನೆನಪುಗಳು ಮಧುರ ಮತ್ತು ಶಾಶ್ವತ..!

ಪುಟ್ಟಾ, ಈ ಲೇಖನವನೊಮ್ಮೆ ನೀನು ನೋಡುವಂತಾದರೆ ಸಾಕು ಕಣೆ, ನಾನು ಧನ್ಯ ಧನ್ಯ ಧನ್ಯ.

ಎಲ್ಲರೂ ದಯವಿಟ್ಟು, ಮೂರು ವಸಂತ ಪೂರೈಸಿ, ನಾಲ್ಕನೇ ವಸಂತಕ್ಕೆ ಕಾಲಿರಿಸಿರುವ ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಬಿಡಿ...:-)

ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು, ದೇವರು ಎಲ್ಲರನ್ನೂ ಹರಸಲಿ, ಕಾಪಾಡಲಿ...:-)

- ಪ್ರಸಾದ್.ಡಿ.ವಿ.

Tuesday 27 December 2011

ಅಹಂ ಬ್ರಹ್ಮಾಸ್ಮಿ



ಹುಟ್ಟಿನಿಂದ ಪಡೆದು ತಂದೆ
ಸಾವಿರಾರು ಬಂಧಗಳ...
ಅಪ್ಪನಿಂದ ಪಡೆದವು
ಅಜ್ಜ-ಅಜ್ಜಿ, ಚಿಕ್ಕಪ್ಪ,
ದೊಡ್ಡಪ್ಪ, ಅತ್ತೆ...
ಅಮ್ಮನಿಂದ ಪಡೆದವು
ಅಜ್ಜ-ಅಜ್ಜಿ, ಚಿಕ್ಕಮ್ಮ,
ದೊಡ್ಡಮ್ಮ, ಮಾವ...
ಇಬ್ಬರಿಂದಲೂ ಪಡೆದವು
ಅಣ್ಣ-ಅಕ್ಕ, ತಮ್ಮ-ತಂಗಿ...
ನಿನಗಾಗಿ ಮಿಡಿದ
ಹೃದಯಗಳೆಷ್ಟು ಇಲ್ಲಿ..?
ಎಲ್ಲರವರವರ ಅನುಕೂಲತೆಗಳಿಗೆ
ಜೋತು ಬಿದ್ದವರು,
ಬಣ್ಣ ಕಟ್ಟಿಕೊಂಡು ಕುಣಿವರು,
ಹೊಗಳುವರು ನೀನೇ ಇಂದ್ರ-ಚಂದ್ರ
ನಂಬಬೇಡವೋ ಮೂಢ
ನಂಬಿಕೆಯ ಬೆಟ್ಟವೇರಿಸಿ
ಆಳ ನೋಡುವ ಹುನ್ನಾರ,
ನಿನಗಾಗಿ ಮಿಡಿದ ಹೃದಯವೊಂದೆ,
ಎದೆಯ ಮೇಲೆ ಕೈಯಿಟ್ಟು
ಕೇಳು ಅದರ ಬಡಿತವ,
ನಿನ್ನಿರುವ ಸಂಕೇತಿಸುವ ಮಿಡಿತವ...

ಬದುಕುವ ರೀತಿ-ನೀತಿಗಳು
ಕಲ್ಪಿಸಿದವು ನೂರಾರು ಅನುಬಂಧಗಳ,
ಶತ್ರು-ಮಿತ್ರ, ಗೆಳೆಯ-ಗೆಳತಿ,
ನಲ್ಲೆ ಹೆಂಡತಿ,
ಮಕ್ಕಳು-ಮರಿಗಳು,
ಸಹವರ್ತಿಗಳು,
ಎಲ್ಲವೂ ಸಹಜವೇ, ಸಹ್ಯವೇ...
ಆದರೆ ಅವರವರ
ಬದುಕು ಅವರವರಿಗೆ,
ಸಮಾನಾಂತರ ರೇಖೆಯ
ಬಾಳು ನಮ್ಮದು
ಸಂದಿಸುವುದನಂತದಲಿ...
ಮುಖ ನೋಡಿ ನಗುವೆವು,
ಅಳು ನೋಡಿ ಮಿಡಿವೆವು...
ಮತ್ತದೇ ನಾಟಕವೇ..!
ಬದುಕೊಂದು ನಾಟಕರಂಗ
ವಿಧಿಯದರ ಸಾಹೇಬ..!

ಬಂಧ-ಅನುಬಂಧಗಳಲ್ಲಿ
ಸಿಲುಕಿದ ಮೀನಾದೆ,
ಸಾಧನೆಯು ಶೂನ್ಯವಾಗಿ,
ದುರಾಸೆಯಲ್ಲಿ ನಿರಾಸೆಯ ಮೂಟೆ ಹೊತ್ತು
ಸವೆಸಿರುವೆ ಬದುಕಹಾದಿ,
ವರ್ಷಗಟ್ಟಲೆ ಉಸಿರಾಡಿದ್ದೀ,
ಆದರೆ ಬದುಕಿದ ಕ್ಷಣಗಳೆಷ್ಟು..?
ನಿನಗಾಗಿ ನಿನ್ನ ಹೃದಯ
ಬಡಿದ ಬಡಿತಗಳೆಷ್ಟು..?
ಅನಂತದಲ್ಲಿನ ಬದುಕಿಗಾಗಿ
ಕೂಡಿಟ್ಟ ಪುಣ್ಯದ ಗಂಟುಗಳೆಷ್ಟು..?
ಮಾನವನ ಬದುಕು
ನೀರಮೇಲಿನ ಗುಳ್ಳೆ..!
ಇನ್ನಾದರೂ ಬದುಕಬಾರದೆ ಬದುಕ..?
ನಿನಗಾಗಿ, ನಿನ್ನೊಳಗಿನ
ಆತ್ಮದ ಪರಮಾತ್ಮನ ಸಂತೃಪ್ತಿಗಾಗಿ...
ಅಹಂ ಬ್ರಹ್ಮಾಸ್ಮಿ...!

- ಪ್ರಸಾದ್.ಡಿ.ವಿ.
---------------------------------------------------------------------------------------------------
ಕೇವಲ ಜಂಜಡಗಳಲ್ಲಿ ಸಿಲುಕಿ ನರಳದೆ ನಿಮ್ಮ ಮನಸ್ಸಿನ ಸಂತೋಷಕ್ಕೆ ಬದುಕ ಕಟ್ಟಿಕೊಳ್ಳಬೇಕು.. ನಗು, ಅಳು, ಪ್ರೀತಿ, ನಿರಾಶೆ, ನೋವು, ಯಶಸ್ಸು ಎಲ್ಲವು ಸಮ್ಮಿಳಿತಗೊಂಡ ಬಾಳಾಗಬೇಕು ನಮ್ಮದು.. ಹೊಸ ಹೊಸ ತಪ್ಪುಗಳನ್ನು ಮಾಡಬೇಕು ಮತ್ತು ಅವುಗಳಿಂದ ಪಾಠ ಕಲಿಯಬೇಕು, ತಪ್ಪುಗಳು ಗತಿಸಿದವೆಂದು ಚಿಂತಿಸುವ ಅಗತ್ಯವಿಲ್ಲ ಯಾಕೆಂದರೆ ಈ ರೀತಿಯ ಪೆದ್ದುತನಗಳು ಜೀವನದಲ್ಲಿಲ್ಲದಿದ್ದರೆ ವಯಸ್ಸಾದ ಮೇಲೆ ನೆನೆಸಿ ನಗಲು ಕಾರಣಗಳೇ ಉಳಿಯದು.. ತಪ್ಪು ಮತ್ತು ಬದಲಾವಣೆಗಳು ಹರಿಯುವ ನೀರಿನಂತೆ..! ಬದುಕನ್ನ ಸಹಜವಾಗಿ ನಿರ್ಮಿಸಕೊಳ್ಳಬೇಕು, ಕೃತಕತೆ ಆದಷ್ಟು ಕಡಿಮೆಯಾಗಲಿ ಎಂಬುದು ಕವಿತೆಯ ಆಶಯ..

Saturday 24 December 2011

ದೇವಮಾನವ ಯೇಸು




ದರ್ಪದಾಡಳಿತಕ್ಕೆ ಬೇಸತ್ತು
ಜೀವವನು
ಅರಸೊತ್ತಿಗೆಗಡವಿತ್ತು,
ನಲುಗುತ್ತಿರುವ ಜೀವಗಳ
ಸಂಕೋಲೆ ಕಳೆಯಲು,
ಭವಬಂಧನ ಬಿಡಿಸಲು
ಅವತರಿಸಿದನವಧೂತನ
ಯೇಸುವೆಂದರು ಜನ!

ಕಣ್ಣಿಲ್ಲದವರ ಕಣ್ಣಾದ,
ಮೌನದ ಮಾತಾದ,
ಮಾನವೀಯ ಗುರುವಾದ!
ಕುಜನರ ಕುಯುಕ್ತಿಗೆ
ದೇವನೆಂದವರೂ
ಕಲ್ಲು ಹೊಡೆದರು,
ಕೈಗಳಿಗೆ ಮೊಳೆ ಜಡಿದರು!
ಶಿಲುಬೆಗೇರಿಸಿ, ಕೈ ಮುಗಿದರು!

ಯೇಸು ನಗುತ್ತಲಿದ್ದ,
ಜನರ ಜತನಾರಭ್ಯ
ಅಂಟಿದ್ದ ಕರ್ಮಗಳ ತೊಳೆದು,
ತಮವನ್ನು ತೊಡೆದು,
ಬೆಳಕನ್ನು ನೀಡೆಂದು
ದೇವನಲ್ಲಿ ಮೊರೆಯುತ್ತಿದ್ದ!
ಸಾವಿನಲ್ಲೂ ಮಾನವೀಯತೆ
ಸಾರಿ ಸ್ಥಬ್ದನಾದ!

ಯೇಸುವೆಂದರೆ
ಅವನಾರೂ ಅಲ್ಲ!
ನಿಮ್ಮ ನಮ್ಮೊಳಗಿನ ಜ್ಯೋತಿ,
ಬೆಳಗುವುದದರ ರೀತಿ!
ತನ್ನ ಮುಗ್ಧತೆಯನ್ನೇ
ಬತ್ತಿಯಾಗಿಸಿ,
ತಾನೇ ತಪ್ತ ದೀಪ್ತಿಯಾದನು!
ಜನರ ಬಾಳಿಗೆ ದೀಪವಾದನು!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

Friday 16 December 2011

ಮನ ಕಲ್ಲಾಗುವಾ ಮುನ್ನ



ನಾ ನಗಲು ತುಟಿ ಬಿರಿಯೆ
ನನ್ನ ನಗುವಲ್ಲೂ ಇಣುಕಿ
ಕಾಡುವ ನಿನ್ನ ಪರಿಯ
ಏನೆಂದು ಬಣ್ಣಿಸಲಿ ಚೆಲುವೆ
ನಿನ್ನ ಧ್ಯಾನದಲಿ
ನಾನು ನಾನಲ್ಲ, ನೀನು ನೀನಲ್ಲ,
ನಾನು ನೀನು, ನಿನ್ನೊಳಗೆ ನಾನು...

ನಾನಳಲು ಕಣ್ಣಹನಿಯಲ್ಲೂ
ನಗುವ ನೀನು,
ನೆನಪಲ್ಲೂ ನೀನು,
ಕನಸಲ್ಲೂ ನೀನು,
ನನ್ನ ಪ್ರತಿಯೊಂದು ಕೃತಿಯಲ್ಲೂ
ಇಣುಕಿ, ನಗುತ ಕಾಡುವ ನೀನು,
ನಾನು ನಾನಾಗಿಯೇ ಉಳಿದಿಲ್ಲ
ನಾನೆಲ್ಲವೂ ನೀನೆಂಬ ಅನುಮಾನ..!
ಇದು ನಿನ್ನಲ್ಲಿ ನನ್ನ ಬಂಧನವೋ?
ಇಲ್ಲ ನನ್ನಿಂದ ನನಗೇ ಬಿಡುಗಡೆಯೋ?

ನಗುವಲ್ಲೂ ಕಾಡುವೆ,
ಅಳುವಲ್ಲೂ ಇಣುಕುವೆ,
ನಿನ್ನ ಮನಸಾರೆ ಪ್ರೀತಿಸಿದ
ಎನ್ನ ತಪ್ಪನ್ನು ಮನ್ನಿಸಿ
ನನ್ನ ಶಾಪ ವಿಮೋಚನೆ
ಮಾಡಿಬಿಡು ಗೆಳತಿ
ಈ ನನ್ನ ಮನ ಕಲ್ಲಾಗುವ ಮುನ್ನ...

- ಪ್ರಸಾದ್.ಡಿ.ವಿ.

Saturday 10 December 2011

ಎಂದೂ ನಿದ್ರಿಸದ ಕಾಂಚಾಣ



ರೈತನ ಹೊಲದಲ್ಲಿ ಪೈರಾಗಿ ಮೊಳೆತು
ಬೆಳೆಯಾಗಬೇಕಿದ್ದ ಹಣ,
ಅವನ ಕೊರಳಿಗೆ ಉರುಳಾಗಿದೆ,
ಬೆಳೆಗೆ ಜೀವಜಲ ವರುಣ
ಅತಿವೃಷ್ಠಿಗೆ ಬೆಳೆ ನಲುಗಿದೆ...
ಬೆಳೆಯ ಸಾಲಿಗನು ಬಂದು ಸೆಳೆಯೆ
ರೈತನ ಬಾಳೇ ಬರಡಾಗಿದೆ,
ಸಾವಿನಲ್ಲಿ ನರ್ತನಗೈವ ಹಣ
ಎಂದೂ ನಿದ್ರಿಸದ ಕಾಂಚಾಣ..!

ಮಗಳ ಮದುವೆಗೆ ಬೇಕು
ಲಕ್ಷಗಟ್ಟಲೆ ಹಣ,
ಅವನ ವರಮಾನವೋ ಕೆಲವು ಸಾವಿರಗಳಣ್ಣ,
ಹೇಗೋ ಕಷ್ಟಪಟ್ಟು ಮಾಡಿ
ಮುಗಿಸಿದ ಮಗಳ ಮದುವೆ,
ತೀರದ ದಾಹ ವರದಕ್ಷಿಣೆಗೆ,
ಆ ಹೆಣ್ಣನ್ನು ತಳ್ಳಿತು ಬೆಂಕಿಯ ದಾವಾಗ್ನಿಗೆ..!
ಮಗಳ ಕರಕಲು ದೇಹದ ಹೆಣ
ಮನೆಯವರ ಆಕ್ರಂದನ ಕೇಳಿಸಿಕೊಳ್ಳದ ಹಣ,
ಆಕ್ರಂದನದಿ ನರ್ತನಗೈವ ಹಣ,
ಎಂದೂ ನಿದ್ರಿಸದ ಕಾಂಚಾಣ..!

ಮೋಜು ಮದಿರೆಯ
ದಾಸ್ಯದಲ್ಲಿ ಯುವ ಜನತೆ,
ಕಂಟಪೂರ್ತಿ ಮದಿರೆ ಹೀರುವನೀತ,
ಎಳೆದೆಳೆದು ಬಿಡುವ
ಸಿಗರೇಟಿನ ಧೂಮ,
ಅಪ್ಪ ಕೂಡಿಟ್ಟ ಹಣವೆಲ್ಲ
ಧೂಮದಲ್ಲಿ ಹೋಮ,
ಪ್ರಿಯವಾದವು ಗಾಂಜಾ-ಅಫೀಮು,
ಇವುಗಳ ಚಟಕ್ಕೆ
ಅವನ ಜೀವವೇ ಇನಾಮು..!
ಮೋಜು ಮದಿರೆಯ ನಶೆಯಲ್ಲೂ
ನರ್ತನಗೈವ ಹಣ,
ಎಂದೂ ನಿದ್ರಿಸದ ಕಾಂಚಾಣ..!

- ಪ್ರಸಾದ್.ಡಿ.ವಿ.

Friday 2 December 2011

ಪ್ರೀತಿಯ ಅಳಲಿನಾಳ



ದೂರದಲ್ಲಾರೋ ಅಳುತ್ತಿರುವ ಸದ್ದು,
ದೂರದ ನದಿಯ ತೀರದಲ್ಲೋ,
ಅದರ ಹತ್ತಿರವಿರುವ ಸ್ಮಶಾನದಲ್ಲೋ,
ಅಲ್ಲೆಲ್ಲೋ ಅರಣ್ಯರೋಧನ,
ಮನ ತಡೆಯದೆ ಹುಡುಕುತ್ತ ಹೊರಟೆ,
ಅದರ ಹೆಸರು ಪ್ರೀತಿಯಂತೆ,
ವಾರಸುದಾರರಿಲ್ಲದೆ ಅಳುತ್ತಿರುವುದಂತೆ..!

ನನಗೋ ಕುತೂಹಲ ಜಾಸ್ತಿ,
ಏನು ನಿನ್ನ ಕತೆ, ಕೇಳಿಬಿಟ್ಟೆ...
ಒಂದೂರಿನಲ್ಲೊಬ್ಬ ಹೃದಯವಂತ,
ಒಬ್ಬಳು ಹೃದಯವಂತೆ,
ಕಣ್ಣು - ಕಣ್ಣು ಕಲೆತು,
ಹೃದಯಗಳು ಮಾತಿಗೆ ನಿಂತು,
ಆಗಿ ಹೋಯ್ತು ಪ್ರೀತಿ...
ಆ ಜೋಡಿಗೆ ಪ್ರೀತಿಯೇ
ಪರಮಾನ್ನ, ಮೃಷ್ಠಾನ್ನ..!

ಪ್ರೀತಿಯ ವಿಷಯ
ಪೋಷಕರ ಮನೆಮುಟ್ಟಲು
ಇವರು ಉಸಿರಾಡಿದ
ಗಾಳಿಯೇ ಸಾಕಂತೆ..!
ಹುಡುಗಿಯಪ್ಪನಿಗೋ
ತನ್ನ ಜಾತಿಯೇ ಮೇಲು,
ಆ ಹುಡುಗ ಬೇಡವೆಂದ,
ಹುಡುಗನಪ್ಪನೋ
ಸ್ವಪ್ರತಿಷ್ಠೆಯೇ ಮೇಲೆಂಬ ಭೂಪ
ಅವಳ್ಯಾವಳೋ ಎಲುಬಿಲ್ಲದ
ನಾಲಿಗೆಯವನ ಮನೆಯವಳು,
ಆ ಹುಡುಗಿ ಬೇಡವೆಂದ..!
ಹುಚ್ಚು ಪ್ರೀತಿಯ ಬರದಲ್ಲಿ
ಪ್ರೇಮಿಗಳು ನಿರ್ಧರಿಸಿಬಿಟ್ಟವು
ಈ ಜಗವೇ ಬೇಡ, ಜನವೂ ಬೇಡ..!

ಒಬ್ಬನ ಜಾತಿಯ ರಾಜ್ಯಭಾರ
ಇನ್ನೊಬ್ಬನ ಮಗನ
ಸಮಾಧಿಯ ಮೇಲೆ,
ಇವನ ಸ್ವಪ್ರತಿಷ್ಟೆಯ
ಹುಂಬತನದ ನರ್ತನ
ಅವನ ಮಗಳ
ಗೋರಿಯ ಮೇಲೆ..!
ಮಕ್ಕಳಿಬ್ಬರ ಸಮಾಧಿಯೇ
ಗೋರಿ ಆ ಪ್ರೀತಿಗೀಗ..!
ಪ್ರೀತಿ ಬಡವಾಯ್ತು
ಇವರಿಬ್ಬರ ದೆಸೆಯಿಂದ..!
ಆ ಪ್ರೇಮಿಗಳ ಪ್ರೀತಿಯ
ಮಗುವನ್ನು ಜೋಳಿಗೆಯಲ್ಲಿ
ಕಟ್ಟಿ ತೂಗಬೇಕಿದ್ದ ಪ್ರೀತಿ
ಅಳುತ್ತಲಿದೆ ವಾರಸುದಾರರಿಲ್ಲದೆ..!
ಅರಿಯುವವರಾರು
ಆ ಪ್ರೀತಿಯ ಅಳಲ?
ಊಹಿಸಬಲ್ಲಿರ
ಅದರ ಅಳಲಿನಾಳ?

- ಪ್ರಸಾದ್.ಡಿ.ವಿ.
------------------------------------------------------------------------------------------------------------------
ಕಣ್ಣೆದುರೇ ಕಂಡ ಒಂದು ಅಮಾನವೀಯ ಕೃತ್ಯದೊಟ್ಟಿಗೆ ಪುಟ್ಟ ಪ್ರೀತಿಯೊಂದರ ಅಳಲು, ಹೊರಬರಲು ಚಡಪಡಿಸಿ ಇಂದು ಪದಗಳ ರೂಪ ಪಡೆದಿದೆ. ಅವರ ಒಬ್ಬನೇ ಮಗನನ್ನು ಕಳೆದುಕೊಂಡು ಕೊರಗುತ್ತಿರುವ ಅವನಿಗೆ ಈಗ ಅವರ ಮಗ ಬೇಕಂತೆ..! ಇವನಿಗೆ ಕಾಡಿ-ಬೇಡಿ ಹೆತ್ತ ಮಗಳು ಮತ್ತೆ ಬೇಕಂತೆ..! ಆ ಪ್ರೇಮಿಗಳ ಪ್ರೀತಿ ಇವರಿಬ್ಬರ ಮನೆಯಲ್ಲಿ ಕಣ್ಣೀರ ಧಾರೆಯಾಗಿ ಅರಿಯುತ್ತಿದೆ. ಜಾತಿಯ ಮತಾಂದತೆಗೆ, ಸ್ವಪ್ರತಿಷ್ಟೆಯ ಹುಂಬತನಕ್ಕೆ ಇಷ್ಟಾದರೂ ಶಿಕ್ಷೆ ಬೇಡವೇ? ಹುಚ್ಚುತನಕ್ಕೆ ಬಿದ್ದ ಆ ಇಬ್ಬರು ಪ್ರೇಮಿಗಳು ಇಹ ಲೋಕವನ್ನೇ ತ್ಯಜಿಸಿವಬಿಟ್ಟಿವೆ, ಅವುಗಳಿಗವೇ ಶಿಕ್ಷೆ ಕೊಟ್ಟಿಕೊಂಡಿವೆ..!!!!!

Tuesday 29 November 2011

ನಾವು ಭಾರತೀಯರು



ನಾವು ಭಾರತೀಯರು,
ಸುರಿಸಿ ಕೋಡಿ ನೆತ್ತರು,
ಸ್ವಾತಂತ್ರ್ಯವನ್ನು ನಮ್ಮ
ಕೈಗಿತ್ತರು ಮಹಾತ್ಮರು, ಹುತಾತ್ಮರು...
ಭಗತ್ ಸಿಂಗ್, ಗಾಂಧೀಜಿ, ಶುಭಾಷ್ ಚಂದ್ರರು,
ಎಷ್ಟೆಷ್ಟೋ ಸ್ವತಂತ್ರವೀರರು,
ಭಾರತಮಾತೆಯ ಗರ್ಭಸಂಜಾತರು,
ಹೋರಾಟ, ನೋವಿನೊಂದಿಗೆ
ಜಯದ ಉಗಮವೆಂದು ಸಾರಿ ಹೋದರು...

ಆಧ್ಯಾತ್ಮದ ದೀವಿಗೆಯನ್ನು ಹೊತ್ತಿಸಿದರು
ನಮ್ಮ ಮುನಿ - ಋಷಿವರ್ಯರು,
ಪತಂಜಲಿ ಮೊದಲ ಯೋಗಗುರು,
ಗುರು ಪರಂಪರೆಯ
ಆರಂಭವೇ ದತ್ತಾತ್ರೇಯರು,
ಉದಾತ್ತ ಚಿಂತನೆಗಳು, ಜ್ಞಾನದ
ಕ್ರಿಯಾಶೀಲತೆಗೆ ನಮ್ಮದೇ ತವರು,
ನಮ್ಮವರೇ ಆರ್ಯಭಟ, ಭಾಸ್ಕರರು...
ಇಂತಹ ಪುಣ್ಯ ನೆಲದಲ್ಲಿ ಹುಟ್ಟಿದ
ನಾವುಗಳೇ ಪುಣ್ಯವಂತರು,
ನಮ್ಮೆಲ್ಲರಿಗೂ ಭಾರತಾಂಬೆಯದೇ
ಮಡಿಲು, ಬತ್ತದ ಒಡಲು...

ನೋವಿನಲ್ಲೇ ಹುಟ್ಟಿ-ಬೆಳೆದರೂ,
ನಮ್ಮನ್ನೇ ನಾವು ನಂಬಲಾಗದವರೇನು?
ನಾವು ಕೈಲಾಗದವರೆಂದುಕೊಂಡಿರೇನು?
ಭ್ರಷ್ಟ ರಾಜತಾಂತ್ರಿಕರೇ
ನೀವೂ ಭಾರತೀಯರಲ್ಲವೇನು?
ನಿಮ್ಮನ್ನೂ ಭಾರತಾಂಭೆ
ಹಾಲುಣಿಸಿ ಬೆಳೆಸಿಲ್ಲವೇನು?
ಉತ್ಕೃಷ್ಟ ಬೀಜಗಳನ್ನು ಭಿತ್ತಿದರೂ
ಕಳ್ಳಿ ಗಿಡವೇ ಬೆಳೆದೀತೇನು?
ಇದೇ ಕಡೆಯ ಎಚ್ಚರಿಕೆ ನಿಮಗಿನ್ನು,
ಶಾಂತಿಪ್ರಿಯತೆಯೇ ಸಂಕೋಲೆಯಲ್ಲ
ನಮಗೇನೂ, ನೆನಪಿಡಿ ನೀವಿನ್ನು...

ತಲೆಮಾರುಗಳು ಉರುಳಿದರೇನು?
ಕಿಚ್ಚು, ಆತ್ಮಶಕ್ತಿ ಕುಂದುವುದೇನು?
ಜ್ಞಾನದ ಒರತೆ, ಕ್ರಿಯಾಶೀಲತೆ ಬತ್ತುವುದೇನು?
ಮನೋಬಲ ಜೊತೆಗಿರೆ,
ಜಯದ ಹಾದಿ ದುರ್ಗಮವೇನು?
ನಮ್ಮನ್ನು ನಾವೇ ಗೆದ್ದರೆ
ಅಸಾಧ್ಯವಾದುದೇನು?
ನಂಬಿಕೆಯ ಅಸ್ತ್ರವಿಡಿದು ನಿಂತರೆ
ವೈರಿ ಪಡೆ ನಿಶ್ಶೇಷವಾಗುವವರೆಗೂ
ವಿರಮಿಸೆವು ನಾವಿನ್ನು,
ನಿಮಗಿದೋ ಕಟ್ಟ ಕಡೆಯ ಎಚ್ಚರಿಕೆ
ನಾವು ಭಾರತೀಯರು...

- ಪ್ರಸಾದ್.ಡಿ.ವಿ.

Tuesday 22 November 2011

ಪಾಳೇಗಾರನ ದರ್ಪ



ಒಂದೂರಿನಲ್ಲೊಬ್ಬ ಪಾಳೇಗಾರ,
ಪಾಳೇಗಾರಿಕೆ ಅವನಿಗೆ ಸಿಕ್ಕ
ಅನುವಂಶೀಯ ಸ್ವತ್ತು,
ಗೆದ್ದಲು ಕಟ್ಟುವ ಹುತ್ತದೊಳಗೆ
ನುಸುಳುವ ಹಾವು ಅವನು,
ಬಡವರ, ಕೂಲಿಗಳ, ರೈತರ,
ದುಡಿಯುವವರ ಅಸ್ಥಿಗಳೇ
ಅಡಿಪಾಯ ಅವನ ಮಹಲಿಗೆ..!!
ಹಸಿದ ಜನರ ಹಸಿವಿನ
ದಳ್ಳುರಿಯಲ್ಲಿ ಮೈ-ಚಳಿ
ಕಾಯಿಸಿಕೊಳ್ಳುವ ಅವನ
ಚೇಲಾಗಳೋ ರಕ್ತ ಪೀಪಾಸುಗಳು..!!
ಅವನ ಗದ್ದುಗೆಗೆ ಗೊಡ್ಡು
ಸಲಾಮು ಹೊಡೆದು ನಿಂತವರೇ
ಅವನ ಪ್ರಿಯ ಅಧಿಕಾರಿಗಳು,
ಅವನೊಟ್ಟಿಗೆ ಸಹಕರಿಸುವ
ಎಲ್ಲರಿಗೂ ಅವರವರ ಶಂಡತನಕ್ಕೆ
ತಕ್ಕಂತೆ ಇನಾಮು..!!
ಇಂದೂ ಅಧಿಕಾರಿಯೊಬ್ಬನ
ಸಹಕಾರಕ್ಕೆ ದೊಡ್ಡ ಗಾತ್ರದ
ಇನಾಮು ಕೊಟ್ಟು ಗಹಗಹಿಸಿ ನಕ್ಕಿದ್ದ,
ಜನರನ್ನು ಬಡಿದು
ಬಾಯಿಗೆ ಹಾಕಿಕೊಂಡ ದರ್ಪದಲಿ..!!

ಇತ್ತ ಇವನೊಬ್ಬ ಅಧಿಕಾರಿ,
ಹೆಂಡತಿ ಅಹಂಕಾರಿ,
ದುಂದು ಮಾಡಿ ರೇಷ್ಮೆವಸ್ತ್ರ,
ಆಭರಣಗಳನ್ನು ಖರೀದಿಸುವ ಸೋಗಲಾಡಿ..!!
ಮಕ್ಕಳೋ ಅರೆಬೆಂದ ಮಡಿಕೆಗಳು,
ಮಡಿವಂತಿಕೆಯ ಸೋಗಿನಲ್ಲಿ
ಗಳಿಸಿದ ಹಣವನ್ನು ತೋಯಿಸಿಬಿಟ್ಟರು
ಹುಣಸೆ ಹಣ್ಣಿನಂತೆ ಹೊಳೆಯಲ್ಲಿ,
ವಯಸ್ಸದರೂ ಚಪಲ ಬಿಡದ ಅಪ್ಪ,
ಎಲ್ಲರೂ ಹಣಕ್ಕಾಗಿ
ಬಾಯಿ ಬಿಡುವ ರಣಹದ್ದುಗಳು..!!
ಇವನೊಬ್ಬನೇ ಧಾತಾರ
ಇವರೆಲ್ಲರ ವಾಂಚೆಗಳಿಗೆ..!!
ಎಲ್ಲರ ಸೌಕರ್ಯಕ್ಕಾಗಿ ಸಹಕರಿಸಿಬಿಟ್ಟ,
ಪಾಳೇಗಾರನೊಟ್ಟಿಗೆ ಅನಿವಾರ್ಯದಲಿ..!!
ಹಣದ ವಾಸನೆ ಹಿಡಿದು
ಅಧಿಕಾರಿ ವೃಂದ ಮೇಲೆರುಗೆ,
ನಿಜ ಬಣ್ಣ ಬಯಲಾಗಿತ್ತು..!!
ಬಣ್ಣ ಬಯಲಾಯಿತೆಂದು
ಮನ ಚಡಪಡಿಸಿ ಮರುಗಿತ್ತು,
ಜೀವ ಇಹವನ್ನು ತ್ಯಜಿಸೆ ಬಯಸಿತ್ತು,
ಅದರಂತೆ ತ್ಯಜಿಸಿತ್ತು..!!

ಬಲಿ ತೆಗೆದುಕೊಂಡಿತ್ತು ಬಡಜನರ
ಹಸಿವು, ರೋಧನ, ಹತಾಶೆಗಳು
ಯಾರನ್ನು ಎಂಬುದೇ ಪ್ರಶ್ನೆ??
ಈಗ ಪಾಳೇಗಾರನಿಗೆ ಅಧಿಕಾರಿಯ
ತಿತಿಯೂಟದ ಕರೆಯೋಲೆ,
ಅವನ ರಕ್ತ ಮಾಂಸಗಳೇ
ಪಾಳೇಗಾರನ ನೈವೇಧ್ಯಕ್ಕಿಂದು,
ಹೊಸ ಅಧಿಕಾರಿಯನ್ನು ಕರೆಸಿಕೊಂಡ
ಪಾಳೇಗಾರ ಗಹಗಹಿಸಿ
ನಕ್ಕಿದ್ದ ಮತ್ತದೇ ದರ್ಪದಿಂದ..!!

- ಪ್ರಸಾದ್.ಡಿ.ವಿ.


Friday 11 November 2011

ನೀನಿರದ ಸಂಜೆ (ಮನದ ಮಾತು)

                                        

  
ನನ್ನ ಪದವಿಯ ಪ್ರಾರಂಭದ ದಿನಗಳವು. ತುಂಬಾ innocent ಅಲ್ಲದಿದ್ದರೂ, ತಕ್ಕ ಮಟ್ಟಿಗೆ ಒಳ್ಳೆಯ ಹುಡುಗನೇ. ಎಲ್ಲರೊಂದಿಗೂ ಬೇಗನೆ ಬೆರೆಯುವ ಸ್ನೇಹ ಜೀವಿಯಾದರೂ ಹುಡುಗಿಯರೊಂದಿಗೆ ಮಾತು ಅಷ್ಟಕ್ಕಷ್ಟೆ. ನನ್ನ ಸಂಕೋಚ ಸ್ವಭಾವವೂ ಅದಕ್ಕೆ ಕಾರಣವಿದ್ದಿರಬಹುದು. ಆದರೆ ನೀ ನನ್ನ ಬಾಳಲ್ಲಿ ಬಂದ ನಂತರ ನನಗೇ ಅರಿವಿಲ್ಲದಂತೆ ನಾ ನಿನ್ನ ಹತ್ತಿರವಾಗಿದ್ದೆ. ಸ್ನೇಹವಾಗಿ ಪ್ರಾರಂಭವಾದ ನಮ್ಮ ಅನುಬಂಧ ಪ್ರೀತಿಯ ರೂಪ ಪಡೆಯಲು ಬಹಳ ದಿನಗಳೇನೂ ಬೇಕಾಗಲಿಲ್ಲ. ನಾ ನಿನ್ನೊಂದಿಗೆ ಕಳೆದ ಆ ರಸ ನಿಮಿಷಗಳೆಷ್ಟೊ, ಸುಮ್ಮನೆ ನಿನ್ನ ಮಾತು ಕೇಳುತ್ತಾ ಕುಳಿತ ಸಂಜೆಗಳೆಷ್ಟೋ, ನಿನ್ನ ಧ್ವನಿ ಕೋಗಿಲೆಯಂತೆ ಇಂಪಲ್ಲದಿದ್ದರೂ ನಾನದನ್ನು ಕೇಳಿದೊಡನೆ ಮಂತ್ರ ಮುಗ್ಧನಾಗುತ್ತಿದ್ದೆ. ಪ್ರೀತಿಯ ಬಾವಿಯಲ್ಲಿ ಬಿದ್ದವನಿಗೆ ಕಾಗೆಯ ಕಂಠವೂ ಕೋಗಿಲೆಯ ಕುಹೂ ಕುಹೂ...;-) ಬೆದರು ಬೊಂಬೆಯೂ ಮೋಹನಾಂಗಿಯೇ...;-) ಹ್ಹ ಹ್ಹ ಹ್ಹ ಹ್ಹಾ... ಕೋಪಿಸಿಕೊಳ್ಳಬೇಡ ಚಿನ್ನು ಸುಮ್ಮನೆ ಛೇಡಿಸಿದೆನಷ್ಟೇ.

ವಿನಿಮಯಗೊಳ್ಳುತ್ತಿದ್ದ ಆ ಹುಚ್ಚು-ಹುಚ್ಚು sms ಗಳು, leisure ಸಮಯಗಳಲ್ಲಿನ ಹರಟೆಗಳು, decent ಆದ ಆ ಭೇಟಿಗಳು, ಆ ಸಂಧ್ಯಾ ಸಮಯದ ನಮ್ಮ ಬಸ್ ಪ್ರಯಾಣಗಳು, ನಾನು ನಿನ್ನಲ್ಲಿ ಪ್ರೇಮ ನಿವೇಧಿಸಿಕೊಂಡ ಆ canteen ಪುರಾಣ, ನಮ್ಮ ಆ ಸಣ್ಣ-ಪುಟ್ಟ ಪ್ರೀತಿಯ fight ಗಳೂ... ಅಬ್ಬಾ ಎಂಥಾ ಸುಂದರ ರಸ ನಿಮಿಷಗಳಲ್ವಾ..?? ಮೈ ಜುಂಮೆನ್ನಿಸುತ್ತದೆ... ಆ ನೆನಪುಗಳೊಂದಿಗೆ ನೀನೇ ಕಣ್ಮುಂದೆ ಬಂದು ನಿಲ್ಲುತ್ತೀಯ. ಇಂದು ನೀನು ನನ್ನೊಂದಿಗಿಲ್ಲ ಎಂಬುದನ್ನು ನೆನಪಿಸಿಕೊಂಡೊಡನೆ ಎಲ್ಲಿ ನೀನು ನಮ್ಮ ನೆನಪುಗಳೊಂದಿಗೆ ಜಾರಿ ಹೋಗುವೆಯೋ ಎಂದು ಕಣ್ ಮುಚ್ಚಿಬಿಡುತ್ತೇನೆ. ನೀನು ಹನಿಯಾಗಿ ಕಣ್ಣಿನಲ್ಲಿ ಬಂದರೂ ಕಣ್ಣಾಲಿಗಳಲ್ಲೇ ಬತ್ತಿಹೋಗಲೆಂದು. ಆದ್ದರಿಂದಲೆ ನೀನಿನ್ನೂ ಇರುವೆ ನನ್ನ ಕಣ್ಣ ಹನಿಗಳಲ್ಲಿ ಬಿಸಿಯಾಗಿ, ನನ್ನ ಮನದಲ್ಲಿ ಮಗುವಾಗಿ.

ಗೆಳತಿ ನಿನಗೆ ತಿಳಿದಿರಲಿಕ್ಕಿಲ್ಲ, ನಿನ್ನೊಂದಿಗೆ ಕೆಲ ಸಮಯ ಕಳೆಯಲು ನಾ ಕಾದು ಕೂತ ಸಂಜೆಗಳೆಷ್ಟೋ, ನಿನ್ನ ಸಾನಿಧ್ಯ ಬಯಸಿ ನಾ ನಿಮಿಷ ಕಳೆದರೂ ಯುಗದಂತೆ ಭಾಸವಾಗುತ್ತಿದ್ದರೂ ಗಂಟೆಗಟ್ಟಲೆ ನಿನಗಾಗಿ ಕಾಯುತ್ತಿದ್ದೆ. ಪ್ರೀತಿಸಿದವರಿಗಾಗಿ ಕಾಯುವುದರಲ್ಲೂ ಏನೋ ಒಂಥರ ಹಿತವಿದೆ, ಅನುಭವಿಸಿದವರಿಗೇ ಗೊತ್ತು ಅದರ ಸುಖ. ನಮ್ಮ ಭೇಟಿಯನ್ನು ಯೋಜಿಸಿ ಆಯೋಜಿಸಿಕೊಂಡರೂ ಕಾಕತಾಳೀಯ ಭೇಟಿಗಳೆಂದು ನಿನ್ನೆದುರು pose ಕೊಡುತ್ತಿದ್ದ ದಿನಗಳೆಷ್ಟೋ? ನನಗೇ ನನ್ನ ಬುದ್ಧಿವಂತಿಕೆಯ ಅರಿವಾದ ದಿನಗಳವು...;-) ಹ್ಹ ಹ್ಹ ಹ್ಹಾ... ನೀನು ಒಮ್ಮೆ ನನ್ನ ನೋಡಿ ನಕ್ಕಾಗ, ಪ್ರೀತಿಯಿಂದ ಕೈ ಹಿಡಿದು ನೇವರಿಸಿದಾಗ ನಾನು ನನ್ನಲ್ಲೇ ಪುಳಕಿತನಾಗಿಬಿಡುತ್ತಿದ್ದೆ... ಆ ಭಾವದಲ್ಲಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತಿದ್ದೆ. ಎಷ್ಟು ಸುಂದರ ಗೆಳತಿ ಆ ಪ್ರಣಯದ ಭೇಟಿಗಳು. ನನ್ನ ಮನಸ್ಸಿಗೆ ಹೊಕ್ಕು ನನ್ನ ಹೃದಯವನ್ನೇ ದೋಚಿಬಿಟ್ಟಿದ್ದೆ ನೀ ಮಾಟಗಾತಿ. ನೀನಿನ್ನೂ ನನ್ನ ಮನಸ್ಸಿನ ಅಥಿತಿ ನಿನ್ನ ನೆನಪುಗಳೊಂದಿಗೆ, ಅಂತರಾಳದಲ್ಲಿ ಹುದುಗಿರುವ ಪ್ರೀತಿಯೊಂದಿಗೆ...

ನಿನ್ನ ಮುಚ್ಚು-ಮರೆಯಿಲ್ಲದ ನೇರ ವ್ಯಕ್ತಿತ್ವ, ನಿನ್ನ ಸರಳತೆಗೆ ಮಾರು ಹೋದ ನನ್ನ ಮನಸ್ಸು ಇನ್ನೂ ನನ್ನ ತಹಬದಿಗೆ ಸಿಕ್ಕಿಲ್ಲ. ನಿನ್ನ ಮನದ ಖೈದಿ ನಾನು ಬಂಧಿಸಿಬಿಟ್ಟೆಯಲ್ಲ ನನ್ನ ನಿನ್ನ ಪ್ರೀತಿಯಿಂದ. ನನ್ನ ಮನಸ್ಸು ಆ ಬಂಧನವನ್ನೇ ಇಷ್ಟಪಡುವಷ್ಟು. ಅಂದಿನ ನನ್ನ ಮನಸ್ಸಿಗೆ ಸಂಗೀತದ ಜೊತೆ ಕೊಟ್ಟದ್ದು ಸಿ. ಅಶ್ವತ್ ಸಂಗೀತ ಸಂಯೋಜನೆಯ ಕವಿತೆ...

"ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು...

ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು..."

ಎಂಥಹ ಸಾಲುಗಳಲ್ವಾ? ಸಂಗೀತ ಸಂಯೋಜನೆಯಂತೂ ಅದ್ಭುತ. ಒಮ್ಮೆ ಕೇಳು ನೀನೂ ಇಷ್ಟ ಪಡ್ತೀಯ. ಎಲ್ಲಾ ಪ್ರೇಮಿಗಳಿಗೂ ಸಂಗೀತವೆಂದರೆ ಪ್ರಿಯವೇ ಅವನು ಎಷ್ಟೇ ಒರಟನಾಗಿದ್ದರೂ ಸೂಕ್ಷ್ಮ ಸಂವೇದನೆಯವನನ್ನಾಗಿ ಮಾರ್ಪಡಿಸಿಬಿಡುತ್ತದೆ ಈ ಸಂಗೀತ. ಈ ಹಾಡನ್ನಂತೂ ಪ್ರೀತಿಯಲ್ಲಿರುವವರು ಒಮ್ಮೆಯಾದರೂ ಕೇಳಲೇ ಬೇಕು.


        
ನೀನು ಒಮ್ಮೊಮ್ಮೆ ನನ್ನಲ್ಲಿ ಬಿಕ್ಕಿದಾಗ, ನನ್ನ ಹೃದಯವೂ ಬಿಕ್ಕುತ್ತಿತ್ತು. ಆದರೂ ಹುಡುಗನಲ್ಲವೇ ಅಳಬಾರದೆಂದು ಸಾವರಿಸಿಕೊಂಡು ನಿನ್ನ ಕಣ್ಣೊರೆಸಿ ಸಾಂತ್ವಾನವೇಳುವ ಪ್ರಯತ್ನ ಮಾಡುತ್ತಿದ್ದೆ. ಆಗೆಲ್ಲ ನೀನು ತಮಾಷೆಯಾಗಿ ಕೇಳುತ್ತಿದ್ದೆಯಲ್ಲಾ, ’ಈ ಕೈಗಳನ್ನು ನನಗೆ ಕೊಟ್ಟುಬಿಡೋ’ ಎಂದು... ನಾ ನಿನಗೆ ಉತ್ತರಿಸಿದ್ದು, ’ಏನೇ ಇದು ಆಟಿಕೆಗಳನ್ನು ಕೇಳುವಂತೆ ಕೈಗಳನ್ನು ಕೊಡು ಅಂತೀಯಲ್ಲಾ, ಕೈ cut ಮಾಡ್ಕೊಡ್ಲಾ?’ ಅದಕ್ಕೆ ನೀನು ’ಹೂಂ ಮತ್ತೆ cut ಮಾಡ್ಕೋ, ನನ್ನ ಮುದ್ಧು ಕೋತಿ’... ನಾನು ಪ್ರತಿಕ್ರಿಯಿಸಿದ್ದು ’ಆ ಎರಡು ಕೈಗಳೂ ನಿನ್ನವೆ ಪುಟ್ಟ, ಓಹೋ ನಾಲ್ಕು ಕೈಗಳಾಗಿಬಿಟ್ಟವು ನಿನಗೆ, ನೀನೇನು ದೇವತೆಯೋ?....’ ಈಗಲೂ ಆ ನೆನಪುಗಳು ಅಚ್ಚ ಹಸಿರು ನನ್ನ ಮನದಲ್ಲಿ ನೆನ್ನೆ-ಮೊನ್ನೆ ನೆಡೆದವೆಂಬಂತೆ.

ನಂತರದ ದಿನಗಳಲ್ಲಿ ನೇರವೆಂದು ತಿಳಿದಿದ್ದ ನೀನೇ ನಿಗೂಢವಾಗಿಬಿಟ್ಟೆ. ನನ್ನಿಂದ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದೆ. ನನಗೋ ಭಯ ಏನನ್ನು ಮನಸ್ಸಿನಲ್ಲಿ ಹಚ್ಚಿಕೊಂಡು ಕೊರಗ್ತಾಳೋ, ಯಾಕೆ ಹೀಗೆ ನನ್ನನ್ನು avoid ಮಾಡ್ತಿದ್ದಾಳೋ? ಜೊತೆಗಿದ್ದರೂ ಮಾರು ದೂರವಿದ್ದಂತೆ ಅನಿಸ ಹತ್ತಿತು. ನಾ ಕಂಡ ಕನಸ್ಸುಗಳು ಕಣ್ಮುಂದೆಯೇ ಒಡೆದು ಚೂರಾಗುವಂತೆ ಭಾಸವಾಗುತ್ತಿತ್ತು. ಕಾರಣವೇ ಇಲ್ಲದಂತೆ ದೂರವಾಗುತ್ತಿದ್ದೆ. ನಾನು ಎಷ್ಟೇ ಹಿಡಿದಿಡಲು ಪ್ರಯತ್ನಿಸಿದರೂ ಸಿಗದ ಮರೀಚಿಕೆಯಾಗಿಬಿಟ್ಟೆ. ನಾನಿನ್ನೂ ನಿನ್ನ ಪ್ರೀತಿಸುತ್ತಲೇ ಇದ್ದೆ, ನೀನು ಕಣ್ಣೆದುರಿದ್ದರೂ ಕಿವುಡಳಾಗಿಬಿಟ್ಟೆ. ನಾನು ಎಷ್ಟೆ ನಿನ್ನ ಮನದ ಕದ ತಟ್ಟಿದರೂ ಪ್ರತಿಕ್ರಿಯೆ ಬಾರದಾದಾಗ ನಾನೂ ಮೂಕಾಗಿಬಿಟ್ಟೆ. ನೀ ಹೊರಟ ಮೇಲೂ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳಲ್ಲಿ ಬೇಯುತ್ತಿದ್ದೇನೆ, ಉತ್ತರಿಸುವವರಾರು?? :-( "ನಾನು ಮಾಡಿದ ತಪ್ಪಾದರೂ ಏನು? ಎಲ್ಲಾ ವಿಷಯಗಳಲ್ಲೂ ನನ್ನ ಆಸರೆಯನ್ನು ಬಯಸುತ್ತಿದ್ದ ನಿನಗೆ ಈಗ ಆಸರೆ ಕೊಡುವವರಾದರೂ ಯಾರು? ಬಿಟ್ಟು ಹೋಗುವ ಮುನ್ನ ನನಗೆ ಒಮ್ಮೆಯಾದರು ಹೇಳಿ ಹೋಗಬೇಕೆನಿಸಲಿಲ್ಲವೇ? ನಾನು ನಿನಗೆ ಅಷ್ಟು ಬೇಡವಾದೆನೆ? ನೀನೇ ಕಟ್ಟಿಕೊಟ್ಟ ನೂರಾರು ಕನಸುಗಳಿಗೆ ತಣ್ಣೀರೆರಚಿದೆಯಲ್ಲ, ಸ್ವಲ್ಪವೂ ನನ್ನ ನೆನಪು ಕಾಡಲಿಲ್ಲವೆ?’ ಪ್ರೀತಿಯ ಅಪ್ಪುಗೆಯಲ್ಲಿ ಬಚ್ಚಿಟ್ಟ ಬೆಚ್ಚನೆಯ ಗೂಡನ್ನು ನೀನೇ ಹೊಡೆದು ಬಿಟ್ಟೆಯಲ್ಲ ಕಾರಣವೇ ಇಲ್ಲದೆ..! :-(

        

ಇಂದೂ ಸಂಜೆಯಾಗಿದೆ ಗೆಳತಿ, TV ಯಲ್ಲಿ "ಈ ಸಂಜೆ ಯಾಕಾಗಿದೆ ನೀನಿಲ್ಲದೆ" song ಕೂಡ ಬರ್ತಿದೆ. ನಿನ್ನ ಮಾತನ್ನು ಜೀವನ ಪರ್ಯಂತ ಕೇಳಲು ಮನ ಹಾತೊರೆಯುತ್ತಿದೆ ಮತ್ತೊಮ್ಮೆ ಬಾರೆ, ಕಾದು ಕುಳಿತಿದ್ದೇನೆ. ನಾನು ಹಿಂದಿಗಿಂತಲೂ ಬುದ್ಧಿವಂತನಾಗಿದ್ದೇನೆ, ಒಮ್ಮೆ ಬಾರೆ ಪರೀಕ್ಷಿಸಲು. ನಿಮಿಷಗಳೇ ಯುಗಗಳಾಗಿರುವಾಗ, ಯುಗಗಳನ್ನು ನಿಮಿಷಗಳಂತೆ ಕಳೆದೇನೆ, ಒಮ್ಮೆ ಬಾ ಯುಗಗಳನ್ನು ನಿಮಿಷಗಳನ್ನಾಗಿಸಿಕೊಳ್ಳುವಾಸೆ. ನಿನ್ನ ನೆನಪುಗಳು ಕಣ್ಣ ಹನಿಗಳಾಗಿ ಹರಿಯಲು ತವಕಿಸುತ್ತಿವೆ ಅವುಗಳನ್ನು ಕಣ್ಮುಚ್ಚಿ ಹಿಡಿದಿದ್ದೇನೆ. ಆ ನನ್ನ ಕಂಗಳನ್ನು ಚುಂಬಿಸಲಾದರೂ ಒಮ್ಮೆ ಬಾ. ನಿನ್ನ ನೆನಪಿನಲ್ಲಿ ದಿನವೂ ಸತ್ತು ಬದುಕಿದ್ದೇನೆ. ಈಗಲೂ ಅದೇ ಹಾಡನ್ನು ಇಷ್ಟಪಡುತ್ತಿದ್ದೇನೆ. ನೀ ನನ್ನನ್ನು ಕಾಡುತ್ತಿರುವುದು ನನಗೆ,

"ತೀರದಲಿ ಬಳುಕುವಲೆ
ಕಣ್ಣ ಚುಂಬಿಸಿ ಮತ್ತೆ,
ಸಾಗುವುದು ನೆರಳಿನಂತೆ
ನಿನ್ನೊಳಿದೆ ನನ್ನ ಮನಸು..."

ಎಂಬಂತೆ ಭಾಸವಾಗುತ್ತಿದೆ. ಆ ಹಾಡನ್ನು ಒಮ್ಮೆ ನಿನಗೂ ಕೇಳಿಸುವಾಸೆ ಒಮ್ಮೆ ಬಾ. ನಿನ್ನ ಕಣ್ಣೊರೆಸಲು ನನ್ನ ಕೈಗಳು ಚಡಪಡಿಸುತ್ತಿವೆ, ಒಮ್ಮೆ ಬಾರೆ ಈ ಕೈಗಳನ್ನೇ ಕಾಣಿಕೆಯಾಗಿ ಕೊಟ್ಟೇನು ನೀ ಕೇಳಿದಂತೆ ಜೀವನ ಪರ್ಯಂತ, ಉಡುಗೊರೆಯಾಗಿ...

ನೀನಿರದ ಸಂಜೆ ಕಗ್ಗತ್ತಲಂತೆ ಭಾಸವಾಗುತ್ತಿದೆ, ನೀನೆಲ್ಲಿ ಕಣ್ಣ ಹನಿಗಳಾಗಿ ಜಾರಿ ಕಗ್ಗತ್ತಲಲ್ಲಿ ಕರಗಿ ಹೋಗುವೆಯೋ ಎಂದು ಭಯವಾಗುತ್ತಿದೆ. ಆ ಕಣ್ಣ ಹನಿಗಳನ್ನು ಹಿಡಿದುಕೊಳ್ಳಲು ಮನಸ್ಸು ನಿನ್ನ ಕೈಗಳ ಆಸರೆಯನ್ನು ಬಯಸುತ್ತಿದೆ. ಎಲ್ಲಿ ಕುಳಿತಿರುವೆ ಗೆಳತಿ ನನ್ನ ನೆನಪಾಗದೆ? ಈ ಸಂಜೆಯ ಭೀಕರತೆಯನ್ನು ಹೊಡೆದೋಡಿಸಲು ಹಿಂದಿರುಗಿ ಬರಬಾರದೇ? ಕಾದಿರುವ ಧರೆಯಂತಿರುವ ನನ್ನ ಮನಸ್ಸನ್ನು ಅಪ್ಪಿ ಹಿಡಿದು, ಪ್ರೀತಿಯ ಮಳೆ ಸುರಿಸಬಾರದೆ? ಕಾಯುತ್ತಿದೆ ಮನಸ್ಸು ನಿನ್ನನ್ನೇ ಶಬರಿ ರಾಮನನ್ನು ಕಾದಂತೆ ಈ ನೀನಿರದ ಸಂಜೆಯಲಿ....

- ಪ್ರಸಾದ್.ಡಿ.ವಿ.

Monday 7 November 2011

ನನ್ನಪ್ಪ



ಹುಟ್ಟು ಶ್ರೀಮಂತನಲ್ಲ ನನ್ನಪ್ಪ
ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಲಿಲ್ಲ
ಬದುಕಿರುವುದೂ ತೀರಾ ಸರಳವಾಗಿಯೇ
ಎಲ್ಲಾ ತಂದೆಯಂದಿರೂ ಹೇಳುತ್ತಾರೆ,
"ಅಸಾಮಾನ್ಯನಾಗು ಕಂದ",
ನನ್ನಪ್ಪ ನನಗೆ ಕಲಿಸಿದ್ದು,
"ಎಲ್ಲರೊಳಗೊಂದಾಗು ಕಂದ"
ಸಾಮಾನ್ಯರಲ್ಲಿ ಸಾಮಾನ್ಯ ನನ್ನಪ್ಪ...

ನನ್ನಪ್ಪ ನಮಗಾಗಿ ಮಾಡಲಿಲ್ಲ
ಲಕ್ಷಗಟ್ಟಲೆ ಹಣ, ಎರಡೆರಡು ಬಂಗಲೆ,
ಹತ್ತು ಎಕರೆ ಜಮೀನು...
ಆತ ತೋರಿಸಿಕೊಟ್ಟಿದ್ದು ಸಹಜವಾಗಿ
ಜೀವನ ರೂಪಿಸಿಕೊಳ್ಳುವ ಕಲೆ,
ಸರಳತೆಯಲ್ಲಿ ಸಹಜತೆ,
ಸಹಜತೆಯೇ ಬದುಕಿನ ದಾರಿ...

ನನ್ನಪ್ಪ ಎಲ್ಲರನ್ನೂ ಆದರಿಸುವ
ಕರುಣಾಮಯಿ, ಕಷ್ಟವೆಂದರೆ
ಕರಗಿ ನೀರಾಗುವ ಹೆಣ್ಣು ಹೃದಯಿ...
ಹಾಗೆಂದು ಸಹಾಯ ಮಾಡಿಸಿಕೊಂಡವರೆಲ್ಲ
ಅವರನ್ನು ನೆನೆಯಲಿಲ್ಲ,
ಆದರೆ ಅಪ್ಪ ಕೊಂಚವೂ ಬೇಸರಿಸಲಿಲ್ಲ...
ಈಗಲೂ ಅವರು ಕೊಡುಗೈ ದಾನಿಯೇ,
ಇರುವುದೆಲ್ಲವನು ಕೊಡುವ ಕರ್ಣ...

ಎಷ್ಟೋ ಜನ ಅಂದಿದ್ದಿದೆ,
ನಿನ್ನಪ್ಪ ಯಾರ ಮಾತನ್ನೂ ಕೇಳದವ...
ಆದರೆ ಅಪ್ಪ ನಮಗೆ ಕಲಿಸಿದ್ದು
ಸ್ವಾಭಿಮಾನ, ಆತ್ಮಸ್ಥೈರ್ಯ, ಬದುಕಿನ ರೀತಿ...
ಕಲ್ಲಿನ ಹೃದಯವನ್ನೂ ಕರಗಿಸಿ
ಮಾತನಾಡಿಸಬಲ್ಲ ಮಾತಿನ ಮಲ್ಲ ನನ್ನಪ್ಪ,
ನಮಗೆ ಕೊಟ್ಟಿದ್ದು ಕೇವಲ
ಸಾಗರದಷ್ಟು ಪ್ರೀತಿ, ಮಮತೆ...

ಅಪ್ಪ ಕಲಿಸಿದ್ದು ಎಲ್ಲರನ್ನೂ ಪ್ರೀತಿಸುವುದು,
ಎಲ್ಲರೊಳಗೊಂದಾಗುವುದು...
ಮಮತಾಮಯಿ ನನ್ನಪ್ಪ,
ಎಂದೆಂದಿಗೂ ನನ್ನ ಹೀರೋ...

- ಪ್ರಸಾದ್.ಡಿ.ವಿ.

Thursday 3 November 2011

ಧನ್ಯ ನಾನು



ನಗುವಿತ್ತು ಮೊಗದಲ್ಲಿ
ದುಗುಡವಿತ್ತೋ ಮನದಲ್ಲಿ(?),
ನೀ ಬಂದೆ ಗೆಳತಿ ಬಾಳಲ್ಲಿ
ಮೊಗ್ಗರಳಿ ಕಂಪ ಬೀರಿತು,
ಹೂವು ನೀನು, ಅದರ ನೆರಳು ನಾನು,
ಹೂವ ಗಂಧ
ನೆರಳನ್ನೂ ಅಪ್ಪಿಕೊಂಡಿತ್ತು!

ಈಗಲೂ ಆಶ್ಚರ್ಯವೆನಿಸುತ್ತದೆ
ಅರಸಿದ್ದ ನನ್ನ ಕೈಹಿಡಿದೆ ನೀನು,
ಆದೆಂಥ ಆಪ್ಯಾಯಮಾನತೆ ಸ್ನೇಹಕ್ಕೆ,
ಚಿಕ್ಕ ಮಗುವಾಗಿದ್ದೆ ನಾನು,
ನನ್ನ ಅಮ್ಮ ನೀನು!

ಸಾವಿರಾರು ಹೊಂಗನಸುಗಳು
ಬಣ್ಣ ಕಟ್ಟಿಕೊಂಡವು,
ಅವುಗಳಲ್ಲಿ ನೀನಿಲ್ಲದೆಯೂ
ನನ್ನ ಕನಸುಗಳು ನಿನ್ನವಾದವು!
ಸ್ನೇಹಕ್ಕಷ್ಟು ತನ್ಮಯತೆಯೇ ಗೆಳತಿ,
ನೋವು-ನಲಿವು, ಕನಸುಗಳನ್ನು
ತಮ್ಮವೆಂದು ಪರಿಭಾವಿಸುವಷ್ಟು!?

ಒಂದಷ್ಟು ಶುಭ ಹಾರೈಕೆಗಳು ನಿನಗೆ:
ನಿನ್ನ ಮನದ ಹಾಲು ಬೆಳದಿಂಗಳು
ಬಾಳಿಗೂ ಬೆಳಕು ಚೆಲ್ಲಲಿ,
ದನಿಯಾದೇನು, ನಿನ್ನ ಗಂಟಲು ಕಟ್ಟಿದಾಗ,
ನಗುವಾದೇನು, ನಿನ್ನ ಕಣ್ಣೊರೆಸಲು,
ಮೆತ್ತನೆ ಹಾಸಿಗೆಯಾಗುವೆ
ಮನಸು ಮುದುಡಿದಾಗ!

ಇನ್ನೇನೂ ಬೇಡ ಗೆಳತಿ
ಈಗ ಕೊಟ್ಟಿರುವುದೇ ಸಾಕು,
ಸಾಲಗಾರನಾಗಿದ್ದೇನೆ!
ಇನ್ನು ನಾನು ಕೊಡುತ್ತೇನೆ
ನೀನು ಸುಮ್ಮನೆ ಸ್ವೀಕರಿಸು!
ಗೆಳೆಯ ನಾನು, ಗೆಳತಿ ನೀನು!
ಕೊಡುವುದಿದ್ದರೆ ಕೊಡು ಕಟ್ಟ ಕಡೆಗೆ
ಆ ನಿನ್ನ ಕಣ್ಣ ಹನಿಗಳನ್ನು
ಈ ನನ್ನ ಉಸಿರು ನಿಂತಾಗ, ಧನ್ಯ ನಾನು!

- ಪ್ರಸಾದ್.ಡಿ.ವಿ.

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಓ ಗೆಳತಿ



ಓ ಗೆಳತಿ,                                                           
ನೀ ಪ್ರೀತಿಯೋ, ಸ್ನೇಹವೋ
ಕುತೂಹಲಗಳ ಲಲನೆಯೋ,
ನೀ ಭ್ರಮೆಯೊ, ದೂರದ ಮರೀಚಿಕೆಯೊ,
ನನ್ನನ್ನು ನನಗೇ ಮರೆಸುವ
ಸಮ್ಮೋಹಿನಿಯೋ, ತಿಳಿಯದು..!!
ಆದರೂ ನಾ ನಿನ್ನ ಆರಾಧಿಸಿದೆ
ನನ್ನ ಪ್ರೇಮ ದೇವತೆಯೆ೦ದೇ..!!

ನೀ ಸ್ಪಷ್ಟಪಡಿಸಲಿಲ್ಲ, ನಾ ಚಡಪಡಿಸಿದೆ...
ನೀ ಉತ್ತರಿಸಲ್ಲಿಲ್ಲ, ನಾ ಕಾತರಿಸಿದೆ...
ಮೌನದಲ್ಲೇ ಉತ್ತರಿಸುವ ಜಾಣ್ಮೆ ನಿನದು,
ಮೌನವನ್ನು ಅರ್ಥ ಮಾಡಿಕೊಳ್ಳಲಾಗದ
ಮೌಢ್ಯ ನನದು, ಆದರೂ ನಾ ಪ್ರೇಮಿಯೆ..!!
ಬೆಲೆಯಿಲ್ಲದೆ ಹೋಯ್ತೆ ನನ್ನ
ಕಾತರಕೆ, ಪ್ರೀತಿಗೆ, ನೀನಾಡಿದ ಪ್ರೀತಿಯ
ಮಾತುಗಳಿಗೆ, ನಮ್ಮ ಸುಮಧುರ ರಸನಿಮಿಷಗಳಿಗೆ,
ನೀ ಕಟ್ಟಿಕೊಟ್ಟ ನೆನಪುಗಳಿಗೆ, ಕನಸುಗಳಿಗೆ...

ಈ ಪ್ರೀತಿಯೇ ಮಾಯೆಯೋ, ನೀನೆ ಮಾಯೆಯೋ..!!
ಆದರೂ ಇ೦ದಿಗೂ ನನ್ನ ಮನದಲ್ಲಿರುವುದು
ಆ ನಿನ್ನ ಮುಗ್ದ ನಗು, ನಾನು ನಿನ್ನವಳೆಂದು ನೀನು
ನಕ್ಕುನುಡಿದ ಆ ನಿನ್ನ ಸವಿನುಡಿಗಳು,
ಆ ನಿನ್ನ ಮುದ್ದು ಕು೦ಕುಮದ ಹಣೆ ಬಿ೦ದಿ..!!

ನೀ ಹಿ೦ತಿರುಗಿ ಬರುವೆಯೋ, ಇಲ್ಲವೋ...
ನೀ ನನ್ನ ಪ್ರಾಮಾಣಿಕವಾಗಿ ಪ್ರೀತಿಸಿದೆಯೋ,ಇಲ್ಲವೋ,
ಆದರೂ ನಾ ಪ್ರೇಮಿಯೇ, ಇ೦ದಿಗೂ ಎ೦ದೆ೦ದಿಗೂ..!!

- ಪ್ರಸಾದ್.ಡಿ.ವಿ.

Wednesday 2 November 2011

ದೀಪಾವಳಿ


ಬೆಳಕಿನ ಹಬ್ಬವಾಗಲಿ ದೀಪಾವಳಿ,
ಅಂತರಂಗದ ಬೆಳಕಾಗಲಿ!
ಮಗುವಿನ ನಗುವಲ್ಲಿ,
ಅಮ್ಮನ ಖುಷಿಯಲ್ಲಿ,
ಅಪ್ಪನ ಅಕ್ಕರೆಯೂ ದೀಪಾವಳಿ!
ಸಹೋದರಿಯ ಬಂಧನದಿ,
ಗೆಳತಿಯು ನಕ್ಕಂದು,
ದೇವರ ಸಾನಿಧ್ಯದಿ ಮಿಂದು
ಮನದಲ್ಲಿ ದೀಪಾವಳಿ!

ನಗುವಿನ ಹಬ್ಬ ದೀಪಾವಳಿ,
ಮಾನವತೆಯ ದಾರಿದೀಪ ದೀಪಾವಳಿ,
ಸಂತಸ ಮನೆ ತುಂಬಿ,
ನೋವುಗಳು ಬತ್ತಿಹೋಗಲಿ!
ಹೊಸ ಕನಸುಗಳು
ಗಗನಕ್ಕೆ ಚಿಮ್ಮಿ ಬದುಕು ಹಸನಾಗಲಿ!
ದ್ವೇಷ-ಅಸೂಯೆಗಳನ್ನು
ಸುಟ್ಟುಬಿಡಲಿ ಈ ದೀಪಾವಳಿ!

- ಪ್ರಸಾದ್.ಡಿ.ವಿ.

ಏಕಾಂತ


ಇಂದು ಏಕಾಂತವೇಕೋ ಇಷ್ಟವಾಗುತ್ತಿದೆ,
ಸುಖ ಕೊಡುವುದೆಂದು ಬಯಸಿದುದೆಲ್ಲ
ಬಿಟ್ಟು ಹೋಗಿದ್ದರಿಂದಲೇನೋ...
ಮನಸ್ಸಿನ ಸಂತೋಷಕ್ಕೆಂದು ಪ್ರೀತಿಸಿದೆ,
ಪ್ರೀತಿಸಿದಾಕೆ ಪ್ರೀತಿ ಮರೆತಳು...
ಬೇಸರ ತಣಿಯಲೆಂದು ಸ್ನೇಹ ಬಯಸಿದೆ,
ಸ್ನೇಹಿತರು ಸ್ನೇಹದ ಅರ್ಥ ಮರೆತರು...
ರಕ್ತ ಸಂಬಂಧಗಳಾದರು ಕೈ ಹಿಡಿಯತ್ತವೆಂದುಕೊಂಡೆ,
ಸಂಬಂಧಿಗಳು ಅಲ್ಪ ಮನಸ್ಸಿನವರು...
ಈ ಏಕಾಂತ ನಾನೇ ಬಯಸಿ ಪಡೆದದ್ದಲ್ಲ,
ಪ್ರೀತಿಯ, ಸ್ನೆಹದ, ಸಂಬಂಧಿಗಳ ಪ್ರೀತಿಯ ಕೊಡುಗೆ,
ಆದರೂ ಏಕಾಂತವೇಕೋ ಇಂದು ಇಷ್ಟವಾಗುತ್ತಿದೆ...

ಕೇಳಿದ್ದೆ, ಓದಿದ್ದೆ ಏಕಾಂತ ಹುಟ್ಟಿಸಬಹುದು
ಒಬ್ಬ ಬಂಡುಕೋರನನ್ನೋ, ಒಬ್ಬ ಅಪರಾಧಿಯನ್ನೋ,
ಒಬ್ಬ ಅಸಹಾಯಕನನ್ನೋ, ಒಬ್ಬ ಸಮಾಜ ವಿರೋಧಿಯನ್ನೋ...
ಆದರೆ ಏಕಾಂತ ನನ್ನಲ್ಲಿ ಹುಟ್ಟಿಸಿದ್ದು ಒಬ್ಬ ಮನುಷ್ಯನನ್ನು...
ನಾನು ಎಲ್ಲರಿಂದಲೂ ಬಯಸಿದೆ,
ಪ್ರಿಯತಮೆಯಿಂದ ನಿಷ್ಕಲ್ಮಶ ಪ್ರೀತಿಯನ್ನು,
ಸ್ನೆಹಿತರಿಂದ ಸ್ನೇಹದ ಆಸರೆಯನ್ನು,
ಸಂಬಂಧಿಕರಿಂದ ಸಂಬಂಧಗಳ ಆಪ್ಯಾಯಮಾನಥೆಯನ್ನೂ...

ಏಕಾಂತ ನನ್ನಲ್ಲೂ ಹುಟ್ಟಿಸಿದೆ ಒಂದು ಪ್ರಶ್ನೆಯನ್ನು,
ಇದನ್ನೆಲ್ಲ ಬಯಸುವ ಮುನ್ನ ನಾ
ಅವರಿಗಾಗಿ ಕೊಟ್ಟ ಕಾಣಿಕೆ ಏನು...
ನಾವು ಹುಲು ಮಾನವರು ನಮ್ಮ ಜೀವನವನ್ನೇ
ಕಳೆಯುತ್ತೇವೆ ಕೇವಲ ಈ ನಿರೀಕ್ಷೆ, ಬಯಕೆಗಲಲ್ಲೆ...
ಆದರೆ ನಮ್ಮಲ್ಲಿ, ಆದರ್ಶದ ಪ್ರತೀಕವಾಗಿ
ಬದುಕುತ್ತಿದ್ದೇವೆಂಬ ಅಹಂಭಾವ...

ತ್ಯಾಗದ ಅರ್ಥ ತಿಳಿಯದ ಹೊರತು ಎಲ್ಲಿಯ ಆದರ್ಶ
ಅರ್ಪಣೆಯ ಪರಮಾರ್ಥ ತಿಳಿಯದ
ಹೊರತು ಎಲ್ಲಿಯ ಜೀವನ...
ನಿರೀಕ್ಷೆ, ಬಯಕೆಗಳನ್ನು ತ್ಯಜಿಸುವುದಲ್ಲವೇ
ಜೀವನದ ನಿಜವಾದ ಸಾರ್ಥಕತೆ,
ನಿಸ್ವರ್ಥತೆಯಲ್ಲಲ್ಲವೆ ಜೀವನದ ನಿಜವಾದ ಪರಮಾರ್ಥ...
ಇಷ್ಟೆಲ್ಲವನ್ನು ತಿಳಿಸಿದ ಏಕಾಂತವೇ ನಿನಗಿದೋ ಪ್ರಣಾಮ
ಜೀವನದ ಸಾರ್ಥಕತೆಯ ಅರ್ಥಮಾಡಿಸಿ
ಪರಮಾರ್ಥದಲ್ಲಿ ಮನುಷ್ಯತ್ವವನ್ನು ಗುರುತಿಸಿದ್ದರಿಂದಲೇ
ಇಂದು ಈ ಏಕಾಂತವೇಕೋ ನನಗೆ ಇಷ್ಟವಾಗುತ್ತಿದೆ...

- ಪ್ರಸಾದ್.ಡಿ.ವಿ.

ನಿರೀಕ್ಷೆ


ನೀನಿಲ್ಲ ಮನದಲ್ಲಿ