ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday, 16 December 2011

ಮನ ಕಲ್ಲಾಗುವಾ ಮುನ್ನ



ನಾ ನಗಲು ತುಟಿ ಬಿರಿಯೆ
ನನ್ನ ನಗುವಲ್ಲೂ ಇಣುಕಿ
ಕಾಡುವ ನಿನ್ನ ಪರಿಯ
ಏನೆಂದು ಬಣ್ಣಿಸಲಿ ಚೆಲುವೆ
ನಿನ್ನ ಧ್ಯಾನದಲಿ
ನಾನು ನಾನಲ್ಲ, ನೀನು ನೀನಲ್ಲ,
ನಾನು ನೀನು, ನಿನ್ನೊಳಗೆ ನಾನು...

ನಾನಳಲು ಕಣ್ಣಹನಿಯಲ್ಲೂ
ನಗುವ ನೀನು,
ನೆನಪಲ್ಲೂ ನೀನು,
ಕನಸಲ್ಲೂ ನೀನು,
ನನ್ನ ಪ್ರತಿಯೊಂದು ಕೃತಿಯಲ್ಲೂ
ಇಣುಕಿ, ನಗುತ ಕಾಡುವ ನೀನು,
ನಾನು ನಾನಾಗಿಯೇ ಉಳಿದಿಲ್ಲ
ನಾನೆಲ್ಲವೂ ನೀನೆಂಬ ಅನುಮಾನ..!
ಇದು ನಿನ್ನಲ್ಲಿ ನನ್ನ ಬಂಧನವೋ?
ಇಲ್ಲ ನನ್ನಿಂದ ನನಗೇ ಬಿಡುಗಡೆಯೋ?

ನಗುವಲ್ಲೂ ಕಾಡುವೆ,
ಅಳುವಲ್ಲೂ ಇಣುಕುವೆ,
ನಿನ್ನ ಮನಸಾರೆ ಪ್ರೀತಿಸಿದ
ಎನ್ನ ತಪ್ಪನ್ನು ಮನ್ನಿಸಿ
ನನ್ನ ಶಾಪ ವಿಮೋಚನೆ
ಮಾಡಿಬಿಡು ಗೆಳತಿ
ಈ ನನ್ನ ಮನ ಕಲ್ಲಾಗುವ ಮುನ್ನ...

- ಪ್ರಸಾದ್.ಡಿ.ವಿ.

8 comments:

  1. "ಕರಗು ಹಿಮಗಲ್ಲೇ
    ಇಲ್ಲಿ ಬಿಸುಪಿನ ಕರೆಗೆ"

    ಶೀಘ್ರಮೇವ ಪ್ರೇಯಸಿ ರಿಟರ್ನಬಲ್ ಪ್ರಾಪ್ತಿರಸ್ತು!

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಒಂದು ಮಧುರ ಅನುಭೂತಿಯ ಸ್ಪರ್ಷವೊದಗಿಸಿ ಮತ್ತೆ ಮನಸ್ಸನ್ನು ಚಿಂತೆಗೆ, ಮನದ ದುಗುಡಕ್ಕೆ ಒಯ್ಯುವ ವೇದನೆ ಕವನದಲ್ಲಿ ಹರಿದಿದೆ.ನಾನು ನಾನಾಗಿ ಉಳಿಯದೇ ಎಲ್ಲವೂ ನೀನೇ ಆಗಿರುವಿ ಎನ್ನುವಾಗಿನ ನೋಟವೇ ರಮ್ಯತನವನ್ನುಂಟುಮಾಡುವುದು.ವಿರಹ ವೇದನೆಯು ಮನ ಕಲ್ಲಾಗುವ ಮುನ್ನ ಶಾಪ ವಿಮೋಚನೆ ಮಾಡಿ ಬಿಡು ಎನ್ನುವ ಹಂತಕ್ಕೆ ತಲುಪಿದಾಗಲೂ ನಿನ್ನ ಬಿಟ್ಟು ಇರಲಾರೆ ಎನ್ನುವ ಸ್ಪಷ್ಟ ಆಶಯವನ್ನು ವ್ಯಕ್ತಪಡಿಸಿದೆ.ಈ ಪ್ರೀತಿ ನಿಜವೇ ಆಗಿದ್ದಲ್ಲಿ ಕವಿತೆಯಲ್ಲಿನ ಕಲ್ಪನೆಯೂ ಆದಷ್ಟು ಬೇಗನೆ ಸಾಕಾರಗೊಂಡು ಆ ಸಖನಿಗೆ ತನ್ನ ಸಖಿ ಬೇಗನೆ ಅಪ್ಪಿಕೊಂಡು ನಿರ್ಮಲವಾದ ಪ್ರೀತಿಯ ಅನುಭೂತಿಯನ್ನು ಪಡೆಯುವಂತಾಗಲೆಂದು ಮನ ಬಯಸುವುದು.ಒಂದು ಸುಂದರ ಪ್ರೇಮ ಕವನ.ಇಷ್ಟವಾಗುವುದು.

    ReplyDelete
  3. ಒಂದು ಮನೋ ನಿವೇಧನೆ ಮನ ಕಲಕಿತು ಮಾನ್ಯ ಪ್ರಸಾದ್.ತುಂಬಾ ಸುಂದರವಾದ ಭಾವವನ್ನು ಪಡಿ ಮೂಡಿಸಿದ್ದೀರಿ.ಈ ಕೆಳಗಿನ ಸಾಲು ಶ್ರೇಷ್ಠ, ಅತೀ ಶ್ರೇಷ್ಠ. ನಿಮ್ಮ ಕವಿತೆಗಳೂ ಇದೇ ರೀತಿ ಮನಸ್ಸನ್ನು ಎತ್ತಿ ಕುಕ್ಕಬೇಕು. ಹಾಗೇ ಕನ್ನಡ ನಾಡು ಮರೆಯಲಾಗದ ಓರ್ವ ಉತ್ತಮ ಕವಿ ಎನಿಸಿಕೊಳ್ಳಬೇಕು. ಅದು ನನ್ನ ಹಾರೈಕೆ. ಈ ಸಾಲು ಎಷ್ಟು ಚೆನ್ನಾಗಿದೆ. ಓದಿದಷ್ಟು ಇನ್ನೊಂದು ಭಾವವನ್ನು ಉಕ್ಕಿಸುವುದು.
    ಎನ್ನ ತಪ್ಪನ್ನು ಮನ್ನಿಸಿ
    ನನ್ನ ಶಾಪ ವಿಮೋಚನೆ
    ಮಾಡಿಬಿಡು ಗೆಳತಿ
    ಈ ನನ್ನ ಮನ ಕಲ್ಲಾಗುವ ಮುನ್ನ...

    ReplyDelete
  4. >> " ನಾನಳಲು ಕಣ್ಣಹನಿಯಲ್ಲೂ
    ನಗುವ ನೀನು,
    ನೆನಪಲ್ಲೂ ನೀನು,
    ಕನಸಲ್ಲೂ ನೀನು,
    ನನ್ನ ಪ್ರತಿಯೊಂದು ಕೃತಿಯಲ್ಲೂ
    ಇಣುಕಿ, ನಗುತ ಕಾಡುವ ನೀನು,
    ನಾನು ನಾನಾಗಿಯೇ ಉಳಿದಿಲ್ಲ
    ನಾನೆಲ್ಲವೂ ನೀನೆಂಬ ಅನುಮಾನ..!
    ಇದು ನಿನ್ನಲ್ಲಿ ನನ್ನ ಬಂಧನವೋ?
    ಇಲ್ಲ ನನ್ನಿಂದ ನನಗೇ ಬಿಡುಗಡೆಯೋ" << ಚೆನ್ನಾಗಿದೆ ಪ್ರಸಾದ್.. :-) . ಯಾರವಳು ? :D

    ReplyDelete
  5. ಹ ಹ ಹ ಹ ಹಾ..:D ನಿಮ್ಮ ಆಶೀರ್ವಾದ ಆದಷ್ಟು ಬೇಗ ಪಲಿಸಲಿ ಬದ್ರಿ ಸರ್..;) ಧನ್ಯವಾದಗಳು..:))) ಆಗಾಗ್ಗೆ ಬಂದು ನಿಮ್ಮ ತೋಟದಲ್ಲಿ ವಿಹರಿಸುತ್ತಿರುತ್ತೇನೆ..

    ReplyDelete
  6. ಸೋಮಣ್ಣ ಅದ್ಭುತವಾದ ವಿಮರ್ಶೆ..:))) ಅಬ್ಬಾ ಎಷ್ಟು ಅದ್ಭುತವಾಗಿ ಕವಿಮನದ ಭಾವಗಳನ್ನು ಹೆಕ್ಕಿ ತೆಗೆಯುತ್ತೀರಿ.. ನಿಮ್ಮಲ್ಲಿನ ವಿಮರ್ಶಾ ಪ್ರೌಢಿಮೆಗೊಂದು ಸಲಾಂ.. ನಿಮ್ಮ ವಿಮರ್ಶೆ ಈ ಕವಿತೆಯನ್ನು ಇನ್ನಷ್ಟು ಸುಂದರಗೊಳಿಸಿದೆ.. ತುಂಬು ಮನದ ಪ್ರೀತಿಯ ಧನ್ಯವಾದಗಳು ನಿಮಗೆ..:))) ನಿಮ್ಮ ಪ್ರೀತಿಯ ಪೋಷಣೆಯಲ್ಲಿ ಇನ್ನಷ್ಟು ಅರಳುವ ಹಂಬಲ ಈ ಪುಟ್ಟ ಕವಿಮನಕ್ಕೆ..

    ReplyDelete
  7. ಧನ್ಯವಾದಗಳು ರವಿಯಣ್ಣ.. ನೀವು ಪೋಷಿಸುತ್ತಿರುವ ಕಾರಣ ಮನದಲ್ಲೊಂದು ಆಸೆ ಹಾಗೆಯೇ ಪಡಿ ಮೂಡಿದೆ..:))) ನಿಮ್ಮ ಆರೈಕೆಯ ಆಶೀರ್ವಾದವೇ ನನ್ನ ಜೀವಜಲ.. ಇನ್ನಷ್ಟು ವೈವಿಧ್ಯತೆಯನ್ನು ಕಂಡುಕೊಳ್ಳುವ ಪ್ರಯತ್ನ ನನ್ನದು.. ಆ ಹಾದಿಯಲ್ಲಿ ನಿಮ್ಮೆಲ್ಲರ ಒತ್ತಾಸೆ ಸಿಕ್ಕಿರುವುದು ಮನಸ್ಸು ಹಿಗ್ಗುವಂತೆ ಮಾಡಿದೆ..:))) ನಿಮ್ಮ ಪ್ರತಿಕ್ರಿಯೆ ಮನಸ್ಸಿಗೆ ಇನ್ನಷ್ಟು ಬಲ ತುಂಬಿ, ಆತ್ಮವಿಶ್ವಾಸವನ್ನೂ ತುಂಬಿದೆ.. ಪ್ರೀತಿಯ ಧನ್ಯವಾದಗಳು ನಿಮಗೆ..:))))))

    ReplyDelete
  8. ತುಂಬು ಮನದ ಧನ್ಯವಾದಗಳು ಪ್ರಶಸ್ತಿ..:)))
    ನನ್ನವಳು ಜಗದಿರವನ್ನೇ
    ಮರೆಸುವ ಮಾಯಾವಿಯವಳು
    ಬೆಚ್ಚಗೆ ಕುಳಿತಿದ್ದಾಳೆ
    ನನ್ನ ಹೃದಯ ಪಲ್ಲಕ್ಕಿಯ ಮೇಲೆ
    ನನಗೂ ಕಾಣದಂತೆ
    ಅಪಹರಿಸಿಬಿಡುವ ಆಸೆಯೆನಗೆ
    ಅವಳಿಗೇ ತಿಳಿಯದಂತೆ..;)

    ReplyDelete