ರೈತನ ಹೊಲದಲ್ಲಿ ಪೈರಾಗಿ ಮೊಳೆತು
ಬೆಳೆಯಾಗಬೇಕಿದ್ದ ಹಣ,
ಅವನ ಕೊರಳಿಗೆ ಉರುಳಾಗಿದೆ,
ಬೆಳೆಗೆ ಜೀವಜಲ ವರುಣ
ಅತಿವೃಷ್ಠಿಗೆ ಬೆಳೆ ನಲುಗಿದೆ...
ಬೆಳೆಯ ಸಾಲಿಗನು ಬಂದು ಸೆಳೆಯೆ
ರೈತನ ಬಾಳೇ ಬರಡಾಗಿದೆ,
ಸಾವಿನಲ್ಲಿ ನರ್ತನಗೈವ ಹಣ
ಎಂದೂ ನಿದ್ರಿಸದ ಕಾಂಚಾಣ..!
ಮಗಳ ಮದುವೆಗೆ ಬೇಕು
ಲಕ್ಷಗಟ್ಟಲೆ ಹಣ,
ಅವನ ವರಮಾನವೋ ಕೆಲವು ಸಾವಿರಗಳಣ್ಣ,
ಹೇಗೋ ಕಷ್ಟಪಟ್ಟು ಮಾಡಿ
ಮುಗಿಸಿದ ಮಗಳ ಮದುವೆ,
ತೀರದ ದಾಹ ವರದಕ್ಷಿಣೆಗೆ,
ಆ ಹೆಣ್ಣನ್ನು ತಳ್ಳಿತು ಬೆಂಕಿಯ ದಾವಾಗ್ನಿಗೆ..!
ಮಗಳ ಕರಕಲು ದೇಹದ ಹೆಣ
ಮನೆಯವರ ಆಕ್ರಂದನ ಕೇಳಿಸಿಕೊಳ್ಳದ ಹಣ,
ಆಕ್ರಂದನದಿ ನರ್ತನಗೈವ ಹಣ,
ಎಂದೂ ನಿದ್ರಿಸದ ಕಾಂಚಾಣ..!
ಮೋಜು ಮದಿರೆಯ
ದಾಸ್ಯದಲ್ಲಿ ಯುವ ಜನತೆ,
ಕಂಟಪೂರ್ತಿ ಮದಿರೆ ಹೀರುವನೀತ,
ಎಳೆದೆಳೆದು ಬಿಡುವ
ಸಿಗರೇಟಿನ ಧೂಮ,
ಅಪ್ಪ ಕೂಡಿಟ್ಟ ಹಣವೆಲ್ಲ
ಧೂಮದಲ್ಲಿ ಹೋಮ,
ಪ್ರಿಯವಾದವು ಗಾಂಜಾ-ಅಫೀಮು,
ಇವುಗಳ ಚಟಕ್ಕೆ
ಅವನ ಜೀವವೇ ಇನಾಮು..!
ಮೋಜು ಮದಿರೆಯ ನಶೆಯಲ್ಲೂ
ನರ್ತನಗೈವ ಹಣ,
ಎಂದೂ ನಿದ್ರಿಸದ ಕಾಂಚಾಣ..!
- ಪ್ರಸಾದ್.ಡಿ.ವಿ.
ಹಣವಿಲ್ಲದಿದ್ದರೆ ಹೇಣವೂ ಬಾಯಿಬಿಡುವುದಿಲ್ಲವೆಂಬ ಗಾದೆಯೇ ಇದೆಯಲ್ಲ.ಹಣದ ಬಹುರೂಪದ ಅನಾವರಣವನ್ನು ಕವಿತೆಯಲ್ಲಿ ಚನ್ನಾಗಿ ವಿಡಂಬಿಸಿರುವಿರಿ.
ReplyDeleteಹೌದು ಸೋಮಶೇಕರಣ್ಣ, ಅಂತಹ ಗಾದೆ ಮಾತುಗಳೇ ಕಾವ್ಯಗಳ ಸತ್ವವನ್ನು ಸಾಲಿನಲ್ಲಿಯೇ ನಿರೂಪಿಸಿಬಿಡುತ್ತದೆ.. ಏಕೆಂದರೆ ಗಾದೆಗಳು ಅನುಭವಾಮೃತಗಳಲ್ಲವೆ..:))) ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು..:)))
ReplyDeleteಕಾ0ಚಾಣ ನಿದ್ರಿಸೋಕೆ ಬಿಡಲ್ಲ ಬಿಡಿ.. ಚೆನ್ನಾಗಿದೆ ಕವಿತೆ ಅಭಿನಂದನೆಗಳು.
ReplyDeleteನಿಮ್ಮ ಮೆಚ್ಚುಗೆಯೇ ಈ ಪುಟ್ಟ ಕವಿಮನಕ್ಕೆ ಶ್ರೀರಕ್ಷೆ..:))) ತುಂಬು ಮನದ ಧನ್ಯವಾದಗಳು ನಿಮಗೆ, ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..:)))
ReplyDelete