ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Friday, 2 December 2011

ಪ್ರೀತಿಯ ಅಳಲಿನಾಳ



ದೂರದಲ್ಲಾರೋ ಅಳುತ್ತಿರುವ ಸದ್ದು,
ದೂರದ ನದಿಯ ತೀರದಲ್ಲೋ,
ಅದರ ಹತ್ತಿರವಿರುವ ಸ್ಮಶಾನದಲ್ಲೋ,
ಅಲ್ಲೆಲ್ಲೋ ಅರಣ್ಯರೋಧನ,
ಮನ ತಡೆಯದೆ ಹುಡುಕುತ್ತ ಹೊರಟೆ,
ಅದರ ಹೆಸರು ಪ್ರೀತಿಯಂತೆ,
ವಾರಸುದಾರರಿಲ್ಲದೆ ಅಳುತ್ತಿರುವುದಂತೆ..!

ನನಗೋ ಕುತೂಹಲ ಜಾಸ್ತಿ,
ಏನು ನಿನ್ನ ಕತೆ, ಕೇಳಿಬಿಟ್ಟೆ...
ಒಂದೂರಿನಲ್ಲೊಬ್ಬ ಹೃದಯವಂತ,
ಒಬ್ಬಳು ಹೃದಯವಂತೆ,
ಕಣ್ಣು - ಕಣ್ಣು ಕಲೆತು,
ಹೃದಯಗಳು ಮಾತಿಗೆ ನಿಂತು,
ಆಗಿ ಹೋಯ್ತು ಪ್ರೀತಿ...
ಆ ಜೋಡಿಗೆ ಪ್ರೀತಿಯೇ
ಪರಮಾನ್ನ, ಮೃಷ್ಠಾನ್ನ..!

ಪ್ರೀತಿಯ ವಿಷಯ
ಪೋಷಕರ ಮನೆಮುಟ್ಟಲು
ಇವರು ಉಸಿರಾಡಿದ
ಗಾಳಿಯೇ ಸಾಕಂತೆ..!
ಹುಡುಗಿಯಪ್ಪನಿಗೋ
ತನ್ನ ಜಾತಿಯೇ ಮೇಲು,
ಆ ಹುಡುಗ ಬೇಡವೆಂದ,
ಹುಡುಗನಪ್ಪನೋ
ಸ್ವಪ್ರತಿಷ್ಠೆಯೇ ಮೇಲೆಂಬ ಭೂಪ
ಅವಳ್ಯಾವಳೋ ಎಲುಬಿಲ್ಲದ
ನಾಲಿಗೆಯವನ ಮನೆಯವಳು,
ಆ ಹುಡುಗಿ ಬೇಡವೆಂದ..!
ಹುಚ್ಚು ಪ್ರೀತಿಯ ಬರದಲ್ಲಿ
ಪ್ರೇಮಿಗಳು ನಿರ್ಧರಿಸಿಬಿಟ್ಟವು
ಈ ಜಗವೇ ಬೇಡ, ಜನವೂ ಬೇಡ..!

ಒಬ್ಬನ ಜಾತಿಯ ರಾಜ್ಯಭಾರ
ಇನ್ನೊಬ್ಬನ ಮಗನ
ಸಮಾಧಿಯ ಮೇಲೆ,
ಇವನ ಸ್ವಪ್ರತಿಷ್ಟೆಯ
ಹುಂಬತನದ ನರ್ತನ
ಅವನ ಮಗಳ
ಗೋರಿಯ ಮೇಲೆ..!
ಮಕ್ಕಳಿಬ್ಬರ ಸಮಾಧಿಯೇ
ಗೋರಿ ಆ ಪ್ರೀತಿಗೀಗ..!
ಪ್ರೀತಿ ಬಡವಾಯ್ತು
ಇವರಿಬ್ಬರ ದೆಸೆಯಿಂದ..!
ಆ ಪ್ರೇಮಿಗಳ ಪ್ರೀತಿಯ
ಮಗುವನ್ನು ಜೋಳಿಗೆಯಲ್ಲಿ
ಕಟ್ಟಿ ತೂಗಬೇಕಿದ್ದ ಪ್ರೀತಿ
ಅಳುತ್ತಲಿದೆ ವಾರಸುದಾರರಿಲ್ಲದೆ..!
ಅರಿಯುವವರಾರು
ಆ ಪ್ರೀತಿಯ ಅಳಲ?
ಊಹಿಸಬಲ್ಲಿರ
ಅದರ ಅಳಲಿನಾಳ?

- ಪ್ರಸಾದ್.ಡಿ.ವಿ.
------------------------------------------------------------------------------------------------------------------
ಕಣ್ಣೆದುರೇ ಕಂಡ ಒಂದು ಅಮಾನವೀಯ ಕೃತ್ಯದೊಟ್ಟಿಗೆ ಪುಟ್ಟ ಪ್ರೀತಿಯೊಂದರ ಅಳಲು, ಹೊರಬರಲು ಚಡಪಡಿಸಿ ಇಂದು ಪದಗಳ ರೂಪ ಪಡೆದಿದೆ. ಅವರ ಒಬ್ಬನೇ ಮಗನನ್ನು ಕಳೆದುಕೊಂಡು ಕೊರಗುತ್ತಿರುವ ಅವನಿಗೆ ಈಗ ಅವರ ಮಗ ಬೇಕಂತೆ..! ಇವನಿಗೆ ಕಾಡಿ-ಬೇಡಿ ಹೆತ್ತ ಮಗಳು ಮತ್ತೆ ಬೇಕಂತೆ..! ಆ ಪ್ರೇಮಿಗಳ ಪ್ರೀತಿ ಇವರಿಬ್ಬರ ಮನೆಯಲ್ಲಿ ಕಣ್ಣೀರ ಧಾರೆಯಾಗಿ ಅರಿಯುತ್ತಿದೆ. ಜಾತಿಯ ಮತಾಂದತೆಗೆ, ಸ್ವಪ್ರತಿಷ್ಟೆಯ ಹುಂಬತನಕ್ಕೆ ಇಷ್ಟಾದರೂ ಶಿಕ್ಷೆ ಬೇಡವೇ? ಹುಚ್ಚುತನಕ್ಕೆ ಬಿದ್ದ ಆ ಇಬ್ಬರು ಪ್ರೇಮಿಗಳು ಇಹ ಲೋಕವನ್ನೇ ತ್ಯಜಿಸಿವಬಿಟ್ಟಿವೆ, ಅವುಗಳಿಗವೇ ಶಿಕ್ಷೆ ಕೊಟ್ಟಿಕೊಂಡಿವೆ..!!!!!

4 comments:

  1. ಹಾಗೆ ಮನಸ್ಸಿಗೆ ತಾಕಿತು ನಿಮ್ಮ ಕವನ...ಹಾ..ತಾಕಿತು ಅಂದರೂ ಸರಿಯಾಗಲಾರದು, ನಾಟಿತು ಅಂದರೆ ಸೂಕ್ತವೇನೋ....
    ದುಃಖಂತ್ಯ ಗೊಂಡ ಪ್ರೇಮಕತೆಗಳು ಅದೆಷ್ಟೋ ನಮ್ಮ ಮುಂದಿವೆ..
    ಇಂತಹ ಕತೆಗಳೊಳಗಿನ ನೋವು,ತುಡಿತವನ್ನು ಕವನಿಸುವಲ್ಲಿ ಸಫಲರಾಗಿದ್ದಿರಿ..
    ಕಳಕಳಿ ಮಾನವಿಯತೆಯಿಂದ ಕೂಡಿದ ಕವಿತೆ...ಚೆನ್ನಾಗಿದೆ....

    ReplyDelete
  2. ಮನಸ್ಸಿಗೆ ಮುಟ್ಟುವ ಹಾಗೆ ಬರೆದಿದ್ದೀಯಾ ಪ್ರಸಾದ್..! ಹಾಗೂ ಅಷ್ಟೆ ಸೂಕ್ತವಾದ ಶೀರ್ಷಿಕೆ ಕೂಡ..!!

    ಅವನ ಜಾತಿಯ ರಾಜ್ಯಭಾರ
    ಇವನ ಮಗಳ
    ಸಮಾಧಿಯ ಮೇಲೆ,
    ಇವನ ಸ್ವಪ್ರತಿಷ್ಟೆಯ
    ಹುಂಬತನದ ನರ್ತನ
    ಅವನ ಮಗನ
    ಗೋರಿಯ ಮೇಲೆ..!
    ಈಗ ಇವರಿಬ್ಬರಿಗೂ
    ಮಕ್ಕಳಿಬ್ಬರ ಸಮಾಧಿಯ ಮೇಲೆ
    ಅವರ ಪ್ರೀತಿಯ ಕೊಂದ ಸಮಾಧಾನ..!
    ಪ್ರೀತಿ ಬಡವಾಯ್ತು
    ಇವರಿಬ್ಬರ ದೆಸೆಯಿಂದ..!

    ಈ ಸಾಲುಗಳಲ್ಲಿ ಇರುವ ಅರ್ಥ ಮಾತ್ರ ಅಧ್ಬುತವಾಗಿದೆ..!
    ಈ ಪ್ರೀತಿ ಅನ್ನೋದೆ ಹಾಗೆ ಎಂಥವರನ್ನು ಹುಚ್ಚುತನಕ್ಕೆ ತಳ್ಳಿ ಬಿಡುತ್ತೆ...:(
    ಜಾತಿಗೋಸ್ಕರ ಪ್ರೀತಿಯಾ ಬಲಿದಾನ ನಡೆಯುತ್ತಲೆ ಇರುತ್ತೆ..!

    ReplyDelete
  3. @ಮೌನರಾಗ: ಹೌದು ಪ್ರೀತಿ ತುಂಬಾ ಸಲ ದುಃಖ್ಖಾಂತ್ಯವಾಗುತ್ತದೆ, ಮನಸ್ಸಿಗೆ ತುಂಬಾ ಬೇಸರವಾಗುತ್ತದೆ.. ಈ ಪ್ರೇಮಿಗಳು ಪರಿಸ್ಥಿತಿಯನ್ನು ಎದುರಿಸುವಲ್ಲಿ practical ಆಗಿ ನಿಭಾಯಿಸುವಲ್ಲಿ ಎಡವುತ್ತಿದ್ದಾರೆ, ಜೊತೆಗೆ ಪೋಷಕರೂ ಸಹ ಮಕ್ಕಳ ಭಾವನೆಗಳನ್ನು ಗೌರವಿಸದೆ ಸ್ವಪ್ರತಿಷ್ಟೆಗೆ ಬಿದ್ದು ಪ್ರೀತಿಯನ್ನು ತುಂಡರಿಸಲು ಪ್ರಯತ್ನಿಸುತ್ತಾರೆ.. ಎಲ್ಲಾ ವಿಷಯಗಳಿಗಿಂತಲೂ ಮಾನವೀಯ ಮೌಲ್ಯಗಳು ಮುಖ್ಯ, ಪ್ರೀತಿ ಮುಖ್ಯ, ಅದನ್ನು ಪೋಷಕರು ಮನಗಾಣಬೇಕು.. ಅವರ ಪ್ರೀತಿಯಲ್ಲಿ ಅಷ್ಟು ಗಟ್ಟಿತನವಿದೆ ಎಂದರಿತ ಮೇಲೆ ಅವರ ಪ್ರೀತಿಯನ್ನು ಗೌರವಿಸುವುದರಲ್ಲಿ ಯಾವುದೇ ತಪ್ಪಿಲ್ಲವೆಂಬುದು ನನ್ನ ಭಾವನೆ..:) ಧನ್ಯವಾದಗಳು..:)

    ReplyDelete
  4. @ದೀಪು: ಧನ್ಯವಾದಗಳು ಗೆಳತಿ..:) ಹೌದಲ್ಲವೇ ಒಬ್ಬ ಮನುಷ್ಯನನ್ನು ಕೊನೆಗಾಣಿಸಿವಂತಹ ಜಾತಿಯ ಕುರುಡಾಗಲಿ, ಸ್ವಪ್ರತಿಷ್ಟೆಯಾಗಲಿ ಏಕೆ ಬೇಕು ಎಂದೆನಿಸುತ್ತದೆ.. ಆತ ತನ್ನ ಮಗನನ್ನೇ ಬಲಿಕೊಟ್ಟ, ಈತ ತನ್ನ ಮಗಳನ್ನೇ ಬಲಿಕೊಟ್ಟ ಜೀವವೇ ಇರದ ಈ ಕ್ಷುಲ್ಲಕ ವಿಷಯಗಳನ್ನು ಗೌರವಿಸಿಕೊಳ್ಳುವ ಬರದಲ್ಲಿ.. ಈಗ ಕಳೆದುಕೊಂಡ ಮಗನಾಗಲಿ, ಇವನ ಮಗಳಾಗಳಿ ಮತ್ತೆ ಬರುವರೆ? ಜನ ಎಷ್ಟು ವಿವೇಚನರಹಿತರಾಗಿ ವರ್ತಿಸುತ್ತಾರೆಂದರೆ ಬೇಸರ ತರಿಸುತ್ತದೆ.. ಪ್ರೀತಿಯನ್ನು ಗೌರವಿಸದ ಜಾತಿಯಾಗಲಿ, ಧರ್ಮವಾಗಲಿ ಅವುಗಳು ಬೇಕಾಗಿಯೇ ಇಲ್ಲ ಎನಿಸಿಬಿಡುತ್ತದೆ.. ಮಾನವ ಜನ್ಮ ದೊಡ್ಡದು, ಮೋಕ್ಷಕ್ಕಾಗಿ ಈ ಜನ್ಮ ಎಂದು ಹಿರಿಯರು ಹೇಳುತ್ತಾರೆ ಅಂದಮೇಲೆ ಮಾನವೀಯತೆಯಿಂದ ಬದುಕಬೇಕಲ್ಲವೆ? ಇನ್ನಾದರೂ ಇಂತಹ ಕೇವಲ ಕಾರಣಗಳಿಗಾಗಿ ಪ್ರೀತಿಯ ಬಲಿದಾನ ನಿಲ್ಲಲಿ ಎಂಬುದೇ ಈ ಕವಿತೆಯ ಆಶಯ..:))

    ReplyDelete