ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 2 October 2019

ತೋಳುಗಳ ನಡುವೆ


ಮೊನ್ನೆ ನಿನಗೆಂದು ಬರೆದ ಕವಿತೆಯಲ್ಲಿ
ಏನೋ ಕಮ್ಮಿ ಇತ್ತು,
ನೀನಾದರೂ ಹೇಳಲಿಲ್ಲ ನೋಡು?
ಇತ್ತೀಚೆಗೆ ನಿನಗೆಂಥದೊ ಈರ್ಷೆ,
ತಾಸುಗಟ್ಟಲೆ ನನ್ನ ಮೇಲೆ
ಹಾಡು ಕಟ್ಟಿ ಹಾಡುತ್ತಿ,
ನಾನು ಕಟ್ಟುವ ಪದಗಳಿಗೆ
ನಿನಾದ ಕಮ್ಮಿಯಾಯ್ತೆ ಎನ್ನುತ್ತಿ,
ನಾನೇನು ಹಾಡುಗಾರ್ತಿಯೆ,
ಕವಿತೆ ಬರೆಯುವೆ
ಎಂದರೆ,
ಅಲ್ಲವೆ? ಎಂಬ ಅಣಕ,
ಅದು ಕೊಂಕು ತಾನೆ?

ಈ ನಿಲುವುಗನ್ನಡಿಯ ಮುಂದೆ
ನಿರಾಭರಣಳಾಗಿ ನಿಂತಾಗ
ನೀನು ನೋಡುತ್ತೀ ಎಂದು
ನಾಚಿ, ಮೈ
ಮುಚ್ಚಿಕೊಂಡೆ,
ನೀ ನಿಂತು ನೋಡಿಕೊಳ್ಳುವ ಕನ್ನಡಿ
ನಿನ್ನ ನೆನಪಿಸಿದರೆ?
ಅಕ್ಕ ಪಕ್ಕ ನಿಂತ ನಮ್ಮಿಬ್ಬರ
ಬೆತ್ತಲೆ ದೇಹಗಳು ಹೊಳೆದಂತಾಗಿ ನಗು ಬಂತು.
ಆ ಬೆಳಕಿಗಂತೂ ಸಿಗ್ಗೆಂಬುದೊಂದಿಲ್ಲ
ನಮ್ಮಿಬ್ಬರ ಉಬ್ಬು ತಗ್ಗುಗಳ ಮೇಲೆ
ಎಗ್ಗಿಲ್ಲದೆ ಇಣುಕುತ್ತದೆ.

ಮೊನ್ನೆ ಹನೀಫ ಸಿಕ್ಕಿದ್ದ,
ನಾನು ಚಂದವಂತೆ, ಮನಸೋತನಂತೆ,
ಗುಲಾಬಿ ಹಿಡಿದು ಬಂದಿದ್ದ,
ಆಹಾ! ಅವನ ಚಿಗುರು ಮೀಸೆಯೆ!
‘ಇದು ಲವ್ ಜಿಹಾದ್ ಆಗ್ತದೆ’
ಎಂದು ನಾ ನಗುವಾಗಲೆ;
ನಾ ಈಸಿಕೊಂಡ ಗುಲಾಬಿ
ಕಸಿದುಕೊಂಡು ಓಡಿಬಿಟ್ಟ.

ಇದನ್ನು ನಿನ್ನೊಡನೆ ಹೇಳಿಕೊಂಡು
ನಾನೆಷ್ಟು ನಕ್ಕೆ? ಈಗಲೂ ನಗು!

ನಿನಗೆಂಥದೊ ಈರ್ಷೆ, ನನಗರ್ಥವಾಗಲ್ಲ!


~ ಮಂಜಿನ ಹನಿ

Friday 12 July 2019

ನಾನು ಮಿಯಾ!


ಬರೆಯಿರಿ
ಬರೆದಿಡಿ
ನಾನು ಮಿಯಾ,
NRCಯಲ್ಲಿ ನನ್ನ ಕ್ರಮಸಂಖ್ಯೆ 200543
ನನಗಿಬ್ಬರು ಮಕ್ಕಳು,
ಮೂರನೆಯದು ಬರುವುದರಲ್ಲಿದೆ
ಬರುವ ಬೇಸಿಗೆಗೆ,
ನೀವು ಅವನನ್ನೂ ದ್ವೇಷಿಸುವಿರಾ
ನನ್ನನ್ನು ದ್ವೇಷಿಸುವಂತೆ?
ಬರೆಯಿರಿ
ನಾನು ಮಿಯಾ.
ಬರಡುಜವುಗು ಭೂಮಿಯನ್ನು
ಉತ್ತುಬಿತ್ತೆಭತ್ತ ಬೆಳೆದು
ನಿಮಗೆ ಉಣಲು ಕೊಡಲು,
ಬೆನ್ನ ಮೇಲೆ ಇಟ್ಟಿಗೆ ಹೊತ್ತೆ
ನಿಮ್ಮ ಮಹಲು ಕಟ್ಟಲು,
ನಿಮ್ಮ ಕಾರು ಓಡಿಸಿದೆ
ಏಸಿಯಲ್ಲಿ ನೀವು ಆರಾಮ ವಿಶ್ರಮಿಸಲು,
ನಿಮ್ಮ ಗಟಾರ ಶುಚಿ ಮಾಡಿಕೊಟ್ಟೆ
ನೀವು ಆರೋಗ್ಯದಿಂದಿರಲು.
ನಿಮ್ಮ ಸೇವೆಗೆಂದರೆ
ನಾನು ನಿತ್ಯ ತಯಾರು,
ಆದರೂ
ಎಂಥದೋ ಅತೃಪ್ತಿ ನಿಮಗೆ.


ಬರೆದಿಡಿ
ನಾನು ಮಿಯಾ,
ಜಾತ್ಯಾತೀತಪ್ರಜಾಪ್ರಭುತ್ವ ಗಣರಾಜ್ಯದ
ಹಕ್ಕುಗಳೇ ಇಲ್ಲದ
ನಾಗರೀಕ,
ಅವಳ ತಂದೆ ತಾಯಂದಿರು ಭಾರತೀಯರಾದರೂ
ನನ್ನ ತಾಯಿಯನ್ನು ಡಿ ವೋಟರ್ ಮಾಡಲಾಯಿತು,
ಯಾವ ಶಿಕ್ಷೆಗೊಳಪಡಿಸದೆ
ನಿಮ್ಮಿಚ್ಛೆಗನುಸಾರ ನನ್ನನ್ನು ಕೊಲ್ಲಬಹುದು,
ನನ್ನೂರಿನಿಂದ ನನ್ನ ದೂರ ಎಸೆಯಬಹುದು,
ನನ್ನ ಹಸಿರು ಹೊಲವನ್ನು ಕಸಿಯಬಹುದು,
ನಿಮ್ಮ ರೋಲರನ್ನು ನನ್ನ ಮೇಲೆ
ಉರುಳಿಸಬಹುದು,
ನಿಮ್ಮ ಗುಂಡುಗಳು ನನ್ನ ಎದೆ ಬಗೆಯಬಹುದು.

ಬರೆಯಿರಿ
ನಾನು ಮಿಯಾ
ನೀವು ಕೊಡುವ ಹಿಂಸೆಯನ್ನು ನುಂಗಿ
ಬ್ರಹ್ಮಪುತ್ರೆಯ ಮಡಿಲಲ್ಲಿರುವವ,
ನನ್ನ ಮೈ ನೀಲಿಗಟ್ಟಿ
ಕಣ್ಣು ಬೆಂಕಿಯಿಂದ ಕೆಂಪ್ಪುಗಟ್ಟಿದೆ.

ಆದರೆ ನೆನಪಿನಲ್ಲಿಡಿ,
ನನ್ನ ಬಳಿ ಕೋಪ ಬಿಟ್ಟರೆ ಬೇರ್ಯಾವ ದಾಸ್ತಾನಿಲ್ಲ
ದೂರವೇ ನಿಲ್ಲಿ
ಇಲ್ಲವೆ
ಉರಿದು ಬೂದಿಯಾಗಿ.

-  ಕಾಜಿ ನೀಲ್
   ಅನುವಾದ: ಮಂಜಿನ ಹನಿ 

ಮೂಲದಲ್ಲಿ ಮಿಯಾ ಉಪಭಾಷೆಯಲ್ಲಿ ಕಾಜಿ ಸರೋವರ ಹುಸೇನ್' ಕಾಜಿ ನೀಲ್ ಬರೆದಿರುವ ಉಲ್ಲೇಖವಿದೆಶಾಲೀಮ್ ಎಂ ಹುಸ್ಸೇನ್ ಅವರು ಇಂಗ್ಲೀಷ್’ಗೆ ಭಾಷಾಂತರಿಸಿದ್ದಾರೆ. ಬೆಂಗಾಳಿ ಮುಸಲ್ಮಾನರನ್ನು ದಶಕಗಳಿಂದಲೂ ಮಿಯಾ ಎಂದು ಹಂಗಿಸಲಾಗುತ್ತದೆ. ಅದನ್ನೇ ಅಸ್ತ್ರವಾಗಿಸಿಕೊಂಡು ಈ ಕವಿತೆ ಬರೆಯಲಾಗಿದೆ. ಇಂಗ್ಲೀಷ್ ಅನುವಾದವನ್ನು ಕೆಳಗೆ ಕೊಡಲಾಗಿದೆ.