ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 2 October 2019

ತೋಳುಗಳ ನಡುವೆ


ಮೊನ್ನೆ ನಿನಗೆಂದು ಬರೆದ ಕವಿತೆಯಲ್ಲಿ
ಏನೋ ಕಮ್ಮಿ ಇತ್ತು,
ನೀನಾದರೂ ಹೇಳಲಿಲ್ಲ ನೋಡು?
ಇತ್ತೀಚೆಗೆ ನಿನಗೆಂಥದೊ ಈರ್ಷೆ,
ತಾಸುಗಟ್ಟಲೆ ನನ್ನ ಮೇಲೆ
ಹಾಡು ಕಟ್ಟಿ ಹಾಡುತ್ತಿ,
ನಾನು ಕಟ್ಟುವ ಪದಗಳಿಗೆ
ನಿನಾದ ಕಮ್ಮಿಯಾಯ್ತೆ ಎನ್ನುತ್ತಿ,
ನಾನೇನು ಹಾಡುಗಾರ್ತಿಯೆ,
ಕವಿತೆ ಬರೆಯುವೆ
ಎಂದರೆ,
ಅಲ್ಲವೆ? ಎಂಬ ಅಣಕ,
ಅದು ಕೊಂಕು ತಾನೆ?

ಈ ನಿಲುವುಗನ್ನಡಿಯ ಮುಂದೆ
ನಿರಾಭರಣಳಾಗಿ ನಿಂತಾಗ
ನೀನು ನೋಡುತ್ತೀ ಎಂದು
ನಾಚಿ, ಮೈ
ಮುಚ್ಚಿಕೊಂಡೆ,
ನೀ ನಿಂತು ನೋಡಿಕೊಳ್ಳುವ ಕನ್ನಡಿ
ನಿನ್ನ ನೆನಪಿಸಿದರೆ?
ಅಕ್ಕ ಪಕ್ಕ ನಿಂತ ನಮ್ಮಿಬ್ಬರ
ಬೆತ್ತಲೆ ದೇಹಗಳು ಹೊಳೆದಂತಾಗಿ ನಗು ಬಂತು.
ಆ ಬೆಳಕಿಗಂತೂ ಸಿಗ್ಗೆಂಬುದೊಂದಿಲ್ಲ
ನಮ್ಮಿಬ್ಬರ ಉಬ್ಬು ತಗ್ಗುಗಳ ಮೇಲೆ
ಎಗ್ಗಿಲ್ಲದೆ ಇಣುಕುತ್ತದೆ.

ಮೊನ್ನೆ ಹನೀಫ ಸಿಕ್ಕಿದ್ದ,
ನಾನು ಚಂದವಂತೆ, ಮನಸೋತನಂತೆ,
ಗುಲಾಬಿ ಹಿಡಿದು ಬಂದಿದ್ದ,
ಆಹಾ! ಅವನ ಚಿಗುರು ಮೀಸೆಯೆ!
‘ಇದು ಲವ್ ಜಿಹಾದ್ ಆಗ್ತದೆ’
ಎಂದು ನಾ ನಗುವಾಗಲೆ;
ನಾ ಈಸಿಕೊಂಡ ಗುಲಾಬಿ
ಕಸಿದುಕೊಂಡು ಓಡಿಬಿಟ್ಟ.

ಇದನ್ನು ನಿನ್ನೊಡನೆ ಹೇಳಿಕೊಂಡು
ನಾನೆಷ್ಟು ನಕ್ಕೆ? ಈಗಲೂ ನಗು!

ನಿನಗೆಂಥದೊ ಈರ್ಷೆ, ನನಗರ್ಥವಾಗಲ್ಲ!


~ ಮಂಜಿನ ಹನಿ

No comments:

Post a Comment