ಹರೆಯದ ಗಾಳಕ್ಕೆ ಸಿಕ್ಕ ಮೀನು
------------------------------
ಹೌದು ಆಕೆ ಆಗಷ್ಟೆ ತನ್ನ ಹರೆಯದ ಹುಚ್ಚು ಆಸೆಗಳಿಗೆ ತನ್ನ ಮನಸ್ಸನ್ನು ಪರದೆಯಾಗಿಸಿದ್ದಳು, ಹೆಸರು ಬಿಂದು. ಮೈನೆರೆದು ಏಳೆಂಟು ತಿಂಗಳುಗಳು ಕಳೆದಿದ್ದರಬಹುದು. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳು ಗರಿಗೆದರಿದ್ದವು. ಕನಸುಗಳಲ್ಲಿಯೂ ಕಚಗುಳಿ ಇಡುವ ಅವಳ ರಾಜಕುಮಾರನ ಕಲ್ಪನೆಗಳು ಅವಳನ್ನು ರೋಮಾಂಚನಗೊಳಿಸುತ್ತಿದ್ದವು. ಆಗಷ್ಟೇ ಹತ್ತನೆ ತರಗತಿ ಓದುತ್ತಿದ್ದರೂ ಕಾಣುವ ಕನಸುಗಳಿಗೇನೂ ಕಡಿಮೆಯಿರಲಿಲ್ಲ. ಅಷ್ಟಲ್ಲದೆ ದ.ರಾ.ಬೇಂದ್ರೆಯವರು ’ಹುಚ್ಚುಕೋಡಿ ಮನಸು, ಹದಿನಾರರ ವಯಸು’ ಎಂದು ಹೇಳಿದ್ದಾರೆಯೇ.
ಮನೆ ಕಡೆ ಆಗರ್ಭ ಶ್ರೀಮಂತರಲ್ಲದಿದ್ದರೂ ಅವಳ ತಂದೆ ಮಗಳಿಗೇನೂ ಕಡಿಮೆ ಮಾಡಿರಲಿಲ್ಲ. ತಂದೆಯದು ಸ್ವಂತ ಉದ್ಯಮವಾದುದ್ದರಿಂದ ತಾಯಿ ಕೂಡ ಅವರಿಗೆ ಹೆಗಲು ಕೊಟ್ಟಿದ್ದಳು. ಈ ಕಾರಣದಿಂದಲೇ ಏನೋ ಬಿಂದುವಿಗೆ ಸ್ವಲ್ಪ ಅತಿಯೆನಿಸುವಷ್ಟೇ ಸ್ವಾತಂತ್ರ್ಯ ಸಿಕ್ಕಿತ್ತು. ಅವಳ ದೇಹದಲ್ಲಾದ ಬದಲಾವಣಿಗೆಗಳು ಆ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿಸಿಕೊಳ್ಳೆಂದು ಆಕೆಯನ್ನು ಪ್ರೇರೇಪಿಸುತ್ತಿದ್ದವು. ಕನಸ್ಸಿನಲ್ಲಿನ ರಾಜಕುಮಾರನನ್ನು ಈಗ ಎದುರಿಗೆ ಸಿಗುತ್ತಿದ್ದ ಹುಡುಗರ ಚರ್ಯೆಯಲ್ಲಿ ಹುಡುಕುತ್ತಿದ್ದಳು. ಅವಳ ವಯಸ್ಸಿನ ಅಪ್ರಬುದ್ಧತೆಯೋ ಏನೋ ಸ್ವಲ್ಪ ಸಿನಿಮೀಯ ಹೀರೋಹಿಸಂ ತೋರಿಸಿದ ಹುಡುಗರೆಲ್ಲಾ ಅವಳ ಕನಸಿನ ರಾಜಕುಮಾರನಿಗೆ ತಾಳೆಯಾಗುತ್ತಿದ್ದರು ಅವಳ ಶಾಲೆಯಲ್ಲಿಯೇ ಕಲಿತ ಹಳೆಯ ವಿದ್ಯಾರ್ಥಿ ಮಿಲನ್, ಸ್ವಲ್ಪ ಒರಟು ಸ್ವಭಾವದ ಹುಡುಗ ಆದರೆ ಎತ್ತರದ ನಿಲುವು ಮತ್ತು ಆಕರ್ಷಕ ಮೈಕಟ್ಟು ಹೊಂದಿದ್ದನು. ಅವನಿಗೆ ಕ್ರಿಕೆಟ್ ಎಂದರೆ ಒಂದು ರೀತಿಯ ಹುಚ್ಚು, ತಕ್ಕ ಮಟ್ಟಿಗೆ ಒಳ್ಳೆಯ ಆಟಗಾರನೆ. ಆ ಕ್ರಿಕೆಟ್ ಹುಚ್ಚಿನಿಂದಲೇ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಂಡು, ಈಗ ಬೀದಿ ಅಲೆಯುತ್ತಿದ್ದ. ಅವನ ಹಿಂದೆ ಅವನಂತವರ ದೊಡ್ಡ ದಂಡೇ ಇತ್ತು. ಅವನಿಂದಾಗಿ ಅವರೆಲ್ಲಾ ಕೆಟ್ಟಿದ್ದರೋ, ಇಲ್ಲ ಅವರೆಲ್ಲರಿಂದಾಗಿ ಅವನು ಕೆಟ್ಟಿದ್ದನೋ ತಿಳಿಯದು.
ಇಂತಹ ಹುಡುಗರೇ ಹರೆಯದ ಹುಡುಗಿಯರ ಮನಸ್ಸಿಗೆ ಬೇಗ ಲಗ್ಗೆಯಿಡುವುದೆಂದು ಕಾಣುತ್ತದೆ. ಯಾವುದೋ ಜಗಳದಲ್ಲಿ ಪ್ರಾರಂಭವಾದ ಅವರ ಪರಿಚಯ ಕ್ರಮೇಣ ಆತ್ಮೀಯತೆಯಾಗಿ, ನಂತರದಲ್ಲಿ ಪ್ರೀತಿಯಾಗಿ ಬದಲಾಗಿತ್ತು. ಅವಳಿಗೆ ಅವನ ಆ ಒರಟುತನ, ಆತ ಅವಳಿಗಾಗಿ ಮಾಡಿಕೊಳ್ಳುತ್ತಿದ್ದ ಹೊಡೆದಾಟಗಳು ಅವನಿಗೆ ಅವಳ ಮೇಲಿದ್ದ ಅಗಾಧ ಪ್ರೀತಿಯ ಕುರುಹುಗಳಂತೆ ಭಾಸವಾಗುತ್ತಿದ್ದವು. ಜೊತೆಗೆ ಮೊಬೈಲ್ ನಲ್ಲಿ ಸಂದೇಶಗಳು ಮತ್ತು ಕರೆಗಳು ಸರಾಗವಾಗಿ ಹರಿದಾಡುತ್ತಿದ್ದವು. ಅವರಿಬ್ಬರಿಗೂ ಪ್ರತಿಕ್ಷಣವೂ ಸಂಪರ್ಕದಲ್ಲಿದ್ದೇವೆ ಎನಿಸುವಷ್ಟರ ಮಟ್ಟಿಗೆ ಒಬ್ಬರನೊಬ್ಬರು ಹಚ್ಚಿಕೊಂಡಿದ್ದರು. ಅವರ ಈ ಪ್ರೀತಿಯ ಅಮಲೋ ಏನೋ ಆಕೆ ತನ್ನ ಹತ್ತನೆಯ ತರಗತಿಯನ್ನು ಪಾಸು ಮಾಡಲು ತುಂಬಾ ತ್ರಾಸ ಪಡಬೇಕಾಯ್ತು. ’ಪ್ರೇಮ ಕುರುಡು’ ಎನ್ನುತ್ತಾರೆ ಆದರೆ ಪ್ರೀತಿಯಲ್ಲಿ ಬಿದ್ದವರು ತಮ್ಮ ಸಂಗಾತಿಯ ಕೋರೆಗಳನ್ನು ಗುರ್ತಿಸುವಲ್ಲಿ ಕುರುಡರಾಗುತ್ತಾರೆ. ಅದರಂತೆ ಅವನ ಕೆಟ್ಟ ಚಟಗಳು ಅವಳ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ಬಿಂದು ಮಿಲನ್’ನ ಮೇಲೆ ತುಂಬಾ ಭಾವನಾತ್ಮಕವಾಗಿ ಅವಲಂಭಿತಳಾಗಿದ್ದಳು. ತನ್ನ ಅಪ್ಪ ಅಮ್ಮ ಸಣ್ಣದಾಗಿ ಗದರಿದರೂ ಸಾಕು, ಅವನ ಸಾಂಗತ್ಯ ಬಯಸುತ್ತಿದ್ದಳು. ಅದು ಹದಿ ಹರೆಯದವರ ಬಲಹೀನತೆ, ಅದಕ್ಕಾಗಿಯೇ ಬೆಳೆದ ಮಕ್ಕಳನ್ನು ತುಂಬಾ ಕಾಳಜಿಯಿಂದ ನಡೆಸಿಕೊಳ್ಳಬೇಕಾಗುತ್ತದೆ. ಆ ಕಾಳಜಿ ಮತ್ತು ಪ್ರೀತಿ ಹೆತ್ತವರಿಂದ ದೊರೆಯದಿದ್ದಾಗ ಮಕ್ಕಳು ಅದನ್ನು ಮತ್ತೊಬ್ಬರಲ್ಲಿ ಹರಸುತ್ತಾರೆ. ಆಗಲೆ ಮಕ್ಕಳು ಹಾದಿ ತಪ್ಪುವ ಸಂಭವ ಜಾಸ್ತಿ.
ಕಡಿಮೆ ಅಂಕ ಪಡೆದಿದ್ದ ಕಾರಣ ಕಾಲೇಜ್’ನಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಪರದಾಡುವಂತಾಯ್ತು. ಕಾಲೇಜ್ ಸೇರಿದ ಮೇಲಂತೂ ಅವಳನ್ನು ಹಿಡಿಯುವವರೇ ಇಲ್ಲದಂತಾಯಿತು. ಕಾಲೇಜ್’ನ ತರಗತಿಗಳಿಗೆ ಗೈರಾಗಿ ಮಿಲನ್’ನೊಂದಿಗೆ ಬೈಕೇರಿ ಕುಳಿತುಬಿಡುತ್ತಿದ್ದಳು. ಮೈಸೂರ್’ನ ಎಲ್ಲಾ ಚಿತ್ರಮಂದಿರಗಳು ಮತ್ತು ಉದ್ಯಾನವನಗಳನ್ನು ಅದಾಗಲೆ ಸಂದರ್ಶಿಸಿ ಆಗಿತ್ತು. ಅವರ ಈ ಪ್ರಣಯದಾಟ ಅವರ ಅಪ್ಪ-ಅಮ್ಮಂದಿರ ಅರಿವಿಗೆ ಬರದಿದ್ದುದೇ ಸೋಜಿಗ. ಇಷ್ಟೆಲ್ಲವುಗಳ ನಡುವೆ ಬಿಂದು ತನ್ನ ಪ್ರಥಮ ಪಿಯೂಸಿಯನ್ನು ಪಾಸ್ ಮಾಡಿದ್ದೇ ಒಂದು ಸಾಧನೆಯಾಗಿತ್ತು. ದ್ವಿತೀಯ ಪಿಯೂಸಿಗೆ ಕಾಲಿಟ್ಟರೂ ಆಕೆಗೆ ಓದಿನ ಬಗ್ಗೆ ಗಾಂಭೀರ್ಯತೆ ಬಂದಿರಲಿಲ್ಲ. ಏನಾದರಾಗಲಿ ಮಿಲನ್’ನೊಂದಿಗೆ ಸುತ್ತುವುದೇ ಸುಖವೆಂದು ಭಾವಿಸಿದ್ದಳು. ಈ ಕಾರಣದಿಂದಾಗಿಯೇ ಆಕೆ ತನ್ನ ಪೂರ್ವಭಾವಿ ಪರೀಕ್ಷೆಗಳನ್ನೂ ತಪ್ಪಿಸಿಕೊಂಡಳು. ’ಆಕೆಯ ಗೈರು ಹಾಜರಿಯ ಬಗ್ಗೆ’ ಪ್ರಾಂಶುಪಾಲರ ಪೋಸ್ಟ್ ಕಾರ್ಡ್ ಬಿಂದುವಿನ ಮನೆಯಲ್ಲಿ ಅಲ್ಲೋಲ ಕಲ್ಲೋಲವನ್ನೆಬ್ಬಿಸಿತ್ತು. ಯಾವತ್ತೂ ಬಿಂದುವಿನ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕದ ಪೋಷಕರು ಅವಳಿಗೆ ತೀರಾ ಬಿಗಿ ಮಾಡಿದರು. ಆದರೆ ಅವರಿಗೆ ಬಿಂದು ಪ್ರೀತಿಯಲ್ಲಿ ಬಿದ್ದಿರುವುದು ತಿಳಿಯಲಿಲ್ಲ.
ಈ ವಿಷಯದ ಬಗ್ಗೆ ಮಿಲನ್’ನೊಂದಿಗೆ ಮಾತನಾಡಲು ಅವನನ್ನು ಎಡತಾಕಿದಳು. ಅವನು ದೂರದಲ್ಲಿನ ಪ್ರವಾಸಿ ತಾಣಕ್ಕೆ ಹೋಗಿ ಸಾವಕಾಶವಾಗಿ ಮಾತನಾಡುವ ಎಂದು ಒಪ್ಪಿಸಿ, ಅವಳನ್ನು ಕರೆದೊಯ್ದನು. ಅಲ್ಲಿನ ನಿರ್ಜನವಾದ ಪ್ರಶಾಂತ ವಾತಾವರಣ ಅವರ ಮಾತುಕತೆಗೆ ಪ್ರಶಸ್ತವೆನಿಸಿತ್ತು. ಅವಳು ಮನೆಯಲ್ಲಿನ ಬಿಗುವಾದ ವಾತಾವರಣ ತಮ್ಮ ಪ್ರೀತಿಯ ಬಗ್ಗೆ ತಿಳಿಸುವಂತೆ ಮಾಡಿಬಿಡಬಹುದು ಎಂದು ಹೇಳಿ ಕಣ್ಣೀರಾಗಿದ್ದಳು. ತಮ್ಮ ಪ್ರೀತಿಯ ಬಗ್ಗೆ ಅವಳ ಮನೆಯಲ್ಲಿ ತಿಳಿದುಬಿಟ್ಟರೆ ದೊಡ್ಡ ರಾದ್ಧಾಂತವೇ ಆಗಿಬಿಡುತ್ತದೆಂಬುದನ್ನು ಮನಗಂಡ ಮಿಲನ್ ಸಣ್ಣದಾಗಿ ನಡುಗಿದ್ದ. ಆದರೂ ಅದನ್ನು ತೋರಗೊಡದೆ ಅವಳನ್ನು ಅಪ್ಪಿ ಸಂತೈಸುವ ಪ್ರಯತ್ನ ಮಾಡಿದನು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಬ್ಬರೂ ಅಧೀರರಾಗಿಬಿಟ್ಟರು. ಅಂತಹ ಒಂದು ವಿಷಮ ಘಳಿಗೆಯಲ್ಲಿ ಅವರಿಬ್ಬರ ಮನಸ್ಸುಗಳು ಹಳಿ ತಪ್ಪಿದ್ದವು. ಏಕಾಂತದ ತಾಣವಾದ್ದರಿಂದ ಅವರ ದೇಹದ ಹರೆಯದ ಬಿಸುಪಿಗೆ ಬೆವರ ಹನಿಗಳು ಧಾರಾಕಾರವಾಗಿ ಹರಿದಿದ್ದವು. ಎರಡೂ ಮನಸ್ಸುಗಳು ತಮಗೆ ಅರಿವೇ ಇಲ್ಲದೆ ಕಾಲು ಜಾರಿದ್ದವು. ನಂತರದ ದಿನಗಳಲ್ಲಿ ಮಿಲನ್ ಬಿಂದುವಿನೊಂದಿಗೆ ಮಾತನ್ನೇ ಕಡಿಮೆ ಮಾಡಿದ್ದನು. ಈ ಎಲ್ಲಾ ಘಟನೆಗಳಿಂದ ಕಂಗೆಟ್ಟಿದ್ದ ಬಿಂದುವಿಗೆ ತಾನು ಕಾಲು ಜಾರಿದುದರ ಕುರುಹು ತನ್ನ ಗರ್ಭದಲ್ಲಿ ಚಿಗುರೊಡೆಯುತ್ತಿದೆ ಎಂಬ ವಿಷಯ ಸಿಡಿಲೆರಗಿದಂತಾಗಿತ್ತು. ಅವಳ ಮನಸ್ಸು ಖಿನ್ನತೆಗೆ ಜಾರಿಬಿಟ್ಟಿತ್ತು. ಓದೂ ಬೇಡ, ಸುತ್ತುವುದೂ ಬೇಡ, ಜೀವನವೂ ಬೇಡ ಎನಿಸುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಿಲನ್ ಕೂಡ ಜೊತೆಗಿರದಿದ್ದುದು ಅವಳನ್ನು ಹೈರಾಣಾಗಿಸಿತ್ತು. ಕಡೆಗೆ ಮನೆಯವರಿಗೆ ಸತ್ಯವನ್ನು ತಿಳಿಸಲೂ ಆಗದೆ, ಎದುರಿಸಲೂ ಆಗದ ಹುಚ್ಚು ಮನಸ್ಸು ಆತ್ಮಹತ್ಯೆಗೆ ಶರಣಾಯಿತು. ವಿಷಯ ತಿಳಿದ ಮಿಲನ್ ಭೂಮಿಗೆ ಕುಸಿದು ಹೋದ, ಆ ಆಘಾತವನ್ನು ತಾಳಲಾರದೆ ತಾನೂ ಆತ್ಮಹತ್ಯೆಗೆ ವಿಫಲ ಯತ್ನ ಮಾಡಿ ಆಸ್ಪತ್ರೆ ಸೇರುವಂತಾಯ್ತು.
ಪೋಷಕರ ಸಣ್ಣಮಟ್ಟಿಗಿನ ಅಜಾಗರೂಕತೆ ಮತ್ತು ಹರೆಯದ ಹುಚ್ಚುಮನಸ್ಸಿನ ದುಡುಕುಗಳು ಎಷ್ಟೆಲ್ಲಾ ಜನರ ನೆಮ್ಮದಿಯನ್ನು ಕಸಿದಿತ್ತು. ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಹರೆಯದಲ್ಲಿ ಮೂಡುವ ಆಕರ್ಷಣೆಗಳೇ ಪ್ರೀತಿಯಲ್ಲ. ದೇಹದಲ್ಲಿ ಆಗುವ ಹಾರ್ಮೋನ್’ಗಳ ಬದಲಾವಣೆಯಿಂದ ಅಂತಹ ಭಾವಗಳು ಎಲ್ಲರಲ್ಲಿಯೂ ಹುಟ್ಟುವುದು ಸಹಜ, ಆದರೆ ಯುವಮನಸ್ಸುಗಳು ಅದನ್ನೇ ಪ್ರೀತಿಯೆಂದು ಭಾವಿಸಿ ಜೀವನವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಹರೆಯದಲ್ಲಿ ಮೂಡುವ ಪ್ರೀತಿಗಳಿಗೆ ಕಾಲನ ಚೌಕಟ್ಟು ನೀಡಿ, ಸಭ್ಯತೆಯ ಎಲ್ಲೆಯನ್ನು ಮೀರದಿರಿ. ಮೊದಲು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದೆ ಎಂಬ ಅರಿವು ನಿಮಗಿರಲಿ. ನಿಮ್ಮ ಕಾಲುಗಳ ಮೇಲೆ ನೀವು ನಿಂತುಕೊಂಡ ನಂತರವೂ ನಿಮ್ಮ ಪ್ರೀತಿ ಗಟ್ಟಿಯಾಗಿದ್ದರೆ ದಾಂಪತ್ಯಕ್ಕೆ ಅಡಿಯಿಡಿ. ’ಹರೆಯದ ಗಾಳಕ್ಕೆ ಸಿಕ್ಕ ಮೀನುಗಳಾಗಬೇಡಿ’.
- ಪ್ರಸಾದ್.ಡಿ.ವಿ.