ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday, 23 January 2012

ಕಾದಿರುವಳೂರ್ಮಿಳೆ



ಇರುವಳೂರ್ಮಿಳೆ ಅಲ್ಲಿ,
ನಿನ್ನದೇ ಧ್ಯಾನದಿ, ಅಯೋಧ್ಯೆಯಲ್ಲಿ,
ಭಾವಗಳು ಸುಳಿ ಸುಳಿದು,
ವಿರಹದ ಬಾಣಲೆಯಲಿ
ಕುದಿ ಕುದಿದು,
ಆವಿಯಾಗದ ನಿರೀಕ್ಷೆ ಹಿಡಿದು,
ಕಾಡುವಳೆ ನಿನ್ನ,
ನೀನಿರಲು ಇಲ್ಲಿ ಕಾನನದಲ್ಲಿ,
ನಿನ್ನಣ್ಣ ಅತ್ತಿಗೆಯ ಬಳಿಯೇ
ಲೋಕೋದ್ಧಾರದಿ ಸ್ವಾರ್ಥವನ್ನು
ತೊರೆದ ಹಮ್ಮಿನಲ್ಲಿ,
ರಾಮರಾಜ್ಯದ ಸ್ಥಾಪನೆಗೆ
ಕಾರಣನಾಗುವೆನೆಂಬ ಭಿಮ್ಮಿನಲ್ಲಿ...

ಮೊನ್ನೆ-ಮೊನ್ನೆ ಮದುವೆಯಾದವಳು,
ಮೊನ್ನೆ ಎಂಬುದು ವರುಷವಾದರೇನು?
ವಯಸ್ಸೆಂಬುದು ದೇಹಕ್ಕಲ್ಲದೆ
ಮನಸ್ಸಿಗಾಗುವುದೇನು?
ಒಮ್ಮೆಯಾದರು ಮಧು ಹೀರಿ
ಸುಖಿಸಲಿಲ್ಲ ಅವಳು,
ಕಾಡವೆ ಅವಳ ಕಾಮ-ವಾಂಛೆಗಳು,
ರಾಮನನುಜ ಲಕ್ಷ್ಮಣನು ನೀನು,
ಧರ್ಮ ಸಂಸ್ಥಾಪನೆಗೆ
ಟೊಂಕ ಕಟ್ಟಿದವನು,
ನಿನ್ನನ್ನೇ ಬೇಡಿ
ವರಿಸಿದ್ದೇ ಅವಳ ತಪ್ಪೇನು?
ಕಾದಿರುವಳೂರ್ಮಿಳೆ ಅಲ್ಲಿ...

ಲಕ್ಷ್ಮಣನಾದರೇನು ನಾನು,
ವಿಧಿಯೆದುರು ತರಗೆಲೆಯು,
ಗಾಳಿ ಬೀಸಿದೆಡೆ ತೂರಿದೆನು..!
ಕಾಡು ಪಾಲಾದನು ಅಣ್ಣ,
ಕಾಯಲವನ ನಾನೂ,
ಇದ್ದುಬಿಡಬೇಕಿತ್ತೆ ತಲೆಕೆರೆಯುತ್ತಾ
ತಮ್ಮ ಭರತನೆದುರು,
ಆತ್ಮಾಭಿಮಾನವ ಅಡವಿಟ್ಟು,
ಅದಕಾಗೇ ಹೊರಟುಬಿಟ್ಟೆ..!
ಆದರೇನು ನಿನ್ನ ನೆನಪು
ಕಾಡಲಿಲ್ಲವೆಂದೇನಲ್ಲ,
ಇತ್ತೊಂದು ನಂಬಿಕೆ
ಕಾಯುವಳೂರ್ಮಿಳೆ ನನಗಾಗಿ
ನಾನವಳ ನಲ್ಲ...

ಕಾಯುತ್ತಿರುವೆ ನೀನಲ್ಲಿ,
ನಿನ್ನ ನೆನೆದು ನಾನೂ ಇಲ್ಲಿ,
ಆಸೆ-ವಾಂಛೆಗಳ ಬೆನ್ನಿಗಿಟ್ಟು,
ನೆನಪು-ಕನಸುಗಳ ಗಾಳಿಗಿಟ್ಟು,
ಕಾಯುತ್ತಿರುವೆ ನಿನಗಾಗಿ ನಾನು,
ಲಕ್ಷ್ಮಣನು, ಊರ್ಮಿಳೆಯ ನಲ್ಲನೂ...

- ಪ್ರಸಾದ್.ಡಿ.ವಿ.

8 comments:

  1. ಪ್ರಸಾದ್ ಸರ್..
    ನನಗೆ ರಾಮಾಯಣ ದಲ್ಲಿ ಬಹುವಾಗಿ ಕಾಡುವ ಪಾತ್ರ ಊರ್ಮಿಳೆಯದು...ಅವಳ ಇಚ್ಛೆ ಆಸೆಗಳನ್ನೆಲ್ಲ ಗಾಳಿಗೆ ತೂರಿ ಜೀವನ ಸವೆಸುವಳಲ್ಲ..

    ಊರ್ಮಿಳೆಯ ಮನಸ್ಸು ಈ ಕವನದಲ್ಲಿ ಚೆನ್ನಾಗಿ ಚಿತ್ರಿತವಾಗಿದೆ ,...ಇಷ್ಟವಾಯ್ತು...

    ReplyDelete
    Replies
    1. ರಾಮಾಯಾಣದಲ್ಲಿ ಬರುವ ಎಲ್ಲಾ ಸ್ತ್ರೀ ಪಾತ್ರಗಳಿಗಿಂತಲೂ ಊರ್ಮಿಳೆ ತುಂಬಾ ವಿಶಿಷ್ಟವಾಗಿ ನಿಲ್ಲುತ್ತಾಳೆ ಮತ್ತು ಆಕೆಯ ಬಗ್ಗೆ ರಾಮಾಯಣದಲ್ಲಿ ಸಾಕಷ್ಟು ವಿವರಣೆಗಳಿಲ್ಲದ ಕಾರಣ ಆಕೆಯ ಮನಸ್ಸಿನ ಭಾವಗಳು ತುಂಬಾ ನಿಗೂಡವೆನಿಸುತ್ತವೆ ಮತ್ತು ಸಾಕಷ್ಟು ಕವಿಗಳಿಗೆ ವಸ್ತುವಾಗುತ್ತಾಳೆ.. ನಿಮ್ಮ ಪ್ರತಿಕ್ರಿಯೆಗೆ ತುಂಬು ಮನದ ಧನ್ಯವಾದಗಳು ಸುಷ್ಮ..:)))

      Delete
  2. ಅದ್ಭುತವಾಗಿದೆ ಪ್ರಸಾದ್ ಸರ್ .....ಬಹಳ ಹಿಡಿಸಿತು:):)

    ReplyDelete
    Replies
    1. ತುಂಬು ಮನದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಶೀತಲ್..:)))

      Delete
  3. ನಿಜಕ್ಕೂ ವಾಲ್ಮಿಕಿ ಇದಕ್ಕೆ ಏನಾದರೂ ವ್ಯಾಖ್ಯಾನ ನೀಡಿದ್ದಾರೋ? ಮೂಲ ಬಲ್ಲವರು ಹೇಳಬೇಕು... ನಾನಂತೂ ಎಲ್ಲೂ ಕೇಳಿಲ್ಲ ಹೆಚ್ಚು ಉಲ್ಲೇಖವೂ ಇಲ್ಲ.. ಊರ್ಮಿಳೆ ಮನಸಿನ ಭಾವ .. ಬಹುಶಃ ನಿಮ್ಮ ಕವನ ಒಂದು ಭಾವ ತುಂಬುವಲ್ಲಿ ತನ್ನ ಕಾಣಿಕೆ ನೀಡಿದೆ ಎನ್ನಲೇ..? ಭರತ ತಾನೂ ಬರುತ್ತೇನೆಂದಾಗ ಬೇಡವೆಂದ ರಾಮ ನವವರ ಲಕ್ಷ್ಮಣನನ್ನು ತನ್ನ ವಧುವನ್ನು ಬಿಟ್ಟುಬರುವುದಕ್ಕೆ ಅಡ್ಡಿಪಡಿಸಲಿಲ್ಲ ಏಕೆ?? ಪ್ರಸಾದ್ ಚನಾಗಿದೆ ಕವನ....

    ReplyDelete
    Replies
    1. @ಜಲನಯನ: ನನ್ನನ್ನೂ ತುಂಬಾ ಕಾಡುವ ಜಿಜ್ಞಾಸೆಗಳಿವು.. ಇವಷ್ಟೆ ಅಲ್ಲ, ರಾಮಾಯಣದಲ್ಲಿ ಇಂತಹ ಜಿಜ್ಞಾಸೆಗಳು ತುಂಬಾ ಇವೆ ಅದಕ್ಕಾಗಿಯೇ ರಾಮಾಯಣ ತುಂಬಾ ಬರಹಗಾರರಿಗೆ ವಿಷಯ, ವಸ್ತುವನ್ನು ಒದಗಿಸಿದೆ.. ಈ ಜಿಜ್ಞಾಸೆಗಳಿಗೆ ನಾನು ತಿಳಿದಂತೆ, ತುಂಬಾ ಗಾಢವಾಗಿ ಹೋದಾಗ ಕೆಲವು ಸತ್ಯಗಳು ಗೋಚರಿಸಿಕೊಳ್ಳುತ್ತವೆ. ಯಾವುದೇ ನಿರ್ದಷ್ಟ ಘಟನೆಗಳಾಗಿ ರಾಮಾಯಣದಲ್ಲಿ ನಡೆದದ್ದು ಪೂರ್ವನಿಯೋಜಿತವಾಗಿಯೆ. ಸೀತೆ ತನ್ನ ಮಗಳು ಎಂದು ರಾವಣನಿಗೆ ಮೊದಲೇ ಗೊತ್ತಿತ್ತು. ತನ್ನ ಪಾಪದ ಪರಿಹಾರಕ್ಕೆ ಆತ ಹವಣಿಸುತ್ತಿದ್ದ ಅಷ್ಟೆ. ಒಬ್ಬ ಅಗಸನ ಮಾತಿಗೆ ಕಿವಿಗೊಟ್ಟು ಸೀತೆಯನ್ನು ಕಾಡಿಗೆ ಅಟ್ಟಿದ ರಾಮ, ಒಬ್ಬ ಆದರ್ಶ ರಾಜ ಹೇಗಿರಬೇಕು ಎಂದು ತೋರಿಸಿಕೊಟ್ಟವ. ಹಾಗೆಯೇ ಊರ್ಮಿಳಾ ಪ್ರಸಂಗ ಕೂಡ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..:)))

      Delete
  4. ನನಗೆ ತುಂಬಾ ಇಷ್ಟವಾದ ಕವನಗಳಲ್ಲೊಂದಿದು.. ಶುಭವಾಗಲಿ :)

    ReplyDelete
    Replies
    1. ಕವಿತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ನಲ್ಮೆಯ ಧನ್ಯವಾದಗಳು ಪರೇಶ್..:)))

      Delete