ತುತ್ತಗುಳ ಕಂಡ ಕಾಗೆ
ಕಾವ್ ಕಾವ್ ಎಂದು ಕೂಗಿ,
ತನ್ನ ಬಳಗವರಚಿ ಕರೆದು,
ತುತ್ತಗುಳ ಭಾಗ ಮಾಡಿ
ಗುಟುಕಿರಿಸಿರೆ...
ಪೊಳ್ಳು ಅಭಿಮಾನದಮಲೇರಿ
ಮನೆಗೆ ಕರೆದ
ಬಂಧುಬಳಗದವರನ್ನ
ಕಸಿದ ಹೀನ ಕೃತ್ಯವು,
ಕೂಡಿಟ್ಟ ಅನ್ನವನು
ಹಳಸಿ ಕೊಳೆಯಿಸಿ
ಅಹಾರವಾಯಿತದು
ಕಸದ ಬುಟ್ಟಿಗೆ..!
ಕಾಗೆಗಿಂತ ಕಡೆಯಾಯ್ತೆ,
ಎಲ್ಲಿಂದ ಎಲ್ಲಿಗ್ಹೊರಟೆ,
ಬದುಕಾಯ್ತೆ ಮೂರಾಬಟ್ಟೆ,
ಎಲೆ ಮಾನವ..!!!
ಮದ್ಯದಂಗಡಿ
ಜಾಡು ಹಿಡಿದು
ಕಂಠಪೂರ್ತಿ
ಶೇಂಧಿ ಕುಡಿದು,
ಮತ್ತಷ್ಟು ಸಾಲ ಮಾಡಿ
ಹೆಂಡವೀರುವೆ,
ಹೆತ್ತಮ್ಮನ ಕರುಳ ಕುಯ್ದು,
ಹೆಂಡತಿಯ ಮಾನ ಕಳೆದು
ಹರಾಜಿಗಿಟ್ಟೆಯೋ,
ಮಕ್ಕಳವು ಬೀದಿ ಪಾಲು
ತಿರಿದುಣ್ಣಲು ಸಾಲು ಸಾಲು,
ಕೈಯಿಲಿ ಹಿಡಿದು ಮುರುಕುತಟ್ಟೆ,
ಬದುಕಾಯ್ತು ಮೂರಾಬಟ್ಟೆ,
ಎಲೆ ಮಾನವ...!!!
ಅದೃಷ್ಟದ ಆಟ ಕಟ್ಟಿ
ಕುದುರೆಯ ಬಾಲವಿಡಿದು,
ಊರೂರು ಸುತ್ತು ಹೊಡೆದು,
ಲಾಟರಿಯ ಸಂಖ್ಯೆ ಹಿಡಿದು,
ಗೆಲುವ ಕುದುರೆ
ಕಾಲು ಮುರಿಯೆ,
ಅದೃಷ್ಟ ಸಂಖ್ಯೆ
ಮುರುಗಿ ತಿರುಗೆ,
ಹೆಂಡತಿಯ ಮಾಂಗಲ್ಯ ಕಸಿವೆ
ಮಗುವಿನ ಕಾಲ್ಗೆಜ್ಜೆ ಕಸಿವೆ,
ಬದುಕಿದು ಬಂಗಲೆಯಿಂ
ಬೀದಿಯೆಡೆಗೆ..!
ಎಲ್ಲಿಂದ ಎಲ್ಲಿಗ್ಹೊರಟೆ
ಬದುಕಾಯ್ತು ಮೂರಾಬಟ್ಟೆ,
ಎಲೆ ಮಾನವ..!!!
ಮಕ್ಕಳ ಪಾಡದು
ಹೇಳತೀರದು,
ಸುಪ್ಪತ್ತಿಗೆಯಿಂ
ತೊಟ್ಟಿಯೆಡೆಗೆ,
ಅರಳುವ ಮೊದಲೆ
ಬಸವಿಳಿದ ಬದುಕಿಡಿದು,
ಭಿಕ್ಷೆಯ ಅನ್ನಕ್ಕೆ ಬಿದ್ದು
ಹಾಡಿ ಹೊರಟಿವೆ,
"ಹೇ ದೇವಾ,
ಚಿನ್ನದ ತೊಟ್ಟಿಲ ಹಂದಿಗೆ
ಮರಿಯಾಗುವುದಕ್ಕಿಂತ,
ಮುರಿದ ಕೊಟ್ಟಿಗೆಯ
ಹಸುವಿಗೆ ಕರುವಾಗಿ ಮಾಡೆಮ್ಮ"..!
- ಪ್ರಸಾದ್.ಡಿ.ವಿ.
ಸತ್ಯ, ನೂರು ಜನುಮದಲ್ಲು ನೆನಪಿಡುವ ಸತ್ಯ!
ReplyDelete"ಚಿನ್ನದ ತೊಟ್ಟಿಲ ಹಂದಿಯಾಗುವುದಕ್ಕಿಂತ, ಮುರಿದ ಕೊಟ್ಟಿಗೆಯ ಹಸುವಿಗೆ ಕರುವಾಗು"ವುದು ಉಚಿತ... ಕೊನೆಯ ಪ್ಯಾರಾ ತುಂಬಾ ಹಿಡಿಸಿತು.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಕವನ... ಕೊನೆಯ ನಾಲ್ಕು ಮಾತುಗಳಂತು ಮಕ್ಕಳ ಪರಿಸ್ಥಿತಿಗೆ ಕನ್ನಡಿಯಾಗಿದೆ
ReplyDeleteವ್ಯಸನ ಮುಕ್ತ ಸಮಾಜದಿಂದ ಸ್ವಾಸ್ತ್ಯ ಹೊಂದಿದ ಬದುಕು ಕಾಣಲು ಸಾಧ್ಯ.ನಿಮ್ಮ ಖಾಳಜಿಯೇ ಅನುಕರಣೀಯವಾದದ್ದು.ಜೀವನ ದಿಕ್ಕಾಪಾಲಾಗಿ ಹೋಗುವ ಬಗೆಯನ್ನು ಕಣ್ಣಿಗೆ ಕಟ್ಟಿದ್ದೀರಿ.ಆರೋಗ್ಯಯುತ ಕವನ.ಸಮಾಜಮುಖಿಯಾದುದು.
ReplyDeleteನನ್ನ ಊರಿನಲ್ಲಿ ಹೆಂಡದ ದಾಸರಾಗಿ ಮನೆಯನ್ನು ಹಾಳು ಮಾಡಿಕೊಂಡು ಕಷ್ಟಪಡುತ್ತಿರುವ ಅನೇಕ ಬುದ್ಧಿಗೇಡಿಗಳಿದ್ದಾರೆ, ಅವರ ಮಕ್ಕಳುಗಳನ್ನು ನೋಡಿರೆ ಮನಸ್ಸಿಗೆ ತುಂಬಾ ಬೇಸರವೆನಿಸುತ್ತದೆ.. ಅಪ್ಪ-ಅಮ್ಮನ ತೆವಲಿಗೆ ಮಕ್ಕಳಿಗೆ ಮತ್ತು ಅವರ ಭವಿಷ್ಯಗಳ ಮೇಲೆ ಬರೆ.. ಆದ್ದರಿಂದ ಚಟಗಳಿಗೆ ದಾಸರಾಗಿ ಮನೆ ಮತ್ತು ಕುಟುಂಬವನ್ನು ಕಾಲಕಸ ಮಾಡುವ ಬುದ್ಧಿಗೇಡಿಗಳಿಗೆ ಛಾಟಿ ಬೀಸಲೆಂದು ಈ ಕವಿತೆಯನ್ನು ನಿರೂಪಿಸಿದೆ..
ReplyDeleteಧನ್ಯವಾದಗಳು ಸೂರಜ್ ಬಿ ಹೆಗ್ಡೆ ಮತ್ತು ಮಂಜುನಾಥ್ ರೆಡ್ಡಿಯವರೆ.. ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ಇನ್ನಷ್ಟು ಸಮಾಜಮುಖಿಯಾಗಿ ತುಡಿಯಲು ನನ್ನ ಮನಸ್ಸನ್ನು ಪ್ರೇರೇಪಿಸುತ್ತಿದೆ..:)))
ReplyDeleteಸ್ವಸ್ತ ಸಮಾಜದ ಕಲ್ಪನೆಯೆ ಸುಂದರ ಆ ಸುಂದರ ಸಮಾಜ ನಿರ್ಮಾಣದ ಕಲ್ಪನೆಯಲ್ಲಿ ಅರಳಲೆತ್ನಿಸಿದ ಕುಸುಮವೀ ಕವಿತೆ.. ನಿಮ್ಮ ಮಾತುಗಳಿಂದ ಮನಸ್ಸಿಗೆ ತುಂಬಾ ಖುಷಿಯಾಯಿತು ಸೋಮಣ್ಣ(Banavasi Somashekhar).. ಪ್ರೀತಿಯ ಧನ್ಯವಾದಗಳು ನಿಮಗೆ.. ನಿಮ್ಮ ಆರೈಕೆಯ ಪ್ರೋತ್ಸಾಹದಿಂದ ನನ್ನ ಕೈಯಿಂದ ಇಂತಹ ಪ್ರಯತ್ನವನ್ನು ಮಾಡಲು ಸಾಧ್ಯವಾಯಿತು..:)))
ReplyDelete