ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 7 September 2021

ತೇಜಸ್ವಿ ಎಂಬ ಪ್ರಜ್ಞೆ!


ಬೆಳಿಗ್ಗೆ ಚೆನ್ನೈಗೆ ತೇಜಸ್ವಿ ಬಂದಿದ್ರು. ನಾನು ಹೀಗೆ ಹೊರಗೆ ಅಡ್ಡಾಡೋಣೆಂದು ಹೋಗಿದ್ದೆ. ಅಡ್ಯಾರ್ ಹತ್ರ ಆಟೋಗೆ ಕಾಯ್ತಿದ್ರು. ನಾನು ಮಾತಾಡ್ಸೋಕೂ ಮುಂಚೆ ಎರೆಡೆರೆಡು ಸಲ ಕನ್'ಫರ್ಮ್ ಮಾಡ್ಕೊಂಡಿದ್ದೀನಿ, ಆಮೇಲೆ...

"ಏನ್ ಸಾರ್ ನೀವಿಲ್ಲಿ?" ಅಂದೆ. ಓಹೋ ಇಲ್ಲೂ ಕನ್ನಡದವ್ರಿದ್ದೀರಲ್ಲಪ್ಪ, ಬನ್ನಿ ಬನ್ನಿ ಅಂದ್ರು. ಎಲ್ಲಿಗೆ ಹೊರ್ಟಿದ್ದೀರಿ ಅಂತ ಕೇಳ್ದೆ,

'ಏನಿಲ್ಲ ಕಣ್ರಿ ಒಂದಷ್ಟು ದಿನ ಅಮೇಜಾನ್ ಕಾಡುಗಳಲ್ಲಿ ಅಲೆದು ಬರ್ಬೇಕು. ಹೊಸ ಕತೆ, ಪಾತ್ರಗಳು, ಪಕ್ಷಿಗಳು, ಮೀನುಗಳು, ನದಿಗಳು, ನಿಗೂಢಗಳು ಏನು ಸಿಕ್ರೂ ಎತ್ಕೊಂಡ್ ಬರ್ಬೇಕು' ಅಂದ್ರು.

'ಅಲ್ಲೂ ಹಾರುವ ಓತಿ ಸಿಗ್ಬೋದು ಅನ್ಸುತ್ತೆ ಅಲ್ವಾ ಸಾರ್?' ಅಂತ ನಕ್ಕೆ.

'ಅಯ್ಯೋ ನಿಮ್ಮ, ಹಾರೋ ಓತಿಗಳು ಬರಿ ದಕ್ಷಿಣ ಏಷ್ಯಾದಲ್ಲಷ್ಟೆ ಕಾಣ ಸಿಕ್ತವೆ ಕಣ್ರಿ. ಅಮೇಜಾನಲ್ಲಿ ಸಿಗಲ್ಲ.' ಅಂದ್ರು. ನಂಗೆ ಪೆಚ್ಚಾದಂಗನ್ನಿಸಿತು.

ನಾನು ಸುಮ್ಮನಾದದ್ದನ್ನು ಕಂಡು 'ಬನ್ರಿ, ವೀಸಾ ಆಫೀಸಲ್ಲೊಂದಷ್ಟು ಕೆಲಸ ಇದೆ. ಮುಗಿಸಿ ಬರಣ' ಅಂದ್ರು. ನಾನೂ ಅವರೊಂದಿಗೆ ಆಟೋ ಹತ್ತಿಕೊಂಡೆ.

'ನಿಮ್ಮ ಕಣ್ಣಿಗೆ ಪ್ರಾಣಿ, ಪಕ್ಷಿಗಳು ತುಂಬ ವಿಶೇಷ ಅನ್ನುಸ್ತವೇನೋ ಅಲ್ವಾ  ಸಾರ್? ಅದಕ್ಕೆ ನಿಸರ್ಗಕ್ಕೆ ಹತ್ತಿರವಾದ ಕತೆಗಳನ್ನೆ ಹೆಚ್ಚು ಬರೆದಿದ್ದೀರಿ?' ಅಂದೆ.

'ನಿಮಗೆ ಹಾಗನ್ಸುತ್ತಾ? ಆಶ್ಚರ್ಯ ಕಣ್ರಿ' ಅಂದ್ರು. ಆಶ್ಚರ್ಯ ಪಟ್ಟುಕೊಳ್ಳೊ ಸರದಿ ನನ್ನದಾಗಿತ್ತು ಈಗ.

'ನಾನು ನಿಸರ್ಗವನ್ನೂ ಒಂದು ಪಾತ್ರವಾಗಿಸಿಕೊಳ್ತೀನಿ. ಹಾರೋ ಓತಿ ಹೇಗೆ ಒಂದು ಪಾತ್ರವೋ, ಮಂದಣ್ಣನೂ ಒಂದು ಪಾತ್ರವೆ ಅಲ್ವಾ? ನಿಗೂಢಗಳ ಜೊತೆಗೆ ಗಾನ್ ಕೇಸ್ ಸುರೇಶ - ಗೌರಿಯರು, ಕೆಸರೂರಿನ ಜೊತೆಗೆ ನಮ್ಮ ಕ್ರಾಂತಿಕಾರಿಗಳು, ರಫೀಕ್ - ಜಯಂತಿಯರು, ದೊಡ್ಡ ಆಲದ ಮರದ ಜೊತೆಗೆ ಗಯ್ಯಾಳಿಯರು, ಹೀಗೆ ಸಾಕಷ್ಟು ಸಿಕ್ತವೆ. ಮತ್ತೊಮ್ಮೆ ಗ್ರಹಿಸಿ.' ಅಂದರು. ನಾನು 'ಹೌದು' ಎನ್ನುವಂತೆ ಗೋಣಾಡಿಸಿದೆ.

'ಈ ಕಾಲದಲ್ಲಿ 'ರಫೀಕ್ - ಜಯಂತಿ' ಪ್ರೀತಿಸಿ ಓಡಿ ಹೋಗಿದ್ದರೆ, 'ಲವ್ ಜಿಹಾದ್' ಅಂದು ಬಿಟ್ಟಿರೋರು ಕಣ್ರಿ, ಪಾಪ.' ಅಂತ ಜೋರಾಗಿ ನಕ್ಕರು. ನಾನೂ ನಗುತ್ತಿದ್ದೆ.

ಆಮೇಲೆ ಕೈಯಲ್ಲಿದ್ದ ಯಾವುದೋ ರಿಪೋರ್ಟ್ ನೋಡುತ್ತಾ ಮೌನವಾದರು, ನಾನು ಅವರೇನು ಓದುತ್ತಿದ್ದಾರೋ ತಿಳಿಯದೆ ಅವರನ್ನೆ ನೋಡುತ್ತಾ ಕುಳಿತೆ. ಅಷ್ಟರಲ್ಲಿ ವೀಸಾ ಆಫೀಸ್ ಬಂತು, ಇಳಿದೆವು. ಆಮೇಲೆ ತುಸು ಗಂಭೀರವಾದಂತೆ ಕಂಡ ತೇಜಸ್ವಿ, 'ಸರಿ ಕಣ್ರಿ, ನಾನು ಊರಿಗೆ ಹೋಗ್ಬೇಕು, ಹೊರಡ್ತೀನಿ' ಅಂದ್ರು.


'ಸಾರ್, ವೀಸಾ ಆಫೀಸಲ್ಲಿ ಕೆಲ್ಸ ಅಂದ್ರಲ್ಲಾ' ಅಂದೆ.


'ದಡ್ರು ಕಣ್ರಿ ನಮ್ ಜನ, ಅಲ್ಲಿ ಪಶ್ಚಿಮ ಘಟ್ಟಗಳನ್ನ ಅವೈಜ್ಞಾನಿಕವಾಗಿ ನಾಶ ಮಾಡ್ತಿದ್ದಾರೆ. ನೋಡಿ ಈ ರಿಪೋರ್ಟಲ್ಲೂ ಅದೆ ಇದೆ. ನಾನು ಕೊಡಗು ಮತ್ತು ಕೇರಳಗಳಲ್ಲಿ ಏನಾದ್ರೂ ಮಾಡೋಕಾಗುತ್ತಾ ನೋಡ್ತೀನಿ. ಅಮೇಜಾನಿಗೆ ಇನ್ಯಾವಾಗ ಹೋದ್ರೂ ನಡೆಯುತ್ತೆ.' ಅಂತ ಧೊತ್ತೆಂದು ಎದುರಿಗೆ ತೆರೆದುಕೊಂಡ ದಟ್ಟ ಕಾಡುಗಳಲ್ಲಿ ಕಣ್ಮರೆಯಾಗಿಬಿಟ್ಟರು.


~ ಮಂಜಿನ ಹನಿ


2018 ರಲ್ಲಿ ತೇಜಸ್ವಿಯವರ ಹುಟ್ಟುಹಬ್ಬದ ದಿನ ಬರೆದ ಬರಹ. ಅವರು ನಮ್ಮನ್ನೆಲ್ಲಾ ಕಾಯುತ್ತಾ, ಎಚ್ಚರಿಸುತ್ತಾ ಇರುವ ಪ್ರಜ್ಞೆ.