ಬರೆಯಿರಿ
ಬರೆದಿಡಿ
ನಾನು ಮಿಯಾ,
NRCಯಲ್ಲಿ ನನ್ನ ಕ್ರಮಸಂಖ್ಯೆ 200543
ನನಗಿಬ್ಬರು ಮಕ್ಕಳು,
ಮೂರನೆಯದು ಬರುವುದರಲ್ಲಿದೆ
ಬರುವ ಬೇಸಿಗೆಗೆ,
ನೀವು ಅವನನ್ನೂ ದ್ವೇಷಿಸುವಿರಾ
ನನ್ನನ್ನು ದ್ವೇಷಿಸುವಂತೆ?
ಬರೆಯಿರಿ
ನಾನು ಮಿಯಾ.
ಬರಡು, ಜವುಗು ಭೂಮಿಯನ್ನು
ಉತ್ತು, ಬಿತ್ತೆ, ಭತ್ತ ಬೆಳೆದು
ನಿಮಗೆ ಉಣಲು ಕೊಡಲು,
ಬೆನ್ನ ಮೇಲೆ ಇಟ್ಟಿಗೆ ಹೊತ್ತೆ
ನಿಮ್ಮ ಮಹಲು ಕಟ್ಟಲು,
ನಿಮ್ಮ ಕಾರು ಓಡಿಸಿದೆ
ಏಸಿಯಲ್ಲಿ ನೀವು ಆರಾಮ ವಿಶ್ರಮಿಸಲು,
ನಿಮ್ಮ ಗಟಾರ ಶುಚಿ ಮಾಡಿಕೊಟ್ಟೆ
ನೀವು ಆರೋಗ್ಯದಿಂದಿರಲು.
ನಿಮ್ಮ ಸೇವೆಗೆಂದರೆ
ನಾನು ನಿತ್ಯ ತಯಾರು,
ಆದರೂ
ಎಂಥದೋ ಅತೃಪ್ತಿ ನಿಮಗೆ.
ಬರೆದಿಡಿ
ನಾನು ಮಿಯಾ,
ಜಾತ್ಯಾತೀತ, ಪ್ರಜಾಪ್ರಭುತ್ವ ಗಣರಾಜ್ಯದ
ಹಕ್ಕುಗಳೇ ಇಲ್ಲದ
ನಾಗರೀಕ,
ಅವಳ ತಂದೆ ತಾಯಂದಿರು ಭಾರತೀಯರಾದರೂ
ನನ್ನ ತಾಯಿಯನ್ನು ಡಿ ವೋಟರ್ ಮಾಡಲಾಯಿತು,
ಯಾವ ಶಿಕ್ಷೆಗೊಳಪಡಿಸದೆ
ನಿಮ್ಮಿಚ್ಛೆಗನುಸಾರ ನನ್ನನ್ನು ಕೊಲ್ಲಬಹುದು,
ನನ್ನೂರಿನಿಂದ ನನ್ನ ದೂರ ಎಸೆಯಬಹುದು,
ನನ್ನ ಹಸಿರು ಹೊಲವನ್ನು ಕಸಿಯಬಹುದು,
ನಿಮ್ಮ ರೋಲರನ್ನು ನನ್ನ ಮೇಲೆ
ಉರುಳಿಸಬಹುದು,
ನಿಮ್ಮ ಗುಂಡುಗಳು ನನ್ನ ಎದೆ ಬಗೆಯಬಹುದು.
ಬರೆಯಿರಿ
ನಾನು ಮಿಯಾ
ನೀವು ಕೊಡುವ ಹಿಂಸೆಯನ್ನು ನುಂಗಿ
ಬ್ರಹ್ಮಪುತ್ರೆಯ ಮಡಿಲಲ್ಲಿರುವವ,
ನನ್ನ ಮೈ ನೀಲಿಗಟ್ಟಿ
ಕಣ್ಣು ಬೆಂಕಿಯಿಂದ ಕೆಂಪ್ಪುಗಟ್ಟಿದೆ.
ಆದರೆ ನೆನಪಿನಲ್ಲಿಡಿ,
ನನ್ನ ಬಳಿ ಕೋಪ ಬಿಟ್ಟರೆ ಬೇರ್ಯಾವ ದಾಸ್ತಾನಿಲ್ಲ,
ದೂರವೇ ನಿಲ್ಲಿ!
ಇಲ್ಲವೆ
ಉರಿದು ಬೂದಿಯಾಗಿ.
- ಕಾಜಿ ನೀಲ್
ಅನುವಾದ: ಮಂಜಿನ
ಹನಿ
ಮೂಲದಲ್ಲಿ ಮಿಯಾ ಉಪಭಾಷೆಯಲ್ಲಿ ಕಾಜಿ ಸರೋವರ ಹುಸೇನ್'ನ ಕಾಜಿ ನೀಲ್ ಬರೆದಿರುವ ಉಲ್ಲೇಖವಿದೆ. ಶಾಲೀಮ್ ಎಂ ಹುಸ್ಸೇನ್ ಅವರು ಇಂಗ್ಲೀಷ್’ಗೆ ಭಾಷಾಂತರಿಸಿದ್ದಾರೆ.
ಬೆಂಗಾಳಿ ಮುಸಲ್ಮಾನರನ್ನು ದಶಕಗಳಿಂದಲೂ ಮಿಯಾ ಎಂದು ಹಂಗಿಸಲಾಗುತ್ತದೆ. ಅದನ್ನೇ
ಅಸ್ತ್ರವಾಗಿಸಿಕೊಂಡು ಈ ಕವಿತೆ ಬರೆಯಲಾಗಿದೆ. ಇಂಗ್ಲೀಷ್ ಅನುವಾದವನ್ನು
ಕೆಳಗೆ ಕೊಡಲಾಗಿದೆ.
ಕವನದ ಆಳದಲ್ಲಿ ಅದೆಷ್ಟು ಒಡಲಾಗ್ನಿ ಕಾವುಗಟ್ಟಿದೆ ಎಂಬುದು ಸಾಲು ಸಾಲುಗಳಲ್ಲಿ ಪಕ್ವಗೊಂಡಿದೆ.
ReplyDeleteಸಾರಾಸಗಟಾಗಿ 'ಸ್ಥಿತಿಯನ್ನು' ಹಳದೀ ಕಣ್ಣಿನಿಂದ ನೋಡುವ ಪೊರೆ ಕವಚಿಕೊಂಡ ಮೂಢರ ನಡುವೆ, 'ವಸ್ತು ಸ್ಥಿತಿ' ಜೀರ್ಣವಾಗಬಲ್ಲದೆ?