ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday, 29 October 2012

ರಾಗವಿದೋ ಮೇಲೆದ್ದಿದೆ



ರಾಗವಿದೋ ಮೇಲೆದ್ದಿದೆ,
ಅರಿವಿನಂಚಿನಲಿ ಅಳಿದು ಸೊರಗಿದ್ದ
ರಾಗವೊಂದು ಮತ್ತೆ ಮೇಲೆದ್ದು
ಗಗನವ ಚುಂಬಿಸ ಬಯಸುತಿದೆ!

ಹೂಳು ಹೊದ್ದು ಮಲಗಿದ್ದ
ಹಾಳು ರಾಗವೊಂದು ಮೇಲೆದ್ದಿದೆ!
ಸಾಲುಬಿದ್ದ ಸಾವಿರ ಕಾಲು ಮುರಿದ
ಕನಸುಗಳ ಅಣಕಿಸಿದೆ!
ಏನಿತ್ತು ತಣಿಸಲಿ ಇದನು
ಮೌನಕ್ಕೆ ಶರಣು ನನ್ನೊಳಗಿನ ಆನು!

!!ರಾಗವಿದೋ ಮೇಲೆದ್ದಿದೆ!!

ನಿರಾಸೆಯನ್ನು ಮೀರಿ ನಿಂತ
ಚಿತ್ತಕ್ಕೆ ಹಸಿರನ್ನೇ ಮೆತ್ತುತಿದೆ!
ಹಣೆಯಾ ಬರಹವನ್ನೂ
ಅಲುಗಿಸುತ್ತಿದೆ! ಆಳುತ್ತಿದೆ!
ಸುಪ್ತವಾಗಿದ್ದ ಅತೃಪ್ತರನ್ನು
ಮತ್ತೆ ಕರೆಯುತ್ತಿದೆ!

!!ರಾಗವಿದೋ ಮೇಲೆದ್ದಿದೆ!!

ಹೊಸ ಕನಸುಗಳನ್ನು
ಮೇಲೆಬ್ಬಿಸಿ ನಾನೊಳಗೆ
ತಾನನ್ನು ಬೆರೆಸುತ್ತಿದೆ!

!!ರಾಗವಿದೋ ಮೇಲೆದ್ದಿದೆ!!

- ಪ್ರಸಾದ್.ಡಿ.ವಿ.

Monday, 15 October 2012

ಆವರಿಸೆನ್ನ ಓ ಗುರುವೇ ಅಂತರಾತ್ಮ




ಅರಿವಿನಣುವಣುವನ್ನೂ ಬಿಡದೆ ಆವರಿಸು
ಸಾಕ್ಷಾತ್ಕಾರಕ್ಕೆ ಕಾದಿರುವೆನುದ್ಧರಿಸು
ಓ ಗುರುವೇ ಕರಪಿಡಿದು ನಿಂತಿರುವೆ
ಕೈಹಿಡಿದು ನಡೆಸೆನ್ನ ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

ನಾನು-ನಾನೆಂಬ ನಂದಿಸೆನ್ನನು
ನಂದದಿರುವ ನಿನ್ನನೆನ್ನೊಳುಳಿಸಿನ್ನು
ಓ ಗುರುವೇ ಜಗದರಿವೇ
ಕೃಷ್ಣನೊಲವೇ ನೀ ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

ದೀಪದ ತಳದಂಧಕಾರವಳಿಸುವವನು
ಆತ್ಮನಲ್ಲೇ ಪರಮಾತ್ಮನ ನೆಲೆಗೊಳಿಸುವನು
ಓ ಗುರುವೇ ಶರಣು ನಾನು
ಆತ್ಮನೊಳಗಿನಾತ್ಮ ನೀನು ಅಂತರಾತ್ಮ!

!!ಆವರಿಸೆನ್ನ ಓ ಗುರುವೇ ಅಂತರಾತ್ಮ!!

- ಪ್ರಸಾದ್.ಡಿ.ವಿ.
--------------------------------------------------------------------------------------
ಗುರುವಿನ ಪಾದತಲದಲ್ಲಿ ಮೊದಲ ಕಮಲ

Monday, 8 October 2012

ಹಾಳೆಂಬ ನಾಳೆಯಲಿ ನಾನಿಲ್ಲ




ಮನಸ್ಸಿನಿಂದ ಭಾವಗಳು ತೊಟ್ಟಿಕ್ಕುವಾಗ ಹೃದಯ ಮೌನವಾಗಿ ಮಾತನಾಡುತ್ತದೆ. ಕೇಳಲು ಕಿವಿಯಿದ್ದರೂ ಮನಸ್ಸು ಅಂತರಂಗದ ಕಿವಿಯನ್ನೇ ಬಯಸುತ್ತದೆ. ಏನಿದು ಶೀರ್ಷಿಕೆಗೂ ಮಾತಿಗೂ ಹೊಂದಿಕೆಯೇ ಇಲ್ಲ, ಸುಮ್ಮನೆ ಬಡ ಬಡಿಸುತ್ತಿದ್ದಾನಲ್ಲ ಎಂದುಕೊಳ್ಳಬೇಡಿ. ವಿಷಯಕ್ಕೆ ಬರುತ್ತೇನೆ ಒಮ್ಮೊಮ್ಮೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದೂ ಚೆನ್ನವೇ!

ನನಗೆ ಗೊತ್ತು ಶೀರ್ಷಿಕೆ ನಿಮ್ಮಲ್ಲಿ ಅನುಮಾನಗಳನ್ನು, ಅಸಹನೆಯನ್ನು ಬಿತ್ತಬಹುದು. ಕನಸ್ಸುಗಳಲ್ಲೇ ಜೀವಿಸುವ ನಮಗೆ ಜೀವನವೆಂಬುದು ನಾಳೆಗಳಲ್ಲೇ ಎಂಬುದನ್ನು ಬಲ್ಲೆ, ಅದು ಸಹಜವೂ ಹೌದು. ಮೊನ್ನೆ ಹೀಗೆ ಉದಯವಾಣಿಯಲ್ಲಿ ಒಂದು ಲೇಖನ ಓದುತ್ತಿದ್ದೆ. 'ನಾಳೆಯಲ್ಲಿ ನಾನಿಲ್ಲ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ಲೇಖನ ಅದು. ಶೀರ್ಷಿಕೆಯೇ ನನ್ನಲ್ಲಿ ಕುತೂಹಲ ಹುಟ್ಟಿಸಿತು. ಒಬ್ಬ ವಿದವೆಯಾದ ಹೆಣ್ಣು ಮಗಳೊಬ್ಬಳ ಕರುಣಾಜನಕ ಮಿಂಚಂಚೆಯ ಮೇಲೆ ಕೇಂದ್ರಿತವಾಗಿತ್ತು. ಲೇಖಕರು, ವಯಸ್ಸು ಎಷ್ಟೇ ಚಿಕ್ಕದಿದ್ದರು ಆಸ್ತಿಗಳ ಗಳಿಕೆಯ ನಂತರ ಉಯಿಲು ಬರೆದಿಡಬೇಕಾದ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಿದ್ದರು. ಆ ಪ್ರಕಾರ ತಮ್ಮ ಮೇಲಿನವರ ಪ್ರೀತಿಯನ್ನು ಸಾವಿನ ನಂತರವೂ ವಿಸ್ತರಿಸಿದಂತಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಆ ಲೇಖನ ನನ್ನ ದೃಷ್ಟಿಕೋನಕ್ಕೆ ಸಿಕ್ಕಿ ಬೇರೆಯದೇ ಯೋಚನೆಗಳನ್ನು ಬಿತ್ತಿತು. ಆ ಭಾವಗಳನ್ನು ನನ್ನ ಹುಡಿ ಚೆಲ್ಲಿ ನಿಮ್ಮಲ್ಲಿ ಈಗ ಹರಹುತ್ತಿದ್ದೇನೆ.

ಜೀವನ ನೀರ ಮೇಲಿನ ಗುಳ್ಳೆ ಎಂಬ ದಾಸ ಶ್ರೇಷ್ಟರ ವಚನ ಕೇಳಿದ್ದರು ಮನುಷ್ಯ ಅದನ್ನು ಒಪ್ಪಿಕೊಳ್ಳಲೊಲ್ಲ. ನಾವು ಎಷ್ಟೇ ಚಿಕ್ಕ ವಯಸ್ಸಿನವರಾಗಿದ್ದರು ಸಾವು ಕ್ಷಣಗಳಲ್ಲಿ ಬಂದೆರಗಬಹುದು. ಅದಕ್ಕೆ ಹಲವಾರು ಕಾರಣಗಳಿರಬಹುದು. ಅಪಘಾತ, ಆಹಾರದಲ್ಲಿನ ಅಪೌಷ್ಟಿಕತೆ, ಮಾರಣಾಂತಿಕ ರೋಗಗಳು, ಸಣ್ಣ ವಿಷಯಕ್ಕೂ ಬದುಕಿನಿಂದ ವಿಮುಖರಾಗುವ ಮನಸ್ಥಿತಿ, ಹೀಗೆ ನೂರೆಂಟು ಕಾರಣಗಳು. ಇಷ್ಟೆಲ್ಲಾ ಇದ್ದಾಗ್ಯೂ ನಾವು ಬದುಕುವುದನ್ನು ಮುಂದೂಡುತ್ತೇವೆ. ವಾರಾಂತ್ಯಕ್ಕೆ ಹೆಂಡತಿ-ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಾತು ಕೊಟ್ಟು ಮುಂದಿನ ವಾರಕ್ಕೆ ಹೋದರಾಯ್ತು ಎಂದು ಮುಂದೂಡುತ್ತೇವೆ. ದಿನವೂ ವ್ಯಾಯಾಮ ಮಾಡಬೇಕು ಎಂದು ಪಣ ತೊಟ್ಟು ನಾಳೆ ಎಂಬ ಹಣೆ ಪಟ್ಟಿ ನೀಡಿ ಮುಂದೂಡುತ್ತೇವೆ. ಸ್ನೇಹಿತರೊಂದಿಗೆ ಒಂದು ಸುಂದರ ಭೇಟಿ ಎಂದು ಆಯೋಜಿಸಿ ನಂತರ ಯಾವುದಾದರು ನೆಪ ಹೂಡಿ ಭೇಟಿಯನ್ನು ಮುಂದೂಡುತ್ತೇವೆ. ಹೀಗೆ ನೋಡುತ್ತಾ ಹೋದರೆ ಬದುಕಿದ ಜೀವನಕ್ಕಿಂತ ಮುಂದೂಡಿದ ಜೀವನವೇ ಲಂಬವಾಗಿರುತ್ತದೆ.

ಹೀಗೆ ಎಲ್ಲವನ್ನೂ ನಾಳೆಗಳಿಗೆ ಕಾಯ್ದಿರಿಸುವ ನಮ್ಮ ಪ್ರೌವೃತ್ತಿ ಕಾಯ್ದಿರಿಸಿದ ಬದುಕನ್ನು ಬದುಕುವ ಮುಂಚೆಯೇ ನಮ್ಮನ್ನು ಜೀವನದಂಚಿಗೆ ತಂದು ನಿಲ್ಲಿಸುವುದು ದುರಂತ. ಹುಡುಕುತ್ತಾ ನಿಂತರೆ ಜೀವನಕ್ಕೆ ಅರ್ಥವೇ ಇಲ್ಲದಷ್ಟು ಸಣ್ಣದಾಗಿ ಜೀವನವನ್ನು ಬದುಕಿರುತ್ತೇವೆ. ಅಪ್ಪ-ಅಮ್ಮನ ಮಮತೆ ಕೊಡದ ಹಣಕ್ಕಾಗಿ ಕಾಲು ಭಾಗದಷ್ಟು ಜೀವನವನ್ನು ಸವೆಸಿರುತ್ತೇವೆ. ಸಂಗಾತಿಯ ಸಾಂಗತ್ಯ ಕೊಡದ ಕಾರು-ಬಂಗಲೆಯ ಕನಸಲ್ಲಿ ಇನ್ನು ಕಾಲು ಭಾಗದ ಬದುಕು. ಮಕ್ಕಳೊಂದಿಗಿನ ಆಪ್ಯಾಯಮಾನತೆ ಮತ್ತು ಸಂತೋಷ ಕೊಡದ ಕೆಲಸದ ಒತ್ತಡದಲ್ಲಿ ಮತ್ತೂ ಕಾಲು ಭಾಗದ ಬದುಕು. ಸ್ನೇಹದ ಆತ್ಮೀಯತೆ ಕೊಡದ ಅಹಂ ಒಳಗಿನ ಗರ್ವದ ಕೋಟೆಯೊಳಗೆ ಉಳಿದ ಕಾಲು ಭಾಗದ ಬದುಕು. ಹೀಗೆ ಹುಡುಕುತ್ತಾ ಹೋದರೆ ನಾವು ಬದುಕಿದ್ದೆವು ಎಂಬುದೇ ನಮಗೆ ಮರೆತು ಹೋಗುತ್ತದೆ. ನಾವು ನಮಗಾಗಿ, ನಮ್ಮ ಸಂತೋಷಕ್ಕಾಗಿ ಬದುಕಲೇ ಇಲ್ಲವೇ ಎನಿಸಿಬಿಡುತ್ತದೆ.

ಸಂತೋಷವೆಂಬುದು ಒಂದು ಬ್ಯಾಂಕ್ ಖಾತೆ ಇದ್ದ ಹಾಗೆ. ನಾವು ನಾವಾಗಿ ಬದುಕುತ್ತಾ ಹೋದಂತೆ ಸಂತೋಷ ತಾನೇ ತಾನಾಗಿ ಜಮ ಆಗುತ್ತಾ ಹೋಗುತ್ತದೆ. ಹಾಗೆ ಪಡೆದ ಸಂತೋಷವನ್ನು ಪ್ರತಿಯೊಬ್ಬರಿಗೂ ಹಂಚುವುದರಲ್ಲೇ ಜೀವನದ ನಿಜವಾದ ಸಾರ್ಥಕ್ಯ. ಜೀವನ ಪ್ರೀತಿ ನಮ್ಮಲ್ಲಿ ಎಷ್ಟಿರಬೇಕೆಂದರೆ ಸಾವು ಇಂದೇ ನಮ್ಮ ಮುಂದೆ ಬಂದು ಕರೆದರೂ 'ನನ್ನ ಜೀವನವನ್ನು ನಾನು ಸಂತೃಪ್ತಿಯಿಂದ ಬದುಕಿದ್ದೇನೆ, ನಿನ್ನ ಕರ್ತವ್ಯವನ್ನು ನೀನು ಮಾಡಬಹುದು' ಎಂಬಂತೆ ಸ್ವಾಗತಿಸಬೇಕು. ನಮ್ಮ ಜೀವನದ ಬಗ್ಗೆ ಕಿಂಚಿತ್ತು ವಿಷಾದವೂ ಇರದಂತೆ. ಅದು ನಿಜವಾದ ಮಾನವನ ಅಂತಸ್ತು.

ಒಮ್ಮೆ ಅಪ್ಪ-ಅಮ್ಮನ ದಿನ ನಿತ್ಯದ ಆರೋಗ್ಯದ ಬಗ್ಗೆ ಗಮನ ಹರಿಸಿ. ಪ್ರಿಯ ಮಡದಿಗೆ ಮೊಲ್ಲೆ ಮುಡಿಸಿ ನಿಮ್ಮ ಪ್ರೇಮವನ್ನು ನಿವೇಧಿಸಿ. ಮಕ್ಕಳ ಆಟ-ಪಾಠಗಳಲ್ಲಿ ಒಮ್ಮೆ ಸಹಕರಿಸಿ. ಸ್ನೇಹಿತರೊಂದಿಗೆ ಒಂದಷ್ಟು ಹಿತಕರ ಕ್ಷಣಗಳನ್ನು ಕಳೆಯಿರಿ. ಅವುಗಳಲ್ಲಿ ಸಿಗುವ ಸಂತೋಷ ಕೋಟಿ ಹಣ ಕೊಟ್ಟರು ಸಿಗದಂತಹದ್ದು. ಜೀವನ ಎಂಬುದೊಂದು ಕಲೆ. ಅದನ್ನು ಅಷ್ಟೇ ಕಲಾತ್ಮಕವಾಗಿ ಬದುಕಬೇಕು. ನಾಳೆ ಎಂಬುದೇ ಇಲ್ಲದಂತೆ, ಇಂದು ಎಂದಿಗೂ ಮುಗಿಯದಂತೆ. 'ನಾಳೆ ಮಾಡುವುದನ್ನು ಇಂದೇ ಮಾಡು. ಇಂದು ಮಾಡುವುದನ್ನು ಈಗಲೇ ಮಾಡು, ನಾಳೆ ಎಂಬುದು ಹಾಳು' ಎಂಬ ನಾಣ್ನುಡಿಯಂತೆ 'ಹಾಳೆಂಬ ನಾಳೆಯಲಿ ನಾನಿಲ್ಲ' ಎಂಬ ವಾಸ್ತವದಲ್ಲಿ, 'ಹಾಲೆಂಬ ಇಂದಿನಲ್ಲೇ' ಜೇನನ್ನು ಬೆರೆಸಿ ಜೀವನವನ್ನು ಹಾಲು-ಜೇನಾಗಿಸಿ ಬದುಕಬೇಕು ಕಾಲನೂ ಕರುಬುವಂತೆ.

- ಪ್ರಸಾದ್.ಡಿ.ವಿ.

Friday, 28 September 2012

ನನ್ನ ಮುದ್ದು




ಮುದ್ದು ಮುದ್ದಾದ ಮನಸ್ಸಿಗೆ,
ಪೆದ್ದು ಪೆದ್ದಾಗಿ ಕೇಳಿದ್ದೆ,
ಹಕ್ಕಿಗಳಾಗುವ ಬಾರೆ,
ಬಾನೆತ್ತರಕ್ಕೆ ಹಾರಿ ಪುರ್ರೆಂದು..
ಚುಕ್ಕಿ ಚಂದ್ರಮರಂಕಿತವ ತರುವ
ನಮ್ಮ ಪ್ರೀತಿಗೆ..!
ಒಂದು ತುದಿಯಲ್ಲಿ ನೀನು,
ಇನ್ನೊಂದರಲ್ಲಿ ನಾನು..!

ನನ್ನವಳು ಜಾಣೆ,
ಕೇಳಬೇಕವಳ ಉತ್ತರವ ನೀವು,
ಹಕ್ಕಿಗಳಾಗುವ ನಲ್ಲ,
ಅಡ್ಡಿಯಿಲ್ಲ, ಕೈಯಲ್ಲಿ ಕೈ ಹಿಡಿದು,
ನೀ ಜೊತೆಗಿದ್ದರೆ ಸಾಕು,
ನನಗೆ ಬೇರೇನು ಬೇಕು?
ಚುಕ್ಕಿ ಚಂದ್ರಮನಲ್ಲೇ
ಮನೆ ಮಾಡಿ ನೆಲೆಯಾಗಬೇಕು..!

ಅವಳೋ ಮುದ್ದು ಮುದ್ದು,
ನಾನೋ ಪೆದ್ದು ಪೆದ್ದು,
ಉಕ್ಕುತ್ತಿದ್ದ ಪ್ರೀತಿಗೆ
ಅವಳ ಗಲ್ಲ ಹಿಡಿದೆತ್ತಿ
ಹೂ ಮುತ್ತು ನೀಡಿದ್ದು ಬಿಟ್ಟರೆ
ಇನ್ನೇನೂ ಮಾಡಿಲ್ಲ ನಾನು..!
ನಾನೋ ಪೆದ್ದು ಪೆದ್ದು,
ಅವಳೋ ನನ್ನ ಮುದ್ದು..!

- ಪ್ರಸಾದ್.ಡಿ.ವಿ.

Wednesday, 15 August 2012

ಮೇರಾ ಭಾರತ್ ಮಹಾನ್




ಫೆಬ್ರವರಿ ೨೬, ೧೯೯೯ರ ಶುಕ್ರವಾರ ಸಂಜೆ ಐದು ಗಂಟೆ.

ಎಂದಿನಂತೆ ಯಾವುದೇ ಸಂಭ್ರಮಗಳಿಲ್ಲದೆ ಜಮ್ಮುವಿನ ಗಡಿಗಳಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆವು. ಹೆಚ್ಚಿನ ಚಟುವಟಿಕೆಗಳಿಲ್ಲದೆ ಇದೂ ಕೂಡ ಒಂದು ಸಾಮಾನ್ಯ ದಿನವಾಗಿತ್ತು. ಮನಸ್ಸು ಮಾತ್ರ ಹಿಂದಿನ ದಿನಗಳೆಡೆಗೆ ಓಡುತ್ತಿತ್ತು. ಮನೆ, ಅಪ್ಪ-ಅಮ್ಮ, ಹೆಂಡತಿ, ಮಗ ಭಗತ್ ಹೀಗೆ ಎಲ್ಲವೂ ನೆನಪಾಗುತ್ತಿದ್ದವು. ದೇಶದ ಹೆಮ್ಮೆಯ ಪುತ್ರ ಭಗತ್ ಸಿಂಗ್ ನ ಮೇಲಿನ ಗೌರವದಿಂದ ನನ್ನ ಮಗನಿಗೆ ಭಗತ್ ಎಂದೇ ಹೆಸರಿಟ್ಟಿದ್ದೆ. ಹೀಗೆ ಹಳೆಯ ನೆನಪುಗಳ ಹಿಂದೆ ಮನಸ್ಸು ಓಡುತ್ತಿತ್ತು. ಇದು ನನ್ನಂತಹ ಸೈನಿಕರ ದೈನಂದಿನ ದಿನಚರಿಯಾಗಿತ್ತು. ಸಮಯ ಸಿಕ್ಕಾಗ ಮನೆಯವರೊಂದಿಗೆ ದೂರವಾಣಿಯ ಮೂಲಕ ಒಂದಷ್ಟು ಮಾತು ಮತ್ತು ಪತ್ರಗಳೇ ನಮ್ಮ ಆಮ್ಲಜನಕಗಳು. ಅವುಗಳನ್ನು ಉಸಿರಾಡುತ್ತ ದೇಶವನ್ನು ಕಾಯುವ ಜವಾಬ್ದಾರಿ ನಿಭಾಯಿಸುತ್ತೇವೆ ಎಂಬುದನ್ನು ನೆನಪಿಸಿಕೊಂಡಾಗ ಯೋಧರ ಬಗ್ಗೆ ಹೆಮ್ಮೆ ಎನಿಸುತ್ತದೆ. ಹೀಗೆ ನೆನಪಿನ ಬುತ್ತಿ ಬಿಚ್ಚುತ್ತಿದ್ದ ನನ್ನನ್ನು ಎಚ್ಚರಿಸಿದ್ದು ವಿಕಾಸ್ ಗುಪ್ತನ "ಅಚ್ಚಪ್ಪ ಯು ಹ್ಯಾವ್ ಅ ಕಾಲ್ ಫ್ರಂ ಯುವರ್ ಹೋಂ ಮ್ಯಾನ್" ಎಂಬ ಮಾತುಗಳು. ಮನೆಯಿಂದ ದೂರವಾಣಿ ಕರೆ ಎಂದು ಆನಂದ ಸಂತುಲಿತನಾದ ನಾನು ಓಡಿ ಹೋಗಿ ಫೋನ್ ರಿಸೀವರ್ ಎತ್ತಿಕೊಂಡೆ.

"ಹಲೋ ಕಾವೇರಿ, ನಾನು ಕಣೇ.." ಎಂದೆ. ಕಾವೇರಿ ನನ್ನ ಮಡದಿ.
"....." ಆ ಕಡೆಯಿಂದ ಹತ್ತು ಸೆಕೆಂಡ್ ಗಳವರೆಗೆ ನೀರವ ಮೌನ.
"ಮಾತಾಡು ಕಾವೇರಿ...ಅಪ್ಪ-ಅಮ್ಮ ಹೇಗಿದ್ದಾರೆ? ಭಗತ್ ನನ್ನು ನೋಡಬೇಕೆನಿಸುತ್ತಿದೆ..".
"........" ಆ ಕಡೆಯಿಂದ ಸಣ್ಣದಾಗಿ ಅಳುವಿನ ಶಬ್ಧ ಕೇಳಿಸಿತು.
"ನೀನೂ ನೆನಪಾಗ್ತಿದ್ದೀಯೇ ಮಾರಾಯ್ತಿ...ಅಳಬೇಡ!"
"ರೀ...ರೀ... ನಮ್ಮ ಭಗತ್" ಎಂದು ಹೇಳಿ ಬಿಕ್ಕಲು ಶುರು ಮಾಡಿದಳು.
"ಏನಾಯ್ತು ಭಗತ್ ಗೆ... ಸರಿಯಾಗಿ ಹೇಳು?" ಎಂದೆ.
"ಭಗತ್ ರಸ್ತೆ ದಾಟುವಾಗ ಒಂದು ಟ್ರಕ್ ಬಂದು...ಆ ಅಪಘಾತದಲ್ಲಿ ಭಗತ್ ಗೆ..." ಎಂದ ಅವಳ ಅಳು ಇನ್ನೂ ಜೋರಾಯಿತು.
"ಭಗತ್ ಗೆ...ಭಗತ್ ಗೆ... ಏನಾಯ್ತಮ್ಮ ಹೇಳು?" ಎಂದೆ.
"ನಮ್ಮ ಭಗತ್ ಇನ್ನಿಲ್ಲಾರೀ..." ಎಂದು ಹೇಳಿ ಕುಸಿದು ಕುಳಿತಳು.
ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ನನ್ನಲ್ಲೂ ದುಃಖ ಮಡುಗಟ್ಟುತ್ತಿತ್ತು. ಆದರೂ ನನ್ನ ದುಃಖವನ್ನು ಅದುಮಿಟ್ಟುಕೊಳ್ಳುತ್ತ,
"ನಾನು ಬರ್ತಿದ್ದೇನೆ ಕಣೋ... ಧೈರ್ಯಗೆಡಬೇಡ. ಕೊಡಗಿನ ವೀರ ಸೈನಿಕ, ಕ್ಯಾಪ್ಟನ್ ಅಚ್ಚಪ್ಪನ ಹೆಂಡತಿ ನೀನು ಮರೆಯಬೇಡ" ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದೆ.
ಫೋನ್ ರಿಸೀವರ್ ಕೆಳಗಿಟ್ಟವನೆ ನಿರ್ಲಿಪ್ತನಾದೆ. ಆದರೆ ಎದೆಯಲ್ಲಿ ಹೆಪ್ಪುಗಟ್ಟುತ್ತಿದ್ದ ದುಃಖದ ಕಟ್ಟೆ ಒಡೆಯಲಾರದೆ ಒಳಗೊಳಗೆ ಕುಸಿಯುತ್ತಿದ್ದೆ.
ನನ್ನ ಪ್ರಜ್ಞೆ ನನ್ನ ಜವಾಬ್ದಾರಿಗಳ ಅರಿವನ್ನು ಕಣ್ಮುಂದೆ ತಂದಿತು. ತಕ್ಷಣವೇ ಅಲ್ಲಿಯ ಸಿಬ್ಬಂದಿಗೆ ವಿಷಯ ಮುಟ್ಟಿಸಿ, ಲಗ್ಗೇಜ್ ಸಿದ್ಧಪಡಿಸಿಕೊಂಡು ಹೊರಟೆ.

ಜಮ್ಮುವಿನಿಂದ ಶ್ರೀನಗರ ವಿಮಾನ ನಿಲ್ದಾಣ ಸುಮಾರು ಐದು ಗಂಟೆಯ ಪ್ರಯಾಣ. ನನ್ನ ಜೀವನದಲ್ಲೇ ದುರ್ಗಮವೆನಿಸಿದ ಪ್ರಯಾಣ ಅದು. ಮುಖದ ಮೇಲೆ ಯಾವುದೇ ಭಾವನೆಗಳನ್ನು ತೋರಗೊಡದೆ ಕುಳಿತಿದ್ದ ನನ್ನನ್ನು ಟ್ಯಾಕ್ಸಿ ಡ್ರೈವರ್ ತಿರುಗಿ ತಿರುಗಿ ನೋಡುತ್ತಿದ್ದ. ನಾನವನ ಕಣ್ಣಿಗೆ ಯಾವುದೋ ಅನ್ಯ ಗ್ರಹ ಜೀವಿಯಂತೆ ಕಂಡಿರಬೇಕು. ಕಾರು ವಿಮಾನ ನಿಲ್ದಾಣದೆಡೆಗೆ ಚಲಿಸುತ್ತಿದ್ದಂತೆ ಬೆಟ್ಟಗಳು, ಗುಡ್ಡಗಳು, ಕಟ್ಟಡಗಳು ಮತ್ತು ಮರಗಳು ಹಿಂದಿಂದೆ ಓಡುತ್ತಿದ್ದವು. ಅದರಂತೆ ನನ್ನ ಮನಸ್ಸೂ ಹಿಂದಿಂದೆ ಓಡುತ್ತಿತ್ತು.

ಇಂದಿಗೆ ನಾಲ್ಕು ವರ್ಷಗಳ ಹಿಂದಷ್ಟೆ ಹುಟ್ಟಿದ್ದ ಮಗ. ಅವನು ಹುಟ್ಟಿದ ಹೊಸತರಲ್ಲಿ ಅವನನ್ನು ಎತ್ತಿಕೊಳ್ಳಲೂ ನನಗೇನೋ ಪುಳಕ ಮತ್ತು ಭಯ. ಆ ಎಳೆಯ ಕಂದನ ಹಸಿ ಮೈಯ್ಯ ಬಿಸಿ ಸ್ಪರ್ಷ ನನ್ನಲ್ಲಿ ನನ್ನದೇ ಚೈತನ್ಯ ಪ್ರವಹಿಸುವಂತೆ ಮಾಡುತ್ತಿತ್ತು. ನನ್ನ ಕೈಯನ್ನೆತ್ತಿ ಮೂಸಿದೆ, ಅವನ ಹಾಲು ಕುಡಿದ ತುಟಿಯೊರಸಿದ ವಾಸನೆ ಮೂಗಿಗೆ ಬಡಿದಂತೆ ಭಾಸವಾಯ್ತು. ಹಾಗೆ ಹುಟ್ಟಿ ಬೆಳೆಯುತ್ತಿದ್ದುದನ್ನು ನನ್ನ ಹೆಂಡತಿ ನನಗೆ ವರದಿ ಒಪ್ಪಿಸುವಾಗ ಅವಳ ಸಂಭ್ರಮ ವರ್ಣಿಸಲಸದಳ. ಅವನು ಮೊದಲ ಬಾರಿಗೆ ಅಪ್ಪ ಎಂದದ್ದನ್ನು ಸಾವಿರ ಸಲ ಹೇಳಿ ಖುಷಿಪಟ್ಟಿದ್ದಳು. ರಿಸೀವರ್ ಕೊಟ್ಟು ನನಗೂ ಕೇಳಿಸಿದ್ದಳು. ನಾನು ಕಡೆಯ ಬಾರಿ ಊರಿಗೆ ಹೋಗಿದ್ದಾಗ "ನಾನು ನನ್ನಪ್ಪನಂತೆ ಸೈನ್ಯ ಸೇರಿ ಎಲ್ಲಾ ಶತ್ರುಗಳನ್ನು ಶೂಟ್ ಮಾಡುತ್ತೇನೆ" ಎಂದು ಹೇಳಿದ್ದನ್ನು ಕಂಡು ನನ್ನ ಎದೆ ಹೆಮ್ಮೆಯಿಂದ ಉಬ್ಬಿ ಹೋಗಿತ್ತು.

ಫೆಬ್ರವರಿ ೨೬, ೧೯೯೯ರ ಶುಕ್ರವಾರ ರಾತ್ರಿ ಹತ್ತು ಗಂಟೆ.

ನೆನಪುಗಳಲ್ಲಿ ಕಳೆದು ಹೋಗಿದ್ದ ನನ್ನನ್ನು ಡ್ರೈವರ್,
"ಸಾಬ್ ಆಪ್ಕಾ ಏರ್ ಪೋರ್ಟ್ ಆಗಯಾ.." ಎಂದು ಎಚ್ಚರಿಸಿದ್ದ.
ನನ್ನ ಲಗ್ಗೇಜ್ ಎತ್ತಿಕೊಂಡವನೆ ಅವನಿಗೆ ಹಣ ಪಾವತಿ ಮಾಡಿ ಕೆಳಗಿಳಿದು ಹೊರಟೆ. ನನ್ನ ಅದೃಷ್ಟವೋ ಎಂಬಂತೆ ಒಂದು ಗಂಟೆಯ ಕಾಯುವಿಕೆಯ ನಂತರ ವಿಮಾನ ಹಿಡಿದು ಕಾಶ್ಮೀರದಿಂದ ಹೊರಟೆ. ನನ್ನ ನೆನಪುಗಳೊಂದಿಗೆ ಶತಪತ ಹಾಕುತ್ತಿದ್ದ ನನಗೆ ಮೂರು ಗಂಟೆಗಳ ಹಾದಿ ನೂರು ಗಂಟೆಗಳಂತೆ ಭಾಸವಾಗುತ್ತಿತ್ತು. ಹಾಗೋ ಹೀಗೋ ಹವಾ ನಿಯಂತ್ರಿತ ವಿಮಾನದಲ್ಲಿಯ ಪ್ರಯಾಣ ಕ್ರಮಿಸಿ ನಿಸ್ತೇಜನಾಗಿ ಮಂಗಳೂರು ಫ್ಲೈಟ್ ಗಾಗಿ ಕಾದು ಕುಳಿತೆ. ಬೆಳಗ್ಗಿನ ನಾಲ್ಕರ ಹೊತ್ತಿಗೆ ಮಂಗಳೂರು ವಿಮಾನ ಹಿಡಿದು ಹೊರಟೆ. ಅಲ್ಲಿ ವಿಮಾನ ಇಳಿದು ವಿರಾಜಪೇಟೆಯ ದಾರಿ ಹಿಡಿಯುವುದರೊಳಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದು ಹೋಗಿದ್ದೆ. ಟ್ಯಾಕ್ಸಿಯಲ್ಲಿ ಕುಳಿತವನನ್ನು ನಿಧಾನವಾಗಿ ನಿದ್ರಾದೇವಿ ಆವರಿಸಿದಳು.

೨೭ ಫೆಬ್ರವರಿ, ೧೯೯೯ರ ಶನಿವಾರ ಬೆಳಗ್ಗೆ  ಎಂಟು ಗಂಟೆ.

ಕಣ್ಣು ಬಿಟ್ಟಾಗ ನಾನು ನನ್ನ ಮನೆ ಮುಂದೆ ಇದ್ದೆ. ನಿರ್ಲಿಪ್ತ ಭಾವ ಹೊತ್ತು ಜನಸಂದಣಿಯನ್ನು ದಾಟಿ ಮುಂದೆ ಹೋದೆ. ನನ್ನ ನಿಸ್ತೇಜವಾದ ಕಣ್ಣುಗಳ ನೋಟ ನಿಶ್ಚಲವಾಗಿ ಮಲಗಿದ್ದ ನನ್ನ ಮಗನ ದೇಹದ ಮೇಲೆ ಬಿತ್ತು. ಕಾವೇರಿ ಓಡಿ ಬಂದು ನನ್ನನ್ನು ತಬ್ಬಿಕೊಂಡಳು.

"ರೀ ನಮ್ಮ ಮಗ...ನಮ್ಮ ಮಗ..." ಎಂದು ಒಂದೇ ಸಮನೆ ಅಳಲು ಶುರು ಮಾಡಿದಳು.

ಅಲ್ಲಿಯವರೆಗೂ ಉದುಗಿದ್ದ ದುಃಖ ಒಮ್ಮೆಲೆ ಒದ್ದುಕೊಂಡು ಮೇಲೆ ಬಂದಂತಾಯ್ತು. ನನಗೇ ಅರಿವಿಲ್ಲದೆ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಹೆಬ್ಬಂಡೆಯೂ ಕರಗಿ ನೀರಾಗುತ್ತಿತ್ತು. ಪರಿಸ್ಥಿತಿಯ ಅರಿವಾದೊಡನೆ ನನ್ನ ಭಾವೋದ್ವೇಗಕ್ಕೆ ಕಡಿವಾಣ ಹಾಕಲು ಹರಸಾಹಸ ಮಾಡುತ್ತಿದ್ದೆ. ಹಾಗೇ ನನ್ನ ದುಃಖವನ್ನು ಮನದಲ್ಲೇ ಹಿಂಗಿಸಿ ಕಣ್ಣೊರೆಸಿಕೊಂಡೆ.

"ಕಾವೇರಿ ಹೀಗೆಲ್ಲ ಅಳಬಾರದು. ನೀನು ಸೈನಿಕನ ಹೆಂಡತಿ. ಮುಂದೆ ನಾನೇ ಯುದ್ಧದಲ್ಲಿ ಸತ್ತರೂ ನೀನು ದುಃಖವನ್ನು ತಡೆದುಕೊಳ್ಳುವ ಹೆಬ್ಬಂಡೆಯಾಗಬೇಕು... ಬಲಿದಾನ ನಿನ್ನ ಮೈಗೂಡಬೇಕು" ಎಂದು ಸಂತೈಸಲು ಪ್ರಯತ್ನಿಸಿದೆ.

ನಂತರದ ಶವಸಂಸ್ಕಾರದ ಕಾರ್ಯಗಳೆಲ್ಲ ಅಡೆತಡೆಗಳಿಲ್ಲದೆ ಸಾಗಿದವು. ಮೊಮ್ಮಗನನ್ನು ಕಳೆದುಕೊಂಡ ನನ್ನಪ್ಪ-ಅಮ್ಮನನ್ನು ಎದುರಿಸಲೂ ನನಗೆ ಭಯವಾಗುತ್ತಿತ್ತು. ಅಂದು ಸಂಜೆಯೊಳಗೆ ಮಗನನ್ನು ಮಣ್ಣು ಮಾಡಿ ಮನೆಯ ಮುಂದೆ ದೀಪ ಹಚ್ಚಿಟ್ಟೆವು. ಅತ್ತು ಅತ್ತು ನಿತ್ರಾಣಗೊಂಡಿದ್ದ ಕಾವೇರಿಯ ಮುಖ ನೋಡುವಾಗಲಂತೂ ಕರಳು ಕಿವುಚಿದಂತಾಗುತ್ತಿತ್ತು. ಹೇಗೆ ಎಲ್ಲವನ್ನು ನಿಭಾಯಿಸುವುದು ಎಂಬುದೆ ದೊಡ್ಡ ತಲೆ ನೋವಾಗಿತ್ತು ನನಗೆ.

೦೪ ಮಾರ್ಚ್೧೯೯೯ರ ಗುರುವಾರ, ಸಂಜೆ ಆರು ಗಂಟೆ.

ಮನೆಯ ಕುಡಿಯನ್ನು ಕಳೆದುಕೊಂಡು ನರಳುತ್ತಿದ್ದ ಮನೆಯವರನ್ನು ದಿನವೂ ನೋಡುತ್ತ ಮನದಲ್ಲೇ ಬೇಯುತ್ತಿದ್ದೆ. ಹೀಗೆ ನನ್ನ ಚಿಂತೆಯಲ್ಲಿ, ನನ್ನ ಕುಟುಂಬವನ್ನು ಸಂತೈಸುತ್ತ ಒಬ್ಬ ಉತ್ತಮ ಗಂಡನ ಮತ್ತು ಅಪ್ಪನ ಜವಾಬ್ಧಾರಿಯನ್ನು ನಿಭಾಯಿಸುತ್ತಿದ್ದೆ.
ಹೀಗೆ ಇದ್ದಕ್ಕಿದ್ದಂತೆ ಮನೆಯ ಟೆಲಿಫೋನ್ ಹೊಡೆದುಕೊಳ್ಳಲು ಶುರುವಾಯ್ತು. ಕರೆಯನ್ನು ಸ್ವೀಕರಿಸಿ ರಿಸೀವರ್ ಅನ್ನು ಕಿವಿಯ ಮೇಲಿಟ್ಟೆ.

"ಹಲೋ ಮಿ.ಕ್ಯಾಪ್ಟನ್, ಕರ್ನಲ್ ಜಗನ್ನಾಥ್ ಸ್ಪೀಕಿಂಗ್" ಎಂಬ ಗಡುಸಾದ ಧ್ವನಿ ಮಾರ್ಧನಿಸಿತು.
"ಹಲೋ ಕರ್ನಲ್, ಹೇಳಿ..." ಎಂದೆ.
"ನಾಚಿಕೆಗೆಟ್ಟ ಪಾಕಿಗಳು ಕಾರ್ಗಿಲ್ ಅನ್ನು ಗುರಿಯಾಗಿಸಿಕೊಂಡು ಧಾಳಿ ನೆಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮಂತಹ ದಕ್ಷರ ಸೇವೆ ದೇಶಕ್ಕೆ ಅಗತ್ಯ. ನೀವು ಕಾಮ್ಯಾಂಡೋ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಬೇಕೆಂದು ಕೋರುತ್ತೇನೆ" ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
ವಿಷಯ ತಿಳಿಯುತ್ತಿದ್ದಂತೆ ಜೀವಿಸಲು ಮತ್ತೊಂದು ಕಾರಣ ಗೋಚರಿಸಿದಂತಾಯ್ತು. ಆ ಪಾಕಿಗಳ ಹೊಟ್ಟೆ ಬಗೆಯುವಷ್ಟು ರೋಷ ಉಕ್ಕಿ ಬಂತು.
"ಅದು ನನ್ನ ಕರ್ತವ್ಯ ಸರ್...ತಾಯಿ ಭಾರತಿಗಾಗಿ ಪ್ರಾಣ ಕೊಡಲೂ ನಾನು ಸಿದ್ಧ... ಈಗಲೆ ಹೊರಡುತ್ತೇನೆ" ಎಂದು ಎದ್ದು ನಿಂತೆ.
"ನನಗೆ ನಿಮ್ಮ ಪರಿಸ್ಥಿತಿ ಗೊತ್ತು ಮಿ.ಅಚ್ಚ...ನೀವೂ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದೀರಿ..." ಎಂದಿತು ಆ ಕಡೆಯ ಧ್ವನಿ.
"ಮಗನನ್ನು ಕಳೆದುಕೊಂಡ ದುಃಖಕ್ಕಿಂತ ತಾಯಿಯನ್ನು ಮತ್ತು ಅವಳ ಮಕ್ಕಳನ್ನು ಕಾಯುವ ಜವಾಬ್ದಾರಿ ಮುಖ್ಯ ಕರ್ನಲ್.  ನಾನು ಬರುತ್ತೇನೆ" ಎಂದು ಕರೆಯನ್ನು ತುಂಡರಿಸಿದೆ.

ನನ್ನೆಲ್ಲಾ ಸಂಭಾಷಣೆಯನ್ನು ಕೇಳುತ್ತಿದ್ದ ನನ್ನ ಹೆಂಡತಿ ಮತ್ತೂ ಅಧೀರಳಾದಂತೆ ಕಂಡುಬಂದಳು. ಅವಳನ್ನು ಸಂತೈಸಬೇಕಾದ ನಾನೇ ಅವಳನ್ನು ಬಿಟ್ಟು ಸಿಂಹದ ಬಾಯಿಗೆ ಹೋಗುತ್ತೇನೆ ಎಂದಾಗ ಅವಳಿಗೆ ಎಷ್ಟು ದುಃಖ ಮತ್ತು ಭಯವಾಗಿರಬೇಡ. ಅವಳ ನೋಟವನ್ನು ಎದುರಿಸಲಾಗದೆ ನನ್ನ ಕೋಣೆಯೊಳ ಹೊಕ್ಕೆ. ಸ್ವಲ್ಪ ಹೊತ್ತಿನ ಬಳಿಕ ಲಗ್ಗೇಜ್ ಕೈಯಲ್ಲಿ ಹಿಡಿದು ರೆಡಿಯಾಗಿ ಹೊರಬಂದು ಕಾವೇರಿಯನ್ನು ಹುಡುಕುತ್ತಿದ್ದೆ.

ಹಣೆಯಲ್ಲಿ ಕುಂಕುಮವಿಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು ಕೈಯಲ್ಲಿ ಆರತಿ ಹಿಡಿದು ಅಂಗಳದಲ್ಲಿ ನಿಂತಿದ್ದಳು ನನ್ನ ಮಡದಿ ಕಾವೇರಿ.

ನನ್ನ ಹಣೆಗೆ ಕುಂಕುಮವಿಟ್ಟವಳೆ, "ನನ್ನ ಮಗ ಬದುಕಿದ್ದರೆ ಅವನನ್ನೂ ದೇಶಕ್ಕಾಗಿ ಬಲಿ ಕೊಡುತ್ತಿದ್ದೆ" ಎಂದಳು ಧೃಡವಾಗಿ.
ಎದುರಲ್ಲಿ ನಿಂತ ನನ್ನ ಭಾರತಾಂಬೆಯನ್ನು ಕಣ್ತುಂಬಿಸಿಕೊಂಡೆ. ದೇಶದಲ್ಲಿರುವ ಲಕ್ಷಾಂತರ ಭಗತ್ ರ ನಾಳೆಗಳನ್ನು ಕಾಯುವ ಪಣ ತೊಟ್ಟೆ. ಟ್ಯಾಕ್ಸಿ ಹತ್ತುವ ಮುನ್ನ ನನ್ನ ಭಗತ್ ನಂತಹದೇ ಒಂದು ಮಗು ತ್ರಿವರ್ಣ ಧ್ವಜವನ್ನು ಕೈಯಲ್ಲಿಟ್ಟೊಡನೆ ವಿದ್ಯುತ್ ಸಂಚಾರವಾದಂತಾಯ್ತು. ಟ್ಯಾಕ್ಸಿ ಹತ್ತಿ ಹೊರಡುತ್ತಿದ್ದವನ ಮೈಮನಗಳಲ್ಲಿದ್ದ ಒಂದೇ ಮಂತ್ರ "ಮೇರಾ ಭಾರತ್ ಮಹಾನ್".

- ಪ್ರಸಾದ್.ಡಿ.ವಿ.

Thursday, 9 August 2012

ಸದ್ದಿಲ್ಲದ ಸುವ್ವಾಲಿ



ಸದ್ದಿಲ್ಲದೆ ಕುಳಿತವಳು
ಸದ್ದು ಮಾಡುತ್ತಿದ್ದಾಳೆ,
ಸುದ್ದಿಯೇ ನೀಡದ
ಸ್ನಿಗ್ಧ ಮುಗ್ದತೆಯವಳು,
ನನ್ನವಳು ಅರಳಿದಳೆ?
ರಂಗವಲ್ಲಿಯ ವಲ್ಲಿ...
ನನ್ನೆದೆಯ ಬಾಂದಳದಿ
ಸದ್ದಿಲ್ಲದೇ ಸುವ್ವಾಲಿ..!

ಮೆಲ್ಲ-ಮೆಲ್ಲಗೆ ಮೈ
ಚಿವುಟಿಕೊಳ್ಳುತ್ತೇನೆ,
ಕನಸಲ್ಲೇ ಬಂದಳಾ?
ಎದುರಲ್ಲೆ ಬಂದಳಾ?
ಸದ್ದಿಲ್ಲದೆ ಹೋದವಳು,
ಸನ್ನೆಯಲ್ಲೇ ಕರೆದಳಾ?
ಕನಸೊಳಗಿನ ಕನಸೊಳಗೆ
ನನ್ನವಳ ಸುವ್ವಾಲಿ..!

ಕುಳಿತಲ್ಲಿಂದಲೇ ಇಲ್ಲೆ,
ಹಿಂದಿಂದೆ ಓಡುತ್ತೇನೆ,
ಜೊತೆಗಿಟ್ಟ ಹೆಜ್ಜೆಗಳು,
ನಿಮಿಷಾಂಬ ದೇವಳ,
ಸದ್ದು ಮಾಡಿದಾ ನಾಣ್ಯ,
ಮರೆವು ನುಂಗಲಾಗದ ನೆನಪು,
ಬದುಕೆಂಬ ಬಾಂದಳದಿ
ಬರಿದಾಗದು ಸುವ್ವಾಲಿ..!

- ಪ್ರಸಾದ್.ಡಿ.ವಿ.

Wednesday, 1 August 2012

ದೀಪ ಹಚ್ಚುತ್ತೇನೆ



ಕಗ್ಗತ್ತಲ ಬಾಳಿನಲ್ಲೊಮ್ಮೆ
ಅಂತರಂಗದಂಗಳದಲಿ
ದೀಪ ಹಚ್ಚುತ್ತೇನೆ,
ಸುಮ್ಮನಾದರೂ ಒಮ್ಮೆ..!

ಬಿಕ್ಕಳಿಸಿ ಬಸವಳಿದ
ತುಟಿ ಹಾರದ ಮಾತುಗಳಿವೆ,
ಕಂಬನಿಯ ತಳದಿ
ಕೈಕಟ್ಟಿ ಕುಳಿತ ಕನಸುಗಳಿವೆ,
ದೀಪ ಹಚ್ಚುತ್ತೇನೆ,
ಮೌನ ಮಾತಾಗಲಿ,
ಕನಸು ಕಂಗೊಳಿಸಲಿ..!

ನಿರಾಸೆಯ ಸೆರಗಲ್ಲಿ
ಸೊರಗಿರುವ ಆಸೆಗಳಿವೆ,
ನೀಲಿಯಲ್ಲಿ ತೇಲಿ ಹೋದ
ಅಮೂರ್ತ ರೂಪಕಗಳಿವೆ,
ದೀಪ ಹಚ್ಚುತ್ತೇನೆ,
ಆಸೆ ಚಿಗುರಾಗಲಿ,
ರೂಪಕಗಳುಸಿರಾಡಲಿ..!

ಹಮ್ಮಿನಲ್ಲಿ ಬಿಮ್ಮಿನಲ್ಲಿ
ಹೊರಬಿದ್ದ ಬಿರುನುಡಿಗಳಿವೆ,
ಬೀಳಲಾರೆನೆಂಬ ಕೋಟೆಯೊಳಗೆ
ಅಹಮ್ಮಿನ ಅಹಂಕಾರಗಳಿವೆ,
ದೀಪ ಹಚ್ಚುತ್ತೇನೆ,
ಬಿರುನುಡಿ ಕರಗಿ ತಿಳಿಯಾಗಲಿ,
ನಾನೆಂಬುದು ಕೃಷ್ಣನ
ಪಾದಕಮಲದಡಿಯ ಕಣವಾಗಲಿ..!

- ಪ್ರಸಾದ್.ಡಿ.ವಿ.