ಫೆಬ್ರವರಿ ೨೬, ೧೯೯೯ರ ಶುಕ್ರವಾರ ಸಂಜೆ ಐದು ಗಂಟೆ.
ಎಂದಿನಂತೆ ಯಾವುದೇ ಸಂಭ್ರಮಗಳಿಲ್ಲದೆ ಜಮ್ಮುವಿನ ಗಡಿಗಳಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆವು. ಹೆಚ್ಚಿನ ಚಟುವಟಿಕೆಗಳಿಲ್ಲದೆ ಇದೂ ಕೂಡ ಒಂದು ಸಾಮಾನ್ಯ ದಿನವಾಗಿತ್ತು. ಮನಸ್ಸು ಮಾತ್ರ ಹಿಂದಿನ ದಿನಗಳೆಡೆಗೆ ಓಡುತ್ತಿತ್ತು. ಮನೆ, ಅಪ್ಪ-ಅಮ್ಮ, ಹೆಂಡತಿ, ಮಗ ಭಗತ್ ಹೀಗೆ ಎಲ್ಲವೂ ನೆನಪಾಗುತ್ತಿದ್ದವು. ದೇಶದ ಹೆಮ್ಮೆಯ ಪುತ್ರ ಭಗತ್ ಸಿಂಗ್ ನ ಮೇಲಿನ ಗೌರವದಿಂದ ನನ್ನ ಮಗನಿಗೆ ಭಗತ್ ಎಂದೇ ಹೆಸರಿಟ್ಟಿದ್ದೆ. ಹೀಗೆ ಹಳೆಯ ನೆನಪುಗಳ ಹಿಂದೆ ಮನಸ್ಸು ಓಡುತ್ತಿತ್ತು. ಇದು ನನ್ನಂತಹ ಸೈನಿಕರ ದೈನಂದಿನ ದಿನಚರಿಯಾಗಿತ್ತು. ಸಮಯ ಸಿಕ್ಕಾಗ ಮನೆಯವರೊಂದಿಗೆ ದೂರವಾಣಿಯ ಮೂಲಕ ಒಂದಷ್ಟು ಮಾತು ಮತ್ತು ಪತ್ರಗಳೇ ನಮ್ಮ ಆಮ್ಲಜನಕಗಳು. ಅವುಗಳನ್ನು ಉಸಿರಾಡುತ್ತ ದೇಶವನ್ನು ಕಾಯುವ ಜವಾಬ್ದಾರಿ ನಿಭಾಯಿಸುತ್ತೇವೆ ಎಂಬುದನ್ನು ನೆನಪಿಸಿಕೊಂಡಾಗ ಯೋಧರ ಬಗ್ಗೆ ಹೆಮ್ಮೆ ಎನಿಸುತ್ತದೆ. ಹೀಗೆ ನೆನಪಿನ ಬುತ್ತಿ ಬಿಚ್ಚುತ್ತಿದ್ದ ನನ್ನನ್ನು ಎಚ್ಚರಿಸಿದ್ದು ವಿಕಾಸ್ ಗುಪ್ತನ "ಅಚ್ಚಪ್ಪ ಯು ಹ್ಯಾವ್ ಅ ಕಾಲ್ ಫ್ರಂ ಯುವರ್ ಹೋಂ ಮ್ಯಾನ್" ಎಂಬ ಮಾತುಗಳು. ಮನೆಯಿಂದ ದೂರವಾಣಿ ಕರೆ ಎಂದು ಆನಂದ ಸಂತುಲಿತನಾದ ನಾನು ಓಡಿ ಹೋಗಿ ಫೋನ್ ರಿಸೀವರ್ ಎತ್ತಿಕೊಂಡೆ.
"ಹಲೋ ಕಾವೇರಿ, ನಾನು ಕಣೇ.." ಎಂದೆ. ಕಾವೇರಿ ನನ್ನ ಮಡದಿ.
"....." ಆ ಕಡೆಯಿಂದ ಹತ್ತು ಸೆಕೆಂಡ್ ಗಳವರೆಗೆ ನೀರವ ಮೌನ.
"ಮಾತಾಡು ಕಾವೇರಿ...ಅಪ್ಪ-ಅಮ್ಮ ಹೇಗಿದ್ದಾರೆ? ಭಗತ್ ನನ್ನು ನೋಡಬೇಕೆನಿಸುತ್ತಿದೆ..".
"........" ಆ ಕಡೆಯಿಂದ ಸಣ್ಣದಾಗಿ ಅಳುವಿನ ಶಬ್ಧ ಕೇಳಿಸಿತು.
"ನೀನೂ ನೆನಪಾಗ್ತಿದ್ದೀಯೇ ಮಾರಾಯ್ತಿ...ಅಳಬೇಡ!"
"ರೀ...ರೀ... ನಮ್ಮ ಭಗತ್" ಎಂದು ಹೇಳಿ ಬಿಕ್ಕಲು ಶುರು ಮಾಡಿದಳು.
"ಏನಾಯ್ತು ಭಗತ್ ಗೆ... ಸರಿಯಾಗಿ ಹೇಳು?" ಎಂದೆ.
"ಭಗತ್ ರಸ್ತೆ ದಾಟುವಾಗ ಒಂದು ಟ್ರಕ್ ಬಂದು...ಆ ಅಪಘಾತದಲ್ಲಿ ಭಗತ್ ಗೆ..." ಎಂದ ಅವಳ ಅಳು ಇನ್ನೂ ಜೋರಾಯಿತು.
"ಭಗತ್ ಗೆ...ಭಗತ್ ಗೆ... ಏನಾಯ್ತಮ್ಮ ಹೇಳು?" ಎಂದೆ.
"ನಮ್ಮ ಭಗತ್ ಇನ್ನಿಲ್ಲಾರೀ..." ಎಂದು ಹೇಳಿ ಕುಸಿದು ಕುಳಿತಳು.
ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ನನ್ನಲ್ಲೂ ದುಃಖ ಮಡುಗಟ್ಟುತ್ತಿತ್ತು. ಆದರೂ ನನ್ನ ದುಃಖವನ್ನು ಅದುಮಿಟ್ಟುಕೊಳ್ಳುತ್ತ,
"ನಾನು ಬರ್ತಿದ್ದೇನೆ ಕಣೋ... ಧೈರ್ಯಗೆಡಬೇಡ. ಕೊಡಗಿನ ವೀರ ಸೈನಿಕ, ಕ್ಯಾಪ್ಟನ್ ಅಚ್ಚಪ್ಪನ ಹೆಂಡತಿ ನೀನು ಮರೆಯಬೇಡ" ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದೆ.
ಫೋನ್ ರಿಸೀವರ್ ಕೆಳಗಿಟ್ಟವನೆ ನಿರ್ಲಿಪ್ತನಾದೆ. ಆದರೆ ಎದೆಯಲ್ಲಿ ಹೆಪ್ಪುಗಟ್ಟುತ್ತಿದ್ದ ದುಃಖದ ಕಟ್ಟೆ ಒಡೆಯಲಾರದೆ ಒಳಗೊಳಗೆ ಕುಸಿಯುತ್ತಿದ್ದೆ.
ನನ್ನ ಪ್ರಜ್ಞೆ ನನ್ನ ಜವಾಬ್ದಾರಿಗಳ ಅರಿವನ್ನು ಕಣ್ಮುಂದೆ ತಂದಿತು. ತಕ್ಷಣವೇ ಅಲ್ಲಿಯ ಸಿಬ್ಬಂದಿಗೆ ವಿಷಯ ಮುಟ್ಟಿಸಿ, ಲಗ್ಗೇಜ್ ಸಿದ್ಧಪಡಿಸಿಕೊಂಡು ಹೊರಟೆ.
ಜಮ್ಮುವಿನಿಂದ ಶ್ರೀನಗರ ವಿಮಾನ ನಿಲ್ದಾಣ ಸುಮಾರು ಐದು ಗಂಟೆಯ ಪ್ರಯಾಣ. ನನ್ನ ಜೀವನದಲ್ಲೇ ದುರ್ಗಮವೆನಿಸಿದ ಪ್ರಯಾಣ ಅದು. ಮುಖದ ಮೇಲೆ ಯಾವುದೇ ಭಾವನೆಗಳನ್ನು ತೋರಗೊಡದೆ ಕುಳಿತಿದ್ದ ನನ್ನನ್ನು ಟ್ಯಾಕ್ಸಿ ಡ್ರೈವರ್ ತಿರುಗಿ ತಿರುಗಿ ನೋಡುತ್ತಿದ್ದ. ನಾನವನ ಕಣ್ಣಿಗೆ ಯಾವುದೋ ಅನ್ಯ ಗ್ರಹ ಜೀವಿಯಂತೆ ಕಂಡಿರಬೇಕು. ಕಾರು ವಿಮಾನ ನಿಲ್ದಾಣದೆಡೆಗೆ ಚಲಿಸುತ್ತಿದ್ದಂತೆ ಬೆಟ್ಟಗಳು, ಗುಡ್ಡಗಳು, ಕಟ್ಟಡಗಳು ಮತ್ತು ಮರಗಳು ಹಿಂದಿಂದೆ ಓಡುತ್ತಿದ್ದವು. ಅದರಂತೆ ನನ್ನ ಮನಸ್ಸೂ ಹಿಂದಿಂದೆ ಓಡುತ್ತಿತ್ತು.
ಇಂದಿಗೆ ನಾಲ್ಕು ವರ್ಷಗಳ ಹಿಂದಷ್ಟೆ ಹುಟ್ಟಿದ್ದ ಮಗ. ಅವನು ಹುಟ್ಟಿದ ಹೊಸತರಲ್ಲಿ ಅವನನ್ನು ಎತ್ತಿಕೊಳ್ಳಲೂ ನನಗೇನೋ ಪುಳಕ ಮತ್ತು ಭಯ. ಆ ಎಳೆಯ ಕಂದನ ಹಸಿ ಮೈಯ್ಯ ಬಿಸಿ ಸ್ಪರ್ಷ ನನ್ನಲ್ಲಿ ನನ್ನದೇ ಚೈತನ್ಯ ಪ್ರವಹಿಸುವಂತೆ ಮಾಡುತ್ತಿತ್ತು. ನನ್ನ ಕೈಯನ್ನೆತ್ತಿ ಮೂಸಿದೆ, ಅವನ ಹಾಲು ಕುಡಿದ ತುಟಿಯೊರಸಿದ ವಾಸನೆ ಮೂಗಿಗೆ ಬಡಿದಂತೆ ಭಾಸವಾಯ್ತು. ಹಾಗೆ ಹುಟ್ಟಿ ಬೆಳೆಯುತ್ತಿದ್ದುದನ್ನು ನನ್ನ ಹೆಂಡತಿ ನನಗೆ ವರದಿ ಒಪ್ಪಿಸುವಾಗ ಅವಳ ಸಂಭ್ರಮ ವರ್ಣಿಸಲಸದಳ. ಅವನು ಮೊದಲ ಬಾರಿಗೆ ಅಪ್ಪ ಎಂದದ್ದನ್ನು ಸಾವಿರ ಸಲ ಹೇಳಿ ಖುಷಿಪಟ್ಟಿದ್ದಳು. ರಿಸೀವರ್ ಕೊಟ್ಟು ನನಗೂ ಕೇಳಿಸಿದ್ದಳು. ನಾನು ಕಡೆಯ ಬಾರಿ ಊರಿಗೆ ಹೋಗಿದ್ದಾಗ "ನಾನು ನನ್ನಪ್ಪನಂತೆ ಸೈನ್ಯ ಸೇರಿ ಎಲ್ಲಾ ಶತ್ರುಗಳನ್ನು ಶೂಟ್ ಮಾಡುತ್ತೇನೆ" ಎಂದು ಹೇಳಿದ್ದನ್ನು ಕಂಡು ನನ್ನ ಎದೆ ಹೆಮ್ಮೆಯಿಂದ ಉಬ್ಬಿ ಹೋಗಿತ್ತು.
ಫೆಬ್ರವರಿ ೨೬, ೧೯೯೯ರ ಶುಕ್ರವಾರ ರಾತ್ರಿ ಹತ್ತು ಗಂಟೆ.
ನೆನಪುಗಳಲ್ಲಿ ಕಳೆದು ಹೋಗಿದ್ದ ನನ್ನನ್ನು ಡ್ರೈವರ್,
"ಸಾಬ್ ಆಪ್ಕಾ ಏರ್ ಪೋರ್ಟ್ ಆಗಯಾ.." ಎಂದು ಎಚ್ಚರಿಸಿದ್ದ.
ನನ್ನ ಲಗ್ಗೇಜ್ ಎತ್ತಿಕೊಂಡವನೆ ಅವನಿಗೆ ಹಣ ಪಾವತಿ ಮಾಡಿ ಕೆಳಗಿಳಿದು ಹೊರಟೆ. ನನ್ನ ಅದೃಷ್ಟವೋ ಎಂಬಂತೆ ಒಂದು ಗಂಟೆಯ ಕಾಯುವಿಕೆಯ ನಂತರ ವಿಮಾನ ಹಿಡಿದು ಕಾಶ್ಮೀರದಿಂದ ಹೊರಟೆ. ನನ್ನ ನೆನಪುಗಳೊಂದಿಗೆ ಶತಪತ ಹಾಕುತ್ತಿದ್ದ ನನಗೆ ಮೂರು ಗಂಟೆಗಳ ಹಾದಿ ನೂರು ಗಂಟೆಗಳಂತೆ ಭಾಸವಾಗುತ್ತಿತ್ತು. ಹಾಗೋ ಹೀಗೋ ಹವಾ ನಿಯಂತ್ರಿತ ವಿಮಾನದಲ್ಲಿಯ ಪ್ರಯಾಣ ಕ್ರಮಿಸಿ ನಿಸ್ತೇಜನಾಗಿ ಮಂಗಳೂರು ಫ್ಲೈಟ್ ಗಾಗಿ ಕಾದು ಕುಳಿತೆ. ಬೆಳಗ್ಗಿನ ನಾಲ್ಕರ ಹೊತ್ತಿಗೆ ಮಂಗಳೂರು ವಿಮಾನ ಹಿಡಿದು ಹೊರಟೆ. ಅಲ್ಲಿ ವಿಮಾನ ಇಳಿದು ವಿರಾಜಪೇಟೆಯ ದಾರಿ ಹಿಡಿಯುವುದರೊಳಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದು ಹೋಗಿದ್ದೆ. ಟ್ಯಾಕ್ಸಿಯಲ್ಲಿ ಕುಳಿತವನನ್ನು ನಿಧಾನವಾಗಿ ನಿದ್ರಾದೇವಿ ಆವರಿಸಿದಳು.
೨೭ ಫೆಬ್ರವರಿ, ೧೯೯೯ರ ಶನಿವಾರ ಬೆಳಗ್ಗೆ ಎಂಟು ಗಂಟೆ.
ಕಣ್ಣು ಬಿಟ್ಟಾಗ ನಾನು ನನ್ನ ಮನೆ ಮುಂದೆ ಇದ್ದೆ. ನಿರ್ಲಿಪ್ತ ಭಾವ ಹೊತ್ತು ಜನಸಂದಣಿಯನ್ನು ದಾಟಿ ಮುಂದೆ ಹೋದೆ. ನನ್ನ ನಿಸ್ತೇಜವಾದ ಕಣ್ಣುಗಳ ನೋಟ ನಿಶ್ಚಲವಾಗಿ ಮಲಗಿದ್ದ ನನ್ನ ಮಗನ ದೇಹದ ಮೇಲೆ ಬಿತ್ತು. ಕಾವೇರಿ ಓಡಿ ಬಂದು ನನ್ನನ್ನು ತಬ್ಬಿಕೊಂಡಳು.
"ರೀ ನಮ್ಮ ಮಗ...ನಮ್ಮ ಮಗ..." ಎಂದು ಒಂದೇ ಸಮನೆ ಅಳಲು ಶುರು ಮಾಡಿದಳು.
ಅಲ್ಲಿಯವರೆಗೂ ಉದುಗಿದ್ದ ದುಃಖ ಒಮ್ಮೆಲೆ ಒದ್ದುಕೊಂಡು ಮೇಲೆ ಬಂದಂತಾಯ್ತು. ನನಗೇ ಅರಿವಿಲ್ಲದೆ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಹೆಬ್ಬಂಡೆಯೂ ಕರಗಿ ನೀರಾಗುತ್ತಿತ್ತು. ಪರಿಸ್ಥಿತಿಯ ಅರಿವಾದೊಡನೆ ನನ್ನ ಭಾವೋದ್ವೇಗಕ್ಕೆ ಕಡಿವಾಣ ಹಾಕಲು ಹರಸಾಹಸ ಮಾಡುತ್ತಿದ್ದೆ. ಹಾಗೇ ನನ್ನ ದುಃಖವನ್ನು ಮನದಲ್ಲೇ ಹಿಂಗಿಸಿ ಕಣ್ಣೊರೆಸಿಕೊಂಡೆ.
"ಕಾವೇರಿ ಹೀಗೆಲ್ಲ ಅಳಬಾರದು. ನೀನು ಸೈನಿಕನ ಹೆಂಡತಿ. ಮುಂದೆ ನಾನೇ ಯುದ್ಧದಲ್ಲಿ ಸತ್ತರೂ ನೀನು ದುಃಖವನ್ನು ತಡೆದುಕೊಳ್ಳುವ ಹೆಬ್ಬಂಡೆಯಾಗಬೇಕು... ಬಲಿದಾನ ನಿನ್ನ ಮೈಗೂಡಬೇಕು" ಎಂದು ಸಂತೈಸಲು ಪ್ರಯತ್ನಿಸಿದೆ.
ನಂತರದ ಶವಸಂಸ್ಕಾರದ ಕಾರ್ಯಗಳೆಲ್ಲ ಅಡೆತಡೆಗಳಿಲ್ಲದೆ ಸಾಗಿದವು. ಮೊಮ್ಮಗನನ್ನು ಕಳೆದುಕೊಂಡ ನನ್ನಪ್ಪ-ಅಮ್ಮನನ್ನು ಎದುರಿಸಲೂ ನನಗೆ ಭಯವಾಗುತ್ತಿತ್ತು. ಅಂದು ಸಂಜೆಯೊಳಗೆ ಮಗನನ್ನು ಮಣ್ಣು ಮಾಡಿ ಮನೆಯ ಮುಂದೆ ದೀಪ ಹಚ್ಚಿಟ್ಟೆವು. ಅತ್ತು ಅತ್ತು ನಿತ್ರಾಣಗೊಂಡಿದ್ದ ಕಾವೇರಿಯ ಮುಖ ನೋಡುವಾಗಲಂತೂ ಕರಳು ಕಿವುಚಿದಂತಾಗುತ್ತಿತ್ತು. ಹೇಗೆ ಎಲ್ಲವನ್ನು ನಿಭಾಯಿಸುವುದು ಎಂಬುದೆ ದೊಡ್ಡ ತಲೆ ನೋವಾಗಿತ್ತು ನನಗೆ.
೦೪ ಮಾರ್ಚ್೧೯೯೯ರ ಗುರುವಾರ, ಸಂಜೆ ಆರು ಗಂಟೆ.
ಮನೆಯ ಕುಡಿಯನ್ನು ಕಳೆದುಕೊಂಡು ನರಳುತ್ತಿದ್ದ ಮನೆಯವರನ್ನು ದಿನವೂ ನೋಡುತ್ತ ಮನದಲ್ಲೇ ಬೇಯುತ್ತಿದ್ದೆ. ಹೀಗೆ ನನ್ನ ಚಿಂತೆಯಲ್ಲಿ, ನನ್ನ ಕುಟುಂಬವನ್ನು ಸಂತೈಸುತ್ತ ಒಬ್ಬ ಉತ್ತಮ ಗಂಡನ ಮತ್ತು ಅಪ್ಪನ ಜವಾಬ್ಧಾರಿಯನ್ನು ನಿಭಾಯಿಸುತ್ತಿದ್ದೆ.
ಹೀಗೆ ಇದ್ದಕ್ಕಿದ್ದಂತೆ ಮನೆಯ ಟೆಲಿಫೋನ್ ಹೊಡೆದುಕೊಳ್ಳಲು ಶುರುವಾಯ್ತು. ಕರೆಯನ್ನು ಸ್ವೀಕರಿಸಿ ರಿಸೀವರ್ ಅನ್ನು ಕಿವಿಯ ಮೇಲಿಟ್ಟೆ.
"ಹಲೋ ಮಿ.ಕ್ಯಾಪ್ಟನ್, ಕರ್ನಲ್ ಜಗನ್ನಾಥ್ ಸ್ಪೀಕಿಂಗ್" ಎಂಬ ಗಡುಸಾದ ಧ್ವನಿ ಮಾರ್ಧನಿಸಿತು.
"ಹಲೋ ಕರ್ನಲ್, ಹೇಳಿ..." ಎಂದೆ.
"ನಾಚಿಕೆಗೆಟ್ಟ ಪಾಕಿಗಳು ಕಾರ್ಗಿಲ್ ಅನ್ನು ಗುರಿಯಾಗಿಸಿಕೊಂಡು ಧಾಳಿ ನೆಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮಂತಹ ದಕ್ಷರ ಸೇವೆ ದೇಶಕ್ಕೆ ಅಗತ್ಯ. ನೀವು ಕಾಮ್ಯಾಂಡೋ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಬೇಕೆಂದು ಕೋರುತ್ತೇನೆ" ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
"ನಾಚಿಕೆಗೆಟ್ಟ ಪಾಕಿಗಳು ಕಾರ್ಗಿಲ್ ಅನ್ನು ಗುರಿಯಾಗಿಸಿಕೊಂಡು ಧಾಳಿ ನೆಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮಂತಹ ದಕ್ಷರ ಸೇವೆ ದೇಶಕ್ಕೆ ಅಗತ್ಯ. ನೀವು ಕಾಮ್ಯಾಂಡೋ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಬೇಕೆಂದು ಕೋರುತ್ತೇನೆ" ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
ವಿಷಯ ತಿಳಿಯುತ್ತಿದ್ದಂತೆ ಜೀವಿಸಲು ಮತ್ತೊಂದು ಕಾರಣ ಗೋಚರಿಸಿದಂತಾಯ್ತು. ಆ ಪಾಕಿಗಳ ಹೊಟ್ಟೆ ಬಗೆಯುವಷ್ಟು ರೋಷ ಉಕ್ಕಿ ಬಂತು.
"ಅದು ನನ್ನ ಕರ್ತವ್ಯ ಸರ್...ತಾಯಿ ಭಾರತಿಗಾಗಿ ಪ್ರಾಣ ಕೊಡಲೂ ನಾನು ಸಿದ್ಧ... ಈಗಲೆ ಹೊರಡುತ್ತೇನೆ" ಎಂದು ಎದ್ದು ನಿಂತೆ.
"ನನಗೆ ನಿಮ್ಮ ಪರಿಸ್ಥಿತಿ ಗೊತ್ತು ಮಿ.ಅಚ್ಚ...ನೀವೂ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದೀರಿ..." ಎಂದಿತು ಆ ಕಡೆಯ ಧ್ವನಿ.
"ಮಗನನ್ನು ಕಳೆದುಕೊಂಡ ದುಃಖಕ್ಕಿಂತ ತಾಯಿಯನ್ನು ಮತ್ತು ಅವಳ ಮಕ್ಕಳನ್ನು ಕಾಯುವ ಜವಾಬ್ದಾರಿ ಮುಖ್ಯ ಕರ್ನಲ್. ನಾನು ಬರುತ್ತೇನೆ" ಎಂದು ಕರೆಯನ್ನು ತುಂಡರಿಸಿದೆ.
ನನ್ನೆಲ್ಲಾ ಸಂಭಾಷಣೆಯನ್ನು ಕೇಳುತ್ತಿದ್ದ ನನ್ನ ಹೆಂಡತಿ ಮತ್ತೂ ಅಧೀರಳಾದಂತೆ ಕಂಡುಬಂದಳು. ಅವಳನ್ನು ಸಂತೈಸಬೇಕಾದ ನಾನೇ ಅವಳನ್ನು ಬಿಟ್ಟು ಸಿಂಹದ ಬಾಯಿಗೆ ಹೋಗುತ್ತೇನೆ ಎಂದಾಗ ಅವಳಿಗೆ ಎಷ್ಟು ದುಃಖ ಮತ್ತು ಭಯವಾಗಿರಬೇಡ. ಅವಳ ನೋಟವನ್ನು ಎದುರಿಸಲಾಗದೆ ನನ್ನ ಕೋಣೆಯೊಳ ಹೊಕ್ಕೆ. ಸ್ವಲ್ಪ ಹೊತ್ತಿನ ಬಳಿಕ ಲಗ್ಗೇಜ್ ಕೈಯಲ್ಲಿ ಹಿಡಿದು ರೆಡಿಯಾಗಿ ಹೊರಬಂದು ಕಾವೇರಿಯನ್ನು ಹುಡುಕುತ್ತಿದ್ದೆ.
ಹಣೆಯಲ್ಲಿ ಕುಂಕುಮವಿಟ್ಟು, ಮುಡಿ ತುಂಬಾ ಮಲ್ಲಿಗೆ ಮುಡಿದು ಕೈಯಲ್ಲಿ ಆರತಿ ಹಿಡಿದು ಅಂಗಳದಲ್ಲಿ ನಿಂತಿದ್ದಳು ನನ್ನ ಮಡದಿ ಕಾವೇರಿ.
ನನ್ನ ಹಣೆಗೆ ಕುಂಕುಮವಿಟ್ಟವಳೆ, "ನನ್ನ ಮಗ ಬದುಕಿದ್ದರೆ ಅವನನ್ನೂ ದೇಶಕ್ಕಾಗಿ ಬಲಿ ಕೊಡುತ್ತಿದ್ದೆ" ಎಂದಳು ಧೃಡವಾಗಿ.
ಎದುರಲ್ಲಿ ನಿಂತ ನನ್ನ ಭಾರತಾಂಬೆಯನ್ನು ಕಣ್ತುಂಬಿಸಿಕೊಂಡೆ. ದೇಶದಲ್ಲಿರುವ ಲಕ್ಷಾಂತರ ಭಗತ್ ರ ನಾಳೆಗಳನ್ನು ಕಾಯುವ ಪಣ ತೊಟ್ಟೆ. ಟ್ಯಾಕ್ಸಿ ಹತ್ತುವ ಮುನ್ನ ನನ್ನ ಭಗತ್ ನಂತಹದೇ ಒಂದು ಮಗು ತ್ರಿವರ್ಣ ಧ್ವಜವನ್ನು ಕೈಯಲ್ಲಿಟ್ಟೊಡನೆ ವಿದ್ಯುತ್ ಸಂಚಾರವಾದಂತಾಯ್ತು. ಟ್ಯಾಕ್ಸಿ ಹತ್ತಿ ಹೊರಡುತ್ತಿದ್ದವನ ಮೈಮನಗಳಲ್ಲಿದ್ದ ಒಂದೇ ಮಂತ್ರ "ಮೇರಾ ಭಾರತ್ ಮಹಾನ್".
- ಪ್ರಸಾದ್.ಡಿ.ವಿ.
ಇದು ನಿಜವಾದ ಅಪ್ಪಟವಾದ ಸೈನಿಕನ ಮನಸ್ಥಿತಿ. ಉತ್ತಮ ನಿರೂಪಣೆ.
ReplyDeleteಜೈ ಬೋಲೋ ಭಾರತ್ ಮಾತಾಕೀ...
ಧನ್ಯವಾದಗಳು ಬದರಿ ಸರ್.. ನಿಮ್ಮ ಮಾತುಗಳಲ್ಲೇ ನನ್ನ ಪ್ರಯತ್ನದ ಸಾರ್ಥಕತೆ :)
Deleteಮೈ ರೋಮಾಂಚನವಾಯ್ತು.. ಸಕಾಲಿಕ ಲೇಖನ.. ಉತ್ತಮ ಪ್ರಸ್ತುತಿ.. ಶುಭವಾಗಲಿ :)
ReplyDeleteಧನ್ಯವಾದಗಳು ಪರೇಶಣ್ಣ :)
Deleteಸುಂದರ ಪ್ರಸ್ತುತಿ ಪುಟ್ಟ :))) ಆತ್ಮ ಚರಿತ್ರೆಯ ತುಣುಕು ನೋಡಿದ ಹಾಗೆ ಭಾಸವಾಯ್ತು :))) ಭಾರತಾಂಬೆಯ ಮಕ್ಕಳೆಂಬ ಹೆಮ್ಮೆ ಜೊತೆಗೆ ಹುಮ್ಮಸ್ಸು ತುಂಬಿ ಬಂತು :))) ನಿಜವಾಗಲೂ ಮೇರಾ ಭಾರತ್ ಮಹಾನ್ :)))
ReplyDeleteನಿನ್ನ ಪ್ರತಿಕ್ರಿಯೆ ನನ್ನ ಮನಸ್ಸಿಗೆ ಮತ್ತಷ್ಟು ಬರೆಯುವ ಹುಮ್ಮಸ್ಸು ಕೊಡುತ್ತದೆ ಗಣಿ :) ಧನ್ಯವಾದಗಳು :)
Deleteಮೈ ನವಿರೇಳಿಸುವ ಕಥೆ ಮತ್ತು ಸಡಿಲಗೊಳ್ಳದ ನಿರೂಪಣೆ... ಚೆನ್ನಾಗಿದೆ... ಇಲ್ಲಿ ಭಗತ್ ಎಂಬ ಪದ ಉಪಯೋಗಿಸಿರುವುದರಿಂದ, ಆತ ಅಚಾನಕ್ಕಾಗಿ ಸಾಯುವುದರಿಂದ, ಕಾವೇರಿ ಧೈರ್ಯದಿಂದ ಯುದ್ಧಕ್ಕೆ ಅನುವು ಮಾಡಿಕೊಡುವುದರಿಂದ ಈ ಕಥೆಯನ್ನು ಸೂಕ್ಷ್ಮವಾಗಿ ಮತ್ತೊಂದು ಮಗ್ಗಲಿಗೆ ಹೊರಳಿಸಿಕೊಳ್ಳಬಹುದು. ಚೆನ್ನಾಗಿದೆ... :)
ReplyDeleteಧನ್ಯವಾದಗಳು ಮೋಹನಣ್ಣ :) ನನ್ನ ಮನಸ್ಸಿನಲ್ಲಿ ಸದಾ ಉಳಿದಿರುವ ಭಗತ್ ಸಿಂಗ್ ನ ಋಣ ತೀರಿಸುವ ಸಣ್ಣ ಪ್ರಯತ್ನವೆಂಬಂತೆ ಅವನ ಹೆಸರನ್ನು ಬಳಸಿಕೊಂಡೆ. ಇಷ್ಟಾದರೂ ಅವನು ನಮಗಾಗಿ, ಸ್ವಾತಂತ್ರ ಭಾರತ ನಿರ್ಮಾಣಕ್ಕಾಗಿ ಮಾಡಿದ ಬಲಿದಾನಕ್ಕೆ ನಾ ಕೊಟ್ಟ ಕಾಣಿಕೆ ತೀರಾ ಕಡಿಮೆ :)
Deleteಕೆಲ ನಿಮಿಷಗಳು ನನ್ನನ್ನೇ ನಾನು ಮರೆತು ಹೋದ ಭಾವ ಮೂಡಿತ್ತು. ಪ್ರತಿ ಮಾತನ್ನೂ ಚಿತ್ರಿಸಿಕೊಂಡು ಆ ತಂದೆ ತಾಯಿಗಳು ಪಡುತ್ತಿದ್ದ ಸಂಕಟವನ್ನು ನಾನೂ ಅನುಭವಿಸುತ್ತಿದಂತೆ ಭಾಸವಾಯ್ತು. ತುಂಬಾ ಸುಂದರ ನಿರೂಪಣೆ. ಧನ್ಯವಾದ ಪ್ರಸಾದ್.
ReplyDeleteಧನ್ಯವಾದಗಳು ರವಿ ಸರ್. ನಿಮ್ಮಂತಹ ಹಿರಿಯರ ಪ್ರೋತ್ಸಾಹ ಎಲ್ಲಿಲ್ಲದ ಆತ್ಮವಿಶ್ವಾಸ ಹೊಮ್ಮಿಸುವ ಚಿಲುಮೆ :) ನಾನು ನಿಮ್ಮ ಪ್ರೀತಿಗೆ ಚಿರ ಋಣಿ :)
Deleteಯಾರೂ ಈ ರೀತಿಯಲಿ ನಿರೂಪಣೆ ಮಾಡಿಲ್ಲ ಎಂದುಕೊಳ್ಳುತ್ತೇನೆ. ಮನಕಲಕುತ್ತದೆ ಕಥೆ. ಓದುವವ ನಾಯಕ ಪಾತ್ರದೊಳಗೆ ತನ್ನನು ತಾನು ಸಮರ್ಪಿಸಿಕೊಳ್ಳಬೇಕು.
ReplyDeleteನಿರೂಪಣೆಗೆ ನಿಮ್ಮ ಮೆಚ್ಚುಗೆ ನೋಡಿ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಿದ್ದೇನೆ ಪುಷ್ಪಣ್ಣ. ನಲ್ಮೆಯ ಧನ್ಯವಾದಗಳು ನಿಮಗೆ :)
Deleteಅದ್ಭುತ ಬರಹ ಪ್ರಸಾದ್ ..ತುಂಬಾ ರೋಮಾಂಚಕ ಕಥನ :)
ReplyDelete